Meeting Point : ಒಂದೆಡೆ ಹೆಣ್ಣೂ ಕೂಡ ಗಂಡಿನಂತೆ ಯೋಚಿಸುವ ಮನಸ್ಥಿತಿಯನ್ನು ತನಗರಿವಿಲ್ಲದೆ ರೂಢಿಸಿಕೊಂಡಿದ್ದಾಳೆ

Mindset : ‘ಈಗಿನ ಹುಡುಗಿಯರೇ ಹೀಗೇ. ಗಂಡಸರ ಹಾಗೆ ಆಡುತ್ತಾರೆ. ಜಮಾನಾ ಬಹಳ ಕೆಟ್ಟೋಗಿದೆ. ಹೀಗೆ ತಳಬುಡವಿಲ್ಲದ ಮಾತು ಆಡುತ್ತೇವೆ. ಆದರೆ ಕೆಟ್ಟಿರುವುದು ಜಮಾನಾ ಅಲ್ಲ, ಜನರ ಮನಸ್ಥಿತಿ. ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆಯುತ್ತಿದೆ. ಇದರಿಂದ ಒಟ್ಟಾರೆ ಹೆಣ್ಣುಕುಲ ಮತ್ತಷ್ಟು ಕುಗ್ಗಿ ಭೀತಿಗೆ ಒಳಗಾಗುತ್ತಿದೆ.’ ಬಾಲಾಜಿ ಕುಂಬಾರ

Meeting Point : ಒಂದೆಡೆ ಹೆಣ್ಣೂ ಕೂಡ ಗಂಡಿನಂತೆ ಯೋಚಿಸುವ ಮನಸ್ಥಿತಿಯನ್ನು ತನಗರಿವಿಲ್ಲದೆ ರೂಢಿಸಿಕೊಂಡಿದ್ದಾಳೆ
ಲೇಖಕ ಬಾಲಾಜಿ ಕುಂಬಾರ
Follow us
ಶ್ರೀದೇವಿ ಕಳಸದ
|

Updated on: Sep 12, 2021 | 11:03 AM

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್​ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ಬಾಲಾಜಿ ಕುಂಬಾರ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಚಟ್ನಾಳ ಗ್ರಾಮದವರು, ವೃತ್ತಿಯಲ್ಲಿ ಖಾಸಗಿ ಶಿಕ್ಷಕರಾದ ಇವರು ಪ್ರವೃತ್ತಿಯಲ್ಲಿ ಲೇಖಕರು. 2021ರಲ್ಲಿ “ಪ್ರೀತಿ ಹುಟ್ಟುವ ಹೊತ್ತು” ಕವನ ಸಂಕಲನ ಪ್ರಕಟವಾಗಿದೆ. ಸದ್ಯದಲ್ಲೇ ಚಿಂತನಾತ್ಮಕ ಲೇಖನಗಳ ಸಂಕಲನ ಪ್ರಕಟವಾಗಲಿದೆ.

ಅವರ ಬರಹ ಓದಿ:

