Yashwant chittal’s Death Anniversary: ಅಭಿಜ್ಞಾನ; ‘ಯಾರ ಕಥೆ ಯಾರು ಹೇಳಿದ್ದು?’
Kannada Short Story : ಬಾವಿಯ ನೀರಿನಲ್ಲಿ ಧ್ಯಾನದಲ್ಲಿ ಮುಳುಗಿದವನಂತೆ ನಿಂತವನು ಮನೆಯ ಚಿಕ್ಕ ಯಜಮಾನ ಸಣ್ಣಪ್ಪ ನಾಯ್ಕ ಎಂದು ಗೊತ್ತಾಯಿತು. ತಪಶ್ಚರ್ಯಕ್ಕೆ ಎಲ್ಲ ಬಿಟ್ಟು ಹಿತ್ತಲ ಬಾವಿಯನ್ನು ಯಾಕೆ ಆರಿಸಿದನೋ, ಯಾರಿಗೂ ತಿಳಿಯಲಿಲ್ಲ.

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಅಂಕಣ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡವರ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
ಯಶವಂತ ಚಿತ್ತಾಲ ಅವರ ‘ಯಾರ ಕಥೆ ಯಾರು ಹೇಳಿದ್ದು? ಕಥೆಯಿಂದ ಆಯ್ದ ಭಾಗ.
ಈ ಕಥೆ ನಡೆದು ಹಲವು ವರ್ಷಗಳು ಸಂದಿವೆ. ನೆನೆದರೆ ಮಾತ್ರ ನಿನ್ನೆಯಷ್ಟೇ ನಡೆದದ್ದು ಅನ್ನಿಸುತ್ತದೆ.
ನಮ್ಮೂರಿನ ಸಣ್ಣಪ್ಪ ನಾಯ್ಕ ಒಂದು ದಿನ ತನ್ನ ಹಿತ್ತಲ ಬಾವಿಯಲ್ಲಿ ಬಿದ್ದ. ಕಾಲು ಜಾರಿ ಬಿದ್ದನೋ ತಾನಾಗಿ ಹಾರಿದನೋ ಜನರಿಗೆ ಕೊನೆಗೂ ಗೊತ್ತಾಗಲಿಲ್ಲ. ನಸುಕಿನಲ್ಲಿ ಬೆಳಕಿನ್ನೂ ಕಣ್ಣುತಿಕ್ಕಿಕೊಳ್ಳುತ್ತಿರುವ ಹೊತ್ತಿಗೆ ಬಚ್ಚಲ ಹಂಡೆಗೆ ನೀರು ತುಂಬಲೆಂದು ಬಾವಿಗೆ ಹೋಗಿದ್ದ ಇವನ ಹೆಂಡತಿ, ಬಾವಿಯ ನೀರಿನಲ್ಲಿ ಯಾರೋ ನಿಂತದ್ದು ಕಂಡಂತಾಗಿ, ಬೊಬ್ಬೆ ಹೊಡೆದಳು. ಮನೆಯ ಜನ ದಡಬಡಿಸಿ ಎದ್ದು ಓಡುತ್ತ ಬಂದು ನೋಡಿದಾಗ ಬಾವಿಯ ನೀರಿನಲ್ಲಿ ಧ್ಯಾನದಲ್ಲಿ ಮುಳುಗಿದವನಂತೆ ನಿಂತವನು ಮನೆಯ ಚಿಕ್ಕ ಯಜಮಾನ ಸಣ್ಣಪ್ಪ ನಾಯ್ಕ ಎಂದು ಗೊತ್ತಾಯಿತು. ತಪಶ್ಚರ್ಯಕ್ಕೆ ಎಲ್ಲ ಬಿಟ್ಟು ಹಿತ್ತಲ ಬಾವಿಯನ್ನು ಯಾಕೆ ಆರಿಸಿದನೋ, ಯಾರಿಗೂ ತಿಳಿಯಲಿಲ್ಲ. ಸುದ್ದಿ ಮಾತ್ರ ಹೊತ್ತು ನೆತ್ತಿಗೇರುವ ಹೊತ್ತಿಗೆ ಹಳ್ಳಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಹರಡಿತು.
