New Book: ಅಚ್ಚಿಗೂ ಮೊದಲು; ‘ಕೆಂಪು’ ಅರ್ಪಣ ಎಚ್ಎಸ್​ ಕಥಾ ಸಂಕಲನ ಸದ್ಯದಲ್ಲೇ ನಿಮ್ಮ ಓದಿಗೆ

Story Writer : ಖಾಲಿ ಸೀಮೆಎಣ್ಣೆಯ ಡಬ್ಬಿಗಳನ್ನು ಹಿಡಿದು ದೂರದ ರೇಷನ್ ಅಂಗಡಿಗೆ ಜೊತೆಯಾಗಿ ಹೋಗುವಾಗ, ದಾರಿ ಸವೆಸಲು ನಾನು ನನ್ನ ತಮ್ಮನಿಗೆ ಹೇಳುತ್ತಿದ್ದ ಕಟ್ಟುಕತೆಗಳ ಮೂಲಕವೇ ನನ್ನೊಳಗೊಬ್ಬ ಕತೆಗಾರ್ತಿ ಹುಟ್ಟಿಕೊಂಡಿರಬಹುದೇನೋ.

New Book: ಅಚ್ಚಿಗೂ ಮೊದಲು; ‘ಕೆಂಪು’ ಅರ್ಪಣ ಎಚ್ಎಸ್​ ಕಥಾ ಸಂಕಲನ ಸದ್ಯದಲ್ಲೇ ನಿಮ್ಮ ಓದಿಗೆ
ಲೇಖಕಿ ಅರ್ಪಣ ಎಚ್. ಎಸ್.
Follow us
|

Updated on:Mar 23, 2022 | 10:57 AM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ: ಕೆಂಪು ಹಾಗೂ ಇತರ ಬಹುಮಾನಿತ ಕತೆಗಳು  ಲೇಖಕಿ : ಅರ್ಪಣ ಎಚ್. ಎಸ್ ಪುಟ: 118 ಬೆಲೆ: ರೂ. 120 ಒಳಚಿತ್ರಗಳು : ಚೇತನಾ ತೀರ್ಥಹಳ್ಳಿ ಮುಖಪುಟ ವಿನ್ಯಾಸ: ಅಪಾರ ಪ್ರಕಾಶನ: ಸ್ವಯಂ ಪ್ರಕಾಶನ-ಟೆಕ್​ ಫಿಜ್ ಮೂಲಕ

