H.R.Leelavathi Birthday : ರೇಡಿಯೋದಲ್ಲಿ ಹಾಡುತ್ತಿದ್ದ ಇವರನ್ನು ಭೇಟಿಯಾಗುತ್ತೇನೆ ಎಂದುಕೊಂಡಿರಲಿಲ್ಲ, ಧನ್ಯವಾದ ಫೇಸ್​ಬುಕ್!

|

Updated on: Feb 08, 2022 | 12:42 PM

Radio and Music : ‘ಈಗಿನದು ಬಯಸಿದ್ದೆಲ್ಲವೂ ಬೇಕಾದಾಗ ಸುಲಭವಾಗಿ ಸಿಗುವ ಕಾಲ. ಆದರೆ ಆಗ ಹಾಗಲ್ಲ. ನಾನು ಅಕ್ಕ ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಭದ್ರಾವತಿ ಆಕಾಶವಾಣಿಯಿಂದ ಪ್ರಸಾರವಾಗುವ ಭಾವಗೀತೆಗಳ ಕೇಳಿ ಕಲಿಯಲು ಪೆನ್ನು ಪುಸ್ತಕ ಸಮೇತ ರೇಡಿಯೋ ಮುಂದೆ ಕುಳಿತುಕೊಳ್ಳುತ್ತಿದ್ದೆವು.’ ಸಮುದ್ಯತಾ ವೆಂಕಟರಾಮು

H.R.Leelavathi Birthday : ರೇಡಿಯೋದಲ್ಲಿ ಹಾಡುತ್ತಿದ್ದ ಇವರನ್ನು ಭೇಟಿಯಾಗುತ್ತೇನೆ ಎಂದುಕೊಂಡಿರಲಿಲ್ಲ, ಧನ್ಯವಾದ ಫೇಸ್​ಬುಕ್!
ಹಿರಿಯ ಸುಗಮ ಸಂಗೀತ ಗಾಯಕಿ ಎಚ್. ಆರ್. ಲೀಲಾವತಿ ಅವರೊಂದಿಗೆ ಗಮಕಿ ಸಮುದ್ಯತಾ ವೆಂಕಟರಾಮು
Follow us on

ಎಚ್. ಆರ್. ಲೀಲಾವತಿ | H.R. Leelavathi: ನನ್ನ ಅಕ್ಕಂದಿರು ರೇಡಿಯೋ ಕೇಳುತ್ತ ಹಾಡುಗಳನ್ನು ಬರೆದುಕೊಂಡು ಕಲಿಯುವ ಕಾಲವದು. ಬಹಳ ಚಿಕ್ಕವಳಾದ ನನಗೂ ಅದೇ ಅಭ್ಯಾಸವಾಯಿತು. ಈಗ ಬಯಸಿದ್ದೆಲ್ಲವೂ ಬೇಕಾದಾಗ ಸುಲಭವಾಗಿ ಸಿಗುವ ಕಾಲ. ಆದರೆ ಆಗ ಹಾಗಲ್ಲ. ನಮಗೆ ಬೇಕೆನಿಸಿದಾಗ ಹಾಡುಗಳು ಕೇಳಲು ಸಿಗುತ್ತಿರಲಿಲ್ಲ. ಆ ಸಮಯಕ್ಕಾಗಿ, ಅವಕಾಶಕ್ಕಾಗಿ ಸರಿಯಾಗಿ ಕಾಯುತ್ತ ಕುಳಿತಿರಬೇಕು. ಮಧ್ಯಾಹ್ನ ಒಂದುಗಂಟೆಗೆ ಸರಿಯಾಗಿ ಭದ್ರಾವತಿ ನಿಲಯದಿಂದ ಪ್ರಸಾರವಾಗುವ ಭಾವಗೀತೆಗಳ ಕೇಳಲು ಪೆನ್ನು ಪುಸ್ತಕ ತಯಾರಾಗಿರಿಸಿಕೊಂಡು ಕುಳಿತು ಹೊಸ ಹಾಡಾದರೆ ಬರೆದುಕೊಳ್ಳುತ್ತಿದ್ದೆವು. ಈ ರೀತಿ ಲೀಲಮ್ಮನವರ ಮೂಲಕ ಪದ್ಮಚರಣರ ಸಂಗೀತ ಸಂಯೋಜನೆಯ ಮೂಲಕ ಅನೇಕ ಕವಿಗಳ ಕವಿತೆಗಳ ಪರಿಚಯವಾಯಿತು. ಇದೂ  ಒಂದು ರೀತಿಯಲ್ಲಿ ಕಾವ್ಯ ಪ್ರಪಂಚಕ್ಕೆ ಪ್ರವೇಶವೇ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅನೇಕರನ್ನು ಸುಗಮಸಂಗೀತ ಕ್ಷೇತ್ರಕ್ಕೆ ಅಣಿಗೊಳಿಸಿದ ಕೀರ್ತಿ ಇವರದು.

