War: ಅಮಾರೈಟ್; ವಿನಾಶವನ್ನು ಹೊತ್ತು ತರುವ ಮನುಷ್ಯನೂ ಬಾಂಬು ಮಿಸಾಯಿಲೇ ಆಗಿರುವಾಗ

Effects of the War : ‘ಇತಿಹಾಸದ ಪಠ್ಯಪುಸ್ತಕ ಪುಟಗಳಿಂದ ಯುದ್ಧ ಧುತ್ತನೆ ಎದ್ದುಬಂದು ಪತ್ರಿಕೆಗಳಲ್ಲಿ ನಿತ್ಯದ ಸುದ್ದಿಯಾಗುವಾಗ ಚಂದಮಾಮ ಕತೆಗಳನ್ನು ಬರೆಯುವ ಆಸೆಹೊತ್ತ ಬೆರಳುಗಳು ಬಿದ್ದುಹೋದವು.’ ಭವ್ಯಾ ನವೀನ

War: ಅಮಾರೈಟ್; ವಿನಾಶವನ್ನು ಹೊತ್ತು ತರುವ ಮನುಷ್ಯನೂ ಬಾಂಬು ಮಿಸಾಯಿಲೇ ಆಗಿರುವಾಗ
ಫೋಟೋ : ಡಾ. ಲೀಲಾ ಅಪ್ಪಾಜಿ
Follow us
ಶ್ರೀದೇವಿ ಕಳಸದ
|

Updated on:Mar 08, 2022 | 10:56 AM

ಅಮಾರೈಟ್ | Amaright : ಈ ಪುಟ್ಟಕಥೆ ಹೇಳಲೇಬೇಕೆನ್ನಿಸುತ್ತಿದೆ. ಹುಡುಗಿಯೊಬ್ಬಳು ಉದ್ದಲಂಗದ ನೆರಿಗೆಗಳನ್ನು ಎತ್ತಿಟ್ಟುಕೊಂಡು ಓಡಿಹೋಗಿ ಅಂಗಡಿಯಿಂದ ಉಪ್ಪು ಖರೀದಿಸಿ ಮತ್ತೆ ಮನೆಯೊಳಗೆ ಓಡಿ ಕದವಿಕ್ಕಿದ ಚಿತ್ರ; ರಾತ್ರಿ ಇಡೀ ನಡೆದ ಮನೆ-ಮನೆ ರಾಮಾಯಣ ಅಕ್ಕಪಕ್ಕದವರಿಗೆ ಕೇಳಿಸಿದ್ದಿರಬಹುದೆನ್ನುವ ಮುಜುಗರದ ಕಣ್ಣುಗಳಲ್ಲಿದ್ದ ಅವಳ ಯುದ್ಧಭೀತಿ ಈಗಲೂ ಹಸಿ ಹಸಿಯಾಗೇ ನೆನಪಿದೆ. ನಮ್ಮ ಮಕ್ಕಳ ಕಣ್ಣಲ್ಲಿ ಅಂತಹ ಭೀತಿ ಕಾಣದಂತೆ ಶಿಸ್ತಿನಿಂದ ಬದುಕಬೇಕಾದ್ದು ನಿರಂತರ ಮಾಡಬೇಕಿರುವ ಯುದ್ಧ. ಅಮ್ಮನ ಮುಗಿದ ಕನಸುಗಳನ್ನು ಬದುಕಿ ತೋರಿಸುವುದು ಯುದ್ಧ, ಅಪ್ಪನ ಕಣ್ಣುಗಳಿಗೆ ಬೆಳಕು ತುಂಬುವುದು ಯುದ್ಧ. ನಮಗಿಂತ ಹೆಚ್ಚಿಗೆ ಮತ್ತೊಬ್ಬರನ್ನು, ನಮ್ಮವರಂತೆಯೇ ಮತ್ತೊಬ್ಬರನ್ನು ಪ್ರೀತಿಸುವುದೇನು ಕಡಿಮೆ ಯುದ್ಧವಾ? ಈ ಎಲ್ಲಾ ಯುದ್ಧಗಳ ಬಗ್ಗೆ ನಾವು ಹೆಚ್ಚಿಗೆ ಏನು ಬಂತು ಕಡಿಮೆಯೂ ಮಾತಾಡುವುದಿಲ್ಲವಲ್ಲಾ? ಭವ್ಯಾ ನವೀನ​, ಕವಿ (Bhavya Naveen)

*

(ಬಿಲ್ಲೆ 5, ಭಾಗ 1)

