Literature; ನೆರೆನಾಡ ನುಡಿಯೊಳಗಾಡಿ; ಆಕಾಶದ ನೀಲೀ ಉಗ್ರತೆಯ ಕೆಳಗೆ ಓಣಿಯ ತುಕಡಿ ತೇಕಹತ್ತಿತು

G.A.Kulkarni‘s Short Story : ‘ಪದಮಜೀ, ತಾ ಇಲ್ಲಿ ನಿನ್ನ ಪಟಕಾ. ಅದರ ಧ್ವಜ ಮಾಡ್ತೀನಿ. ಬೋಳು ಹೆಂಗಸಂತ! ಎಪ್ಪತ್ತೈದು ರೂಪಾಯಿ ಎಣಿಸೇನಿ! ಹೆಣ್ಣು ಪಾರಿವಾಳದ ಸಲುವಾಗಿ’ ಮೈ ಕುಣಿಸುತ್ತ, ತೊಡೆ ಚಪ್ಪರಿಸುತ್ತ ಅವನು ಹೇಳುತ್ತಿದ್ದ.

Literature; ನೆರೆನಾಡ ನುಡಿಯೊಳಗಾಡಿ; ಆಕಾಶದ ನೀಲೀ ಉಗ್ರತೆಯ ಕೆಳಗೆ ಓಣಿಯ ತುಕಡಿ ತೇಕಹತ್ತಿತು
ಲೇಖಕರಾದ ಜಿ. ಎ. ಕುಲಕರ್ಣಿ ಮತ್ತು ಡಾ. ಜಿ. ಎಸ್. ಆಮೂರ
Follow us
ಶ್ರೀದೇವಿ ಕಳಸದ
|

Updated on:Mar 11, 2022 | 1:14 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi: ಆಜೂಬಾಜೂ ಉತ್ಕಟ ಸ್ತಬ್ಧತೆ ನೆಲೆಸಿತು. ಒಂದೆರಡು ಸಲ ಗಾಂಜಾಬಡಕ ಬಾಬೂ ನಾಲಿಗೆ ಹೊರಗೆ ತೆಗೆದು ಕೆಮ್ಮಿದಾಗ ಅವನ ಕೆಮ್ಮಿನ ದನಿ ಚಪ್ಪರದ ಒಣ ಹುಲ್ಲಿನಂತೆ ಸ್ತಬ್ಧತೆಯ ಮೇಲೆ ಹರಡುತ್ತಿತ್ತು. ಪ್ರತಿಯೊಬ್ಬನೂ ಇನ್ನೊಬ್ಬನೊಡನೆ ಜಿದ್ದು ಕಟ್ಟಿದ್ದ. ಅವರ ಬೇರೆ ಬೇರೆ ಬದುಕುಗಳು ಆ ನೀಲೀ ಆಕಾಶದ ಹೊಳೆಯುವ ಪರದೆಯ ಮೇಲೆ ತಿರುಗುತ್ತಿದ್ದ ಕರಿ ಬಿಳಿ ಚುಕ್ಕಿಯಲ್ಲಿ ಸೇರಿಕೊಂಡಿದ್ದವು. ಕಟ್ಟೆಯ ಮೇಲಿನ ನೆರಳಿನಲ್ಲಿ ಪದಮಜೀ ತನ್ನ ಪೇಟಾ ಹಾಸಿದ ಮತ್ತು ಅಡ್ಡಾಗುತ್ತ ಧೋಂಡ್ಯಾನಿಗೆ ಹೇಳಿದ. ‘ಧೋಂಡ್ಯಾ, ನಾನು ಊಟಕ್ಕೆ ಬರೋದಿಲ್ಲಾಂತ ಹೇಳು ಹೋಗು ಮನೀ ಒಳಗ…’ ಈಗ ಎಲ್ಲರೂ ಎಳೆದ ದಾರದಂತಾಗಿದ್ದರು. ಓಣಿಯಲ್ಲಿ ಪ್ರಖರ ಬಿಸಿಲು ಹರಡಿತ್ತು ಮತ್ತು ಜನ ಅಡ್ಡಾಡುವುದು ಕಡಿಮೆಯಾಗಿತ್ತು. ನಾಲಿಗೆಯನ್ನು ಉದ್ದ ಹಿರಿದು ಭಸಾ ಭಸಾ ಒದರುತ್ತಿದ್ದ ನಾಯಿಯೊಂದು ಅಲ್ಲಿಗೆ ಬಂದಿತು ಮತ್ತು ಅಲ್ಲಿದ್ದ ನೀರಿನ ಡಬರಿಯಲ್ಲಿ ಬಾಯಿ ಹಾಕಿತು. ಸಣ್ಯಾ ಒಂದು ಕಲ್ಲು ಎತ್ತಿಕೊಂಡು ಅದರತ್ತ ಒಗೆದ.