ನೋಡೇ ಅಲ್ಲಿ ಅವ್ರಿಗೆ ಅಷ್ಟೂ ಬುದ್ಧಿ ಇಲ್ಲಾ. ಇಂಥ ಮಟ ಮಟ ಮಧ್ಯಾಹ್ನದಾಗ ಇಬ್ರ ಗಾರ್ಡನ್​ದಾಗ ಕುಂತಾರ್ ನಾಚ್ಕಿ ಇಲ್ದೋರ್, ಇವ್ರಿಗ್ ಮನ್ಯಾಗ್ ಹೇಳೋರ್ ಕೇಳೋರ್ ಯಾರಿಲ್ಲೇನೋ ಅನ್ಸುತದ್, ಕಾಲೇಜಿಗಂತ ಮನ್ಯಾಗ ಹೇಳಿ ಬರ್ತಾವಾ… ಇಲ್ಲಿ ಬಂದ್ ಇಂಥ ಕೆಲ್ಸಾ ಮಾಡ್ತಾವ್. ಈಗ ಯಾರಿಗೂ ಅಂಜ್ಕಿ ಅಂಬದೇ ಇಲ್ಲ. ಮನ್ಸಿಗ್ ಬಂದಾಗ್ ತಿರುಗ್ತಾರ್. ಟೈಮ್ ಟೇಬಲ್, ಮಾನಾ ಮರ್ಯಾದೆ, ಸಣ್ಣೋರ್ ದೊಡ್ಡೋರು ಅಂಬದೇ ಖುನಾ ಇಲ್ಲ. ಪ್ಯಾರ್ ಬಂದ್ರೆ ಸಾಕು ಇವ್ರ ಮನ್ಸು ಹಳ್ಳದಾಗಿಂದ್ ನೀರ್ ಹರಿದಾಂಗ ಜುಳು ಜುಳು ಅಂತ ಹರಿತಾದ್. ಇಂಥಾ ಮಕ್ಳಿಂದಾನ ಅವ್ವಪ್ಪಂದ ಮರ್ಯಾದೆ ಮಣ್ಣ ಪಾಲಾಗ್ತದ.

ನಾಲ್ಕೈದು ವರ್ಷಗಳ ಹಿಂದೆ ಕಾರ್ಯಕ್ರಮ ನಿಮಿತ್ತವಾಗಿ ಬೆಂಗಳೂರಿಗೆ ಹೋಗಿದ್ದೆ. ಕಾರ್ಯಕ್ರಮ ಶುರುವಾಗಲು ಇನ್ನೂ ಸಾಕಷ್ಟು ಸಮಯವಿತ್ತು. ಅಲ್ಲೇ ಹತ್ತಿರದಲ್ಲಿ ವಿಧಾನಸೌಧ, ಹೈಕೋರ್ಟ್, ಕಬ್ಬನ್ ಪಾರ್ಕ್ ನೋಡಿಕೊಂಡು ಬರಲು ಎಲ್ಲರೂ ಹೋದೆವು. ಕಬ್ಬನ್ ಪಾರ್ಕ್ ಒಳಗೆ ಗಿಡದ ಅಕ್ಕ-ಪಕ್ಕದಲ್ಲಿ ಆಪ್ತವಾಗಿ ಕುಳಿತ ಪ್ರೇಮಿಗಳನ್ನು ಕಂಡು ನಮ್ಮೂರಿನ ತಾಯಂದಿರು ಆಡಿಕೊಂಡ ಈ ಮೇಲಿನ ಮಾತುಗಳಿವು. ಅವರು ಅಷ್ಟಕ್ಕೇ ಬಿಡಲಿಲ್ಲ. ‘ಬೇರೆ ಏನಾದರೂ ನೋಡೋಕೆ ಹೋಗ್ತಿದ್ದೆವು. ಕಣ್ಣಿಂದ್ ನೋಡಬಾರದಂಥಾ ಜಾಗಕ್ಕ ಕರ್ಕೊಂಬಂದ್ರಿ’ ಎಂದು ನನ್ನನ್ನೂ ತರಾಟೆಗೆ ತೆಗೆದುಕೊಂಡರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಇನ್ನೂ ಗಂಡಿನ ದಿಗ್ಬಂಧನದಲ್ಲಿದ್ದಾಳೆ. ಹೆಣ್ಣೂ ಕೂಡ ಗಂಡಿನಂತೆ ಯೋಚಿಸುವ ಮನಸ್ಥಿತಿಯನ್ನು ತನಗರಿವಿಲ್ಲದೆ ರೂಢಿಸಿಕೊಂಡಿದ್ದಾಳೆ. ಗಂಡಾಳ್ವಿಕೆಯ ವ್ಯವಸ್ಥೆ ತನ್ನ ಸ್ವಾರ್ಥಕ್ಕಾಗಿ ಹೆಣ್ಣಿನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೇಲಿ ಹಾಕುತ್ತ ಬಂದಿದೆ ಎನ್ನುವುದು ಆಕೆಗಿನ್ನೂ ತಿಳಿಯುತ್ತಿಲ್ಲ. ಹೇಗೆ ತಿಳಿದೀತು, ಸ್ತ್ರೀ – ಮಾತೆ ಎಂದು ಆರಾಧಿಸುತ್ತ ಅವಳನ್ನು ‘ಪಟ್ಟಗಟ್ಟಿ’ ಕೂರಿಸಿರುವಾಗ? ಇನ್ನೊಂದೆಡೆ ಸುಶಿಕ್ಷಿತ ಮಹಿಳೆಯೂ ಪ್ರತೀಕ್ಷಣವೂ ‘ನ್ಯಾಯ ಬೇಕು’ ಎಂದು ಅಂಗಲಾಚುತ್ತಲೇ ಇದ್ದಾಳೆ. ದೌರ್ಜನ್ಯ, ಅತ್ಯಾಚಾರ, ಶೋಷಣೆ, ವಂಚನೆಗೆ ಕೊನೆಯಿಲ್ಲವೆ? ಇಂಥ ದುರಂತ ಕಾಲಘಟ್ಟದಲ್ಲಿ ನಾವಿದ್ದೇವೆ.

