Gokak Falls: ಮಾನ್ಯ ಉನ್ನತ ಶಿಕ್ಷಣ ಸಚಿವರೇ, ತೀರ್ಮಾನಕ್ಕೆ ಮೊದಲು ಇನ್ನೂ ಒಮ್ಮೆ ಯೋಚಿಸಿ

Gokak Falls: ಮಾನ್ಯ ಉನ್ನತ ಶಿಕ್ಷಣ ಸಚಿವರೇ, ತೀರ್ಮಾನಕ್ಕೆ ಮೊದಲು ಇನ್ನೂ ಒಮ್ಮೆ ಯೋಚಿಸಿ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ

Akkamahadevi Women’s University : ‘ಬರೂವಾಗ ಹೆಂಗೋ ಏನೋ ಅಂತ ಭಾಳ ಅಂಜಿದ್ವಿವಾ, ಇರೂ ಒಬ್ಬ ಮಗಳನ್ನ ಎಲ್ಲಿ ಬಿಡೂಣು ಅಂತ. ಆದರ ಇದನ್ನ ನೋಡಿದ ಮ್ಯಾಲ ನನ್​ ಚಿಂತಿ ಕಳೀತು’ ಆ ಬಿಳೀಧೋತರ, ಗಾಂಧಿ ಟೊಪ್ಪಿಗೆಯವರ ಮುಖ ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ.’

ಶ್ರೀದೇವಿ ಕಳಸದ | Shridevi Kalasad

|

Mar 23, 2022 | 1:48 PM

ಗೋಕಾಕ ಫಾಲ್ಸ್ | Gokak Falls : ‘ನಾನೊಬ್ಬ ದೇವದಾಸಿಯ ಮಗಳು. ಬಡತನ, ಅವಮಾನ, ಸಂಕಟಗಳೆಲ್ಲ ನಮ್ಮ ಜೊತೆಗಾರರನ್ನಾಗಿಸಿಕೊಂಡು ಬೆಳೆದವಳು. ಚಿಕ್ಕಂದಿನಿಂದಲೂ ತುಂಬಾ ಓದಬೇಕು ಎಂಬ ಮಹದಾಸೆ ಇತ್ತು. ಡಿಗ್ರಿ ಮುಗಿದ ಮೇಲೆ ಉನ್ನತ ಶಿಕ್ಷಣಕ್ಕೆ ಹೋಗುವ ಅವಕಾಶವಿರದೆ ಅಲ್ಲಿಗೇ ಓದು ನಿಲ್ಲಿಸಿದ್ದೆ. ನಂತರ ಆರಂಭವಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ನನ್ನ ಪಾಲಿನ ದಾರಿದೀಪವಾಯಿತು. ಸ್ನಾತಕೋತ್ತರ ಪದವಿ ಮುಗಿಸಿ, ಸಂಶೋಧನೆ ಮುಗಿಸಿ ಇದೀಗ ಉನ್ನತ ಹುದ್ದೆಯಲ್ಲಿ ಇದ್ದೇನೆ. ನನ್ನ ಈ ದಾರಿ ನಮ್ಮ ಸಮುದಾಯದ ಅನೇಕ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಸ್ಪೂರ್ತಿ ಆಯಿತು.’ ಕರ್ನಾಟಕ ರಾಜ್ಯ ಅಕ್ಕಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿನಿಯ ಮಾತುಗಳಿವು. ಈ ಸಾಲುಗಳೇ ಸಾಕೆನ್ನಿಸುತ್ತದೆ ಮಹಿಳಾ ವಿವಿ ಸಾಧನೆಯನ್ನು ಹೇಳಲು. ಸಮಾಜದ ಅಂಚಿನಲ್ಲಿ ಉಳಿದ ಹೆಣ್ಣುಮಕ್ಕಳನ್ನು ಮುಖ್ಯವಾಹಿನಿಗೆ ತಂದ ಕೀರ್ತಿ ಈ ವಿವಿಗೆ ಇದೆ. ಹಾಗೆಯೇ ಇನ್ನೊಬ್ಬ ಹೆಣ್ಣುಮಗಳು ಎರಡು ಮಕ್ಕಳ ತಾಯಿಯಾದ ಮೇಲೆ ಸ್ನಾತಕೋತ್ತರ, ಸಂಶೋಧನೆ ಮುಗಿಸಿ ಇಂದು ಅಧಿಕಾರಿಯಾಗಿದ್ದಾಳೆ. ನೊಂದ ಮಹಿಳೆಯರ ಪರನಿಂತು ಅವರ ಜೀವನ ಹಸನು ಮಾಡುತ್ತಿದ್ದಾಳೆ. ಇದೆಲ್ಲ ನೋಡಿದಾಗ ನಾನು ಓದುತ್ತಿರುವ ವಿಶ್ವವಿದ್ಯಾನಿಲಯದ ಕುರಿತು ಹೆಮ್ಮೆ ಎನಿಸುತ್ತದೆ. ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

