Women‘s Day 2022: Gokak Falls; ‘ಗಂಡನಮನೆಗೆ ಹೋಗುವಾಗ ಒಂದೆರಡು ಹನಿ ಉದುರಿದ್ದು ಸಂತಸಕ್ಕಿರಬೇಕು’

Women‘s Day 2022: Gokak Falls; ‘ಗಂಡನಮನೆಗೆ ಹೋಗುವಾಗ ಒಂದೆರಡು ಹನಿ ಉದುರಿದ್ದು ಸಂತಸಕ್ಕಿರಬೇಕು’
ಫೋಟೋ : ಡಾ. ನಿಸರ್ಗ

Love and Freedom : ಯಾವುದು ಯಾರಿಗೆ ಹೇಗೆ ಬಂಧನವಾಗುವುದು ಎಂದು ತಿಳಿದುಕೊಳ್ಳುವುದು ಹೇಗೆ? ಪ್ರೀತಿ ಕೆಲವರಿಗೆ ಸ್ವಚ್ಛಂದವಾಗಿ ಆಕಾಶವನ್ನೆಲ್ಲ ಹಾರುವ ರೆಕ್ಕೆ ಕೊಟ್ಟರೆ, ಇನ್ನ್ಯಾರಿಗೋ ಇದ್ದ ರೆಕ್ಕೆಯನ್ನು ಮುರಿದುಬಿಡುತ್ತದೆ!

ಶ್ರೀದೇವಿ ಕಳಸದ | Shridevi Kalasad

|

Mar 09, 2022 | 3:19 PM

ಗೋಕಾಕ ಫಾಲ್ಸ್ | Gokak Falls : ನಿನ್ನೆ ತಾನೇ ಮಹಾಶಯನೊಬ್ಬ ವೇದಿಕೆ ಮೇಲೆ ನಿಂತು ಮೈಕು ಕಿತ್ತೋಗುವ ಹಾಗೆ ಕೂಗುತ್ತಿದ್ದ – ‘ಅವಳ ಸ್ವಾತಂತ್ರ್ಯ ಅವಳಿಗೆ ಕೊಡಿ’ ನನಗೆ ನಗು ಬಂತು. ಇವರ್ಯಾರು ಅವಳಿಗೆ ಸ್ವಾತಂತ್ರ್ಯ  ಕೊಡುವವರು? ಅಷ್ಟಕ್ಕೂ ಸ್ವಾತಂತ್ರ್ಯ ಎಂದರೆ ಏನು? ಇನ್ನೊಬ್ಬರ ಬಳಿ ಗೋಗರೆದು ಪಡೆಯುವುದೇ? ಇತಿಹಾಸದ ಉದ್ದಕ್ಕೂ ಅವಳು ಗೋಗರೆಯುತ್ತಲೇ ಬಂದಿದ್ದಾಳೆ. ಇಂದಿಗೂ ಗೋಗರೆಯುತ್ತಿದ್ದಾಳೆ. ಕೆಲವೊಮ್ಮೆ ಧ್ವನಿ ಎತ್ತಿ, ಇನ್ನೂ ಕೆಲವೊಮ್ಮೆ ಮೌನವಾಗಿ. ಅವಳ ಧ್ವನಿ, ಮೌನ ಯಾವುದೂ ಕೇಳಲೇ ಇಲ್ಲ ಹೊರಜಗತ್ತಿಗೆ. ಕೇಳಿದರೂ ಆಲಿಸುವ ಗೋಜಿಗೆ ಹೋಗುವ ಸಾಹಸ ಮಾಡಲಿಲ್ಲ ಈ ಪುರುಷ ಪ್ರಧಾನ ಸಮಾಜ. ಸ್ವಾತಂತ್ರ್ಯ ಅವಳ ಹಕ್ಕು ಅಲ್ಲವೇ ಅಲ್ಲ ಎಂದು ನಂಬಿಸಿ ಬಿಟ್ಟವರಲ್ಲವೆ ಅವರು?! ಈಗವಳು ಎಚ್ಚೆತ್ತು ನನ್ನದು ಎಂದರೆ ಅವನಿಗೆ ದಿಗಿಲು. ಎಲ್ಲಿ ಆಕೆ ಅವನ ಮುಷ್ಟಿಯಿಂದ ಹೊರಬಂದಾಳು, ತನಗಿಂತ ಎತ್ತರಕ್ಕೆ ಹಾರಿಯಾಳು ಎಂಬ ಭಯವಷ್ಟೇ ಇದು.  ಇರಲಿ ನಾನೀಗ ಎಲ್ಲರಂತೆ ಅವಳ ಸ್ವಾತಂತ್ರ್ಯ ಅವಳಿಗೆ ಕೊಟ್ಟುಬಿಡಿ ಎಂದು ಗೋಗರೆಯವ ಸಾಲಿನಲ್ಲಿ ನಿಂತಿಲ್ಲ. ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