ಇತ್ತಿಚೆಗೆ ಮೈಸೂರಿನ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಗೆಳೆಯರೊಬ್ಬರ ಜೊತೆಗೆ ಮಾತನಾಡುತ್ತಾ, ‘ಅಷ್ಟೊತ್ತಿಗೆ ಆ ನಿರ್ಜನ ಪ್ರದೇಶದಲ್ಲಿ ಇಬ್ಬರೇ ಹೋಗುವ ಅಗತ್ಯವೇನಿತ್ತು? ಲವ್ ಮಾಡಲು ಬೇರೆ ಪಾಯಿಂಟ್, ಬೇರೆ ಸಮಯ ಸಿಗಲಿಲ್ಲವೆ? ಅವರಿಗೆ ಒಂದಿಷ್ಟಾದರೂ ಜವಾಬ್ದಾರಿ ಬೇಡವೇ? ಎನ್ನುತ್ತಾ ಆ ಘಟನೆಗೆ ಕಾರಣ ಆ ಇಬ್ಬರು ಪ್ರೇಮಿಗಳೇ, ತಪ್ಪು ಅವರದ್ದೇ! ಹೊರತು ಅತ್ಯಾಚಾರ ಎಸಗಿದ ಆ ಏಳು ಕಾಮುಕರದ್ದು ಖಂಡಿತ ಅಲ್ಲ ಎನ್ನುವುದು ಅವರ ಖಾರವಾದ ಮಾತಿನ ಪೂರ್ತಿ ಸಾರಾಂಶವಾಗಿತ್ತು.

ಅವರು ಹೋಗಿದ್ದು ತಪ್ಪು ಒಪ್ಪೋಣ. ಹಾಗಾದರೆ ಮನೆಯಲ್ಲಿ ನಡೆದ ಅತ್ಯಾಚಾರ, ಅಪ್ರಾಪ್ತ ವಯಸ್ಸಿನ ಮಗುವಿನ ಮೇಲೆ ನಡೆದ ಅತ್ಯಾಚಾರ, ತಾಯಿ ವಯಸ್ಸಿನ ಮಹಿಳೆ ಮೇಲೆ ನಡೆದ ಅತ್ಯಾಚಾರ, ಯುವತಿಯರ ಮೇಲೆ ಗ್ಯಾಂಗ್ ರೇಪ್ ಕೊಲೆ, ದೌರ್ಜನ್ಯಗಳು… ಇಂಥ ನೂರಾರು ಘಟನೆಗಳು ನಡೆದಿವೆ ಅಲ್ವಾ, ಅದಕ್ಕೆ ಕಾರಣ ಯಾರು? ಹೆಣ್ಣಿನ ವಯಸ್ಸೋ, ಸಮಯವೋ, ತೊಟ್ಟ ಬಟ್ಟೆಯೋ, ಏನಾದರೂ ಕಾರಣವಿದೆಯಾ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದಾಗ ಆತನ ಬಳಿ ಉತ್ತರವಿಲ್ಲ.

