ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಕಣ್ಣ ಯಾವಾಗಲೂ ಹೀಗೆಯೇ. ಅವನ ಕೆಲಸದಲ್ಲಿ ಮಾತ್ರ ಗಮನ ಕೊಟ್ಟಿರುತ್ತಾನೆ. ಉಳಿದ ಏನನ್ನೂ ಅವ ಯೋಚಿಸುವುದಿಲ್ಲ. ಅವನ ಬಳಿಯಿಂದಲೇ ನಾನು ಹಳೆಯ ಪಠ್ಯಪುಸ್ತಕಗಳನ್ನು ತೆಗೆದುಕೊಳ್ಳುತ್ತೇನೆ. ಅವನು ಒಂಭತ್ತನೆಯ ತರಗತಿ ನಾನು ಎಂಟು. ತನ್ನ ನೋಟ್ಸ್ ಬರೆಯಬೇಕೆಂದಾಗೆಲ್ಲ ಸೀದಾ ನಮ್ಮ ಮನೆಗೆ ಬರುತ್ತಿದ್ದ, “ಅತ್ತೆ ಭಾಮನಿಗೆ ಈ ನೋಟ್ಸ್ ಬರೆದಿಡಲು ಹೇಳಿ” ಎನ್ನುತ್ತಿದ್ದ. ನನಗೆ ಗಣಿತವೆಂದರೆ ಅಷ್ಟಕ್ಕಷ್ಟೇ. ಇದು ಅರ್ಥವಾಗುತ್ತಿಲ್ಲವೆಂದು ಅವನ ಬಳಿ ಹೋದರೆ, “ನನಗೆ ತುಂಬಾ ಓದಬೇಕಾಗಿದೆ” ಎಂದು ಮುಖಕ್ಕೆ ರಾಚಿದಂತೆ ಹೇಳುತ್ತಿದ್ದ. ಮುಂದೆ ಅವನನ್ನೇ ಮದುವೆ ಮಾಡಿಕೊಳ್ಳಬೇಕೆಂದು ಮಾವ ಕೇಳಿದಾಗ, ನಾನು ತಕ್ಷಣ ತಲೆಯಾಡಿಸಿದೆ. “ನೀನೇ ಅವನಿಗೆ ಹೊಂದಿಕೊಂಡು ಹೋಗಬೇಕು. ತಲೆಯಾಡಿಸದೆ ಆಲೋಚನೆ ಮಾಡಿ ಹೇಳು” ಎಂದು ಅಮ್ಮ ಆ ದಿನ ಹೇಳಿದಳು.
ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ
(ಭಾಗ 9)
ರಾತ್ರಿ ಮಲಗಲು ಹೋಗುವವರೆಗೆ ಕಣ್ಣ ನನ್ನನ್ನು ನೋಡಲಿಲ್ಲ. ಊಟ ಮಾಡಿದೆವು. ಟಿವಿ ನೋಡಿದೆವು. ಸುಮ್ಮನೆ ಏನೋ ಮಾತನಾಡಿಕೊಂಡೆವು. ಕಣ್ಣನಿಗೆ ನನ್ನನ್ನು ತಲೆ ಎತ್ತಿ ನೋಡುವ ಸಂದರ್ಭವೇ ಬರಲಿಲ್ಲ. ದಿನವೂ ಹಾಗೆಯೇ ಇದ್ದೇವೆಯೇ? ಇಂದು ನಾನು ವ್ಯತ್ಯಾಸವಾಗಿ ಇರುವುದರಿಂದ ಹಾಗೆ ತೋರುತ್ತಿದೆಯೋ? ಕಣ್ಣನಿಗೆ ಎಂದಾದರೂ ಮನಸ್ಸಿನಲ್ಲಿ ಗುಲಾಬಿ ತೋಟ ಅರಳಿರಬಹುದೇ? ಅವನು ನಿರೀಕ್ಷಿಸಿದ ದಿನಗಳಲ್ಲಿ ನಾನು ತಲೆ ಎತ್ತಿ ನೋಡದೆ ಇದ್ದಿರುವೆನೇ? ಸಣ್ಣದಾಗಿ ಚಿಂತೆ ನುಸುಳಲು ನೋಡಿತು. “ಛ್ಛೇ, ಛ್ಛೇ , ಭಾಮಾ, ಇಲ್ಲಿ ಬಂದು ನೋಡೇ” ಎಂದು ಕೂಗಿ ಹೇಳಿರುತ್ತಿದ್ದ. ಪ್ರೀತಿಯಿಂದ ಇರುವ ಸಮಯದಲ್ಲಿ ಮಾತ್ರ ಕಣ್ಣನ ಬಾಯಿಂದ ‘‘ಹೋಗೇ ಬಾರೇ” ಬರುತ್ತದೆ.