ಖಾಲಿ ಸೀಮೆಎಣ್ಣೆಯ ಡಬ್ಬಿಗಳನ್ನು ಹಿಡಿದುಕೊಂಡು ದೂರದ ರೇಷನ್ ಅಂಗಡಿಗೆ ಜೊತೆಯಾಗಿ ಹೋಗುವಾಗ, ದಾರಿ ಸವೆಸಲು ನಾನು ನನ್ನ ತಮ್ಮನಿಗೆ ಹೇಳುತ್ತಿದ್ದ ಕಟ್ಟುಕತೆಗಳ ಮೂಲಕವೇ ನನ್ನೊಳಗೊಬ್ಬ ಕತೆಗಾರ್ತಿ ಹುಟ್ಟಿಕೊಂಡಿರಬಹುದೇನೋ. ಅವನಿಗೆ ಸಿನಿಮಾ ಕತೆ ಹೇಳುವಾಗಲೂ ಅದಕ್ಕೆ ನನ್ನದೇ ಒಂದಷ್ಟು ಕಲ್ಪನೆ ಸೇರಿಸಿದಾಗ ಮಾತ್ರ ನನಗೆ ಸಮಾಧಾನವಾಗುತ್ತಿತ್ತು. ಹೀಗೆ ಕತೆ ಹೇಳುತ್ತಾ ಹೇಳುತ್ತಾ ಕತೆ ಬರೆಯುವ ಆಸೆಯೂ ಹುಟ್ಟಿರಬಹುದು. ಕಾಲೇಜಿನಲ್ಲಿದ್ದಾಗ ಬರೆದಿದ್ದ ಒಂದು ಕತೆ ಸ್ಥಳೀಯ ಪತ್ರಿಕೆಯೊಂದರಲ್ಲಿ ಬಹುಮಾನ ಪಡೆದು ಪ್ರಕಟಗೊಂಡಾಗ ನಾನು ಅಧಿಕೃತವಾಗಿ ಕತೆಗಾರ್ತಿಯಾಗಿದ್ದೆ. ಆದರೆ, ಕೆಲಸಕ್ಕೆ ಸೇರಿದ ಮೇಲೆ ನನ್ನ ಬರವಣಿಗೆ ನ್ಯೂಸ್ ಸ್ಟೋರಿಗಳಿಗೆ ಸೀಮಿತವಾಯಿತು. ಹೀಗಾಗಿ, ನಾನು ನನ್ನ ಎರಡನೇ ಕತೆ ಬರೆದದ್ದು ಸುಮಾರು 15 ವರ್ಷಗಳ ನಂತರ. ‘ಕೆಂಪು ಮತ್ತು ಇತರ ಬಹುಮಾನಿತ ಕತೆಗಳು’ ಈ ಕಳೆದ 8 ವರ್ಷಗಳಲ್ಲಿ ನಾನು ಬರೆದ ವಿವಿಧ ಕತೆಗಳ ಸಂಕಲನ. ಲೇಖಕಿಯಾಗಿ ನನ್ನ ಮಿತಿಯ ಅರಿವು ನನಗೆ ಚೆನ್ನಾಗಿ ಇದೆ. ಮುಖ್ಯವಾಗಿ ಕಥಾವಸ್ತುವಿನ ಆಯ್ಕೆಯ ವಿಷಯದಲ್ಲಿ ನನ್ನದು ಸೀಮಿತ ಲೋಕ, ಜೊತೆಗೆ, ಅದನ್ನು ಪರಿಣಾಮಕಾರಿಯಾಗಿ ಓದುಗರಿಗೆ ದಾಟಿಸುವ ನಿಟ್ಟಿನಲ್ಲೂ ನನ್ನಲ್ಲಿ ಬಹಳಷ್ಟು ತೊಡಕುಗಳಿರಬಹುದು. ಹೀಗಾಗಿ, ಬಹುತೇಕ ವಿವಿಧ ಕಥಾಸ್ಪರ್ಧೆಗಳಲ್ಲಿ ಬಹುಮಾನ ಮತ್ತು ಮೆಚ್ಚುಗೆ ಗಳಿಸಿದ ಕತೆಗಳನ್ನೇ ಸಂಕಲನಕ್ಕೆ ಆಯ್ದುಕೊಂಡಿದ್ದೇನೆ. ಈಗಾಗಲೇ ವಿಮರ್ಶೆಗೊಳಪಟ್ಟು ಪಾಸಾದ ಕತೆಗಳಾದ್ದರಿಂದ ಖರೀದಿಸಿ ಓದುವವರಿಗೆ ಮೋಸವಾಗದು ಎಂಬ ಆಶಯದಿಂದ. ಅರ್ಪಣ ಎಚ್. ಎಸ್. ಲೇಖಕಿ

‘ಮಲ್ಲಿಕಾರ್ಜುನ ದೇವರಾಗಿದ್ದು’

ಢಣ ಢಣ ಗಂಟೆ ಸದ್ದಿಗೆ ಮಲ್ಲಿಕಾರ್ಜುನನಿಗೆ ಥಟ್ಟನೆ ಎಚ್ಚರವಾಯಿತು. ಉತ್ಸವದ ಭರಾಟೆಯಲ್ಲಿ ರಾತ್ರಿ ಮಲಗಿದಾಗ ತೀರಾ ತಡವಾಗಿದ್ದರಿಂದ, ಕಣ್ಣುಗಳು ಸ್ಪ್ರಿಂಗ್ ಡೋರಿನ ರೀತಿ ತಾವೇ ತಾವಾಗಿ ಮುಚ್ಚಿಕೊಳ್ಳುತ್ತಿದ್ದವು. ಈಗ ಇನ್ನು ಸುಪ್ರಭಾತದ ಕೆಸೆಟ್ಟು ಹಾಕುತ್ತಾರೆ. ಅವನಿಗೆ ಆ ಸುಪ್ರಭಾತ ತೃಣ ಮಾತ್ರವೂ ಹಿಡಿಸುವುದಿಲ್ಲ. ಹಳೆಯ ಅಲಾರ್ಮ್ ಗಡಿಯಾರದ ಸದ್ದು ಇತರರ ಹೊಟ್ಟೆಯೊಳಗೆ ಉಂಟುಮಾಡುವಂತಹ ವಿಚಿತ್ರವಾದ ಸಂಕಟವನ್ನು, ಸುಪ್ರಭಾತ ಅವನಲ್ಲಿ ಉಂಟುಮಾಡುತ್ತದೆ. ದೇವಸ್ಥಾನದ ವರ್ಷದ ಜಾತ್ರೆ ಆರಂಭವಾದಾಗಿನಿಂದ ಸರಿ ನಿದ್ದೆ ಇಲ್ಲ. ಜನರ ದರ್ಶನ ಮತ್ತು ಎಲ್ಲಾ ಸೇವೆಗಳು ಮುಗಿದು ಮಲಗುವಾಗ ಹತ್ತಿರ ಹತ್ತಿರ ನಡುರಾತ್ರಿ. ಬೆಳ್ಳಂಬೆಳಗ್ಗೆ 4 ಕ್ಕೆ ಏಳಬೇಕು. ಮಲ್ಲಿಕಾರ್ಜುನನಿಗೆ ಈ ಉತ್ಸವವೆಲ್ಲಾ ಮುಗಿದು, ಯಾವಾಗ ಒಂದು ಸುಖವಾದ ನಿದ್ದೆ ತೆಗೆದೇನು ಎಂಬ ಕಾತುರ ಉಂಟಾಯಿತು. ಇಂದು ಉತ್ಸವದ ಕೊನೆಯ ದಿನ ಎಂಬ ನೆನಪಾಗಿ, ಜೊತೆಜೊತೆಗೆ ಇಂದು ಮಾಡಬೇಕಾದ ಮಹತ್ತರವಾದ ಕೆಲಸದ ಸ್ಮರಣೆಯೂ ಉಂಟಾಗಿ ಮಂಪರು ಜರ್ರನೆ ಜಾರಿತು.

