Literature: ಯುದ್ಧವೇ ಇಲ್ಲದ ಒಂದು ಯುದ್ಧಭೂಮಿಯ ಕಥನ

|

Updated on: Mar 15, 2022 | 3:55 PM

Dino Buzzati: ಸ್ತಾಂದಾಲನ ಅಥವಾ ಟಾಲ್‌ಸ್ಟಾಯ್ ಅವರ ಒಂದು ಕಾದಂಬರಿಯನ್ನ ತಗೊಳ್ಳಿ. ನಂತರ ಕಾಫ್ಕಾನ ಫಿಲ್ಟರ್‌ನಲ್ಲಿ ಅದನ್ನು ಹಾಕಿ ಜಾಲಾಡಿಸಿ ಸ್ಪಷ್ಟಗೊಳಿಸಿಕೊಳ್ಳಿ. ಆಗ ಹೊರಗೆ ಬರುವ ಪುಸ್ತಕವೇನಿದೆ, ಅದು ಈ ಪುಸ್ತಕ.

Literature: ಯುದ್ಧವೇ ಇಲ್ಲದ ಒಂದು ಯುದ್ಧಭೂಮಿಯ ಕಥನ
ಇಟಾಲಿಯನ್ ಲೇಖಕ ದೀನೊ ಬುತ್ಸಾತಿ ಮತ್ತು ಕನ್ನಡದ ವಿಮರ್ಶಕ ನರೇಂದ್ರ ಪೈ
Follow us on

ದೀನೊ ಬುತ್ಸಾತಿ | Dino Buzzati 1906-1972) : ಒಂದಷ್ಟು ಕಾಲ, ಈಗ ನಿಮ್ಮ ಕೈಲಿರುವ ಪುಸ್ತಕ ನಿಜವಾಗಿ ಇದ್ದೇ ಇಲ್ಲ ಎಂದು ನಾನು ನಂಬಿದ್ದೆ. ನಾನು ಮೊತ್ತ ಮೊದಲು ದೀನೊ ಬುತ್ಸಾತಿಯ ಹೆಸರು ಕೇಳಿದ್ದು ನಾನು ಕಾಲೇಜಿನ ಆರಂಭಿಕ ತರಗತಿಗಳಲ್ಲಿದ್ದಾಗ. ಅತಿಸಣ್ಣ ಕತೆಗಳ ಸಂಕಲನವೊಂದರಲ್ಲಿ “ಹಾರಿಕೊಂಡ ಹುಡುಗಿ” ಕತೆಯನ್ನು ಓದುವ ಸಂದರ್ಭ ಎದುರಾದಾಗ. ದೀನೊ ಬುತ್ಸಾತಿ ಬಗ್ಗೆ ಏನೇನೂ ಗೊತ್ತಿಲ್ಲದವರು ಕೂಡ ಇದೊಂದು ಕತೆಯನ್ನು ಯಾವತ್ತೂ ಮರೆಯಲಾರರು. ಮತ್ತೆ ಮತ್ತೆ ಪ್ರಾತಿನಿಧಿಕ ಸಂಕಲನಗಳಲ್ಲಿ ಸೇರ್ಪಡೆಯಾಗುತ್ತಲೇ ಬಂದ ಮತ್ತು ಅಷ್ಟೊಂದು ನೆನಪುಳಿವಂತೆ ಚಿತ್ರಿಸಲಾದ ಕತೆಯದು. ಒಂದು ಸುಂದರವಾದ ವಸಂತದ ಮುಸ್ಸಂಜೆ, ಬೆಳಗುತ್ತಿರೊ ನಗರದ ಬಹುಮಹಡಿ ಕಟ್ಟಡದ ತುತ್ತತುದಿಯಿಂದ ಹುಕ್ಕಿ ಬಂದಂತೆ ಹಾರಿಕೊಂಡ ಹತ್ತೊಂಬತ್ತರ ಹರಯದ ಹುಡುಗಿಯ ಕತೆಯದು. ಹಾಗೆ ಕೆಳಗಡೆ ಹಾರಿಕೊಂಡ ಹತ್ತೊಂಬತ್ತರ ಹುಡುಗಿ ಬಹುಮಹಡಿ ಕಟ್ಟಡದ ತಳ ಅಂತಸ್ತು ತಲುಪುವ ಹೊತ್ತಿಗೆಲ್ಲ ಹಣ್ಣುಹಣ್ಣು ಮುದುಕಿಯಾಗಿರುತ್ತಾಳೆ.
ಅನುವಾದ : ನರೇಂದ್ರ ಪೈ, ವಿಮರ್ಶಕ (Narendra Pai)

 

