Meeting Point : ‘ನಮ್ಮಷ್ಟಕ್ಕೆ ನಮ್ಮನ್ನು ಅರ್ಥ ಮಾಡಿಕೊಳ್ಳಲೂ ಬಿಡಬೇಡಿ’

Hobby : ‘ಇಬ್ರು ಸೇರ್ಕೊಂಡ್‌ ಯೂಟ್ಯೂಬ್‌ ಚಾನಲ್‌ ಸ್ಟಾರ್ಟ್‌ ಮಾಡಿದ್ವಿ, ಅದರಲ್ಲಿ ಈ ಬುಡಕಟ್ಟು ಜನಗಳ ಜೀವನ ಶೈಲಿಯನ್ನ ಅವರ ಕೌಶಲಗಳನ್ನ ಅಪ್ಲೋಡ್‌ ಮಾಡಿ, ಅದರಿಂದ ಬಂದಿದ್‌ ಹಣಾನ್ನ ಅವ್ರಿಗೋಸ್ಕರನೇ ಕೂಡಿಡ್ತಾ ಹೋದ್ವಿ. ಆದರೆ...‘

Meeting Point : ‘ನಮ್ಮಷ್ಟಕ್ಕೆ ನಮ್ಮನ್ನು ಅರ್ಥ ಮಾಡಿಕೊಳ್ಳಲೂ ಬಿಡಬೇಡಿ’
ಲೇಖಕಿ ಡಾ. ಜ್ಯೋತಿ ಸಾಮಂತ್ರಿ

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್​ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ಡಾ. ಜ್ಯೋತಿ ಸಾಮಂತ್ರಿ ಬಳ್ಳಾರಿ ಮೂಲದವರು. ಈ ಸರಣಿಯ ಎಲ್ಲಾ ಲೇಖನಗಳನ್ನು ಓದುತ್ತಲೇ ರೈಲಿನಲ್ಲಿ ಎದುರುಗೊಂಡ ಪ್ರಸಂಗವೊಂದನ್ನು ಅವರು ಹಂಚಿಕೊಂಡಿದ್ದಾರೆ.

*

ರೈಲಿನ ಸಮಯ ಬದಲಾದದ್ದು ಗೊತ್ತಿರಲಿಲ್ಲ. ಅಕಸ್ಮಾತಾಗಿ ಅರ್ಧ ಗಂಟೆ ಮುಂಚೆಯೇ ಸ್ಟೇಷನ್‌ ತಲುಪಿ, ನಿಧಾನಕ್ಕೆ ನಡೆಯುತಿದ್ದಾಗ, ಆಕಸ್ಮಿಕವಾಗಿ ಅದರ ಹೆಸರು ಸಮಯ ನೋಡಿ ಗಾಬರಿ ಬಿದ್ದು ಓಡಿ ಹತ್ತಿದ್ದು ಅವತ್ತು ‘ಹಂಪಿ ಎಕ್ಸ್‌ಪ್ರೆಸ್‌ʼ ಅನ್ನ. ಮಾಮೂಲಿಯಂತೆ ತುಂಬಾ ಜನಗಳಿರದೆ, ಖಾಲಿ ಹೊಡೆಯುತಿತ್ತು. ನನ್ನ ಸೀಟು ಹುಡುಕಿ ಬ್ಯಾಗನ್ನೆಲ್ಲ ಇಟ್ಟು ಕುಳಿತೆ. ಆ ಕಡೆ ಸೈಡ್‌ ಲೋವರ್‌ ಸೀಟ್‌ನಲ್ಲಿ ಒಂದು ಹುಡುಗಿ ಕುಳಿತಿತ್ತು; ಒಳ್ಳೆ ಮೊಗ್ಗಿನ ಮನಸು ಸಿನಿಮಾದಲ್ಲಿ ರಾಧಿಕಾ ಪಂಡಿತ್‌ ಕೂತಿರ್ತಾಳಲಾ, ಹಾಗೆ; ಥೇಟ್‌ ಅದೇ ಫೀಲಿಂಗ್‌ನಲ್ಲಿ. ಇಂಟೆರೆಸ್ಟಿಂಗ್‌ ಅನಿಸ್ತು. ಆದ್ರೂ ಯಾಕ್‌ ಬೇಕಪ್ಪ ಅಂತ ನನ್‌ ಪಾಡಿಗೆ ಕೂತೆ.