ನೀರಿನಲ್ಲಿ ನಿಂತ ಭಂಗಿಯೇನೋ ತಪಶ್ಚರ್ಯದ್ದಾಗಿತ್ತು. ಆದರೆ ಸಣ್ಣಪ್ಪ ಅಂಥ ಕಠಿಣ ವ್ರತವನ್ನು ಕೈಕೊಳ್ಳುವವರ ಪೈಕಿ ಆಗಿರಲೇ ಇಲ್ಲ: ಕೈಕೊಳ್ಳುವುದಕ್ಕೆ ಕಾರಣವೂ ಇರಲಿಲ್ಲ. ಜನ ನಕ್ಕು ಈ ಸೂಚನೆಯನ್ನು ತಳ್ಳಿ ಹಾಕಿದರು. ಕೆಲವರು ಇದು ಆತ್ಮಹತ್ಯೆಯ ಪ್ರಯತ್ನವಾಗಿರಬಹುದೇ ಎಂದು ಶಂಕಿಸಿದರು. ಅಪ್ಪನೊಂದಿಗೆ ಹೆಂಡತಿಯೊಂದಿಗೆ ಮೇಲಿಂದ ಮೇಲೆ ನಡೆಯುತ್ತಿದ್ದ ಜಗಳಗಳ ಬಗ್ಗೆ ಕೇಳಿ ಗೊತ್ತಿತ್ತಾದರೂ ಸಣ್ಣಪ್ಪ ಇಂಥ ಜಗಳಗಳ ಸಲುವಾಗಿ ಆತ್ಮಹತ್ಯೆಯಂಥ ವಿಕೋಪಕ್ಕೆ ಹೋಗಬಹುದೆಂದು ಊರವರು ನಂಬದಾದರು. ಹಿತ್ತಲ ಬಾವಿ ಜೀವ ತೆಗೆದುಕೊಳ್ಳುವಂಥ ಅಕೃತ್ಯಕ್ಕೆ ಸರಿಯಾದ ಜಾಗವೂ ಆಗಿರಲಿಲ್ಲ. ಮೇಲಾಗಿ ಆ ಬಾವಿಯಲ್ಲಿ ಸಣ್ಣಪ್ಪನಂಥ ಆರು ಫೂಟು ಎತ್ತರದ ಆಜಾನುಬಾಹು ಹೋಗಲಿ ಐದು ಫೂಟಿನ ಕುಳ್ಳ ಕೂಡ ನಿಂತ ಭಂಗಿಯಲ್ಲಿ ಮುಳುಗುವುದು ಸಾಧ್ಯವಿರಲಿಲ್ಲ. ಬಾವಿಯಲ್ಲಿ ನೀರು ಇದ್ದದ್ದೇ ನಾಲ್ಕು ಪೂಟು ಆಳದ್ದು! ಅಡ್ಡ ಮಲಗಿದರೆ ಇಲ್ಲವೇ ಪದ್ಮಾಸನದಲ್ಲಿ ಕುಳಿತರೆ ಮುಳುಗುವುದು ಶಕ್ಯವಿತ್ತು. ಆದರೆ ಅಂಥ ಭಂಗಿಯಲ್ಲಿ ಜೀವ ತೆಗೆದುಕೊಂಡವರ ಬಗ್ಗೆ ನಮ್ಮ ಹಳ್ಳಿಯ ಜನಕ್ಕೆ ಕೇಳಿಯೂ ಗೊತ್ತಿರಲಿಲ್ಲ. ಸಣ್ಣಪ್ಪ ನಾಯ್ಕನನ್ನೇ ಕೇಳಿ ತಿಳಿಯಬಹುದಿತ್ತು. ಆದರೆ ಅಂಥ ಧೈರ್ಯ ಯಾರಿಗೂ ಇರಲಿಲ್ಲ. ಅವನ ಆಕಾರ ನೋಡಿಯೇ ಹೆದರುತ್ತಿದ್ದ ಜನ ಅವನಿಂದ ದೂರ ಉಳಿದರು. ಮನೆಯ ಜನ ಕೂಡ ಇಂಥದ್ದು ನಡೆಯಲೆ ಇಲ್ಲ ಎನ್ನುವಂತೆ ನಡೆದುಕೊಂಡರು. ಒಟ್ಟಿನಲ್ಲಿ ತಾನು ಬಾವಿಯ ನೀರಲ್ಲಿ ನಿಂತಿರಲಿ ಇಲ್ಲಾ ಮಲಗಿರಲಿ, ನಿನ್ನಪ್ಪನ ಗಂಟೇನು ಹೋಗಲಿಲ್ಲ ಎಂದು ಕೇಳುವ ಧರ್ತಿಯಲ್ಲಿ ದುರುಗುಟ್ಟಿ ನೋಡುವವನ ದೃಷ್ಟಿಯನ್ನು ಎದುರಿಸುವ ಛಾತಿ ಯಾರಿಗೂ ಇಲ್ಲದ್ದಕ್ಕೆ ಈ ಪ್ರಕರಣ ನಿಗೂಢವಾಗಿಯೇ ಉಳಿಯಿತು.
ಇದನ್ನೂ ಓದಿ : Yashwant Chittal: ವಿಲಂಬಿತ ಲಯ ತಂತ್ರಮಾಂತ್ರಿಕ ಯಶವಂತರ ‘ಚಿತ್ತಾಲತನ’

ಚಿತ್ತಾಲರ ಸಮಗ್ರ ಕಥೆಗಳು- ಭಾಗ 1
ನಾನು, ನನ್ನ ಗೆಳೆಯರು ಆಗಿನ್ನೂ ಸಾಲೆ ಕಲಿಯುತ್ತಿದ್ದ ಹುಡುಗರು. ಈ ಪ್ರಸಂಗದ ಬಗ್ಗೆ ಪರಸ್ಪರರಿಗೆ ಪ್ರಶ್ನೆ ಹಾಕಿದೆವೇ ಹೊರತು ಉತ್ತರ ಹುಡುಕುವ ಸಾಹಸ ಮಾಡಲಿಲ್ಲ. ಯಾರ ಮೇಲೂ ಸಿಟ್ಟುಗೊಂಡು ಮೈಬಿಸಿಯಾದದ್ದಕ್ಕೆ ಮೈ ಕೊರೆಯುವ ಚಳಿಯಲ್ಲೂ ಬಾವಿಯ ನೀರಿಗೆ ಇಳಿದಿರಬೇಕು ಎಂದು ನಮ್ಮ ನಮ್ಮಲ್ಲೇ ಮಾತಾಡಿಕೊಂಡು ನಕ್ಕು ಸುಮ್ಮಗಾದೆವು.
