ಆಧುನಿಕ ಶಕುಂತಲಾ ಕಥನ: ನನಗೆ ಬರುತ್ತಿದ್ದ ಪತ್ರಗಳ ಪ್ರವಾಹ ಇದ್ದಕ್ಕಿದ್ದಂತೆ ನಿಂತುಹೋಯಿತು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 04, 2022 | 8:25 AM

ನಾನು ಹೀಗೆ 1972 ರ ಮೊದಲ ಭಾಗದಲ್ಲಿ ಶಿರಾದಲ್ಲಿ ಲೆಕ್ಚರರ್ ಕೆಲಸ ಒಪ್ಪಿಕೊಳ್ಳಲು ಹಲವಾರು ಕಾರಣಗಳಿದ್ದವು. 1969 ರಲ್ಲಿ M.Sc. ಮುಗಿಸಿ Ph.D. ಗೆ ಸಂಶೋಧನೆ ಆರಂಭವಿಸುವ ತನಕ ನನಗಿದ್ದಿದ್ದು ಒಂದೇ ಗುರಿ ಡಾಕ್ಟರೇಟ್, ಆಮೇಲೆ ಅಮೇರಿಕಾ.

ಆಧುನಿಕ ಶಕುಂತಲಾ ಕಥನ: ನನಗೆ ಬರುತ್ತಿದ್ದ ಪತ್ರಗಳ ಪ್ರವಾಹ ಇದ್ದಕ್ಕಿದ್ದಂತೆ ನಿಂತುಹೋಯಿತು
Dr. Shakuntala Shridhar,
Follow us on

ನಾನು ಹೀಗೆ 1972 ರ ಮೊದಲ ಭಾಗದಲ್ಲಿ ಶಿರಾದಲ್ಲಿ ಲೆಕ್ಚರರ್ ಕೆಲಸ ಒಪ್ಪಿಕೊಳ್ಳಲು ಹಲವಾರು ಕಾರಣಗಳಿದ್ದವು. 1969 ರಲ್ಲಿ M.Sc. ಮುಗಿಸಿ Ph.D. ಗೆ ಸಂಶೋಧನೆ ಆರಂಭವಿಸುವ ತನಕ ನನಗಿದ್ದಿದ್ದು ಒಂದೇ ಗುರಿ ಡಾಕ್ಟರೇಟ್, ಆಮೇಲೆ ಅಮೇರಿಕಾ. ಇದು ನನ್ನ ವೃತ್ತಿ ಸಂಬಂಧಿತ ಗುರಿಗಳಾಗಿದ್ದವು. ವ್ಯಕ್ತಿಗತವಾಗಿ ಎಲ್ಲಾ ಹುಡುಗುಗಿಯರಂತೆ ನಾನು ಪ್ರೀತಿ ಪ್ರೇಮಗಳ ಕನಸು ಕಂಡಿದ್ದೆ. ಅದರಲ್ಲೂ ತ್ರಿವೇಣಿಯವರ ಕಾದಂಬರಿಗಳು, Mills & Boons ನ ಲಘು ಪ್ರಣಯ ಕಾದಂಬರಿಗಳು ನನ್ನಲ್ಲೂ ಆ ಬಗೆಯ ಭಾವನೆಗಳನ್ನ ಹುಟ್ಟುಹಾಕಿದ್ದವು. ಆದರೆ ಓದು ಮತ್ತು ಭವಿಷ್ಯದ ಕಡೆ ಏಕಲವ್ಯನಂತೆ ಗುರಿಯಿಟ್ಟಿದ್ದ ನನಗೆ ಪ್ರೀತಿ ಪ್ರಣಯಗಳು ಅಷ್ಟು ಮುಖ್ಯ ಅನ್ನಿಸಲಿಲ್ಲ. ಆ ಕಾಲದಲ್ಲೆ (1947) ಅಂತರ್ಜಾತಿಯ ವಿವಾಹದ ಕೂಸಾಗಿದ್ದ ನನಗೆ ಮದುವೆ ಸ್ವಲ್ಪ ಕಷ್ಟವೇ ಇತ್ತು. ಇದರೊಟ್ಟಿಗೆ M.Sc. maadi Ph.D. ಮಾಡತ್ತಿರುವ ಹುಡುಗಿಗೆ, ತಂದೆ ತಾಯಿಗಳ ಎರಡೂ ಕಡೆ ಸಮಾಜದ ತೀರಾ ಹಿಂದುಳಿದ ಜಾತಿಗೆ ಸೇರೀದ ನನ್ನನ್ನು ತಾಯಿಯ ಕಡೆಯಾಗಲಿ, ಅಥವಾ ತಂದೆಯ ಕಡೆಯಾಗಲಿ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಡಲು ಗಂಡು ಸಿಗುವುದು ಮರುಳುಗಾಡಿನಲ್ಲಿ ನೀರು ಸಿಗುವಷ್ಟೇ ಕಷ್ಟವಾಗಿತ್ತು. ನನ್ನ ತಂದೆಯೂ ಸ್ವಭಾವದಿಂದ ಮಕ್ಕಳ ಮದುವೆ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ.