ಇದು, Kevin Brockmeier ಎಂಬಾತ ದೀನೊ ಬುತ್ಸಾತಿಯ ಪುಸ್ತಕ Catastrophe ಗೆ ಬರೆದ ಪ್ರಸ್ತಾವನೆ:

(ಭಾಗ 1)

ಬದುಕಿನ ವಾಸ್ತವ ಪ್ರಜ್ಞೆಯ ಅತ್ಯಂತ ಚಾಣಾಕ್ಷ ಪಾಕವೊಂದು ಇಲ್ಲಿದೆ. ಬುತ್ಸಾತಿ ಅದ್ಭುತ ರಮ್ಯ, ಪಾರಂಪರಿಕ ಮತ್ತು ದೈವಿಕ – ಮೂರೂ ನೆಲೆಯ ದೃಷ್ಟಿಕೋನಗಳಿಂದ ಸದಾ ಕಾಪಿಟ್ಟುಕೊಳ್ಳುವ ಒಂದು ನಿರ್ದಿಷ್ಟ ಅಂತರವೇನಿದೆ, ಅದು ಈ ಕತೆಯಲ್ಲಿ ಅಚ್ಚು ಹೊಡೆದಂತೆ ಮೂಡಿಬಂದಿದ್ದು ಇದರಲ್ಲಿ ಅವನ ಕಥನ ಕ್ರಮದ ವಿಶಿಷ್ಟ ಛಾಯೆಯಂತೆ ಅದು ಹರಡಿಕೊಂಡಿದೆ. ಬುತ್ಸಾತಿಯ ಎಲ್ಲ ಕತೆಗಳಿಂದ ಒಂದೇ ಒಂದು ಪ್ರಾತಿನಿಧಿಕ ಕತೆಯನ್ನೇನಾದರೂ ನೀವು ಆರಿಸುವುದಿದ್ದರೆ ನಿಶ್ಚಿತವಾಗಿಯೂ ಇದು ತಪ್ಪು ಆಯ್ಕೆ ಆಗಲಾರದು. ಹಾಗಿದ್ದೂ ಸ್ವತಃ ನಾನು ಅವನ ಮಾಸ್ಟರ್‌ಪೀಸ್ ಎಂದೇ ಪರಿಗಣಿತವಾಗಿರುವ The Tartar Steppe ಓದುವ ತನಕ, ಅಂದರೆ ಈ ಕತೆಯನ್ನೋದಿದ ಒಂದು ದಶಕಕ್ಕಿಂತ ಹೆಚ್ಚು ಕಾಲ ಬುತ್ಸಾತಿಯ ಬಗ್ಗೆ ಅಂಥಾ ಅಭಿಮಾನವನ್ನೇನೂ ತಳೆದವನಲ್ಲ.

ಸ್ತಾಂದಾಲನ ಅಥವಾ ಟಾಲ್‌ಸ್ಟಾಯ್ ಅವರ ಒಂದು ಕಾದಂಬರಿಯನ್ನ ತಗೊಳ್ಳಿ. ನಂತರ ಕಾಫ್ಕಾನ ಫಿಲ್ಟರ್‌ನಲ್ಲಿ ಅದನ್ನು ಹಾಕಿ ಜಾಲಾಡಿಸಿ ಸ್ಪಷ್ಟಗೊಳಿಸಿಕೊಳ್ಳಿ. ಆಗ ಹೊರಗೆ ಬರುವ ಪುಸ್ತಕವೇನಿದೆ, ಅದು ಈ ಪುಸ್ತಕ. ಯುದ್ಧವೇ ಇಲ್ಲದ ಒಂದು ಯುದ್ಧಭೂಮಿಯ ಕಥನ. ಬರೇ ಭವ್ಯ ಭವಿತವ್ಯದ ನಿರೀಕ್ಷೆ ಮತ್ತು ದೈನಂದಿನದ ಆಗುಹೋಗುಗಳ ಹೊರತು ಇನ್ನೇನೇನೂ ಇಲ್ಲದ ಒಂದು ಬದುಕಿನೊಂದಿಗೆ ಹೇಗೆ ಆರಾಮವಾಗಿ ದಿನಗಳೆಯಬಹುದೆಂದು ಹೇಳುವುದನ್ನು ಬಿಟ್ಟರೆ ಇನ್ನೇನಿಲ್ಲ.