ತುಸು ಹೊತ್ತಾದ ನಂತರ ಯಾವ್ದೋ ಫೋನ್‌ ಬಂತು 2-3 ಸಲ ಕಟ್‌ ಮಾಡಿ ಆಮೇಲೆ ರಿಸೀವ್‌ ಮಾಡಿ ಏನೇನೋ ಮಾತಾಡ್ತಾ ಅಳೋಕೆ ಶುರುಮಾಡಿದ್ಲು. ಪಾಪ ಅನಿಸಿ ನಾನು ಅವಳನ್ನೇ ನೋಡ್ತಿದ್ದೆ; ಆದರೆ ಏನು ಅಂತ ಕೇಳಿಸಿಕೊಳ್ಳಲಿಲ್ಲ. ಆಮೇಲೆ ಪ್ರಯಾಣಿಕರ ಮಾಮೂಲಿ ಪ್ರಶ್ನೆಯಂತೆ “ಎಲ್ಲಿಗೆ ಹೋಗ್ತಿದೀರಿ” ಕೇಳಿದೆ. “ಕೊಪ್ಪಳ” ಅಂದ್ಲು. “ಮೈಸೂರಲ್ಲಿ..?” ಅಂದೆ. ‘‘ಐಟಿ ಕಂಪೆನಿ’’ ಅಂದ್ಲು. ಫಾರ್ಮಾಲಿಟಿಗಾದ್ರೂ ನೀವೆನ್‌ ಮಾಡ್ತಿದಿರಿ ಅಂತ ಕೇಳಲಿಲ್ಲ; ಅದೂ ಮಾಮೂಲಿಯೇ ಅಂತ! ಸ್ವಲ್ಪ ಹೊತ್ತು ಸುಮ್ಮನಾದೆ.

ಸಮಯ 7.30 ಆಯ್ತು. ಊಟ ಮಾಡೋಣ ಅಂತ ಡಬ್ಬಿ ತೆಗೆದೆ. ಅವಳನ್ನೂ ಕರೆದೆ. ಮೊದಲು ಬೇಡ ಅಂದ್ರೂ ಬಲವಂತ ಮಾಡಿದ ಮೇಲೆ ಬಂದ್ಲು. ಆ ಬೋಗಿಯಲ್ಲಿ ಸದ್ಯಕ್ಕೆ ನಾವಿಬ್ಬರೆ ಇದ್ವಿ. ಹಾಗೆ ಮಾತಿಗೆಳೆದೆ.

ನಾನು: ಏನಾದ್ರೂ ಸಮಸ್ಯೆನ?

ಅವಳು: ನೀವೆಲ್ಲಿಗೆ ಹೋಗ್ಬೇಕು?

ನಾನು: ಬಳ್ಳಾರಿ. ನಾನೇನೋ ಕೇಳ್ದೆ ಅನ್ಸುತ್ತೆ.

ಅವಳು: ಏನಿಲ್ಲರೀ ಹೀಗೆ ಮನೇಲಿ ಇದ್ದದ್ದೇ ಅಲ್ವಾ

ನಾನು: ಭಾಳ ಇರ್ತವು. ಅದರಲ್ಲೇನು… ಅದೂ ರೈಲೊಳಗ್‌ ಅಳೋವಂಥದ್ದು?

ಅವಳು: ಯಾಕ್‌ ಬಿಡ್ರಿ ಸುಮ್ನ ಅವೆಲ್ಲ, ನಿಮ್‌ ಸಮಯ ಹಾಳು.

ನಾನು: ಹೇಳಿ ಪರ್ವಾಗಿಲ್ಲ, ನಿಮಗೂ ಸಮಾಧಾನ ಆಗಬಹುದು. ನಾನೂ ಏನರ ಸಲಹೆ ಕೊಡೋದಕ್ಕ ಪ್ರಯತ್ನ ಮಾಡಬಹುದು.

ಅವಳು: ನಿಮಿಗ್ಯಾರರ ಬಾಯ್​ಫ್ರೆಂಡ್ ಅದಾರಾ?

ನಾನು: ಅಂದ್ರ?