ಆಗಲೇ ಹೇಳಿದಂತೆ M.Sc. ಮತ್ತು Ph.D. ಮಾಡುವಾಗ ಜೊತೆಯಲ್ಲಿ ಗಂಡು ಮಕ್ಕಳಿದ್ದರೂ, ಅವರುಗಳು ವಿದ್ಯೆ ಮುಗಿಸಿ ಕೆಲಸಕ್ಕೆ ಹೋಗುವ ಆತುರದಲ್ಲಿದ್ದರು. ಮತ್ತೆ ನಾನು ಓದುತ್ತಿದ್ದ ಕಾಲದಲ್ಲಿ, ಅದರಲ್ಲೂ ಬಾಟನಿ ಮತ್ತು ಜೂಅಲಾಜಿ ವಿಭಾಗಗಲ್ಲಿ ಗಂಡು, ಹೆಣ್ಣು ವಿದ್ಯಾರ್ಥಿಗಳು ಸ್ನೇಹದಿಂದಿರಲು ಕಣ್ಣಿಗೆ ಕಾಣದ ಅಡಚಣೆಗಳಿದ್ದವು. ಅಂದರೆ ಪ್ರೊಫೆಸರಗಳು ಹದ್ದಿನ ಕಣ್ಣಿಟ್ಟಿರುತ್ತಿದ್ದರು. ಅದೊಂತರ ತಂದೆ ತಾಯಿಗಳು ಬೆಳೆದ ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರುವಂತೆ, strict atmosphere ಇತ್ತು. ಎಲ್ಲಕ್ಕಿಂತ ಇಂತಹ ಪ್ರೇಮದ ಸುಳಿಗೆ ನಾನು ಸಿಕ್ಕಿಕೊಳ್ಳಲು ದೊಡ್ಡ ಅಡ್ಡಚಣೆಗಳೆಂದರೆ ನನ್ನವೇ. ಕೆಳ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದಿದ್ದರೂ ನಾನು ಭಾರಿ ಸ್ವಾಭಿಮಾನಿ. ಇದಕ್ಕೆ ಹುಟ್ಟಿನಿಂದ ಬಂದ ಸ್ವಭಾವದ ಜೊತೆಗೆ ಹಲವು ಬೇರೆಯದೇ ಕಾರಣಗಳಿದ್ದವು.