ನಾನಾವಾಗ ಪದವಿ ಓದುತ್ತಿದ್ದೆ, ದಿನಾಲೂ ಮೂವತ್ತು ಕಿ.ಮೀ.ದೂರ ಬಸ್ ಪ್ರಯಾಣ ಮಾಡುತ್ತಿದ್ದೆ. ಕಾಲೇಜಿಗೆ ದಿನಾಲೂ ಮುಂಜಾನೆಯೇ ಹೋಗುವುದು ಒಂದೇ ಸಮಯಕ್ಕೆ. ಹೀಗಾಗಿ ಪ್ರತಿನಿತ್ಯ ಅದೇ ಬಸ್, ಅದೇ ಡ್ರೈವರ್, ಅದೇ ಕಂಡಕ್ಟರ್ ಇರುತ್ತಿದ್ದರು. ಬಸ್ಸಿನಲ್ಲಿಯೂ ಹೆಚ್ಚುಕಮ್ಮಿ ಪರಿಚಯದವರೇ, ಜೂನಿಯರ್, ಸೀನಿಯರ್, ಕ್ಲಾಸ್ ಮೇಟ್ಸ್ ಇವರಿಂದಲೇ ಫುಲ್ ಸೀಟ್ ಭರ್ತಿ. ಹಿರಿ-ಕಿರಿಗಳೆಲ್ಲರೂ ಸೇರಿ ‘ಬಸ್ ಮೇಟ್ಸ್​’ ಆದೇವು, ಸೀಟುಗಳೊಂದಿಗೆ ನಮ್ಮ ಭಾವನೆಗಳನ್ನೂ ಹಂಚಿಕೊಂಡೆವು. ಅಲ್ಲಲ್ಲಿ ಸಣ್ಣ ಏರಿಳಿತಗಳು ಸಾಮಾನ್ಯವಾಗಿದ್ದವು.

ಮುಂದೆ ಅಲ್ಲಿ ಕೆಲವರಲ್ಲಿ ಅಣ್ಣ-ತಮ್ಮ, ಅಣ್ಣ-ತಂಗಿಯರ ಸಂಬಂಧವಾಗಿ ಬೆಳೆದಿತ್ತು. ಇನ್ನೂ ಕೆಲವು ‘ಜೂನಿಯರ್ ಸೀನಿಯರ್’ ಗಳ ಮಧ್ಯೆ “ಲವ್ ಜರ್ನಿ” ಶುರುವಾಗಿತ್ತು. ಅವಳಿಗಾಗಿ ಅವನು ಬಸ್ ಮಿಸ್ ಮಾಡದೇ ಹೋಗುವುದು, ಪಕ್ಕದಲ್ಲಿ ಅವಳಿಗಾಗಿ ಸೀಟ್ ಕಾದಿರಿಸುವುದು. ‘ಮೀಟಿಂಗ್ ಪಾಯಿಂಟ್’ ಫಿಕ್ಸ್ ಮಾಡುವುದು, ಇಂಥ ಸಣ್ಣ ಪ್ರಯತ್ನಗಳು ನಡೆಯುತ್ತಿದ್ದವು. ಕಾಲೇಜು ದಿನಗಳು ಅಂದರೆ ಓದಿನೊಂದಿಗೆ ಮೋಜು, ಮಸ್ತಿ, ಆಟ… ಒಟ್ಟಿನಲ್ಲಿ ಲೈಫ್ ಎಂಜಾಯ್ ಮಾಡಬೇಕು ಎನ್ನುವ ಆ ದಿನಗಳು. ಲವ್ ಆದವರಿಗೆ ವೈಯಕ್ತಿಕ ಸ್ವಾತಂತ್ರ್ಯವಿದ್ದರೂ ಕುಟುಂಬದ ದಿಗ್ಭಂಧನ, ಸಾಮಾಜಿಕ ಭಯ. ಗೊತ್ತಾದರೆ ‘ಲವ್ ಫಜೀತಿ’ಯ ಭಯ, ದುಗುಡ, ಆದರೂ ಚಿಗುರಿದ ಕನಸು ಚಿವುಟುವುದು ಅಸಾಧ್ಯ ಎನ್ನಿಸುತ್ತಿತ್ತು.

