Transgender: ಹಾದಿಯೇ ತೋರಿದ ಹಾದಿ; ‘ನಾಲ್ಕನೇ ತರಗತಿಗೇ ನಾನು ಗಂಡು ಅಲ್ಲ ಎನ್ನಿಸಿತು’
LGBTQ : ನನ್ನ ಸಹಾಯಕ್ಕೆ ಬಂದ ಅಮ್ಮನಿಗೂ ಹೊಡೆತ. ಒಂಭತ್ತನೇ ತರಗತಿಯ ಹೊತ್ತಿಗೆ ಶಾಕ್ ಟ್ರೀಟ್ಮೆಂಟ್. ದೇವಸ್ಥಾನಗಳಿಗೆ ಕರೆದುಕೊಂಡು ಹೋಗುವುದು ನನಗೆ ಗೊತ್ತಿಲ್ಲದೆ ಹರಕೆ ಕಟ್ಟಿಕೊಳ್ಳುವುದು, ಯಂತ್ರ ಕಟ್ಟಿಸುವುದು...
ಹಾದಿಯೇ ತೋರಿದ ಹಾದಿ | Haadiye Torida Haadi : ತೃತೀಯ ಲಿಂಗಿಗಳು ಲೈಂಗಿಕ ಸೇವೆ ಅಥವಾ ಭಿಕ್ಷಾಟನೆಯಿಂದ ಜೀವನ ನಡೆಸುತ್ತಿರುವವರೇ ಹೆಚ್ಚು. ಆದರೆ ಈ ಎರಡು ದಾರಿಗಳೂ ಅವರ ಆಯ್ಕೆಗಳಲ್ಲ. ಅವರನ್ನು ಒಂದು ವಸ್ತುವಿನಂತೆ ನೋಡುವ ಸಮಾಜ ಈ ದಾರಿಗಳನ್ನು ಅವರಿಗೆ ಅನಿವಾರ್ಯವಾಗಿಸಿದೆ. ‘ನಾವು ಕೂಡ ಮನುಷ್ಯರು, ನಮಗೂ ಇತರರಂತೆ ಬದುಕುವ ಸ್ವಾತಂತ್ರ್ಯ ಬೇಕು’ ಎಂದು ಸೌಮ್ಯವಾಗಿಯೇ ಹಕ್ಕನ್ನು ಕೇಳುತ್ತಾರೆ ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ ಸೌಮ್ಯ. ಬೆಂಗಳೂರಿನ ಮೂಡಲಪಾಳ್ಯದಲ್ಲಿ ಶಾರದಮ್ಮ ಮತ್ತು ಆಂಜನಪ್ಪ ದಂಪತಿಯ ನಾಲ್ಕು ಮಕ್ಕಳಲ್ಲಿ ಗಂಡುಮಗುವಾಗಿ ಹುಟ್ಟಿ ಹೆಣ್ಣಾಗಿ ಬೆಳೆದಿರುವ ಇವರಿಗೆ ನಾಲ್ಕನೇ ತರಗತಿಯಲ್ಲಿದ್ದಾಗಲೇ ತಾನು ಗಂಡು ಅಲ್ಲ ಎನ್ನುವುದು ಗೊತ್ತಾಗುತ್ತಿತ್ತು. ಆದರೆ ಯಾರೆದುರೂ ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚು ಮನೆಯೊಳಗೇ ಇದ್ದು ಅಮ್ಮನಿಗೆ, ಅಕ್ಕನಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಮೃದುವಾಗಿ ಮಾತನಾಡುವ ಇವರನ್ನು ಕೆಲವರು ರೇಗಿಸುತ್ತಿದ್ದರು. ಎಂಥ ಶಾಂತ ಸ್ವಭಾವ, ಯಾರೊಂದಿಗೂ ಜಗಳವನ್ನೇ ಮಾಡಲ್ಲ ಎಂದು ಕೆಲವರು ಹೊಗಳುತ್ತಿದ್ದರು. ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್ (Jyothi S)