ಸುಂದರಿಯಲ್ಲದಿದ್ದರೂ ಮತೊಮ್ಮೆ ತಿರುಗಿ ನೋಡುವಂತ ಆಕರ್ಷಕ ವ್ಯಕ್ತಿತ್ವ ನನ್ನದಾಗಿತ್ತು. ಆ ಕಾಲಕ್ಕೆ ಉದ್ದ ಅನುಭಹುದಾದ ನಿಲುವು, ಬಂಗಾರದ ಮೈಬಣ್ಣ, ಉದ್ದ ಕೂದಲು, ಅಂದ ಎನ್ನಬಹುದಾದ ಮುಖ, ಜಾಣತನ, ಪ್ರಪಂಚದ ಬಗ್ಗೆ ಸ್ವಲ್ಪ ಹೆಚ್ಚೇ ಎನಿಸುವಷ್ಟು General knowledge, ಇಂಗ್ಲೀಷನಲ್ಲಿ ಸುಲಲಿತವಾಗಿ ಸಂಭಾಷಿಸಬಲ್ಲ, ಬರೆಯುವದರಲ್ಲೂ ಒಳ್ಳೆ ಪ್ರೌಡಿಮೆ ಇದ್ದ ಹುಡುಗಿ ನಾನಾಗಿದ್ದೆ. ನನ್ನ ಬಗ್ಗೆ ನನಗೆ ಒಂಥರಾ ಅಭಿಮಾನ ಮತ್ತು ಹೆಮ್ಮೆ. ಇಷ್ಟೆಲ್ಲಾ ಗುಣಗಳಿದ್ದ ಮೇಲೆ ನನ್ನನ್ನು ಮೆಚ್ಚಿ ಮದುವೆಯಾಗುವ ರಾಜಕುಮಾರ ಬಂದೆ ಬರತಾನೇ ಅನ್ನೋ ಧೃಡ ನಂಬಿಕೆ. ಆದರೆ ಆ ರಾಜಕುಮಾರ ಜಾಣನಿರಬೇಕು, ಪ್ರಪಂಚ ಜ್ಞಾನವಿರಬೇಕು, ಒಳ್ಳೆ ಹೃದಯವಂತನಾಗಿರಬೇಕು, ನನ್ನನ್ನು ಅರ್ಥ ಮಾಡಿಕೊಳ್ಳಬೇಕು, ನನ್ನ ಕನಸುಗಳನ್ನು ಹಂಚಿಕೋಬೇಕು ಅಂತೆಲ್ಲ ಆಸೆಗಳು.

ಇದನ್ನೂ ಓದಿ: ಆಧುನಿಕ ಶಕುಂತಲಾ ಕಥನ: ಥೀಸಿಸ್ ಬರೆಯಲು ಗೈಡ್ ನನಗೆ ಬೇಕಾದ ಮಾರ್ಗದರ್ಶನ ನೀಡುತ್ತಿರಲಿಲ್ಲ, ಕಷ್ಟದ ಹಾದಿ ಅದಾಗಿತ್ತು

ಎಲ್ಲಕ್ಕಿಂತ ಹೆಚ್ಚಾಗಿ ಅಂಥ ಪತಿ ಸಿಕ್ಕೇ ಸಿಗ್ತಾನೆ ಅನ್ನೋ ಧೃಡ ನಂಬಿಕೆ. ವಯಸ್ಸು ಅನ್ನೋದು ಎಂತೆಂತಾ ಭ್ರಮೆಗಳನ್ನ ಹುಟ್ಟುಹಾಕುತ್ತೆ ಅಲ್ವಾ? ಮನೆಯಲ್ಲಿ ಬುದ್ಧಿ ಹೇಳುವ, ಪ್ರಪಂಚದ ನಿಜ ಬಣ್ಣ ತೋರಿಸುವ ಹಿರಿಯರಿದ್ದರೆ ಬಾಳು ಹಸನು. ಇಲ್ಲಾ ನಾವೇ ಸ್ವಾರ್ಥಿಗಳಾಗಿ, ಭವಿಷ್ಯ ಯೋಚಿಸಿ, ಧೈರ್ಯವಾಗಿ, ಪ್ಲಾನ್​ ಮಾಡಿ ಮುನ್ನುಗ್ಗಿ ಸುಖ ಜೀವನಕ್ಕೆ ಬೇಕಾದನ್ನು ದಕ್ಕಿಸಿಕೊಳ್ಳಬೇಕು. ವಿದ್ಯೆಯ ಬಗ್ಗೆ, ವೃತ್ತಿಯ ಬಗ್ಗೆ ನನಗೆ ಇಂತಹ ಏಕಲವ್ಯ ಗುರಿಯಿತ್ತು. ಆದರೇ ದುರಾದೃಷ್ಟವಶಾತ್ ನನ್ನ ವಿವಾಹ, ಅದರ ನಂತರ ಬದುಕಿನ ಬಗ್ಗೆ ಇಂಥ ನಿರ್ದಿಷ್ಟ ಗುರಿ, ಪ್ರಯತ್ನಗಳು ಒಂದಿಷ್ಟು ಇರಲಿಲ್ಲ. ಮುಂದೆ ಈ ದುರ್ಬಲತೆಗೆ ಬಹು ದೊಡ್ಡ ಬೆಲೆ ತೆರಬೇಕಾಯಿತು.

