ಉತ್ತರ ಕರ್ನಾಟಕದ ಗೋಕಾಕ ನನ್ನೂರು. ನನ್ನ ಸುತ್ತಮುತ್ತಲು ಲಯ ತಪ್ಪಿದಂತೆನ್ನಿಸಿದಾಗೆಲ್ಲಾ, ಶತಮಾನಗಳಿಂದ ಅನೇಕ ಕಥನಗಳಿಗೆ ಸಾಕ್ಷಿಯಾಗಿರುವ ಇಲ್ಲಿಯ ಕಲ್ಲುಬಂಡೆಗಳಿಗೆ ಎದೆ ಹಚ್ಚಿ, ಕಿವಿಗೊಟ್ಟು ತಾಯಿ ಘಟಪ್ರಭೆಯ ಒಡನುಡಿಗಳಿಗಾಗಿ ಕಾಯುತ್ತೇನೆ; ಅದೆಷ್ಟು ನಾಜೂಕಾಗಿ ಹರಿಯುತ್ತಾಳೋ ಇನ್ನೊಮ್ಮೆ ಅಷ್ಟೇ ನೆಲಕಚ್ಚಿ ಬತ್ತುವಂತಾಗುತ್ತಾಳೆ. ಮತ್ತೊಮ್ಮೆ ಎಲ್ಲವನ್ನೂ ನುಂಗುತ್ತ ಎಲ್ಲೆ ಮೀರುವವಳು ಎಂತನ್ನಿಸಿಕೊಳ್ಳುತ್ತಲೇ, ಧರೆಗಿಳಿದ ಧೀರೆಯೂ ಅನ್ನಿಸಿಕೊಳ್ಳುತ್ತಾಳೆ. ಮಗದೊಮ್ಮೆ ಅಸಾಧ್ಯ ಮೌನಕ್ಕಿಳಿದುಬಿಡುತ್ತಾಳೆ. ಆಗ ಮತ್ತಷ್ಟು ಇಣುಕಿ ಅವಳ ಆಳಕ್ಕಾಗಿ ಕಣ್ಣು ಜೋಡಿಸಿಕೊಳ್ಳುವಾಗ, ಸುಡುಬಿಸಿಲಿನಲ್ಲಿಯೂ ನೆಲಕ್ಕಂಟಿದ ಪಸೆಯೊಳಗಿನಿಂದ ನೂರಾರು ಕೈಗಳು ಅಂಗಲಾಚಿದಂತಾಗಿ ಕಂಪಿಸುವ ಎದೆಯೊಂದಿಗೆ ಹಿಂದೆ ಸರಿದುಬಿಡುತ್ತೇನೆ. ಆಗೆಲ್ಲಾ ಬೆಟ್ಟದ ಮೇಲಿನ ತೂಗುಸೇತುವೆ ಯಾಕೆ ಎಲ್ಲರಿಗೂ ದಾರಿ ತೋರುವುದಿಲ್ಲ ಎಂಬ ಪ್ರಶ್ನೆ ಬಲವಾಗಿ ಕಾಡಿಬಿಡುತ್ತದೆ. ಈ ಕಾಡುವಿಕೆಯ ಒಳಹರಿವೇ ಈ ಅಂಕಣ Gokak Falls – ಗೋಕಾಕ ಫಾಲ್ಸ್. ಹೀಗೆ ಶುರುವಾದ ಈ ಹರಿವು ಎಲ್ಲೆಲ್ಲಿ ಕರೆದೊಯ್ಯುತ್ತದೆಯೋ, ನಿಮ್ಮಷ್ಟೇ ಕುತೂಹಲ ನನಗೂ ಇದೆ.
ಸುಷ್ಮಾ ಸವಸುದ್ದಿ
*
ಗೋಕಾಕ ಮೂಲದ ಸುಷ್ಮಾ ಸವಸುದ್ದಿ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿನಿ. ಈ ಅಂಕಣದ ಮೂಲಕ ನಿಮ್ಮ ಅವರ ಭೇಟಿ ಹದಿನೈದು ದಿನಕ್ಕೊಮ್ಮೆ.
