ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಕಥಾ ಕೀರ್ತನದ ಕನ್ನಡಿ ಹಿಡಿವ ಪುಸ್ತಕ

ಭಾರತವನ್ನು ಒಂದಾಗಿ ಬೆಸೆದಿರುವ ಹಲವು ಅಂಶಗಳ ಪೈಕಿ ‘ಕಥಾ ಕೀರ್ತನೆ’ಯೂ ಒಂದು. ಅದು ಹೇಗೆ ಎಂದು ತಿಳಿಯುವ ಆಸಕ್ತಿ ನಿಮಗಿದ್ದರೆ ಈ ಕೃತಿಯನ್ನು ಒಮ್ಮೆ ಓದಿ ನೋಡಿ.

ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಕಥಾ ಕೀರ್ತನದ ಕನ್ನಡಿ ಹಿಡಿವ ಪುಸ್ತಕ
ದತ್ತಾತ್ರೇಯ ವೇಲಣಕರ್ ಮತ್ತು ಕಥಾ ಕೀರ್ತನದ ಮೇಲೆ ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಭಾವ ಪುಸ್ತಕ
Ghanashyam D M | ಡಿ.ಎಂ.ಘನಶ್ಯಾಮ

|

Sep 13, 2022 | 9:38 AM

ಭಾರತವು ಲಿಖಿತ ಪರಂಪರೆಗಿಂತಲೂ ಮೌಖಿಕ ಪರಂಪರೆಗೆ ಪ್ರಾಧಾನ್ಯತೆ ಕೊಟ್ಟ ದೇಶ. ಹೀಗಾಗಿಯೇ ನಮ್ಮ ದೇಶದ ಬಹುತೇಕ ಜನರು ಅನಕ್ಷರಸ್ಥರಾಗಿದ್ದರೂ ವಿದ್ಯಾವಂತರಾಗಿದ್ದರು. ಲೌಕಿಕ ಚಟುವಟಿಕೆಗೆ ಅಗತ್ಯವಿರುವ ಕೌಶಲಗಳ ಜೊತೆಗೆ ರಾಮಾಯಣ, ಮಹಾಭಾರತದಂಥ ಮಹಾನ್​ ಗ್ರಂಥಗಳು ಅವರಿಗೆ ಹೃದ್ಗತವಾಗಿದ್ದವು. ಹೀಗೆ ಲೌಕಿಕ ಮತ್ತು ಪಾರಮಾರ್ಥಿಕ ಸಂದೇಶವನ್ನು ಜನರಿಗೆ ಕೊಡುತ್ತಾ, ಸಾಮಾನ್ಯ ಜನರಲ್ಲಿಯೂ ಅಧ್ಯಾತ್ಮದ ಜಾಗೃತಿ ಮೂಡಿಸಿದ ಮಹತ್ವದ ಕಲೆ ‘ಕಥಾ ಕೀರ್ತನೆ’. ಕರ್ನಾಟಕದ ದಕ್ಷಿಣ ಭಾಗದಲ್ಲಿ ಇದು ‘ಹರಿಕಥೆ’ ಎಂದೂ, ಉತ್ತರ ಭಾಗದಲ್ಲಿ ‘ಶಿವಕಥೆ’ ಎಂದೂ ಪ್ರಸಿದ್ಧವಾಯಿತು. ಕಥೆಯ ಜೊತೆಗೆ ಹಾಡಿನ (ಸಂಗೀತ) ಹದವರಿದ ಮಿಶ್ರಣ ಇರುವ ಈ ಕಲೆಯಲ್ಲಿ ನೂರಾರು ವರ್ಷಗಳ ಶಿಷ್ಯಪರಂಪರೆ ಬೆಳೆದು ಬಂದಿದೆ. ಇಂದಿಗೂ ನಾಡನ್ನು ಬೆಳಗುತ್ತಿದೆ.

