New Novel: ಅಚ್ಚಿಗೂ ಮೊದಲು; ಅಂಕಿತ ಪುಸ್ತಕದಿಂದ ನಾಳೆ ಕೆಎನ್ ಗಣೇಶಯ್ಯ ‘ಕಾನನ ಜನಾರ್ದನ’ ಕಾದಂಬರಿ ಬಿಡುಗಡೆ

KN Ganeshaiah : ‘ಅದು ಶಿಥಿಲಗೊಂಡ ಮಣ್ಣಿನ ಮಡಕೆ. 3000 ವರ್ಷಗಳಷ್ಟು ಹಿಂದಿನ ಕಾಲಘಟ್ಟದ ಭೂಪದರದಲ್ಲಿದ್ದ ಆ ಮಡಕೆಯಲ್ಲಿ ಮಗುವಿನ ಶವ ಇಟ್ಟು ಸಂಸ್ಕಾರ ಮಾಡಲಾಗಿದ್ದನ್ನು ಕೇಳಿದಾಗ ನನ್ನ ಹೃದಯದ ಬಡಿತ ನನಗೇ ಕೇಳಿಸುತ್ತಿತ್ತು.’

New Novel: ಅಚ್ಚಿಗೂ ಮೊದಲು; ಅಂಕಿತ ಪುಸ್ತಕದಿಂದ ನಾಳೆ ಕೆಎನ್ ಗಣೇಶಯ್ಯ ‘ಕಾನನ ಜನಾರ್ದನ’ ಕಾದಂಬರಿ ಬಿಡುಗಡೆ
ಡಾ. ಕೆ. ಎನ್. ಗಣೇಶಯ್ಯ
Follow us
|

Updated on: Mar 12, 2022 | 9:14 AM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ : ಕಾನನ ಜನಾರ್ದನ (ಕಾದಂಬರಿ) ಲೇಖಕರು : ಡಾ. ಕೆ. ಎನ್. ಗಣೇಶಯ್ಯ ಪುಟ  : 400 ಬೆಲೆ : ರೂ.  395 ಮುಖಪುಟ ವಿನ್ಯಾಸ : ಸುನಿಲ್ ಮಿಶ್ರ ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು

ನಾಳೆ ಬೆಳಗ್ಗೆ 10.30ಕ್ಕೆ ಆನ್​ಲೈನ್​ನಲ್ಲಿ ಈ ಕಾದಂಬರಿ ಬಿಡುಗಡೆಗೊಳ್ಳಲಿದೆ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಮತ್ತು ಲೇಖಕ ಡಾ. ಬೈರಮಂಗಲ ರಾಮೇಗೌಡ ಉಪಸ್ಥಿತಿರಿರುತ್ತಾರೆ.

*

ಈ ಕಾದಂಬರಿಯ ಬೀಜ ನನ್ನ ಎದೆಯಲ್ಲಿ ಬಿತ್ತನೆಯಾದದ್ದು 1984ರ ಒಂದು ಬೇಸಿಗೆಯ ರಾತ್ರಿ. ಕೋಲಾರ ಮತ್ತು ಟೇಕಲ್ ಬಳಿಯ ಬನಹಳ್ಳಿಯ ಬಯಲಿನಲ್ಲಿ ನಾನು, ವೀಣಾ ಮತ್ತು ಉಮಾಶಂಕರ್ ತಂಗಿದ್ದ ಒಂದು ಕ್ಯಾನ್ವಾಸ್ ಟೆಂಟಿನಲ್ಲಿ. ಆದರೆ ಹಾಗೆ ಬಿತ್ತನೆಯಾದ ಸಮಯದಲ್ಲಿ, ನಾನು ಕನ್ನಡದಲ್ಲಿ ಏನನ್ನಾದರೂ ಬರೆಯುತ್ತೇನೆ ಎಂಬ ಸೂಚನೆಯೂ ನನಗಿರಲಿಲ್ಲ. ಬನಹಳ್ಳಿಯಲ್ಲಿ Archeological Survey of India ನಡೆಸುತ್ತಿದ್ದ ಉತ್ಖನನದ ಯೋಜನೆಯ ಮುಖ್ಯಸ್ಥರೂ, ಪ್ರಾಚ್ಯಶಾಸ್ತ್ರದಲ್ಲಿ ಪ್ರಸಿದ್ಧ ವಿಜ್ಞಾನಿಯೂ ಆಗಿದ್ದ ಕೃಷ್ಣಮೂರ್ತಿಯವರು, ನನ್ನ ಸ್ನೇಹಿತ, ಉಮಾಶಂಕರ್ ಮತ್ತು ವೀಣಾ ಚರಿತ್ರೆಯ ಬಗ್ಗೆ ತೋರಿದ ಕುತೂಹಲ ಕಂಡು, ಅವರಿಬ್ಬರನ್ನೂ ಅಲ್ಲಿಗೆ ಆಹ್ವಾನಿಸಿದ್ದರು. ಅವರು ಹೊರಟಾಗ, ನಾನೂ ಅವರ ಜೊತೆಯಾಗಿದ್ದೆ.

