ಭಾರತೀಯ ಕಲಾಪ್ರಪಂಚವು ಶೃಂಗಾರ, ಕಾಮ ಮತ್ತು ಲೈಂಗಿಕತೆಯಂಥ ಸಹಜ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಅಗಾಧ ಅಡಿಪಾಯ ಮತ್ತು ಪರಂಪರೆಯನ್ನು ಹೊಂದಿದೆ. ರಂಗಭೂಮಿ, ಸಿನೆಮಾ, ಸಾಹಿತ್ಯ ಮುಂತಾದ ಲಲಿತ ಕಲೆಗಳ ಮೂಲಕ ಪ್ರಕೃತಿ ಪುರುಷನಲ್ಲಿ ಅಂತರ್ಗತವಾಗಿರುವ ವಿವಿಧ ಮುಖಗಳನ್ನು ಸೃಜನಶೀಲವಾಗಿ ಅನಾವರಣಗೊಳಿಸುವ ನಿರಂತರ ಶೋಧನೆ ಈ ಕ್ಷಣದವರೆಗೂ ನಡೆಯುತ್ತಲೇ ಇದೆ. ತಕ್ಕಂತೆ ವಿವಿಧ ಅಭಿರುಚಿಯ ರಸಿಕಸಮೂಹವೂ ರಸಾಸ್ವಾದಕ್ಕಾಗಿ ಸದಾಸಿದ್ಧವೇ. ಆದರೆ ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ಕೆಲವೊಮ್ಮೆ ಅನ್ನದೊಳಗೆ ಕಲ್ಲಿನಹರಳು ಸಿಕ್ಕಂಥ ಪ್ರಸಂಗಗಗಳು ರಸಾಭಾಸ ಉಂಟುಮಾಡಿಬಿಡುತ್ತವೆ. ಇದಕ್ಕೆ ತಾಜಾ ಉದಾಹರಣೆ ರಾಜ್ ಕುಂದ್ರಾ ಪ್ರಕರಣ (Raj Kundra and Shilpa Shetty) ಮತ್ತು ನಟಿ ಶಿಲ್ಪಾ ಶೆಟ್ಟಿಯ ಹೇಳಿಕೆ. ‘ನನ್ನ ಗಂಡ ನಿರ್ಮಿಸಿರುವುದು ಕಾಮೋದ್ರೇಕದ ಸಿನೆಮಾಗಳನ್ನೇ ಹೊರತು ಅಶ್ಲೀಲ ಸಿನೆಮಾಗಳನ್ನಲ್ಲ’ ಎಂದಿದ್ದಾರೆ ಶಿಲ್ಪಾ. ಹೀಗಿರುವಾಗ ಶೃಂಗಾರ, ಕಾಮ, ಅಶ್ಲೀಲ ಅಭಿವ್ಯಕ್ತಿಗಳ ಮಧ್ಯೆ ಇರುವ ತೆಳುಗೆರೆಗಳ ಸುತ್ತ ಪ್ರಶ್ನೆಗಳೇಳುವುದು ಸಹಜ. ಈ ವಿಚಾರವಾಗಿ ಇಂದಿನಿಂದ ಶುರುವಾಗಲಿದೆ ‘ಟಿವಿ 9 ಕನ್ನಡ ಡಿಜಿಟಲ್ – ಮನೋರಂಜನ ವೃತ್ತಾಂತ’ ಹೊಸ ಸರಣಿ. ಇದರಲ್ಲಿ ಹಿರಿಯ ಪತ್ರಕರ್ತರು, ಬರಹಗಾರರು, ಕಲಾವಿಮರ್ಶಕರು ಕಲೆಯ ಸಾಧ್ಯತೆ, ಪ್ರಯೋಗ ಸೂಕ್ಷ್ಮತೆ ಮತ್ತು ಪರಿಣಾಮಗಳ ಕುರಿತು ಚರ್ಚಿಸುತ್ತಾರೆ.
*
ಡಾ. ಸಿಬಂತಿ ಪದ್ಮನಾಭ ಅವರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕರು. ಯಕ್ಷಗಾನದ ಹವ್ಯಾಸಿ ಕಲಾವಿದರು ಮತ್ತು ಸಂಶೋಧಕರು ಕೂಡ. ‘ಜಾನಪದ ರಂಗಭೂಮಿಯ ಮೂಲಕ ಅಭಿವೃದ್ಧಿ ಸಂವಹನ: ಯಕ್ಷಗಾನದ ಒಂದು ಅಧ್ಯಯನ’ ಕುರಿತು ಪಿಎಚ್.ಡಿ ಪದವಿ ಪಡೆದಿದ್ದಾರೆ. ಈಗಿಲ್ಲಿ ಇವರು ‘ಯಕ್ಷಗಾನದಲ್ಲಿ ಶೃಂಗಾರ: ಸಾಂಕೇತಿಕತೆಯೇ ಜೀವಾಳ’ ಎಂಬ ವಿಷಯವಾಗಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ.
*
ಯಕ್ಷಗಾನ ನವರಸಪ್ರಧಾನ ಕಲೆ. ವೀರ, ರೌದ್ರ, ಅದ್ಭುತ, ಕರುಣ, ಹಾಸ್ಯ, ಶೃಂಗಾರ, ಶಾಂತ ಎಲ್ಲವೂ ಮಿಳಿತಗೊಂಡ, ಅಪ್ರತಿಮ ರಸಪ್ರತಿಪಾದನೆಗೆ ಅವಕಾಶವುಳ್ಳ ಸಮಷ್ಟಿ ಕಲೆಯದು. ಸಿನಿಮಾ, ಇಂಟರ್ನೆಟ್‌ನಂತಹ ಆಧುನಿಕ ಮಾಧ್ಯಮಗಳ ನಡುವೆಯೂ ಯಕ್ಷಗಾನ ತನ್ನ ಆಕರ್ಷಣೆ-ಪ್ರಭಾವಗಳನ್ನು ಉಳಿಸಿಕೊಂಡಿದೆಯೆಂದರೆ ಅದಕ್ಕೆ ಅದರೊಳಗಿರುವ ರಸಾವಿಷ್ಕಾರದ ಸಾಧ್ಯತೆಯೂ ಪ್ರಮುಖ ಕಾರಣ. ನಾಲ್ಕು ಕಂಬಗಳ ನಡುವಿನ ಸರಳ ರಂಗಸ್ಥಳವೊಂದರ ಮೇಲೆ ನಡೆಯುವ ಆಂಗಿಕ, ವಾಚಿಕ, ಸಾತ್ವಿಕ, ಆಹಾರ್ಯ ಪ್ರಕ್ರಿಯೆಗಳು ಪಂಡಿತ-ಪಾಮರಾದಿಯಾಗಿ ಎಲ್ಲ ಬಗೆಯ ಪ್ರೇಕ್ಷಕರನ್ನೂ ಪ್ರತಿಮಾಲೋಕವೊಂದರಲ್ಲಿ ವಿಹರಿಸುವುದಕ್ಕೆ ಕಾರಣವಾಗುವುದೇ ಒಂದು ದೊಡ್ಡ ವಿಸ್ಮಯ.