ಕೊನೆಯ ದಿನವಾದ್ದರಿಂದ ಭಕ್ತರ ಗೌಜು ಗದ್ದಲಗಳೆಲ್ಲಾ ಜೋರಾಗಿಯೇ ಇತ್ತು. ಒಂದೆರಡು ಸಣ್ಣಪುಟ್ಟ ಕಳ್ಳತನ, ಸರತಿ ಸಾಲಿನಲ್ಲಿ ಮೂರು ಜಗಳ, ಅನ್ನ ಸಂತರ್ಪಣೆಯಲ್ಲಿ ಸಾಂಬಾರು ಕಡಿಮೆಯಾಗಿ, ನಂತರ ನೀರು ಸೇರಿಸಿದ ಸಾಂಬಾರು ಕೂಡ ಮುಗಿದು, ಕೊನೆಗೆ ಸಾರಿನ ಹೆಸರಲ್ಲಿ ಏನೋ ಬಡಿಸಬೇಕಾದ ಸ್ಥಿತಿ ಬಂತು ಎಂಬುದು ಬಿಟ್ಟರೆ ಮತ್ತೇನೂ ದೊಡ್ಡ ಪ್ರಮಾಣದ ಘಟನೆಗಳು ನಡೆಯಲಿಲ್ಲ. ಅಂತೂ ಮುಖ್ಯರಥದಲ್ಲಿ ಊರ ತುಂಬ ಮೆರವಣಿಗೆ ಆಗಿ, ತೆಪ್ಪೋತ್ಸವ ಮುಗಿಯುವಾಗ ರಾತ್ರಿ ಹನ್ನೊಂದೂವರೆ. ಕಾವಲಿನ ರಾಮಣ್ಣ ಕೊನೆಯ ಬಾರಿಗೆ ದೇವಸ್ಥಾನವೆಲ್ಲಾ ಒಂದು ಸುತ್ತು ಹೊಡೆದು, ಎಲ್ಲಾ ದೀಪಗಳನ್ನು ನಂದಿಸಿ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಮನೆಗೆ ಹೊರಟಾಗ ಹನ್ನೆರಡು ಸಮೀಪಿಸಿತ್ತೇನೋ.