ಯಾಳಿನಿಯೂ ಆದಿಯೂ ಒಬ್ಬರ ಮೇಲೆ ಒಬ್ಬರು ಕಾಲು ಹಾಕಿಕೊಂಡು ನಿದ್ದೆ ಮಾಡುತ್ತಿದ್ದರು. ಕಣ್ಣ ಹಾಸಿಗೆಯ ಮೇಲೆ ಕೂರುವುದು ಮಾತ್ರ ತಿಳಿಯುತ್ತದೆ. ಯಾವಾಗ ಮಲಗುತ್ತಾನೆ, ಹೇಗೆ ನಿದ್ರಿಸುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಎರಡು ನಿಮಿಷದಲ್ಲಿ ಗಾಢ ನಿದ್ದೆಯಲ್ಲಿರುತ್ತಾನೆ.
ಕಣ್ಣನ ಜತೆಯಲ್ಲಿ ಮಾತನಾಡುತ್ತಿರಬೇಕು. ಅವನ ಕೈಯನ್ನು ಹಿಡಿದುಕೊಂಡು ಕುಳಿತಿರಬೇಕು ಎಂದು ಬಯಕೆಯಾಗಿತ್ತು. ಮೀಸೆಯ ಕೆಳಗೆ ಕೆತ್ತಿದಂತೆ ಅವನ ತುಟಿಗಳಿದ್ದವು. ಮುತ್ತಿಟ್ಟು ಎಷ್ಟು ದಿನಗಳಾಯಿತು? ದಿನಗಳೇ? ತಿಂಗಳಾಗಿರಬಹುದು. ತಿಂಗಳೇ? ವರ್ಷಗಳಾಗಿರಬಹುದು. ಮುತ್ತೇ ಕೊಟ್ಟುಕೊಳ್ಳದೆ ನಾವಿಬ್ಬರೂ ಒಂದಾಗಿ ಕೂಡಿದ್ದೇವೆಯೇ?
ಕಾಲೇಜಿನಿಂದ ಹಿಂತಿರುಗಿದ ಕೊಡಲೇ ಸೈಕಲನ್ನು ತೋಟದ ಹಿಂದೆ ನಿಲ್ಲಿಸಬೇಕು. ಕಣ್ಣ ಹೇಗೆ ಅಲ್ಲಿ ನಿಂತಿರುತ್ತಾನೋ ಕಾಣೇ ? ಸೈಕಲಿಗೆ ಬೀಗ ಹಾಕಿ ತಿರುಗಿದ ಕೂಡಲೇ ಜಡೆಯನ್ನು ಹಿಡಿದು ಎಳೆಯುತ್ತಿದ್ದ. ಸುಧಾರಿಸಿಕೊಳ್ಳುವ ಮುನ್ನವೇ ತುಟಿಯನ್ನು ಕಚ್ಚಿಕೊಳ್ಳುತ್ತಿದ್ದ. ಕೈಕಾಲುಗಳನ್ನು ಬಡಿದು, ವೇಗವಾಗಿ ನೂಕಲು ನೋಡಿದರೂ ತುಟಿಯನ್ನು ಬಿಡುತ್ತಿರಲಿಲ್ಲ. ಉಸಿರು ಕಟ್ಟುವಷ್ಟು ಮುತ್ತು ಕೊಟ್ಟ ನಂತರವೇ ಬಿಡುತ್ತಿದ್ದ. ಹೆಜ್ಜೆಯ ಶಬ್ಧ ಕೇಳಿಸುವ ಸಮಯಗಳಲ್ಲಿ ಮನಸ್ಸೇ ಇಲ್ಲದೇ ಅರ್ಧಕ್ಕೆ ಬಿಟ್ಟು, ತೋಟದ ಮರಗಳ ಹಿಂದೆ ಮರೆಯಾಗುತ್ತಿದ್ದ. ನಮ್ಮ ಎರಡೂ ಮನೆಯಲ್ಲಿ ಅವನು ಮುತ್ತಿಡದ ಮರೆಯಾದ ಸ್ಥಳಗಳೇ ಇಲ್ಲ.