ಸಂಶೋಧನೆ ನಿರಾತಂಕವಾಗಿ ಮುಂದುವರೆದಿತ್ತು. ಮುನ್ನೂರು ರೂಗಳ ಫೆಲೋಶಿಪ್ ಪ್ರತಿ ತಿಂಗಳೂ ಬರುತ್ತಿರಲಿಲ್ಲ. ಒಮ್ಮೊಮ್ಮೆ ಮೂರು ತಿಂಗಳಿಗೆ, ಒಮ್ಮೊಮ್ಮೆ ಆರು ತಿಂಗಳಿಗೆ ಒಟ್ಟಿಗೆ ಬರುತ್ತಿತ್ತು. ಆಗ ಅಮ್ಮ ಅದನ್ನ ಜತನವಾಗಿ ಮನೆಗೆ ಉಪಯೋಗಿಸಿ ಉಳಿದ ಹಣದಲ್ಲಿ ನನಗೊಂದು ಬಂಗಾರದ ಸರ ಎರಡು ಬಳೆ ಮಾಡಿಸಿಕೊಟ್ಟರು. ಮೊದಲ ಬಾರಿಗೆ ಬಂಗಾರ ಮೈಮೇಲೆ ಬಂದಿತ್ತು ನಾನು ನನಗೆ ಅಂತ ತೆಗೆದಿಟ್ಟುಕೊಂಡಿದ್ದ ಹಣದಲ್ಲಿ ನನಗೆ, ತಂಗಿ ,ತಮ್ಮಂದರಿಗೆ ಬಟ್ಟೆ, ಚಪ್ಪಲಿ ಮುಂತಾದವುಗಳನ್ನ ಕೊಳ್ಳುತ್ತಿದ್ದೆ. ಜೀವನ ಶೈಲಿ ನಿಧಾನವಾಗಿ ಉತ್ತಮಗೊಳ್ಳುತ್ತಿತ್ತು. ನನಗೆ ಭಾರಿ ಸಂಭ್ರಮ. ಮನೆಯಲ್ಲಿ ಸ್ಥಾನ ಮಾನ ಮೇಲಕ್ಕೆರಿತ್ತು. ನನ್ನ ಹಿಂದಿನ ಇಬ್ಬರು ತಂಗಿಯರು ಮತ್ತು ತಮ್ಮ ಡಿಗ್ರಿಯ ವಿವಿಧ ಹಂತಗಳಲ್ಲಿ ಓದುತ್ತಿದ್ದರು. ನನ್ನ ತಾಯಿಯ ಮಕ್ಕಳು ಚೆನ್ನಾಗಿ ಓದಬೇಕೆಂಬ ಕನಸು ನನಸಾಗುತ್ತಿತ್ತು.

ನನ್ನ ಹಳೆಯ ಗೆಳತಿಯರಲ್ಲಿ ಈಗ ಒಬ್ಬಳು ಮಾತ್ರ ಉಳಿದುಕೊಂಡಿದ್ದಳು. ಅವಿವಾಹಿತ ಅಣ್ಣನೊಂದಿಗೆ ಇದ್ದು ಓದುತಿದ್ದ ಆಕೆಯ ಮನೆಗೆ ನಾನು ಅವಳು ಡಿಗ್ರಿ ನಂತರ ವಿದ್ಯಾಭ್ಯಾಸ ನಿಲ್ಲಿಸಿದ್ದರೂ ನನಗೆ ಬೇಜರಾದಾಗ ಹೋಗುತ್ತಿದ್ದೆ. ಕಾರಣ ಅವರ ಅಣ್ಣ ಜ್ಞಾನಿ, ಸಂಭಾಷಣ ಚತುರ. ಅಲ್ಲಿ ಹರಟೆ ಹೊಡೆಯುವುದು ನನಗೆ ಪ್ರಿಯವಾಗಿತ್ತು. ಆಕೆಗೆ ನನ್ನ ವಯಸ್ಸಿನ ತಮ್ಮನೊಬ್ಬನಿದ್ದ. ಜಾಣ, ಧೈರ್ಯವಂತ, ಆದರೆ ಬೇಜವಾಬ್ದಾರಿ ಮನುಷ್ಯ. ನಾನು SSLC ಯಲ್ಲಿಇದ್ದಾಗ ಒಮ್ಮೆ ಭೆಟ್ಟಿಯಾಗಿದ್ದೆ. ಆಗ ತಾನೆ ಒಂದು ರೋಚಕವಾದ ಕ್ರಿಕೆಟ್ಟೆಸ್ಟ್ಮ್ಯಾಚ್ಮುಗಿದಿತ್ತು. ಈ ಹುಡುಗ ಆಮ್ಯಾಚ್ಬಗ್ಗೆ ಒಂದು ಪ್ರಶ್ನೆ ಕೇಳಿದ. ನನಗೋ ಕ್ರಿಕೆಟ್ಬಗ್ಗೆ100% ಅಜ್ಞಾನ. ತೋರಿಸಿಕೊಬಾರದಲ್ಲ. ಬಾಯಿಗೆ ಬಂದದನ್ನ ಹೇಳಿಬಿಟ್ಟೆ. ಇದು ನಡೆದಿದ್ದು1961 ರಲ್ಲಿ. ಈಗ 1970 ರಲ್ಲಿ ನಾನು Ph.D. ಮಾಡುತ್ತಿದ್ದೆ. ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆಯೂ ಪ್ರೌಢವಾಗಿ, ನಿರರ್ಗಳವಾಗಿ ಮಾತಾಡುತ್ತಿದ್ದೆ. ಇದಕಿಂತ ಆಶ್ಚರ್ಯವೆಂದರೆ ಅಂದಿನ ಬೇಜಾವಾಬ್ದಾರಿ ತುಂಟ ಹುಡುಗ ಈಗ ಭಾರತೀಯ ಸೇನೆಯಲ್ಲಿಅಧಿಕಾರಿ: ಸೆಕೆಂಡ್ಲೆಫ್ಟಿನೆಂಟ್. ಎರಡು ಕಂಬಳಿ ಹುಳುಗಳು ಸುಂದರ ಚಿಟ್ಟೆಗಳಾಗಿದ್ದವು.

ಮನೆಯವರ ಬೈಗಳು, ತಿರಸ್ಕಾರಗಳನ್ನು ತಡೆಯಲಾರದೇ ಆತ ಮೊದಲು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ಗೆ ಸೇರಿ, ತನ್ನ ಪರಿಶ್ರಮ, ಶ್ರದ್ದೆ, ಹಠಗಳಿಂದ ಮುಂದೆ ಮದ್ರಾಸಿನಲ್ಲಿದ್ದ Short Service Commisionಗೆ ಡೆಪ್ಯೂಟೇಷನ್ ಪಡೆದು, ಅದರಲ್ಲಿ ಉತ್ತಿರ್ಣ್ನಾಗಿ ಈಗ ಸೇನೆಯಲ್ಲಿ ಅಧಿಕಾರಿಯಾಗಿದ್ದ. ನಮ್ಮಿಬ್ಬರಿಗೂ ಒಂಬತ್ತು ವರ್ಷಗಳ ಹಿಂದೇ ಕ್ರಿಕೆಟ್ ಬಗ್ಗೆ ನಡೆದ ಸಂಭಾಷಣೆ ಜ್ಞಾಪಕವಿತ್ತು. ಅದನ್ನು ನೆನೆಸಿಕೊಂಡು ಇಬ್ಬರೂ ಮನಸಾರೆ ನಕ್ಕೆವು. ಮಾತಾಡ್ತಾ ಮಾತಾಡ್ತಾ ನಮ್ಮಿಬ್ಬರ ವಿಚಾರರಗಳಲ್ಲಿ, ಆಲೋಚನೆಯಲ್ಲಿ, ಇಷ್ಟಾನಿಷ್ಟಗಳಲ್ಲಿ ತುಂಬಾ ಸಾಮ್ಯವಿರುವುದು ಅರಿವಾಯಿತು.

