Transgender: ಹಾದಿಯೇ ತೋರಿದ ಹಾದಿ; ‘ಮೊದಲ ಸಲ ಹಮಾಮ್ಗೆ ಹೋದೆ’
Castration : ಹಾಸ್ಪಿಟಲ್ಗೆ ಹೋಗುವಾಗ ಮತ್ತೆ ಬದುಕಿ ಬರುತ್ತೇವೆ ಎನ್ನುವ ಯಾವ ಗ್ಯಾರಂಟಿಯೂ ಇರುವುದಿಲ್ಲ. ಸರ್ಜರಿ ಸಮಯದಲ್ಲಿ ನಾನು ಸತ್ತುಹೋದರೆ ದಿಂಡುಕಲ್ಲಿನಲ್ಲಿ ಅವರೇ ಏನಾದರೂ ಮಾಡಲಿ ಎಂದು ಗಟ್ಟಿನಿರ್ಧಾರದಲ್ಲಿ ಹೊರಟೆ.
ಹಾದಿಯೇ ತೋರಿದ ಹಾದಿ | Haadiye Torida Haadi : ಒಂದು ದಿನ ಆಕಸ್ಮಿಕವಾಗಿ ಯಲಹಂಕದಲ್ಲಿರುವ ಹಮಾಮ್ಗೆ ಸೌಮ್ಯಾ ಸ್ನೇಹಿತರೊಂದಿಗೆ ಮೊದಲ ಸಲ ಹೋದರು. ಅಲ್ಲಿ ಒಬ್ಬರೇ ಒಬ್ಬ ತೃತೀಯಲಿಂಗಿ ಇದ್ದರು. ಉಳಿದವರೆಲ್ಲ ಊರಿಗೆ ಹೋಗಿದ್ದರು. ಅಪ್ಪುಗೆ, ಊಟೋಪಚಾರ ಮತ್ತು ಆತ್ಮೀಯತೆಯಿಂದ ಸೌಮ್ಯಾ ಅವರನ್ನು ಆದರಿಸಿದರು. ಅಂಥ ಪ್ರೀತಿಯನ್ನು ಅವರು ಮೊದಲ ಸಲ ಪಡೆದರು. ಜೊತೆಗಾರರೆಲ್ಲ ಊರಿಗೆ ಹೋಗಿ ಹತ್ತು ದಿನಗಳಾದವು. ನಾನೊಬ್ಬಳೇ ಇದ್ದೇನೆ ನೀವೂ ನನ್ನ ಜೊತೆಗೆ ಇರಬೇಕೆಂದು ಇರಿಸಿಕೊಂಡರು. ಅಲ್ಲಿದ್ದ ಬಟ್ಟಬರೆ, ಶೃಂಗಾರ ಸಾಧನಗಳನ್ನೆಲ್ಲ ಸೌಮ್ಯಾ ನೋಡಿ ಬೆರಗಾದರು. ಅವನ್ನೆಲ್ಲ ತೊಟ್ಟು, ಅಲಂಕರಿಸಿಕೊಂಡು ತನ್ನನ್ನೇ ನಾ ಕನ್ನಡಿಯಲ್ಲಿ ನೋಡಿ ಮೈಮರೆತು ಖುಷಿಪಟ್ಟರು. ಉದ್ದ ಕೂದಲು, ಸೀರೆ, ಕಿವಿಯೋಲೆ, ಬಳೆ ಎಲ್ಲವೂ ಇಲ್ಲಿ ನನಸಾಗುತ್ತದೆ ಎನ್ನಿಸಿತು. ಹಾಗಾಗಿ ಇಂದು ನಾಳೆ ಎಂದುಕೊಂಡು ಒಂದುವಾರದ ತನಕ ಅಲ್ಲೇ ಇದ್ದರು. ಆದರೆ ಮನೆಗೆ ವಾಪಾಸು ಹೋಗಲು ಭಯ! ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್, ಬೆಂಗಳೂರು (Jyothi S)
(ಹಾದಿ 9, ಭಾಗ 2)
ತುಂಬಾ ಯೋಚನೆ ಮಾಡಿದೆ ಮನೆಯೊಳಗಾಗಲಿ, ಮನೆಯ ಹೊರಗಾಗಲಿ, ನನ್ನನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ಇರಲಿಲ್ಲ. ವಿದ್ಯಾಭ್ಯಾಸವೂ ಮುಂದುವರೆಸಲಾಗಲಿಲ್ಲ. ಆಗ ನಾನು ಆಯ್ಕೆ ಮಾಡಿಕೊಂಡ ದಾರಿ ಹಮಾಮ್. ನನಗೆ ಅಪ್ಪ, ಅಮ್ಮ, ಮನೆಕಡೆಯ ಯಾವ ಚಿಂತೆಯೂ ಬರಲಿಲ್ಲ. ಒಟ್ಟಿನಲ್ಲಿ ನನ್ನನ್ನು ಹುಡುಕಿಕೊಂಡು ಅವರು ಯಾರೂ ಬರದೇ ಇದ್ದರೆ ಸಾಕಪ್ಪ ಅಂತಿದ್ದೆ. ಆದರೆ ಆಗೆಲ್ಲ ಮನೆಯವರು ತುಂಬ ಹುಡುಕಾಡಿದ್ದಾರೆ, ನಾನು ಸಿಗದೆ ಅತ್ತಿದ್ದಾರೆ, ಖಿನ್ನತೆಗೆ ಒಳಗಾಗಿದ್ದಾರೆ. ಹಾಗೆ ಸುಮಾರು ವರ್ಷಗಳು ಕಳೆದವು. ಆಗ ಕಡಪಕ್ಕಿಂತ ತಮಿಳುನಾಡಿನ ದಿಂಡುಕಲ್ಲು ಹತ್ತಿರ ಸರ್ಜರಿ ಚೆನ್ನಾಗಿ ಮಾಡುತ್ತಾರೆ ಎಂದು ಕೇಳಲ್ಪಟ್ಟಿದ್ದೆ.
