S.V. Parameshwar Bhat Birth Anniversary: ಬಡವ ತಬ್ಬಲಿ ಎಂದು ಚಡಪಡಿಸದಿಹೆ, ಕೊಡುವಾತ ಬಿಡುವಾತ ನನ್ನೊಳಗಿಹನು

Poetry : ‘ಇಲ್ಲಿ ಬಸವೇಶ್ವರ, ಗಾಂಧಿಯವರನ್ನು ಕುರಿತ ಕವಿತೆಗಳಿದ್ದಂತೆ ‘ಅಪೋಲೋ ಹನ್ನೊಂದು’ ಎನ್ನುವ ವೈಜ್ಞಾನಿಕ ಬೆಳವಣಿಗೆಯನ್ನು ಕುರಿತ ಕವಿತೆ ಇದೆ. ಚಂದ್ರನ ಮೇಲೆ ಮಾನವ ಪಾದರ್ಪಣದ ಘಟನೆಯನ್ನು ವಿವರಿಸುವ ಇಲ್ಲಿ ವರ್ಣನೆಗೇ ಮಹತ್ವ ದೊರಕಿದೆ.’ ಎನ್. ಎಸ್. ಶ್ರೀಧರಮೂರ್ತಿ

S.V. Parameshwar Bhat Birth Anniversary: ಬಡವ ತಬ್ಬಲಿ ಎಂದು ಚಡಪಡಿಸದಿಹೆ, ಕೊಡುವಾತ ಬಿಡುವಾತ ನನ್ನೊಳಗಿಹನು
ಕವಿ ಎಸ್. ವಿ. ಪರಮೇಶ್ವರ ಭಟ್
Follow us
ಶ್ರೀದೇವಿ ಕಳಸದ
|

Updated on: Feb 08, 2022 | 2:44 PM

ಎಸ್. ವಿ. ಪರಮೇಶ್ವರ ಭಟ್ | S.V. Parameshwar Bhat: ‘ಅಂಚೆಯ ಪೆಟ್ಟಿಗೆ’ ಹತ್ತೊಂಬತ್ತು ವರ್ಷಗಳ ದೀರ್ಘ ಅಂತರದ ನಂತರ ಬಂದ ಕವನ ಸಂಕಲನ. ಇಲ್ಲಿ ಕವಿಯ ಧೋರಣೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ಗಮನಿಸಬಹುದು. ಪ್ರಕೃತಿ ವರ್ಣನೆಗಿಂತಲೂ ಇಲ್ಲಿ ಸಮಾಜದ ಕುರಿತು ಕವಿ ಆಸಕ್ತರಾಗಿದ್ದಾರೆ. ವ್ಯಕ್ತಿಚಿತ್ರಣಗಳು ಇಲ್ಲಿ ಹೆಚ್ಚಾಗಿ ಕಾಣುತ್ತವೆ. ಮಹಾತ್ಮ ಗಾಂಧಿ, ವೇದವ್ಯಾಸರು, ವೆಂಕಣ್ಣಯ್ಯನವರು, ಬಿ.ಎಂ.ಶ್ರೀಯವರು ಹೀಗೆ ಹಲವು ವ್ಯಕ್ತಿಚಿತ್ರಗಳಿವೆ. ಇಲ್ಲಿ ಕೂಡ ಕವಿ ವರ್ಣನೆಯತ್ತಲೇ ಹೆಚ್ಚು ಆಸಕ್ತರು. ದೀಪಾವಳಿಯ ಹಿನ್ನೆಲೆಯಲ್ಲಿ ರಚಿತವಾಗಿರುವ ‘ಹಚ್ಚು ದೀಪ’ ಅವರದೇ ‘ದೀಪ ಹಚ್ಚ’ ಕವಿತೆಯ ಪುನರಾವರ್ತನೆಯಂತಿದ್ದು ಮೊದಲ ಕವಿತೆಯಷ್ಟು ಬಿಗಿ ಭಾವದಲ್ಲಾಗಲಿ, ಬಂಧದಲ್ಲಾಗಲಿ ಉಳಿದುಕೊಂಡಿಲ್ಲ. ಹೊಸ ಸಾಧ್ಯತೆಯನ್ನು ಅಳವಡಿಸಿಕೊಳ್ಳಲು ಕವಿ ಮಾಡಿದ ಪ್ರಯತ್ನದಂತೆ ಕಾಣುವ ‘ಅಂಚೆಪೆಟ್ಟಿಗೆ’ ಕವಿತೆ ರೂಪಕವಾಗಿ ಆರಂಭದಲ್ಲಿ ಕುತೂಹಲ ಹುಟ್ಟಿಸಿದರೂ ಒಂದೇ ಮಾದರಿಯ ಗ್ರಹಿಕೆಗಳು ಮುಂದುವರೆಯುತ್ತಾ ಮಹತ್ವದ ನೆಲೆಯನ್ನು ತಲುಪದೆ ಹೋಗುತ್ತದೆ. ದೀರ್ಘತೆಯೇ ಈ ಕವಿತೆಯ ಮಿತಿಯಾಗಿದೆ.

