Literature: ನನಗೆ ಗೊತ್ತಿತ್ತು, ಇದೆಲ್ಲ ಕೆಟ್ಟದಾಗಿಯೇ ಮುಗಿಯುತ್ತದೆ ಅಂತ

|

Updated on: Mar 15, 2022 | 3:55 PM

Dino Buzzati : ಈ ಎಲ್ಲದರ ಮುಖೇನ ಒಂದು ನರ್ಸಿಂಗ್ ಹೋಮಿನ ರೋಗಿ ಹಾಯುತ್ತ ಹಾಯುತ್ತ ಅದೊಂದು ಬ್ಯುರಾಕ್ರಾಟಿಕ್ ಅನಿವಾರ್ಯತೆಯೋ ಎಂಬಂತೆ ತನ್ನ ಆರೋಗ್ಯವನ್ನು ಹಂತಹಂತವಾಗಿ ಕೆಡಿಸಿಕೊಳ್ಳುತ್ತಲೇ ಸಾಗುವ ಕಥನವಿದೆ.

Literature: ನನಗೆ ಗೊತ್ತಿತ್ತು, ಇದೆಲ್ಲ ಕೆಟ್ಟದಾಗಿಯೇ ಮುಗಿಯುತ್ತದೆ ಅಂತ
ಇಟಾಲಿಯನ್ ಲೇಖಕ ದೀನೊ ಬುತ್ಸಾತಿ ಮತ್ತು ಕನ್ನಡದ ವಿಮರ್ಶಕ ನರೇಂದ್ರ ಪೈ
Follow us on

ದೀನೊ ಬುತ್ಸಾತಿ | Dino Buzzati 1906-1972): Seven Floors ಕತೆಯನ್ನೇ ತೆಗೆದುಕೊಳ್ಳಿ. ಈ ಕತೆಯ ಉದ್ದಕ್ಕೂ ಒಂದು ಸರಣಿಯಂತೆ ಸಾಗುವ, ಮಾರಣಾಂತಿಕವಾದ ತಪ್ಪುಗಳು ಘಟಿಸುತ್ತವೆ. ಉದ್ದಕ್ಕೂ ವೈದ್ಯಕೀಯ ಗೊಂದಲಗಳು, ಅಸಮರ್ಪಕ ಚಿಕಿತ್ಸಾ ನಡೆಗಳು, ಕಟುವಾದ ವಿನೋದದಂತೆಯೂ ಕಾಣುವ ತಪ್ಪುತಪ್ಪಾದ ಮತ್ತು ಪುನರ್-ವೈದ್ಯಕೀಯ ಪರೀಕ್ಷೆಗಳು – ಎಲ್ಲದರ ಮುಖೇನ ಒಂದು ನರ್ಸಿಂಗ್ ಹೋಮಿನ ರೋಗಿ ಹಾಯುತ್ತ ಹಾಯುತ್ತ ಅದೊಂದು ಬ್ಯುರಾಕ್ರಾಟಿಕ್ ಅನಿವಾರ್ಯತೆಯೋ ಎಂಬಂತೆ ತನ್ನ ಆರೋಗ್ಯವನ್ನು ಹಂತಹಂತವಾಗಿ ಕೆಡಿಸಿಕೊಳ್ಳುತ್ತಲೇ ಸಾಗುವ ಕಥನವಿದೆ. The Slaying of the Dragon ಕತೆಯಲ್ಲಿ ಅದೊಂದು ನೀತಿ ಕತೆಯೋ ಎಂಬಂತೆ ಬರುವ, ನಿಷ್ಪಾಪಿ ಮುದಿ ದೈತ್ಯಪ್ರಾಣಿಯೊಂದರ ಕಗ್ಗೊಲೆಯ ವಿವರ ವಿವರವಾದ ಚಿತ್ರವಿದೆ. ಬೇಟೆಗಾರ ಬಳಗಗಕ್ಕೆ “ಅದರ ಭೀತಿಕಾರಕ ಚಲನೆಗಳು, ಮೈಮೇಲಿನ ಹಕ್ಕಳೆಯಂಥ ರಚನೆಗಳು, ಆಗಾಗ ಅಲ್ಲಿಷ್ಟು ಇಲ್ಲಿಷ್ಟು ಕಾಣಿಸುವ ಹಸಿರು ಹಸಿರು ಗೆರೆಗೆರೆಯಾದ ರಚನೆಗಳು, ಒಟ್ಟಾರೆಯಾಗಿ ಸುಕ್ಕುಗಟ್ಟಿದಂತಾದ ತೊಗಲು… ಅದರ ಸಾಮಾನ್ಯ ಗಾತ್ರವನ್ನೂ ಮೀರಿ ಅವರ ನಿಶ್ಚಯವನ್ನು ಗಟ್ಟಿಗೊಳಿಸುತ್ತಿತ್ತು.”
ಅನುವಾದ : ನರೇಂದ್ರ ಪೈ, ವಿಮರ್ಶಕ (Narendra Pai)