ಅವಳು: ಹೋಗ್ಲಿ ಬಿಡ್ರಿ

(ಹಂಗಂದ್ರ ಗೊತ್ತಿಲ್ಲಂತಲ್ಲ; ಅದು ಸ್ನೇಹಿತನೋ ಅಥವಾ ಪ್ರೇಮಿಯೋ, ಆಕೆ ಯಾವ್‌ ರೀತಿ ಕೇಳಿದ್ಲು ಅಂತ ಗೊತ್ತಾಗ್ಲಿಲ್ಲ. ಆದ್ರ ಅಕಿ ನನ್ನ ಎಷ್ಟ್‌ ಮಬ್‌ ಅನ್ಕೊಂಡ್ಲೋ ಏನೋ. ಆದ್ರೂ ಪರ್ವಾಗಿಲ್ಲ.)

ಅವಳು: ನಂದು ಐಟಿ ಪ್ರೊಫೆಷನ್ನು. ನಮ್‌ ಜೊತಿ ಕೆಲ್ಸ ಮಾಡೋರೊಳಗ ನಾವೊಂದ್‌ ನಾಲ್ಕೈದ್‌ ಜನ ಕ್ಲೋಸ್‌ ಅದವಿ, ಯಾವಾಗ್ಲು ಜೊತಿಗೆ ಇರ್ತವಿ. ಅದ್ರಗ ಇಬ್ರು ಹುಡುಗ್ರು, ಅವಗವಾಗ 2-3 ದಿನ ಟ್ರಿಪ್‌ಗೆಲ್ಲ ಹೊಕ್ಕೇವಿ, ಅವಾಗೆಲ್ಲ ಮನೆಯವರ್‌ ಜೊತಿನೇ ಅದವಿ ಅನ್ನೋವಷ್ಟು ಸೇಫ್‌ ಫೀಲ್‌ ಆಗ್ತದ, ಏನಾದ್ರು ತೊಂದ್ರಿ ಆಗ್ಬಹುದೇನೋ ಅನ್ನ ಯೋಚನಿನ ಬರಲ್ಲ. ಆದ್ರ ಮನ್ನೆ ಒಂದ್ಸಲ ನಮ್‌ ಅಮ್ಮ ಹಾಗೆಲ್ಲ ಹೋಗ್ಬೇಡ ಅಂತ ಬೈದ್ಬಿಟ್ಲು. ಯಾವತ್ತೂ ಹಾಗೆ ಹೇಳಿರ್ಲಿಲ್ಲ.

ನಾನು: ಅಷ್ಟಕ್ಕೆ ಇಷ್ಟ್‌ ಬೇಜಾರ?

ಅವಳು: ಹಾಗಲ್ಲ, ಅದು ಕತಿನ ಬೇರೆ ಐತಿ.

ನಾನು: ಏನು

ಅವಳು: ನಾನ್‌ ವರ್ಕ್‌ ಮಾಡೋ ಬಿಲ್ಡಿಂಗ್‌ನಲ್ಲಿ ಮಧ್ಯ ಆಯತದಷ್ಟು ಖಾಲಿ ಜಾಗ ಐತಿ, ಈ ಹಳೆ ಕಾಲದ ಮಳೆನಾಡು ಮನೆಲೆಲ್ಲ ಇರ್ತಿತ್ತಲ ನಡುಕ ಛಾವಣಿ ಇರಲಾರದ್ದು, ಅಂತದ್ದು. ಅಲ್ಲಿ ನಾಲ್ಕು ಕೃತಕ ಮರ ಇಟ್ಟಾರ. ಅವೆರಡು ಅಂದ್ರ ನಂಗ ಭಾಳ ಇಷ್ಟ. ಈ ಮಣ್ಣಲ್ಲಿ ಏನಾದರೂ ಕಲಾಕೃತಿ ಮಾಡೋ ಚಾಳಿ ನಂಗ. ಆ ತರದ್ವು ಮಾಡೋಕೆ ತುಂಬ ದಿನದಿಂದ ಟ್ರೈ ಮಾಡ್ತಿದ್ದೆ. ಆಗ್ಲೇ ಇಲ್ಲ. ಹಾಗಾಗಿ ದಿನಾ ಫ್ರೀ ಟೈಮ್‌ ಸಿಕ್ಕಾಗೆಲ್ಲ ಅವನ್ನ ನೋಡ್ತಾ ನಿಂತ್ಬಿಡ್ತಿದ್ದೆ. ಹಾಗೇ ಯಾರಾದ್ರು ಒಬ್ರು ಬಂದು ನನ್ನ ಕಾಡಿಸಿಯೋ, ಬೈದೋ ಹೋಗ್ತಿದ್ರು, ಆದ್ರೆ ಸಂಜೀವ್‌ ಅಂತ ನಮ್‌ ಗ್ರೂಪ್‌ದವ. ಆಗ್ಲೆ ಹೇಳೀದ್ನಲ, ನಮ್ಮ ಫ್ರೆಂಡ್.‌ ಅವ ನನ್‌ ಅರ್ಥ ಮಾಡ್ಕೊಂಡಿದ್ದ ಅನ್ಸುತ್ತ. ನಾನಲ್ಲಿದ್ದಾಗ ಬಂದು ನನ್‌ ಜೊತೆ ನಿಂತು ಸಾಕಷ್ಟ್‌ ಚರ್ಚೆ ಮಾಡ್ತಿದ್ದ. ಕಲೆ ಬಗ್ಗೆ, ಕೆಲಸದ ಬಗ್ಗೆ, ಇಬ್ರು ಸೇರ್ಕೊಂಡ್‌ ಅದು ಇದು ಅಂತ ಒಳ್ಳೆ ವಿಮರ್ಶೆ ಮಾಡ್ತಿದ್ವಿ. ಅದೊಂಥರ ನಮ್ಮಿಬ್ರಿಗೂ ಆತ್ಮೀಯ ಸ್ಥಳ ಆಗೋಗಿತ್ತು. ಫಸ್ಟ್‌ ಫ್ಲೋರ್‌ನಲ್ಲಿ ನಿಂತು ಆ ಎರಡು ಮರಗಳನ್ನ ನೋಡೋಕೆ ನಿಂತ್ರೆ ಹೊತ್ತೋಗಿದ್ದೆ ಗೊತ್ತಾಗ್ತಿರ್ಲಿಲ್ಲ.

