Women’s Day 2022: ‘ತಾಳೀಗೀಳಿ ಎಲ್ಲ ಒಡವೇನೂ ಅವನ ಮುಖಕ್ಕೆ ಎಸೆದು ಬಂದುಬಿಟ್ಟೆ’
Police Station : ಎರಡ್ ಪೊಲೀಸ್ ಸ್ಟೇಷನ್ಗೆ ಹೋದೆ, ಮಹಿಳಾ ಪೊಲೀಸ್ ಠಾಣೆಗೂ ಕೂಡ ಹೋಗಿದ್ದೆ. ಯಾರೂ ಸರಿಯಾಗಿ ಪ್ರತಿಕ್ರಿಯೆ ನೀಡ್ಲಿಲ್ಲ. ಎಲ್ರೂ ನನ್ನನ್ನ ಅನುಮಾನಿಸೋರೇ. ಹಾಗಾಗಿ ಈ ನಿರ್ಧಾರ ತಗೊಂಡೆ ಎಂದಳು ಆಕೆ.
Women’s Day 2022 : ರಾತ್ರಿ 10:55 ಆಗುತ್ತಲೇ, ಹಂಪಿ ಎಕ್ಸ್ಪ್ರೆಸ್ ರೈಲಿನ ಗಾಲಿಗಳು ಬಳ್ಳಾರಿಯನ್ನ ತೊರೆಯಲು ಶುರುವಿಡುತ್ತವೆ. ಕೆಲದಿನಗಳ ಹಿಂದೆ, ಈ ರೈಲಿನ ಬಾಗಿಲ ಬಳಿಯೆ ನಿಂತು ಊರನ್ನ ಆ ಸಂದರ್ಭಕ್ಕೆ ಕಣ್ತುಂಬಿಕೊಳ್ಳುತಿದ್ದ ನನಗೆ ಕಂಡದ್ದು, ಗೊಂದಲಗೊಂಡು ರೈಲನ್ನು ಹತ್ತುವುದೊ ಬೇಡವೋ ಎಂದು ವಿಚಲಿತವಾಗಿದ್ದ ಹುಡುಗಿಯೊಬ್ಬಳು. ರೈಲ್ವೆ ಪೊಲೀಸ್, ‘ಟ್ರೇನ್ ಮಿಸ್ ಮಾಡ್ಕೊಂಡೇನಮ್ಮ?’ ಅವಳು ಕತ್ತು ಅಲ್ಲಾಡಿಸಿದಳು. ಯಾವೂರಿಗೆ ಹೋಗ್ಬೇಕು? ಎಂದು ಪೊಲೀಸ್ ಕೇಳಿದಾಗ, ಪಾಂಡವಪುರ ಎಂದಳು. ಇದೇ ಟ್ರೇನ್ ಅಲ್ವೇನಮ್ಮ, ಹತ್ಕೊ ಹೋಗು ಬೇಗ ಎಂದಾಗ, ಮತ್ತೆ ಕತ್ತು ಅಲ್ಲಾಡಿಸಿ ಅದಾಗಲೇ ನಿಧಾನಕ್ಕೆ ಚಲಿಸುತ್ತಿದ್ದ ರೈಲಿನ ವೇಗಕ್ಕೆ ಸಮನಾಗಿ ಓಡಿ ನಾ ನಿಂತ ಬಾಗಿಲಿಂದಲೇ ಒಳಬಂದಳು. ಒಂಥರಾ ದುಗುಡ, ತಿರಸ್ಕಾರ, ಮೌನ ಹಾಗೂ ಹತಾಶೆ. ಒಂದು ಹೆಣ್ಣನ್ನ ಇನ್ನಾವ ಋಣಾತ್ಮಕ ಗುಣಗಳು ವರ್ಣಿಸಲು ಸಾಧ್ಯ? ಡಾ. ಜ್ಯೋತಿ ಸಾಮಂತ್ರಿ, ಬಳ್ಳಾರಿ (Dr. Jyothi Samantri)
*
(ಭಾಗ 1)
ನಾನು: ಟ್ರೇನ್ ಮಿಸ್ ಮಾಡ್ಕೊಂಡ್ರಾ? ಅವಳು: ಹೌದು. ನಾನು: ಫ್ಯಾಮಿಲಿ ಎಲ್ಲ ಅದ್ರಲ್ಲೆ ಹೋದ್ರಾ? ಅವಳು ಮತ್ತೆ ಕತ್ತು ಅಲ್ಲಾಡಿಸಿದಳು, ಕಣ್ಣು ಕೆಂಪಾಗಿದ್ದವು. ನಾನು: ಬನ್ನಿ ನಂಜೊತೆ. ಅವಳು: ಪರ್ವಾಗಿಲ್ಲ ನಾನು: ಇರ್ಲಿ ಬನ್ನಿ, ಇಲ್ಲಿ ಹೇಗ್ ಒಬ್ರೆ ನಿಲ್ತೀರಾ? ಅವಳು: ನೀವೊಬ್ರೆ ಇದೀರಾ?
ಈ ಪ್ರಶ್ನೆ ನನಗೆ ಮೊದಲ ಎಚ್ಚರಿಕೆ ನೀಡಿದ್ದು. ಆ ಪ್ರಶ್ನೆ ಅವಳು ಯಾವ ಕಾರಣಕ್ಕೆ ಕೇಳಿದ್ದೊ ಗೊತ್ತಿಲ್ಲ ಆದರೆ ನಾನು ಕೊಂಚ ಭಯಗೊಂಡೆ.