ಕುಕ್ಕರಿನಿಂದ ಪ್ರೆಶರ್ ಹೊರಹೋಗುವ ರೀತಿಯಲ್ಲೇ, ದೇವಸ್ಥಾನದೊಳಗಿನ ಗದ್ದಲಗಳೆಲ್ಲಾ ನಿಧಾನವಾಗಿ ಕಡಿಮೆಯಾಗುತ್ತಾ ಬಂದು ಕೊನೆಗೆ ಸಂಪೂರ್ಣ ತಣ್ಣಗಾಗಿತ್ತು. ಐದು ದಿನ ಸರಿಯಾದ ನಿದ್ದೆ ಇಲ್ಲದಿದ್ದರೂ ಮಲ್ಲಿಕಾರ್ಜುನ ಎಚ್ಚರವಾಗಿಯೇ ಇದ್ದ. ಗರ್ಭಗುಡಿಯಲ್ಲಿ ಗರ್ಭದೊಳಗೆ ಇರಬಹುದಾದಷ್ಟೇ ಕಪ್ಪಾದ ಕತ್ತಲಿತ್ತು. ಆ ಕತ್ತಲಿನೊಂದಿಗೆ ಸಣ್ಣ ನಂದಾದೀಪದ ಬೆಳಕು ಮಾತ್ರ ನಿರಂತರ ಯುದ್ಧ ನಡೆಸಿತ್ತು. ಆಗಲೇ, ದೇಗುಲದೊಳಗಿನ ಪ್ರಸಾದ ಕೊಡುವ ಸ್ಥಳದಿಂದ ಫಳಕ್ಕನೆ ಟಾರ್ಚ್ ದೀಪವೊಂದು ಬೆಳಗಿತು. ಆ ಟಾರ್ಚಿನ ಬೆಳಕು ಗರ್ಭಗುಡಿಯ ಮುಂದೆ ಇದ್ದ ಹುಂಡಿಯವರೆಗೆ ಅಂಬೆಗಾಲಿಕ್ಕುತ್ತಾ ಬಂದು ನಿಂತು ಬಿಟ್ಟಿತು. ಅದರ ಬೆಳಕಲ್ಲಿ, ಟಾರ್ಚ್ ಹಿಡಿದು ಮೆಲ್ಲಗೆ ನಡೆದು ಬಂದ ಸಚಿನ್ ಮುಖದಲ್ಲಿದ್ದ ಭಯ, ಆತಂಕ ಎದ್ದು ಕಾಣುತ್ತಿತ್ತು. ಮಲ್ಲಿಕಾರ್ಜುನ ತನ್ನ ಕೆಲಸ ಈಗ ಆರಂಭವಾಯಿತು ಎಂಬ ಹುರುಪಿನಲ್ಲಿ ಸೆಟೆದು ಕುಳಿತ.

ಇದನ್ನೂ ಓದಿ : Gabriel Garcia Marquez’s Birth Anniversary: ಅಚ್ಚಿಗೂ ಮೊದಲು; ಕೇಶವ ಮಳಗಿ ಅನುವಾದಿಸಿದ ‘ಗದ್ಯ ಗಾರುಡಿ’ ಲಭ್ಯ

ಮಲ್ಲಿಕಾರ್ಜುನನ ಮಟ್ಟಿಗೆ ಹೇಳುವುದಾದರೆ, ಈ ಕಥೆಯ ಮೊದಲ ಅಂಕ ಆರಂಭವಾಗಿದ್ದು, ಸುಮಾರು ಒಂದು ತಿಂಗಳ ಹಿಂದೆ. ದೇವಸ್ಥಾನದಲ್ಲಿ ಮುಖ್ಯ ಅರ್ಚಕರಿಗೆ ಸಹಾಯಕನಾಗಿರುವ 35 ವರ್ಷದ ಸಚಿನ್ ಮತ್ತು ಪ್ರಸಾದ ವಿತರಣೆಯ ಕೆಲಸದಲ್ಲಿರುವ ಆತನ ಚಡ್ಡಿ ದೋಸ್ತ್ ಚಕ್ರಪಾಣಿ ಭಕ್ತರಿಲ್ಲದ ಮಧ್ಯಾಹ್ನದ ಸಮಯದಲ್ಲಿ ತಮ್ಮ ಮಾಮೂಲು ಹರಟೆಯಲ್ಲಿ ತೊಡಗಿದ್ದರು. ಭಕ್ತರಿಲ್ಲದ ಸಮಯದಲ್ಲಿ ದೇವಸ್ಥಾನವು ಜಾಗಟೆ, ಗಂಟೆ ಸದ್ದಿಲ್ಲದ ಮಂಗಳಾರತಿಯಂತಿರುತ್ತದೆ. ನೋಡಲು ಚಂದ, ಆದರೆ ಮೂಕ. ಜನರೇನೋ ದೇವಸ್ಥಾನ ಶಾಂತವಾಗಿದೆ ಎಂದು ಸಂಭ್ರಮಿಸುತ್ತಾರಾದರೂ ಸಾಲಾಗಿ ಬರುವ ಜನರನ್ನು ನೋಡುವುದು, ಅವರ ಬೇಡಿಕೆಗಳನ್ನು ಕೇಳಿಸಿಕೊಂಡು ಒಳಗೊಳಗೆ ನಗುವುದು ಮಲ್ಲಿಕಾರ್ಜುನನ ಇಷ್ಟದ ಟೈಂ ಪಾಸ್ ಹವ್ಯಾಸವಾದ್ದರಿಂದ ಜನರಿಲ್ಲದಿದ್ದರೆ ಅವನಿಗೆ ತೂಕಡಿಕೆ ಶುರುವಾಗುತ್ತದೆ. ಹೀಗಾಗಿಯೇ, ಗರ್ಭಗುಡಿಯ ಮುಂದೆ ತೀರ್ಥದ ಬಟ್ಟಲು ಇಟ್ಟುಕೊಂಡು, ಮೊಬೈಲ್ ನೋಡುತ್ತಾ ಕುಳಿತಿದ್ದ ಸಚಿನ್ ಬಳಿ ಬಂದು ಚಕ್ರಪಾಣಿ ಹರಟೆಗೆ ನಿಂತಾಗ ಮಲ್ಲಿಕಾರ್ಜುನ ಮಧ್ಯಾಹ್ನದ ಮಂಪರಿನಲ್ಲಿ ತೂಕಡಿಸುತ್ತಿದ್ದದ್ದು.