(ಹರಿವು 11)

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಆದರೆ ಇಲ್ಲಿ ಆ ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ ವಿಶ್ವವಿದ್ಯಾನಿಲಯ ನಿರ್ಮಿಸಿ, ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ ಎಂಬ ಧ್ಯೇಯವನ್ನು ಹೊತ್ತು ಅದರ ಸಾಧನೆಗೆ ಶ್ರಮಿಸುತ್ತಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವನ್ನು ಮುಚ್ಚುವ ಹುನ್ನಾರಗಳು ನಡೆದಿವೆ. ಕಳೆದ ಕೆಲವು ದಿನಗಳಿಂದ ಇಂತಹ ಊಹಾಪೋಹಗಳ ಗಾಳಿ ಹಾರಾಡುತ್ತಲೇ ಇತ್ತು. ಇದೀಗ ನಮ್ಮ ಉನ್ನತ ಶಿಕ್ಷಣ ಸಚಿವರೇ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವನ್ನು ಸಹಶಿಕ್ಷಣ (C0-education) ವನ್ನಾಗಿಸಬೇಕೆಂದು ಖುದ್ದಾಗಿ ಹೇಳಿದ್ದಾರೆ. 13 ಜಿಲ್ಲೆಗಳಲ್ಲಿ ಹಬ್ಬಿರುವ ಅದರ ವ್ಯಾಪ್ತಿಯನ್ನು ಕಿತ್ತೆಸೆದು, ಅದನ್ನು ಕೇವಲ ಕ್ಯಾಂಪಸ್ ಬೇಸ್ಡ್ ವಿಶ್ವವಿದ್ಯಾಲಯವನ್ನಾಗಿ ಮಾರ್ಪಡಿಸುವ ಯೋಚನೆ ಇದೆ ಎಂದಿದ್ದಾರೆ. ಅನೇಕ ಬಾರಿ ನಮ್ಮ ಜನಪ್ರತಿನಿಧಿಗಳ ಮಾತು, ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಸರಿಯಾದ  ಮಾನದಂಡವೇ ಇರುವುದಿಲ್ಲ. ಅವರು ಕೊಡುವ ಕಾರಣಗಳು ಅಷ್ಟೇ ಬಾಲಿಶ ಎಂಬಂತೆ ಕಾಣುತ್ತವೆ. ಈ ವಿವಿಯನ್ನು ಸೀಮಿತಗೊಳಿಸುವ ನಿರ್ಧಾರವನ್ನು ನಾನು ಇದೇ ಸಾಲಿನಲ್ಲಿ ಸೇರಿಸುತ್ತೇನೆ.

2002 ರಲ್ಲಿ ಡಾ. ಡಿ.ಎಂ. ನಂಜುಂಡಪ್ಪ ವರದಿ ಆಧರಿಸಿ ಈ ವಿಶ್ವವಿದ್ಯಾನಿಲಯವನ್ನು ಆರಂಭಿಸಲಾಗಿತ್ತು. 2017 ರಲ್ಲಿ ಅಕ್ಕಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ ಮಾಡಲಾಗಿತ್ತು. ಆದರೆ ಈಗ ದಿಢೀರನೆ ‘ಮಹಿಳಾ’ ಎಂಬ ಪದವನ್ನು ತೆಗೆದು ಹಾಕಲು ಮುಂದಾಗಿದ್ದು ಏಕೆ ಎನ್ನುವುದೇ ಅರ್ಥವಾಗುತ್ತಿಲ್ಲ. ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಈ ವಿವಿ ಗಣನೀಯ ಪಾತ್ರ ನಿರ್ವಹಿಸಿದ್ದು ಎಲ್ಲರಿಗೂ ಗೊತ್ತಿರುವಂತಹದ್ದೇ. ಅದನ್ನು ಸಾಬೀತು ಮಾಡಲು ಪ್ರತ್ಯೇಕ ಸಾಕ್ಷಿಗಳನ್ನು ಹಿಡಿದು ನಿಲ್ಲುವ ಅನಿವಾರ್ಯ ಬರದಿರಲಿ. ಸಮಾಜದ ಗಮನದಿಂದ ದೂರ ಉಳಿದ, ಆರ್ಥಿಕವಾಗಿ ಹಿಂದುಳಿದ, ಅಲ್ಪಸಂಖ್ಯಾತ ಸಮದಾಯದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಈ ವಿವಿ ಏಕಮಾತ್ರ ತಾಣವಾಗಿರುವುದು ಸುಳ್ಳಲ್ಲ.

ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಅನೇಕರು ಇನ್ನೂ ಹಿಂಜರಿಯುತ್ತಾರೆ. ಬಡತನ, ಅಜ್ಞಾನ, ಹೆಣ್ಣು ಎಂಬ ಜಿಜ್ಞಾಸೆ, ಹೊರಗಿನ ವಾತಾವರಣ ಹೆಣ್ಣಿಗೆ ಅಸುರಕ್ಷತೆ ಎಂಬ ಅಳುಕು ಇವೆಲ್ಲವೂ ಅವರ ಆತಂಕಕ್ಕೆ ಕಾರಣಗಳು; ಹೆಣ್ಣಿಗೆ ಹಲವಾರು ಕಾರಣಗಳಿಂದಾಗಿ ಅಸುರಕ್ಷೆ ಅನುಭವಿಸುವಂತೆ ನಮ್ಮ ಸಮಾಜ ರೂಪುಗೊಂಡಿದೆ. ‘ಗಂಡು’ಕುಲ ಅಂತಹ ಭಯವನ್ನು ಸೃಷ್ಟಿಸಿ ಇಟ್ಟಿದೆ. ಹೀಗಾಗಿ ಹೆಣ್ಣುಮಕ್ಕಳನ್ನು ಓದಿಗಾಗಿ, ಉದ್ಯೋಗಕ್ಕಾಗಿ ಹೊರ ಕಳಿಸಲು ನಿರಾಕರಿಸುವುದು ಈ ಭಯದ ವ್ಯತಿರಿಕ್ತ ಪರಿಣಾಮವೇ ಆಗಿದೆ.

ಇದನ್ನೂ ಓದಿ : Periods: Gokak Falls; ನಿಮ್ಮ ಮಗನಿಗೆ ‘ಪಿರಿಯಡ್ಸ್​ ಪಾಠ’ ಮಾಡಿದ್ದೀರಾ? ಇಲ್ಲವೆಂದಲ್ಲಿ ತಕ್ಷಣವೇ ತೊಡಗಿಕೊಳ್ಳಿ

ಆದರೆ ಈ ಎಲ್ಲ ಭಯವನ್ನು ಹೋಗಲಾಡಿಸುವಲ್ಲಿ ಮಹಿಳಾ ವಿವಿ ದಿಟ್ಟ ಹೆಜ್ಜೆಯನ್ನಿಡುತ್ತ ಬಂದಿದೆ. ಬಿಳಿ ಧೋತರ, ಗಾಂಧಿ ಟೋಪಿ ಧರಿಸಿ ತಲೆಮೇಲೆ ಚೀಲ ಹೊತ್ತು ತನ್ನ ಮಗಳನ್ನು ಉನ್ನತ ವ್ಯಾಸಂಗಕ್ಕೆ ಬಿಟ್ಟು ಹೋಗಲು ಬಂದಿದ್ದ ತಂದೆ ಹೋಗುವಾಗ, ‘ಬರುವಾಗ ಹೆಂಗೋ ಏನೋ ಅಂತ ಬಾಳ್ ಅಂಜಿದ್ವಿವಾ, ಇರೂ ಒಬ್ಬ ಮಗಳನ್ನ ಎಲ್ಲಿ ಬಿಡೂಣು ಅಂತ. ಆದರ ಇದನ್ನ ನೋಡಿದ ಮ್ಯಾಲ ನನ್​ ಚಿಂತಿ ಕಳೀತು’ ಎಂದು ಹೇಳಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಆ ಮಾತು ಕೇವಲ ಒಬ್ಬ ತಂದೆಯದ್ದಲ್ಲ. ಓದುವ ಕನಸನ್ನು ಕಂಗಳಲ್ಲಿ ತುಂಬಿಕೊಂಡು ಈ ವಿವಿಗೆ ಕಾಲಿಟ್ಟ ಬಹುತೇಕ ಗ್ರಾಮೀಣ ವಿದ್ಯಾರ್ಥಿನಿಯರ ಪಾಲಕರದ್ದು. ದಿನ ಬೆಳಗಾದರೆ ಕೇಳುವ ಮಹಿಳೆಯರ ಮೇಲೆ ನಡೆಯುವ ಶೋಷಣೆ ಸುದ್ದಿಗಳು ಅವರನ್ನು ಈ ನಿಲುವಿಗೆ ತಂದು ನಿಲ್ಲಿಸಿವೆ.

