Women‘s Day 2022: ವಿಷಯ ಸತ್ಯವೆಂದು ಖಾತರಿಯಾಯಿತು, ನನ್ನ ಬಗ್ಗೆ ನನಗೇ ಅತೀವ ಬೇಸರವಾಯಿತು

Woman : ಆ ದಿನ ನನಗೆ ಸಿಕ್ಕ ಮಾನಿನಿಯ ಹಾಗೆ, ಅರ್ಧರಾತ್ರಿಯಲ್ಲಿ ಮಕ್ಕಳನ್ನೂ ತೊರೆದು ಅರಿವಿರದ ದಾರಿ ತುಳಿಯುತ್ತಾಳೆ. ಅಸಹಾಯಕತೆಯಿಂದ ಪರಿಚಯವೇ ಇರದವರ ಮುಂದೆ ಅಂಗಲಾಚುತ್ತಾಳೆ, ಅಪನಂಬಿಕೆಯ ನೆರಳಲ್ಲಿ ನೋಯುತ್ತಾಳೆ.

Women‘s Day 2022: ವಿಷಯ ಸತ್ಯವೆಂದು ಖಾತರಿಯಾಯಿತು, ನನ್ನ ಬಗ್ಗೆ ನನಗೇ ಅತೀವ ಬೇಸರವಾಯಿತು
ಪ್ರಾತಿನಿಧಿಕ ಚಿತ್ರ, ಸೌಜನ್ಯ : ಡಾ. ನಿಸರ್ಗ | ಲೇಖಕಿ: ಡಾ. ಜ್ಯೋತಿ ಸಾಮಂತ್ರಿ
Follow us
|

Updated on: Mar 08, 2022 | 1:08 PM

Women’s Day 2022 : ಎರಡನೆಯ ಯೋಚನೆ ಇಲ್ಲದೆ ಯಾರಿಗೂ ಏನೂ ಸಹಾಯ ಮಾಡುವ ಮನಸ್ಥಿತಿ ಸತ್ತಿದೆಯಾ ಅಥವಾ ಅಂಥ ಕೆಲಸಕ್ಕೂ ಮುನ್ನ ಜಾಗರೂಕತೆ ವಹಿಸುವ ಪ್ರೌಢಿಮೆ ಬಂದಿದೆಯಾ? ಆ ಕ್ಷಣ ನನಗ್ಯಾವುದೂ ಅರ್ಥವಾಗಲಿಲ್ಲ. ಆದರೂ, ಬೆಳಗಿನವರೆಗೂ ಕಾಯುವಾ ಎಂದು ನಿರ್ಧರಿಸಿದೆ. 6.30 ಕ್ಕೆ ಕರೆ ಮಾಡಲು ಶುರುಮಾಡಿದೆ. ನಾಲ್ಕು ಸಲ ಫೋನ್ ಮಾಡಿದೆ, ಯಾರೂ ಫೋನ್ ರಿಸೀವ್ ಮಾಡಲಿಲ್ಲ. ತುಸು ಹೊತ್ತು ಬಿಟ್ಟು ವಾಪಾಸ್ಸು ಕರೆ ಬಂತು. ಆಕಡೆಯಿಂದ ಅವರಮ್ಮ. ನಾನು ಅವರಿಗೆ ಏನೋ ಸುಳ್ಳು ಹೇಳಿ ಅವಳ ತಂಗಿಯ ನಂಬರ್‌ ಪಡೆದೆ. ನಂತರ ಆಕೆಯ ತಂಗಿಗೆ ಫೋನ್ ಮಾಡಿದೆ. ಮೂರನೆ ಬಾರಿಗೆ ರಿಸೀವ್‌ ಮಾಡಿ ಮಾತಾಡಿದರು. ವಿಷಯ ಸತ್ಯವೆಂದು ಖಾತರಿಯಾಯಿತು. ನನ್ನ ಬಗ್ಗೆ ಅತೀವ ಬೇಸರವಾಯಿತು. ಇಂಥಹ ಮನಸ್ಥಿತಿಗೆ ಕಾರಣ ಏನೇ ಇರಲಿ, ಅವಳನ್ನು ಹೆಚ್ಚು ನೋಯಿಸಿದ್ದು ಗಂಡನ ಏಟುಗಳಿಗಿಂತ, ಇಂಥ ಅಪನಂಬಿಕೆಯ ಸಂದರ್ಭಗಳು. ಡಾ. ಜ್ಯೋತಿ ಸಾಮಂತ್ರಿ, ಬಳ್ಳಾರಿ (Dr. Jyothi Samantri)

*

(ಭಾಗ 3)

ಸಮಾಜದಲ್ಲಿ ಮೌಲ್ಯಗಳು ಗೋರಿ ಸೇರುತ್ತಿರುವುದು, ಸೇರಿರುವುದು ಮನುಷ್ಯನ ದುರಾಸೆಯ ಕಾರಣದಿಂದಲೇ. ಅಂತಹ ಎಷ್ಟೊ ಮೋಸದ ಕಥೆಗಳನ್ನು ನಿತ್ಯ ಕೇಳುವುದರಿಂದಲೋ ಏನೋ ಅವಳ ಮೇಲೆ ನನಗೆ “ನಂಬಿಕೆ” ಹುಟ್ಟಲೇ ಇಲ್ಲ.