ಎಲ್ಲಾಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಪುಸ್ತಕಗಳ ಮೇಲೆ ನಮಗಿದ್ದ ವ್ಯಾಮೋಹ. ಗಂಟೆಗಟ್ಟಲೆ ನಾವು ಓದಿದ ಪುಸ್ತಕಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ನನಗೆ ಇಸ್ರೇಲ್ ದೇಶ ಜನಿಸಿದಾಗ ಅದಕ್ಕಾಗಿ ತ್ಯಾಗ, ಶ್ರಮ ಪಟ್ಟ ಯಾಹೂದಿ ಜನಾಂಗದ ಬವಣೆಯನ್ನು ಮನಮುಟ್ಟುವಂತೆ ಚಿತ್ರಿಸಿದ EXODUS ಅನ್ನೋ ಪುಸ್ತಕ ಭಾರಿ ಇಂಪ್ರೆಸ್ ಮಾಡಿತ್ತು. ಅದು ಆತನದೂ ಮೆಚ್ಚಿನ ಕಾದಂಬರಿ. ಜೊತೆಗೆ ಒಬ್ಬ ಹೆಣ್ಣಾಗಿ ಆಗಿನ ಕಾಲದಲ್ಲಿ EXODUS ಮೇಚ್ಚಬೇಕಾದರೆ ನಾನು ಸಾಧಾರಣ ಹುಡುಗಿಯಲ್ಲ ಅನ್ನೋದಂತು ದಿಟ. ಆತ ಈ ಪುಸ್ತಕಕ್ಕಿಂತ ಸ್ವಲ್ಪ ಪ್ರೌಢವಾದ TANKS OF TAMMUZ ಪುಸ್ತಕ ಕೊಟ್ಟು ಓದಲು ಹೇಳಿದ. ಅದು ಇಸ್ರೇಲ್​ನ್ನು, ಅದು ಹುಟ್ಟಿದ ಕೆಲವೇ ಸಮಯದಲ್ಲಿ ಅದನ್ನು ನಾಶ ಮಾಡಲು ಅರಬ್ ದೇಶಗಳೆಲ್ಲ ಒಂದಾಗಿ ಆಕ್ರಮಣ ಮಾಡಿ ಏಳೇ ದಿನದಲ್ಲಿ ಹೀನಾಯವಾಗಿ ಸೋಲಿಸಿದ ನೈಜ ಕಥೆ. ಹೀಗೆ ನಮ್ಮ ಗೆಳೆತನ ಒಂದು ತಿಂಗಳ ದೈನಂದಿಕ ಭೇಟಿ, ಮಾತುಕತೆಗಳಲ್ಲಿ ಕಳೆಯಿತು.

ತಿಂಗಳ ರಜೆಯ ನಂತರ ಆತ ಹೊರಟುಹೋದ. ಆದರೆ ಮುಂದಿನ ವರ್ಷದ ರಜೆ ಬರುವವರೆಗೆ ನನಗೆ ಪತ್ರಗಳ ಸುರಿಮಳೆ. ಪ್ರೇಮಪತ್ರಗಳಲ್ಲ. ಆದರೆ ಆತ್ಮೀಯವಾದ, ಕಷ್ಟಸುಖಗಳನ್ನು ಹಂಚಿಕೊಳ್ಳುತಿದ್ದ ಪತ್ರಗಳು. ನಾನು ಅಷ್ಟೇ ಶ್ರದ್ದೆಯಿಂದ ಉತ್ತರಿಸುತ್ತಿದ್ದೆ. ಮರುವರ್ಷ ರಜೆ ಬಂದಾಗ ಅದೇ ದಿನ ನಿತ್ಯದ ಭೇಟಿ, ಮಾತು, ಮಾತು ಒಂದು ತಿಂಗಳವರೆಗೆ. ನಾವೇಂದೂ ಇಬ್ಬರೇ ಓಡಾಡಲಿಲ್ಲ, ಸಿನಿಮಾಕ್ಕೆ, ಹೋಟೆಲಿಗೆ ಹೋಗಲಿಲ್ಲ. ಆದರೆ ಹೇಳಲಾರದ ಆತ್ಮೀಯತೆ ಇತ್ತು. Attachment ಅಂತಾರಲ್ಲ ಅದು ಖಂಡಿತ ಇತ್ತು. ಈಗ ಅದನ್ನು ಬಹುಶಃ soulmate ಅಂತಾರೆ. ಆದರೆ ನನ್ನ ದುರದೃಷ್ಟ. ಈ ಸಲ ವಾಪಸ್ಸು ಹೋದ ಕೆಲವೇ ದಿನಗಳಲ್ಲಿ ಭಾರತೀಯ ಸೇನೆ ಅಂದಿನ ಪೂರ್ವ ಪಾಕಿಸ್ತಾನಕ್ಕೆ ನುಗ್ಗಿ, ಅಲ್ಲಿದ್ದ ಬಂಗಾಳಿಗಳ ಹೋರಾಟಕ್ಕೆ ಬೆಂಬಲ ಕೊಟ್ಟು ನ ಭೂತೋ ನ ಭವಿಸ್ಯತಿ ಅನ್ನೋ ರೀತಿಯಲ್ಲಿ ಪಾಕಿ ಸೈನ್ಯವನ್ನು ಸೋಲಿಸಿತ್ತು.