ವಾಗ್ವಾದ-ಕದನಗಳಿಗೆ ರಂಗೇರಿಸಬಲ್ಲ ಭಾಗವತರ ಏರುಪದ್ಯ, ಮೈಲಿಗಳವರೆಗೆ ಅನುರಣಿಸಬಲ್ಲ ಚೆಂಡೆಯ ನಿನಾದ, ರಂಗವನ್ನು ನಡುಗಿಸುವಂತಹ ಹೊಂತಕಾರಿಗಳ ಗಿರಕಿ, ಅಬ್ಬರ, ಅಟ್ಟಹಾಸ, ಪ್ರದರ್ಶನವನ್ನು ಕಳೆಗಟ್ಟಿಸುವ ವೈವಿಧ್ಯಮಯ ರಂಗಚಲನೆ ಇತ್ಯಾದಿಗಳಿಂದ ಯಕ್ಷಗಾನವೊಂದು ವೀರರಸ ಪ್ರಧಾನ ಕಲೆಯೆನಿಸಿದರೂ ಅಲ್ಲಿ ಶೃಂಗಾರದ ಕಡೆಗಿನ ಒಲವು ತುಸು ಹೆಚ್ಚೇ. ಸಹೃದಯ ಪ್ರೇಕ್ಷಕನ ಮನಸ್ಸೂ ಕಾಯುವುದು ಶೃಂಗಾರ ಸನ್ನಿವೇಶಗಳಿಗೇ.
ಹೇಳಿಕೇಳಿ ಕಾವ್ಯಲಾಕ್ಷಣಿಕರಿಂದ ರಸಗಳ ರಾಜನೆಂದು ಕರೆಸಿಕೊಂಡ ಹೆಗ್ಗಳಿಕೆ ಶೃಂಗಾರದ್ದು. ಶೃಂಗಾರವಿಲ್ಲದ ಕಲಾಪ್ರಕಾರವೇ ಇಲ್ಲ ಎಂಬಷ್ಟರಮಟ್ಟಿಗೆ ಶೃಂಗಾರಕ್ಕೆ ಕಲೆಗಳಲ್ಲಿ ಆದ್ಯತೆ. ಕಲಾರಸಿಕನಂತೂ ತಾನು ನೋಡುವ ಪ್ರದರ್ಶನಳಲ್ಲೆಲ್ಲ ಮಧುರ ಅನುಭೂತಿಗಳಿಗೆ ಕಾಯುತ್ತಿರುತ್ತಾನೆ. ಯಕ್ಷಗಾನದಲ್ಲಾದರೂ ಅಷ್ಟೇ, ವೀರ-ರೌದ್ರ-ಹಾಸ್ಯ ಏನೇ ಇದ್ದರೂ ಅವೆಲ್ಲವೂ ಶೃಂಗಾರದ ಭವ್ಯತೆಗೆ ಪೋಷಕವಾಗಿರಬೇಕೆಂದೇ ಆತ ಬಯಸುತ್ತಾನೆ. ಶೃಂಗಾರಕ್ಕೆ ಇರುವ ಆಕರ್ಷಣೆ ಬೇರೆ ಯಾವ ರಸಗಳಿಗೂ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಆದರೆ ಈ ಶೃಂಗಾರದ ಅಭಿವ್ಯಕ್ತಿ ಹೇಗಾಗುತ್ತದೆ ಎಂಬುದೇ ಅದರ ಗುಣಮಟ್ಟವನ್ನು ನಿರ್ಧರಿಸುವ ಮಾನದಂಡ.
ಯಕ್ಷಗಾನಕ್ಕೆ ಪಠ್ಯ ಮತ್ತು ಪ್ರದರ್ಶನ ಎಂಬ ಎರಡು ಮುಖ. ಯಾವುದೇ ಯಕ್ಷಗಾನ ನಡೆಯುವುದಕ್ಕೆ ಪ್ರಸಂಗವೆಂಬ ಪಠ್ಯದ ಆಧಾರ ಬೇಕೇ ಬೇಕು. ರಂಗದ ಮೇಲೆ ನಡೆಯುವ ಕ್ರಿಯೆಗಳೆಲ್ಲವೂ ಬಹುತೇಕ ತತ್‌ಕ್ಷಣದಲ್ಲಿ ಹುಟ್ಟಿಕೊಳ್ಳುವ ಅಭಿವ್ಯಕ್ತಿಗಳಾದರೂ ಅವೆಲ್ಲವುಗಳ ಬೀಜ ಪ್ರಸಂಗವೆಂಬ ಪ್ರಬಂಧದಲ್ಲೇ ಇದೆ. ಆದರೆ ಪಠ್ಯದ ಅರ್ಥ ಮತ್ತು ಆಶಯಗಳನ್ನು ಪ್ರದರ್ಶನದಲ್ಲಿ ಹೇಗೆ ವ್ಯಕ್ತಪಡಿಸಬೇಕೆಂಬುದನ್ನು ತನ್ನ ವಿವೇಚನೆಯಿಂದ ನಿರ್ಧರಿಸಬೇಕಾದವನು ಕಲಾವಿದ. ಆತ ತುಸು ಎಚ್ಚರ ತಪ್ಪಿದರೂ ಪ್ರದರ್ಶನದ ಒಟ್ಟಂದವನ್ನು ಕೆಡಿಸಬಲ್ಲ.
ಇನ್ನೊಂದು ಮುಖ್ಯ ವಿಚಾರವೆಂದರೆ, ಯಕ್ಷಗಾನದ ಎಲ್ಲ ಅಭಿವ್ಯಕ್ತಿಗಳಲ್ಲಿಯೂ ತೀವ್ರತೆ ಹೆಚ್ಚು. ಅದು ವೀರರಸ ಇರಬಹುದು, ರೌದ್ರ ಇರಬಹುದು, ಹಾಸ್ಯ ಇರಬಹುದು- ಎಲ್ಲವನ್ನೂ ಹೆಚ್ಚು ಸ್ಪಷ್ಟವಾಗಿಯೂ ತೀವ್ರವಾಗಿಯೂ ತೋರಿಸುವುದು ಯಕ್ಷಗಾನದ ಸ್ವಭಾವ. ಯಕ್ಷಗಾನದ ವೇಷಭೂಷಣಗಳಲ್ಲಿಯೂ ಈ ಬಗೆಯ ವೈಭವೀಕರಣ ಇದೆ. ವಾಸ್ತವಿಕತೆಗಿಂತ ಬಹುದೂರವಾದ ಪೌರಾಣಿಕ ಲೋಕವೊಂದರಲ್ಲಿ ಯಕ್ಷಗಾನದ ಕಥಾನಕಗಳು ರೂಪುವೊಡೆಯಬೇಕಾದ ಅನಿವಾರ್ಯವೇ ಇದಕ್ಕೆ ಪ್ರಮುಖ ಕಾರಣ. ಯಕ್ಷಗಾನದ ರಸಾವಿಷ್ಕಾರ ಅಥವಾ ರಸಪ್ರಕಟಣಾ ವೈಖರಿಯು ಇತರ ಕಾವ್ಯ ನಾಟಕಾದಿಗಳಲ್ಲಿರುವುದಕ್ಕಿಂತ ಸ್ಪಷ್ಟವಾಗಿಯೂ ತೀವ್ರವಾಗಿಯೂ ಇರುವುದಕ್ಕೆ ಅದು ಜಾನಪದ ಕಲೆಯೆನಿಸಿರುವುದೂ ಕಾರಣ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಪೆರ್ಲ ಕೃಷ್ಣ ಭಟ್ಟರು ಗುರುತಿಸಿದ್ದುಂಟು (ಯಕ್ಷಲೋಕ, ಪು. ೩೭೫).
ಯಕ್ಷಗಾನ ಪಠ್ಯಗಳಲ್ಲಿ ಶೃಂಗಾರವೂ ದಟ್ಟವಾಗಿಯೇ ಕಾಣಿಸಿಕೊಂಡಿದೆ. ಯಕ್ಷಗಾನ ಪ್ರಸಂಗಗಳಲ್ಲಿ ಬರುವ ಶೃಂಗಾರ ಅನೇಕ ಕಡೆ ವಾಚ್ಯವಾಗಿಯೂ ಇನ್ನು ಕೆಲವು ಕಡೆ ಧ್ವನಿಪೂರ್ಣವಾಗಿಯೂ ಇದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಪಾತ್ರ ಹಾಗೂ ಸನ್ನಿವೇಶಗಳನ್ನು ಅವಲಂಬಿಸಿರುತ್ತದೆ ಎಂಬುದು ಗಮನಾರ್ಹ. ಪ್ರಭಾವತಿ, ವಿಷಯೆ, ಸುಭದ್ರೆ, ರತ್ನಾವತಿ, ಶಶಿಪ್ರಭೆ, ಶಕುಂತಲೆ, ದುಷ್ಯಂತ, ಕೃಷ್ಣ, ಜಯಂತ, ಮನ್ಮಥರ ಶೃಂಗಾರ ಬೇರೆ; ಅಜಮುಖಿ, ಶೂರ್ಪನಖಿ, ಭಸ್ಮಾಸುರ, ಕೀಚಕ ಪಾತ್ರಗಳ ಶೃಂಗಾರ ಬೇರೆ. ಪಾತ್ರಚಿತ್ರಣವೂ ಪ್ರಸಂಗರಚನೆಯ ಪ್ರಮುಖ ಜವಾಬ್ದಾರಿ. ಪುರಾಣಲೋಕದಲ್ಲಿ ಕಪ್ಪು-ಬಿಳುಪಿನ ಪಾತ್ರಗಳು ಹೆಚ್ಚು. ಪಾತ್ರಗಳ ಹಿನ್ನೆಲೆ ಮತ್ತು ಉದ್ದೇಶ ಅವು ಉದಾತ್ತವೋ, ಅನುದಾತ್ತವೋ, ನಾಗರಿಕವೋ, ಅನಾಗರಿಕವೋ ಎಂಬುದನ್ನು ನಿರ್ಧರಿಸುತ್ತದೆ. ಯಕ್ಷಗಾನದಲ್ಲಿ ಶೃಂಗಾರದ ಚಿತ್ರಣದ ವಿಷಯಕ್ಕೆ ಬಂದಾಗಲೂ ಇದೇ ಪ್ರಮುಖ ನೆಲೆಗಟ್ಟಾಗುತ್ತದೆ.
ಮುದ್ದಣನ ‘ಕುಮಾರ ವಿಜಯ’ ಪ್ರಸಂಗದಲ್ಲಿ ದೂರ್ವಾಸ-ಅಜಮುಖಿಯರ ಸನ್ನಿವೇಶ ಬರುತ್ತದೆ. ಶಚೀದೇವಿಯನ್ನು ಹುಡುಕಿ ಹೊರಟ ಶೂರಪದ್ಮಾಸುರನ ತಂಗಿ ಅಜಮುಖಿ ಕಾಡಿನ ಮಧ್ಯೆ ದೂರ್ವಾಸ ಮಹರ್ಷಿಗಳನ್ನು ಕಾಣುತ್ತಾಳೆ; ಅವರೆಡೆಗೆ ಆಕರ್ಷಿತಳಾಗುತ್ತಾಳೆ. ‘ಅಡಿಗಡಿಗುಡಿ ಸಡಲಿಡುತ ದೃಢಕುಚಗಳನೊತ್ತಿ ಮುತ್ತ ಬಿಡನೊಡತಿಡುತೆಡ ಬಲದಿ ಪಿಡಿದಪ್ಪುತ ಕಡುಛಲದಿ’ ಎಂದುಕೊಳ್ಳುತ್ತ ‘ಸಮರತಿಯೊಳು ರಮಿಸಿ ಚಿತ್ತಭ್ರಮಿಸಿ ವಿಟನನಿರಿಸಿ ಮತ್ತಾಗಮವನರಿಯದೆ ಗಮಿಸಿ ಪಿಂದೆ ತನ್ನ ನೋಡಿ’ ಇತ್ಯಾದಿಯಾಗಿ ಕನಸುಕಾಣುತ್ತಾಳೆ. ಆಮೇಲೆ ಈ ಪ್ರಕರಣ ಬೆಳೆದು ‘ಕಂಡರಿನ್ನು ಗುಣದಿ ನೀನುದ್ಧಂಡ ವಿರಹಿಗಣದಿ ಇದಲ್ಲದೆ ಪಂಡಿತ ಸ್ಮರರರಣದಿ ತಾಮಸಗೊಂಡಿರ್ದರೆ ಕ್ಷಣದಿ ಮೋಹದಿ ಗಂಡಾಗಿ ಎನ್ನ ದುಂಡು ಕುಚವ ಪಿಡಿದುಂಡು ಸುಖವ ಮುಂಕೊಂಡು ತೆರಳು ಪ್ರಿಯ’ ಎಂದೆಲ್ಲ ತನ್ನ ಬಯಕೆಯನ್ನು ಹೇಳಿಕೊಳ್ಳುತ್ತಾಳೆ.
ಇದೇ ಬಗೆಯ ಹಸಿಹಸಿ ಹೇಳಿಕೆಗಳು ಶೂರ್ಪನಖಾ ವೃತ್ತಾಂತದಲ್ಲೂ ಬರುತ್ತವೆ. ಪಾರ್ತಿಸುಬ್ಬನ ‘ಪಂಚವಟಿ’ ಪ್ರಸಂಗದಲ್ಲಿ ಶೂರ್ಪನಖಿ ಮಾರುವೇಷದಿಂದ ರಾಮಲಕ್ಷ್ಮಣರನ್ನು ಭೇಟಿಯಾಗುತ್ತಾಳೆ. ‘ಕವಲು ಮನವ ಬಿಟ್ಟು ತವಕದಿ ದಯವಿಟ್ಟು ಸವಿ ತಂಬುಲವ ನೀಡು ಸರಸ ಮಾತಾಡು’ ಎಂದು ರಾಮನಲ್ಲಿ ಪ್ರಣಯಭಿಕ್ಷೆ ಬೇಡುವ ಆಕೆ, ರಾಮನ ಸೂಚನೆಯ ಮೇರೆಗೆ ಲಕ್ಷ್ಮಣನನ್ನು ಭೇಟಿಯಾಗಿ ‘ನೆರೆಮನಸೆನ್ನ ಮೇಲಿಟ್ಟು ಇಕ್ಕೋ ಗುರುಕುಚವೆರಡ ನೀ ಮುಟ್ಟು ನೆರೆದ ಚೆಂದುಟಿಗೆ ಬಾಯಿಟ್ಟು ಚಪ್ಪರಿಸು ಸುರತಸುಖಗೊಟ್ಟು ಎನ್ನ ವಿರಹವ ನಿಲಿಸು ಕಾತರವನ್ನು ಮರೆಸು ಕಣ್ದೆರೆದೆನ್ನ ನೋಡು ಕಾರುಣ್ಯದಲಿ ಮಾತನಾಡು’ ಎಂದೆಲ್ಲ ಕಾತರಿಸುತ್ತಾಳೆ.
ಇದೇ ವರ್ಗಕ್ಕೆ ಸೇರಿದ ಪುರುಷ ಪಾತ್ರಗಳ ಶೃಂಗಾರವೂ ಇವುಗಳಿಗಿಂತ ಭಿನ್ನವಾಗಿಯೇನೂ ಇಲ್ಲ. ‘ಭಸ್ಮಾಸುರ ಮೋಹಿನಿ’ ಪ್ರಸಂಗದಲ್ಲಿ ಮೋಹಿನಿಯ ಸೌಂದರ್ಯಾತಿಶಯವನ್ನು ಕಂಡ ಭಸ್ಮಾಸುರನು ‘ತರುಣಿಮಣಿಯ ಪಾರ್ವತಿಯ ಹಂಗೇಕೆ ತಾನಿವಳ ಹರುಷದಿಂದೊಡಗೂಡಿ ವದನ ಚುಂಬನಗೈದು ಕಿರುಕಟಿಯ ಪಿಡಿದು ಸಂಭೋಗಿಸದೆ ಬಿಡೆನೆಂದು’ ಕನಸುಕಾಣುತ್ತಾನೆ. ರಾಮಾಯಣದ ‘ಶೃಂಗಾರ ರಾವಣ’ನೂ ಅಷ್ಟೇ. ಸ್ಮರಹತಿಯನ್ನು ತಾಳದೆ ರಾತ್ರಿಹೊತ್ತು ಅಶೋಕವನವನ್ನು ಪ್ರವೇಶಿಸುವ ರಾವಣ ಸೀತೆಯನ್ನುದ್ದೇಶಿಸಿ ‘ಹಗಲಿರುಳು ಕೈಯೊಳ್ ನಿನ್ನ ಬಿಗಿಯಪ್ಪಿಕೊಂಬೆ ನಾ ಮುನ್ನ ಬಗೆಬಗೆ ಕಾಮಕಲೆಯ ಸೊಗಸಾಗಿ ತೋರುತ್ತ ಮುದ್ದಾಡುವೆ ಕರ್ಪೂರವೀಳ್ಯ ಜಗಿದು ಸವಿತಾಂಬೂಲವ ನೀಡುವೆ ಹೆಚ್ಚಿನ ಮೋಹದ ಬಗೆಯಿಂದಲಿ ಮುತ್ತನು ಬೇಡುವೆ ಕುಚಕೆ ನಾ ಚಳ್ಳುಗುರನಿಟ್ಟು ಒರೆಸಿ ಲಲ್ಲೆಗರೆವೆ’ ಎಂದೆಲ್ಲ ಬಡಬಡಿಸುತ್ತಾನೆ.
ಆಯಾ ಪಾತ್ರಗಳ ಚಿತ್ರಣದ ದೃಷ್ಟಿಯಿಂದ ಕವಿಗೆ ಈ ಬಗೆಯ ಅಭಿವ್ಯಕ್ತಿ ಅನಿವಾರ್ಯ. ಪೌರಾಣಿಕ ಪ್ರಪಂಚದಲ್ಲಿ ಸುಸಂಸ್ಕೃತವಲ್ಲದ ಅಥವಾ ನೆಗೆಟಿವ್ ಪಾತ್ರಗಳಾಗಿ ಕಾಣಿಸಿಕೊಳ್ಳುವ ಅಜಮುಖಿ, ಶೂರ್ಪನಖಿ, ಭಸ್ಮಾಸುರ, ರಾವಣ, ಕೀಚಕ ಮುಂತಾದವರ ಸ್ವಭಾವವನ್ನು ಚಿತ್ರಿಸುವಲ್ಲಿ ಕವಿಗಳು ತುಸು ಹೆಚ್ಚೇ ವಾಚ್ಯವಾಗಿರುವುದು ಸಹಜವೇ ಆಗಿದೆ. ಉದಾತ್ತ ಅಥವಾ ನಾಗರಿಕ ಪಾತ್ರಗಳನ್ನು ಚಿತ್ರಿಸುವಾಗ ಅವರು ಭಿನ್ನ ಹಾದಿಯನ್ನೇ ಹಿಡಿಯುತ್ತಾರೆ. ಈ ಎಲ್ಲ ಯಕ್ಷಗಾನ ಕವಿಗಳು ಪುರುಷರೇ ಎಂಬುದು ಕೂಡ ಗಮನಾರ್ಹ. ಹೀಗಾಗಿ ಯಕ್ಷಗಾನ ಪ್ರಸಂಗಗಳಲ್ಲಿ ವ್ಯಕ್ತವಾಗಿರುವ ಶೃಂಗಾರ ಪುರುಷರ ದೃಷ್ಟಿಕೋನವೇ.
ಮೂಲಿಕೆ ರಾಮಕೃಷ್ಣಯ್ಯ ಕವಿಯ ‘ಸುಧನ್ವ ಕಾಳಗ’ದ ಪ್ರಭಾವತಿ ‘ಸತಿಶಿರೋಮಣಿ’. ಋತುಸ್ನಾತೆಯಾಗಿದ್ದ ತರುಣಿ ತನ್ನ ಗಂಡ ಸುಧನ್ವ ಯುದ್ಧಕ್ಕೆ ಹೊರಟಿದ್ದಾನೆಂಬ ಅರಿವಿಲ್ಲದೆ ಶೃಂಗಾರಭಾವದಿಂದಲೇ ಆತನನ್ನು ಎದುರುಗೊಳ್ಳುತ್ತಾಳೆ:
‘ಸತಿ ಶಿರೋಮಣಿ ಪ್ರಭಾವತಿ ಸೊಬಗಿನಲೀ ರತುನಾಭರಣಗಳ ದ್ಯುತಿಬೆಳಗುತಲೀ|
ರತಿಯ ಸೋಲಿಪ ರೂಪಿನ ಅತಿಚಲ್ವಿಕೆಯಲೀ ಪ್ರತಿ ಮದಗಜದಂತೆ ಗತಿಯಾ ನೀಡುತಲೀ||
ಚತುರತೆಯ ನಿರಿಯುಡುಗೆಗಳ ಮನುಮಥನ ಚಲ್ವಿನ ಅರ್ಧಚಂದ್ರಾಕೃತಿಯ ಫಣೆಕಸ್ತೂರಿ ತಿಲಕ ಭ್ರೂ|
ಲತೆಯ ಮಾನಿನಿ ಅತಿ ಹರುಷದಲಿ ಪತಿಗೆ ಇದಿರಾಗುತ್ತ ಬಂದಳೂ||’
ಯುದ್ಧದ ವಿಷಯ ತಿಳಿದು ಆಘಾತಗೊಂಡರೂ ನಿರ್ವಾಹವಿಲ್ಲದೆ ಆಕೆ ಸಂತಾನಭಿಕ್ಷೆ ಬೇಡುತ್ತಾಳೆ:
‘ಇದನಂತೆ ನೀಗೆಲ್ಲವು ಸುತಹೀನಗೊದಗುವುದೆ ಕೈವಲ್ಯವು|
ಇದುವೆ ಋತುಸಮಯವೆನಗೆ ಲಾಲಿಪುದು ಹದಗಾಲ ಬೆಳೆಮಾಳ್ಪೆಗೆ||’
‘ಶಶಿಪ್ರಭಾ ಪರಿಣಯ’ದಲ್ಲಿ ಮಾರ್ತಾಂಡತೇಜನನ್ನು ನೋಡಿದ ಭ್ರಮರಕುಂತಳೆ
‘ಅರರೇ ಯಾರಿವನು ಸುಂದರ ಪುರುಷಾ ಈತ ಸ್ಮರನಂತೆ ತೋರ್ಪ ಮನಕೆ ಹರುಷಾ|
ಆಹಾ ಮೊಗದಿ ನಗೆ ಸೂಸುವುದು ಇವನ ದೇಹ ಸುವರ್ಣ ಕಾಂತಿಯ ಮೀರ್ವದು|’
ಎಂದು ಬೆರಗಾಗುತ್ತಾಳೆ.
ಮುದ್ದಣನ ‘ರತ್ನಾವತಿ ಕಲ್ಯಾಣ’ದಲ್ಲಿ ರತ್ನಾವತಿಯನ್ನು ಕಂಡ ಭದ್ರಸೇನ
‘ಅಮಮ ಏನ್ ಬೆಡಗುಗಾರ್ತಿಯೊ ಕನ್ಯೇ ಕಾಣೆ ಕಮನೀಯ ಗಾತ್ರೆ ಮನ್ಮಥರನ್ನೇ|
ಭುವನ ಸ್ತ್ರೀನಿಕುರುಂಬವನದಲ್ಲೀ ಇಂಥಾ ನವಮೃದುಲತೆಯು ಇನ್ನಿಹುದೆಲ್ಲೀ|
ದಿವರಾಜನೆಂದು ಬಂದಿಹನಿಲ್ಲಿ ಎಂದು ತವೆ ಶಂಕೆ ತೋರ್ಪುದು ಮನದಲ್ಲೀ|’
ಎಂದು ವಿಸ್ಮಯಗೊಳ್ಳುತ್ತಾನೆ.
‘ಚಂದ್ರಹಾಸ ಚರಿತ್ರೆ’ಯ ವಿಷಯೆ ತನ್ನ ವಿವಾಹದ ಬಯಕೆಯನ್ನು ತಂದೆಯಲ್ಲಿ ತೋಡಿಕೊಳ್ಳುವುದು ಹೀಗೆ:
‘ತಂದೆ ಕೇಳೆನ್ನ ಭಿನ್ನಪವಾ ನಂದನದೊಳು ಪೊಯ್ದು ಜಲವಾ|
ಚಂದದಿಪೊರೆದ ಮಲ್ಲಿಗೆಬಳ್ಳಿ ಬೆಳೆದುದು ಮುಂದಿನ್ಯೋಚನೆಯನಗದ್ಯಾತಕೆ ನಿಂದಿರುವೈ ಪಿತನೆಕೇಳ್||’
ಶೂರ್ಪನಖಿ, ಅಜಮುಖಿಯರ ಶೃಂಗಾರಕ್ಕೂ ಪ್ರಭಾವತಿ, ಶಶಿಪ್ರಭೆ, ವಿಷಯೆಯಂಥವರ ಶೃಂಗಾರಕ್ಕೂ ಸ್ಪಷ್ಟ ವ್ಯತ್ಯಾಸವಿರುವುದನ್ನು ಗಮನಿಸಬೇಕು. ‘ಗುರುಕುಚವೆರಡ ನೀ ಮುಟ್ಟು ನೆರೆದ ಚೆಂದುಟಿಗೆ ಬಾಯಿಟ್ಟು ಚಪ್ಪರಿಸು’ ಎನ್ನುವ ಶೂರ್ಪನಖಿಯ ಮಾತಿಗೂ ‘ಇದುವೆ ಋತುಸಮಯವೆನಗೆ ಲಾಲಿಪುದು ಹದಗಾಲ ಬೆಳೆಮಾಳ್ಪೆಗೆ’ ಎಂಬ ಪ್ರಭಾವತಿಯ ಮಾತಿಗೂ ಎಷ್ಟು ವ್ಯತ್ಯಾಸವಿದೆ! ‘ಸಮರತಿಯೊಳು ರಮಿಸಿ ಚಿತ್ತಭ್ರಮಿಸಿ ವಿಟನನಿರಿಸಿ ಮತ್ತಾಗಮವನರಿಯದೆ ಗಮಿಸಿ ಪಿಂದೆ ತನ್ನ ನೋಡಿ’ ಎಂಬ ಅಜಮುಖಿಯ ವಿಲಾಸಕ್ಕೂ, ‘‘ನೀನೇ ನೀರೆರೆದು ಪೋಷಿಸಿದ ಮಲ್ಲಿಗೆ ಬಳ್ಳಿ ಬೆಳೆದು ನಿಂತಿದೆ, ಅದಕ್ಕೊಂದು ಮಾಮರದ ಆಧಾರ ಬೇಕು ಎಂಬುದು ನಿನಗೆ ಅರ್ಥವಾಗುತ್ತಿಲ್ಲವೇ” ಎಂದು ವಿಷಯೆ ತನ್ನ ತಂದೆಯನ್ನು ಕೇಳುವ ಪರಿಗೂ ಎಷ್ಟು ವ್ಯತ್ಯಾಸವಿದೆ!