ಹಾಸ್ಪಿಟಲ್ಗೆ ಹೋಗುವಾಗ ನಾವು ಮತ್ತೆ ಬದುಕಿ ಬರುತ್ತೇವೆ ಎನ್ನುವ ಯಾವ ಗ್ಯಾರಂಟಿ ಇರುವುದಿಲ್ಲ. ಸರ್ಜರಿ ಸಮಯದಲ್ಲಿ ನಾನೇನಾದರೂ ಸತ್ತು ಹೋದರೆ ದಿಂಡುಕಲ್ಲಿನಲ್ಲಿ ಅವರೇ ಏನಾದರೂ ಮಾಡಿಬಿಡಲಿ, ಬದುಕುಳಿದರೆ ವಾಪಾಸ್ ಬರೋಣ ಅಂತ ನಮ್ಮ ಸಮುದಾಯದ ರೇಖಾ ಎನ್ನುವ ಸ್ನೇಹಿತೆ ಒಬ್ಬಳನ್ನು ಮಾತ್ರ ಕರೆದುಕೊಂಡು ಹೋಗಿದ್ದೆ. ಇದು ಮನೆಯವರಿಗೆ ಗೊತ್ತಿರಲಿಲ್ಲ. ನಾನು ಸತ್ತರೂ ನನ್ನ ದೇಹವನ್ನು ಬದಲಾವಣೆ ಮಾಡಿಕೊಂಡೇ ಸಾಯಬೇಕು ಅಂತ ತೀರ್ಮಾನಿಸಿದ್ದೆ. ಹಾಗಾಗಿ ರಿಸ್ಕ್ ತೆಗೆದುಕೊಂಡೂ ಸಂತೋಷವಾಗಿಯೇ ಹೋದೆ ನಾನು. ಸರ್ಜರಿ ಮುಗಿಯಿತು, ಆದರೆ ಅದರ ನಂತರ ನನ್ನನ್ನ ಉಪಚರಿಸಿದ ರೀತಿ ಬಹಳ ನೋವುಂಟು ಮಾಡಿತು. ಜೊತೆಗೆ ಲಿಂಗ ಬದಲಾವಣೆ ಆಯ್ತು ಅಂತ ಖುಷಿಯೂ ಆಯ್ತು.
ಇದನ್ನೂ ಓದಿ : Transgender World : ‘ಇನ್ನೊಬ್ಬರ ಅನುಭವದ ಮೇಲೆ ಸಿದ್ಧಾಂತ ಸೃಷ್ಟಿಸಲು ನಮಗೇನು ಹಕ್ಕಿದೆ?’ ಸದ್ಯದಲ್ಲೇ ನಿರೀಕ್ಷಿಸಿ ‘ರೂಮಿ ಕಾಲಂ’
2005ರಲ್ಲಿ ಜೀವನ ತುಂಬಾ ಕಷ್ಟ ಅನ್ನಿಸಿಬಿಡ್ತು. ಒಂದು ಸೆಕ್ಸ್ ವರ್ಕ್ ಮಾಡಬೇಕು, ಇಲ್ಲ ಭಿಕ್ಷೆ ಮಾಡಬೇಕು. ಅಂಗಡಿಗಳಿಗೆ ಹೋಗಬೇಕೆಂದರೆ ಕತ್ತಲಾದ ಮೇಲೆ ಹೋಗಬೇಕು. ಆಗ ಜನ ತುಂಬಾ ಪೀಡಿಸುತ್ತಿದ್ದರು. ನೇರವಾಗಿಯೇ ಬಂದು ಮೈಮೇಲೆ ಎರಗುತ್ತಿದ್ದರು. ಮತ್ತೆ ನಾವು ಮರಳಿ ಪ್ರಶ್ನಿಸುವಂತಿರಲಿಲ್ಲ. ರಾತ್ರಿ ಹೋಗಿ ದಿನಸಿ, ತರಕಾರಿ ತಂದು ಇಟ್ಟುಕೊಳ್ಳಬೇಕಿತ್ತು. ಬ್ಯೂಟಿ ಪಾರ್ಲರಿಗೂ ರಾತ್ರಿಯೇ ಹೋಗಬೇಕಿತ್ತು. ಹೋಗ್ತಾ ಹೋಗ್ತಾ ಜೀವನ ಅಂದ್ರೆ ಇಷ್ಟೇ ಅಂತ ಅರ್ಥ ಆಯ್ತು. ನನ್ನ ಜೊತೆಗಿದ್ದವರೆಲ್ಲ ಸೆಕ್ಸ್ ವರ್ಕ್ ಮತ್ತೆ ಭಿಕ್ಷೆ ಕೇಳೋದು ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿ ನಾನು ಇದೇ ಜೀವನ ಅಂತ ತೀರ್ಮಾನಿಸಿಬಿಟ್ಟೆ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 1 : Transgender: ಹಾದಿಯೇ ತೋರಿದ ಹಾದಿ; ‘ನಾಲ್ಕನೇ ತರಗತಿಗೇ ನಾನು ಗಂಡು ಅಲ್ಲ ಎನ್ನಿಸಿತು’
ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/haadiye-torida-haadi
Published On - 12:42 pm, Thu, 10 March 22