(ಹರಿವು : 1)
ನಾನು ಓದಿದ ಗೋಕಾಕದ ಡಿಗ್ರಿ ಕಾಲೇಜಿಗೆ ಎರಡು ಗೇಟ್‍ಗಳಿವೆ. ಮೊದಲ ಗೇಟ್ ಗೋಕಾಕಿನ ಕೇಂದ್ರಭಾಗವಾದ ಬಸವೇಶ್ವರ ಸರ್ಕಲ್ (ಕೋರ್ಟ್ ಸರ್ಕಲ್) ಗೆ ಹತ್ತಿರ. ಸಾಮಾನ್ಯವಾಗಿ ನನ್ನ ಸ್ನೇಹಿತರೆಲ್ಲ ಅದೇ ಗೇಟಿಂದ ಓಡಾಡ್ತಿದ್ರು. ಆದರೆ ನನ್ನ ಮನೆ ಸೆಕೆಂಡ್ ಗೇಟಿನಿಂದ ಹತ್ತಿರ. ನನಗೂ ಅವರೊಟ್ಟಿಗೆ ಹೋಗಲು ಆಸೆ ಇರುತ್ತಿದ್ದರೂ ಸುತ್ತಿಟ್ಟು ಹೋಗಬೇಕಾದ್ದರಿಂದ ಸುಮ್ಮನುಳಿಯುತ್ತಿದ್ದೆ. ಆದರೆ ಒಂದು ದಿನ ಅವರೆಲ್ಲ ನನ್ನನ್ನು ಎಳೆದುಕೊಂಡೇ ತಮ್ಮ ದಾರಿಗೆ ಕರೆದೊಯ್ದರು. ಉದ್ದಕ್ಕೂ ಕಿಟಾಳತನ ಮಾಡುತ್ತಾ ಸರ್ಕಲ್ ಬಾಜೂ ಇರುವ ಅಂಕಲ್ ಅಂಗಡಿಯಲ್ಲಿ ಐಸ್‍ಕ್ರೀಮ್ ತಿಂದು ಕೆಲವರು ಬಸ್ ಸ್ಟಾಪ್ ದಾರಿ ಹಿಡಿದರೆ ಇನ್ನೂ ಕೆಲವರು ಹಾಸ್ಟೆಲ್ ದಾರಿ ಹಿಡಿದರು. ನಾನು ಮತ್ತೆ ಮೇಘಾ ಸರ್ಕಲ್ ದಾಟಿ ನಮ್ಮ ಮನೆಯತ್ತ ನಡೆದೆವು. ಮಾತಾಡ್ತಾ ರಸ್ತೆ ದಾಟುವಾಗ ದಿಢೀರನೇ ನನ್ನ ದೃಷ್ಟಿ ತಿಳಿಗುಲಾಬಿ ಬಣ್ಣದ ಸ್ಕೂಟಿ ಮೇಲೆ ಹೊರಟಿದ್ದ ಹೆಣ್ಣುಮಗಳೊಬ್ಬರ ಕಡೆ ತಿರುಗಿತು. ಅವರು ಯಾರೆಂದು ನಿನಗೇನಾದರೂ ಗೊತ್ತಾ ಎಂದು ಮೇಘಾಳಿಗೆ ಕೇಳಿದೆ. ಅವಳು ಕತ್ತು ತಿರುಗಿಸಿ ನೋಡುವಷ್ಟರಲ್ಲಿ ಗಾಡಿ ದೂರ ಹೋಗಿತ್ತು.
ತೀರಾ ಹತ್ತಿರದಿಂದ ನೋಡಿದ ನೆನಪು. ಮುಖ ಸರಿಯಾಗಿ ಕಾಣಲಿಲ್ಲ. ಆದರೆ ಅದೇ ಸ್ಕೂಟಿ, ಅದೇ ಸಿಂಪಲ್ಲಾಗಿರುವ ಸೀರೆ, ಅದೇ ಮೈಕಟ್ಟು, ಅದೇ ಕೂದಲು ಎಲ್ಲೋ ನೋಡಿದ್ದೇನೆ ಎನ್ನಿಸಿತು. ಮೇಘಾಳ ಮನೆ ಬಂದು ಆಕೆಗೆ ವಿದಾಯ ಹೇಳಿ ನನ್ನ ಮನೆಯ ದಾರಿ ಹಿಡಿದೆ. ಹಾಗಾದ್ರೆ ಅವರಿನ್ನೂ ಬದುಕಿದ್ದಾರಾ? ದೇವರೇ, ಅದು ಅವರೇ ಆಗಿರಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದೆ. ಆಶ್ಚರ್ಯ, ಸಂತೋಷ, ಆತಂಕ ಎಲ್ಲವೂ ಒಟ್ಟೊಟ್ಟಿಗೆ ಉಕ್ಕಿತು. ಆದರೆ, ಇಷ್ಟು ದಿನ ಯಾರ ಕಣ್ಣಿಗೂ ಕಾಣದವರು ಈವತ್ತು ಹೀಗೆ ನನ್ನ ಕಣ್ಣಿಗೆ ಮಾತ್ರ ಬಿದ್ದಿದ್ದು ಹೇಗೆ? ಅವರು ಬೇರೆ ಯಾರೋ ಆಗಿದ್ದರೆ? ಆದರೆ, ಅವರು ಇದೇ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ ಎಂದು ಮೇಘಾ ಕೂಡ ಹೇಳಿದ ನೆನಪು. ಅವರು ಮತ್ತೆ ಕಂಡಾರು ಎಂದು ಕಂಪ್ಯೂಟರ್ ಕ್ಲಾಸ್ಗೆ ಇದೇ ರಸ್ತೆಯಲ್ಲಿ ಕೆಲ ದಿನ ಓಡಾಡತೊಡಗಿದೆ. ಒಂದು ಸಂಜೆ ಕ್ಲಾಸ್ ಮುಗಿಸಿ ಬರುವಾಗ ಅದೇ ಸ್ಕೂಟಿ! ಈ ಬಾರಿಯೂ ಕೇವಲ ಬೆನ್ನು ಮಾತ್ರ ಕಂಡಿತು. ತುಸು ಮುಂದೆ ಹೋಗಿ ಬಾಳೆಹಣ್ಣಿನ ಅಂಗಡಿ ಮುಂದೆ ಆ ಸ್ಕೂಟಿ ನಿಂತಿತು. ವೇಗವಾಗಿ ನಡೆದೆ. ಬಾಳೆಹಣ್ಣಿನಾಕೆಗೆ ದುಡ್ಡು ಕೊಡುತ್ತಿದ್ದ ಸ್ಕೂಟಿ ಹೆಣ್ಣುಮಗಳನ್ನು ದಿಟ್ಟಿಸಿದೆ. ನಿರಾಸೆ. ಇವರು ಅವರಾಗಿರಲಿಲ್ಲ. ಈ ಹಿಂದೆಯೂ ಇಂಥದೇ ನಿರಾಸೆಯನ್ನು ಹತ್ತನೇ ತರಗತಿಯಲ್ಲಿದ್ದಾಗಲೂ ಈ ವಿಷಯವಾಗಿಯೇ ಅನುಭವಿಸಿದ್ದೆ.
ಅವರೆಂದರೆ, ನನ್ನ ವತ್ಸಲಾ ಟೀಚರ್. ಬೆಳಗಾವಿಯಲ್ಲಿ ನಾನು ಒಂಬತ್ತನೇ ತರಗತಿ ಓದುತ್ತಿದ್ದಾಗ ಗಣಿತ, ವಿಜ್ಞಾನ ಪಾಠ ಮಾಡುತ್ತಿದ್ದ ನನ್ನ ಕ್ಲಾಸ್ ಟೀಚರ್. ಬೆಳಗಾವಿ ಅವರ ಗಂಡನಮನೆ. ಗೋಕಾಕ ಅವರ ತವರುಮನೆ. ಸದಾ ಹಸನ್ಮುಖಿ. ಅವರ ಪಾಠ, ನಡಿಗೆ, ಕೆಲಸ ಎಲ್ಲದರಲ್ಲಿಯೂ ರಾಕೆಟ್ನ ವೇಗವಿರುತ್ತಿತ್ತು. ಯಾರಿಂದಲೂ ಯಾವ ದೂರು ಅವರ ಮೇಲಿರುತ್ತಿರಲಿಲ್ಲ. ಅವರು ಗಂಟುಮುಖ ಹಾಕಿದ್ದಾಗಲಿ, ಜಿಗುಪ್ಸೆಯಲ್ಲಿರುವುದನ್ನಾಗಲಿ, ಕೆಲಸವಿರದೇ ಖಾಲಿ ಕೈಯಲ್ಲಿ ಇದ್ದುದನ್ನಾಗಲಿ ನಾವೆಂದೂ ನೋಡಿರಲಿಲ್ಲ. ಅವರೆಂದರೆ ಉತ್ಸಾಹದ ಚಿಲುಮೆ. ಆದರೆ ಒಮ್ಮೆ ಮಾತ್ರ ಅವರ ಸಿಟ್ಟು ನೋಡಿದ್ದೆ ಮತ್ತು ಅದಕ್ಕೆ ಕಾರಣವೂ ನಾನೇ ಆಗಿದ್ದೆ.