 

ಇದು, Kevin Brockmeier ಎಂಬಾತ ದೀನೊ ಬುತ್ಸಾತಿಯ ಪುಸ್ತಕ Catastrophe ಗೆ ಬರೆದ ಪ್ರಸ್ತಾವನೆ:

(ಭಾಗ 4)

The Alarming Revenge of a Domestic Pet ಕತೆಯಲ್ಲಿ ಒಬ್ಬ ಹುಡುಗಿಗೆ ತನ್ನ ಚಿಕ್ಕಮ್ಮನ ದರಿದ್ರದಂತಿರುವ ಹೊಸ ಮುದ್ದುಮರಿಯನ್ನು ಮೆಚ್ಚಿಕೊಳ್ಳಲು ಕೊನೆಗೂ ಸಾಧ್ಯವಾಗುವುದೇ ಇಲ್ಲ. “ತಕ್ಷಣವೇ ಅವಳಿಗೆ ಅದೊಂದು ಬಾವಲಿ ಅನಿಸಿಬಿಟ್ಟಿತು, ಅದೇಕೆಂದು ಅವಳಿಗೇ ಅರ್ಥವಾಗದಿದ್ದರೂ. ನಿಜವಾಗಿ ಹೇಳಬೇಕೆಂದರೆ ಬಾವಲಿಗಿರುವ ಯಾವುದೇ ಲಕ್ಷಣವೂ ಇದಕ್ಕಿರಲಿಲ್ಲ,” – ಅದಕ್ಕಷ್ಟೇ ತಕ್ಕುದಾದ ಒಂದು ಪ್ರತಿಯೇಟನ್ನು ಆ ಪ್ರಾಣಿ ಸೃಷ್ಟಿಸಲು ಸಾಧ್ಯವಾಗುವವರೆಗೂ.

ಈ ಕತೆಗಳಲ್ಲೇ ಒಂದರ ಕೊನೆಯ ಭಾಗದಲ್ಲಿ “ನನಗದು ಗೊತ್ತಿತ್ತು,” ಎನ್ನುತ್ತದೆ, ಒಂದಾನೊಂದು ಪಾತ್ರ, “ಸಣ್ಣಕ್ಕೆ ನಡುಗುತ್ತ,”. “ನನಗೆ ಗೊತ್ತಿತ್ತು, ಇದೆಲ್ಲ ಕೆಟ್ಟದಾಗಿಯೇ ಮುಗಿಯುತ್ತದೆ ಅಂತ,” – ಇಡೀ ಪುಸ್ತಕದ ಒಂದು ಅಂತಿಮ ಧ್ಯೇಯವಾಕ್ಯವೋ ಎನ್ನುವಂತೆ ನಾವಿದನ್ನು ಪರಿಗಣಿಸಬಹುದಾಗಿದೆ. ಏಕೆಂದರೆ, Catastrophe ಯಲ್ಲಿ ಒಂದೆಡೆ ಸೇರಿರುವ ಎಲ್ಲ ಹದಿನೈದು ( ಇಲ್ಲಿ ಈ ಹಿಂದೆ ಅನುವಾದಗೊಳ್ಳದೇ ಇದ್ದ ಐದು ಕತೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ) ಕತೆಗಳೂ ಪರಿಣಾಮದಲ್ಲಿ ತೀರ ವಿಲಕ್ಷಣ ನಿಟ್ಟಿನಿಂದ ನಿಮ್ಮನ್ನು ಅಷ್ಟೂ ಗಾಢವಾಗಿ ತಟ್ಟುತ್ತವೆ. The Lottery, Royal Jelly, Sandkings ನಂಥ ಬಿಟ್ಟೂ ಬಿಡದೆ ಕಾಡುವ ಕಥೆಗಳಲ್ಲಿ ಇದ್ದಕ್ಕಿದ್ದಂತೆ ಎಲ್ಲವೂ ತಿರುವುಮುರುವಾಗಿ ಬಿಡುವ ಆಘಾತವನ್ನು ನೀವೇನು ಬಲ್ಲಿರಿ!

ಇದನ್ನೂ ಓದಿ, ಭಾಗ 3 : Literature: ನೀಲಿ ಶಾಯಿಯಲ್ಲಿ ಬರೆದ ಆ ಕೆಲವು ಸಾಲುಗಳ ಹೊರತಾಗಿ ಆವತ್ತು ನಾನು ಬೇರೇನೂ ಓದಲಿಲ್ಲ

ಬುತ್ಸಾತಿಯ ಕೃತಿಗಳು

ಅದೂ ನೀವು ಬರಬರುತ್ತ ಅದೇನೋ ಒಂದು ಹೊಳಹನ್ನು ಇನ್ನೇನು ಮನದಾಳದಲ್ಲಿ ಗುರುತಿಸಿಕೊಳ್ಳುತ್ತ ಇರುವ ಐನು ಗಳಿಗೆಯಲ್ಲೇ ಸಂಭವಿಸುವ ಭಯಂಕರ ವಿದ್ಯಮಾನ! ಇದೆಲ್ಲ ಹೇಗಿದೆ ಎಂದರೆ, ಈ ಸಂಕಲನದ ಪ್ರತಿಯೊಂದು ಕತೆಯಲ್ಲಿಯೂ ಬುತ್ಸಾತಿ ಆ ಒಂದು ಗಳಿಗೆ ಎಲ್ಲಾ ಸಂಭವನೀಯತೆಯನ್ನೂ ಕೈಚೆಲ್ಲಿ ಕೂತು ತನ್ನನ್ನೇ ತಾನು ಕೇಳಿಕೊಂಡಂತಿದೆ, ಇನ್ನೇನೂ ಇಲ್ಲ ಎಂದಾದರೆ ಏನಾಗಬಹುದು ಇಲ್ಲಿ!

ಭಯಂಕರವಾದ ಭವಿಷ್ಯದ ಸ್ಪಷ್ಟ ನೋಟವೊಂದು ತೀರ ವಿಲಕ್ಷಣವಾದ ಬಗೆಯಲ್ಲಿ ಎದುರಾಗುವ ಸಂದರ್ಭದಲ್ಲಿ ತಾನು ಅದನ್ನೇ ಇಡೀ ಬದುಕಿಗೆ ಅದು ಆವರಿಸುವಂತೆ, ಅದು ಚಾಚಿಕೊಳ್ಳುವಂತೆ ಅದನ್ನೇ ಹರಡಿಬಿಟ್ಟರೆ ಏನಾದೀತು? ಬುತ್ಸಾತಿ ನೀವು ಅಕಸ್ಮಾತ್ತಾಗಿ ಜಾರಿದ ಒಂದು ಹೆಜ್ಜೆಗೂ ದಢಾರನೆ ನೀವು ಉದುರಿದಂತೆ ಬೀಳುವುದಕ್ಕೂ ನಡುವಿನ ಒಂದು ಕ್ಷಣಾರ್ಧವನ್ನೇ ಸೀಳಿ, ಶಿಖರಾಗ್ರದಿಂದ ನಿಮ್ಮ ಕಾಲು ಕಳಚಿಕೊಂಡಿದ್ದರೂ ಈ ಭುವಿಯ ಗುರುತ್ವಾಕರ್ಷಣ ಶಕ್ತಿ ಇನ್ನೂ ನಿಮ್ಮನ್ನೇನು ಮಾಡಬೇಕೆಂದು ನಿರ್ಧರಿಸುವುದಕ್ಕೂ ಮೊದಲು ಇರುವ ಗ್ಯಾಪ್‌ನಲ್ಲೇ ಅದನ್ನೊಂದು ಬ್ರಹ್ಮಜ್ಞಾನದ ಮಟ್ಟಕ್ಕೆ ಏರಿಸಿಬಿಟ್ಟಿದ್ದಾನೆ.

(ಇಲ್ಲಿ ಉಲ್ಲೇಖಿಸಲಾದ The Falling Girl ಕತೆ ಎಸ್. ದಿವಾಕರ್ ಅವರ ಅನುವಾದದಲ್ಲಿ ನಿಮಗೆ ಕನ್ನಡದಲ್ಲೇ ಓದಲು ಸಿಗುತ್ತದೆ.)

(ಮುಗಿಯಿತು)

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/narendra-pai

Published On - 3:37 pm, Tue, 15 March 22