ಭಾಗ 7 : Literature: ನೆರೆನಾಡ ನುಡಿಯೊಳಗಾಡಿ; ಗಂಡನ ಬಳಿ ಕಾಮವನ್ನು ಕೇಳಿ ಪಡೆಯುವುದು ಅಸಹ್ಯ ಎನ್ನಿಸುತ್ತಿತ್ತು
ಒಮ್ಮೆ ಎಲ್ಲರೂ ಗುಡಿಗೆ ಹೋಗಿದ್ದರು. ನಾನು ಮಾತ್ರ ಮನೆಯಲ್ಲಿದ್ದೆ. ಪೀರಿಯಡ್ ಟೈಮ್. ಒಳ್ಳೆಯ ಮಳೆ. ಮನೆಯಲ್ಲಿ ಯಾರು ಇರಲಿಲ್ಲ. ಹೇಗೋ ಬಂದುಬಿಟ್ಟ. ಕೈಹಿಡಿದು ಎಳೆದು ತಂದು, ನಡು ಹೊಸ್ತಿಲಿನಲ್ಲಿ ನಿಲ್ಲಿಸಿದ. ಮಳೆಯ ನೀರು ಮುಖದ ಮೇಲೆ ಜಾರಲು ಆಕಾಶವನ್ನು ನೋಡುತ್ತಿದ್ದ ನನ್ನನ್ನು ಹಾಗೆಯೇ ತಬ್ಬಿಕೊಂಡ. ಮಳೆಯ ನೀರಿನ ಜತೆ ಸೇರಿಸಿ ಮುತ್ತಿಟ್ಟ. ಎಷ್ಟು ಸಮಯ ಮುತ್ತು ಕೊಡುತ್ತಿದ್ದೆವು ಎಂದು ನೆನಪಿಲ್ಲ. ಅಂದು ರಾತ್ರಿಯೇ ಜ್ವರ ಬರುವಷ್ಟು ಇಬ್ಬರೂ ನೆನೆದಿದ್ದೆವು.
ಒಂದು ನಿಮಿಷ, ಎರಡು ನಿಮಿಷ ಎಂದು ಸಮಯ ಲೆಕ್ಕ ಹಾಕುತ್ತಾ ಮುತ್ತು ಕೊಡುವ ಕಣ್ಣ ಎಂದಿನಿಂದ ಮುತ್ತು ಕೊಡದೇ ಇದ್ದಾನೆ? ನನಗೆ ಮರೆತು ಹೋಯಿತೇ? ಇಷ್ಟು ದಿನ ನನಗೆ ಯಾಕೆ ತೋರಲಿಲ್ಲ?
ಮುತ್ತು ನೆನಪಿಗೆ ಬಂದಕೂಡಲೇ ಒಳಗೆ ಉರುಳುತ್ತಿದ್ದ ಭಾವನೆಯ ಚೆಂಡು ವೇಗವಾಗಿ ಉರುಳಿತು. ಪಾತರಗಿತ್ತಿ ದೇಹದೊಳಗೆ ಹಾರಿತು. ಪೂರ್ತಿಯಾಗಿ ಉರಿದ ಜ್ವಾಲೆಯ ಬಿಸಿ ಒಳಗೆ ಹರಡಿತು. ಜ್ವಾಲೆಯಿಂದ ಗಂಧದ ಪರಿಮಳ ಹಬ್ಬಿತು. ದೇಹ ಒಪ್ಪಿಕೊಂಡ ರಸವಾದವನ್ನು ಬದಲಾಯಿಸುವುದು ಹೇಗೆ? ಬೆರಳ ತುದಿಗಳು ತಣ್ಣಗಾಯಿತು. ಅಂಗಾಲುಗಳಲ್ಲಿ ಬಿಸಿ ಹರಡಿತು. ಮೊಲೆಗಳು ಭಾರವಾದವು. ತೊಡೆಗಳ ಬಿಗಿ ಸಡಿಲವಾದವು. ಕಾಮಕ್ಕಾಗಿ ಸಿದ್ಧವಾಗಿ ನಿಂತಿರುವ ದೇಹದ ಆಕಾರ ಕಣ್ಣ ಒಳಗೆ ತುಂಬಿ ನಿಂತಿತು. ಒಂದು ದಿನವೂ ತನ್ನಷ್ಟಕ್ಕೆ ಎದ್ದ ಕಾಮವನ್ನು ಅನುಭವಿಸಿಯೇ ಇರಲಿಲ್ಲ. ನೂರು ಸಲಕ್ಕೆ ಒಮ್ಮೆ, ದೇಹ ಅರಳಿ ಸಡಿಲವಾಗಿತ್ತು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 8 : Literature: ನೆರೆನಾಡ ನುಡಿಯೊಳಗಾಡಿ; ಕಣ್ಣನಿಗೆ ಫೋನ್ ಮಾಡಿ ಎಷ್ಟು ಗಂಟೆಗೆ ಮನೆಗೆ ಬರುತ್ತೀಯಾ ಎಂದೆ
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 1:14 pm, Fri, 18 March 22