ಜನರಿಲ್ಲದ ಸಮಯದಲ್ಲಿ ಅವರಿಬ್ಬರು ಹರಟೆ ಹೊಡೆಯುವುದು ಮಾಮೂಲು. ಹೊಸ ಕನ್ನಡ ಸಿನಿಮಾಗಳು, ಯಾವುದೋ ವಾಟ್ಸಪ್ ಫಾರ್ವರ್ಡ್ ಗಳಂತಹ ಅರೆ ಸಾಮಾಜಿಕ ವಿಷಯಗಳ ಬಗ್ಗೆ ಗಟ್ಟಿಯಾಗಿಯೂ, ಯಾವ ಪುರೋಹಿತರಿಗೆ ಅಸಿಸ್ಟೆಂಟ್ ಆಗಿ ಹೋದರೆ ಎಷ್ಟು ಹಣ ಸಿಗುತ್ತದೆ, ಊರಿನಲ್ಲಿ ಯಾವ ಹೆಣ್ಣು ಎಷ್ಟು ಸುಂದರಿ ಮತ್ತು ಆಕೆಗೆ ಯಾರ ಮೇಲೆ ಮನಸ್ಸಿದೆ ಎಂಬಂತಹ  ಅತಿ ಲೌಕಿಕ ವಿಷಯಗಳನ್ನು ಸಣ್ಣ ದನಿಯಲ್ಲೂ ಮಾತನಾಡುತ್ತಾರೆ. ಅವರ ಮಾತಿಗೆ ಅನುಗುಣವಾಗಿ ಅವರ ನಗು ಕೂಡ ಗಹಗಹಿಸುವಿಕೆಯಿಂದ, ಕಿಸಿಕಿಸಿಯವರೆಗೆ ಬದಲಾಗುತ್ತದೆ. ಮಲ್ಲಿಕಾರ್ಜುನನಿಗೆ ಅವರ ಗಟ್ಟಿ ಮಾತಿನ ಬಗ್ಗೆ ಹೆಚ್ಚಿನ ಆಸಕ್ತಿ ಏನೂ ಇಲ್ಲ. ಅವರು ಪಿಸುಪಿಸು ಮಾತು ಆರಂಭಿಸಿದರೆ ಮಾತ್ರ ಇವನ ಕಿವಿ ಚುರುಕಾಗುತ್ತದೆ. ಅದೇ ರೀತಿ ಅಂದೂ ಕೂಡ ಇಬ್ಬರು ಏನೋ ಗುಟ್ಟಿನ ವಿಚಾರ ಮಾತನಾಡಲು ತೊಡಗಿದ್ದೇ ಮಲ್ಲಿಕಾರ್ಜುನ ತನ್ನ ತೂಕಡಿಕೆ ಮಡಿಸಿಟ್ಟು, ನೆಟ್ಟಗೆ ಕೂತ.

(ಪೂರ್ಣ ಓದಿಗೆ ಮತ್ತು ಪುಸ್ತಕ ಖರೀದಿಗೆ ಸಂಪರ್ಕಿಸಿ : ಋತುಮಾನ 9480035877)

ಇದನ್ನೂ ಓದಿ : New Novel: ಅಚ್ಚಿಗೂ ಮೊದಲು; ಅಂಕಿತ ಪುಸ್ತಕದಿಂದ ನಾಳೆ ಕೆಎನ್ ಗಣೇಶಯ್ಯ ‘ಕಾನನ ಜನಾರ್ದನ’ ಕಾದಂಬರಿ ಬಿಡುಗಡೆ

Published On - 10:56 am, Wed, 23 March 22

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್