ಅಲ್ಲಿನ ಉತ್ಖನನದ ಕುಳಿಗಳಲ್ಲಿ ಒಂದೊಂದು ಹೆಜ್ಜೆ ಆಳಕ್ಕೆ ಇಳಿದಂತೆ ನಾವು ಶತಮಾನಗಳಷ್ಟು ಹಿಂದಕ್ಕೆ ಹೋಗುತ್ತಿದ್ದೇವೆ ಎಂಬ ಅರಿವಿನ ಉತ್ಕಟ ಭಾವಕ್ಕೆ ಸಿಲುಕಿ ಮೂವರೂ ಕೆಳಗಿಳಿಯುತ್ತಿದ್ದಂತೆ, ನಮ್ಮ ಕಣ್ಣಿಗೆ ಧುತ್ತನೆ ಕಂಡದ್ದು ಒಂದು ಕುಳಿಯ ಗೋಡೆಯ ಮಧ್ಯದಲ್ಲಿ ಇನ್ನೂ ಅದಕ್ಕೆ ಅಂಟಿಕೊಂಡಿದ್ದ, ಶಿಥಿಲಗೊಂಡಿದ್ದರೂ ತನ್ನ ಆಕಾರವನ್ನು ಇನ್ನೂ ಸಂಪೂರ್ಣವಾಗಿ ಉಳಿಸಿಕೊಂಡಿದ್ದ ಒಂದು ಮಣ್ಣಿನ ಮಡಕೆ. ಸುಮಾರು 3000 ವರ್ಷಗಳಷ್ಟು ಹಿಂದಿನ ಕಾಲಘಟ್ಟದ ಭೂಪದರದಲ್ಲಿದ್ದ ಆ ಮಡಕೆಯಲ್ಲಿ ಒಂದು ಮಗುವಿನ ಶವ ಇಟ್ಟು ಸಂಸ್ಕಾರ ಮಾಡಲಾಗಿದೆ ಎಂದು ಕೃಷ್ಣಮೂರ್ತಿ ವಿವರಿಸಿದಾಗ ನನ್ನ ಹೃದಯದ ಬಡಿತ ನನಗೇ ಕೇಳಿಸುತ್ತಿತ್ತು. ಡಾ. ಕೆ. ಎನ್. ಗಣೇಶಯ್ಯ, ಕಾದಂಬರಿಕಾರರು

(ಆಯ್ದ ಭಾಗ)

ಮಧ್ಯಾಹ್ನ 11.00 ಗಂಟೆ ಸಿದ್ದಪ್ಪನ ಪೋಡಿ ತಿರುಮಲೈ ಕಾಡು

ಸಿದ್ದಪ್ಪ ಏದುಸಿರು ಬಿಡುತ್ತ, ತನ್ನ ಪೋಡಿಯತ್ತ ಕಷ್ಟಪಟ್ಟು ಹೆಜ್ಜೆ ಹಾಕುತ್ತಿದ್ದ. ಎದ್ದು, ಬಿದ್ದು, ಪೋಡಿಯನ್ನು ಮುಟ್ಟಿದರೆ ಸಾಕು ಎಂದು ತೂರಾಡುತ್ತ ಬರುತ್ತಿದ್ದ. ಸೊಂಟಕ್ಕೆ ಸುತ್ತಿದ್ದ ಅರೆಧೋತಿ ಸಂಪೂರ್ಣವಾಗಿ ರಕ್ತಮಯವಾಗಿತ್ತು. ಮೈಮೇಲೆ ಈಗ ಕಂಬಳಿ ಇರಲಿಲ್ಲ, ಎಲ್ಲೋ ಬಿದ್ದು ಹೋಗಿತ್ತು. ಅದನ್ನು ಎತ್ತಿ ಹೆಗಲಿಗೇರಿಸುವಷ್ಟು ಸಮಯವಾಗಲಿ ಶಕ್ತಿಯಾಗಲಿ ಇಲ್ಲದೆ ಅಲ್ಲಿಯೇ ಬಿಟ್ಟು ಬಂದಿದ್ದ. ಬೆನ್ನಿನ ಮೂಳೆಯ ಉದ್ದಕ್ಕೂ ರಕ್ತ ಸುರಿಯುತ್ತಿತ್ತು. ಕಣ್ಣೂ ಮಂಜಾಗುತ್ತಿತ್ತು. ಪೋಡಿಯ ಬಳಿಯ ಏರುತಗ್ಗುಗಳಲ್ಲಿ ಏಳುತ್ತ ಬೀಳುತ್ತ, ಕಾಲೆಳೆದು ನಡೆಯುತ್ತಿದ್ದ. ಏರು ಬಂದಾಗ ಹತ್ತಲು ಶಕ್ತಿ ಇಲ್ಲದೆ ನೆಲವನ್ನೆ ಹಿಡಿದು ಮುಂದಕ್ಕೆ ಜರುಗುತ್ತ, ಕೈಗೆ ಸಿಕ್ಕ ಗಿಡಗಂಟೆಯನ್ನು ಹಿಡಿದು ಮೇಲೆದ್ದು ನಿಂತು ಹೆಜ್ಜೆಯಮೇಲೆ ಹೆಜ್ಜೆ ಇಡುತ್ತ ತೂರಾಡಿ ಬರುತ್ತಿದ್ದ. ಕೂಗಲೂ ಶಕ್ತಿ ಇರಲಿಲ್ಲ. ಕೊನೆಗೊಮ್ಮೆ ಒಂದು ದಿನ್ನೆ ಹತ್ತಿದಾಗ, ಸುಮಾರು 150 ಗಜಗಳ ದೂರದಲ್ಲಿ ತನ್ನ ಪೋಡಿ ಕಂಡು, ಅಲ್ಲಿಯೇ ನಿಂತು ಶಕ್ತಿಯನ್ನೆಲ್ಲ ಒಗ್ಗೂಡಿಸಿ ‘ಮಾರ ಮಾರ’ ಎಂದು ಕೂಗಿದ- ತನ್ನ ನಾಲ್ಕು ವರ್ಷದ ಮಗನನ್ನು.

ಮನೆಯ ಬಳಿಯ ನಾಯಿಯ ಜೊತೆ ಆಟ ಆಡುತ್ತಿದ್ದ ಮಗುವಿಗೆ ಸಿದ್ದಪ್ಪನ ಕೂಗು ಕೇಳಿಸದಿದ್ದರೂ, ಆ ನಾಯಿಗೆ ತನ್ನ ಯಜಮಾನನ ಆರ್ತತೆ ವಾಸನೆಯಿಂದಲೋ, ಆತನ ಕೂಗಿನಿಂದಲೋ ತಟ್ಟಿತ್ತು. ಕೂಗು ಬಂದ ಕಡೆಗೆ ತಿರುಗಿ ನೋಡಿದ ನಾಯಿಗೆ ಏನೋ ಅಪಾಯ ಕಂಡಂತಾಗಿ, ಛಂಗನೆ ಹಾರುತ್ತ, ಬೊಗಳುತ್ತ ಸಿದ್ದಪ್ಪ ಇದ್ದೆಡೆಗೆ ದೌಡಾಯಿಸಿತು. ಅತ್ತ ಕಡೆ ದೃಷ್ಟಿ ಹರಿಸಿದ ಮಾರನಿಗೂ ಅಪ್ಪ ಕಂಡ. ಯಾಕೋ ಆತನ ಸ್ಥಿತಿ ಸರಿಯಿಲ್ಲ ಎನಿಸಿ ತಾನೂ ‘ಅಪ್ಪ ಅಪ್ಪ’ ಎಂದು ಜೋರಾಗಿ ಕಿರುಚಿದ. ಒಳಗಿದ್ದ ಎಂಟು ತಿಂಗಳ ಗರ್ಭಿಣಿ ತಾಯಿಗೆ ನಾಯಿ ಬೊಗಳಿದ್ದರ ಹಿಂದೆಯೇ ಮಗನ ಕಿರುಚಾಟ ಕೇಳಿ, ಹೆದರಿ ಎದ್ದು ಹೊರಬಂದಳು. ನಾಯಿ ಬೊಗಳುವತ್ತ ದಿಟ್ಟಿಸಿ ನೋಡಿ ಗಾಬರಿಗೊಂಡಳು.