ನಾನು: ಇಷ್ಟೆಲ್ಲ ಪೀಠಿಕೆ ಯಾಕೆ. ನೀವ್‌ ಬೇಜಾರಾಗಿರೋದ್ಕೆ ಏನ್‌ ಕಾರಣ ಇದರಲ್ಲಿ?

ಅವಳು: ಅದೇ. ನಾವಿಬ್ರು ಕ್ಯಾಶುಅಲ್‌ ಆಗಿ ಮಾತಾಡ್ತಿದ್ವಿ. ಆದ್ರೆ ನೋಡೋರ್‌ ಕಣ್ಣಿಗೆ ಹೇಗ್‌ ಕಾಣ್ಸ್ತಿತ್ತೊ ಗೊತ್ತಿಲ್ಲ, ನಮಗೆ ಗೊತ್ತಿಲ್ದೆ ನಮ್‌ ಮಧ್ಯೆ ಇಲ್ಲದ್ ಕಥೆ ಕಟ್ತಾ ಹೋದ್ರು. ಎಲ್ಲಿವರ್ಗು ಅಂದ್ರೆ, ಹೋಗ್ಲಿ ಬಿಡಿ…

ನಾನು: ನೋಡೋರ್ಗೇನ್‌ ಕೆಲ್ಸ, ಅದಕ್ಕೆ ನೀವ್ಯಾಕೆ ತಲೆ ಕೆಡ್ಸ್ಕೋತೀರ?

ಅವಳು: ಹಾಗಲ್ಲ, ಕಾರ್ಪೋರೇಟ್‌ ಜೀವನದ ಬಗ್ಗೆ ನಿಮಿಗೆ ಗೊತ್ತಿಲ್ಲ, ಬರೀ ಕಂಪ್ಯೂಟರ್ ಮುಂದ ಇಡೀ ಜೀವನ ಕಳೆದೋಗಿಬಿಡತ್ತ. ನಮ್ಮದೂ ಅಂತ ಕೆಲ ಹವ್ಯಾಸಗಳು, ಕಂಫರ್ಟ್‌ ಝೋನ್‌ ಬೇಕಲ್ಲ? ನಮ್ಮಿಬ್ರಿಗು ನಮ್ಮ ವಿಚಾರಗಳನ್ನ ಬಿಟ್ರ ಬೇರೆ ವಿಷಯನ ಇರ್ತಿರಲಿಲ್ಲ. ಯಾಕ್ಚುಲಿ ಇಬ್ರು ಸೇರ್ಕೊಂಡ್‌ ಒಂದು ಯೂಟ್ಯೂಬ್‌ ಚಾನಲ್‌ ಸ್ಟಾರ್ಟ್‌ ಮಾಡಿದ್ವಿ, ಅದರಲ್ಲಿ ಈ ಬುಡಕಟ್ಟು ಜನಗಳ ಜೀವನ ಶೈಲಿಗಳನ್ನ ಕೌಶಲಗಳನ್ನ ಅಂದ್ರೆ ಕರಕುಶಲತೆ, ಡ್ರೆಸಿಂಗ್‌ ಸ್ಟೈಲ್‌, ಕಲೆ, ಹಾಡು ನೃತ್ಯ ಮುಂತಾದವುಗಳನ್ನ ಅಪ್ಲೋಡ್‌ ಮಾಡಿ, ಅದರಿಂದ ಬಂದಿದ್‌ ಹಣನ ಅವ್ರಿಗೋಸ್ಕರನೇ ಕೂಡಿಡ್ತಾ ಹೋದ್ವಿ.”

ನಾನು: ಒಂದ್‌ ನಿಮಿಷ್‌, ಈ ಬುಡಕಟ್ಟು ಜನ ನಿಮಿಗೆಲ್ಲಿಂದ ಸಿಕ್ರು? ಐ ಮೀನ್‌, ಒಳ್ಳೆ ಮೈಸೂರು ಅರಮನೆಯ ವಿಡಿಯೋ ಮಾಡಿ ಅಪ್ಲೋಡ್‌ ಮಾಡಿದಂಗೆ ಹೇಳ್ತಿದೀರಲಾ, ಅದಕೆ ಕೇಳ್ದೆ.

ಅವಳು: “ಅಯ್ಯೋ, ನಾವು ಟ್ರಿಪ್‌ ಹೋಗ್ತಿದ್ವಲಾ, ಆಗೆಲ್ಲ ಅಂತ ಸ್ಥಳಗಳಿಗೂ ಹೋಗ್ತಿದ್ವಿ. ‘ಹಾಡಿʼಅಂತ ಕೇಳೀರಿ?  ಅಲ್ಲಿಗೆ.

ನಾನು: ಓಹ್‌ ಹಾಗೆ..!

ಅವಳು: ಫಸ್ಟ್‌ ಟೈಮ್‌ ಆ ಮಕ್ಕಳಿಗೆ ಒಂದ್‌ ಡಿಜೆ ಸೆಟ್‌ ಕೊಡ್ಸಿದ್ವಿ.

ನಾನು: ಆಹ್?

ಅವಳು: ಹೌದು, ನಿಮ್ಗ ಅನ್ಸ್‌ಬಹುದು, ಬುಕ್‌, ಪೆನ್‌, ಅಂತ ಏನಾದ್ರು ಉಪಯೋಗ ಆಗೋವಂತದು ಕೊಡ್ಸೋದು ಬಿಟ್ಟು ಶೋಕಿ ಮಾಡೋಕೆ ಡಿಜೆ ಸೆಟ್‌ ಅಂತಾ. ಆದರೆ, ನೀವೊಂದ್ಸಲ ಅವರ ಡಾನ್ಸ್‌ ನೋಡಿ, ಹುಟ್ಟಿದಾಗಿಂದ ಕಲ್ಸಿದ್ರು ಆ ರೀತಿ ಮಾಡೋಕೆ ಸಾಧ್ಯ ಇಲ್ಲ, ಅಷ್ಟ್‌ ಚಂದ ಮಾಡ್ತಾರೆ.

ಒಂದೆರಡ್‌  ವಿಡಿಯೋ ತೋರ್ಸಿದ್ಲು. ನಂಗೆ ಆಶ್ಚರ್ಯ ಆಗ್ಹೋಯ್ತು. ನಿಜವಾಗ್ಲು ಸಕ್ಕತ್ತಾಗ್‌ ಮಾಡಿದ್ರು.

ನಾನು: ಗ್ರೇಟ್‌ ನೀವು… ಆದ್ರು, ಇಷ್ಟೆಲ್ಲ ಮಾಡಿ ಮತ್ಯಾಕ್‌ ಬೈಸ್ಕೊಂಡ್ರಿ?

