Music : ಅಭಿಜ್ಞಾನ; ನಮ್ಮ ಭೇಟಿ ಅಪರೂಪ ಹಾಗಾಗಿ ಇಬ್ಬರ ಕಣ್ಣುಗಳೂ ತುಂಬಿಕೊಂಡುಬಿಡುತ್ತಿದ್ದವು
Western Musicians : ಹೆಚ್ಚಿನ ಪಾಶ್ಚಿಮಾತ್ಯ ಸಂಗೀತಗಾರರು ಕಟ್ಟಾ ಸಂಪ್ರದಾಯವಾದಿಗಳು. ಏಕೆಂದರೆ ಅವರ ಸಂಗೀತ ತುಂಬಾ ನಿಖರ. ಮನೋಧರ್ಮದಿಂದ ಕಲ್ಪಿಸಿಕೊಂಡು ನುಡಿಸುವ ಪರಿಪಾಠ ಅವರಲ್ಲಿರಲಿಲ್ಲ. ಹಾಗಾಗಿ ಅವರಿಗೆ ಆತ್ಮವಿಶ್ವಾಸ, ಅಹಂ ಎರಡೂ ತುಂಬಾ ಮುಖ್ಯ ಗುಣಗಳು.
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಅಂಕಣ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡವರ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
‘ರಾಗಮಾಲಾ’ ಪ್ರಕಟಿಸಿರುವ ‘ಪಂ. ರವಿಶಂಕರ್’ ಪುಸ್ತಕ ಮಾಲಿಕೆಯಿಂದ ಆಯ್ದ ಭಾಗ.
1952ರಲ್ಲಿ ಯಹೂದಿ ಮೆನುಹಿನ್ ಮತ್ತವರ ಪತ್ನಿ ಡಯಾನಾ ಭಾರತಕ್ಕೆ ಬಂದಿದ್ದರು. ಆಕಾಶವಾಣಿಯ ಡೈರೆಕ್ಟರ್ ಜನರಲ್ ಮನೆಯಲ್ಲಿ ಮೆನುಹಿನ್ ಮುಂದೆ ಸಿತಾರ್ ನುಡಿಸಲು ನನಗೆ ಹೇಳಿದ್ದರು. ನನಗೆ ಮೆನುಹಿನ್ ಮತ್ತವರ ಸಂಗೀತದ ಪರಿಚಯ ಈಗಾಗಲೇ ಇತ್ತು. ನಾನು ಪ್ಯಾರಿಸ್‌ನಲ್ಲಿ ನಮ್ಮಣ್ಣನ ಮನೆಯಲ್ಲಿದ್ದಾಗ ಅವರು ತಮ್ಮ ಸಹೋದರಿಯೊಂದಿಗೆ ಅಲ್ಲಿಗೆ ಬಂದಿದ್ದರು. ಆಗ ಅವರಿಗೆ 17ವರ್ಷ ಮತ್ತು ನನಗೆ 13 ವರ್ಷ. ಅಂದಿನ ಅವರ ಪಿಯಾನೋವಾದನವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅವರಿಗೆ ನನ್ನ ನೆನಪಿರುವುದು ಸಾಧ್ಯವಿಲ್ಲ. ಆದರೆ 1952ರಲ್ಲಿ ಅವರಿಲ್ಲಿಗೆ ಬಂದಾಗ ನಮ್ಮ ಪರಿಚಯ ಚೆನ್ನಾಗಿ ಆಯಿತು. ಅವರಿಗೆ ಭಾರತೀಯ ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು. ನಮ್ಮ ಮೊದಲ ಪರಿಚಯದಲ್ಲೇ ನಾವಿಬ್ಬರೂ ಸಂಗೀತಗಾರರಾಗಿ ಹಾಗೂ ಗೆಳೆಯರಾಗಿ ಪರಸ್ಪರ ತುಂಬಾ ಹತ್ತಿರವಾಗಿಬಿಟ್ಟೆವು.