ಕಥಾ ಕೀರ್ತನೆಯ ಮೇಲೆ ಸಂಗೀತದ ಪ್ರಭಾವ ಬಹುದೊಡ್ಡದು. ಬಳಕೆಯಿಂದ, ಅಭ್ಯಾಸದಿಂದ, ಕೇಳ್ವಿಕೆಯಿಂದ ಇದು ಎಲ್ಲರಿಗೂ ಗೊತ್ತು. ಆದರೆ ಶಾಸ್ತ್ರೀಯವಾಗಿ ಇದನ್ನು ನಿರೂಪಿಸುವ ಅಧ್ಯಯನಗಳು ಕನ್ನಡದಲ್ಲಿ ಹೆಚ್ಚಾಗಿ ಪ್ರಕಟವಾಗಿಲ್ಲ. ಈ ಕೊರತೆಯನ್ನು ನೀಗಿಸುವ ಪ್ರಯತ್ನವಾಗಿರುವ ಹಿಂದೂಸ್ತಾನಿ ಸಂಗೀತ ವಿದ್ವಾಂಸ ಡಾ ದತ್ತಾತ್ರೇಯ ಎಲ್. ವೇಲಣಕರ್ ಅವರ ‘ಕಥಾ ಕೀರ್ತನದ ಮೇಲೆ ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಭಾವ’ ಕೃತಿ ಮಹತ್ವ ಪಡೆಯುತ್ತದೆ.

ಕಥಾ ಕೀರ್ತನ ಎಂದರೇನು ಎಂಬ ಪ್ರಶ್ನೆಗೆ ಹತ್ತಾರು ಬಗೆಯ ಉತ್ತರಗಳನ್ನು ಸಂಶೋಧಕರು ನೀಡಿದ್ದಾರೆ. ‘ಕಥಾ-ಕೀರ್ತನವು ಶಾಸ್ತ್ರೀಯ ಸಂಗೀತ, ನೃತ್ಯ, ಅಭಿನಯ, ಜಾನಪದ, ಗಮಕ, ವಾಕ್​ಪಟುತ್ವ- ಇಂತಹ ಅನೇಕ ಕಲೆಗಳ ಸಮ್ಮಿಶ್ರವಾದ ವಿಶಿಷ್ಟ ಕಲಾಪ್ರಕಾರವಾಗಿದೆ’ ಎಂದು ಲೇಖಕರು ಕೃತಿಯ ಆರಂಭದಲ್ಲಿಯೇ ವಿವರಣೆ ಕೊಡುತ್ತಾರೆ. ತಮ್ಮ ಅಧ್ಯಯನದ ಉದ್ದೇಶವನ್ನು ಸ್ಪಷ್ಟಪಡಿಸುವ ಅವರು, ‘ಕಥಾ ಕೀರ್ತನವು ಇನ್ನೂ ಹೆಚ್ಚು ಪ್ರಚಾರಕ್ಕೆ ಬಂದು, ಆ ಕಲೆಯ ಬಗೆಗೆ ಜಾಗೃತಿ ಉಂಟಾಗಬಹುದೆಂಬ ಮಹದಾಶೆ ಈ ಅಧ್ಯಯನದ ಉದ್ದೇಶವಾಗಿದೆ’ ಎಂದು ಹೇಳಿದ್ದಾರೆ.

ದಾಸ ಸಾಹಿತ್ಯ ಮತ್ತು ಕಥಾಕೀರ್ತನೆ ನಡುವಣ ಕೊಂಡಿಯನ್ನು ಅರ್ಥೈಸಲು ಸಂಶೋಧಕರು ಪ್ರಯತ್ನಿಸಿದ್ದಾರೆ. ಕ್ಷೇತ್ರಕಾರ್ಯದ ಅನುಭವಗಳು, ಅವರು ಸಂಗ್ರಹಿಸಿರುವ ಕೃತಿಗಳ ಮಾಹಿತಿ ಬೆರಗು ಹುಟ್ಟಿಸುವಂತಿದೆ. ರಾಮಾಯಣ, ನಾರದ ಭಕ್ತಿ ಸೂತ್ರ ಸೇರಿದಂತೆ ಹಲವು ಪೌರಾಣಿಕ ಕೃತಿಗಳಲ್ಲಿ ಪ್ರಸ್ತಾಪವಾಗಿರುವ ಕಥಾ ಕೀರ್ತನೆ ಕುರಿತ ಉಲ್ಲೇಖಗಳ ಜೊತೆಗೆ ಐತಿಹಾಸಿಕ ಉಲ್ಲೇಖಗಳನ್ನೂ ಮೊಗೆದು ಕೊಟ್ಟಿದ್ದಾರೆ. ಬೇಲೂರು ಕೇಶವದಾಸರ ‘ಶ್ರೀ ಕರ್ನಾಟಕ ಭಕ್ತ ವಿಜಯ’ ಸೇರಿದಂತೆ ಹಲವು ಮಹತ್ವದ ಕೃತಿಗಳ ಸಮಗ್ರ ಪರಿಶೀಲನೆ ಹಾಗೂ ಆ ಕೃತಿಗಳ ಅತಿಮುಖ್ಯ ಅಂಶಗಳ ಬಗ್ಗೆ ಓದುಗರ ಗಮನ ಸೆಳೆಯುವಲ್ಲಿಯೂ ದತ್ತಾತ್ರೇಯ ವೇಲಣಕರ್ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಜೊತೆಗೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, (ತೆಲಂಗಾಣ), ಬಂಗಾಳ, ಕೇರಳ, ಉತ್ತರ ಭಾರತ, ಗುಜರಾತ್ ಮತ್ತು ವಿದೇಶಗಳಲ್ಲಿ ಬೆಳೆದು ಬಂದ ಕಥಾಕೀರ್ತನೆಯ ಪರಂಪರೆಗಳನ್ನೂ ಈ ಕೃತಿ ಪರಿಚಯಿಸುತ್ತದೆ. ಪ್ರತಿ ಪರಂಪರೆಯೂ ಮತ್ತೊಂದು ಪರಂಪರೆಯ ಮೇಲೆ ಬೀರಿದ ಮತ್ತು ಸ್ವೀಕರಿಸಿದ ಪ್ರಭಾವಗಳ ವಿಶ್ಲೇಷಣೆ ಓದುವಾಗ ಲೇಖಕರ ಶ್ರದ್ಧೆ ಮತ್ತು ಆಳವಾದ ವಿದ್ವತ್ತಿನ ಬಗ್ಗೆ ಮೆಚ್ಚುಗೆ ಮೂಡುತ್ತದೆ. ಸಂಶೋಧಕರು ಸಂಗೀತಜ್ಞರು ಎಂಬುದನ್ನೂ ಮರೆಯುವಂತಿಲ್ಲ. ಕೀರ್ತನೆಗಳಿಗೆ ಬಳಕೆಯಾಗಿರುವ ರಾಗ-ತಾಳಗಳ ತಾಂತ್ರಿಕ ವಿವರಗಳನ್ನು ಆಸ್ಥೆಯಿಂದ ಒದಗಿಸಿದ್ದಾರೆ. ಶಾಸ್ತ್ರೀಯ ಸಂಗೀತದ ಮೂಲ ಅಂಶಗಳನ್ನು ಅಚ್ಚುಕಟ್ಟಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸುತ್ತಾರೆ. ವಿಸ್ತರಿಸಿ ಬರೆದರೆ ಈ ಕೃತಿಯ ಒಂದೊಂದು ಅಧ್ಯಾಯವೂ ಪ್ರತ್ಯೇಕ ಪುಸ್ತಕಗಳೇ ಆಗುತ್ತವೆ, ಪ್ರತ್ಯೇಕ ಸಂಶೋಧನೆಗೆ ವಸ್ತುಗಳೂ ಆಗುತ್ತವೆ. ‘ನನಗೆ ಆದಷ್ಟು ನಾನು ಮಾಡಿದ್ದೇನೆ. ಮುಂದಿನ ತಲೆಮಾರು ಕಥಾಕೀರ್ತನೆಯ ಅನುಷ್ಠಾನ ಮತ್ತು ಸಂಶೋಧನೆಯ ಪ್ರಯತ್ನ ಮುಂದುವರಿಸಬೇಕು’ ಎನ್ನುವ ವಿನಯವಂತಿಕೆ ಅವರ ವಿದ್ವತ್ತಿಗೆ ಭೂಷಣದಂತೆ ಭಾಸವಾಗುತ್ತದೆ.

