ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಅಂದುಕೊಂಡಂತೆ ತನ್ನಷ್ಟಕ್ಕೆ ಅಡಗಲಿಲ್ಲ. ಬಂಡೆಯ ಬಿರುಕಿನಿಂದ ಕಣ್ಣಿಗೆ ಕಾಣದೆ ಚಿಮ್ಮವ ಬುಗ್ಗೆ ನೀರಿನಂತೆ, ದೇಹದೊಳಗೆ ಚಿಲುಮೆ ಹರಡಿಕೊಂಡಿತ್ತು. ತಂಪು, ಬಿಸುಪೂ ಸರಿಸಮವಾದ ಅಳತೆಯಲ್ಲಿ ಬೆರೆತ ಹಿತಭಾವನೆ ಮನಸ್ಸನ್ನು ಮೃದುವಾಗಿಸಿತು. ದೇಹವನ್ನು ಮತ್ತಷ್ಟು ತೀಕ್ಷಣವಾಗಿ ನೋಡುವಂತೆ ಮಾಡಿತು. ಆಳೆತ್ತರದ ಕನ್ನಡಿಯಲ್ಲಿ ನಿಧಾನವಾಗಿ ಮುಖ ನೋಡಿಕೊಂಡು ಹಲವರ್ಷಗಳೇ ಕಳೆದಿದ್ದವು. ಯಾಳಿನಿಯೂ, ಆದಿಯೂ ಅವರ ಎತ್ತರಕ್ಕೆ ಕೈಯಿಟ್ಟು ಉಜ್ಜಿ, ಗೀಚಿ, ಅರ್ಧದವರೆಗೆ ಕನ್ನಡಿಯ ರಸ ಹೋಗಿತ್ತು. ಸೀರೆ ಉಡುವಾಗ, ಮುಖವನ್ನು ಮುಂದಕ್ಕೆ ಚಾಚಿ, ಬೊಟ್ಟು ಸರಿಯಾಗಿದೆಯೇ ಎಂದು ನೋಡಿಕೊಳ್ಳುವುದಷ್ಟಕ್ಕೆ ಸರಿ. ಇಂದು ಕನ್ನಡಿಯನ್ನು ನೋಡಬೇಕೆನ್ನಿಸಿತು. ಪಾದರಸ ಕಡಿಮೆಯಾದ ಕನ್ನಡಿಯಂತೆಯೇ ಮುಖದ ಹೊಳಪು ಕಡಿಮೆಯಾಗಿತ್ತು. ಹಣೆಯ ಮುಂದೆ ನೆರೆತ ಕೂದಲು. ಅವನ್ನು ಸರಿಮಾಡಲು ಎತ್ತಿದ ಬಲಗೈಯ ಸ್ನಾಯುಗಳು ಸುಕ್ಕಾಗಿ ನರಗಳು ಉಬ್ಬಿಕೊಂಡಿದ್ದವು. ಪಾತ್ರೆ ಉಜ್ಜುವ ಸೋಪೂ, ಬಟ್ಟೆ ಒಗೆಯುವ ಸೋಪೂ ಕೈಗಳ ಹೊಳಪನ್ನು ಕಡಿಮೆ ಮಾಡಿದ್ದವು.
ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ
(ಭಾಗ 8)
ಅಡುಗೆ ಮನೆಯೊಳಗೆ ಬರುವುದಕ್ಕೆ ಮೊದಲು ಮಾತ್ರವೇ ಹೆಂಗಸರ ಕೈ ಪಳಪಳ ಎಂದು ಹೊಳಪಾಗಿರುತ್ತದೆ. ದಿನ ಅಡುಗೆ ಮಾಡಲು ಪ್ರಾರಂಭಿಸಿದ ಒಂದು ವರ್ಷದೊಳಗೆ ಕೈಗಳು ಮಾತ್ರ ಬಣ್ಣ ಮಾಸಿ ಪ್ರತ್ಯೇಕವಾಗಿ ಕಾಣುತ್ತವೆ. ರೇವತಿಯೂ, ಉಷಾಳೂ ಚೆನ್ನಾಗಿಯೇ ಅಲಂಕಾರ ಮಾಡಿಕೊಂಡು ಬರುತ್ತಾರೆ. ಮುಖವನ್ನು ಹೊಳಪಾಗಿಯೇ ಇಟ್ಟಿರುತ್ತಾರೆ. ಅಚ್ಚುಕಟ್ಟಾಗಿ ಸೀರೆ, ತಲೆಗೆ ಡೈ ಎಂದು ವಯಸ್ಸನ್ನು ಮರೆಮಾಚಲು ಎಲ್ಲ ಯುಕ್ತಿಗಳನ್ನೂ ಮಾಡುತ್ತಾರೆ. ಕುರ್ಚಿಯಲ್ಲಿ ಕುಳಿತು ಕಂಪ್ಯೂಟರನ್ನು ಒತ್ತುವ ಕೈಗಳು ಕಪ್ಪಾಗಿ, ನರಗಳು ಮೇಲಕ್ಕೆ ಉಬ್ಬಿಕೊಂಡು, ಸ್ನಾಯುಗಳು ಸುಕ್ಕಾಗಿ ಇರುತ್ತವೆ. ಅವರೇನು ಮಾಡಲು ಸಾಧ್ಯ? ಮನೆ ಕೆಲಸದ ಪರಿಣಾಮಗಳು ಹಾಗೆ.
ಕಾಲುಗಳ ಬಗ್ಗೆ ಹೇಳುವುದೇ ಬೇಡ. ಹರಳುಗಳಿಟ್ಟ ಪಳಪಳ ಹೊಳೆಯುವ ಚಪ್ಪಲಿಗಳು, ಒಡೆದ ಹಿಮ್ಮಡಿಗಳಿಗೆ ಹೊಂದದೆ ಹಲ್ಲು ಕಿರಿಯುತ್ತವೆ. ಆಫೀಸಿನಲ್ಲಿ ಉಳಿದವರು ಗೇಲಿ ಮಾಡುತ್ತಾರೆ. ನಾನು ಅವರಿಗೆ ಬೆಂಬಲವಾಗಿಯೇ ಇರುತ್ತೇನೆ. ಕೈ ಕಪ್ಪಾಗುವುದಕ್ಕೂ, ಹಿಮ್ಮಡಿ ಒಡೆದು ಹೋಗುವುದಕ್ಕೂ ಅವರು ಕಾರಣವಲ್ಲ ಎನ್ನುತ್ತೇನೆ. ತಮ್ಮನ್ನು ಸುಂದರವಾಗಿ, ಉತ್ಸಾಹದಿಂದ ಇಟ್ಟುಕೊಳ್ಳುವುದರಲ್ಲಿ ಏನು ತಪ್ಪು ಎಂದು ಅವರ ಪರವಾಗಿ ಮಾತನಾಡುತ್ತೇನೆ. ನಾನು ಚೆನ್ನಾಗಿ ಅಲಂಕಾರ ಮಾಡಿಕೊಳ್ಳಬೇಕೆಂದು ಈಗ ಬಯಸುತ್ತೇನೆ. ಸುಕ್ಕು ಬಿದ್ದ ಕೈಗಳನ್ನು ಹೇಗಾದರೂ ಸರಿ ಮಾಡಿಬಿಡಬೇಕು.