ಒಂದು ಶನಿವಾರ ಶಾಲೆ ಮುಗಿದ ತಕ್ಷಣ ಟ್ಯೂಷನ್‍ಗೆ ಹೋಗಿದ್ದೆ, ಅಂದು ಟ್ಯೂಷನ್‍ನಲ್ಲಿ ಪರೀಕ್ಷೆಯಿತ್ತು. ಮನೆಗೆ ಬರಲು ತಡವಾಗುವುದೆಂದು ಅಮ್ಮನಿಗೆ ತಿಳಿಸಲು ಮರೆತಿದ್ದೆ. ಅದೇ ಟೈಮಿಗೆ ಬಸ್ ಕೈಕೊಟ್ಟಿತು. ಶನಿವಾರ ಮಧ್ಯಾಹ್ನ ಒಂದು ಗಂಟೆಗೆ ಮನೆಯಲ್ಲಿರಬೇಕಾದ ಮಗಳು ಮೂರುಗಂಟೆ ಆದರೂ ಮನೆಗೆ ಬಂದಿಲ್ಲವೆಂದು ಅಮ್ಮ, ಕೋರ್ಟಿನ ಕೆಲಸದಲ್ಲಿ ತೊಡಗಿಕೊಂಡಿದ್ದ ಅಪ್ಪನಿಗೆ ತಿಳಿಸಿದರು. ಆಗ ಅಪ್ಪ ವತ್ಸಲಾ ಟೀಚರ್ಗೆ ಫೋನ್ ಮಾಡಿ ವಿಚಾರಿಸಿದರು. ಆತಂಕಗೊಂಡ ಟೀಚರ್, ನಾನು ಶಾಲೆಯಲ್ಲಿಯೇ ಉಳಿದಿರಬಹುದಾ ಎಂದು ಸ್ಕೂಟಿ ತೆಗೆದುಕೊಂಡು ಶಾಲೆಯತ್ತ ಹೊರಟರು. ಇನ್ನೇನು ಶಾಲೆಗೆ ತಲುಪುತ್ತಾರೆ ಎನ್ನುವಷ್ಟರಲ್ಲಿ ನಾನು ಮನೆಗೆ ತಲುಪಿದ ಸುದ್ದಿ ಅವರಿಗೆ ತಲುಪಿತ್ತು.
ಸೋಮವಾರ ಯಥಾಪ್ರಕಾರ ಶಾಲೆಗೆ ಹೋದಾಗ ಮೊದಲನೇ ಪಿರಿಯಡ್ಗೆ ಬಂದ ಅವರು, ಸವಸುದ್ದಿ ಎಂದು ಕೂಗಿದರು. ಎದೆ ನಡುಗಿತು. ಹೆದರುತ್ತಲೇ ಎದ್ದುನಿಂತೆ. ಶನಿವಾರ ತಡವಾಗಿ ಹೋಗಿದ್ದಕ್ಕೆ ಕಾರಣ ಕೇಳಿದರು, ಹೇಳಿದೆ. ಮನೆಯಲ್ಲಿ ಮೊದಲೇ ತಿಳಿಸಲು ಗೊತ್ತಾಗಲಿಲ್ಲವಾ ಎಂದು ಜೋರು ಮಾಡಿ, ಇನ್ನೊಮ್ಮೆ ಯಾರೂ ಹೀಗೆ ಮಾಡದಿರಿ ಎಂದು ಹೇಳಿದರು. ಅದೇ ಮೊದಲ ಬಾರಿ ಅವರ ಹತ್ತಿರ ಬೈಯಿಸಿಕೊಂಡದ್ದು ಮತ್ತೆ ಅದೇ ಕೊನೆಯೂ ಕೂಡಾ. ಹಿಂದೆ ಅವರ ಬೇಸರವನ್ನೂ ಒಮ್ಮೆ ನೋಡಿದ್ದೆ. ಒಂದು ಸಂಜೆ ಕೊನೆಯ ಪಿರಿಯಡ್ಗೆ ನ್ಯೂಸ್ ಪೇಪರ್ ಹಿಡಿದುಕೊಂಡು ಕ್ಲಾಸಿಗೆ ಬಂದ ಅವರು ಆ ದಿನ ಪಾಠ ಮಾಡಲಿಲ್ಲ. ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಫೇಲಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುದ್ದಿ ಹೇಳಿ, ನಿಮ್ಮ ಪರೀಕ್ಷೆಯ ಅಂಕಗಳೇ ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಸಮಸ್ಯೆಗಳು ಎದುರಾಗುತ್ತಿದ್ದಂತೆ ಜೀವನ ಮುಗಿದೇ ಹೋಯ್ತು ಅಂತೆಲ್ಲ ಅಲ್ಲ. ಸಣ್ಣಪುಟ್ಟ ವಿಚಾರಕ್ಕೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲರಾಗದಿರಿ ಎಂದು ಹೇಳುವಾಗ ಅವರಿಗೂ ಅನ್ನಿಸಿರಲಿಲ್ಲವೆನ್ನಿಸುತ್ತೆ, ಸ್ವತಃ ತಾವೂ ಮುಂದೊಮ್ಮೆ ದುರ್ಬಲರಾಗಬಹುದೆಂದು!
ಆಗ ರಾಜ್ಯದಲ್ಲೆಲ್ಲ ಯಾವುದೋ ಗಲಭೆ, ಪ್ರತಿಭಟನೆ ನಡೆಯುತ್ತಿತ್ತು. ಅದರ ಬಿಸಿಯಿಂದಾಗಿ ಬೆಳಗಾವಿಯ ಶಾಲೆಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು. ಆದರೂ ರಜೆಯ ಬಗ್ಗೆ ಇದ್ದ ಗೊಂದಲ ಪರಿಹರಿಸಿಕೊಳ್ಳಲು ವತ್ಸಲಾ ಟೀಚರ್ಗೆ ಫೋನ್ ಮಾಡಿದೆ. ಮೊದಲು ರಿಂಗ್ ಆಯ್ತು, ಆದರೆ ಉತ್ತರವಿಲ್ಲ. ಮತ್ತೆ ಮಾಡಿದೆ, ಫೋನ್ ಸ್ವಿಚ್ ಆಫ್. ಆ ದಿನ ಬೆಳಗ್ಗೆ ಶಾಲೆಗೆ ಹೋದ ನನ್ನ ಸ್ನೇಹಿತರಿಗೆ ಕೆಂಪು ಸೀರೆಯುಟ್ಟ ವತ್ಸಲಾ ಟೀಚರೇ, ಇಂದು ಶಾಲೆಯಿಲ್ಲ ಎಲ್ಲ ಮನೆಗೆ ಹೋಗಿ ಎಂದು ಹೇಳುತ್ತ, ಮುಗುಳ್ನಗುತ್ತ ತಮ್ಮ ಗುಲಾಬಿ ಸ್ಕೂಟಿ ಏರಿ ಹೊರಟಿದ್ದರಂತೆ. ಅದೇ ಕೊನೆ, ಅವರ ಸ್ಕೂಟಿ ಮತ್ತೆ ಶಾಲೆಗೆ ಮುಖ ಮಾಡಲೇ ಇಲ್ಲ.