ಇದಾದ ಸುಮಾರು ಒಂದು ವರ್ಷದ ಮೇಲೆ ಅಪ್ಪ-ಅಮ್ಮ ನಾನು ಹನೇಹಳ್ಳಿಯನ್ನು ಬಿಟ್ಟು ಧಾರವಾಡಕ್ಕೆ ಹೋಗಿ ಅಲ್ಲಿ ನೆಲಸಿದ್ದ ಅಣ್ಣನನ್ನು ಕೂಡಿಕೊಂಡೆವು. ನಾನು ಅಲ್ಲಿಂದಲೇ ಮುಂದೆ ಹೆಚ್ಚಿನ ಶಿಕ್ಷಣಕ್ಕಾಗಿ ಮುಂಬಯಿಗೆ ಹೋದವನು, ಶಿಕ್ಷಣ ಮುಗಿಸಿ ಅಲ್ಲಿಯೇ ನೌಕರಿ ಹಿಡಿದೆ. ಮದುವೆಯಾದೆ. ಹಳ್ಳಿ ಬಿಟ್ಟ ಹದಿನಾಲ್ಕು ವರ್ಷಗಳ ಮೇಲೆ ಹೆಂಡತಿಗೆ ನಾನು ಬಾಲ್ಯದಲ್ಲಿ ಓಡಾಡಿದ ಜಾಗಗಳನ್ನು ತೋರಿಸಲೆಂದು ಅವಳ ಜೊತೆಗೆ ಹಳ್ಳಿಗೆ ನಡೆದೆ. ಹಳ್ಳಿಯಲ್ಲೀಗ ನಮ್ಮ ಮನೆಯಿಲ್ಲ. ನೋಡುವವರಿಲ್ಲದೇ ಮನೆ ಕುಸಿದದ್ದು, ಹಿತ್ತಲು ಹಾಳು ಸುರಿಯುತ್ತಿದ್ದದ್ದು ಅಣ್ಣ-ಅತ್ತಿಗೆಯರಿಂದ ಕೇಳಿ ಗೊತ್ತಿತ್ತು. ನಾವು ಈ ಬಾರಿ ಇಳಕೊಂಡದ್ದು ಹನೇಹಳ್ಳಿಯ ನೆರೆಹಳ್ಳಿಯಾದ ಮಾಸ್ಕೇರಿಯಲ್ಲಿದ್ದ ದೊಡ್ಡಪ್ಪನ ಮನೆಯಲ್ಲಿ, ದೊಡ್ಡಪ್ಪನ ಮಗ ವಿಠಲರಾಯ ನನಗಿಂತ ಒಂದೆರಡು ವರ್ಷ ಚಿಕ್ಕವನು. ಹತ್ತಿರದ ಹಳ್ಳಿ ಬಂಕಿಕೊಡ್ಲದಲ್ಲಿ ಹೊಸತಾಗಿ ತೆರೆದ ಹಾಯಸ್ಕೂಲಿನಲ್ಲಿ ಶಿಕ್ಷಕನಾಗಿದ್ದಾನೆ.
ಹಳ್ಳಿಗೆ ಬಂದ ದಿನವೇ ನನ್ನ ಹೆಂಡತಿ ವಿಠಲರಾಯನ ಹೆಂಡತಿಯ ಜೊತೆಗೆ ಗಂಗಾವಳಿ ಹೊಳೆಯನ್ನೂ ಅದರ ದಂಡೆಯ ಮೇಲೆ ನಿಂತ ಗಂಗೆಯ ದೇವಸ್ಥಾನವನ್ನೂ ನೋಡಲು ಹೋದಳು. ನಾನು ಚಿಕ್ಕಂದಿನಲ್ಲಿ ನನ್ನ ಲಂಗೋಟಿ ಗೆಳೆಯನಾಗಿದ್ದ ಸುಬ್ರಾಯನನ್ನು ಕಾಣಲು ಹೋದೆ.
ಸೌಜನ್ಯ : ಪ್ರಿಸಂ ಬುಕ್ಸ್
ಇದನ್ನೂ ಓದಿ : Music : ಅಭಿಜ್ಞಾನ; ನಮ್ಮ ಭೇಟಿ ಅಪರೂಪ ಹಾಗಾಗಿ ಇಬ್ಬರ ಕಣ್ಣುಗಳೂ ತುಂಬಿಕೊಂಡುಬಿಡುತ್ತಿದ್ದವು