ಸಮುದ್ಯತಾ ವೆಂಕಟರಾಮು, ಗಮಕಿ, ಶೇಡ್ತಿಕೆರೆ, ಸಾಗರ

*

ಬಾಲ್ಯದಲ್ಲಿ ಭಾವಗೀತೆಗಳೆಂದರೆ ಉಡುಗಣ ವೇಷ್ಠಿತ, ಹೌದೇನೇ ಉಮಾ, ತೇನವಿನಾ ಹೀಗೇ ಹಲವಾರು ಹಾಡುಗಳು. ಅದರ ಅರ್ಥ ಸರಿಯಾಗಿ ತಿಳಿಯದಿದ್ದ ವಯಸ್ಸಿನಲ್ಲಿ ಹಾಡಿದವರ ಭಾವ, ಗಾನಮಾಧುರ್ಯಕ್ಕೆ ಮನಸೋತು ನಾವೂ ಹಾಡಬೇಕೆಂಬ ಹಂಬಲ ಹೆಚ್ಚುತ್ತಿತ್ತು. ರೇಡಿಯೋ ಮುಂದೆ ಕುಳಿತು ಭಾವಗೀತೆಗಳು, ಹಾಡುತ್ತಿರುವವರು ಎಚ್. ಆರ್. ಲೀಲಾವತಿ ಎಂದರೆ ಅದಷ್ಟೋ ಜನರು ವಿಶೇಷವಾಗಿ ಯುವತಿಯರು ಮಹಿಳೆಯರು ಪ್ರೀತಿ ಭಕ್ತಿಯಿಂದ ಕೇಳುತ್ತಿದ್ದ ಕಾಲವದು. ಹೀಗೆ ಎಪ್ಪತ್ತು ಎಂಭತ್ತರ ದಶಕದ ಆಕಾಶವಾಣಿ ಶ್ರೋತೃಗಳಿಗೆಲ್ಲ ಚಿರಪರಿಚಿತರಾದವರು ನಮ್ಮ ಕನ್ನಡನಾಡಿನ ಹೆಮ್ಮೆಯ ಕಲಾವಿದೆ ಲೀಲಾವತಿಯವರು.
ಗಾನದ ವಿಮಾನದಲ್ಲಿ ನಮ್ಮನ್ನೆಲ್ಲ ಬೇರೆಯದೇ ಒಂದು ಲೋಕಕ್ಕೆ ಕರೆದೊಯ್ಯುತ್ತಿದ್ದ ಲೀಲಮ್ಮನಿಗೆ ವಯಸ್ಸು ದೈಹಿಕವಾಗಿ ಕಾಡಿರಬಹುದೇ ಹೊರತು ಮಾನಸಿಕವಾಗಲ್ಲ. ಪರಿಪಕ್ವತೆ ಪ್ರೌಢತೆ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿವೆ.