ಕಥೆ : ಚಂದ್ರಾವಳ | ಮರಾಠಿ : ಜಿ. ಎ. ಕುಲಕರ್ಣಿ | ಕನ್ನಡಕ್ಕೆ : ಜಿ. ಎಸ್. ಆಮೂರ | ಸೌಜನ್ಯ : ದೇಶಕಾಲ ತ್ರೈಮಾಸಿಕ ಪತ್ರಿಕೆ

(ಭಾಗ 7)

ನಾಯಿಯ ಓಟದ ಭರಾಟೆಯಲ್ಲಿ ಶಾಂತತೆಯ ಒಂದು ತೆರೆ ಕರಗಿಹೋಯಿತು. ಆಕಾಶದ ನೀಲೀ ಉಗ್ರತೆಯ ಕೆಳಗೆ ಓಣಿಯ ತುಕಡಿ ತೇಕಹತ್ತಿತು. ಉಳಿದ ಎರಡು ತುತ್ತು ತಿನ್ನಲು ಇಪ್ಪತ್ನಾಲ್ಕು ಬೆರಳಿನವ ಬೂಟುಗಳನ್ನು ಅಲ್ಲಿಯೇ ಬಿಟ್ಟು ಮನೆಗೆ ಹೋದ. ಸಣ್ಯಾ ಮಾತ್ರ ಆ ದಿಕ್ಕಿನತ್ತಲೇ ನೋಡುತ್ತಿದ್ದ. ಬಿಸಿಲಿನ ಝಳದಿಂದ ಕಣ್ಣು ನೋಯಹತ್ತಿದಾಗ ಕೆಳಗೆ ನೋಡಿ ಕಣ್ಣು ಮುಚ್ಚುತ್ತಿದ್ದ. ಮಗ್ಗುಲಿನ ಮನೆಯಲ್ಲಿ ಮನುಷ್ಯರು ಮಾತಾಡಿದಂತೆ ಅವನ ನೆನಪಿನ ಮೂಲೆಯೊಂದರಲ್ಲಿ ಚಂದ್ರಾವಳಿ, ಬಿರಾದಾರ ಪಾಟೀಲ, ಗೌರೀ ಇವರೆಲ್ಲ ಮಾತಾಡುತ್ತಿದ್ದರು. ಅವರ ದನಿಗಳು ಅವನನ್ನು ಒಂದೇ ಸಮನೆ ಕಾಡುತ್ತಿದ್ದವು. ಇನ್ನೊಂದು ಕಡೆ ಚಂದ್ರಾವಳಿಯ ಬಗೆಗಿನ ಅವನ ಹೆದರಿಕೆಯಿಂದಾಗಿ ಮನಸ್ಸು ವ್ಯಗ್ರವಾಗಿತ್ತು. ಪದಮಜೀ ಮೋರೆ ಮೇಲೆತ್ತಿ ನೋಡಿದಾಗ ಧೋಂಡ್ಯಾ ಇನ್ನೂ ಅಲ್ಲಿಯೇ ಇದ್ದ. ‘ಹೋಗಲೇ, ನಾ ಊಟಾ ಮಾಡೋದಿಲ್ಲಾಂತ ಹೇಳಿ ಬಾ ಹೋಗು’. ಎಂದು ಅವನು ಮತ್ತೊಮ್ಮೆ ಕೂಗಿಕೊಂಡ. ಮುಖ ಸೊಟ್ಟ ಮಾಡಿಕೊಂಡು ಧೋಂಡ್ಯಾ ಎದ್ದ. ಉಳಿದ ಹುಡುಗರಿಗೆ ಏನೋ ಸನ್ನೆ ಮಾಡಿದ. ಅವರೆಲ್ಲರೂ ಅಲ್ಲಿಂದೆದ್ದು, ಪದಮಜೀಗೆ ಕಾಣದಂತೆ ಅಡ್ಡಗೋಡೆಯ ಹಿಂದೆ ಹೋಗಿ ಕುಳಿತರು.