ಇಂಥವರ ಮಧ್ಯೆ ಒಬ್ಬಿಬ್ಬರು ಮಾತ್ರ ಯಾವುದೇ ಮುಚ್ಚುಮರೆ ಇಲ್ಲದೆ ಬಿಂದಾಸ್ ಆಗಿ ಹುಡುಗನ ಜೊತೆ ಸುತ್ತಾಡುವುದು, ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಕುಳಿತುಕೊಳ್ಳುವುದು, ಕಾಲೇಜು ಲೈಬ್ರರಿಯಲ್ಲಿ ಎದುರು-ಬದುರು ಕೂತು ಓದುವ ನೆಪದಲ್ಲಿ ‘ಲವ್ ಲೈಫ್’ ಬಗ್ಗೆ ಹರಟುವುದು… ಇದೆಲ್ಲಾ ಕೆಲವರಿಗೆ ಮಾಮೂಲಿ ಎನಿಸಿದರೆ ಉಳಿದವರಿಗೆ ‘ಛೇ..ಅವಳಾ! ಅವ್ನ್ ಜೊತೆ ಸುತ್ತಾಡ್ತಾಳೆ, ಬಸ್ಸಿನಲ್ಲಿ ಒಂದೇ ಸೀಟ್ ನಲ್ಲಿ ಕುಂತು ಬರ್ತಾಳೆ, ಕಾಲೇಜು ಮುಗಿದ ಮೇಲೆ ಇಬ್ಬರೇ ನಡೆದುಕೊಂಡು ಬರ್ತಾರೆ, ಅವಳಿಗೆ ಮನೆಯವರ ಭಯವೇ ಇಲ್ಲ ನೋಡಿ’ ಅವಳಿಂದ ದೂರ ಇರುವುದೇ ಬೆಟರ್’ ಎನ್ನುವ ಮಿತ್ರ ಮಂಡಳಿಯ ಲವ್ ವಿರೋಧಿ ಸದಸ್ಯರು. ಅವಳ ಜೊತೆಗೆ ಇದ್ರೆ ನಮ್ಮ ಮನೆಯಲ್ಲಿ ಕಾಲೇಜಿಗೆ ಕಳುಹಿಸುವುದಿಲ್ಲ. ಆ ತರಹ ಲವ್ವು ಡವ್ವು ಅಂತ ಹೋದ್ರೆ ನಮ್ದು ಕಥೆ ಅಷ್ಟೇ ಎನ್ನುವ ಸಂಗಡಿಗರು.