ಭಾಗ 6 : Literature: ನೆರೆನಾಡ ನುಡಿಯೊಳಗಾಡಿ; ಬೆಳೆದ ಮೇಲೂ ಆ ಭಯದ ಉಂಡೆ ತಿರುಗುವುದು ನಿಲ್ಲಲಿಲ್ಲ
ಮನಸ್ಸಿನೊಳಗೆ ಒಂದು ಗುಲಾಬಿ ತೋಟ ಅರಳಿತು. ನಾಟಿ ಗುಲಾಬಿಯಿಂದ ಹೊಮ್ಮುವ ಮೃದುವಾದ ಪರಿಮಳ ಮನಸ್ಸಿನೊಳಗೂ ಚಿಮ್ಮಿತು. ನನಗೇ ನಾನು ವ್ಯತ್ಯಾಸವಾಗಿ ಕಂಡೆ. ನಡೆಯಲ್ಲಿ ಗಾಂಭೀರ್ಯ ಬಂದಿತು. ಉರಿದು ಬೀಳದೆ ಮಕ್ಕಳ ಬಳಿ ಮಾತನಾಡಿದೆ. ಕಣ್ಣನಿಗೆ ಫೋನು ಮಾಡಿ, “ಎಷ್ಟು ಗಂಟೆಗೆ ಮನೆಗೆ ಬರುತ್ತೀಯಾ?” ಎಂದು ಕೇಳಿದೆ. ಎಂಟು ಗಂಟೆಗೆ ಮನೆಯೊಳಗೆ ಇರುತ್ತಾನೆ ಎಂದು ತಿಳಿದರೂ ಅವನ ಬಳಿ ಮಾತನಾಡಬೇಕೆಂದು ಮಾತನಾಡಿದೆ.
ಕಣ್ಣ ಒಳಗೆ ಬಂದ ತಕ್ಷಣ, “ಸ್ನಾನ ಮಾಡುತ್ತೀಯಾ?” ಎಂದು ಅವನ ಮುಂದೆ ನಿಂತೆ. ಆಫೀಸ್ ಮುಗಿಸಿ ಮನೆಗೆ ಹಿಂತಿರುಗಿದ ತಕ್ಷಣ ನಾನೂ ಸ್ನಾನ ಮಾಡಿಬಿಡುತ್ತೇನೆ. ಸ್ನಾನ ಮಾಡಿದ ಮೇಲೆ ಇಂದು ಮತ್ತೆ ತಲೆ ಬಾಚಿಕೊಂಡು, ಸ್ವಲ್ಪ ಪೌಡರ್ ಬಳಿದುಕೊಂಡು, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡೆ. ಕಣ್ಣ ಕಂಡುಹಿಡಿದು ಕೇಳುತ್ತಾನೆ ಎಂದು ಅವನ ಮುಂದೆ ನಿಂತೆ. ಗಾಡಿಯ ಕೀಲಿಯನ್ನು ಹ್ಯಾಂಗರಿನಲ್ಲಿ ಸಿಕ್ಕಿಸಿ, ಸೆಲ್ಫೋನಿನಲ್ಲಿದ್ದ ಮಿಸ್ಡ್ ಕಾಲಿಗೆ ಕರೆ ಮಾಡಿ ಮಾತನಾಡುತ್ತಲೇ ಒಳಗೆ ಹೊರಟು ಹೋದ. ಯಾಳಿನಿಯೂ ಆದಿಯೂ “ಏನಮ್ಮಾ ಈವತ್ತು ಫ್ರೆಷ್ ಆಗಿದ್ದೀಯಾ?” ಎಂದರು. “ಇಲ್ಲವಲ್ಲ, ಎಂದಿನಂತೆಯೇ ಇದ್ದೇನಲ್ಲಾ’’ ಎಂದು ಹೇಳಿದರೂ ಅವರು ಕಂಡುಹಿಡಿದು ಕೇಳಿದ್ದು ಹಿಡಿಸಿತ್ತು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 7 : Literature: ನೆರೆನಾಡ ನುಡಿಯೊಳಗಾಡಿ; ಗಂಡನ ಬಳಿ ಕಾಮವನ್ನು ಕೇಳಿ ಪಡೆಯುವುದು ಅಸಹ್ಯ ಎನ್ನಿಸುತ್ತಿತ್ತು
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi