Meeting Point : ‘ಅವಳ ಶೀಲವೇ ಹೆಣ್ತನದ, ಮರ್ಯಾದೆಯ ಪ್ರತೀಕ ಎಂಬುದಕ್ಕೆ ಏನು ಆಧಾರ?’

|

Updated on: Sep 21, 2021 | 12:14 PM

Raise Yourself : ‘ಕೊನೆಗೆ ಅವರಲ್ಲೊಬ್ಬಳು ಮನೆಯವರಿಗೆ ಸತ್ಯ ಏನೆಂದು ತಿಳಿಸಿ ಪರೀಕ್ಷೆ ಬರೆಯಲು ಬಂದಳು. ಒಂದು ಅರ್ಥವಿಲ್ಲದ ಘಟನೆಯಿಂದಾಗಿ ಇಡೀ ಭವಿಷ್ಯವನ್ನು ಕತ್ತಲಲ್ಲಿ ಕಳೆಯುವುದು ಯಾವ ನ್ಯಾಯ? ಮುತ್ತಿಗೆ ಹಾಕುವವರು ಎಲ್ಲ ಧರ್ಮ ಜಾತಿಗಳಲ್ಲೂ ಇದ್ದಾರೆ. ಇಂಥ ಸಂಕುಚಿತ ಮನಸ್ಥಿತಿಗಳನ್ನು ಎದುರಿಸಿ ಮುನ್ನಡೆಯಬೇಕು. ಅದಕ್ಕಾಗಿ ಆಪ್ತರ ಅಥವಾ ಸಂಬಂಧಿಸಿದವರ ನೆರವು ಪಡೆದುಕೊಳ್ಳುವುದು ಖಂಡಿತ ತಪ್ಪಲ್ಲ.‘ ಸುಷ್ಮಾ ಸವಸುದ್ದಿ

Meeting Point : ‘ಅವಳ ಶೀಲವೇ ಹೆಣ್ತನದ, ಮರ್ಯಾದೆಯ ಪ್ರತೀಕ ಎಂಬುದಕ್ಕೆ ಏನು ಆಧಾರ?’
ಲೇಖಕಿ ಸುಷ್ಮಾ ಸವಸುದ್ದಿ
Follow us on

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್​ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ಸುಷ್ಮಾ ಸವಸುದ್ದಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಓದುತ್ತಿದ್ದಾರೆ. ಸರಣಿಯನ್ನು ಓದಿದಾಗ ಅವರಿಂದ ಹೊಮ್ಮಿದ ಪ್ರತಿಕ್ರಿಯಾತ್ಮಕ ಬರಹ ನಿಮ್ಮ ಓದಿಗೆ.

*

ಅವಳಿಗೆ ಮೈತುಂಬ ಸರಿಯಾಗಿ ಬಟ್ಟೆ ಹಾಕಿಕೊ ಎಂದು ಗದರಿಸುವ ಸಮಾಜ ಅವನ ದೃಷ್ಟಿಯನ್ನು ತಿದ್ದಿಕೋ ಎಂದು ಹೇಳುತ್ತಿಲ್ಲ. ಕತ್ತಲಾಗುವುದರೊಳಗೆ ಮನೆ ಸೇರು ಎಂದು ಅವಳ ಮೇಲೆ ನಿರ್ಬಂಧ ಹೇರಿದ ಸಮಾಜ ಅವನಿಗೆ ತನ್ನ ವರ್ತನೆಗಳ ಬಗ್ಗೆ, ಜವಾಬ್ದಾರಿಗಳ ಬಗ್ಗೆ ಇನ್ನೂ ತಿಳಿಹೇಳುತ್ತಿಲ್ಲ.

ಪದವಿ ಕಾಲೇಜು ದಿನಗಳಲ್ಲಿ ಬಸ್ ಹತ್ತಿ ಹಳ್ಳಿಗಳಿಂದ ಬರುವ ಸಹಪಾಠಿಗಳ ಮೀಟಿಂಗ್ ಪಾಯಿಂಟ್ ಕಥೆಗಳಿಗೆ ದಿನವೂ ಕಿವಿಯಾಗುತ್ತಿದ್ದೆವು. ಒಂದೆಡೆ ಬಸ್ ಮತ್ತು ಬಸ್‍ಸ್ಟ್ಯಾಂಡ್‍ಗಳಲ್ಲಿ ಕಾಡಿಸುವ ಹುಡುಗರಿಂದ ತಪ್ಪಿಸಿಕೊಳ್ಳುವುದೇ ಒಂದು ಪ್ರಯಾಸ. ಕಂಫರ್ಟ್​ ಎನಿಸುವವರೊಂದಿಗೆ ಮಾತನಾಡಬೇಕೆಂದು ಇಚ್ಛಿಸುವುದೂ ಮತ್ತೊಂದು ಪ್ರಯಾಸ. ಹಿಂದಿನ ಸಿಟಿನಲ್ಲಿ ಕುಳಿತು ರೇಗಿಸುವ, ಅಸಭ್ಯವಾಗಿ ವರ್ತಿಸುವ ಹುಡುಗರಿಂದ ಹುಡುಗಿಯರು ಅಕ್ಷರಶಃ ಬೇಸತ್ತು ಹೋಗುತ್ತಿದ್ದರು. ದಿನವೂ ಬರುವ ಪ್ರಪೋಸಲ್​ಗಳು, ಮುದ್ದೆ ಮಾಡಿ ಎಸೆಯುವ ಚೀಟಿಗಳು, ಬಸ್ ಸೀಟ್ ಮೇಲೆಲ್ಲ ಕೆತ್ತುವ ಹೆಸರುಗಳು, ಬೇಕು ಎಂತಲೇ ಪಕ್ಕಕ್ಕೆ ಬಂದು ತಾಗುವ ಭುಜಗಳು ನಮ್ಮ ನಿತ್ಯದ ಪ್ರಯಾಣವನ್ನು ದೊಡ್ಡ ಸಾಹಸವನ್ನಾಗಿಸಿಬಿಟ್ಟಿದ್ದವು. ಇದನ್ನೆಲ್ಲ ಮನೆಯಲ್ಲಿ ಹೇಳುವಂತೆಯೂ ಇಲ್ಲ.  ಮನೆಯಲ್ಲಿ ಗೊತ್ತಾದರೆ ಎಲ್ಲಿ ಕಾಲೇಜಿಗೆ ಕಳುಹಿಸುವುದನ್ನೇ ಬಿಡಿಸುತ್ತಾರೆಂಬ ಭಯ.

ಇತ್ತ ಬಸ್ ಇಳಿದು 3-4 ಕೀ.ಮೀ ಒಳಗೆ ನಡೆದು ಹೋಗುವಾಗ ತಮಗೆ ಕಂಫರ್ಟ್​ ಮತ್ತು ಸೇಫ್ ಎನಿಸುವ ಹುಡುಗರೊಟ್ಟಿಗೂ ಮಾತನಾಡುವಂತಿಲ್ಲ, ಜೊತೆಗೆ ಹೆಜ್ಜೆ ಹಾಕುವಂತಿಲ್ಲ. ಬಸ್​ಸ್ಟ್ಯಾಂಡಿನಲ್ಲಿ ಅಕ್ಕ ಪಕ್ಕ ಕುಳಿತುಕೊಳ್ಳುವಂತಿಲ್ಲ. ಎಲ್ಲಿ ಯಾರು ಯಾವ ಹೊಸ ಕಥೆ ಪೋಣಿಸುತ್ತಾರೊ ಎಂಬ ಆತಂಕ. ಈ ತರಹದ ಸುಳ್ಳು ಕಥೆಗಳಿಗೆ ಹುಡುಗಿಯರ ಪಾಲಕರೂ ತಲೆಯಾಡಿಸುವುದು ಇನ್ನೂ ಸಂಕಟದ ವಿಷಯ. ಇಂತಹ ಇಲ್ಲದ ಕಥೆಗಳಿಗೆ ಅನೇಕ ಹುಡುಗಿಯರು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ನಿದರ್ಶನಗಳಿವೆ ನಮ್ಮೂರ ಕಡೆ. ಈ ನಿದರ್ಶನಗಳನ್ನು ಕಂಡ ಇತರ ಹುಡುಗಿಯರ ಪಾಲಕರೂ ತಮ್ಮ ಮಗಳು ಯಾವ ಹುಡುಗರೊಟ್ಟಿಗೂ ಮಾತನಾಡದಂತೆ ಎಚ್ಚರಿಕೆ ನೀಡುತ್ತಾರೆ.

ಹೀಗಾಗಿಯೇ ಹುಡುಗಿಯರು-ಹುಡಗರು ಭೇಟಿಯಾಗಲು ಯಾರೂ ಇರದ ಏಕಾಂತ ತಾಣವನ್ನು ಹುಡುಕಿಕೊಳ್ಳುತ್ತಾರೆ. ಅಕಸ್ಮಾತ ಅಲ್ಲಿ ಯಾರ ಕಣ್ಣಿಗಾದರೂ ಬಿದ್ದರೆ ಅಲ್ಲಿಂದ ಯುದ್ಧ ಆರಂಭ. ಅದು ಅವರಿಬ್ಬರ ಮನೆತನಗಳ ಮಧ್ಯೆ, ಜಾತಿಗಳ ಮಧ್ಯೆ, ಧರ್ಮಗಳ ಮಧ್ಯವೂ ತಾಂಡವವಾಡಿದರೆ ಆಶ್ಚರ್ಯವೇನಿಲ್ಲ. ಡಿಗ್ರಿ ಕಾಲೇಜು ದಿನಗಳಲ್ಲಿ ಮುಸ್ಲಿಂ ಹುಡುಗಿಯರಿಬ್ಬರು ಹಿಂದೂ ಧರ್ಮದ ಸಹಪಾಠಿಗಳೊಂದಿಗೆ ಮಾತಾನಾಡುತ್ತ, ಹರಟುತ್ತ ಬರುವಾಗ ಮುಸ್ಲಿಂ ಸಮುದಾಯದ ಕೆಲ ಜನ ಅದನ್ನು ನೋಡಿ ಅವರ ಸುತ್ತ ಮುತ್ತಿಗೆ ಹಾಕಿ, ಆ ಹುಡುಗಿಯರನ್ನು ಬೆದರಿಸಿ ಅವರ ಮನೆ, ಊರು ಎಲ್ಲವನ್ನು ತಿಳಿದುಕೊಂಡು ಅವರ ಮನೆಯವರೆಗೂ ಜಗಳ ಕಾಯಲು ಹೋದರು. ಆ ಹುಡುಗರನ್ನು ಹೊಡೆಯಲು ಹೋದರು. ಮರುದಿನದಿಂದಲೇ ಆ ಹುಡುಗಿಯರು ಮತ್ತೆ ಕಾಲೇಜು ಮುಖ ನೋಡಲಿಲ್ಲ. ಕೊನೆಗೆ ಅವರಲ್ಲೊಬ್ಬಳು ಮನೆಯವರಿಗೆ ಸತ್ಯ ಏನೆಂದು ತಿಳಿಸಿ ಪರೀಕ್ಷೆ ಬರೆಯಲು ಬಂದಳು. ಹೀಗೆ ನಿರ್ಭಿಡೆಯಿಂದ ಹೆಣ್ಣುಮಕ್ಕಳು ಮನೆಯವರೊಂದಿಗೆ ಮಾತನಾಡಬೇಕು. ಚರ್ಚಿಸಿ ಅರ್ಥ ಮಾಡಿಸಬೇಕು. ಒಂದು ಅರ್ಥವಿಲ್ಲದ ಘಟನೆಯಿಂದಾಗಿ ಇಡೀ ಭವಿಷ್ಯವನ್ನು ಕತ್ತಲಲ್ಲಿ ಕಳೆಯುವುದು ಯಾವ ನ್ಯಾಯ? ಹೀಗೆ ಮುತ್ತಿಗೆ ಹಾಕುತ್ತ ಬಂದವರು ಎಲ್ಲ ಧರ್ಮ ಜಾತಿಗಳಲ್ಲೂ ಇದ್ದಾರೆ. ಇಂಥ ಸಂಕುಚಿತ ಮನಸ್ಥಿತಿಗಳನ್ನು ಎದುರಿಸಿ ಮುನ್ನಡೆಯುವುದು ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಬೇಕಿದೆ. ಅದಕ್ಕಾಗಿ ಆಪ್ತರ, ಸಂಬಂಧಿಸಿದವರ ನೆರವು ಪಡೆದುಕೊಳ್ಳುವುದು ಖಂಡಿತ ತಪ್ಪಲ್ಲ.

ಸೌಜನ್ಯ : ಅಂತರ್ಜಾಲ

ಗೆಳೆತನಕ್ಕೆ ಲಿಂಗ, ಧರ್ಮವೆಂಬ ಸಂಕುಚಿತ ಮೇರೆಯ ಹಂಗು ಇರುವುದಿಲ್ಲವೆನ್ನುವುದು ಮೌಢ್ಯ ತುಂಬಿಕೊಂಡವರಿಗೆ ಅರ್ಥವಾಗುದಿಲ್ಲ. ಅಷ್ಟಕ್ಕೂ ಅವರನ್ನು ಪ್ರಶ್ನಿಸಲು ಇವರಾರು? ಇಂಥವರಿಂದ ತಪ್ಪಿಸಿಕೊಳ್ಳಲೆಂದೇ ಹುಡುಗ-ಹುಡುಗಿಯರು ಏಕಾಂತವನ್ನು ಅರಸುತ್ತ ಹೋಗುವುದು. ಆದರೆ ಅವರೆಲ್ಲ ಪ್ರೇಮಿಗಳೇ ಆಗಿರಬೇಕೆಂದಿಲ್ಲ. ಸಮಾಜದ ಕೆಟ್ಟ ದೃಷ್ಟಿಗೆ, ಸಲ್ಲದ ಕಲ್ಪನೆಗಳಿಗೆ ಗುರಿಯಾಗುವುದು ಬೇಡ ಎಂದು ಮೀಟಿಂಗ್ ಪಾಯಿಂಟ್ ಅರಸಿ ಹೋದರೆ ಅಲ್ಲಿ ವಿಕೃತ ಮನಸ್ಥಿತಿಯ ಕಾಮುಕರು ಯಾವುದಕ್ಕೂ ಹೇಸದೆ ನಿಂತಿರುತ್ತಾರೆ. ನಗರ ಪ್ರದೇಶಗಳಲ್ಲಿ ಇರುವ ಹುಡುಗಿಯರದ್ದು ಇನ್ನೊಂದು ತರಹದ ಗೋಳು. ಜನ ಓಡಾಡುವ ಪ್ರದೇಶಗಳಲ್ಲಿ ಹೋಗುವಂತಿಲ್ಲ, ಜೋಡಿಗಳು ಕುಳಿತುಕೊಳ್ಳುವ ಪಾರ್ಕಗಳಿಗೆ ಭೇಟಿ ಕೊಡುವ ಹಾಗಿಲ್ಲ, ಕತ್ತಲಾದ ಬಳಿಕ ಸುತ್ತುವಂತಿಲ್ಲ.

ನಾನು ಪಿಯುಸಿ ಓದುವಾಗ ನನಗೆ ಹತ್ತಿರವೂ ಆಗುವ ಮತ್ತು ನಾನು ತುಂಬಾ ಇಷ್ಟ ಪಡುವ ಪ್ರೊಫೆಸರ್ ಕಾಲನಿ ದಾರಿ ಹಿಡಿದೇ ಹೋಗುತ್ತಿದ್ದೆ. ದೊಡ್ಡ- ದೊಡ್ಡ ಬಿಲ್ಡಿಂಗ್‍ಗಳು, ದೈತ್ಯಾಕಾರದ ಮರಗಳು, ಗಣೇಶನ ಮಂದಿರ, ಚಿಕ್ಕ ಡಾಂಬಾರು ರಸ್ತೆ. ಅಪ್ಪಿ-ತಪ್ಪಿ ಆಗೊಮ್ಮೆ- ಇಗೊಮ್ಮೆ ಹಾಯುವ ಕಾರು. ಬೆಳಗ್ಗೆ 9 ರಿಂದ 10 ಗಂಟೆಗೆ ಆ ದಾರಿ ಹಿಡಿದು ಶಾಲೆ-ಕಾಲೇಜಿಗೆ ಹೋಗುವವರ ಸಂಖ್ಯೆ ಹೆಚ್ಚಿರುತ್ತಿತ್ತು. ಆದರೆ ಮಧ್ಯಾಹ್ನ ನಾನು ಮರಳಿ ಮನೆಗೆ ಹೋಗುವ ಹೊತ್ತಿಗೆ ಯಾರೊಬ್ಬರೂ ಅಲ್ಲಿ ಸುಳಿಯುತ್ತಿರಲಿಲ್ಲ. ಹೊಡೆದು ಹಾಕಿದರೂ ಬಂದು ಕೇಳಲು ಯಾವ ಜೀವಿಯೂ ಇರುತ್ತಿರಲಿಲ್ಲ. ರಸ್ತೆ ಉದ್ದಕ್ಕೂ ಇದ್ದ ದೊಡ್ಡ-ದೊಡ್ಡ ಮರಗಳು ಆ ಬಿಸಿಲಿನಿಂದ ನನ್ನನ್ನು ರಕ್ಷಿಸುತ್ತಿದ್ದವು. (ಈಗ ರಸ್ತೆ ಅಗಲಿಕರಣದ ಹೆಸರಿನಲ್ಲಿ ಎಲ್ಲ ಮರಗಳನ್ನು ಕಡಿದು ಹಾಕಿದ್ದಾರೆ.) ಆ ದಾರಿಯೆಂದರೆ ನನಗೆ ಅದೇನೋ ಆತ್ಮಿಯತೆ. ಆದರೆ ನನ್ನ ಅಮ್ಮನಿಗೆ ಆತಂಕ. “ಬೇಕಿದ್ರೆ ಬೆಳಗ್ಗೆ ಕಾಲೇಜಿಗೆ ಹೋಗೊವಾಗ ಆ ದಾರೀಲಿ ಹೋಗು ಆದ್ರೆ ಬರುವಾಗ ಮಾತ್ರ ಮೇನ್ ರೋಡ್ ಹಿಡಕೊಂಡ್ ಬಾ” ಅಂತ ದಿನವೂ ನನ್ನಮ್ಮ ನನಗೆ ಹೇಳುತ್ತಲೇ ಇದ್ದರು. ಆ ಬಿಸಿಲಲ್ಲಿ ಮೇನ್ ರೋಡ್ ಮೇಲಿನ ವಾಹನ, ಬಿಸಿಲು, ಧೂಳು, ದೂರ ಯಾರಿಗೆ ಬೇಕು ಆ ಜಂಜಾಟ ಎಂದವಳೆ ಅದೇ ದಾರಿ ಹಿಡಿಯುತ್ತಿದ್ದೆ.

ಆ ಏಕಾಂತ ಹೆಣ್ಣಿಗೆ ಸೂಕ್ತವಲ್ಲ ಎಂದು ಎನಿಸುವವರೆಗೂ ಆ ದಾರಿ ಬದಲಿಸಿರಲಿಲ್ಲ. ಆದರೆ ದಿನ ಮಧ್ಯಾಹ್ನ  ನಾನು ಕಾಲೇಜಿನಿಂದ ತಿರುಗಿ ಮನೆಗೆ ಹೋಗುವ ಸಮಯಕ್ಕೆ ನನ್ನ ಸುತ್ತು ತಿರುಗುವ ಆ ಅಪರಿಚಿತನ ಬೈಕು ನನಗೆ ಅಸುರಕ್ಷಿತ ಎನಿಸಿದಾಗಲೇ ನಾನು ಆ ದಾರಿ ತೊರೆದು ಮೇನ್ ರೋಡ್ ಹಿಡಿದೆ. ಹೀಗೆ ಹುಡುಗಿಯರು ಒಬ್ಬರೇ ಹೋಗುವಾಗ ಅವರ ಸಮಯ ತಿಳಿದುಕೊಂಡು ದಿನವೂ ಅವರ ಸುತ್ತ ಬೈಕ್ ಸುತ್ತಿಸುವ ಹುಡುಗರ ಸಂಖ್ಯೆಯೇನು ಕಡಿಮೆಯಿಲ್ಲ. ಕತ್ತಲು, ಹೆಣ, ಪ್ರಾಣಿ, ದೆವ್ವ ಇದ್ಯಾವುದಕ್ಕೂ ಹೆದರದೇ ಸ್ನೇಹಿತರಿಂದ, ಮನೆಯವರಿಂದ ಧೈರ್ಯವಂತೆ ಎಂಬ ಬಿರುದು ಪಡೆದ ನಾನು ಯಾರಿರದ ತಾಣದಲ್ಲಿ ಪ್ರಯಾಣಿಸಲು ಹೆದರುವಂತಾಗುತ್ತದೆ.  ಹತ್ತಿದ ಬಸ್‍ನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆಯೇ ಎಂದು ಲೆಕ್ಕಿಸುವಂತಾಗುತ್ತದೆ. ಅಕ್ಕಪಕ್ಕ ಅಪರಿಚಿತ ಗಂಡು ಜೀವಗಳು ಸುಳಿದರೆ ಮೈಯಲ್ಲಾ ಕಣ್ಣಾಗಿಸಿಕೊಂಡು ಪ್ರಯಾಣವೇ ಉಸಿರುಗಟ್ಟಿಸುವಂತಾಗುತ್ತದೆ.