ದಿನಗಳು ಉರುಳಿದವು. ಹಿಂದೆಂದೂ ಅವರು ಹೀಗೆ ಶಾಲೆ ತಪ್ಪಿಸಿದವರಲ್ಲ. ಒಬ್ಬ ಟೀಚರ್, ಅವರು ಟ್ರೇನಿಂಗ್ಗೆ ಹೋಗಿರುವುದಾಗಿ ಹೇಳಿದರು. ಇನ್ನೊಬ್ಬರು ಆರೋಗ್ಯ ಸರಿ ಇಲ್ಲವೆಂದರು. ಈ ನಡುವೆ ಶಾಲೆ ಆವರಣದಲ್ಲಿ ಪೊಲೀಸ್ ಜೀಪ್ ಪದೇಪದೆ ಕಾಣಿಸಿಕೊಳ್ಳುತ್ತಿತ್ತು. ಯಾವುದೂ ಅರ್ಥವಾಗುತ್ತಿಲ್ಲ. ಹೆಚ್ಚು ಕಡಿಮೆ ಒಂದು ತಿಂಗಳಾದರೂ ವತ್ಸಲಾ ಟೀಚರ್ ಬರಲೇ ಇಲ್ಲ. ಅವರ ಬದಲಿಗೆ ಹೊಸ ಗಣಿತ ಟೀಚರ್ ಬರುವುದಾಗಿ ಇನ್ನೊಬ್ಬ ಸರ್ ತಿಳಿಸಿದಾಗ ಎಲ್ಲರಿಗೂ ಆಶ್ಚರ್ಯ, ಅನುಮಾನ. ಎಲ್ಲರೂ ಮುಗಿಬಿದ್ದು ವತ್ಸಲಾ ಟೀಚರ್ ಬಗ್ಗೆ ಕೇಳಿದೆವು. ‘ಅವರು ಇನ್ನು ಬರಲ್ಲ ಅನಿಸುತ್ತೆ’ ಕೊಂಚ ತೊದಲುತ್ತಲೇ ಅವಸರಿಸಿ ಹೊರಟರು.
ಕೆಲ ದಿನಗಳ ನಂತರ ವಿಷಯ ತಿಳಿಯಿತು. ಆ ದಿನ ಅವರು ಶಾಲೆ ರಜೆಯಿದೆ ನೀವೆಲ್ಲ ಮನೆಗೆ ಹೋಗಿ ಎಂದು ಮಕ್ಕಳಿಗೆ ಹೇಳಿ ಸ್ಕೂಟಿ ಹತ್ತಿ ಹೋದ ಅವರು ಮನೆಗೆ ಹೋಗಿರಲಿಲ್ಲ. ಮನೆಯಿಂದ ಬರುವ ಮೊದಲು ಫೋನ್ ಗೋಡೆಗೆ ಬಿಸಾಕಿ ಬಂದಿದ್ದರು. ಅದಕ್ಕೆ ಅನಿಸುತ್ತೆ ಅಂದು ನಾನು ಎರಡನೇ ಬಾರಿ ಫೋನ್ ಮಾಡಿದಾಗ ಸ್ವಿಚ್ ಆಫ್ ಬಂದಿದ್ದು. ನಂತರ ಅವರ ಗುಲಾಬಿ ಸ್ಕೂಟಿ ಸಿಕ್ಕಿದ್ದು ಬೆಳಗಾವಿ ರೈಲ್ವೇ ಸ್ಟೇಶನ್‍ನಲ್ಲಿ. ಅಂದು ಅವರು ಗೋಕಾಕ್‍ಗೆ ಹೋಗುವ ರೈಲಿಗೆ ಹತ್ತಿದ್ದು ನಿಜ. ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪರಿಚಿತರಿಗೆ ತವರುಮನೆಗೆ ಹೋಗುತ್ತಿರುವುದಾಗಿ ತಿಳಿಸಿದ್ದರು ಕೂಡ. ಅದೇ ಕೊನೆ ಅದಾದ ಬಳಿಕ ಅವರನ್ನು ನೋಡಿದವರು ಯಾರೂ ಇಲ್ಲ. ಅಷ್ಟಕ್ಕೂ ಅಂದು ಮನೆಬಿಟ್ಟು ಹೋಗುವಂದ್ದು ಏನಾಗಿತ್ತು? ನಮಗ್ಯಾರಿಗೂ ಗೊತ್ತಿರಲಿಲ್ಲ. ಹೊಸ ಗಣಿತದ ಟೀಚರ್ ಬಂದರೂ ನನಗೆ ಮನಸ್ಸಿನಿಂದ ವತ್ಸಲಾ ಟೀಚರ್ ಸರಿಯಲೇ ಇಲ್ಲ.