ಹೊರಬಂದ ಹೆಂಡತಿ ತನ್ನನ್ನು ಕಂಡಳೆಂದು ಅರಿತ ಸಿದ್ದಪ್ಪ ಇನ್ನು ತಾನು ಒಂದು ಹೆಜ್ಜೆಯೂ ಮುಂದಿಡಲಾರೆನೆಂದು ತೀರ್ಮಾನಿಸಿ ದೊಪ್ಪನೆ ಕೆಳಗೆ ಬಿದ್ದ. ದೂರದಲ್ಲಿ ಗಂಡ ಹಾಗೆ ಬಿದ್ದದ್ದನ್ನು ನೋಡಿದ ಅಕ್ಕಮ್ಮ ಜೋರಾಗಿ ಕಿರುಚಿಕೊಂಡಳು. ಹತ್ತಿರದ ಗುಡಿಸಲುಗಳಿಂದ ನಾಲ್ಕೈದು ಮಂದಿ ಹೊರಗೆ ಓಡಿ ಬಂದರು. ಅವರೆಲ್ಲರಿಗೂ ಅಕ್ಕಮ್ಮನು ತನ್ನ ಗಂಡ ಬಿದ್ದ ಕಡೆ ಕೈತೋರಿಸಿ ಕಿರುಚಿಕೊಂಡಳು- ‘ಅವರು ಅಲ್ಲಿ ಬಿದ್ದರು. ಏನೋ ಆಗಿದೆ’ ಎಂದು. ಅವರೆಲ್ಲರೂ ಸಿದ್ದಪ್ಪನತ್ತ ಓಡಿದರು.

ಇದನ್ನೂ ಓದಿ : New Book: ಅಚ್ಚಿಗೂ ಮೊದಲು; ವಸಂತ ದಿವಾಣಜಿಯವರ ‘ಕ್ರಾಂತದರ್ಶನ’ ಮತ್ತು ‘ನಕ್ಷೆಗೆ ಎಟುಕದ ಕಡಲು’ ಇದೀಗ ಲಭ್ಯ

ರಕ್ತದ ಮಡುವಿನಲ್ಲಿ ತೋಯ್ದಂತಿದ್ದ ಸಿದ್ದಪ್ಪನನ್ನು ಕಂಡು ಬೆರಗಾಗಿ ಅವರೆಲ್ಲರೂ ಅನಾಮತ್ತಾಗಿ ಆತನನ್ನು ಎತ್ತಿಕೊಂಡು ಪೋಡಿಗೆ ತಂದರು. ಮತಿ ಇಲ್ಲದೆ ಇದ್ದ ಆತನಿಗೆ ನೀರುಕುಡಿಸಲು ಪ್ರಯತ್ನಿಸುತ್ತಿದ್ದಂತೆ ಸಿದ್ದಪ್ಪ ನೀರು ತುಂಬಿಕೊಂಡ ಬಾಯಲ್ಲಿ ಏನನ್ನೋ ಮುಲುಗುಟ್ಟುತ್ತಿದ್ದ. ಕೇಳಿಸಿಕೊಂಡವರಿಗೆ ತಿಳಿದದ್ದು ಇಷ್ಟು:

‘ಸಣ್ಣಪ್ಪನ ಮಗ?’ ‘ನಾಲ್ಕು ಕೈ ದೇವರು..’ ‘ಕಾಡು ಪುರಿ ದೇವರು..’ ‘ದೇವರ ಕಾಡು, ಹುಲಿ ಪಂಜ..’ ‘ಪಕ್ಕದ ಕಾಡು…’