ಎನ್. ಎಸ್. ಶ್ರೀಧರ ಮೂರ್ತಿ, ಹಿರಿಯ ಪರ್ತಕರ್ತರು

(ಭಾಗ – 3 )

*

ವಾಚಾಳಿತನ ಪರಮೇಶ್ವರ ಭಟ್ಟರ ಎಲ್ಲಾ ಕವಿತೆಗಳ ಸಮಸ್ಯೆ. ಈ ಕವಿತೆಯಲ್ಲಿ ಅದು ಎದ್ದು ಕಾಣುತ್ತದೆ. ಈ ಸಂಕಲನದಲ್ಲಿ ಸಾನೆಟ್‌ಗಳೂ ಇವೆ. ಅಲ್ಲಿ ಕೂಡ ಸಾವಯವ ಬಂಧದ ಕೊರತೆ ಕಾಣುತ್ತದೆ. ಮೊದಲಿನ ಎರಡು ಸಂಕಲನದಲ್ಲಿ ಸುಲಿಲತವಾಗಿ ಭಾಷೆಯನ್ನು ಬಳಸಿದ್ದ ಕವಿ ಇಲ್ಲಿ ಸಂಸ್ಕೃತ ಭೂಯಿಷ್ಠತೆಯ ಕಡೆಗೆ ತಿರುಗಿದ್ದಾರೆ. ಈ ಬದಲಾವಣೆಗೆ ಕುವೆಂಪು ಅವರ ಕವಿತೆಗಳ ಪ್ರಭಾವವೂ ಕಾರಣವಾದಂತಿದೆ.

ಆತ್ಮ ಸಾಕ್ಷಾತ್ಕಾರದಮೃತದಾನಂದಮ

ಪಡೆದೆಯೇ? ಅದನುಳಿದ ಈ ಸಿದ್ಧಿ ಬರಿಯ ಹುಸಿ.

ಅದೆ ಋತಂ ಅದೆ ಶಿವಂ ಅದೆ ಜಗದ್ದಾರಣಂ!