(ಹರಿವು 10)

ನಿನ್ನೆಯಷ್ಟೇ ಸಂಭ್ರಮಿಸಿದ್ದೇನೆ ನಮ್ಮ ಸಾಧನೆಗಳನ್ನು ಹೋಗಳಲೆಂದೇ ಸಿಮಿತಗೊಳಿಸಿದ ಆ ಒಂದು ದಿನವನ್ನು. ವೇದಿಕೆಯ ಭಾಷಣಗಳ ಮೇಲೆ ಮೊಳಗಿದ ಸ್ವಾತಂತ್ರ್ಯವನ್ನು! ದಿನವೂ ಸಹಿಸಿ ಮುನ್ನಡೆಯುವವಳಿಗೆ ಒಂದು ದಿನದ ಪ್ರಶಂಸೆ, ಸಂಭ್ರಮ ಸಾಕಲ್ಲವೇ ಎಂಬ ತರ್ಕವಿದ್ದಿರಬಹುದು. ಆದರೆ, ಯಾವುದನ್ನು ಸ್ವಾತಂತ್ರ್ಯ ಅಂತ ಕರಿಯಲಿ? ಮೊನ್ನೆಯಷ್ಟೇ ಮೊಮ್ಮಗಳ ಮದುವೆ ಮುಗಿಸಿ ಕೂತಿದ್ದ ಅಜ್ಜಿಗೆ ಕೇಳಿದೆ, ಇಂದು ಅಕ್ಕ ಅತ್ತ ಹಾಗೆ ನೀನು ಅತ್ತಿದ್ದ್ಯಾ ಅಜ್ಜಿ ತವರು ತೊರೆಯುವಾಗ? ವಿಷಾದದ ನಗೆ ಬೀರಿ, ದೃಢವಾಗಿ ಹೇಳಿದಳು ‘ಇಲ್ಲ, ಒಂದೆರಡು ಹನಿ ಉದುರಿದರು ಅದು ಸಂತಸಕ್ಕಿರಬೇಕು’ ದಿಗಿಲಾಗಿ, ‘ಯಾಕಜ್ಜಿ?’ ಅಂದೆ.

‘ದಿನ ಬೆಳಗಿನಿಂದ ತಡರಾತ್ರಿಯವರೆಗೆ ಕತ್ತೆ ತರಹ ದುಡಿದಾಗಿಯೂ ತಮ್ಮನಿಗೆ ಸಿಕ್ಕ ಒಂದಿಂಚು ಪ್ರೀತಿ, ಸ್ವಾತಂತ್ರ್ಯ, ವಾತ್ಸಲ್ಯದ ಪಾಲು ನನಗೂ, ನನ್ನ ಅಕ್ಕನಿಗೂ ಸಿಕ್ಕಿದ್ದರೆ ನಮಗೂ ನೀರು ಹರಿಯಬಹುದಿತ್ತು. ಅಷ್ಟಕ್ಕೂ ನನಗದು ಯಾವುದನ್ನು ಅರಿಯದ ವಯಸ್ಸು. ನಿಮ್ಮ ಅಜ್ಜ ಕೈಹಿಡಿದು ಈ ಮನೆಗೆ ಕರೆದುಕೊಂಡು ಬಂದಾಗ ನನಗದು ಹೊಸ ಜಗತ್ತು. ಆದರೆ, ಆ ಹೊಸ ಜಗತ್ತಲ್ಲಿ ಸಿಕ್ಕ ಸ್ವಾತಂತ್ರ್ಯ, ಮನದಾನಂದ ಹಿಂದೆಂದೂ ಸಿಕ್ಕಿರಲಿಲ್ಲ. ಆದರೆ ಅದೂ ಬಹಳ ದಿನವಿರಲಿಲ್ಲ. ನಿಮ್ಮ ಅಜ್ಜ ನನ್ನನ್ನು ತುಂಬಾ ಬೇಗ ಬಿಟ್ಟುಹೋದರು. ಅಂದು ಅವರ ಜೊತೆ ನನ್ನ ಸ್ವಾತಂತ್ರ್ಯವನ್ನು ಮಣ್ಣು ಮಾಡಲಾಗಿತ್ತು’ ಎಂದು ಹೇಳುವಾಗ ಆಕೆಯ ಕಣ್ಣಲ್ಲಿ ವಿಧವೆಯೊಬ್ಬಳಿಗೆ ಈ ಸಮಾಜ ವಿಧಿಸಬಹುದುದಾದ ಎಲ್ಲ ಬಂಧನಗಳ ಪ್ರತಿರೂಪವಿತ್ತು.