ಇದನ್ನೂ ಓದಿ : National Broadcasting Day 2021 : ‘ಕಾರಂತ. ಬರೆದಿದ್ದೇ ಕನ್ನಡ’ ಆ ದಿನ ಆಕಾಶವಾಣಿಯಲ್ಲಿ

ಕಾಲ ಸರಿದು ಹೋದಂತೆ ನನ್ನ ನೆನಪಿನಿಂದ ಇವರು ಮಸುಕಗಾಗದೇ ಇರುವಂತೆ ಸಹಾಯ ಮಾಡಿದ್ದು ಫೇಸ್‌ಬುಕ್‌. ನಾನು ಮುಖತಃ ನೋಡಿರದ ಲೀಲಾವತಿಯವರು ಎರಡು ವರ್ಷಗಳ ಹಿಂದೆ ಪರಿಚಯವಾಗಿ ಕೆಲವೇ ದಿನಗಳಲ್ಲಿ ಆತ್ಮೀಯರಾಗಿಬಿಟ್ಟರು. ಇವರು ಪ್ರತಿನಿತ್ಯ ಬರೆಯುತ್ತಿದ್ದ ನಾಲ್ಕು ಸಾಲುಗಳಿಗೆ ಮರುಳಾಗಿ ನಾನೂ ಪುಟ್ಟ ಕವನಗಳನ್ನು ಓದಲು ಕಾಯುತ್ತಿದ್ದೆ. ಕ್ರಮೇಣ ಆ ಕವನಕ್ಕೆ ಪ್ರತಿಕ್ರಿಯೆಯಾಗಿ ಕವನವನ್ನು ಬರೆಯಲಾರಂಭಿಸಿದೆ.  ಪ್ರತಿದಿನವೂ ಇದೊಂದು ಸಹೃದಯರ ಕವಿತಾ ಸಂವಾದವೇ ಆಗಿಬಿಡುತ್ತಿತ್ತು. ನನ್ನಂತೆ ಅನೇಕರು ಹೀಗೆ ಅವರ ಫೇಸ್​ಬುಕ್​ ವಾಲ್​ನಲ್ಲಿ ಒಳಗೊಳ್ಳುತ್ತ ಬಂದಿದ್ದಾರೆ.

ಸುತ್ತಲೂ

ಯಾರೂ

ಇರದುದ ನೋಡಿ

ನಿಶಾದೇವಿ

ಸ್ನಾನವ ಗೈಯ್ಯಲು

ಇಳಿಯಲು ಕೊಳದಲಿ

ಚಂದಿರ

ಮುಸಿಮುಸಿ ನಗುತಿಹನು.

ಲೀಲಮ್ಮ ಬರೆದ ಈ ಕವನದಿಂದ ಸ್ಫೂರ್ತಿಗೊಂಡು ಬರೆದ ನನ್ನ ಕವನ ಈ ಕೆಳಗಿನದು.