ಇದನ್ನೂ ಓದಿ : Literature : ಅಭಿಜ್ಞಾನ ; ‘ನೆನಪಿಟ್ಟುಕೋ, ಯಾರೇ ಕರೆದ ಹಾಗೆ ಅನಿಸಿದರೂ ತಪ್ಪಿ ಕೂಡ ತಿರುಗಿ ನೋಡಬಾರದು’

ಬುತ್ಸಾತಿ ಕೃತಿಗಳು

ನಾನು ಓದಿರುವ, ಅರೆಕೊರೆಗಳೇ ಇಲ್ಲದ ಕೆಲವೇ ಕೆಲವು ಕಾದಂಬರಿಗಳ ಸಾಲಿನಲ್ಲಿ ನಿಲ್ಲುವ ಒಂದು ಕಾದಂಬರಿಯಿದು. ಅಸ್ತಿತ್ವವಾದೀ ನೆಲೆಯ ಕಾದಂಬರಿಗಳಲ್ಲಿ ಅತ್ಯಂತ ಬಿಗಿಯಾದ ಬಂಧವುಳ್ಳ ರಚನೆಯಿದು. ವಾಸ್ತವವಾದಿ ನೆಲೆಯ ಎಲ್ಲೆಕಟ್ಟುಗಳನ್ನು ಮೀರದೆಯೂ, ನಿಧಾನವಾಗಿ, ಹನಿಹನಿಯಾಗಿ, ಒಂದು ಮೊಗ್ಗರಳಿ ಹೂವಾಗುವಷ್ಟೇ ಸಹಜವಾಗಿ ಒಂದು ಕನಸಿನ ಮಾಂತ್ರಿಕತೆಯನ್ನು ದಕ್ಕಿಸಿಕೊಂಡು ಬಿಡುವ, ಸ್ಪರ್ಶಕ್ಕೆ ದಕ್ಕದ ಯಾವುದೋ ಒಂದು ವ್ಯಾಕುಲತೆಯನ್ನು ನಿಮ್ಮೆದೆಯೊಳಗೆ ಹುಟ್ಟಿಸುವ, ಬದುಕು ನಿಜವಾಗಿಯೂ ಅನುಭವಕ್ಕೆ ಬರುವ ರೀತಿಗೆ ಬದಲಾಗಿ ಅದರ ನೆನಪುಗಳಲ್ಲಿಯೇ ಹೆಚ್ಚೆಚ್ಚು ನಿಜವಾಗುವ ತೆರದಲ್ಲಿ ಬುತ್ಸಾತಿ ಕಟ್ಟಿಕೊಡುವುದು ಸಾಧ್ಯವಾದುದು, ಅದೂ ಕೂಡ ಅತ್ಯಂತ ಸಂತುಲಿತವಾದ ಒಂದು ಧ್ವನಿಯಲ್ಲಿ ನಿರೂಪಿಸುತ್ತ ಸಾಧ್ಯವಾದದ್ದು ಇಲ್ಲಿ.

ಅದೆಷ್ಟೊಂದು ತಪ್ಪಿಸಿಕೊಳ್ಳಲಾಗದ ತೆರದಲ್ಲಿ ಬದುಕು ನಮ್ಮನ್ನು ಆವರಿಸಿದೆ, ಅದೆಷ್ಟೊಂದು ಅಚ್ಚರಿದಾಯಕ ತೆರದಲ್ಲಿ ಸಹಜವಾಗಿ ಎಂಬಂತೆ ಬದುಕು ಇಲ್ಲಿ ಘಟಿಸುತ್ತಿದೆ, ಅದೆಷ್ಟೊಂದು ತೀವ್ರವಾಗಿ ಹತ್ತುಹಲವು ಸಾಧ್ಯತೆ, ಸಂಭವನೀಯತೆಗಳನ್ನು ತನ್ನ ಒಡಲಲ್ಲಿಟ್ಟುಕೊಂಡಂತೆ ಕಾಣುವ ಒಂದು ಬದುಕು ಕಟ್ಟಕಡೆಯದಾಗಿ ಇದಿಷ್ಟೇ ಆಗಿರುವುದಲ್ಲವೇ (ಇದೊಂದೇ ಸಾಧ್ಯತೆಯಾಗಿರುವುದಲ್ಲವೆ) ಎಂದು ಸ್ವತಃ ನೀವು ಪ್ರಶ್ನಿಸುವಂತೆ ಮಾಡಿದೆ!

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ ; ರಾಜೇಂದ್ರ ಚೆನ್ನಿ ‘ಓದಿನಂಗಳ’ಕ್ಕೆ ಕರೆತಂದಿದ್ದಾರೆ ಅಬ್ದುಲ್​ರಝಾಕ್ ಗುರ್ನಾ ಅವರ ‘ಆಫ್ಟರ್ ಲೈವ್ಸ್​’

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/narendra-pai

Published On - 1:12 pm, Tue, 15 March 22