ಅಷ್ಟು ಉಸುರುವಷ್ಟರಲ್ಲಿ ಸಿದ್ದಪ್ಪನ ಉಸಿರು ನಿಂತಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಪೋಡಿಯ ಮುದುಕನೊಬ್ಬ ಅನುಮಾನಿಸಿ ಸಿದ್ದಪ್ಪನ ಮೂಗಿನ ಬಳಿ ಕೈಇಟ್ಟು ಪರೀಕ್ಷಿಸಿ, ನಂತರ ಕೈ ಹಿಡಿದು ನಾಡಿ ನೋಡಿ, ತಲೆ ಆಡಿಸಿದ- ಜೀವ ಆಡುತ್ತಿಲ್ಲ ಎಂದು. ಇದನ್ನು ನಿರೀಕ್ಷಿಸಿರದ ಅಕ್ಕಮ್ಮ ಕಿಟಾರನೆ ಕೂಗಿಕೊಂಡು ಗಂಡನ ಮೈಮೇಲೆ ಬಿದ್ದು ತಬ್ಬಿ ಗೋಳಾಡತೊಡಗಿದಳು. ಆಗಲೆ ಆಕೆ ಗಮನಿಸಿದ್ದು- ಆತನ ತಲೆಯ ಹಿಂದೆ ಕೂದಲು, ಚರ್ಮ ಕಿತ್ತುಹೋದದ್ದನ್ನು. ಸುಮಾರು ಅಂಗೈ ಅಗಲದಷ್ಟು ಚರ್ಮ ಕಿತ್ತುಹೋಗಿತ್ತು. ಮೂಳೆ ಪುಡಿಪುಡಿಯಾಗಿತ್ತು. ಆ ಪುಡಿ ಪುಡಿ ಮೂಳೆಯ ಜೊತೆಗೆ ಆತನ ತಲೆಯ ಹಿಂದಿನ ರಕ್ತ, ಮಾಂಸ ಆಕೆಯೆ ಕೈಗೆ ಮೆತ್ತ ಮೆತ್ತಗೆ ಅಂಟಿತ್ತು. ಅದನ್ನು ಕಂಡು, ಗಾಬರಿಯಾಗಿ, ಜೋರಾಗಿ ಅಳುತ್ತಲೇ ಅಕ್ಕಮ್ಮ,

‘ಇಲ್ನೋಡ್ರೋ? ಇದೇನೋ ಮಾರಾಯ? ಏನಾಗಿದೆಯೋ?’ ಎಂದು ಅಲ್ಲಿದ್ದವರಿಗೆ ಅದನ್ನು ತೋರಿಸುತ್ತ ಗೋಳಾಡಿದಳು.

ಅವರಲ್ಲಿ ಒಬ್ಬ ಹುಡುಗ ಅದನ್ನು ಸೂಕ್ಷ್ಮವಾಗಿ ನೋಡುತ್ತ- ತನಗೆ ತಾನೇ ಜೋರಾಗಿ : ‘ಹುಲಿ ಹೊಡ್ದಂಗಿದೆ’ ಎಂದು ಹೇಳಿಕೊಂಡ.

ಆದರೆ ಮತ್ತೊಬ್ಬ ಅದನ್ನು ನೋಡಿ, ತಲೆ ಆಡಿಸುತ್ತ ಹೇಳಿದ.

‘ಹುಲಿ ಅಲ್ಲವೇ ಅಲ್ಲ…. ಕಿರುಬ ಇರಬಹುದು?… ಊಹೂ ಗೊತ್ತಿಲ್ಲ’ ಎಂದ.

ಹುಲಿಯೋ, ಕಿರುಬವೋ, ಮತ್ತೇನೋ? ಸಿದ್ದಪ್ಪನನ್ನು ಬಲಿ ತೆಗೆದುಕೊಂಡಿತ್ತು.

ಅವರಲ್ಲಿಯೇ ಚರ್ಚೆ ನಡೆಯಿತು. ಸಿದ್ದಪ್ಪ ‘ಸಣ್ಣಪ್ಪನ ಮಗ’ ಎಂದು ಏಕೆ ಹೇಳಿದ? ಅವನಿಗೂ ಇವನ ತಲೆಯ ಪೆಟ್ಟಿಗೂ ಏನು ಸಂಬಂಧ ಇರಲು ಸಾಧ್ಯ?

ಈ ಕಾದಂಬರಿಯ ಖರೀದಿಗಾಗಿ ಸಂಪರ್ಕಿಸಿ : 9019190502

ಇದನ್ನೂ ಓದಿ : Gabriel Garcia Marquez’s Birth Anniversary: ಅಚ್ಚಿಗೂ ಮೊದಲು; ಕೇಶವ ಮಳಗಿ ಅನುವಾದಿಸಿದ ‘ಗದ್ಯ ಗಾರುಡಿ’ ಲಭ್ಯ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್