ನನಗೆ ಬರುತ್ತಿದ್ದ ಪತ್ರಗಳ ಪ್ರವಾಹ ಇದ್ದಕ್ಕಿದ್ದಂತೆ ನಿಂತುಹೋಯಿತು. ವೃತ್ತ ಪತ್ರಿಕೆಗಳಲ್ಲಿ ಯುದ್ಧದ ವಿವರಗಳನ್ನು ಓದುತ್ತಿದ್ದರೆ ನನ್ನ ಗೆಳೆಯನಿಗೆ ಏನಾಯಿತೋ ಎಂಬ ಕಳವಳ. ಯುದ್ಧ ಮುಗಿದ ನಾಲ್ಕಾರು ತಿಂಗಳಗಳು ಆದ ಮೇಲೆ ಆತನಿಂದ ನನಗೊಂದು ಪೋಸ್ಟ್ಕಾರ್ಡ್ಬಂತು. ತಾನು ಕ್ಷೆಮವಾಗಿದ್ದೇನೆಂದೂ, ಏನೂ ಕಳವಳ ಪಡುವ ಅಗತ್ಯವಿಲ್ಲವೆಂದೂ ಸಂತೈಸುವ ಎಳೆಂಟು ಸಾಲಿನ ಚುಟುಕು ಪತ್ರ. ನನಗೆ ಒಂದು ಕಡೆ ನಿರಾಳ. ಇನ್ನೊಂದು ಕಡೆ ಅನುಮಾನ, ಇಷ್ಟು ಚಿಕ್ಕ ಪತ್ರ ಆತನಿರಲಾರದು ಅಂಥ. ನನಗೊಬ್ಬultra modern Ph. D. ಮಾಡುತ್ತಿದ್ದ ಗೆಳೆತಿಯಿದ್ದಳು. ನನ್ನ ಜೂನಿಯರ್. ಅವಳಿಗೆ ಸೇನೆಯಲ್ಲಿದ್ದ ಅಧಿಕಾರಿಯೊಬ್ಬboy friend ಇದ್ದ. ನಾನು ಅವಳ ಸಹಾಯದಿಂದ ಬೆಂಗಳೂರಿನ Area Sub Commandನ ಮೇಲಧಿಕಾರಿಯನ್ನು ಭೆಟ್ಟಿಯಾಗಿ ಪತ್ರವನ್ನು ತೋರಿಸಿ ನನ್ನಅನುಮಾನ ವ್ಯಕ್ತಪಡಿಸಿದೆ. ಅವರು ಪತ್ರದ ಮೇಲಿದ್ದGH ಅಂದರೆ ಜನರಲ್ಹಾಸ್ಪಿಟಲೆಂದು, ಅದರ ಪಕ್ಕದಲ್ಲಿದ್ದ ಅಂಕೆ ಕಲ್ಕತ್ತಾದ ಒಂದು ಆಸ್ಪತ್ರೆಯನ್ನು ಸೂಚಿಸುತ್ತೆಂದು ಹೇಳಿದರು. ಸಮಾಧಾನದ ನಿಟ್ಟುಸಿರು ಬಿಟ್ಟು ನಾನು ಆಪತ್ರಕ್ಕೆ ಉತ್ತರ ಬರೆದೆ. ಆದರೆ ಹಾಗೆ ಬರೆಯಬಾರದಂತೆ. ಅದು ಸೈನ್ಯದ ನಡಾವಳಿ ಯಉಲ್ಲಂಘನೆ.