ಒಮ್ಮೊಮ್ಮೆ ಯಾರೋ ಪರಿಚಯ ಇಲ್ಲದೇ ಇರುವ ಹುಡುಗಿಯೊಬ್ಬಳು ಸೀಟ್ ಹಂಚಿಕೊಂಡು ಕುಳಿತರೆ ಸಾಕು.  ಅಬ್ಬಾ..! ಯಾವ್ದೋ ಹುಡ್ಗಿ ಜೊತೆ ಸುತ್ತಾಡ್ತವ್ನೇ.. ಅವರಿಗೆ ಬಸ್ ಮೀಟಿಂಗ್ ಪಾಯಿಂಟ್’ ಆಗಿದೆ ಅಂತೆಲ್ಲ ಅರ್ಥೈಸಿಕೊಳ್ಳುತ್ತಾರೆ. ಆದರೆ ಅಸಲಿಗೆ ಅವರು ಯಾರು, ಏನು ಸಂಬಂಧ? ಯಾವುದನ್ನೂ ಲೆಕ್ಕಿಸದೇ ಅವರಿಗೆ ‘ಲವ್ ಬರ್ಡ್ಸ್’ ಎಂದೇ ಪರಿಗಣಿತ್ತಾರೆ. ಆದರೆ ಎಷ್ಟೋ ಸಲ ಒಂದೇ ಊರಿನ ಒಂದೇ ಗಲ್ಲಿಯ ಅಕ್ಕಪಕ್ಕ ಮನೆಯವರಾಗಿರುತ್ತಾರೆ. ಹಳ್ಳಿಯಿಂದ ಒಬ್ಬಳೇ ನಡೆದುಕೊಂಡು ಬರಬೇಕು, ಬಸ್ ಮಿಸ್ ಆಗಬಹುದು, ಕತ್ತಲಾಗಬಹುದು, ಬಸ್ ಇಳಿದು ಒಬ್ಬಳೇ ಮೂರು ಕಿ.ಮೀ ನಡೆದುಕೊಂಡು ಬರಲು ಭಯ ಆಗಬಹುದು ಎನ್ನುವ ಕಾರಣಕ್ಕೆ ಹುಡುಗಿ ಒಮ್ಮೊಮ್ಮೆ ಹುಡುಗನ ಜೊತೆ ಬರುತ್ತಿರುತ್ತಾಳೆ ಅಷ್ಟೇ. ಮತ್ತೇನೂ ಅಲ್ಲ. ಆದರೆ ಸಮಾಜದ ದೃಷ್ಟಿಯಲ್ಲಿ ಅವರಿಬ್ಬರೂ ಲವ್ ಅಪರಾಧಿಗಳೇ? ಸಂಸ್ಕಾರಹೀನರೆ?

‘ಏ…ಹುಡ್ಗಿಯರೇ, ನೀವು ಹಾಗೆಲ್ಲ ಮಾಡಬಾರ್ದು, ಹುಡುಗರ ಥರಾ ಪ್ಯಾಂಟ್ ಹಾಕಬಾರ್ದು, ಟೀ ಶರ್ಟ್ ತೊಡಬಾರ್ದು. ನಿಮ್ಗೆ ಎಷ್ಟು ಸಲ ಹೇಳಿದರೂ ಕೇಳಲ್ಲಾ. ಹಾಗೆಲ್ಲ ಮಾಡೋಕೆ ಏನ್ ಗಂಡ್ಸಾ ನೀನು? ಅಂತೆಲ್ಲಾ ‘ಸಮಾನತೆ‘ ಪಾಠ ಹೇಳಿಕೊಡುವ ಮೇಷ್ಟ್ರು ಶಾಲಾ – ಕಾಲೇಜುಗಳಲ್ಲಿ ಹುಡುಗಿಯರಿಗೆ ಅಂದಾಗ , ನಾವು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯ್ತೇ? ಗಂಡಿನ ಸಮಾನವಾಗಿ ಬದುಕುವ ಹಕ್ಕು ನಮಗಿಲ್ವೇ? ನಾವು ಕನಿಷ್ಟರಾಗಿಯೇ ಉಳಿಯಬೇಕೇ? ಎನ್ನುವ ಹಲವಾರು ಪ್ರಶ್ನೆಗಳು ಕಾಡದೇ ಇರವು. ಆದರೆ ಬಾಯಿಬಿಟ್ಟು ಪ್ರಶ್ನಿಸುವ ಹಕ್ಕು ಇಲ್ಲದಂತೆ ಮಾಡಿದ ‘ಮರ್ಯಾದೆ ಕ್ರೆಡಿಟ್’ ಪುರುಷ ಪ್ರಧಾನ ಸಮಾಜಕ್ಕೆ ಸಲ್ಲಲೇಬೇಕು.