ಯಾವುದು ಯಾರಿಗೆ ಹೇಗೆ ಬಂಧನವಾಗುವುದು ಎಂದು ತಿಳಿದುಕೊಳ್ಳುವುದು ಹೇಗೆ? ಪ್ರೀತಿ ಕೆಲವರಿಗೆ ಸ್ವಚ್ಛಂದವಾಗಿ ಆಕಾಶವನ್ನೆಲ್ಲ ಹಾರುವ ರೆಕ್ಕೆ ಕೊಟ್ಟರೆ, ಇನ್ನ್ಯಾರಿಗೋ ಇದ್ದ ರೆಕ್ಕೆಯನ್ನು ಮುರಿದುಬಿಡುತ್ತದೆ! ಇನ್ನೊಂದು ಉದಾಹರಣೆ ಗಮನಿಸಿ. ಮೊದಲೆಲ್ಲ ಆಕೆಯ ಮನ ಅವನೊಟ್ಟಿಗೆ ಇರಲು ಒಂದು ಅವಕಾಶ ಸಿಕ್ಕರೆ ಸಾಕೆಂದು ಅಂಗಲಾಚುತ್ತಿತ್ತು. ಅವಳು ಆಗ ಅಪೇಕ್ಷಿಸಿದ್ದು ನನ್ನ ಪ್ರೀತಿಯಲಿ ನಾ ಮಿಂದೇಳಲು ನನಗೆ ಸ್ವಾತಂತ್ರ್ಯ ಕೊಡಿ ಎಂದು. ಆದರೀಗ ಅವನ ಪ್ರೀತಿ ಅತಿಯಾಗಿದೆ, ಸಾಕೆನಿಸಿದೆ. ಅವನ ಕಾಳಜಿ, ಅವಳದೆನ್ನುವುದನ್ನು ಏನನ್ನೂ  ಉಳಿಸಿಯೇ ಇಲ್ಲ. ಕಾಳಜಿ ನೆಪದಲ್ಲಿ ನನ್ನ ಸ್ವಾತಂತ್ರ್ಯವನ್ನೇ ಕೊಂಡುಕೊಂಡಿದ್ದಾನೆ ಪ್ರೀತಿಯನ್ನು ಅಡವಿಟ್ಟು… ಎಂದು ಈಗ ಅವಳಿಗೆ ಅನ್ನಿಸುತ್ತಿದೆ. ಅವನು ತನ್ನ ಬಳಿ ಇಟ್ಟ ಪ್ರೀತಿಗಿಂತ ತಾನು ಅವನ ಬಳಿ ಇಟ್ಟ ತನ್ನ ಸ್ವಾತಂತ್ರ್ಯ ದೊಡ್ಡದೆಂದು!

ಇದನ್ನೂ ಓದಿ : Women’s Day 2022: ‘ತಾಳೀಗೀಳಿ ಎಲ್ಲ ಒಡವೇನೂ ಅವನ ಮುಖಕ್ಕೆ ಎಸೆದು ಬಂದುಬಿಟ್ಟೆ’

ಸುತ್ತುವವನಿಗೆ ಮನೆ ಬಂಧನ, ಬೇಡವಾದವನಿಗೆ ಹೊರಜಗತ್ತು ಬಂಧನ. ಏಕಾಂತ ಕೆಲವರಿಗೆ ಹುಚ್ಚು ಹಿಡಿಸಿದರೆ ನನ್ನಂಥವರಿಗೆ ಅದು ಸ್ವಾತಂತ್ರ್ಯದ ಪರಮಾವಧಿ. ಹೀಗೆ ಆಪ್ತರೊಬ್ಬರನ್ನು ಪ್ರಶ್ನಿಸಿದೆ ಈ ಸ್ವಾತಂತ್ರ್ಯದ ಬಗ್ಗೆ ನಿಮಗೇನು ಅನ್ನಿಸುತ್ತದೆ? ಯಾವುದು ನಿಜವಾದ ಸ್ವಾತಂತ್ರ್ಯ? ಉತ್ತರ ನನ್ನ ಊಹೆ ಮೀರಿತ್ತು, ‘ಒಡೆದು ಆಳುವ ನೀತಿ ಅನುಸರಿಸುತ್ತದೆ ಈ ಸ್ವಾತಂತ್ರ್ಯ, ಕೊಡದಿದ್ದಷ್ಟು ಒಳ್ಳೆಯದು’ ಎಂದರು. ಹೇಗೆ ಸ್ವಲ್ಪ ಸಮರ್ಥಿಸುವಿರಾ ಎಂದೇ. ಅದಕ್ಕವರು, ‘ಇಂಡಿಯಾ – ಪಾಕಿಸ್ತಾನ್ ಬೇರೆ ಆಗಿದ್ದು ಯಾವಾಗ, ಬ್ರಿಟಿಷರು ಸ್ವಾತಂತ್ರ್ಯ ಕೊಡಲು ಒಪ್ಪಿದಾಗ. ಅಂದಿದ್ದ ಗುಲಾಮಗಿರಿ ಈವತ್ತಿಗೇನು ತಪ್ಪಿದೆಯಾ ಹೇಳಿ? ಸ್ವಾತಂತ್ರ್ಯದ ನೆಪದಲ್ಲಿಯೇ ಮನೆಗಳ ಮಧ್ಯೆ, ಮನಗಳ ಮಧ್ಯೆ ಗೋಡೆಗಳು ಹೆಚ್ಚಾಗಿದ್ದು. ಅಂದರೆ ಮನುಷ್ಯನಿಗೆ ಸ್ವಾತಂತ್ರ್ಯ ಕೊಡುವುದೇ ತಪ್ಪಾ? ಎಂದೆ. ಅದಕ್ಕವರು, ‘ನಮ್ಮ ಸ್ವಾತಂತ್ರ್ಯ ಮತ್ತೆ ಯಾರಿಗೋ ಬಂಧನವಾಗುವುದಾದರೆ ಅದು ಅಮಾನವೀಯತೆಯೇ.  ಮಾಲೀಕನೊಬ್ಬನ ಸ್ವಾತಂತ್ರ್ಯ ತನ್ನ ಕಾರ್ಮಿಕನಿಗೆ ಹಿಂಸೆಯಾದರೆ ಆ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಉತ್ತಮ? ನೀನೇ ಯೋಚನೆ ಮಾಡು’ ಎಂದರು. ಮನ ಸಿದ್ದಲಿಂಗಯ್ಯರ ನಾಲವತ್ತೆಳರ ಸ್ವಾತಂತ್ರ್ಯವನ್ನು ಜಪಿಸಿತು. ಸಮಾನತೆ ಇರದ ಸ್ವಾತಂತ್ರ್ಯ ಇನ್ನಷ್ಟು ಅಸಮಾನತೆಯನ್ನು ಸೃಷ್ಟಿಸಬಲ್ಲದು ಎಂದೆನಿಸಿತು.

ಜೀವ ಹೆಣ್ಣಾದರೇನು, ಗಂಡಾದರೇನು? ಅದು ಹಾರಲು ಬಯಸುತ್ತದೆ. ಅದರ ರೆಕ್ಕೆ ಮುರಿಯುವ ಪ್ರಯತ್ನಗಳು ನಡೆಯುವುದು ಸಾಮಾನ್ಯ. ಗಂಡಿಗಿಂತ ಹೆಣ್ಣಿಗೆ ತೊಡಿಸುವ ಬೇಡಿಗಳು ಹೆಚ್ಚೆಂಬುದು ಸರ್ವ ತ್ಯ. ಅದೆಷ್ಟೋ ಕಡೆ ತಾವೇ ಒಂದು ಎಲ್ಲೆಯನ್ನು ಕೊರೆದು ಇದಿಷ್ಟರೊಳಗೆ ಹಾರಾಡು ಎನ್ನುವವರು ನಮ್ಮನಿಮ್ಮ ನಡುವೆ ಎಷ್ಟಿಲ್ಲ? ಅಷ್ಟಕ್ಕೂ ಸ್ವಾತಂತ್ರ್ಯ ಬೇಕಿರುವುದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು. ನಮ್ಮ ಸಾಧ್ಯತೆಗಳನ್ನು ಒರೆಗೆ ಹಚ್ಚಿಕೊಳ್ಳಲು ಅಲ್ಲವೆ?

(ಮುಂದಿನ ಹರಿವು : 23.3.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಹಿಂದಿನ ಹರಿವು : Gokak Falls: ಯಾರದೋ ಎಡವಟ್ಟಿಗೆ ಇನ್ನ್ಯಾರೋ ‘ಹಣ್ಣು’ ತಿನ್ನುತ್ತಲೇ ಇರಬೇಕು

Follow us on

Related Stories

Most Read Stories

Click on your DTH Provider to Add TV9 Kannada