ನಂತರದಲ್ಲೂ ಅವರು ಹಲವು ಬಾರಿ ಭಾರತಕ್ಕೆ ಈ ಸಂಗೀತವನ್ನು ಚೆನ್ನಾಗಿ ಅರ್ಥಮಾಡಿಕೊಂಡು, ಕಲಿಯುವುದಕ್ಕಾಗಿ ಬಂದರು. ಅವರು ನನ್ನನ್ನು ಗುರು ಎಂದು ಕರೆಯುತ್ತಾರೆ. ನಿಜ ಹೇಳಬೇಕೆಂದರೆ ಆಗೆಲ್ಲಾ ನನಗೆ ತುಂಬಾ ಮುಜುಗರವೆನಿಸುತ್ತದೆ. ಸುಮಾರು 50ರ ದಶಕದ ಮೊದಲ ಭಾಗದಲ್ಲಿ ವಿಲ್‌ಹೆಮ್ ಫರ್ವಾಂಗ್ಲರ್ ಅವರ ರಚನೆಯೊಂದನ್ನು ನುಡಿಸುವ ಬಗ್ಗೆ ಯಹೂದಿ ತುಂಬ ಉತ್ಸುಕರಾಗಿದ್ದರು. ಭಾರತೀಯ ರಾಗವೊಂದನ್ನು ಆಧರಿಸಿ ಅದನ್ನು ರಚಿಸಿದ್ದರು. ಯಹೂದಿಯವರಿಗೆ ನಾನು ಅದನ್ನು ನುಡಿಸಬೇಕು ಎಂದು ತುಂಬಾ ಆಸೆಯಿತ್ತು. ಹಾಗಾಗಿ ನನ್ನೊಡನೆ ಅದರ ಬಗ್ಗೆ ಮಾತನಾಡಿದರು. ಪಾಶ್ಚಿಮಾತ್ಯನೊಬ್ಬನ ದೃಷ್ಟಿಯಿಂದ ನೋಡಿದಾಗ ಅದು ತುಂಬಾ ಸೊಗಸಾಗಿತ್ತು. ಆದರೆ ಭಾರತೀಯನೊಬ್ಬನ ದೃಷ್ಟಿಯಿಂದ ನೋಡಿದರೆ ಅದು ತುಂಬ ಬಾಲಿಶವೆನಿಸುತ್ತಿತ್ತು. ಕೊನಗೆ ಆ ರಾಗವನ್ನು ಬದಲಾಯಿಸದೆ ಅದನ್ನು ಪುನರಚಿಸಿದೆ.
ಇದನ್ನೂ ಓದಿ : Literature: ಅಭಿಜ್ಞಾನ; ತೋಬ್ ತೇಕ್ ಸಿಂಗ್ ಪಾಕಿಸ್ತಾನದಲ್ಲಿ ಇದೆಯೋ, ಭಾರತದಲ್ಲಿ ಇದೆಯೋ? ಯಾರಿಗೂ ಗೊತ್ತಿರಲಿಲ್ಲ
ಬೇರೆ ಬೇರೆ ಸಂಗೀತ ಪದ್ಧತಿಗಳ ಮೂಲವನ್ನು ಹುಡುಕಿ ಅರಿಯುವುದು ನಮ್ಮಿಬ್ಬರಿಗೂ ಖುಷಿ ಕೊಡುತ್ತಿದ್ದ ವಿಚಾರವಾಗಿತ್ತು. ಆ ವರ್ಷ ನಾವಿಬ್ಬರೂ ಜಿಪ್ಪಿ ಸಂಗೀತದ ಮೂಲವನ್ನು ಒಟ್ಟಿಗೆ ಕುಳಿತುಕೊಂಡು ತಿಳಿದುಕೊಂಡೆವು. ಯಹೂದಿ ಸದಾ ಕೆಲಸ ಮಾಡುತ್ತಿರುವ ಜೇನುಹುಳದಂತೆ, ಅವರ ದಿನಚರಿಯನ್ನು ನೆನಸಿಕೊಂಡರೇ ನನಗೆ ಭಯವಾಗಿಬಿಡುತ್ತದೆ. ಬೆಳಿಗ್ಗೆ ಬ್ರಸೆಲ್ನಲ್ಲಿ ನುಡಿಸುತ್ತಿರುತ್ತಾರೆ ಅದೇ ಸಂಜೆ ಪ್ಯಾರಿಸ್ಸಿನಲ್ಲಿ ನುಡಿಸುತ್ತಾರೆ. ಮರುದಿನ ವಿಯನ್ನಾದಲ್ಲಿ ಅದರ ಮರುದಿನ ದಕ್ಷಿಣ ಅಮೆರಿಕದಲ್ಲಿ. ಇದು ನನ್ನ ಕಲ್ಪನೆಗೂ ಮೀರಿದ್ದು. ಇದೆಲ್ಲಾ ಅವರಿಗೆ ಹೇಗೆ ಸಾಧ್ಯವಾಗುತ್ತದೋ ಗೊತ್ತಿಲ್ಲ. ನಮ್ಮಿಬ್ಬರ ಸಂಸ್ಕೃತಿ ಮತ್ತು ಸಂಗೀತ ಎರಡು ಬೇರೆಯಾದರೂ ನನಗೆ ಯಹೂದಿ ಸಾಂಗತ್ಯ ನನಗೆ ಎಂದೂ ಕಿರಿಕಿರಿ ಎನಿಸಿಲ್ಲ. ನಾನೀವರೆಗೆ ಭೇಟಿಯಾಗಿದ್ದ ಬೇರೆಲ್ಲಾ ಪಾಶ್ಚಿಮಾತ್ಯ ಸಂಗೀತಗಾರರಿಗಿಂತಲೂ ಯಹೂದಿ ಭಿನ್ನ ಎಂದು ಅರಿವಾಗಿದೆ.
ಸಾಮಾನ್ಯವಾಗಿ ಹೆಚ್ಚಿನ ಪಾಶ್ಚಿಮಾತ್ಯ ಸಂಗೀತಗಾರರು ಕಟ್ಟಾ ಸಂಪ್ರದಾಯವಾದಿಗಳು. ಏಕೆಂದರೆ ಅವರ ಸಂಗೀತ ತುಂಬಾ ನಿಖರವಾಗಿರುತ್ತದೆ. ಮನೋಧರ್ಮದಿಂದ ಕಲ್ಪಿಸಿಕೊಂಡು ನುಡಿಸುವ ಪರಿಪಾಠ ಅವರಲ್ಲಿರಲಿಲ್ಲ. ಹಾಗಾಗಿ ಅವರಿಗೆ ಆತ್ಮವಿಶ್ವಾಸ ಹಾಗೂ ಅಹಂ ಎರಡೂ ತುಂಬಾ ಮುಖ್ಯವಾದ ಗುಣಗಳು. ಯಹೂದಿಯಲ್ಲಿ ಕಾಣುವ ವಿನಯ ತುಂಬಾ ಅಪರೂಪದ ಗುಣ. ಯಹೂದಿಯಲ್ಲಿ ನನಗೆ ಅತ್ಯಂತ ಪ್ರಿಯವೆನಿಸಿರುವುದೂ ಅದೇ ಗುಣ. ನಾವು ತುಂಬ ದಿನಗಳ ನಂತರ ಭೇಟಿಯಾಗುತ್ತಿದ್ದೆವು. ಆಗೆಲ್ಲಾ ನಮ್ಮಿಬ್ಬರಿಗೂ ಕಣ್ಣಲ್ಲಿ ನೀರು ಬಂದುಬಿಡುತ್ತಿತ್ತು. ಈ ಪ್ರಪಂಚದಲ್ಲಿ ಬೇರೆಲ್ಲರಿಗೂ ಯಹೂದಿ ಮೆನುಹಿನ್ ಎಂದರೆ ವಿಶೇಷವಾದ ಗಣ್ಯ ವ್ಯಕ್ತಿ. ಆದರೆ ನನಗೆ ಮಾತ್ರ ಅವರು ಎಂದೆಂದೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿರುವ ಆತ್ಮಸಖ.
ಸೌಜನ್ಯ : ‘ರಾಗಮಾಲಾ’ ಮೈಸೂರು
ಇದನ್ನೂ ಓದಿ : Literature : ಅಭಿಜ್ಞಾನ ; ಬರೋ ವರ್ಷ ಈ ಹೊತ್ತಿಗೆ ಗುಡೀಗೆ ನೂರಾರು ಜನ ಬರೋ ಅಂಗೆ ಮಾಡದಿದ್ದರೆ ನಾ ಸತ್ತೆ ಅಂತ ತಿಳುಕ
Published On - 3:37 pm, Sun, 20 March 22