ಬಿಸಿಲಿನ ವಸ್ತ್ರ ಸಡಿಲಾದಂತೆ ಧಗೆ ಕಡಿಮೆಯಾಯಿತು. ಗಾಳಿಯ ಒಂದೆರಡು ಸೆಳಕುಗಳೂ ಹಾಯ್ದು ಹೋದವು. ಶಾಲೆ ಬಿಡುವ ವೇಳೆಯಾದ್ದರಿಂದ ತುಂಬ ಗದ್ದಲವಾಗಬೇಕಿತ್ತು. ಆದರೆ ಹುಡುಗರು ಗಪ್ ಚಿಪ್ ಇದ್ದರು. ಯಾಕೆಂದರೆ, ಕೈಯಲ್ಲಿ ಕೀಲಿಕೈಗಳ ಗುಚ್ಛ ಹಿಡಿದುಕೊಂಡು ಗುರೂಜಿ ಬಾಗಿಲಲ್ಲಿ ನಿಂತಿದ್ದರು. ಧೋಂಡ್ಯಾ ಮತ್ತು ಅವನ ಗೆಳೆಯರು ಈಗ ರಸ್ತೆಗೆ ಬಂದರು. ಕಪಾಟಿಗೆ ಆತುಕೊಂಡು ಸಣ್ಯಾನೂ ಎದ್ದು ನಿಂತ. ಪದಮಜೀಯೂ ಎದ್ದ. ಆ„„„ ಎಂದು ದೀರ್ಘವಾಗಿ ಆಕಳಿಸಿದ ಮತ್ತು ಕಣ್ಣಿಗೆ ಕೈ ಅಡ್ಡ ಮಾಡಿ ಮೇಲೆ ನೋಡಿದ. ಆದರೆ ಚಂದ್ರಾವಳಿಯ ಕರಿ ಬಿಳೀ ಗರಿಗಳನ್ನು ನೋಡಿ ಅವನ ಕೈ ಒಮ್ಮೆಲೆ ಕೆಳಗೆ ಬಂದಿತು. ಗಾಂಜಾಬಡಕ ಬಾಬೂನಿಗೆ ನಿದ್ದೆ ಹತ್ತಿರಲಿಲ್ಲ. ಸತತ ಬೆನ್ನು ತುರಿಸುತ್ತ ಅವನು ಹಾಗೆಯೆ ಕುಳಿತಿದ್ದ.

‘ಸಣ್ಯಾ ನನಗೆ ಆ ಹೆಣ್ಣು ಪಾರಿವಾಳ ಕೊಟ್ಟು ಬಿಡು. ಐದು ರೂಪಾಯಿ ಕೊಡತೀನಿ. ಏನ ಮಾಡ್ತೀ ನೋಡು’. ತಿಳಿಹೇಳುವ ದನಿಯಲ್ಲಿ ಪದಮಜೀ ಹೇಳಿದ.

ಆದರೆ ಸಣ್ಯಾನ ಆನಂದ ಈಗ ಶಬ್ದಗಳ ಆಚೆ ತಲುಪಿತ್ತು. ಅವನ ಅಗಲ, ಒರಟು, ಕಪ್ಪು, ಶಾವಿಯ ಎಲೆಯಂತಿದ್ದ ಮುಖ ಒದ್ದೆಯಾದಂತೆ ಕಾಣುತ್ತಿತ್ತು. ಈಗ ಐದು ಗಂಟೆ ಕಳೆದುಹೋಗಿದ್ದವು ಮತ್ತು ಚಂದ್ರಾವಳಿ ಗಂಡು ಪಾರಿವಾಳವನ್ನು ಶಕ್ತಿಯಲ್ಲಿ ಸರಿಗಟ್ಟಿತ್ತು. ‘ಚಂದ್ರಾವಳಿ ಕೆಳಗೆ ಬರಲಿ ಪದಮಜೀ. ಬತ್ತಾಸದಿಂದ ಅವಳ ದೃಷ್ಟೀ ತೆಗೀತೀನಿ’ ಕಣ್ಣು ತೆರೆಯುತ್ತ ಸಣ್ಯಾ ಹೇಳಿದ. ‘ನೋಡು, ಆಕೀ ನಿನ್ನ ತಲೀ ಒಳಗೆ ಬೇವಿನ ರಸ ಹಿಂಡ್ಯಾಳ.’