ಕಥಾ ಕೀರ್ತನೆಗೆ ಬಳಕೆಯಾಗುವ ಕಥಾವಸ್ತುಗಳ ವಿಂಗಡನೆ ಮತ್ತು ವಿವರಣೆ, ಕಥಾ ಕೀರ್ತನದ ಲಕ್ಷಣಗಳು, ಕಥಾ ಕೀರ್ತನಕಾರರ ಲಕ್ಷಣಗಳು, ಭಾರತೀಯ ಶಾಸ್ತ್ರೀಯ ಸಂಗೀತದ ಉಗಮ ಮತ್ತು ವಿಕಾಸ, ಕಥಾ ಕೀರ್ತನದ ಮೇಲೆ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತದ ಪ್ರಭಾವ, ಬಳಕೆಯಾಗುವ ವಾದ್ಯಗಳ ಬಗ್ಗೆ ಸಂಶೋಧಕರು ಹಲವು ಮೂಲಗಳಿಂದ ಮಾಹಿತಿ ಕಲೆ ಹಾಕಿ ವಿಶ್ಲೇಷಿಸಿದ್ದಾರೆ. ಹರಿಕಥೆ, ಶಿವಕಥೆ ಎಂದು ಜನಪ್ರಿಯವಾದ ಕಥಾ ಕೀರ್ತನೆಗಳ ಬಗ್ಗೆ ಆಸಕ್ತಿಯಿರುವವರು, ಕನ್ನಡ ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಹಿನ್ನೆಲೆಯಲ್ಲಿ ತಿಳಿಯಬೇಕು ಎಂದುಕೊಳ್ಳುವವರು ಓದಲೇಬೇಕಾದ ಕೃತಿಯಿದು.

‘ಒಂದು ದೇಶದ ಇತಿಹಾಸವೆಂದರೆ ಕೇವಲ ರಾಜ-ಮಹಾರಾಜರ ಚರಿತ್ರೆಯಲ್ಲ’ ಮಾತನ್ನು ಗಮನದಲ್ಲಿರಿಸಿಕೊಂಡು ಈ ಕೃತಿಯನ್ನು ಓದಿದಾಗ ಬೇರೆಯೇ ವಿಚಾರಗಳು ಮನಸ್ಸಿಗೆ ಬರುತ್ತವೆ. ‘ಭಾರತವು ಎಂದಿಗೂ ಒಂದು ದೇಶ ಆಗಿಯೇ ಇರಲಿಲ್ಲ. ನಾವು ಬಂದು ಬೇರೆಬೇರೆ ರಾಜ್ಯಗಳನ್ನು ಗೆದ್ದ ಮೇಲೆ ಇವರಿಗೆ ಒಂದು ದೇಶವಾಗಿ ಬದುಕಬೇಕು ಎನ್ನುವ ಪ್ರಜ್ಞೆ ಬಂತು’ ಎನ್ನುವ ಬ್ರಿಟಿಷರ ವಾದಕ್ಕೆ ಕನ್ನಡ ಸಾಂಸ್ಕೃತಿಕ ಪರಂಪರೆ ಕೊಟ್ಟ ಉತ್ತರದಂತೆ ಈ ಕೃತಿ ಭಾಸವಾಗುತ್ತದೆ. ‘ಸಾಂಸ್ಕೃತಿಕ ರಾಜಕಾರಣ’ ಎನ್ನುವ ಪರಿಕಲ್ಪನೆಯನ್ನು ಹಿರಿಯ ವಿಮರ್ಶಕ ದಿವಂಗತ ಡಿ.ಆರ್.ನಾಗರಾಜ್ ಕನ್ನಡದಲ್ಲಿ ಸೊಗಸಾಗಿ ವಿಸ್ತರಿಸಿದ್ದರು. ವಿವಿಧ ದೇಶಗಳು ಅಲ್ಲಿನ ಜನಮಾನಸವನ್ನು ಆಳಲು ಸೈನಿಕ ಶಕ್ತಿಯೊಂದೇ ಸಾಲುವುದಿಲ್ಲ. ಆರ್ಥಿಕ, ಸಾಂಸ್ಕೃತಿಕವಾಗಿಯೂ ತಾವು ಬಲಾಢ್ಯರೆಂದು ತೋರಿಸಿಕೊಳ್ಳಬೇಕಾಗುತ್ತದೆ. ‘ಭಾರತ ಎಂದೂ ಒಂದು ದೇಶ ಆಗಿ ಇರಲೇ ಇಲ್ಲ’ ಎಂದು ಬ್ರಿಟಿಷರು ಅಂದು ಸಾರಿಹೇಳಲು ಮತ್ತು ನಮ್ಮನ್ನು ನಂಬಿಸಲು ಇಂಥ ಸಾಂಸ್ಕೃತಿಕ ರಾಜಕಾರಣ ಮುಖ್ಯವಾಗಿತ್ತು. ಬ್ರಿಟಿಷರ ಈ ವಾದವನ್ನು ಹುಸಿಗೊಳಿಸುವ ಎಷ್ಟೋ ಅಂಶಗಳು ಈ ಕೃತಿಯಲ್ಲಿವೆ. ವಾಸ್ತವದಲ್ಲಿ ಈ ಕೃತಿಗೂ ಬ್ರಿಟಿಷರ ಆಡಳಿತಕ್ಕೂ ಪ್ರತ್ಯಕ್ಷ ಸಂಬಂಧವಿಲ್ಲ. ಆದರೆ ಪರೋಕ್ಷವಾಗಿ ಎಲ್ಲವೂ ಒಂದರಲ್ಲಿ ಒಂದು ಬೆಸೆದುಕೊಂಡಿದೆ.