ಅವಳು: ಇದನ್ನೆಲ್ಲ ನಾವಿಬ್ರೆ ಮಾಡಿದ್ದು ಕಾರಣ. ಎಲ್ರಿಗು ಈ ಥರ ಮನಸ್ಥಿತಿ ಇರಲ್ಲ, ನಾನ್‌ ಮೊದಮೊದ್ಲು ಇಂಥವನ್ನೆಲ್ಲ ಸೆರೆಹಿಡೀತಿದ್ದಾಗ ಸಂಜೀವ್‌ ಸಪೋರ್ಟ್‌ ಮಾಡ್ತಿದ್ದ, ಸಹಾಯ ಮಾಡ್ತಿದ್ದ. ಮೋಸ್ಟ್ಲಿ ಅವ್ನಿಗೂ ಇಂಟೆರೆಸ್ಟ್‌ ಇರಬಹುದೇನೋ ಅಂದ್ಕೊಂಡ್‌ ಸುಮ್ನಾಗಿದ್ದೆ. ಆದ್ರೆ ಒಂದಿನ ಆ ಮರಗಳನ್ನ ನೋಡ್ತಾ ಮಾತಾಡ್ತಿರ್ಬೇಕಾದ್ರೆ ಈ ಉಪಾಯ ಹೇಳ್ದ. ನಂಗೂ ಸರಿ ಅನಿಸ್ತು. ಸಕ್ಸಸ್‌ ಆದಮೇಲೆ ಎಲ್ರಿಗು ಹೇಳೋಣ ಅಂತ ಸೈಲೆಂಟ್‌ ಆಗೇ ಇದ್ವಿ. ಆದರೆ, ಅಷ್ಟರಲ್ಲಿ, ನಾವಿಬ್ರು ಕಮಿಟ್‌ ಆಗಿದೀವಿ ಆಗಾಗ ಇಬ್ರೆ ಸುತ್ತಾಡೋಕೋಗ್ತೀವಿ ಅಂತೆಲ್ಲ ನನ್‌ ಫ್ರೆಂಡ್‌ ಒಬ್ಳು ನಮ್ಮಂಗೆ ಹೇಳಿ, ಎಲ್ಲಕ್ಕೂ ಕಲ್‌ ಹಾಕಿದ್ಲು. ಈಗ ಎಲ್ಲರ ಜೊತೆ ಹೋಗ್ತೀನಂದ್ರು ನಮ್ಮಮ್ಮ ಬಿಡಲ್ಲ. ಬರೀ ಬೈತಾಳೆ.

ನಾನು: ಹ್ಮೂ… ಹೇಳೋಕೋಗ್ಬೇಡಿ.

ಅವಳು: ಯಾರಿಗೆ

ನಾನು: ನಿಮ್ಮಂಮ್ಮಂಗೆ ಮತ್ತೆ ನಿಮ್‌ ಫ್ರೆಂಡ್ಸ್‌ಗೆ.

ಅವಳು: ಅದ್ಹೇಗಾಗುತ್ತೆ. ಅದೊಂಥರ ಕಷ್ಟ. ಮೋರ್‌ ಓವರ್‌ ನಾನೇನು ತಪ್‌ ಮಾಡ್ತಿಲ್ವಲ?

ನಾನು: ಅದ್ಕೆ, ಒಳ್ಳೇದೇ ಮಾಡ್ತಿದೀರ, ಅದ್ಕೋಸ್ಕರ ಸುಳ್‌ ಹೇಳೋದ್ರಲ್ಲಿ ತೊಂದ್ರೆ ಇಲ್ವಲ?

ಅವಳು: ಹೌದು, ಆದ್ರು ಮನಸು ಒಪ್ಪಲ್ಲ.

ನಾನು: ಆದ್ರು, ನಿಮ್‌ ಯೋಜನೆ ನಂಗಿಷ್ಟ ಆಯ್ತು.

ಅವಳು: ಅದಕ್ಕೆ ಕಾರಣ ಆ ಸ್ಥಳ. ಬಹುಶಃ ನಮ್ಮಿಬ್ಬರ ಮನಸ್ಥತಿ ಹಾಗೂ ಸಮಾನ ವಿಚಾರಗಳು.

ನಾನು: ಒಂದ್‌ ಮಾತ್‌ ಕೇಳ್ತೀನಿ ತಪ್‌ ತಿಳ್ಕೊಬೇಡಿ.