ಧೋಂಡ್ಯಾ ಮತ್ತು ಅವನ ಜೊತೆಗಾರರ ಚೆಹರೆಗಳು ಸಂಪೂರ್ಣವಾಗಿ ಬಿದ್ದುಹೋಗಿದ್ದವು. ಹಾಗೂ ಅಡ್ಡ ಓಣಿಯ ಹುಡುಗರು ಆಗಲೇ ಒದರಾಟ ಚೀರಾಟ ಪ್ರಾರಂಭಿಸಿದ್ದರು. ಊಟ ಮಾಡಿ ಒಂದು ನಿದ್ದೆ ಹೊಡೆದ ಇಪ್ಪತ್ನಾಲ್ಕು ಬೆರಳಿನ ಬಾಳೂನೂ ಬಂದಿದ್ದ. ಅವಸರದಲ್ಲಿ ಅವನ ಕೋಟಿನ ಬಟನ್ನುಗಳು ಮೇಲ್ ಕೆಳಗೆ ಆಗಿದ್ದವು. ಅವನ ಬಾಯಿಂದ ದೊಡ್ಡ ಕೂಗು ಹೊರಬಿದ್ದ ಕೂಡಲೇ ಶಬ್ದಗಳ ಧೂಳಿಯೇ ಹರಡಿತು. ಸಬ್ಜೀ ಗಂಡು ಪಾರಿವಾಳದ ಆಕಾರ ಈಗ ದೊಡ್ಡದಾಗುತ್ತ ಹೋಯಿತು. ಸ್ವಲ್ಪ ವೇಳೆಯಲ್ಲಿ ಅದರ ಗಿರಕಿಗಳು ಎಷ್ಟು ಕೆಳಗೆ ಬಂದುವೆಂದರೆ ಅದರ ಹೊಟ್ಟೆಯ ಕೆಳಗಿನ ಕೆಂಪು ಬಣ್ಣ ಬಿಸಿಲಲ್ಲಿ ಹೊಳೆಯತೊಡಗಿತು. ಕಾಲಲ್ಲಿದ್ದ ಕೆಂಪು ಉಂಗುರ ರಕ್ತದ ಧಾರೆಯಂತೆ ಕಂಡಿತು. ಕೊನೆಗೆ ರೆಕ್ಕೆಗಳನ್ನು ಮಡಿಚುತ್ತ, ಗಾಳಿಯಲ್ಲಿ ತೇಲುತ್ತ ಅದು ಗುಡಿಯ ಶಿಖರದ ಮೇಲೆ ಇಳಿಯಿತು ಮತ್ತು ಕುತ್ತಿಗೆಯನ್ನು ಕಿಂಚಿತ್ ಹೊರಳಿಸಿ ಕೆಳಗೆ ನೋಡಿತು.

ಭಾಗ 5 : Literature: ನೆರೆನಾಡ ನುಡಿಯೊಳಗಾಡಿ; ‘ತಮ್ಮಾ, ಆ ಪಾರಿವಾಳ ಇನ್ನೂ ಬಚ್ಚಾ ಅದ, ಫುಕಟ ಯಾಕ ಅದಕ ಜಗಳಾ ಹಚ್ಚತೀ?’