ಅತ್ಯಾಚಾರದಂತಹ ಅಸಹನೀಯ ಕ್ರೂರ ಕೃತ್ಯಗಳಿಗೆ ಒಳಗಾದ ಹೆಣ್ಣು ತನ್ನ ದೈಹಿಕ, ಮಾನಸಿಕ ನೋವಿನ ಜೊತೆಗೆ ತನ್ನ ಮನೆತನದ ಮರ್ಯಾದೆಯೂ ತನ್ನಿಂದ ಹಾಳಾಯಿತಲ್ಲ ಎಂಬ ನೋವಿನ ಬೆಂಕಿಯನ್ನು ಒಡಲಲ್ಲಿ, ಮೆದುಳಲ್ಲಿ ಹೊರಬೇಕಾಗಿರುವಂಥ ಸ್ಥಿತಿ ತಂದಿಟ್ಟವರಾರು? ಹೆಣ್ಣಿನ ಶೀಲವೇ ಹೆಣ್ತನದ ಮತ್ತು ಮರ್ಯಾದೆಯ ಪ್ರತೀಕ ಎಂಬ ವಿಚಾರವು ಯಾವ ಆಧಾರ ಮೂಲವನ್ನಿಟ್ಟುಕೊಂಡು ಹುಟ್ಟಿತು? ಗಂಡಸಿಗೂ ಯಾಕೆ ಇಂತಹದೊಂದು ಮರ್ಯಾದೆಯ ಕಟ್ಟಳೆಯನ್ನು ಸಮಾಜ ಹಾಕಲಿಲ್ಲ?

ಇನ್ನು ಈತನಕವೂ ಎಷ್ಟೋ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಮಹಿಳಾ ಹಾಸ್ಟೆಲ್​ಗಳಲ್ಲಿ ವಸ್ತ್ರಸಂಹಿತೆಯ ಬಗ್ಗೆ ಕಟ್ಟಳೆಗಳನ್ನು ಹೇರುತ್ತಲೇ ಇದ್ದಾರೆ. ಮೆಸ್ಸುಗಳಲ್ಲಿ ಕೆಲಸ ಮಾಡುವವರು ಹುಡುಗರು ಎಂಬ ಕಾರಣಕ್ಕೆ ಹುಡುಗಿಯರು ಕುತ್ತಿಗೆಯಿಂದ ಪಾದಗಳ ತನಕ ಬಟ್ಟೆ ಧರಿಸಲೇಬೇಕು ಎಂದು ಫರಮಾನು ಹೊರಡಿಸುತ್ತಿದ್ದಾರೆ. ಆಯಾ ಋತುಮಾನಕ್ಕೆ ತಕ್ಕಂತೆ ಬಟ್ಟೆಗಳನ್ನು ಮನುಷ್ಯರು ಧರಿಸುವುದು ಸಹಜವಲ್ಲವೆ? ಈ ರೀತಿಯ ಕಟ್ಟಳೆಗಳನ್ನು ಹೇರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದಾಗಿ ನಮ್ಮ ಸುತ್ತಲಿರುವ ಎಲ್ಲ ಹುಡುಗರೂ ಕೆಟ್ಟವರೇ, ಕಾಮುಕರೇ ಎಂಬ ಭಾವವನ್ನು ಮೂಡಿಸಲು ಪ್ರೇರೇಪಿಸಿದಂತೆಯೂ ಅನ್ನಿಸುವುದಲ್ಲವೆ? ಇವಕ್ಕೆಲ್ಲ ಕೊನೆಯೇ ಇಲ್ಲವೆ?

ಇದನ್ನೂ ಓದಿ : Meeting Point : ‘ನಮ್ಮಷ್ಟಕ್ಕೆ ನಮ್ಮನ್ನು ಅರ್ಥ ಮಾಡಿಕೊಳ್ಳಲೂ ಬಿಡಬೇಡಿ’

Published On - 12:09 pm, Tue, 21 September 21