ಎನ್ನುವಂತಹ ಸಾಲುಗಳನ್ನು ಇದಕ್ಕೆ ಉದಾಹರಣೆಯನ್ನಾಗಿ ನೋಡ ಬಹುದು. ಈ ಬದಲಾವಣೆ ಕವಿತೆಗಳ ಸಂವಹನಕ್ಕೆ ತೊಡಕನ್ನು ಉಂಟುಮಾಡಿದೆ. ‘ಅಂಚೆಯ ಪೆಟ್ಟಿಗೆ’ ಪ್ರಕಟವಾಗಿ ನಾಲ್ಕು ವರ್ಷಗಳ ಅಂತರದಲ್ಲಿ ಬಂದಿದ್ದು ‘ಇಂದ್ರಗೋಪ’ ಸಂಕಲನ. ಇಲ್ಲಿ ಕವಿತೆಯ ಸ್ವರೂಪದಲ್ಲಿ ಮಾತ್ರವಲ್ಲ ಗಾತ್ರದಲ್ಲಿಯೂ ಬದಲಾವಣೆ ಕಾಣಿಸಿಕೊಂಡಿದೆ. ದೀರ್ಘ ಕವಿತೆಗಳನ್ನು ಬರೆಯುತ್ತಿದ್ದ ಪರಮೇಶ್ವರ ಭಟ್ಟರು ಸಂಕ್ಷಿಪ್ತತೆಯಲ್ಲಿ ಕೂಡ ಕುಶಲತೆಯನ್ನು ತೋರ ಬಲ್ಲರು ಎನ್ನುವುದಕ್ಕೆ ಈ ಸಂಕಲನ ನಿದರ್ಶನವಾಗಿದೆ. ಇಲ್ಲಿನ ಕವಿತೆಗಳಲ್ಲಿ ವಾಚ್ಯತೆಯ ಭರಾಟೆ ತಗ್ಗಿ ಧ್ವನಿಪೂರ್ಣತೆ ಕಾಣಿಸಿಕೊಂಡಿದೆ. ಇಲ್ಲಿ ಮತ್ತೆ ಪ್ರಕೃತಿ ಕವಿತೆಗಳಿಗೆ ಮಹತ್ವ ದೊರಕಿದೆ. ಅನುಭಾವವೂ ಕೂಡ ಇಲ್ಲಿ ಹೊಸ ರೂಪವನ್ನು ಪಡೆದಿದೆ. ‘ಅನುಭಾವ’ ಕವಿತೆಯಲ್ಲಿ ನಿರೂಪಕ ಭಗವಂತನ ಸ್ವರೂಪವನ್ನು ಎಲ್ಲೆಡೆ ಹುಡುಕುತ್ತಿದ್ದಾನೆ ಕೊನೆಗೆ ಅದು ‘ಮಗುವಿನ ಮುಗುಳುನಗೆ’ಯಲ್ಲಿ ದೊರಕುತ್ತದೆ. ‘ಅತಿಥಿಗೆ’ಎನ್ನುವ ಕವಿತೆಯಲ್ಲಿ ಹಾಸ್ಯದ ನೆಲೆ ಕೂಡ ಕಾಣಿಸಿಕೊಂಡಿದೆ. ಮೊದಲ ಸಂಕಲನಗಳಗಿಂತ ಭಿನ್ನವಾದ ದಾರಿಯನ್ನು ಪರಮೇಶ್ವರ ಭಟ್ಟರು ಇಲ್ಲಿ ಹಿಡಿದಿದ್ದಾರೆ. ಆದರೆ ಇಲ್ಲಿಂದ ಮುಂದೆ ಅವರ ಕವಿತೆಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಅವರ ಈ ಧನಾತ್ಮಕ ಬದಲಾವಣೆಗಳು ಒಂದು ಖಚಿತರೂಪವನ್ನು ಪಡೆಯದೇ ಹೋದಂತೆ ಕಾಣುತ್ತದೆ.

1ನೇ ಭಾಗ: S.V. Parameshwar Bhat Birth Anniversary : ‘ಪ್ರೀತಿಯ ನಂದಾದೀಪ’ ಬೆಳಗಿದ ಎಸ್.ವಿ.ಪರಮೇಶ್ವರ ಭಟ್ಟರು

‘ಇಂದ್ರಗೋಪ’ ಪ್ರಕಟವಾದ 1970ರಲ್ಲಿಯೇ ಬಂದ ಕವನ ಸಂಕಲನ ‘ಕೃಷ್ಣಮೇಘ’ ಸಾಂಗತ್ಯ ಛಂದದಲ್ಲಿನ ಐದು ದೀರ್ಘ ಕವನಗಳಿಂದ ಕೂಡಿದ ಸಂಕಲನ ದೀರ್ಘತೆಯನ್ನು ಪರಮೇಶ್ವರ ಭಟ್ಟರು ಇಲ್ಲಿಗೆ ಪ್ರತ್ಯೇಕಿಸಿಕೊಂಡಂತೆ ಕಾಣುತ್ತದೆ. ಇಲ್ಲಿ ಬಸವೇಶ್ವರ, ಗಾಂಧಿಯವರನ್ನು ಕುರಿತ ಕವಿತೆಗಳಿದ್ದಂತೆ ‘ಅಪೋಲೋ ಹನ್ನೊಂದು’ ಎನ್ನುವ ವೈಜ್ಞಾನಿಕ ಬೆಳವಣಿಗೆಯನ್ನು ಕುರಿತ ಕವಿತೆ ಇದೆ. ಚಂದ್ರನ ಮೇಲೆ ಮಾನವ ಪಾದರ್ಪಣದ ಘಟನೆಯನ್ನು ವಿವರಿಸುವ ಇಲ್ಲಿ ವರ್ಣನೆಗೇ ಮಹತ್ವ ದೊರಕಿದೆ. ವಿಜ್ಞಾನದ ಭೌತಿಕ ವಾದವನ್ನು ಹಿಂದೆ ಟೀಕಿಸಿದ್ದ ಕವಿ ಇಲ್ಲಿ ಭಾವಪೂರ್ಣವಾಗಿ ವರ್ಣನೆಗೆ ಮುಂದಾಗಿದ್ದಾರೆ. ಈ ಹುಡಕಾಟವನ್ನು

ಈ ವರ್ಷ ಮಳೆಯಿಷ್ಟು ಸುರಿಯಿತೆಂದಾಕ್ಷಣ

ಬರವೇನು ಮುಂದಿನ ವರ್ಷ?

ನವಮೇಘದಮೋಘ ವಿಸ್ಫೂರಣ-

ದಿಂದಿಳೆ ತಳೆಯದೆ ಹರ್ಷ!

ಎಂಬ ತಾತ್ವಿಕತೆಗೂ ತರುತ್ತಾರೆ. ವರ್ಣನೆಯ ಮೇಲಿನ ಒಲವು ತಗ್ಗಿ ಧ್ವನಿಪೂರ್ಣತೆಯ ಕಡೆಗೆ ಆಸಕ್ತಿ ಹರಿದಿದ್ದಾರೆ ಕವಿತೆಯ ಮಹತ್ವ ಇನ್ನೂ ಹೆಚ್ಚಾಗಬಹುದಾಗಿತ್ತು. ‘ಇಂದ್ರಗೋಪ’ ಮತ್ತು ‘ಕೃಷ್ಣಮೇಘ’ ಪ್ರಕಟಗೊಂಡ ನಂತರ ಪರಮೇಶ್ವರ ಭಟ್ಟರು ಅನುವಾದದಲ್ಲಿಯೇ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡರು. ಕವಿತೆಯ ರಚನೆ ಹಿಂದಾಯಿತು. ಇಪ್ಪತ್ತು ವರ್ಷಗಳ ನಂತರ ಅವರ ಇಳಿ ವಯಸ್ಸಿನಲ್ಲಿ ಹನ್ನೆರಡು ಕವಿತೆಗಳನ್ನು ಒಳಗೊಂಡ ‘ಸಂಜೆಮಲ್ಲಿಗೆ’ ಪ್ರಕಟವಾಯಿತು. ಅದು ಹನ್ನೆರಡು ಕವಿತೆಗಳ ಚಿಕ್ಕಪುಸ್ತಕ. ಇದರ ಆರಂಭದಲ್ಲಿ ಒಂದು ಅಷ್ಟಕವಿದ್ದರೆ ಅನುಬಂಧದಲ್ಲಿ ಶ್ಲೋಕ ಛಂದಸ್ಸಿನ ನುಡಿಮುತ್ತುಗಳಿವೆ. ಛಂದೋಪ್ರಯೋಗದಲ್ಲಿ ಅವರು ಕೊನೆಯವರೆಗೂ ಪ್ರಯೋಗಶೀಲರಾಗಿದಕ್ಕೆ ಇದು ನಿದರ್ಶನವಾಗಿದೆ. ‘ನನ್ನ ಹೊಸ ಹಾಡು’ವಿನಂತಹ ಕವಿತೆಯಲ್ಲಿ ಅವರ ಮಾಗಿದ ಜೀವನಾನುಭವ ಕಾಣಿಸಿಕೊಂಡಿದೆ. ಸದಾಶಿವ ರಾಯರು ಪರಮೇಶ್ವರ ಭಟ್ಟರ ತಂದೆಯವರು ಮಾತ್ರವಲ್ಲ ಅವರ ಆದರ್ಶ ಕೂಡ ಹೌದು. ಸದಾಶಿವ ಗುರು ಅವರ ವಚನಗಳ ಅಂಕಿತ ಕೂಡ ಹೌದು. ಇದೇ ಹೆಸರಿನ ಅನುಭಾವದ ಕವಿತೆಯೊಂದು ಸಂಕಲನದಲ್ಲಿದೆ

