War: ಅಮಾರೈಟ್; ಈ ತುದಿಯಲ್ಲಿ ಬಿದ್ದ ಬಾಂಬಿನ ದಟ್ಟಹೊಗೆ ಗಡಿಯಾಚೆಯ ದೇಶಕ್ಕೆ ಬೀಸದಂತೆ ತಡೆಯಬಹುದಾ?

Russia : ಇಂದು ರಷ್ಯಾ ನಾಯಕನ ಬಗ್ಗೆ ವಿದ್ಯಾರ್ಥಿನಿಯೊಬ್ಬಳು, “ಅವರಿಗೆ ದೇಶದ ಜನಕ್ಕಾಗಿ ಏನು ಮಾಡಬೇಕು ಅನ್ನುವುದು ಚೆನ್ನಾಗಿ ಗೊತ್ತಿದೆ” ಎಂದು ಹೇಳುತ್ತಾಳೆ. ಜನಕ್ಕಾಗಿ ಏನನ್ನಾದರೂ ಮಾಡುವುದು ಅಂದರೆ ಏನು?

War: ಅಮಾರೈಟ್; ಈ ತುದಿಯಲ್ಲಿ ಬಿದ್ದ ಬಾಂಬಿನ ದಟ್ಟಹೊಗೆ ಗಡಿಯಾಚೆಯ ದೇಶಕ್ಕೆ ಬೀಸದಂತೆ ತಡೆಯಬಹುದಾ?
ಫೋಟೋ : ಡಾ. ಲೀಲಾ ಅಪ್ಪಾಜಿ
ಶ್ರೀದೇವಿ ಕಳಸದ | Shridevi Kalasad

|

Mar 08, 2022 | 10:51 AM

ಅಮಾರೈಟ್ | Amaright : “ಕಲ್ಲು ಕಲ್ಲಿತ್ತಂತೆ, ಕಲ್-ಕಲ್ಲಲ್ ಹೊಡ್ದಾಡಿದ್ರಂತೆ ಆಯ್ತಾ. ಆಮೇಲ್‌ ಕಲ್ಲು-ಕಲ್ಲು ಉಜ್ಜಿದ್ರಂತೆ ಬೆಂಕಿ ಬಂತಂತೆ, ಬೆಂಕಿ ಹಿಡ್ಕಂಡ್‌ ಮೇಲ್‌ ಹೊಡ್ದಾಡುದ್ವಿ ಅಂತ ಯಾಕ್‌ ಹೇಳುದು ಅಂತ ಯೋಚ್ನೆ ಮಾಡಿ ಅದ್ನೇ ಯುದ್ಧ ಅಂದ್ರಂತೆ ಆಯ್ತಾ. ಆಮೇಲ್‌ ಬೇಕಾದಾಗ್‌ ಬೆಂಕಿ ಹಚ್ಚೊಕೆ ಬೆಂಕಿಕಡ್ಡಿ ಮಾಡ್ದ್ರಂತೆ, ಆಗಿಂದ ಯುದ್ಧ ದೊಡ್ದಾಯ್ತಂತೆ. ಈಗ್‌ ಬುದ್ಧಿವಂತ್ರಾಗ್ತಾ ಬಂದ್ರಲ್ಲಾ… ಪೆನ್ನು-ಪೆನ್ನೂ ಹಿಡ್ಕೊಂಡ್ರು ಯುದ್ಧ ಮಾಡ್ತಾರೆ, ಬುಕ್ಕು-ಬುಕ್ಕೂ ಓದಿನೂ ಯುದ್ಧ ಮಾಡ್ತಾರೆ. ಟೆಕ್ನಾಲಜಿ ಬಂತಲ್ಲಾ… ಅದೊಂಥರ ಆಟ ಸಾಮಾನು ಅದು. ಯಾವ್‌ ಆಟ ಆಡ್ತೀವಿ ಅನ್ನೋದ್ರ್‌ ಮೇಲ್‌ ಅದ್ರ್‌ ರಿಸಲ್ಟ್‌. ಸೈನ್ಸು-ಟೆಕ್ನಾಲಜಿ ಎಲ್ಲಾ ಇರ್ವಾಗ ಯುದ್ಧ ಅಂದ್ರೇನ್‌ ಸುಮ್ನೇ ಮಾತಾಯ್ತಾ. ಈಗ್‌ ಯುದ್ಧ ಅಲ್ಲ ಅದ್ಕಿಂತ ದೊಡ್ದೇನೋ ಆಗತ್ತೆ ನೋಡ್ತಿರು” ಅಂತ ಮೊನ್ನೆ ಮಾತಾಯ್ತು. ಮೊದ ಮೊದಲು ತಮ್‌-ತಮಾಷೆಯಾಗಿ ಮಾತು ಶುರುವಾದರೂ ಕಡೆಕಡೆಗೆ ಹೆಸರೂ ಇಡಲಾಗದೆ ಇರುವಷ್ಟು ದೊಡ್ಡದು ಏನಾಗಬಹುದು ಅನ್ನುವುದನ್ನು ಕೂತು ಯೋಚಿಸಲಾಗಲಿಲ್ಲ. ಭವ್ಯಾ ನವೀನ, ಕವಿ (Bhavya Naveen)

*

(ಬಿಲ್ಲೆ 5, ಭಾಗ 2)

ಸ್ಮಶಾನಗಳು ಕೊರತೆ ಬೀಳುವ ಹೊತ್ತಾಯಿತು ಅಂದಿದ್ದರೆ, ಹೆಣದ ಮೇಲೆ ಹೆಣ ಹೂಳಬಹುದಿತ್ತು.

ನಿಂತ ನೆಲದಲ್ಲೇ  ಮನುಷ್ಯರನ್ನು ಹೂಳುವ ಅವಶ್ಯಕತೆ ಏನಿತ್ತು?

ಹೀಗಂತ ಒಂದು ಪ್ರಶ್ನೆ ಓಡುತ್ತಲೇ ಇದೆ. ನೈಸರ್ಗಿಕವಾಗಿ ಯಾವುದನ್ನೂ ಕಟ್ಟುವ ಯೋಗ್ಯತೆ ಇಲ್ಲದ ನಾವು ಅನೈಸರ್ಗಿಕವಾಗಿ ಎಲ್ಲವನ್ನೂ ಆಕ್ರಮಿಸಿಕೊಳ್ಳುತ್ತಿರುವ ಪರಿ ನೋಡಿದರೆ ಜಗತ್ತಿನ ಕೂಡಿಸುವ ಬಿಂದುಗಳು ಕೊಂಡಿ ತಪ್ಪುತ್ತಿವೆ ಅನ್ನಿಸುವುದಿಲ್ಲವಾ? ಭಾವನೆಗಳೇ ನಿಜವಾದ ಬಂಡವಾಳ, ಆದರೆ ಅದನ್ನು ಹೂಡುತ್ತಿರುವ, ಬಳಸುತ್ತಿರುವ ಇರಾದೆಗಳ ಬಗ್ಗೆ ಏನಾದರೂ ಮಾಹಿತಿ ಇದೆಯಾ ನಮಗೆ! ಇಂದು ರಷ್ಯಾ ನಾಯಕನ ಬಗ್ಗೆ ವಿದ್ಯಾರ್ಥಿನಿಯೊಬ್ಬಳು, “ಅವರಿಗೆ ದೇಶದ ಜನಕ್ಕಾಗಿ ಏನು ಮಾಡಬೇಕು ಅನ್ನುವುದು ಚೆನ್ನಾಗಿ ಗೊತ್ತಿದೆ” ಎಂದು ಹೇಳುತ್ತಾಳೆ. ಜನಕ್ಕಾಗಿ ಏನನ್ನಾದರೂ ಮಾಡುವುದು ಅಂದರೆ ಏನು? ರಷ್ಯಾ ಉಕ್ರೇನ್‌ ಒಂದೇ ಗಡಿ ಹಂಚಿಕೊಳ್ಳುವ ದೇಶಗಳಲ್ಲವಾ? ಈ ತುದಿಯಲ್ಲಿ ಬಿದ್ದ ಬಾಂಬಿನ ದಟ್ಟ ಹೊಗೆ ಗಡಿಯ ಆಚೆ ದೇಶಕ್ಕೆ ಬೀಸದಂತೆ ತಡೆಯಬಹುದಾ? ಬಿದ್ದ ಬಾಂಬಿನ ರಭಸಕ್ಕೆ ಅಲುಗಿದ ಭೂಮಿಯ ಬೇರುಗಳು ಈಚೆ ಗಡಿಗೆ ಏನೂ ಮಾಡುವುದಿಲ್ಲವಾ? ಆಳಕ್ಕೆ ಬಿದ್ದ ಸ್ಫೋಟದ ರಾಸಾಯನಿಕಗಳು ಅಂತರಗಂಗೆಗೆ ಸೇರಿ ಈ ಗಡಿಯಿಂದ ಆ ಗಡಿಗೆ ಹರಿದರೆ ಅಲ್ಲೂ ನೀರು ವಿಷವಾಗುವುದಿಲ್ಲವಾ?