ನಾ ಮಾಡಿದ್ದು ಸರಿಯೋ ತಪ್ಪೋ ಎಂಬುದಕ್ಕಿಂತ, ಒಬ್ಬ ಮನುಷ್ಯನಲ್ಲಿ ಇನ್ನೊಬ್ಬ ಮನುಷ್ಯನನ್ನು ನಂಬದಂಥ ಪರಿಸ್ಥಿತಿಗಳನ್ನು ತಂದಿಟ್ಟ ನಾವೇ ಪ್ರತಿನಿಧಿಸುವ ಸಮಾಜ ಎಲ್ಲಿಗೆ ಬಂದಿದೆ ಎಂಬುದೇ ಅವಲೋಕಿಸಬೇಕಾದ ವಿಷಯ. ಇಲ್ಲಿ ನನ್ನ ತಪ್ಪು ಇಲ್ಲವೆಂದಲ್ಲ, ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ ನನಗೆ ಬಂದ ಪ್ರತಿಕ್ರಿಯೆಗಳೆಲ್ಲವೂ, ನಾನು ಮಾಡಿದ್ದು ಸರಿ ಎಂಬುದನ್ನೇ ಹೇಳಿದ ಕಾರಣವಷ್ಟೆ.

ನಂತರ, ಅವಳ ಬಳಿ ಹೋಗಿ, ಮಾತಾಡಿದ ವಿಷಯ ತಿಳಿಸಿದೆ. ಕೆಲಸದ ವ್ಯವಸ್ಥೆ ಮಾಡುವುದಾಗಿ ತಂಗಿಗೆ ಹೇಳಿದ್ದೇನೆ ಎಂದು ತಿಳಿಸಿದ್ದನ್ನೂ ಹೇಳಿದೆ. ಆಕೆ ತುಸು ಸಮಾಧಾನಗೊಂಡಳು. ಪಾಂಡವಪುರ ರೈಲ್ವೆ ಸ್ಟೇಷನ್ ಬಂತು, ಇಳಿಯುವ ಮೊದಲು ಸ್ವಲ್ಪ ಹಣ ಕೊಡಲು ಹೋದೆ, ಆಕೆ ನಿರಾಕರಿಸಿ, “ನಿಮಗೆ ‘ನಂಬಿಕೆʼ ಬಂತಲಾ, ಅಷ್ಟೆ ಸಾಕು. ತುಂಬ ಸಹಾಯ ಆಯ್ತು, ಥ್ಯಾಂಕ್‌ ಯೂ” ಎಂದು ನನ್ನ ನಂಬರ್‌ ಪಡೆದು ಹೊರಟುಹೋದಳು.

ಭಾಗ 1 : Women’s Day 2022: ‘ತಾಳೀಗೀಳಿ ಎಲ್ಲ ಒಡವೇನೂ ಅವನ ಮುಖಕ್ಕೆ ಎಸೆದು ಬಂದುಬಿಟ್ಟೆ’

ಅದೆಷ್ಟು ಮಹಿಳಾ ದಿನಾಚರಣೆಗಳು ಔಪಚಾರಿಕವಾಗಿ ನಡೆದು ಹೋಗಿವೆ ಹಾಗೂ ನಡೆಯುತ್ತವೆ! ನೆನಪೇ ಇರದಷ್ಟು ಯೋಜನೆಗಳು, ಸಂಸ್ಥೆಗಳು, ಕಾನೂನುಗಳು ಅವಳ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಘೋಷಣೆಗಳು ಕಥೆ-ಕವಿತೆಗಳು, ಪ್ರಬಂಧಗಳು, ಸಿನಿಮಾಗಳು ಅವಳ ಸ್ಥಿತಿ ಶಕ್ತಿಯ ಬಗ್ಗೆ ಹೇರಳವಾಗಿ ಕೂಗಾಡುತ್ತಲೇ ಇವೆ. ಆದರೂ ಅವಳು ಅಸಹಾಯಕಳು. ಈ ಅಸಹಾಯಕತೆಗೆ ನಾವು ಪ್ರತಿಯೊಬ್ಬರೂ ಜವಾಬ್ದಾರರು.

ಜಗತ್ತು ಪ್ರಗತಿಯೆಡೆಗೆ ಸಾಗುತ್ತಿದೆ! ಬೇರೆ ಗ್ರಹಗಳ ಅಧ್ಯಯನ, ಚಂದ್ರನ ಮೇಲೆ ಜೀವನ ನಡೆಸುವ ಮಟ್ಟಿಗೆ ಮುಂದುವರಿದ ನಮ್ಮ ಪ್ರಪಂಚದಲ್ಲಿ, ಈಗಲೂ ಕಾರಣವಿಲ್ಲದೆ, ಹೆಣ್ಣು ಗಂಡನಿಂದ ದೌರ್ಜನ್ಯಕ್ಕೊಳಪಡುತ್ತಾಳೆ. ಆ ದಿನ ನನಗೆ ಸಿಕ್ಕ ಮಾನಿನಿಯ ಹಾಗೆ, ಅರ್ಧರಾತ್ರಿಯಲ್ಲಿ ಮಕ್ಕಳನ್ನೂ ತೊರೆದು ಅರಿವಿರದ ದಾರಿ ತುಳಿಯುತ್ತಾಳೆ. ಅಸಹಾಯಕತೆಯಿಂದ ಪರಿಚಯವೇ ಇರದವರ ಮುಂದೆ ಅಂಗಲಾಚುತ್ತಾಳೆ ಹಾಗೂ ಅಪನಂಬಿಕೆಯ ನೆರಳಲ್ಲಿ ನೋಯುತ್ತಾಳೆ.

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಭಾಗ 2 : Women‘s Day 2022: ‘ನಂಬಿಕೆ ಬಾರದೆ ಜವಾಬ್ದಾರಿ ಹೇಗೆ ತಗೋಳೋದು?’ 

ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/dr-jyothi-samantri