ಪದಮಜೀ ಕಿಸೆಯಿಂದ ಐದು ರೂಪಾಯಿ ನೋಟು ತೆಗೆದು ಇಪ್ಪತ್ನಾಲ್ಕು ಬೆರಳಿನವನ ಕೈಯಲ್ಲಿ ತುರುಕಿದ. ಆದರೆ ಇಪ್ಪತ್ನಾಲ್ಕು ಬೆರಳಿನವನ ಲಕ್ಷ್ಯ ಅದರ ಕಡೆಗಿರಲಿಲ್ಲ. ಅವನ ತುಟಿ ಒದರಿ ಒದರಿ ಒಣಗಿ ಹೋಗಿದ್ದವು. ಮತ್ತು ಕಣ್ಣು ಹೊರಬಂದಂತೆ ಗರಗರ ತಿರುಗುತ್ತಿದ್ದವು. ‘ಪದಮಜೀ, ತಾ ಇಲ್ಲಿ ನಿನ್ನ ಪಟಕಾ. ಅದರ ಧ್ವಜ ಮಾಡ್ತೀನಿ. ಬೋಳು ಹೆಂಗಸಂತ! ಎಪ್ಪತ್ತೈದು ರೂಪಾಯಿ ಎಣಿಸೇನಿ! ಹೆಣ್ಣು ಪಾರಿವಾಳದ ಸಲುವಾಗಿ’ ಮೈ ಕುಣಿಸುತ್ತ, ತೊಡೆ ಚಪ್ಪರಿಸುತ್ತ ಅವನು ಹೇಳುತ್ತಿದ್ದ. ಸಣ್ಯಾನಂತೂ ಟಣ್ಣನೇ ಜಿಗಿದು ಬಿಟ್ಟ ಮತ್ತು ತನ್ನ ರುಮಾಲನ್ನು ಹವೆಯಲ್ಲಿ ಎತ್ತರಕ್ಕೆ ತೂರಿದ. ಅದು ತೇಲುತ್ತ ಕೆಳಗೆ ಬರುವಾಗ ವಿದ್ಯುತ್ ತಂತಿಗಳ ಮೇಲೆ ಬಿದ್ದಿತು. ಧೋಂಡ್ಯಾ ಮತ್ತು ಅವನ ಗೆಳೆಯರು ಚಪ್ಪಾಳೆ ಹಾಕಿದರು. ಹೋದರೆ ಹೋಯಿತು ಎಂಬರ್ಥದಲ್ಲಿ ಸಣ್ಯಾ ತೊಡೆ ಚಪ್ಪರಿಸಿಕೊಂಡ ಮತ್ತು ಕೆಳಗೆ ಕಾಳು ಹೆಕ್ಕುತ್ತಿದ್ದ ಲಠ್ಠ ಪಾರಿವಾಳಗಳ ನಡುವೆ ಮೊಹರಮ್‍ನಲ್ಲಿ ಹುಲಿ ಕುಣಿಯುವಂತೆ ಒಂದು ಕಾಲಿನ ಮೇಲೆ ದಣದಣ್ ಕುಣಿಯಲಿಕ್ಕೆ ಪ್ರಾರಂಭಿಸಿದ. ಅವನು ಬಾಯಿಯಿಂದ ಹಲಗೆಯ ಟಿಕೀಕ್ ಗಗಗ, ಟಿಕೀಕ್ ಗಗಗ ಸುರುವು ಮಾಡಿ ಪದಮಜೀಯ ಸುತ್ತಲೂ ಎಷ್ಟು ಗದ್ದಲ ಹಾಕಿದನೆಂದರೆ ಅವನ ಕಿವಿ ಹಾಳಾಗಿ ಹೋದವು. ಇಬ್ಬರು ಹುಡುಗರಂತೂ ಗಣೇಶ ಚತುರ್ಥಿಯ ಪಟಾಕಿಗಳನ್ನು ಹಾರಿಸಿದರು. ಅವುಗಳಲ್ಲಿ ಮೂರು ಪುಸಕ್ಕೆಂದರೂ ಒಂದು ನಾಚುತ್ತಲೇ ಮೇಲೆ ಹಾರಿತು.

ಈ ಎಲ್ಲ ಹುಚ್ಚು ಸಂಭ್ರಮದ ದಂಡೆಯಲ್ಲಿ ಗಾಂಜಾಬಡಕ ಬಾಬೂ ಸುಮ್ಮನೆ ಕುಳಿತಿದ್ದ. ಅವನು ತನ್ನ ಮಂಡೆಯನ್ನು ಬದಲಿಸಿರಲಿಲ್ಲ. ಅಂಗಳಕ್ಕೆ ಬರುವುದಂತೂ ದೂರವೇ ಉಳಿಯಿತು. ತನಗೆ ಇನ್ನೊಂದು ರೂಪಾಯಿ ದೊರೆಯುತ್ತದೆ ಎಂದು ಅವನಿಗೆ ತಿಳಿದಿತ್ತೋ ಇಲ್ಲವೋ ಯಾರಿಗೆ ಗೊತ್ತು? ಯಾವ ವಿಷಯದಲ್ಲಿಯೂ ಮನುಷ್ಯರು ಇಷ್ಟು ಆನಂದ ತೋರಬಾರದು ಎಂದು ಅವನಿಗೆನಿಸಿತು. ಊರಿನ ಸುಖದುಃಖಗಳೊಡನೆ ಸಂಬಂಧವಿರದ ಅಗಸೀಕಲ್ಲಿನಂತೆ ಅವನು ತೆಪ್ಪಗೆ ಕುಳಿತಿದ್ದ. ಆಜೂಬಾಜೂ ನಡೆದ ಗೊಂದಲ ಅವನತನಕ ಬಂದರೂ ಅದು ಅವನನ್ನು ಮುಟ್ಟದೆ ಹಾಗೇ ಹೋಗುತ್ತಿತ್ತು. ಅವನ ಕೆಂಪು ಕಣ್ಣುಗಳಲ್ಲಿ ಆನಂದದ ಕಣವೂ ಇರಲಿಲ್ಲ. ಅವನ ಆಕಾರಹೀನ ಮುಖವನ್ನು ಸುಖದ ಕೈ ಒರೆಸಿರಲಿಲ್ಲ.

ಆಗ ಏನೋ ಆಯಿತು ಮತ್ತು ಇದೆಲ್ಲ ಒಡೆದುಹೋಯಿತು. ಇಪ್ಪತ್ನಾಲ್ಕು ಬೆರಳಿನವ ಪಟಕ್ಕನೆ ಹಣೆಯ ಮೇಲೆ ಕೈಯಿಂದ ಹೊಡೆದುಕೊಂಡ. ಅವನ ಮೇಲೆತ್ತಿದ ಕೈ ಜೀವ ಕಳೆದುಕೊಂಡಂತೆ ಕೆಳಗೆ ಬಿದ್ದಿತು. ಪೆಟ್ಟು ತಿಂದವರಂತೆ ಹುಡುಗರೂ ಗಪ್ಪಾದರು. ಸಣ್ಯಾನ ಢಿಂಗಣ ಕುಣಿತ ಮಾತ್ರ ನಡೆದೇ ಇದ್ದಿತು. ಇಪ್ಪತ್ನಾಲ್ಕು ಬೆರಳಿನ ಬಾಳ, ಅವನನ್ನು ಮುಂದೆ ಎಳೆದ ಮತ್ತು ಮೇಲೆ ಬೊಟ್ಟು ಮಾಡಿ ತೋರಿಸಿದ. ಮೇಲೆ ತೇಜಸ್ವಿಯಾದ, ಕಣ್ಣು ಹಿಗ್ಗಿಸುವಂಥ ನೀಲೀ ಬಣ್ಣದ ಗುಮ್ಮಟ ಸ್ವಚ್ಛವಾಗಿ ಹೊಳೆಯುತ್ತಿತ್ತು. ಒಂದೆರಡು ಕಡೆ ಮುದುಕಿಯ ಕೂದಲಿನಂತೆ ವಿರಳವಾಗಿ ಮೋಡಗಳು ಅಂಟಿಕೊಂಡಿದ್ದವು. ತನ್ನ ಹತ್ತಿರ ಅಡಗಿಸಿಡುವುದ್ಯಾವುದೂ ಇಲ್ಲ ಎನ್ನುವಂಥ ಮಾತಿಲ್ಲದ ಶಬ್ದ ಆ ಶಾಂತ, ವಿಶಾಲ ಕಣ್ಣುಗಳನ್ನು ತುಂಬಿ ನಿಂತಿತ್ತು. ತೀರ ಮಧ್ಯದಲ್ಲಿ ಚಂದ್ರಾವಳಿ ವೇಗವಾಗಿ ತಿರುಗುತ್ತಿದ್ದಳು. ಮೋಡಗಳ ಹತ್ತಿರ ಬಂದಾಗ ಒಂದು ಕ್ಷಣ ಅವಳು ಕಣ್ಣುಗಳಿಂದ ಮರೆಯಾಗುತ್ತಿದ್ದಳು. ಆದರೆ ಕೂಡಲೇ ಅವಳ ಬೆಳಕು ಮತ್ತೆ ಹೊಳೆಯಲಾರಂಭಿಸುತ್ತಿತ್ತು. ಇಡೀ ಆಕಾಶದ ದೃಷ್ಟಿ ಆ ನಾಜೂಕು ಚುಕ್ಕೆಯ ಮೇಲೆ ನೆಟ್ಟಂತಿತ್ತು. ಮೇರೆ ಇಲ್ಲದ ಆ ವಿಸ್ತಾರದಲ್ಲಿ ಏಕಾಕಿಯಾಗಿ, ನಿರ್ಭಯವಾಗಿ, ಡೌಲಿನಿಂದ ಹಾರಾಡುವ ಚಂದ್ರಾವಳಿಯನ್ನು ನೋಡಿ ಸಣ್ಯಾನಿಗೆ ಒಣಗಿದ ಗುಂಜೀಕಾಳಿನಂತೆ ಮುಕ್ತತೆಯ ಅನುಭವವಾಯಿತು. ಮತ್ತು ಅವನಿಂದ ಗುಂಜೀಕಾಯಿಯ ಕಳಕಳ ಶಬ್ದ ಹೊರಬಿದ್ದಿತು.