ಇದನ್ನೂ ಓದಿ : Literature: ವೈಶಾಲಿಯಾನ; ಸಾಹಿತ್ಯಕ್ಕೆ ಮನಸ್ಸನ್ನು ಪರಿವರ್ತಿಸುವಂಥ ಅಪರಿಮಿತ ಶಕ್ತಿಯಿದೆ

ಭೂಮಿ, ಕಟ್ಟಡಗಳ ಸ್ವಾಧೀನಕ್ಕೆ ಅಭಿವೃದ್ಧಿ ಎಂತಲೇ ಕರೆದರೂ ಸುಸ್ಥಿರ ಪರಿಸರದ ಕುರಿತು ಕಾಳಜಿ ಮಾಡದ ಯಾವೊಬ್ಬ ನಾಯಕನೂ ನಾಯಕನಾಗಲಾರ ಅನ್ನುವುದನ್ನು ಇಲ್ಲಿ ಗಟ್ಟಿಯಾಗಿ ಹೇಳಿ ಪ್ರತಿಭಟಿಸಿದರೂ ಏನು ಬಂತು? ಜೀವ, ಜೀವ ಸಂಕುಲ, ಭೂಮಿ ಮತ್ತು ಮನುಷ್ಯತ್ವ ಯಾವುದೂ ಪ್ರತ್ಯೇಕವಲ್ಲ. ನಾವಿರುವುದು ಜೀವಸರಪಳಿಯಲ್ಲಿ. ಅವರ ಪ್ರಾಣದ ವಿಚಾರ ಮಾತಾಡದಿದ್ದರೂ ನಮ್ಮ ಪ್ರಾಣದಂಥ ಮಕ್ಕಳ ಸುಸ್ಥಿರ ಭವಿಷ್ಯ, ಸುಸ್ಥಿರ ಸಮಾಜ, ಸುಸ್ಥಿರ ಪರಿಸರದ ಬಗ್ಗೆ ಚಿಂತಿಸಬೇಕಲ್ಲ ಅನ್ನಿಸಿದ ಮರುಕ್ಷಣ.. ಹೀಗನ್ನಿಸಿತು ಅಂತ ದಾಖಲಿಸಿಡುವುದು ತಕ್ಷಣದ ಸಾಧ್ಯತೆ ಅನ್ನಿಸಿತು.

ಯುದ್ಧಗಳೆಂದರೆ ‘ಯುದ್ಧಗಳೇʼ ಅಂತ ಗೊತ್ತಿಲ್ಲದೆ ಬದುಕಿನುದ್ದಕ್ಕೂ ಹೋರಾಡಿಕೊಂಡೇ ಬಂದವರ ಮಧ್ಯೆ, ತಮ್ಮದಲ್ಲದ ಹೋರಾಟಗಳಿಗಾಗಿ  ಜೀವನ ಪರ್ಯಂತದ ಇಡಿಗಂಟು ಬಿಟ್ಟು ಅಡಗಿ ಕುಳಿತು, ಅಲೆಮಾರಿಗಳಾಗಿರುವ ದೃಶ್ಯಗಳು ಎದೆಕಲಕುವ ಹೊತ್ತಲ್ಲಿ ಮಾತುಗಳು ಹೆಚ್ಚು ಅವಶ್ಯ ಬೀಳುವುದಿಲ್ಲ. ಒಂದು ಸೈಟು, ಮನೆ, ಆಸೆಯ ಬಟ್ಟೆ, ಇಷ್ಟದ ಪುಸ್ತಕ, ನೀರೆರೆದು ಬೆಳೆಸಿದ್ದ ಗಿಡ, ಧ್ಯಾನಿಸಿ ಬರೆದ ಚಿತ್ರ, ನೆನಪುಗಳ ಫೋಟೋ ಫ್ರೇಮು ಎಲ್ಲಾ ಸುಟ್ಟು ಕರಕಲಾಗುವುದನ್ನು ನೋಡುತ್ತಿರುವವರ ಎದೆಯೊಳಗೆ ನಡೆಯುತ್ತಿರುವುದು ಯುದ್ಧ… ಈಗ ನಡೆಯುತ್ತಿರುವುದೆಲ್ಲಾ ಯುದ್ಧದ ಹೆಸರಿನ ವಿನಾಶಗಳು. ಇನ್ನೇನು ಹೇಳಬಹುದು, ಇತಿಹಾಸದ ಪಠ್ಯಪುಸ್ತಕ ಪುಟಗಳಿಂದ ಯುದ್ಧ ಧುತ್ತನೆ ಎದ್ದು ಬಂದು ಪತ್ರಿಕೆಗಳಲ್ಲಿ ನಿತ್ಯದ ಸುದ್ದಿಯಾಗುವಾಗ ಚಂದಮಾಮ  ಕತೆಗಳನ್ನು ಬರೆಯುವ ಆಸೆಹೊತ್ತ ಬೆರಳುಗಳು ಬಿದ್ದುಹೋದವು..

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಭಾಗ 1 : War: ಅಮಾರೈಟ್; ವಿನಾಶವನ್ನು ಹೊತ್ತು ತರುವ ಮನುಷ್ಯನೂ ಬಾಂಬು ಮಿಸಾಯಿಲೇ ಆಗಿರುವಾಗ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada