Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್’
ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com
ಮೇಘನಾ ಸುಧೀಂದ್ರ ಆನ್ಲೈನ್ ಪೋರ್ಟಲ್ಗಳಿಗೆ ಅಂಕಣ ಬರೆಯುವುದರ ಮೂಲಕ ಓದುಗರಿಗೆ ಪರಿಚಯವಾದ ಇವರು ಖಾಸಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಯನಗರದ ಹುಡುಗಿ, ಲಿಪಿಯ ಪತ್ರಗಳು, #AI ಕಥೆಗಳು ಪ್ರಕಟಿತ ಪುಸ್ತಕಗಳು. ಕನ್ನಡ ಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 6 ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಚಾರಣ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಆಸಕ್ತಿ ಕ್ಷೇತ್ರಗಳು.
ನಾನು ಸಣ್ಣವಳಿದ್ದಾಗ ಕೂಲ್ ಜಾಯಿಂಟ್ ಅನ್ನುವ ಜಾಗ ಜಯನಗರದಲ್ಲಿ ಇತ್ತು(ಈಗಲೂ ಇದೆ) ಅದು ಜಯನಗರ 4ನೇ ಬ್ಲಾಕಿನ ಒಂದು ರಸ್ತೆಯ ತುದಿಯಲ್ಲಿ ಇದೆ. ಅದು ಇಡೀ ಸೌತ್ ಬೆಂಗಳೂರಿನ ಮೀಟಿಂಗ್ ಪಾಯಿಂಟ್ ಆಗಿತ್ತು. ಕಾಲೇಜಿನ ಹುಡುಗ ಹುಡುಗಿಯರು, ಹೈಸ್ಕೂಲಿನ ಮಕ್ಕಳೆಲ್ಲ ಟ್ಯೂಷನ್ ನೋಟ್ಸು, ಹುಟ್ಟುಹಬ್ಬದ ಟ್ರೀಟು, ಬ್ರೇಕಪ್ ಅಳು ಎಲ್ಲದಕ್ಕೂ ಅದೇ ಜಾಗ ಆಗಿತ್ತು. ಕೂಲ್ ಜಾಯಿಂಟಿನ ಪಕ್ಕದಲ್ಲೇ ಒಂದು ದೊಡ್ಡ ಮರ ಇತ್ತು, ಅದಕ್ಕೊಂದು ಕಟ್ಟೆ ಇವರೇ ಕಟ್ಟಿದ್ದರು. ಮನೆಯಲ್ಲಿ ಹೇಳಿ ಬಂದಿದ್ದರೆ ರಾಜಾರೋಷವಾಗಿ ಅಂಗಡಿಯ ಮುಂದೆಯೇ ನಿಂತು ಮಾತಾಡುಕೊಳ್ಳುತ್ತಿದ್ದೆವು, ಕದ್ದು ಬಂದಿದ್ದರೆ ಆ ಮರದ ಹಿಂಬದಿಯಲ್ಲಿ ಕೂತು ಸ್ಯಾಂಡ್ವಿಚ್ ತಿಂದು ಎದ್ದು ಹೋಗುತ್ತಿದ್ದೆವು. ಕೆಲವೊಮ್ಮೆ ಒಂದು ಸ್ಯಾಂಡ್ವಿಚ್ಚನ್ನು ಹಿಡಿದು 5 ಮಂದಿ 2 ಗಂಟೆ ತಿಂದ ರೆಕಾರ್ಡು ಇದೆ.
ಈ ಕೂಲ್ ಜಾಯಿಂಟಿನ ಎದುರಿಗೆ 4ನೇ ಬ್ಲಾಕಿನ ಬಸ್ ನಿಲ್ದಾಣ ಇದೆ. ಈ ನಿಲ್ದಾಣದಿಂದ ಹೊರಡುವ 25 ಸರಣಿಯ ಬಸ್, 18 ಸರಣಿಯ ಬಸ್ ಜಯನಗರ 9ನೇ ಬ್ಲಾಕಿಗೋ ಅಥವಾ ಬಿಟಿಎಂ ಗೋ ಹೋಗಿ ನಿಲ್ಲುತ್ತದೆ. ಮಲ್ಲೇಶ್ವರ , ಮೆಜೆಸ್ಟಿಕ್ ಕಡೆಯಿಂದ ಬರುವ ಬಸ್ಸುಗಳು ಅಲ್ಲಿ ನಿಲ್ಲುತ್ತದೆ. ಬಸ್ಸಿನಲ್ಲಿ ಕೂತ ಎಲ್ಲರಿಗೂ ಕೂಲ್ ಜಾಯಿಂಟಿನಲ್ಲಿ ನಿಂತಿರುವ ಯೂತ್ಸ್ ಮೇಲೆ ಕಣ್ಣು, ಅವರಲ್ಲಿ ಏನು ಮಾಡುತ್ತಿದ್ದಾರೆ, ನಮ್ಮ ಪಕ್ಕದ ಮನೆಯ ಮಕ್ಕಳು ಅಲ್ಲಿದ್ದಾರಾ, ಯಾವ ಹುಡುಗಿ ಯಾವ ಭಂಗಿಯಲ್ಲಿ ಹೇಗೆ ಕೂತಿದ್ದಾರೆ ಎಂಬ ಮಾರಲ್ ಪೊಲೀಸಿಂಗ್ ಕಣ್ಣುಗಳು ಕೆಲವನ್ನು ಹುಡುಕುತ್ತಿರುತ್ತದೆ. ನಮ್ಮ ಕಾಲದ ಅದೆಷ್ಟೋ ಪ್ರೇಮ ಕಥೆಗಳ ಮೊದಲ ನೋಟ ಶುರುವಾಗುತ್ತಿದ್ದದ್ದೇ ಅಲ್ಲಿ. ಕೆಲವೊಮ್ಮೆ ಹೊಸ ಗೆಳೆತನಗಳು, ಹೊಸ ಪರಿಚಯಗಳೆಲ್ಲವೂ ಅಲ್ಲಿಂದಲೇ ಶುರುವಾಗುತ್ತಿದ್ದವು. ಸೌತ್ ಬೆಂಗಳೂರಿನ ಮಿಲೇನಿಯಲ್ ಹುಡುಗ ಹುಡುಗಿಯರಿಗೆ ಸಂತೆಯಲ್ಲಿಯೇ ಲವ್ ಮಾಡುವ ತವಕ. ಅಲ್ಲಿ ನಿಂತಿರುತ್ತಿದ್ದ ಎಲ್ಲಾ ಕಪಲ್ಸ್ಗಳಿಗೂ ಅವರವರದೇ ಪ್ರೈವೆಸಿ ಇತ್ತು. ಪ್ರಾಯಶಃ ಅನ್ಸೇಫ್ ಆಗಿ ಇದ್ದದ್ದು ಬರಿ ಬೇರೆಯವರಿಗೆ ಗೊತ್ತಾಗಿ ಆಗುತ್ತಿದ್ದ ರಂಪ ರಾಮಾಯಣಗಳು ಮಾತ್ರ.
ಒಂದು ಸ್ವಲ್ಪ ದೊಡ್ಡವರಾದ ಮೇಲೆ ಸ್ವಲ್ಪ ಕೈಯಲ್ಲಿ ದುಡ್ಡು ಓಡಾಡುತ್ತಿದ್ದಾಗ ಸೀದಾ ಬನಶಂಕರಿಯ ಬಿಡಿಎ ಕಾಂಪ್ಲೆಕ್ಸಿನ ಲಕ್ಷ್ಮಿ ಚಾಟ್ ಸೆಂಟರೋ ಅಥವಾ ಪೂನಮ್ ಸ್ವೀಟ್ಸ್ ಅಂಗಡಿಯ ಮುಂದೆ ಪ್ರೇಮ ನಿವೇದನೆ ಅಥವಾ ಏಕಾಂತದ ಮಾತುಕತೆ ಒಂದು ಜಿಲೇಬಿ ಮತ್ತು ಭೇಲ್ಪುರಿಯ ಜೊತೆಗೆ ನಿರ್ಭೀಡೆಯಿಂದ ನಡೆಯುತ್ತಿತ್ತು. ಅಲ್ಲಿಯೂ ಕೆಲವು ಕಣ್ಣುಗಳು ಇಂತಹ ಎಳೆಯ ಹುಡುಗ ಹುಡುಗಿಯರನ್ನು ಗುರಾಯಿಸುತ್ತಿದ್ದರೂ ಯಾವುದೇ ಭಯವಿಲ್ಲದೆ ಜಿಲೇಬಿಯನ್ನು ಹುಡುಗನ ಬಾಯಿಗೆ ತುರುಕಿ ದೊಡ್ಡವರಿಗೆ ಉರಿಸುವ ಪ್ರಕ್ರಿಯೆಯನ್ನು ಆರಾಮಾಗಿ ಮಾಡುವ ಧೈರ್ಯಶಾಲಿ ಹೆಣ್ಣುಮಕ್ಕಳು ಇದ್ದಾರೆ ಎಂಬುದೇ ಆಶ್ಚರ್ಯಕರ ಸಂಗತಿ. ಇಲ್ಲಿ ಪ್ರೇಮಿಸುವಾಗ ಅಥವಾ ಒಬ್ಬರನ್ನೊಬ್ಬರು ಅರಿಯುವಾಗ ಮಾತುಕತೆಗಳು ಬಹಳ ಮುಖ್ಯ. ಮುಂದೆ ಅಕಸ್ಮಾತ್ ಜೀವನ ಸಂಗಾತಿಗಳಾದರೆ ಕೆಲವು ಮೂಲಭೂತವಾದ ವ್ಯತ್ಯಾಸಗಳನ್ನ ಒಡೆದುಹಾಕುವುದಕ್ಕೆ ಇಂತಹ ಪ್ರೈವೇಟ್ ಮಾತುಕತೆಗಳು ಅತ್ಯವಶ್ಯಕ. ಅಂತಹ ಮಾತುಗಳನ್ನು ಪಬ್ಲಿಕ್ಕಿನಲ್ಲಿ 100 ಮಂದಿಯ ಮಧ್ಯದಲ್ಲಿಯೇ ಆಡಬೇಕಾದುದು ಖೇದಕರ ಸಂಗತಿ.
ಪ್ರಾಯಶಃ ಹುಡುಗ ಹುಡುಗಿಯರ ಪ್ರೈವೇಟ್ ಮಾತುಕತೆಗಳು ಅಥವಾ ಪ್ರೈವೆಸಿ ಅಂದರೆ ಕೆಲವರಿಗೆ ಅದು ಸೆಕ್ಸ್ ಮಾತ್ರವೇ ಎಂದು ಅನ್ನಿಸುತ್ತದೆ. ಅವರು ನಿರ್ಜನ ಪ್ರದೇಶಕ್ಕೆ ಹೋಗುವುದೇ ಬರಿ ಸೆಕ್ಸ್ ಮಾಡುವುದಕ್ಕೆ ಅಥವಾ ಹಾಗೆ ಹೋದವರೆಲ್ಲಾ ಮಾನಗೆಟ್ಟವರು ಎಂದು ಜನ ಹಣೆಪಟ್ಟಿ ಹಚ್ಚಿ ಏನಾದರೂ ಆದರೆ ಹಾಗೆ ಅವರು ಹೋಗಿದ್ದಕ್ಕೆ ಆಗಿದ್ದು ಎಂದು ನಾನ್ ಎಂಪಥೆಟಿಕ್ ಆಗಿ ಮಾತಾಡೋವಾಗ ಪ್ರೀತಿ, ಪ್ರೇಮ ಮತ್ತು ಲೈಂಗಿಕ ಸಂಬಂಧಗಳು ಅಸಹ್ಯದ್ದು ಎಂದು ಸಮಾಜ ಆಗಲೇ ಹಣೆಪಟ್ಟಿ ಹಚ್ಚಿ ಕೂತಿದೆ ಹಾಗೂ ಅಂತಹ ಮಡಿವಂತಿಕೆಯಿರುವ ದೇಶದಲ್ಲಿ ಜನಸಂಖ್ಯಾ ಸ್ಪೋಟ ಮಾತ್ರ ವರ್ಷ ವರ್ಷ ಆಗುತ್ತಲೇ ಇದೆ.
ಈ ಮೀಟಿಂಗ್ ಪಾಯಿಂಟುಗಳು ಕೂಲ್ ಜಾಯಿಂಟ್, ಲಕ್ಷ್ಮೀ ಚಾಟ್ ಅಂಗಡಿಗಳಿಂದ ಕಾಫಿ ಡೇ, ಪಿಝಾ ಹಟ್ಗಳಿಗೆ ಬಹು ಬೇಗನೇ ಶಿಫ್ಟ್ ಆಯಿತು, ಅಲ್ಲಿ ದುರುಗುಟ್ಟಿ ನೋಡುವವರ ಸಂಖ್ಯೆ ಕಡಿಮೆಯೋ ಅಥವಾ ಅಲ್ಲಿ ಅವರಿಗೆ ಪ್ರೈವೇಟ್ ಮಾತುಕತೆಗಳು ನಿರರ್ಗಳವಾಗಿ ಆಗುವ ಸಾಧ್ಯತೆಗಳು ಜಾಸ್ತಿ. ಪ್ರಾಯಶಃ ಬೆಂಗಳೂರಿನಂತಹ ಊರುಗಳಲ್ಲಿ ಈ ನಿರ್ಜನ ಪ್ರದೇಶವನ್ನು ಹುಡುಕಿಹೋಗುವುದು ಕಷ್ಟವೇ ಆದರೆ ಬೆಂಗಳೂರಿನ ಸುತ್ತಮುತ್ತ ಜಾಗಗಳನ್ನ ಮಾರ್ಕ್ ಮಾಡಿಟ್ಟುಕೊಂಡು ಬೈಕ್ ರೈಡು, ಲಾಂಗ್ ರೈಡು, ಓಯೋ ರೂಮುಗಳ ಸಖ್ಯಕ್ಕೆ ಮಿಲೇನಿಯಲ್ ಜನರು (25ರಿಂದ 40 ವರ್ಷದೊಳಗಿನವರು) ಬಿದ್ದಿದ್ದಾರೆ.
ನಾನು ಬಾರ್ಸಿಲೋನಾಕ್ಕೆ ಹೋದಾಗ ನನ್ನ ಮನೆಯೊಡತಿ, “ನಿನ್ನ ಬಾಯ್ ಫ್ರೆಂಡನ್ನು ಹಾಲಿಡೇಗೆ ಇಲ್ಲಿ ಕರಿಯಬಹುದು ನನಗೇನೂ ತೊಂದರೆ ಇಲ್ಲ” ಎಂದಾಗ ನಾನು ಹೌಹಾರಿದ್ದೆ. ಮನೆಯ ಹತ್ತಿರವೇ ಪಾರ್ಕ್ ಇದೆ, ಬೆಟ್ಟ ಇದೆ ಎಲ್ಲಾ ಕಡೆ ಹೋಗಬಹುದು ಎಂದಾಗ ಸ್ವಲ್ಪ ಡೌಟಿಂದಲೇ ನೋಡಿದ್ದೆ. ಪ್ರಾಯಶಃ ನನಗೆ ಆದ ಕಲ್ಚರಲ್ ಶಾಕ್. ಆದರೆ ಎಲ್ಲಿ ಬೇಕಾದಲ್ಲಿ ಯಾವುದೇ ತೊಂದರೆ ಇಲ್ಲದೆ ತಮ್ಮ ಪ್ರೀತಿಯನ್ನು ಯಾವ ಪ್ರಕಾರದಲ್ಲಿಯಾದರೂ ಹಂಚಿಕೊಳ್ಳುವುದಕ್ಕೆ ಹಿಂಜರಿಯದೇ ಇದ್ದ ಜಾಗದಲ್ಲಿ ನಾನಿದ್ದೆ. ಅಲ್ಲಿ ನಿರ್ಜನ ಪ್ರದೇಶ ಅನ್ನುವುದು ಕಳ್ಳತನಕ್ಕೆ ಆಹ್ವಾನವಾಗುತ್ತಿತ್ತೇ ಹೊರತು ಅದು ರೇಪ್ ಅಥವಾ ಬೇರೆ ಹಿಂಸಾತ್ಮಕ ಚಟುವಟಿಕೆಗಳಿಗೆ ಪ್ರಸಿದ್ಧಿಯಾಗುತ್ತಿರಲ್ಲಿಲ್ಲ.
ಪ್ರಾಯಶಃ ನಿರಾಕರಣೆಯನ್ನು ಸರಳವಾಗಿ ತೆಗೆದುಕೊಳ್ಳುವ ಮನಸ್ಥಿತಿ ತಲುಪಿದಾಗ ಮಾತ್ರವೇ ಮೀಟಿಂಗ್ ಪಾಯಿಂಟ್ಗಳನ್ನು ಸಹಿಸಿಕೊಳ್ಳುವ ಮೈಂಡ್ ಸ್ಪೇಸ್ ನಮಗೆ ಬರುತ್ತದೆ. “ನಾನು ಈ ವಯಸ್ಸಿನಲ್ಲಿ ಇಂಥದ್ದು ಮಾಡಿಲ್ಲ, ಈ ವಯಸ್ಸಲ್ಲಿ ನೋಡಿ ಇಬಿಬ್ರೇ ಹೇಗೆ ಓಡಾಡುತ್ತಾರೆ, ನನಗೆ ಈ ಹುಡುಗಿ ಸಿಗಲಿಲ್ಲ, ಅವನಿಗೆ ಹೇಗೆ ಸಿಕ್ಕಿದಳು, ಅವನು ಖುಷಿಯಾಗಿರಲು ಹಕ್ಕಿಲ್ಲ ಹೀಗೆ ವಿಚಿತ್ರ ಮಾನಸಿಕ ವಿಲಕ್ಷಣತೆಗಳನ್ನು ಸಹಿಸಿಕೊಂಡೋ ಅಥವಾ ಅದಕ್ಕೆ ಪ್ರೋತ್ಸಾಹ ಕೊಟ್ಟೋ ಬೆಳೆಸಿರುವ ಪರಿಣಾಮ ಸ್ವಚ್ಛಂದವಾಗಿ ಹಾರಾಡಿಕೊಂಡಿರುವ ಅಥವಾ ಖುಷಿಯಾಗಿ ಕಾಲ ಕಳೆಯುವ ಮೀಟಿಂಗ್ ಪಾಯಿಂಟುಗಳ ಮೇಲೆ ಕಣ್ಣು ಹಾಕಿ ಅದನ್ನ ಮುಚ್ಚಿಸಿ ಅಥವಾ ಅಲ್ಲಿ ಹೋಗಬೇಡಿ ಎಂದು ಬಾಯಿ ಬಡಿದುಕೊಂಡರೆ ಮತ್ತೊಂದು ಕ್ಲೋಸ್ ಮೈಂಡೆಡ್ ಪೀಳಿಗೆಯನ್ನೇ ಬೆಳೆಸುವ ದಾರಿಯಲ್ಲಿರುತ್ತೇವೆ ಅಷ್ಟೇ…
ಇದನ್ನೂ ಓದಿ : Meeting Point : ‘ನಮ್ಮೂರಿಗೆ ನ್ಯಾಷನಲ್ ಹೈವೇ ಬಂದಷ್ಟು ಸುಲಭವಾಗಿರಲಿಲ್ಲ ಹುಡುಗರನ್ನು ಮಾತಾಡಿಸುವುದು’
Published On - 1:29 pm, Fri, 3 September 21