ಆಸ್ಪತ್ತ್ರಯಿಂದು ಬಿಡುಗಡೆಯಾಗಿ ರಜೆಯ ಮೇಲೆ ಈ ಸಲ ಬಂದಾಗ ಯುದ್ಧದಲ್ಲಿ ಮುರಿದ ಕಾಲು ಇನ್ನೂ ವಾಸಿಯಾಗದೆ walking stick ನ ಸಹಾಯದಿಂದ ನಡೆದುಬಂಧ ನನ್ನ ಗೆಳೆಯ. ಜೊತೆಗೆ ಭಡ್ತಿ ಸಿಕ್ಕಿ ಈಗ ಕ್ಯಾಪ್ಟನ್. ಆದರೆ ಮೇಲ್ನೋಟಕ್ಕೆ ಏನೂ ಆಗಿಲ್ಲದಂತೆ ನಡೆದುಕೊಂಡರೂ ಯುದ್ಧದ ಭೀಕರತೆ, ಸಾವು ನೋವುಗಳು ಆತನ ಆತ್ಮವನ್ನು ಘಾಸಿಗೊಳಿಸಿದ್ದವು. ಒಂದು ತಿಂಗಳ ರಜೆ, ಒಡನಾಟ, ಮಾತುಕತೆ ನಂತರ ಆತ ಮರಳಿ ತನ್ನ regimentಗೆ ಹೊರಟುಹೋದ. ನಂತರ ಕೆಲವು ಪತ್ರಗಳು ಬಂದವು. ಆದರೆ ಅವುಗಳಲ್ಲಿ ಮೊದಲಿನ ಆತ್ಮೀಯತೆ ಇರಲಿಲ್ಲ. ಯಾಕೆ ಹೀಗೆ ಎಂದು ಕೇಳಿದಾಗ ನನ್ನನ್ನು ಇನ್ನು ಮೇಲೆ ಮರೆತುಬಿಡು ಅನ್ನೋ ಉತ್ತರ ಬಂತು. ನನಗೆ ಅಪಾರವಾದ ಕೋಪ, ದುಃಖ ಎರಡೂ ಬಂದವು. ನನ್ನ ಪ್ರಶೆಗಳಿಗೆ ಆಗ ಉತ್ತರ ಸಿಗಲಿಲ್ಲ.

ಆದರೆ ಆಮೇಲಾಮೇಲೆ ಹಾಲಿವುಡ್​ನ ಕೆಲವು ಯುದ್ಧ ಚಿತ್ರಗಳಲ್ಲಿ ವಿಯೇಟ್ನಾಮ್ ಯುದ್ಧದಿಂದ ಬದುಕುಳಿದು ಬಂದ ಬಹು ಪಾಲು ಸೈನಿಕರು ಯುದ್ಧದ ಕರಾಳತೆಯನ್ನು ಮರೆಯಲಾರದೇ ಹುಚ್ಚರಾದ, ಅದರಿಂದ ಅವರ ಸಾಂಸಾರಿಕ ಬಾಳೇ ಹಾಳಾಗಿ, ಡೈವೋರ್ಸ್ಗಳಲ್ಲಿ ಕೋನೆಯಾಗಿದ್ದನ್ನು ನೋಡಿ ನನಗೆ ಆತನ ವರ್ತನೆ ಸ್ವಲ್ಪ ಅರ್ಥವಾಯಿತು. ಆದರೆ 1972ರಲ್ಲಿ ನನಗಾದ ನೋವನ್ನು ಮರೆಯಲು ನಾನು ಬೆಂಗಳೂರು ಬಿಟ್ಟು ಶಿರಾ ಪಟ್ಟಣಕ್ಕೆ ಹೊರಟು ಹೋಗಿದ್ದೆ. ನನ್ನ ದುರಾದೃಷ್ಟಕ್ಕೆ ನಾನು ಶ್ರೀಧರ ಅವರನ್ನು ಮದುವೆಯಾದ ಕೆಲವೇ ತಿಂಗಳಿಗೆ ಆತ ನನ್ನ ವಿಳಾಸ ಹುಡುಕಿಕೊಂಡು ಹೆಬ್ಬಾಳದ ಕೃಷಿ ಕಾಲೇಜಿಗೆ ಬಂದ. ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದ ವಿಧಿಯಾಟ.