ಪರೀಕ್ಷೆಗಾಗಿ ಓದುತ್ತಿದ್ದಾಗ, ಬಾಗಿಲು ತೆರೆದು ಒಳಬಂದ ನನ್ನ ಅಪ್ಪ, ನನ್ನೆದುರು ಒಂದು ಪತ್ರ ಇಟ್ಟು ಓದು ಎಂದು ಹೇಳಿ ಹೊರನಡೆದರು. ಯಾರೋ ಹೆಣ್ಣುಮಗಳು ಬಹಳ ನೋವಿನಿಂದ ಬರೆದಿದ್ದಾಳೆ ಎಂದು ಓದತೊಡಗಿದೆ. ಏಕೆಂದರೆ, ಅಪ್ಪ ಕ್ರಿಮಿನಲ್ ಲಾಯರ್ ಆದುದರಿಂದ ಅಪ್ಪನ ಬಳಿ ಇಂಥ ನೂರಾರು ಪತ್ರಗಳು ಬರುತ್ತಲೇ ಇರುತ್ತವೆ. ಹಿಂದೊಮ್ಮೆ ಯಾವುದೋ ಮರ್ಡರ್ ಕೇಸ್ ಫೈಲ್ ಓಪನ್ ಮಾಡಿದ ಸಂದರ್ಭ. ನಾನಾಗ ರವಿ ಬೆಳೆಗೆರೆಯವರ ‘ಭೀಮಾ ತೀರದ ಹಂತಕರು’ ಓದುತ್ತಿದ್ದಾಗ ಬೈದಿದ್ದರು. ಆದರೆ ಇಂದೇಕೆ ಈ ಸುಸೈಡ್ ನೋಟ್ ಕೊಟ್ಟರು ಎಂದು ಅರ್ಥವಾಗಲಿಲ್ಲ. ಅದನ್ನು ಓದುವ ಮೊದಲೇ ಯಾರದ್ದಿದು ಎಂದು ಕಣ್ಣುಗಳು ಪತ್ರದ ಅಂಚಿಗೆ ಜಾರಿದವು. ತೀರಾ ಪರಿಚಯದ ಸಹಿ, ಅದರ ಕೆಳಗೆ ವತ್ಸಲಾ ಟೀಚರ್ ಮತ್ತವರ ಸರ್ನೇಮ್! ಎದೆ ನಡುಗಿತು. ಇನ್ನೊಮ್ಮೆ ಪತ್ರ ಓದಿದೆ, ‘ಯಾರ ಮೇಲೂ ಸಂಶಯ ಪಡುವ ಅಗತ್ಯವಿಲ್ಲ. ನನಗೆ ಜೀವನ ಬೇಸರವಾಗಿದೆ. ನನ್ನ ಸಾವಿಗೆ ನನ್ನ ಗಂಡನಾಗಲೀ, ಮಗನಾಗಲೀ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ.’ ದುಃಖ ಒತ್ತರಿಸಿ ಬಂದು ಅಪ್ಪನೆಡೆಗೆ ಓಡಿದೆ, ಪೂರ್ತಿ ವಿಷಯ ತಿಳಿಯುವ ಕೂತೂಹಲ, ಆತಂಕ, ಭಯ ಎಲ್ಲದರೊಂದಿಗೆ.