ಒಡಲೆಂಬ ಗುಡಿಯೊಳಗೆ ಒಡೆಯನೆನ್ನವನಿಹನು

ನಡೆಯುವೆನು ಕೈ ಹಿಡಿದು ನಡೆಸಿದಂತವನು

ಬಡವ ತಬ್ಬಲಿ ಎಂದು ಚಡಪಡಿಸದಿಹೆ ನಾನು

ಕೊಡುವಾತ ಬಿಡುವಾತ ನನ್ನ ಒಳಗಿಹನು

ಎಂಬ ಕವಿತೆಯ ಆರಂಭವೇ ಪರಿಣಾಮಕಾರಿಯಾಗಿದೆ. ತಮ್ಮ ತಾತ್ವಿಕತೆಯನ್ನು ಈ ಕವಿತೆಯಲ್ಲಿ ಪರಮೇಶ್ವರ ಭಟ್ಟರು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ. ಒಟ್ಟಾಗಿ ಅವರ ಕವಿತೆಗಳನ್ನು ನೋಡಿದಾಗ ದೊರೆಯ ಬಹುದಾದ ಅನೇಕ ಸಾಧ್ಯತೆಗಳು ತಪ್ಪಿ ಹೋಗಿದ್ದಂತೆ ಭಾಸವಾಗುತ್ತದೆ. ನಮ್ಮ ಕಾಲದ ಶ್ರೇಷ್ಠ ಭಾಷಣಕಾರರಾಗಿದ್ದ ಅವರ ಭಾಷಣಗಳಲ್ಲಿ ಕಾಣುತ್ತಿದ್ದ ಹಾಸ್ಯ, ಮುಕ್ತಕಗಳಲ್ಲಿ ಕಂಡ ನಗೆಯ ಮಿಂಚು ಕವಿತೆಗಳಲ್ಲಿ ಕಾಣಿಸಿಲ್ಲ. ಕಾಳಿದಾಸ, ಭಾಸರನ್ನು ಕನ್ನಡಕ್ಕೆ ತಂದ ಹೆಗ್ಗಳಿಕೆಯ ಅವರ ಕವಿತೆಗಳಲ್ಲಿ ಮಹತ್ವಾಕಾಂಕ್ಷೆ ನಿರಂತರವಾಗಿ ಉಳಿದುಕೊಂಡು ಬಂದಿಲ್ಲ. ಪರಮೇಶ್ವರ ಭಟ್ಟರು ಕವಿತೆಯನ್ನು ತಮ್ಮ ಪ್ರಧಾನ ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಳ್ಳಲಿಲ್ಲವೇನೋ ಎನ್ನುವ ಗ್ರಹಿಕೆ ಕೂಡ ಉಂಟಾಗುತ್ತದೆ. ಇದರಿಂದ ನಷ್ಟವಾಗಿದ್ದು ಕನ್ನಡ ಕಾವ್ಯಕ್ಷೇತ್ರಕ್ಕೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

2ನೇ ಭಾಗ : S.V. Parameshwar Bhat Birth Anniversary: ನನ್ನಂತರಂಗದಿ ನಂದದೆ ನಿಂದೀಪ ನಂದಾದೀಪವಾಗಿರಲಿ ದೀಪ ಹಚ್ಚಾ