Zakir Hussain’s Birthday: ‘ಯಾಕೆ ನನ್ನ ಕಾರ್ಯಕ್ರಮಕ್ಕೆ ಬರಲಿಲ್ಲ? ನಿನ್ನನ್ನು ನೇಣಿಗೇರಿಸಿಬಿಡುತ್ತೇನೆ!’
Artist : ‘ನನ್ನ ಹಿಂದೆ ಝಾಕೀರ್ ಬಂದು ನಿಂತಿದ್ದರಂತೆ. ಎಲ್ಲಿ ಯಾವಾಗ ಚಪ್ಪಾಳೆ ಬೀಳಬೇಕು ಎನ್ನುವುದನ್ನು ಸಂಜ್ಞೆಯ ಮೂಲಕ ತೋರಿಸುತ್ತಿದ್ದರಂತೆ. ಅದಕ್ಕೆ ಸರಿಯಾಗಿ ಸಭಿಕರಿಂದ ಚಪ್ಪಾಳೆಗಳು ಬೀಳುತ್ತಿದ್ದವಂತೆ. ನನಗಿದು ಗೊತ್ತಾಗಿರಲಿಲ್ಲ.’
ಝಾಕೀರ್ ಹುಸೇನ್ | Zakir Hussian : ಹಿಂದೊಮ್ಮೆ ಶಿವಕುಮಾರ್ ಶರ್ಮಾ, ಹರಿಪ್ರಸಾದ ಚೌರಾಸಿಯಾ ಅವರೊಂದಿಗೆ ಐಟಿಸಿ ಸಂಗೀತ ಸಮಾರೋಹದ ಸರಣಿ ಕಾರ್ಯಕ್ರಮಗಳು ಹುಬ್ಬಳ್ಳಿ, ಬೆಳಗಾವಿಯಲ್ಲಿ ಆಯೋಜನೆಗೊಂಡಿದ್ದವು. ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಝಾಕೀರ್, ಹರಿಪ್ರಸಾದ್ ಚೌರಾಸಿಯಾ ಜೊತೆ ನುಡಿಸಿದ್ದರು. ನಾನು ಅನಂತ ತೇರದಾಳರೊಂದಿಗೆ ತಬಲಾ ಸಾಥ್ ನೀಡಿದ್ದೆ. ಆಗ ಮೊದಲ ಸಲ ಝಾಕೀರ್ ಅವರನ್ನು ನೋಡಿದ್ದು. ಅಪರಿಚಿತರನ್ನೂ ಆಪ್ತವಾಗಿಯೇ ಮಾತನಾಡಿಸುವ ಸಹೃದಯಿ ಅವರು. ನಂತರ ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರಿಡಾಂಗಣದಲ್ಲಿ ಬಿರ್ಜು ಮಹಾರಾಜ್ ಅವರಿಗೆ ಸಾಥ್ ನೀಡಲು ಬಂದಿದ್ದರು. ಆ ದಿನ ಮಂಗಳೂರಿನಲ್ಲಿ ಆಯೋಜನೆಗೊಂಡ ಕಾರ್ಯಕ್ರಮಕ್ಕೆ ನಾನು ಹೋಗಬೇಕಿತ್ತು. ಅವರನ್ನು ಭೇಟಿಯಾಗಿ ಮಾತನಾಡಿಸಲು ಹೋದೆ. ಆರೋಗ್ಯ ಸಮಸ್ಯೆಯಿಂದ ಕೈಗೆ ಪಟ್ಟಿ ಕಟ್ಟಿಕೊಂಡಿದ್ದೆ. ಏನಾಯಿತು ಎಂದು ಕೇಳಿ ಅದಕ್ಕೆ ಔಷಧಿಯನ್ನೂ ತಿಳಿಸಿದ್ದರು. ಹೀಗೆ ಯಾರನ್ನೂ ಕಾಳಜಿಯಿಂದ ವಿಚಾರಿಸುವ ಹೃದಯವಂತ. ಪಂಡಿತ್ ರವೀಂದ್ರ ಯಾವಗಲ್, ಬೆಂಗಳೂರು, ತಬಲಾ ಕಲಾವಿದ
ಮುಂದೊಂದು ದಿನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹರಿಪ್ರಸಾದ್ ಚೌರಾಸಿಯಾ ಅವರಿಗೆ ಸಾಥ್ ನೀಡಲು ಬಂದಿದ್ದರು. ಆಗ ನಾನು ಮಂಗಳೂರಿಗೆ ಎನ್. ರಾಜಮ್ ಅವರಿಗೆ ಸಾಥ್ ನೀಡಲು ಹೋಗಿದ್ದರಿಂದ ಅವರ ಕಾರ್ಯಕ್ರಮಕ್ಕೆ ಹೋಗಲು ಆಗಲಿಲ್ಲ. ಕಾರ್ಯಕ್ರಮಕ್ಕೆ ಹೋದ ನನ್ನ ಮಗನನ್ನು ಗುರುತಿಸಿ, ಅಪ್ಪಿಕೊಂಡು, ಯಾಕೆ ನಿಮ್ಮ ತಂದೆ ಬರಲಿಲ್ಲ ಎಂದು ವಿಚಾರಿಸಿ, ‘ಹೀ ವಿಲ್ ಬಿ ಹ್ಯಾಂಗ್ಡ್!’ ಅಂದಿದ್ದರಂತೆ.