ನಡೆದಿದ್ದು ಇಷ್ಟೇ. ಟೀಚರ್ ಮಗ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುಕೊಂಡಿದ್ದ. ಪರ ಊರಿನಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸದಲ್ಲಿದ್ದ ಟೀಚರ್ ಗಂಡ, ‘ಮನೆಯಲ್ಲೇ ಟೀಚರಿದ್ದೂ ಇಷ್ಟು ಕಡಿಮೆ ಅಂಕ ಯಾಕೆ?’ ಎಂದು ಅವನನ್ನು ಗದರಿದ್ದರು. ಸಿಟ್ಟಿನಲ್ಲಿ ಮಗ, ‘ನಾನೇನು ಮಾಡಲಿ ಅಮ್ಮ ಇತ್ತಿಚೇಗೆ ಏನು ಹೇಳಿಕೊಡುವುದಿಲ್ಲ. ಯಾವಾಗಲೂ ಫೋನಿನಲ್ಲಿ ಯಾರದೋ ಜೊತೆ ಮಾತನಾಡಿಕೊಂಡೇ ಇರುತ್ತಾರೆ’ ಎಂದು ತನ್ನನ್ನು ತಾ ಸಮರ್ಥಿಸಿಕೊಂಡಿದ್ದ. ಈ ಒಂದು ಮಾತು ಸಾಕಿತ್ತು ಆ ಸಂಸಾರಕ್ಕೆ ಸಂಶಯವೆಂಬ ವಿಷ ಬೆರೆಯಲು. ಅದೇ ಮಾತು ತನ್ನ ಅಮ್ಮನನ್ನು ಶಾಶ್ವತವಾಗಿ ದೂರ ಮಾಡಬಹುದೆಂದು ಆತನಿಗೆ ಕಲ್ಪನೆಯೇ ಇರಲಿಲ್ಲ. ಅಂದಿನಿಂದ ಗಂಡ-ಹೆಂಡತಿ ನಡುವೆ ಯಾವಾಗಲೂ ಜಗಳ. ಅನುಮಾನ ಭುಗಿಲೆದ್ದು, ವಾದ-ವಿವಾದಗಳು ತಾರಕಕ್ಕೇರಿ ಕೊನೆಗೆ ಟೀಚರ್ ಅಸಹಾಯಕರಾಗಿ ಸಾಯುವ ನಿರ್ಧಾರ ಮಾಡಿದ್ದರು.
ಈ ‘ಅನುಮಾನ’ ಎಂಬ ನಾಲ್ಕಕ್ಷರವನ್ನು ಮೆಟ್ಟಿ ನಿಲ್ಲುವ ಶಕ್ತಿ ಯಾವುದಕ್ಕಿದೆ? ಸಿದ್ಧಚೌಕಟ್ಟಿನ ಕುಂಡ ಇನ್ನೂ ಎಷ್ಟು ಜೀವಗಳನ್ನು ಆಹುತಿ ಪಡೆಯುತ್ತಲೇ ಇರುತ್ತದೆ? ಪುರುಷ ಪಾರಮ್ಯ ಸಮಾಜ, ತನ್ನ ಆಲೋಚನಾ ಕ್ರಮಗಳನ್ನು ಬದಲಾಯಿಸಿಕೊಳ್ಳದಿದ್ದರೆ ತನ್ನ ಕಾಲ ಮೇಲೆ ತಾನೇ ಕಲ್ಲು ಚೆಲ್ಲಿಕೊಳ್ಳುತ್ತದೆ. ಅರಿವು ಬೇಕಿರುವುದು ಗಂಡಿಗೇ ಹೆಚ್ಚು ನಿಜ. ಆದರೆ ಆ ಅರಿವಿನ ಕಣ್ಣನ್ನು ತೆರೆಯಿಸಲು ಇಂದು ಹೆಣ್ಣೇ ಮತ್ತಷ್ಟು ಮತ್ತಷ್ಟು ಗಟ್ಟಿಯಾಗಬೇಕಾದ ಅನಿವಾರ್ಯವಿದೆ. ಮರ್ಯಾದೆಯ ಸಂಕೋಲೆಯನ್ನು ಕಿತ್ತೊಗೆದು, ಭಾವನಾತ್ಮಕದ ಪರಿಧಿಯಾಚೆ ನಿಂತು ಆಕೆ ಬದುಕನ್ನು ಗೆಲ್ಲುವ ಛಲ ಬೆಳೆಸಿಕೊಳ್ಳಬೇಕಿದೆ.
ಹೇಳು ಘಟಪ್ರಭೆ, ವತ್ಸಲಾ ಟೀಚರ್ಗೆ ನಿನ್ನ ಸೇತುವೆಯಲ್ಲಿ ಅವರಿಗೆ ಜಾಗವಿರಲಿಲ್ಲವೆ?
(ನಿಮ್ಮ ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
ಇದನ್ನೂ ಓದಿ : Meeting Point : ‘ಅವಳ ಶೀಲವೇ ಹೆಣ್ತನದ, ಮರ್ಯಾದೆಯ ಪ್ರತೀಕ ಎಂಬುದಕ್ಕೆ ಏನು ಆಧಾರ?’
Published On - 6:15 pm, Fri, 29 October 21