ಎದೆಯ ಗಡಿಗಳು ಗಾಢವಾಗಿವೆ, ಊರು ಸ್ಮಶಾನ ಸದ್ದಿನಲ್ಲಿದೆ. ಮಟಮಟ ಮಧ್ಯಾಹ್ನ ಕಪ್ಪು ಧೂಳು ಸೂರ್ಯನನ್ನು ಮುಚ್ಚಿಹಾಕಲು ಹವಣಿಸುತ್ತಿರುವಾಗ, ರಾತ್ರಿಯ ನಕ್ಷತ್ರಗಳು ನಾಚಿಕೊಳ್ಳುವಂತೆ ಸಾವಿನ ಮೆರವಣಿಗೆಯಲ್ಲಿ ಮಿರ ಮಿರ ಮಿರುಗುವ ತುಪಾಕಿಗಳು! ಅವು ತುಪಾಕಿಗಳಾ? ಹೆಸರಲ್ಲೇನಿದೆ… ವಿನಾಶವನ್ನು ಹೊತ್ತು ತರುವ ಮನುಷ್ಯನೂ ಬಾಂಬು ಮಿಸಾಯಿಲೇ ಆಗಿರುವಾಗ.

ಯುದ್ಧಗಳನ್ನು ತುಂಬಾ ಸೀರಿಯಸ್ಸಾಗಿ ಓದಿಸಿದ್ದ ಇತಿಹಾಸದ ಪಾಠಗಳನ್ನು ಮರೆತು ಬಹಳ ಕಾಲವಾಗಿದೆ. ಆಗಾಗ ಗಡಿಗಳಲ್ಲಿ ಸದ್ದು ಮಾಡುವ ಯುದ್ಧಗಳ ಮೇಲೆ ದೇಶಪ್ರೇಮದ ಬಾವುಟವಿದ್ದಿದ್ದರಿಂದ ಆಗೆಲ್ಲಾ ಸಾವು-ನೋವುಗಳು ಮುಖ್ಯವಾದವೇ ಹೊರತು ‘ಯುದ್ಧʼ ಅಮುಖ್ಯ ಅನ್ನುವುದರ ಕುರಿತು ಹೆಚ್ಚಿಗೇನೂ ಟಿಪ್ಪಣಿಗಳಿರಲಿಲ್ಲ. “ದೂರದಲ್ಲಿ ರಾಶಿಬಿದ್ದಿರುವ ಜೊತೆಗಾರರ ಹೆಣದ ರಾಶಿಯನ್ನು ನೋಡುವಂತಿಲ್ಲ. ಸುಮ್ಮನೇ, ಬರೀ ಸುಮ್ಮನೇ ಯುದ್ಧದಲ್ಲಿ ಭಾಗಿಯಾಗಬೇಕು” ಅಂದಿದ್ದ ಕೈಫಿ ಅಜ್ಮಿಯ ಪದ್ಯವನ್ನು ಓದಿ ದೇಶ-ಭಾಷೆಯ ನೆಲೆಯಲ್ಲಿ ಅರ್ಥವಾದಷ್ಟು ದಕ್ಕಿಸಿಕೊಂಡಿದ್ದ ಒಂದು ಕಾಲದ ಅರಿವಿನಿಂದ ಈವರೆಗೂ ಅಪ್‌ಡೇಟ್‌ ಆಗದ  ವ್ಯಸ್ತ ಬದುಕು ಯುದ್ಧವನ್ನು ಹೋರಾಟ ಅಂತಲೇ ಗ್ರಹಿಸುತ್ತಿತ್ತು. ಆದರೆ, ಈಗ ಹಾಗನ್ನಿಸುತ್ತಿಲ್ಲ. ಬದುಕುವುದಕ್ಕಂತಲೇ ಹಗಲು-ರಾತ್ರಿ ಒಂದು ಮಾಡಿ ದುಡಿಯುತ್ತಿರುವ ಕಣ್ಣುಗಳಲ್ಲಿನ ಹೋರಾಟದ ಮುಂದೆ ಸಾಯಿಸುವ ಯುದ್ಧಗಳನ್ನು ಹೋರಾಟ ಅಂತ ಯಾಕಾದರೂ ಕರೆಯಬೇಕು ಅನ್ನುವುದು ಸಿಟ್ಟಾ? ಅಸಹಾಯಕತೆಯಾ? ಭಯವಾ? ಅಥವಾ ಮೆಲ್ಲಮೆಲ್ಲಗೆ ಕಲಿಯುತ್ತಿರುವ ಪಾಠವಾ?