ಕೆಲ ವರ್ಷಗಳ ನಂತರ ಪ್ರವೀಣ ಗೋಡ್ಖಿಂಡಿ ಮತ್ತು ನಾನು ಕಾರ್ಯಕ್ರಮ ಏರ್ಪಡಿಸಿದ್ದೆವು. ಝಾಕೀರ್ ಸೋಲೋ ಕಾರ್ಯಕ್ರಮ ಕೂಡ ಇತ್ತು. ಅದಕ್ಕಿಂತ ಮೊದಲು ನಾನು ನುಡಿಸುವಾಗ, ನನ್ನ ಹಿಂದೆ ಝಾಕೀರ್ ಬಂದು ನಿಂತಿದ್ದರಂತೆ. ಎಲ್ಲಿ ಯಾವಾಗ ಚಪ್ಪಾಳೆ ಬೀಳಬೇಕು ಎನ್ನುವುದನ್ನು ಸಂಜ್ಞೆಯ ಮೂಲಕ ತೋರಿಸುತ್ತ ಪ್ರೇಕ್ಷಕರನ್ನು ಹುರಿದುಂಬಿಸುತ್ತಿದ್ದರಂತೆ. ಅದಕ್ಕೆ ಸರಿಯಾಗಿ ಸಭಿಕರಿಂದ ಚಪ್ಪಾಳೆಗಳು ಬೀಳುತ್ತಿದ್ದವಂತೆ. ಇದು ನನಗೆ ಕಾರ್ಯಕ್ರಮ ಮುಗಿದ ಮೇಲೆ ಶ್ರೋತೃವೃಂದದಲ್ಲಿ ಕುಳಿತಿದ್ದ ನನ್ನ ಮಗ, ಶಿಷ್ಯಂದಿರ ಮೂಲಕ ನಂತರ ಗೊತ್ತಾಯಿತು.
ಇದನ್ನೂ ಓದಿ : Kunnakkudi Vaidyanathan Birth Anniversary: ‘ಸರಿಯಾಗಿ ವಿಭೂತಿ ಕುಂಕುಮ ಹಚ್ಚಿಕೊಳ್ಳಲು ಕಲಿ’
ಇನ್ನು ಝಾಕೀರ್ ತಬಲಾವಾನದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅವರು ನುಡಿಸುವಾಗ ಪರಕಾಯ ಪ್ರವೇಶ ಮಾಡುತ್ತಾರೆ. ಅವರಿಗೊಂದು ಇಂಟ್ಯೂಷನ್ ಇದೆ. ಯಾರೊಂದಿಗೆ ಹೇಗೆ ನುಡಿಸಬೇಕು ಎನ್ನುವ ಸೂಕ್ಷ್ಮ ಗೊತ್ತಿದೆ. ಇದು ಕೆಲವರಿಗಷ್ಟೇ ಗೊತ್ತಿರುತ್ತದೆ. ಸಾಥಿ ಮತ್ತು ಸೋಲೋದಲ್ಲಿ ಹೇಗೆ ನುಡಿಸಬೇಕು, ಯಾವುದೇ ಘರಾಣೆಯ ಕಲಾವಿದರೊಂದಿಗೂ ಬ್ಯಾಕ್ ಸ್ಟೇಜ್ ರಿಯಾಝ್ ಇಲ್ಲದೆಯೇ ನುಡಿಸಿ ಹೇಗೆ ಸಹಕರಿಸಬೇಕು ಇತ್ಯಾದಿ. ಸಂಗೀತದ ಎಲ್ಲ ವಿಷಯಗಳಲ್ಲೂ ಅವರು ಅಪ್ ಟು ಡೇಟ್ ಆಗಿರುತ್ತಾರೆ. ಎಂಥ ಕೇಳುಗರನ್ನೂ ತಣಿಸುವ ಶಕ್ತಿ ಅವರಿಗೆ.
ಎಷ್ಟು ಎತ್ತರದಲ್ಲಿ ನಾವವರನ್ನು ನೋಡುತ್ತೇವೋ ಅಷ್ಟೇ ಆಳ ಅವರ ಬೇರುಗಳು. ಒಮ್ಮೆ ಧಾರವಾಡಕ್ಕೆ ಬಂದಾಗ, ಧಾಬಾದಲ್ಲಿ ಊಟ ಮಾಡಬೇಕು ಎಂದರು. ಕಾರು ಬೆಳಗಾವಿ ರಸ್ತೆಯೆಡೆ ಹೊರಟಿತು. ಮಧ್ಯದಲ್ಲೆಲ್ಲೋ ಧಾಬಾ ಸಿಕ್ಕಾಗ, ಅಲ್ಲಿಯೇ ಊಟ ಮಾಡಿಬಂದರು.
ಇದನ್ನೂ ಓದಿ : Zakir Hussain’s Birthday: ‘ಝಾಕೀರ್ ಹದಿನೆಂಟು ವರ್ಷಗಳ ಕಾಲ ಮಾನಸ ಗುರುವಾಗಿದ್ದರು’ ಮುತ್ತುಕುಮಾರ್