ಅವಳು: ಇಲ್ಲ, ಸಂಜೀವ್‌ ಕೂಡ್‌ ಕ್ಲಿಯರ್‌ ಇದ್ದ, ನಮ್ಮಿಬ್ರ ಮಧ್ಯೆ ಯಾವ್ದೆ ಬೇರೆ ಭಾವನೆ ಇರ್ಲಿಲ್ಲ, ಬಹುಶಃ ಅದು ಈ ಪ್ರೀತಿ ಮೋಹ ಎಲ್ಲವನ್ನು ಮೀರಿದ ಆತ್ಮೀಯತೆ. ನಮ್ಮೊಳಗಿನ ಸಾಮಾಜಿಕ ಕಳಕಳಿಯ ಬಂಧನ.

ನಾನು: ನೋ ನೋ… ನಾನು ಬೇರೆ ಏನೋ ಕೇಳ್ಬೇಕು.

ಅವಳು: ನಂಗು ಆ ಥರ ಏನಿರ್ಲಿಲ್ಲ.

Meeting point jyothi samantri

ಸೌಜನ್ಯ : ಅಂತರ್ಜಾಲ

ನಾನು: ನನ್ನನ್ನೂ ಆ ಚಾನಲ್‌ಗೆ ಸಪೋರ್ಟರ್‌ ಆಗಿ ಸೇರ್ಸ್ಕೋತೀರ ಅಂತ ಕೇಳೋಕೆ ಹೊರ್ಟಿದ್ದೆ.

ಅವಳು: ಓಹ್‌ ಹಾಗಾ. ಸರಿ, ಆದ್ರೆ ಅದರ ಪೂರ್ತಿ ಜವಾಬ್ದಾರಿ ನಿಮಗೆ ಕೊಡ್ತೀನಿ, ನೀವ್‌ ಓಕೆ ಅಂದ್ರೆ.

ನಾನು: ವಾಟ್?

ಅವಳು: ಮತ್ತಿನ್ನೇನ್ ಮಾಡ್ಲಿ? ನಾನು ಕೆಲ್ಸ ಬಿಟ್ಟು ವಾಪಸ್ ಊರಿಗೆ ಹೋಗ್ತಿದೀನಿ. ಸಂಜೀವ್‌ ಕೂಡ ಆಸಕ್ತಿ ಕಳ್ಕೊಂಡಿದಾನೆ. ಇನ್ನ ಅದಕ್ಕೆ ಯಾರೂ ಗತಿ ಇಲ್ಲ.

ನಾನು: ಏನು?

ಅವಳು: ಹೌದು. ನಾನು ಅಳ್ತಿದ್ದದ್ದು ಅದ್ಕೆ. ನಮ್‌ ಬ್ಯಾಚಲ್ಲಿ ನಂಗೊಬ್ಳಿಗೆ ಕ್ಯಾಂಪಸ್‌ ಸೆಲೆಕ್ಷನ್‌ ಆಗಿದ್ದು, ಅದು ಮೈಸೂರಿಗೆ. ಆದ್ರೆ ಈಗ ಇಂಥ ಸಣ್ಣ ಕಾರಣಗಳಿಗೆ ಎಲ್ಲ ತೊರೆದು ಹೋಗ್ಬೇಕಿದೆ.

ಅವಳು: ಇಷ್ಟಕ್ಕೆ ಕೆಲ್ಸ ಬಿಡ್ಬೇಕಾ?

ಅವಳು: ನಾನು ಹುಡ್ಗಿ ಅಲ್ವ. ಏನಾದ್ರೂ ಹೆಚ್ಚೂ ಕಮ್ಮಿ ಆದ್ರೆ? ಊರ್‌ ಬಿಟ್‌ ಬಂದಮೇಲೆ ಕೆಲಸದ ಕೋಣೆ ಬಿಟ್ಟು ಎಲ್ಲೂ ಕದಲಬಾರದು. ಹುಡ್ಗುರ್‌ ಜೊತೆ ಮಾತಾಡೋದೇ ತಪ್ಪು ಅಂದ್ಮೇಲೆ ಅವ್ರ್‌ ಜೊತೆ ಸೇರ್ಕೊಂಡ್‌ ಹೀಗೆ ಅನ್‌ ಅಫೀಶಿಯಲ್‌ ಯೂಸ್ಲೆಸ್‌ ಕೆಲ್ಸ ಮಾಡಿದ್ರೆ ಯಾರಿಗಿಷ್ಟ ಆಗುತ್ತೆ ಹೇಳಿ?