‘ಈಗಿನ ಹುಡುಗಿಯರೇ ಹೀಗೇ. ಗಂಡಸರ ಹಾಗೆ ಆಡುತ್ತಾರೆ. ಜಮಾನಾ ಬಹಳ ಕೆಟ್ಟೋಗಿದೆ’ ತಳಬುಡವಿಲ್ಲದ ಮಾತು ಆಡುತ್ತೇವೆ. ಆದರೆ ಕೆಟ್ಟಿರುವುದು ಜಮಾನಾ ಅಲ್ಲ, ಜನರ ಮನಸ್ಥಿತಿ. ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆಯುತ್ತಿದೆ. ಇದರಿಂದ ಹೆಣ್ಣು ಮತ್ತಷ್ಟು ಕುಗ್ಗಿ ಭೀತಿಗೆ ಒಳಗಾಗುತ್ತಿದ್ದಾಳೆ. ಹೈದರಾಬಾದ್ ನಲ್ಲಿ ಜರುಗಿದ ಅತ್ಯಾಚಾರ ಘಟನೆಯ ಆರೋಪಿಗಳಿಗೆ ಅಲ್ಲಿನ ಸರ್ಕಾರದ ಕಾನೂನು ಸ್ಪಾಟ್ ನಲ್ಲಿಯೇ ಅಪರಾಧಿಗಳಿಗೆ ಎನ್ಕೌಂಟರ್ ಮಾಡಿ ಮುಗಿಸಲು ಸೂಚಿಸುವಂತೆ ಇತರೆ ರಾಜ್ಯಗಳಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಅದೇ ಕಾನೂನು ಜಾರಿಗೊಳಿಸುವುದಿಲ್ಲ ಯಾಕೆ? ಅತ್ಯಾಚಾರಕ್ಕೊಳಗಾದ ಯುವತಿಯ ಪೋಷಕರಿಗೆ ಬೆದರಿಕೆ ಹಾಕಿ ಕೇಸ್ ಮುಚ್ಚಿಡುವ ಪ್ರಯತ್ನಗಳು ಅದೆಷ್ಟೋ ನಡೆಯುತ್ತಿವೆ. ಇಂಥ ಅಮಾನುಷ ಘಟನೆ, ಕ್ರೌರ್ಯ ಮನಸ್ಥಿತಿ, ಅಸಮಾನತೆ ವ್ಯವಸ್ಥೆ, ನಿರ್ಬಂಧ ಹೇರಿಕೆಗಳಿಗೆ ಕೊನೆಯೇ ಇಲ್ಲವೇ? ಅತ್ಯಾಚಾರ ನಡೆದಾಗೆಲ್ಲಾ ಮುಖಪುಟದಲ್ಲಿ ‘ಕ್ಷಮಿಸಿ ಬಿಡು ಮಗಳೇ’ ಎಂದು ಪೋಸ್ಟ್ ಹಾಕುವುದು ಇನ್ನೆಷ್ಟು ದಿನ ಮುಂದುವರಿಸಬೇಕು?

ಇಂಥ ಹೃದಯವಿದ್ರಾವಕ ಘಟನೆಗಳು ನಡೆದಾಗಲೇ ನಾವೆಲ್ಲರೂ ಮತ್ತೆ ಮತ್ತೆ ‘ಜಸ್ಟಿಸ್ ಫಾರ್ ‘ಎಂದು ಕೂಗುತ್ತೇವೆ. ಸಮಾಜದಲ್ಲಿ ತಲೆ ತಗ್ಗಿಸಿ ನಡೆಯುವ ಅಮಾನುಷ ಘಟನೆಗಳು ಜರುಗಿದರೂ ನಾವು ಸಮಜಾಯಿಷಿ ಕೊಟ್ಟು ಹೆಣ್ಣನ್ನೇ ಗುರಿಯಾಗಿಸಲು ತುದಿಗಾಲಲ್ಲಿ ನಿಲ್ಲುತ್ತೇವೆ. ನಿಜಕ್ಕೂ ಇದು ನ್ಯಾಯವೇ?

ಇದನ್ನೂ ಓದಿ : Meeting Point : ಒಂಟಿ ಹುಡುಗನ ಮೇಲೆ ಹುಡುಗಿಯರು ಅತ್ಯಾಚಾರ ಮಾಡುವುದಿಲ್ಲವೆಂಬ ಧೈರ್ಯ ನಮಗೆ!

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