ಹಾಗೆಂದು ಇಂಥ ಪಾತ್ರಗಳ ಭಾವಗಳನ್ನು ಎಲ್ಲ ಕಡೆಯಲ್ಲೂ ಕವಿಗಳು ತೀರಾ ವಾಚ್ಯವಾಗಿ ತೋರಿಸಿದ್ದಾರೆ ಎಂದೇನೂ ಇಲ್ಲ. ರಾಮನ ಸೂಚನೆಯಂತೆ ಶೂರ್ಪನಖಿ ಲಕ್ಷ್ಮಣನನ್ನು ಭೇಟಿಯಾಗಲು ಹೊರಟ ರೀತಿ ಇದು:
‘ಚಂದದಿಂದ ಬಂದಳಬ್ಜಲೋಚನೇ ರಾಮಚಂದ್ರ ಪೇಳಿದಂಥ ಮಾತಿನಂದವನ್ನು ಬಣ್ಣಿಸುತ್ತ|
ಕನ್ನಡಿಯನು ತೆಗೆದುನೋಡುತ ಮೊಗವು ಚೆನ್ನಾಗಿದೆ ಎಂದು ನಗೆಯಾಡುತಾ|
ತನ್ನೊಳು ತಾನೇ ಮಾತನಾಡುವ ತನಗೆ ಕನ್ನೆಯರೊಳಗೆ ಎಣೆಯಿಲ್ಲೆನ್ನುತಾ||’
ಮುಂದೆ ರಾವಣನು ಸೀತೆಯ ಕುರಿತು ಶೂರ್ಪನಖಿಯಲ್ಲಿ ಕುತೂಹಲ ವ್ಯಕ್ತಪಡಿಸುವ ರೀತಿಯೂ ಭಿನ್ನವಾಗಿದೆ: ‘ಅಂಥಾ ಚೆಲುವೆಯೇನೆ ಜಾನಕಿದೇವಿ ಅಂಥಾ ಚೆಲುವೆಯೇನೇ|…
ಕಾಂತೆಯರೊಳು ಮಂಡೋದರಿಗಿಂತ ಸೊಬಗೇನೇ||’
ಇನ್ನೊಂದೆಡೆ ‘ಕೀಚಕವಧೆ’ ಪ್ರಸಂಗದಲ್ಲಿ ಸೈರಂಧ್ರಿಯನ್ನು ಕಂಡ ಕೀಚಕ,
‘ಇವಳ್ಯಾವ ಲೋಕದ ಸತಿಯೋ ಮತ್ತೀಯುವತಿಯ ಪಡೆದವಳೇನ್ ಪುಣ್ಯವತಿಯೋ|
ರತಿಯಾ ಸೌಂದರ್ಯವಂತಿರಲೀ ಸುರಸತಿಯರ ಸೊಬಗು ತಾನಾಚೆಯೊಳಿರಲೀ|’
ಎಂದುಕೊಂಡು ಮೈಮರೆಯುತ್ತಾನೆ.
ಮೊದಲೇ ಹೇಳಿರುವಂತೆ ಯಕ್ಷಗಾನಕ್ಕೆ ಪಠ್ಯ ಮತ್ತು ಪ್ರದರ್ಶನ ಎಂಬ ಎರಡು ಆಯಾಮಗಳಿವೆ. ಈವರೆಗೆ ಉಲ್ಲೇಖಿಸಿರುವುದು ಪಠ್ಯದ ಭಾಗ, ಅಂದರೆ ಪ್ರಸಂಗಗಳಿಂದ ಉಧೃತ ಪದ್ಯಗಳು. ಭಾಗವತ ಸಂದರ್ಭಕ್ಕನುಗುಣವಾಗಿ ರಾಗತಾಳಗಳಲ್ಲಿ ಇವುಗಳನ್ನು ಹಾಡುತ್ತಾನೆ. ಪ್ರೇಕ್ಷಕನ ಮೇಲೆ ನೇರ ಪರಿಣಾಮ ಬೀರುವುದು ಎರಡನೆಯ ಮುಖ- ಪ್ರದರ್ಶನ. ಅಲ್ಲಿ ಕಲಾವಿದ ತನ್ನ ನೃತ್ಯ, ಅಭಿನಯ ಹಾಗೂ ಮಾತಿನ ಮೂಲಕ ಹಾಡುಗಳನ್ನು ಹೇಗೆ ಅಭಿವ್ಯಕ್ತಿಗೊಳಿಸುತ್ತಾನೆ ಎಂಬುದು ಮುಖ್ಯ. ಆದುದರಿಂದಲೇ ಪ್ರದರ್ಶನದಲ್ಲಿ ಕಲಾವಿದನ ಜವಾಬ್ದಾರಿ ಹೆಚ್ಚಿನದು.
ಸ್ತ್ರೀ ಪುರುಷರಿಗಿರುವ ಪರಸ್ಪರ ಪ್ರೇಮವೇ ರತಿ. ಅದು ಶೃಂಗಾರಕ್ಕೆ ಸ್ಥಾಯೀ ಭಾವ. ಕಾಮವು ಸಂಚಾರಿ ಭಾವ. ಅದು ನಾಚಿಕೆ, ಹರ್ಷ, ಮೋಹ, ಮದ, ಚಾಪಲ್ಯ ಮತ್ತು ಬಯಕೆಗಳ ಉದ್ದೀಪನದ ಪ್ರತೀಕ. ಇವುಗಳ ಅಭಿವ್ಯಕ್ತಿಯಲ್ಲಿ ಕಲಾವಿದನಿಗಿರುವ ಎಚ್ಚರ ಪ್ರದರ್ಶನದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಶೃಂಗಾರದಲ್ಲಿ ‘ಸಂಭೋಗ ಶೃಂಗಾರ’, ‘ವಿಪ್ರಲಂಭ ಶೃಂಗಾರ’ವೆಂಬ ಎರಡು ವಿಧ. ಮೊದಲನೆಯದು ಪ್ರಿಯರ ಸೇರುವಿಕೆಗೆ ಸಂಬಂಧಿಸಿದ್ದು; ಇಲ್ಲಿ ಪರಸ್ಪರ ದರ್ಶನ, ಸಲ್ಲಾಪ, ಸಮಾಗಮಗಳಿವೆ. ಎರಡನೆಯದು ಪ್ರಿಯರ ಅಗಲುವಿಕೆಗೆ ಸಂಬಂಧಿಸಿದ್ದು; ಕಲಹ, ಪ್ರವಾಸ ಅಥವಾ ಶಾಪಗಳಿಂದ ಉಂಟಾಗುವ ಅಗಲುವಿಕೆಯಿಂದ ಉಂಟಾಗುವ ಪರಿಣಾಮ. ಅಜಮುಖಿ, ಶೂರ್ಪನಖಿಯರ ಶೃಂಗಾರವು ಕಾವ್ಯಲಕ್ಷಣಗಳ ಪ್ರಕಾರ ವಾಸ್ತವವಾಗಿ ಶೃಂಗಾರ ಅಲ್ಲ, ‘ಶೃಂಗಾರಾಭಾಸ’ವೆಂಬ ಪ್ರಕಾರ. ಒಬ್ಬ ವ್ಯಕ್ತಿಗೆ ಮಾತ್ರ ಅನುರಾಗವಿದ್ದು ಮತ್ತೊಬ್ಬ ವ್ಯಕ್ತಿ ಉಪೇಕ್ಷೆಯಿಂದ ಇದ್ದರೆ, ಪಶುಪಕ್ಷಿಗಳು, ಅನಾಗರಿಕರ ಶೃಂಗಾರವನ್ನು ವರ್ಣಿಸಿದರೆ, ಒಬ್ಬಳೇ ಸ್ತ್ರೀ ಅನೇಕರಲ್ಲಿ ಅನುರಕ್ತಳಾದರೆ ಅದು ‘ರಸಾಭಾಸ’ವೆಂದು ಕರೆಯಲ್ಪಡುತ್ತದೆ (ಯಕ್ಷಲೋಕ, ಪುಟ ೩೭೮).
ಯಕ್ಷಗಾನದ ಪ್ರದರ್ಶನದ ವಿಷಯಕ್ಕೆ ಬಂದಾಗ ಯಾವ ಶೃಂಗಾರದ ಅಭಿವ್ಯಕ್ತಿಯಲ್ಲೂ ಕಲಾವಿದನಿಗೆ ಎಚ್ಚರ ಹಾಗೂ ಜವಾಬ್ದಾರಿ ಅಗತ್ಯ. ಔಚಿತ್ಯ ಮೀರದೆ, ಅಶ್ಲೀಲತೆಗೆ ಎಡೆಗೊಡದಂತೆ ಮಾತಾಡುವುದು ಅವನಿಗಿರುವ ದೊಡ್ಡ ಸವಾಲು. ಸಮರ್ಥ ಕಲಾವಿದರು ಇವುಗಳನ್ನು ಪುರಾಣ ಹಾಗೂ ಪಾತ್ರಗಳ ಚೌಕಟ್ಟಿನಲ್ಲಿ ಪ್ರಸ್ತುತಪಡಿಸುವುದನ್ನು ನೋಡುವುದೇ ಸೊಗದು. ಯಕ್ಷಗಾನದಲ್ಲಿ ಆಟ ಮತ್ತು ತಾಳಮದ್ದಳೆ ಎಂಬ ಎರಡು ಪ್ರಮುಖ ಪ್ರಕಾರಗಳಿವೆ. ಆಟದಲ್ಲಿ ವೇಷ, ಮಾತು, ಅಭಿನಯ, ನೃತ್ಯಗಳೆಲ್ಲ ಬಂದರೆ ತಾಳಮದ್ದಳೆ ವಾಚಿಕವೇ ಪ್ರಧಾನವಾದ ಕಲೆ. ಶೃಂಗಾರವನ್ನು ಅಭಿವ್ಯಕ್ತಿಸುವಲ್ಲಿ ತಾಳಮದ್ದಳೆ ಕಲಾವಿದನಿಗೆ ಮಾತಿನ ಮೇಲೆ ಅಪಾರ ಹಿಡಿತ ಅಗತ್ಯವಾದರೆ, ಬಯಲಾಟದ ಕಲಾವಿದನಿಗೆ ನಾಲ್ಕೂ ಆಯಾಮಗಳಲ್ಲಿ ಅಪಾರ ಜವಾಬ್ದಾರಿ ಇದೆ. ಮಾಯಾಶೂರ್ಪನಖಿ, ಅಜಮುಖಿ, ಭಸ್ಮಾಸುರನಂತಹ ಪಾತ್ರಗಳನ್ನೂ ಪ್ರೌಢ ಕಲಾವಿದರು ಔಚಿತ್ಯ ಮೀರದೆ, ಅಶ್ಲೀಲತೆಗೆ ಎಡೆಯಾಗದೆ, ಪ್ರೇಕ್ಷಕರಿಗೆ ಮುಜುಗರವಾಗದಂತೆ ಪ್ರಸ್ತುತಪಡಿಸಬಲ್ಲರು. ಯಕ್ಷಗಾನಕ್ಕೆ ಪ್ರಸಂಗ ಪಠ್ಯದ ಹೊರತಾಗಿ ಲಿಖಿತ ಸಂಭಾಷಣೆಗಳಿಲ್ಲ, ಅದೊಂದು ಆಶುಕಲೆ ಎಂಬುದನ್ನು ಇಲ್ಲಿ ಪ್ರಧಾನವಾಗಿ ಗಮನಿಸಬೇಕು.
ಇನ್ನೊಂದು ಬಹುಮುಖ್ಯ ವಿಚಾರವೆಂದರೆ, ಯಕ್ಷಗಾನದಲ್ಲಿ ಸಾಂಕೇತಿಕತೆಯೇ ಜೀವಾಳ. ಯಕ್ಷಗಾನ ವಾಸ್ತವಿಕತೆಗಿಂತ ದೂರ ನಿಂತ ಕಲೆ. ಅಲ್ಲಿ ನಡೆಯುವುದೆಲ್ಲವೂ ಪ್ರೇಕ್ಷಕನ ಕಲ್ಪನಾಲೋಕದಲ್ಲಿ. ಮಾತಿನಿಂದ ತೊಡಗಿ ವೇಷಭೂಷಣದವರೆಗೆ ಅದರ ಎಲ್ಲ ಅಂಗಗಳಲ್ಲೂ ಸಾಂಕೇತಿಕತೆ ಇದೆ. ಅಲ್ಲಿ ಪರೋಕ್ಷವಾಗಿ ಅಭಿವ್ಯಕ್ತಿಸಿದಷ್ಟೂ ಮೌಲ್ಯ ಹೆಚ್ಚು. ಅದು ಜಗತ್ತಿನ ಶ್ರೇಷ್ಠ ಕಲೆಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿರುವುದರ ಹಿಂದೆ ಅದರ ಸಾಂಕೇತಿಕತೆಯ ಪಾತ್ರ ಇದೆ. ರಂಗಸ್ಥಳವೇ ಒಂದು ಪುರಾಣಲೋಕ. ‘ರಥ’ ಎಂದು ಕರೆಯಲ್ಪಡುವ ಸರಳ ಆಸನವೇ ಅಲ್ಲಿ ಸಿಂಹಾಸನ. ಕಲಾವಿದ ನಿಂತಲ್ಲೇ ಸ್ವರ್ಗ, ಮರ್ತ್ಯ, ಪಾತಾಳ, ಅರಣ್ಯ, ಅರಮನೆ, ರಾಜಸಭೆಗಳೆಲ್ಲ ಸೃಷ್ಟಿಯಾಗುತ್ತವೆ.
ವಿದ್ವಾಂಸರು ಗುರುತಿಸಿರುವಂತೆ ಯಕ್ಷಗಾನದ ರಂಗಸ್ಥಳ, ಚೌಕಿ, ಹಿಮ್ಮೇಳ, ವೇಷಭೂಷಣ, ನೃತ್ಯ, ಅರ್ಥಗಾರಿಕೆ ಎಲ್ಲ ಕಡೆಯೂ ಸಾಂಕೇತಿಕತೆಯೇ ಪ್ರಧಾನ. ‘ಯಕ್ಷಗಾನ ಆಟವು ತನ್ನ ಸರ್ವಾಂಗಗಳಲ್ಲೂ ಸಾಂಕೇತಿಕತೆಯನ್ನು ಸಾಕಷ್ಟು ತುಂಬಿಕೊಂಡು ವರ್ತಿಸುವ ವರ್ಚಸ್ವೀ ಕಲೆ. ಕೇವಲ ಪ್ರತಿಕೃತಿಗಿಂತಲೂ ಪ್ರತೀಕ ಪದ್ಧತಿಯೇ ಕಲೆಯನ್ನು ಅರ್ಥಗರ್ಭಿತ ಕ್ರಿಯಾಶೀಲತೆಯ ಮೂಲಕ ಶ್ರೇಷ್ಠತೆಯ ಸೋಪಾನಕ್ಕೆ ಏರಿಸುತ್ತಾ ಹೋಗುತ್ತದೆ’ ಎನ್ನುತ್ತಾರೆ ಪ್ರೊ. ಅಮೃತ ಸೋಮೇಶ್ವರ (ಯಕ್ಷಗಾನ ಮಕರಂದ, ಪುಟ ೨೬೮).
ಕಲಾವಿದ ಮಾತಿನಲ್ಲಾಗಲೀ, ಅಭಿನಯದಲ್ಲಾಗಲೀ ಕೊಂಚ ಹದ ತಪ್ಪಿದರೂ ಅದು ಆಭಾಸವೆಂದೋ ಅಶ್ಲೀಲವೆಂದೋ ಪರಿಗಣಿಸಲ್ಪಡಬಹುದು. ಸ್ವತಃ ಪ್ರೇಕ್ಷಕನೇ ಇದನ್ನು ವಿರೋಧಿಸಿಯಾನು. ಇಲ್ಲಿ ಶೃಂಗಾರಕ್ಕೂ ಅಶ್ಲೀಲತೆಗೂ ನಡುವಿನ ಗೆರೆ ತುಂಬ ತೆಳುವಾದದ್ದು. ಈ ತೆಳುಗೆರೆಯನ್ನು ಮೀರಿದ ಕಲಾವಿದರು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾದಾರು. 2017ರಲ್ಲಿ ಮಂಗಳೂರು ಸಮೀಪ ನಡೆದ ಯಕ್ಷಗಾನ ನೃತ್ಯವೈಭವ ಕಾರ್ಯಕ್ರಮವೊಂದರಲ್ಲಿ ಜಯಂತ-ಸುಷಮೆ ಶೃಂಗಾರ ಸನ್ನಿವೇಶವನ್ನು ಅಭಿನಯಿಸಿದ ಕಲಾವಿದರು ರಂಗದ ಮೇಲೆ ಚುಂಬಿಸಿದರು ಎಂಬ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಾಸ್ತವವಾಗಿ ಯಕ್ಷಗಾನದಲ್ಲಿ ಕಲಾವಿದರು ಪರಸ್ಪರ ಸ್ಪರ್ಶಿಸಿ ಅಭಿನಯಿಸುವ ಕ್ರಮವೇ ಇಲ್ಲ. ಪತಿ-ಪತ್ನಿಯರ, ಪ್ರೇಮಿಗಳ ದೃಶ್ಯವಾದರೂ ಅದರ ಅಭಿವ್ಯಕ್ತಿಗೆ ಯಕ್ಷಗಾನದಲ್ಲಿ ಅದರದ್ದೇ ಆದ ವಿಧಾನಗಳಿವೆ. ಯಕ್ಷಗಾನವು ಚಲನಚಿತ್ರದ ವಾಸ್ತವಿಕ ಅಭಿನಯಕ್ಕಿಂತ ತುಂಬ ಭಿನ್ನವಾದದ್ದು. ತನ್ನ ಮುಖಭಾವದಿಂದಲೋ, ದೈಹಿಕ ಭಂಗಿಗಳಿಂದಲೋ, ರಂಗನಡೆಗಳಿಂದಲೋ, ಉದಾಹರಣೆಗೆ ಸೆರಗಿನ ತುದಿಯನ್ನು ಬೆರಳಿಗೆ ಸುತ್ತಿಕೊಳ್ಳುತ್ತಲೋ, ಜಡೆಯನ್ನು ಎದುರಿಗೆ ಇಳಿಬಿಡುತ್ತಲೋ, ಕಾಲ ಹೆಬ್ಬೆರಳಿನಿಂದ ನೆಲವನ್ನು ಗೀಚುತ್ತಲೋ, ಅದಕ್ಕೆ ಪೂರಕವಾದ ಹಿತಮಿತ ಮಾತುಗಳಿಂದಲೋ ಸ್ತ್ರೀ ಪಾತ್ರವೊಂದು ತನ್ನ ಶೃಂಗಾರ-ಅನುರಾಗಗಳನ್ನು ಅಭಿವ್ಯಕ್ತಗೊಳಿಸೀತು. ಈ ಸಾಂಕೇತಿಕತೆಗಳನ್ನು ಮೀರಿಹೋದಾಗ ಅಶ್ಲೀಲತೆ ಇಣುಕುವುದು ಸಹಜವೇ.
ಯಕ್ಷಗಾನ ಮೂಲತಃ ಒಂದು ಆರಾಧನಾ ಕಲೆ. ತನ್ನ ನಮನೀಯ ಗುಣಗಳ ಕಾರಣಕ್ಕೆ ಕಾಲಕ್ರಮೇಣ ಅದಕ್ಕೊಂದು ಸಾಮಾಜಿಕ ಆಯಾಮ ಲಭ್ಯವಾಯಿತು. ಕಾಲಪ್ರವಾಹದಲ್ಲಿ ಈ ಬದಲಾವಣೆ ಅಸಹಜವೋ ಅನಪೇಕ್ಷಿತವೋ ಅಲ್ಲ. ಗಟ್ಟಿಕಾಳು ಉಳಿಯುತ್ತದೆ, ಜಳ್ಳು ತೂರಿಹೋಗುತ್ತದೆ. ಆದರೆ ಈ ನಡಿಗೆಯಲ್ಲಿ ಸೇರಿಕೊಳ್ಳುವ ಕಲಾವಿದರಿಗೆ ಅದರ ಮೂಲಸತ್ವವನ್ನು ಉಳಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿಯಿದೆ. ಸಾಂಕೇತಿಕತೆ ಯಕ್ಷಗಾನದ ಮೂಲತಿರುಳು ಎಂದು ಅರ್ಥಮಾಡಿಕೊಳ್ಳುವುದೂ ಈ ಜವಾಬ್ದಾರಿಯ ಒಂದು ಭಾಗ. ಮತ್ತೆ ಅಮೃತ ಸೋಮೇಶ್ವರರ ಮಾತು ಇಲ್ಲಿ ಪ್ರಸ್ತುತ: ‘ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಪಟ್ಟ ಸರ್ವ ವಿವರಗಳನ್ನು ವಿಸ್ತಾರವಾಗಿ ಬಿಡಿಬಿಡಿಯಾಗಿ ವಾಚ್ಯವಾಗಿಸುವುದರಿಂದ ಸಮಯ, ಪರಿಕರ, ಶ್ರಮಗಳ ಅಪವ್ಯಯವಾಗಬಹುದಾದುದರಿಂದ ವಿಶಿಷ್ಟ ಸಂಕೇತಗಳನ್ನು ಸಾಂದರ್ಭಿಕವಾಗಿ ಬಳಸಿ ಹೆಚ್ಚು ಮಾರ್ಮಿಕತೆಯನ್ನು, ರೋಚಕತೆಯನ್ನು, ಅರ್ಥಪೂರ್ಣತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ’.
ಇದನ್ನೂ ಓದಿ : Art and Entertainment : ‘ಸಂಪೂರ್ಣ ನಗ್ನರಾದ ಹೆಣ್ಣುಮಕ್ಕಳನ್ನು ನೋಡುವುದು ಸಾಧ್ಯವಾಗಲಿಲ್ಲ’