ನಾನು: ಇಲ್ಲ, ಅಣ್ಣ ಪಕ್ಕದ ಕೋಚ್ನಲ್ಲಿದಾರೆ. ಅವಳು: ಹಾಗಿದ್ರೆ, ಇರ್ಲಿ ಬಿಡಿ, ತೊಂದ್ರೆ ಇಲ್ಲ. ನಾನು: ಏನಾದ್ರೂ ಸಮಸ್ಯೆನಾ?
ಅವಳು ಅಳೋಕೆ ಶುರುಮಾಡಿದಳು. ನಾನು ಒತ್ತಾಯ ಮಾಡಿ ನನ್ನ ಸೀಟಿನ ಬಳಿ ಕರ್ಕೊಂಡೋಗಿ ನೀರು ಕೊಟ್ಟು ಕೇಳಿದೆ, “ಹೇಳಿ ಏನಾಯ್ತು?”
ಇದನ್ನೂ ಓದಿ : Women Empowerment; ನಾನೆಂಬ ಪರಿಮಳದ ಹಾದಿಯಲಿ: ಇನ್ನಾದರೂ ನಿಲ್ಲಿಸುವಿರೇ ಹೂ ಅರಳಿದ್ದಕ್ಕೆ ಸಾಕ್ಷಿ ಹುಡುಕುವುದನ್ನು
ಅವಳು: ಮನೆ ಬಿಟ್ ಬಂದಿದೀನಿ ನಾನು: ಅಂದ್ರೆ? ಅವಳು: ನನ್ ಹಸ್ಬೆಂಡ್ ದಿನ ಕುಡ್ಕೊಂಡ್ ಬಂದು ಹೊಡೀತಾರೆ. ಇವತ್ತು ಬೆಳಿಗ್ಗೆಯಿಂದಾನೂ ಆರಾಮಾಗಿದ್ದೆ; ಡ್ಯೂಟಿಯಿಂದ ಬಂದೋರೆ ವಿನಾಕಾರಣ ಕೋಪ ಮಾಡ್ಕೊಂಡ್ ಹೊಡಿಯೋಕೆ ಸ್ಟಾರ್ಟ್ ಮಾಡಿದ್ರು, ಇಲ್ನೋಡಿ ಕೈ ಬಾತ್ಕೊಂಡಿದೆ (ಅಂತ ಕೈ ತೋರ್ಸಿದಳು, ನಿಜಕ್ಕೂ ಬಾವು ಬಂದಿತ್ತು, ಚೂರು ಗಾಯವೂ ಆಗಿತ್ತು), ಅದ್ಕೆ ತಾಳೀಗೀಳಿ ಎಲ್ಲ ಒಡವೆನೂ ಅವ್ನ್ ಮುಖಕ್ಕೆ ಎಸೆದು ಬಂದ್ಬಿಟ್ಟೆ.
ಅಳುತ್ತಾ ಕಿಟಕಿ ನೋಡ್ತಾ ಕೂತ್ಕೊಂಡ್ಲು. ನಾನು, ಒಂದು ನೋವಿನ ಮಾತ್ರೆ ಕೊಟ್ಟು ಸಮಾಧಾನಪಡಿಸಿದೆ.
ನಾನು: ಹಾಗ್ಯಾಕ್ ಮಾಡೋಕೋದ್ರಿ? ಅವಳು: ಇಲ್ಲ, ಎರಡ್ ಪೊಲೀಸ್ ಸ್ಟೇಷನ್ಗೆ ಹೋದೆ, ಮಹಿಳಾ ಪೊಲೀಸ್ ಠಾಣೆಗೂ ಕೂಡ ಹೋಗಿದ್ದೆ. ಯಾರು ಸರಿಯಾಗಿ ಪ್ರತಿಕ್ರಿಯೆ ನೀಡ್ಲಿಲ್ಲ. ಎಲ್ರೂ ನನ್ನನ್ನ ಅನುಮಾನಿಸೋರೆ. ಹಾಗಾಗಿ ಈ ನಿರ್ಧಾರ ತಗೊಂಡೆ. ನಂಗೆ ಮನೆಗೆ ಹೋಗೋಕು ಇಷ್ಟ ಇಲ್ಲ, ನಮ್ಮ ಅಪ್ಪ-ಅಮ್ಮಂಗೆ ಭಾರ ಆಗೋಕೆ ಇಷ್ಟ ಇಲ್ಲ. ಏನಾದ್ರೂ ಕೆಲ್ಸ ಕೊಡಿಸಿ, ಯಾವ್ದೊ ಒಂದ್ ಹಾಸ್ಟೆಲ್ನಲ್ಲಿದ್ಕೊಂಡ್ ಹೇಗೋ ಜೀವನ ನಡೆಸ್ತೀನಿ. ಪ್ಲೀಸ್ ಇದೊಂದ್ ಸಹಾಯ ಮಾಡಿ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/dr-jyothi-samantri
ಇದನ್ನೂ ಓದಿ : War: ಅಮಾರೈಟ್; ಈ ತುದಿಯಲ್ಲಿ ಬಿದ್ದ ಬಾಂಬಿನ ದಟ್ಟಹೊಗೆ ಗಡಿಯಾಚೆಯ ದೇಶಕ್ಕೆ ಬೀಸದಂತೆ ತಡೆಯಬಹುದಾ?
Published On - 12:11 pm, Tue, 8 March 22