(ಹಾದಿ 9, ಭಾಗ 1)
ಚಿಕ್ಕಂದಿನಲ್ಲಿ ಹುಡುಗಿಯರ ಜೊತೆಗೆ ತುಂಬಾ ಆಟವಾಡುತ್ತಿದ್ದೆ. ಆಗೆಲ್ಲ ನನಗೆ ಸಂಗ, ಒಂಭತ್ತು, ಚಕ್ಕ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಹೊಗಳಿಕೆ ತೆಗಳಿಕೆ ಎರಡೂ ಇರುತ್ತಿದ್ದವು. ಏಳನೇ ತರಗತಿಯ ನಂತರ ಶಾಲೆಯಲ್ಲಿ ನನ್ನ ನಡೆವಳಿಕೆಯ ಬಗ್ಗೆ ಗೊತ್ತಾಗಿ ಆಗಿನಿಂದ ಅಪ್ಪ ನನ್ನನ್ನು ಹೆಚ್ಚು ಗಮನಿಸಲು ಪ್ರಾರಂಭಿಸಿದರು. ಸರಿಯಾಗಿ ಓಡಾಡು ಅಂತ ಅಪ್ಪ ಮನೆಯಲ್ಲಿ ಹೊಡೆಯುತ್ತಿದ್ದರು. ಅಮ್ಮನಿಗೆ ನಾನಂದ್ರೆ ತುಂಬಾ ಪ್ರೀತಿ. ಅಮ್ಮ ನನ್ನ ಸಹಾಯಕ್ಕೆ ಬಂದ್ರೆ ಅಮ್ಮನಿಗೂ ಹೊಡೆತ ಬೀಳುತ್ತಿತ್ತು. ಒಂಭತ್ತನೇ ತರಗತಿಯ ಹೊತ್ತಿಗೆ ಒಂದೆರಡು ಸರಿ ಶಾಕ್ ಟ್ರೀಟ್ಮೆಂಟ್ ಕೂಡ ಕೊಡಿಸಿದ್ರು. ಮನೆಯವರು ನನಗೇ ಗೊತ್ತಿಲ್ಲದ ಹಾಗೆ ದೇವಸ್ಥಾನಗಳಿಗೆ ಕರೆದುಕೊಂಡು ಹೋಗುವುದು, ಹರಕೆ ಕಟ್ಟಿಕೊಳ್ಳುವುದು, ಯಂತ್ರ ಕಟ್ಟಿಸುವುದು ತುಂಬಾ ಮಾಡುತ್ತಿದ್ದರು. ಶಾಲೆ, ರಸ್ತೆಗಳ ಹತ್ತಿರ ಹುಡುಗರು ಪಟ್ ಅಂತ ಹೊಡೆದು ಹೋಗಿಬಿಡುತ್ತಿದ್ದರು. ಹಿಂದೆ ತಿರುಗಿ ನೋಡಿದರೆ ಯಾರೂ ಇರುತ್ತಿರಲಿಲ್ಲ. ಇದನ್ನೆಲ್ಲಾ ಸೈರಿಸಲಾರದೆ ಎರಡು ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದೆ.
ಆದರೆ ವಿದ್ಯಾಭ್ಯಾಸದಲ್ಲಿ ನಾನು ಮುಂದಿದ್ದೆ. ಶಾಲೆಯಲ್ಲಿ ಬೆಸ್ಟ್ ಸ್ಟೂಡೆಂಟ್ ಎನ್ನಿಸಿಕೊಂಡಿದ್ದೆ. ತುಂಬಾ ಚೆನ್ನಾಗಿ ಹಾಡುತ್ತಿದ್ದೆ. ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂದಿರುತ್ತಿದ್ದೆ. ಆರನೇ ತರಗತಿಯಲ್ಲಿ ಒಂದು ರೀತಿಯ ಆಕರ್ಷಣೆ ಬರಲು ಶುರುವಾಯ್ತು. ಏಳನೇ ತರಗತಿ ಪಾಸ್ ಆದಮೇಲೆ ಸೇಮ್ ಸೆಕ್ಸ್ ಮೇಲೆ ಆಕರ್ಷಣೆಯಾಗುತ್ತಿತ್ತು.