ಇಷ್ಟು ದಿನ ಇಲ್ಲದ ಸಮಾನತೆ, ಸಹಬಾಳ್ವೆ ಎಂಬ ಸಾವಿರ ನೆಪಗಳು ಸುಲಭವಾಗಿ ಹುಟ್ಟುತ್ತವೆ, ತಮ್ಮ ಅನುಕೂಲತೆಗೆ ತಕ್ಕಂತೆ. ಒಂದೆಡೆಗೆ ಮೀಸಲಾತಿ, ಸಬಲೀಕರಣ ಎಂದು ಗಂಟೆಗಟ್ಟಲೆ ಮಾತಾಡುತ್ತಾರೆ. ಇನ್ನೊಂದೆಡೆ ಎಲ್ಲವನ್ನೂ ತಮ್ಮ ಅಧಿಕಾರಕ್ಕೆ ಎಳೆದುಕೊಳ್ಳುವ ಷಡ್ಯಂತ್ರಗಳನ್ನು ರೂಪಿಸುತ್ತಲೇ ಇರುತ್ತಾರೆ. ಅನಾದಿ ಕಾಲದಿಂದಲೂ ಅವಳನ್ನು ಸಾಧ್ಯವಾದಷ್ಟು ಸೀಮಿತಗೊಳಿಸುವ ರಕ್ತಗತ ರೂಢಿಯನ್ನು ಆಚರಿಸುತ್ತಲೇ ಬಂದದ್ದು ಹೊಸದೇನಲ್ಲ. ಈಗಷ್ಟೇ ಅವಳು ಎದ್ದು ನಿಲ್ಲಲು ಅಲ್ಪಮಟ್ಟಿನ ಸಹಕಾರ ಸಿಗುತ್ತಿದೆ ಎಂದೆನ್ನುವಷ್ಟರಲ್ಲೇ ಮತ್ತೆ ಯಾರೋ ಅಲ್ಲಿ ಹಿಂಬದಿಯಿಂದ ಎಳೆದುಬಿಡುತ್ತಾರೆ. ಎಳೆಯುವವರು ನಮ್ಮ ಕುಟುಂಬದವರೋ, ಸಮಾಜದವರೋ, ಸಮಾಜದ ಹೊಣೆ ಹೊತ್ತವರೋ, ನಮ್ಮ ಜನ್ರತಿನಿಧಿಗಳೋ ಆಗಿರುತ್ತಾರೆ. ಇವರೆಲ್ಲರ ಉದ್ದೇಶ ಅವಳನ್ನು ಕಟ್ಟಿ ಹಾಕಲು ನಡೆಸುವ ಹುನ್ನಾರವೇ ಹೊರತು ಬೇರೇನಲ್ಲ.

(ಮುಂದಿನ ಹರಿವು : 6.4.2022)

ಹಿಂದಿನ ಹರಿವು : Women‘s Day 2022: Gokak Falls; ‘ಗಂಡನಮನೆಗೆ ಹೋಗುವಾಗ ಒಂದೆರಡು ಹನಿ ಉದುರಿದ್ದು ಸಂತಸಕ್ಕಿರಬೇಕು’

Follow us on

Related Stories

Most Read Stories

Click on your DTH Provider to Add TV9 Kannada