ನಿಶೆಯೇನು ಅರಿಯದವಳೇ

ಚಂದ್ರಮನ ಕಳ್ಳನೋಟ

ಬಯಸುವಳಾಕೆ ತನ್ನ ನಲ್ಲನ ತುಂಟಾಟ

ಏನೂ ಅರಿಯದವಳಂತೆ

ಭಾವಿಗಿಳಿದಿಹಳು ಅಲ್ಲಿಂದಲೇ ಅರಸುತಿಹಳು

ಬಯಸುತಿಹಳು

ಅವ ತನ್ನ ನೋಡಲೆಂದು

ಶೀತಲವೂ ಬೆಚ್ಚಗಾದಂತೆ ನಿಶೆಗೆ

ಪ್ರಕೃತಿಯ ಅಂಶಗಳು, ಕೃಷ್ಣ ರಾಧೆ ವಿರಹ ಆನಂದ ಅಲ್ಲದೇ ಅನೇಕ ಸರಳ ಸಂಗತಿಗಳನ್ನಿಟ್ಟು ಇವರು ಬರೆಯುವ ನಾಲ್ಕಾರು ಸಾಲುಗಳು ಉತ್ಸಾಹ ಮೂಡಿಸುತ್ತವೆ. ಕೆಲವುದಿನಗಳ ಹಿಂದೆ ಸಿದ್ದಾಪುರಕ್ಕೆ ‘ಹರಿವ ನದಿ’-  ಮೀನಾಕ್ಷಿ ಭಟ್ಟರ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಇವರು ಆಗಮಿಸಿದ್ದರು. ನಾವು ಪರಸ್ಪರ ಭೇಟಿಯಾಗುವ ಸದವಕಾಶ ಆಗಲೇ ದೊರೆಯಿತು. ಸರಳತೆ ಸಜ್ಜನಿಕೆಗಳೊಂದಿಗೆ ಅವರ ಪಾಂಡಿತ್ಯದ ಅರಿವೂ ಆಯಿತು. ಗಾಯನದೊಂದಿಗೆ ಬರೆವಣಿಗೆಯನ್ನೂ ರೂಢಿಸಿಕೊಂಡಿರುವ ಇವರ ಮೊದಲ ಕಥಾಸಂಕಲನವೊಂದು ಹೆಗ್ಗೋಡಿನ ಅಕ್ಷರ ಪ್ರಕಾಶನದಿಂದ ಪ್ರಕಟಗೊಂಡಿದೆ. ಹುಡುಕಿ ಓದಲು ಕಾತುರಳಾಗಿದ್ದೇನೆ.

ಕಲೆ ಎಲ್ಲವನ್ನು ಮೀರಿದ್ದು. ಇಲ್ಲಿ ಯಾವ ತಾರತಮ್ಯ. ಹಣದ ವ್ಯಾಮೋಹ, ಸಣ್ಣತನ ಯಾವುದೂ ಸಲ್ಲದು. ಏನಿದ್ದರೂ ಶ್ರದ್ಧೆ, ಪರಿಶ್ರಮವೇ ಇಲ್ಲಿ ಗೆಲ್ಲುವುದು. ಈ ಮನೋಭಾವದೊಂದಿಗೆ ಇವರೊಳಗೊಬ್ಬ ದಿಟ್ಟ ಸ್ವಾವಲಂಬಿ ಮಹಿಳೆಯೂ ಇದ್ದಾರೆ. ಪ್ರಸ್ತುತ ಮೈಸೂರಿನಲ್ಲಿರುವ ಇವರ ಹಾಡುಗಳೆಲ್ಲವೂ ಇಂದು ಜಾಲತಾಣದಲ್ಲಿ ಲಭ್ಯ. ಎಲ್ಲರನ್ನೂ ಪ್ರೀತಿಯಿಂದ ನೋಡುವ ಲೀಲಾವತಿ ಎಂಬ ಸುಗಮಸಂಗೀತ, ರವೀಂದ್ರಸಂಗೀತ ಭಕ್ತಿ ಸಂಗೀತವನ್ನೆಲ್ಲ ಹಾಡಿ ಹೆಸರಾದ ಈ ಆಪ್ತಜೀವಕ್ಕೀಗ 88. ಶುಭಾಶಯಗಳು.

*

ನಿರೀಕ್ಷಿಸಿ : ಹಿರಿಯ ಸುಗಮ ಸಂಗೀತ ಕಲಾವಿದೆ ಎಚ್. ಆರ್. ಲೀಲಾವತಿಯವರೇ ಬರೆದ ಬರಹ ; ‘ವಯಸ್ಸು ನನ್ನದು ಹದಿನಾರು, ನನ್ನ ದೇಹದ್ದು? ಎಂಭತ್ತೆಂಟು’

ಇದನ್ನೂ ಓದಿ : Bhargavi Narayan Birthday : Bhargavi Narayan Birthday : ಕಬ್ಬಕ್ಕಿಗಳಂತೆ ಘಮಘಮಿಸುವ ಬಿಸಿಬಿಸಿ ಬಾದಾಮಿ ಹಾಲನ್ನು ಆನಂದದಿಂದ ಕುಡಿದೆವು!