ನಾನು: ಕಮಾನ್‌, ಎಲ್ಲಿದೀರ ನೀವು?

ಅವಳು: ಖಂಡಿತ ರೀ. ಎಳೆಕೂಸು ಹಣ್‌ ಹಣ್‌ ಮುದುಕೀನೂ ಬಿಡಲ್ಲ ಹೊಲಸು ಪ್ರಾಣಿಗಳು. ಅಂಥದ್ದರಲ್ಲಿ…

(ಅಳತೊಡಗಿದಳು)

ನಾನು: ನೀವ್‌ ಹೇಳ್ತಿರೋದು ನಿಜಕ್ಕೂ ಒಂದಕ್ಕೊಂದು ಸಂಬಂಧ ಇಲ್ಲ.

ಅವಳು: ಹೀಗೆಲ್ಲ ಓಡಾಡಿ ಕಂಟೆಂಟ್‌ ಕಲೆಕ್ಟ್‌ ಮಾಡಿದ್ದು ನಾವ್‌ ಮಾಡಿದ್‌ ತಪ್ಪು, ಎಲ್ರು ಜೊತೆ ಹೋದಾಗ ಎಲ್ರ ಜೊತೆ ಇರ್ದೆ ಇರೋದ್‌ ತಪ್ಪು.

ನಾನು: ಅದಕ್ಕೋಸ್ಕರ ಎಲ್ಲವನ್ನ ತೊರೆದು ಹೋಗೋದು ಸರಿಯಲ್ಲ. ಮೋಸ್ಟ್ಲಿ ನಿಮಗೋಸ್ಕರನೇ ಸಂಜೀವ್‌ ಆ ವರ್ಕ್‌ ಸ್ಟಾರ್ಟ್‌ ಮಾಡಿರ್ಬಹುದಲಾ, ಪ್ರೀತಿ ಅಂತ ಹೆಸರಿಡದಿದ್ದರೂ ಆ ಸ್ನೇಹಕ್ಕಾದರೂ ಬೆಲೆ ಕೊಡಬಹುದಿತ್ತು ನೀವು.

ಅವಳು: ನಿಜ. ಆದರೆ, ವಾಸ್ತವ ನಮ್ಮನ್ನ ಅಧೀರರನ್ನಾಗಿಸುವುದ್ರೊಳಗ ಯಶಸ್ವಿ ಆಕ್ಕೋತನ ಹೊಂಟೇತಿ. ಏನ್ ಮಾಡೋದು? ಬೇರೆ ಮತ್ತೆಲ್ಲಾದ್ರೂ ಕೆಲಸ ಮಾಡೋದು, ಹೇಗೂ ಅನುಭವ ಇದೆ. ಕೊರಗು ಎಂದರೆ, ನಾವಾಗೇ ಕಟ್ಟಿದ ಕನಸು ಅಲ್ಲೇ ಆ ಕೃತಕ ಮರಗಳಲ್ಲೇ ಅವಿತು ಹೋಗೂ ಹಂಗಾತು.

(ಕೊನೆಯದಾಗಿ ಪ್ರಯತ್ನಿಸಿ ರೂಪಿಸಿದ್ದ ಆ ಮರಗಳ ಮಣ್ಣಿನ ಕಲಾಕೃತಿಯ ಫೋಟೋ ತೋರಿಸಿದಳು. ಚಂದವಿತ್ತು. ಕಲಾಕೃತಿ ಹಾಗೂ ವಿಚಾರಗಳ ಅವನತಿ.)

ಅಷ್ಟೊತ್ತಿಗೆ ಮೆಜಸ್ಟಿಕ್‌ ಸ್ಟೇಷನ್‌ ಬಂದು ಅಕ್ಕಪಕ್ಕ ಜನ ಬರಲಾರಂಭಿಸಿದರು. ನಾವು ತೀರ ಗಂಭೀರ ಚರ್ಚೆಯಿಂದ ವಾಸ್ತವಕ್ಕೆ ಬಂದೆವು.

ಅಕಿ ಎಲ್ಲ ಹೇಳಿ ಹಗುರಾಗಿದ್ದಳು; ನಾನು ಚೂರು ಭಾರವಾಗಿದ್ದೆ.

ಇದನ್ನೂ ಓದಿ : Meeting Point : ಹುಡುಗರೇ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೇ ಇನ್ನೂ?

Read Full Article

Click on your DTH Provider to Add TV9 Kannada