ಇದನ್ನೂ ಓದಿ : Ukraine Crises: ವೈಶಾಲಿಯಾನ; ಭಾರತೀಯ ವಿದ್ಯಾರ್ಥಿಗಳ ಸಹಾಯದಲ್ಲಿ ತೊಡಗಿರುವ ಕನ್ನಡತಿ ಡಾ ಆರತಿ ಕೃಷ್ಣ

ನಾನು ಈ ಬುದ್ಧಿವಂತ ಯುದ್ಧಗಳ ಬಗ್ಗೆ ಒಂದೆರಡು ನಿಮಿಷ ಮೌನ ಆಚರಿಸಿ, ಇನ್ನೊಂದು ಪುಟ್ಟಕಥೆ ಹೇಳುತ್ತೇನೆ. ಒಂದು ಪುಟ್ಟ ಮಗು, ನಾಲ್ಕೈದೇ ವರ್ಷದ್ದಿರಬಹುದು. ಹಳೇದೆಹಲಿಯ ರೈಲ್ವೇಸ್ಟೇಷನ್ನಿನ ಮೂಲೆಯೊಂದರಲ್ಲಿ ಮೂರು ಕಲ್ಲಿನ ಮಧ್ಯೆ ಉರಿಯುತ್ತಿದ್ದ ಒಲೆಯ ಬೆಂಕಿಗೆ ಕೊಳವೆ ಹಿಡಿದು ಊದುವ ಹತ್ತನ್ನೆರಡು ವರ್ಷಗಳ ಹಿಂದಿನ ಚಿತ್ರ ಕಣ್ಣಿಗೆ ಕಟ್ಟಿದಂತೆ ಈಗಲೂ ಆಗಾಗ ಬಂದು ಹೋಗುತ್ತದೆ. ಅನ್ನ ಕಲಸಿದ ಬಟ್ಟಲಿಗೆ ಮುಖ ತಿರುಗುವ ಮಗಳಿಗೆ ಅಂತಹದ್ದೊಂದು ಹಸಿವಿಲ್ಲ ಅನ್ನುವ ಸಮಾಧಾನ ನನ್ನ ಒಂದು ಯುದ್ಧದ ಗೆಲುವು ಅಂತಾದರೆ, ಅವಳಿಗೆ ‘ಅಂತಹದ್ದೊಂದು ಹಸಿವೂ ಇದೆʼ ಅಂತ ಹೇಳಿಕೊಡಬೇಕಲ್ಲ… ಅದು ನಾನು ನಿರಂತರ ಮಾಡಬೇಕಿರುವ ಯುದ್ಧ.

ಹಾಗೇ, ರಾಕ್ಷಸ ಅಂಗುಲಿಮಾಲಾ ಆನಂದನಾದನಲ್ಲ ಆ ಪರಿವರ್ತನೆ ಯುದ್ಧವೇ ಹೊರತು ಅವನ ಕೊರಳಲ್ಲಿದ್ದ ಬೆರಳ ಮಾಲೆಗಳಲ್ಲ ಅಂತ ಹೇಳುತ್ತಾ ಕೂತರೆ ಅದು ಉಪದೇಶ ಅನಿಸುತ್ತದೇನೋ? ಆದರೂ ಪ್ರೀತಿಯ ಎದುರು ರಾಕ್ಷಸ ಮನುಷ್ಯನಾದ ಎಷ್ಟು ಕತೆ ಕೇಳಿಲ್ಲ ನಾವು. ಮನುಷ್ಯರೂ ರಾಕ್ಷಸರಾದ ಕತೆಗೇನೂ ಕಡಿಮೆ ಇಲ್ಲ ಬಿಡಿ. ಆದರೆ ಮನುಷ್ಯ ಭರ್ತಿ ಮನುಷ್ಯನೇ ಆಗಿರುವ ಕತೆ ಕೇಳುವುದಕ್ಕೆ ಸಿಗುವುದಿಲ್ಲ, ಯಾಕೆ ಸಿಗುವುದಿಲ್ಲ ಅನ್ನುವುದಲ್ಲ… ಅದೇನಿದ್ದರೂ ಖುದ್ದು ಬದುಕಿ ನೋಡಬೇಕಾದ್ದಷ್ಟೇ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಹಿಂದಿನ ಬಿಲ್ಲೆ : ಅಮಾರೈಟ್ : ‘ಇದು ಗೆಳೆತನದ ಗಣಿತ ಸಾಹೇಬ್‌, ಇಲ್ಲಿ ಎರಡರಲ್ಲಿ ಒಂದು ಕಳೆದರೆ ಏನೂ ಉಳಿಯುವುದಿಲ್ಲ’

Published On - 10:11 am, Tue, 8 March 22