ಭಾರತವು ಒಂದು ದೇಶವಾಗಿ, ಸಾಂಸ್ಕೃತಿಕ ಪರಂಪರೆಯಾಗಿ ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮದ ಭೌಗೋಳಿಕ ಭಿನ್ನತೆಗಳನ್ನು ಮೀರಿ ಸಾಂಸ್ಕೃತಿಕವಾಗಿ ಒಂದಾಗಿ ಹೇಗೆ ನಿಂತಿತ್ತು ಎಂಬುದನ್ನು ‘ಕಥಾ ಕೀರ್ತನದ ಮೇಲೆ ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಭಾವ’ ಕೃತಿಯು ಸಾರಿ ಹೇಳುತ್ತದೆ. ಭಾರತವನ್ನು ಒಂದಾಗಿ ಬೆಸೆದಿದ್ದ ಎಷ್ಟೋ ಅಂಶಗಳ ಪೈಕಿ ‘ಕಥಾ ಕೀರ್ತನೆ’ಯೂ ಒಂದು. ಅದು ಹೇಗೆ ಎಂದು ತಿಳಿಯುವ ಆಸಕ್ತಿ ನಿಮಗಿದ್ದರೆ ಈ ಕೃತಿಯನ್ನು ಒಮ್ಮೆ ಓದಿ ನೋಡಿ.

ಪುಸ್ತಕ ವಿವರ

ಹೆಸರು: ಕಥಾ ಕೀರ್ತನದ ಮೇಲೆ ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಭಾವ – ಒಂದು ಅಧ್ಯಯನ (ಸಂಶೋಧನಾ ಪ್ರಬಂಧದ ಪುಸ್ತಕ ರೂಪ)

ಲೇಖಕರು: ಡಾ ದತ್ತಾತ್ರೇಯ ಎಲ್. ವೇಲಣಕರ್

ಪುಟಗಳು: 204, ಬೆಲೆ: 100 ರೂಪಾಯಿ

ಪ್ರಕಾಶಕರು: ಷಡ್ಜಕಲಾ ಕೇಂದ್ರ ಟ್ರಸ್ಟ್, ಸುಲ್ತಾನ್ ಪಾಳ್ಯ, ಬೆಂಗಳೂರು. ಮೊಬೈಲ್: 98453 20512

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada