VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್ನಲ್ಲಿ 30 ರನ್ ಚಚ್ಚಿದ ವೈಭವ್
IPL 2025 RR vs GT: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 47ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 15.5 ಓವರ್ಗಳಲ್ಲಿ 212 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
IPL 2025: ಐಪಿಎಲ್ನ 47ನೇ ಪಂದ್ಯದಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿ 14ರ ಹರೆಯದ ವೈಭವ್ ಸೂರ್ಯವಂಶಿ (Vaibhav Suryavanshi) ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದರು.
ಈ ಶತಕದ ನಡುವೆ ಒಂದೇ ಓವರ್ನಲ್ಲಿ 30 ರನ್ ಚಚ್ಚಿದ್ದು ವಿಶೇಷವಾಗಿತ್ತು. ಅಫ್ಘಾನಿಸ್ತಾನ್ ಕ್ರಿಕೆಟಿಗ ಕರೀಮ್ ಜನ್ನತ್ ಅವರು ಎಸೆದ 10ನೇ ಓವರ್ನಲ್ಲಿ ವೈಭವ್ ಸೂರ್ಯವಂಶಿ 6,4,6,4,4,6 ಬಾರಿಸುವ ಮೂಲಕ ಒಟ್ಟು 30 ರನ್ಗಳನ್ನು ಕಲೆಹಾಕಿದರು.
ಅತ್ಯಂತ ಕೆಟ್ಟ ದಾಖಲೆ:
ವೈಭವ್ ಸೂರ್ಯವಂಶಿ 30 ರನ್ ಕಲೆಹಾಕುವುದರೊಂದಿಗೆ ಚೊಚ್ಚಲ ಐಪಿಎಲ್ ಪಂದ್ಯದ ಮೊದಲ ಓವರ್ನಲ್ಲಿ ಅತ್ಯಧಿಕ ರನ್ ನೀಡಿದ ಕೆಟ್ಟ ದಾಖಲೆಯೊಂದು ಕರೀಮ್ ಜನ್ನತ್ ಪಾಲಾಯಿತು. ಏಕೆಂದರೆ ಇದು ಕರೀಮ್ ಅವರ ಮೊದಲ ಐಪಿಎಲ್ ಪಂದ್ಯವಾಗಿತ್ತು. ಪಾದಾರ್ಪಣೆ ಪಂದ್ಯದ ಮೊದಲ ಓವರ್ನಲ್ಲೇ 30 ರನ್ ನೀಡುವ ಮೂಲಕ ಹೀನಾಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ವರುಣ್ ಚಕ್ರವರ್ತಿ ಹೆಸರಿನಲ್ಲಿತ್ತು. 2019 ರಲ್ಲಿ ವುರಣ್ ಚಕ್ರವರ್ತಿಯ ಮೊದಲ ಓವರ್ನಲ್ಲಿ 25 ರನ್ ನೀಡಿದ್ದರು. ಇದೀಗ ಕರೀಮ್ ಜನ್ನತ್ ಮೊದಲ ಪಂದ್ಯದ ಮೊದಲ ಓವರ್ನಲ್ಲೇ 30 ರನ್ ಬಿಟ್ಟು ಕೊಡುವ ಮೂಲಕ ಹೀನಾಯ ದಾಖಲೆ ಬರೆದಿದ್ದಾರೆ.