ಇದನ್ನೂ ಓದಿ : Transgender World : ‘ನೀವು ಹೋಮೊ ಸೆಕ್ಷುವಲ್ ಆಗಿದ್ದು ನಾರ್ಮಲ್ ಆಗಿ ಇರುವವರ ಜೊತೆ ಟೀ ಕುಡಿದಾಗ ಏನು ಅನ್ನಿಸುತ್ತದೆ?’
ನನಗಾಗ ನನ್ನ ಜೊತೆಗೆ ಇರುವ ಹುಡುಗರಿಗೆಲ್ಲ ಹೀಗೆನಾ!? ಅಥವಾ ನನಗೆ ಮಾತ್ರ ಇಂತಹ ಭಾವನೆಗಳು ಬರುತ್ತಿವೆಯಾ ಎಂದು ಒಳಗೊಳಗೇ ಹೇಳಿಕೊಳ್ಳಲಾಗದ ಆತಂಕಗಳು ಕಾಡಲಾರಂಭಿಸಿದವು. ಎಂಟನೇ ತರಗತಿಯಿಂದ ಓದಿನ ಕಡೆ ಸಂಪೂರ್ಣ ಗಮನ ಕಳೆದುಕೊಂಡು ನನ್ನೊಳಗಿನ ಭಾವನೆಗಳ ಗೊಂದಲದಲ್ಲಿ, ಹುಡುಕಾಟದಲ್ಲಿ ಮನಸ್ಸು ಮುಳುಗಿತು.
ಒಂಭತ್ತನೇ ತರಗತಿಯಿಂದ ಮೂಡಲಪಾಳ್ಯದಿಂದ ವಿಜಯನಗರಕ್ಕೆ ಶಾಲೆಗೆ ಬರುವಾಗ, ಹೋಗುವಾಗ ನನ್ನಂಥವರನ್ನು ನೋಡುತ್ತಿದ್ದೆ. ನಾನು ಚೆನ್ನಾಗಿ ಓದುತ್ತಿದ್ದುದರಿಂದ ಮನೆಯಲ್ಲಿ ಎಲ್ಲರೂ ಹತ್ತನೇ ತರಗತಿಯಲ್ಲಿ ನಾನು ರ‍್ಯಾಂಕ್ ಬರುತ್ತೇನೆ ಎಂದುಕೊಂಡಿದ್ದರು, ಆದರೆ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದೆ. ನನಗೆ ಏನು ಮಾಡುತ್ತಾರೋ ಎನ್ನುವ ಭಯ ಕಾಡಲಾರಂಭಿಸಿತು. ನನ್ನಣ್ಣ ಶುದ್ಧ ದಡ್ಡನಾದರೂ ಅವನು ಉತ್ತೀರ್ಣನಾಗಿದ್ದ. ನಮ್ಮ ತಂದೆ ನನ್ನನ್ನು ನೋಡಿ ಎಂಥಾ ಮಗನನ್ನು ಹೆತ್ತಿದ್ದೀಯ ಅಂತ ಅಮ್ಮನನ್ನು ಯಾವಾಗಲು ಬೈತಿದ್ರು. ನಾನು ಫೇಲ್ ಆಗಿದ್ದರೂ ಎಲ್ಲರೂ ಧೈರ್ಯ ಹೇಳಿದರು. ಸಪ್ಲಿಮೆಂಟರಿ ಎಕ್ಸಾಮ್ ಕಟ್ಟುವ ಬಗ್ಗೆ ಮಾಹಿತಿ ಕೂಡ ಕೊಟ್ಟರು. ಆದರೆ ಅಷ್ಟು ಹೊತ್ತಿಗೆ ನಾನು ನನ್ನೊಳಗಿನ ನನ್ನನ್ನು ಕಂಡುಕೊಳ್ಳುವ ಹುಡುಕಾಟ ಮಾಡಿದ್ದೆ.
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)
ಹಿಂದಿನ ಹಾದಿ : ಹಾದಿಯೇ ತೋರಿದ ಹಾದಿ: ‘ನಮ್ಮದು ಆಂಧ್ರಪ್ರದೇಶವಾದರೂ ನಾವು ಕಥೆ ಹೇಳುವುದು ಕನ್ನಡದಲ್ಲಿಯೇ’
ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/haadiye-torida-haadi
Published On - 11:13 am, Thu, 10 March 22