‘ಬಾಳೂ, ಚಂದ್ರಾವಳಿ ಅಂದ್ರ ರತ್ನ ಇದ್ದಾಳ ರತ್ನ! ಆ ಪದಮಜೀ…’ ಆಗ ಅವನಿಗೆ ಬಾಳೂ ತನಗೆ ಏನನ್ನು ತೋರಿಸುತ್ತಿದ್ದಾನೆ ಎನ್ನುವುದು ಲಕ್ಷ್ಯಕ್ಕೆ ಬಂದಿತು. ಅವನ ಉಳಿದ ಮಾತುಗಳೆಲ್ಲ ಅಲ್ಲಿಯೇ ಉಳಿದವು. ಮತ್ತು ಮುಖದ ಮೇಲಿನ ಆನಂದ ಹಳಸಿದಂತೆ ಭಾಸವಾಯಿತು. ಚಂದ್ರಾವಳಿಯ ಬೊಗರೆಯಂಥ ಬಿಂಬದ ಸುತ್ತ ಸಾಕಷ್ಟು ದೂರದಲ್ಲಿ ಕಪ್ಪು ಗೋಲವೊಂದು ತಿರುಗುತ್ತಿತ್ತು. ಅದರ ಸುತ್ತುಗಳು ಇನ್ನೂ ದೂರವಿದ್ದವು. ಆದರೆ, ಅದರ ನಿಃಶಬ್ದ, ನಿಶ್ಚಲ ತಿರುಗುವುದರಲ್ಲಿ ಭೀಷಣವಾದಂಥದೇನೋ ಇದ್ದಿತು. ಚೂರಿ ಹಾಕುವ ಮೊದಲು ಒಂದು ಕ್ಷಣ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಂತೆ ಆ ತಣ್ಣನ್ನ ಕ್ರಿಯೆಯಲ್ಲಿ ಕ್ರೌರ್ಯವಿತ್ತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 6 : Literture: ನೆರೆನಾಡ ನುಡಿಯೊಳಗಾಡಿ; ನಾ ಜೂಜು ಆಡೋದಿಲ್ಲಪಾ, ಸಾಲಾ ಬೇಕಾಗಿದ್ರ ನಿನಗ ಎಂಟಾಣೆ ಕೊಡ್ತೀನಿ

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 12:37 pm, Fri, 11 March 22

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು