Literature: ನೆರೆನಾಡ ನುಡಿಯೊಳಗಾಡಿ; ‘ಈಗ ನಾಯಿಗಳಿಗೆ ನಾಯಿಯಾಗಿದ್ದೀನಿ ಎಂಬುದನ್ನು ತಿಳಿದುಕೊಂಡೆ ದೇವರೆ!’

|

Updated on: Apr 01, 2022 | 2:07 PM

Tamil Story of M Rajendran : ಟೈಗರ್ ಸ್ವಾಮಿ ಮನಸ್ಸಿನಲ್ಲೇ ನಕ್ಕನು. ಟೈಗರ್‌ ಸ್ವಾಮಿ ಫೈಲನ್ನು ನೋಡುತ್ತಿದ್ದ ಹಾಗೆ ಮನುಷ್ಯರ ಸಮಸ್ಯೆಗಳೂ, ತೆಗೆದುಕೊಳ್ಳುವ ನಿರ್ಧಾರಗಳೂ ಅವನನ್ನು ಗೊಂದಲಕ್ಕೀಡುಮಾಡಿತು. ನಡುರಾತ್ರಿಯಾಗಿತ್ತು. ಹಾಗೆಯೇ ಸೋಫಾದಲ್ಲಿ ಮಲಗಿದನು.

Literature: ನೆರೆನಾಡ ನುಡಿಯೊಳಗಾಡಿ; ‘ಈಗ ನಾಯಿಗಳಿಗೆ ನಾಯಿಯಾಗಿದ್ದೀನಿ ಎಂಬುದನ್ನು ತಿಳಿದುಕೊಂಡೆ ದೇವರೆ!’
ತಮಿಳು ಲೇಖಕ ಮ. ರಾಜೇಂದ್ರನ್, ಅನುವಾದಕಿ ಸೆಲ್ವಕುಮಾರಿ
Follow us on

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : “ಹೋಗು ನೀ ಯಾಕೆ ಇಲ್ಲಿ ಬರುತ್ತೀಯಾ? ನಿನ್ನ ಜಾಗ ಸೋಫಾ ತಾನೆ, ಹೋಗು?” ಗಂಡನಿಗೆ ಕೇಳಿಸುವ ಹಾಗೆ ಅಟ್ಟಿಸಿ ಬಾಗಿಲನ್ನು ಮುಚ್ಚಿದಳು. ಅದು ಮೊಂಡುಹಿಡಿದು ಬಾಗಿಲನ್ನು ನೂಕಿನೂಕಿ ಇಟ್ಟಿತು. ಕೊನೆಗೆ ಈಕೆ ಬಾಗಿಲನ್ನು ತೆರೆದಳು. ಧಾವಿಸಿ ಒಳಹೋಯಿತು. ಹೀಗೆ ಹೋಗಿದ್ದೇ ಕಂದಸ್ವಾಮಿಯ ಕಾಲ ಬಳಿ ಮಲಗಿಕೊಂಡಿತು. ಹೀಗೆ ಮಲಗಿಕೊಳ್ಳುವುದು ಆಗಾಗ ನಡೆಯುತ್ತಿರುತ್ತಿತ್ತು. ಟೈಗರ್ ಸ್ವಾಮಿ ಮನಸ್ಸಿನಲ್ಲೇ ನಕ್ಕನು. ಅವ ಫೈಲನ್ನು ನೋಡುತ್ತಿದ್ದ ಹಾಗೆ ಮನುಷ್ಯರ ಸಮಸ್ಯೆಗಳೂ, ದ್ವಂದ್ವಗಳು, ಆಲೋಚನೆಗಳು ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರಗಳೂ ಅವನನ್ನು ಗೊಂದಲಕ್ಕೀಡುಮಾಡಿತು. ನಡುರಾತ್ರಿಯಾಗಿತ್ತು. ಹಾಗೆಯೇ ಸೋಫಾದಲ್ಲಿ ಮಲಗಿದನು. ಕನಸು ನನಸಿನಲ್ಲಿ ವೇಳೆ ಸರಿಯುತ್ತಿತ್ತು. ಯಾವಾಗ ನಿದ್ರಿಸಿದ ಎಂಬುದೇ ತಿಳಿಯಲಿಲ್ಲ. ಎಚ್ಚರವಾದಾಗ ಅವನ ಎದೆಯ ಮೇಲೆ ಕಾಲಿಟ್ಟು ಯಜಮಾನನಾಯಿ ಬರುತ್ತಿತ್ತು.

ಕಥೆ : ದೇವರು ಮತ್ತು ಟೈಗರ್ ಸ್ವಾಮಿ | ತಮಿಳು ಮೂಲ ಎಂ. ರಾಜೇಂದ್ರನ್ | ಕನ್ನಡಕ್ಕೆ : ಸೆಲ್ವಕುಮಾರಿ

(ಭಾಗ 4)

ಅವಸರ ಅವಸರವಾಗಿ ಸ್ನಾನ ಮಾಡಿ ನಾಯಿಯನ್ನು ಕರೆದುಕೊಂಡು ಪೂಜೆಯ ಕೋಣೆಗೆ ಹೋದನು. ಅಲ್ಲಿ ತುಪ್ಪದ ದೀಪದ ಜೊತೆಗೆ ಊದುಬತ್ತಿಯೂ ಪರಿಮಳವೂ ಸೇರಿ ಭಕ್ತಿಯ ಕಂಪು ಹರಡಿತ್ತು. ಕಂದಸ್ವಾಮಿಯ ಹೆಂಡತಿಗೆ ಏನೇ ಕೋಪ ಇದ್ದರೂ ಅದನ್ನು ಕೆಲಸದಲ್ಲಿ ತೋರಿಸುತ್ತಿರಲಿಲ್ಲ. ಟೈಗರ್ ಸ್ವಾಮಿಗೆ ಬಾಲ ಅಲ್ಲಾಡಿಸುವ ಆಸೆ. ಬಾಲ ಇದ್ದ ಜಾಗವನ್ನು ಮುಟ್ಟಿ ನೋಡಿಕೊಂಡನು. ದೇವರು ಬರಬೇಕು. ಕಣ್ಣು ಮುಚ್ಚಿ ಕೈಜೋಡಿಸಿ ನಿಂತನು. ದೇವರು ಪ್ರತ್ಯಕ್ಷನಾದ.

“ಏನು? ಹೀಗೆಯೇ ಇದ್ದುಬಿಡುತ್ತೀಯಲ್ಲಾ?”

“ಬೇಡಾ ದೇವರೆ ನಾನು ನಾಯಿಯಾಗಿಯೇ ಇರುತ್ತೀನಿ”.

“ಯಾಕೆ… ಯಜಮಾನನ ವಿಶ್ವಾಸ ಇನ್ನೂ ನಿನ್ನನ್ನು ಬಿಟ್ಟಿಲ್ಲವಾ?”

“ಅದೂ ಕೂಡಾ ಹೌದು”.

“ಹಾಗಾದರೆ ಬೇರೆ ಏನು?”

“ಏನೂ ಇಲ್ಲ ದೇವರೆ, ನನ್ನನ್ನು ನಾಯಾಗಿ ಮಾಡಿ”

“ಮನುಷ್ಯನಾಗಬೇಕಾದರೆ ಎಷ್ಟೊಂದು ಪುಣ್ಯ ಮಾಡಿರಬೇಕು ಗೊತ್ತಾ?”

“ಹೌದಾ ದೇವರೆ”

“ಹೌದು… ನಿನಗೆ ಏನೂ ಕಷ್ಟವಿಲ್ಲದೆ ಸಿಕ್ಕಿದ್ದರಿಂದ ಮಹತ್ವ ತಿಳಿದಿಲ್ಲ.”

“ಮಹತ್ವ ಇದೆಯಾ, ಗೊತ್ತಿಲ್ಲ ದೇವರೆ.”

“ಈ ಒಂದು ದಿವಸದ ಬದುಕಿನಲ್ಲಿ ಅದೂ ನಿನಗೆ ತಿಳಿಯಲಿಲ್ಲವೆ?”

“ಗೊತ್ತಾಗಲಿಲ್ಲ ಅಂತ ಹೇಳೋದಿಕ್ಕಾಗಲ್ಲ. ಇಲ್ಲಾಂತ ಹೇಳಬಹುದು.”

“ಏನು ಹೇಳ್ತಾ ಇದ್ದೀಯಾ?”

“ದೇವರೆ! ನಾಯಿಯೋ, ಮನುಷ್ಯನೋ ಬದುಕಿನಲ್ಲಿ ವ್ಯತ್ಯಾಸ ಗೊತ್ತಾಗಲಿಲ್ಲ ದೇವರೆ”

“ಹೇಗೆ ಹೇಳುತ್ತೀಯಾ?”

“ಯಜಮಾನ ನನ್ನನ್ನು ಕರೆದಾಗ ಓಡಿ ಬರುವ ಹಾಗೆ ಫೋನ್ ರಿಂಗ್ ಆದರೆ ಓಡಬೇಕಾಗಿದೆ ದೇವರೆ!”

‘‘ಆಮೇಲೆ?’’

“ಕುತ್ತಿಗೆಯಲ್ಲಿ ಲೈಸೆನ್ಸ್ ಕಟ್ಟಿಕೊಂಡು ತಿರುಗುವ ಹಾಗೆ ಮನುಷ್ಯರೂ ಹೆಸರು, ವಿಳಾಸ ನೇತಾಕಿಕೊಂಡು ಓಡಾಡುತ್ತಿದ್ದಾರೆ ದೇವರೆ!”

“ನಮ್ಮ ಹತ್ತಿರ ಇರುವ ವಿಶ್ವಾಸ ಅವರ ಹತ್ತಿರವೂ ಇದೆ ದೇವರೇ. ಅವರಿಗೂ ಯಜಮಾನರು ಇದ್ದಾರೆ. ಆದರೆ ಒಂದು ನಾವು ಯಜಮಾನನನ್ನು ಮತ್ತೆ ಮತ್ತೆ ಬದಲಾಯಿಸುವುದಿಲ್ಲ. ನಮಗೆ ಯಾವಾಗಲೂ ಒಬ್ಬರೇ ಯಜಮಾನ. ಅವರಿಗೆ ಆಗಾಗ ಬೇರೆ ಬೇರೆ ಯಜಮಾನರು ಒಂದೇ ಸಮಯದಲ್ಲಿ ಹಲವು ಯಜಮಾನರು.”

“ಅದು ಸರಿ, ಗೌರವ ಸಿಗುತ್ತಲ್ಲ?”

“ನಮಗೂ ಗೌರವ ಇದೆ ದೇವರೇ. ಸಾಮಾನ್ಯವಾಗಿ ಬೀದಿನಾಯಿ, ಮನೆನಾಯಿಯಾದ ನಮ್ಮನ್ನು ನೋಡಿದರೆ ಪಕ್ಕಕ್ಕೆ ಸರಿಯುತ್ತದೆ. ಯಾವುದೊ ಒಂದೋ ಎರಡೋ ಗರ‍್ರೆಂದರೂ ನಾವು ವಾಪಸ್ ಗರ‍್ರೆನ್ನದೆ ನಿರ್ಲಕ್ಷಿಸಿ ಹೋಗುತ್ತೇವೆ.’

“ಕೆಲಸದಲ್ಲಿ ವ್ಯತ್ಯಾಸ ಇದೆಯಲ್ಲ?”

“ಗೊತ್ತಿಲ್ಲ,  ಊಟ ಮಾಡುತ್ತಿದ್ದರೂ ಮನೆಯ ಬದಿ ಸದ್ದು ಕೇಳಿದರೆ ಊಟ ಬಿಟ್ಟು ಓಡುತ್ತೇವೆ. ಯಜಮಾನ ಕರೆದು ಸುಮ್ಮನಿರು ಎಂದು ಹೇಳಿದರೂ, ನಾವು ವಿಶ್ವಾಸ ತೋರಿಸಲು ಗರ‍್ರೆನ್ನುತ್ತಿರುತ್ತೇವೆ. ಬೇರೆ ಜನ ಮನೆಗೆ ಬಂದರೆ, ಯಜಮಾನನ ಬಳಿ ಸುಳಿಯದ ಹಾಗೆ ನೋಡುತ್ತಲೇ ಇರುತ್ತೇವೆ”

ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ಮಾತನಾಡಲು ಹೋದರೆ ಅವನೀಗ ಫೈಲ್ ತೆಗೆದುಕೊಂಡು ಕುಳಿತುಬಿಡುತ್ತಾನೆ

“ಬೇರೆ ಏನು?”

“ನಾವು ಉಚ್ಚೆ ಹುಯ್ದ ಕಲ್ಲಿನ ಹತ್ತಿರ ಕೂಡ ಇನ್ನೊಂದು ನಾಯಿ ಸುಳಿದರೆ ಕಚ್ಚಾಡುತ್ತೇವೆ.”

“ಆದ್ದರಿಂದ?”

“ಆದ್ದರಿಂದ ವ್ಯತ್ಯಾಸವೇನೂ ಗೊತ್ತಾಗಲಿಲ್ಲ ಅಂತ ಹೇಳ್ತಾ ಇದ್ದೀನಿ.”

“ಹಾಗಾದರೆ, ಮನುಷ್ಯರ ಬದುಕೂ ನಾಯಿಯ ಬದುಕೂ ಒಂದೇ ಅನ್ನುತ್ತೀಯಾ?”

“ಹಾಗೇ ಅನ್ನಿಸುತ್ತಿದೆ ದೇವರೆ!”

ದೇವರು ತೀರ್ಮಾನ ತೆಗೆದುಕೊಂಡ.

“ಹಾಗಾದರೆ ನೀನು ನಾಯಾಗಿ ಏಕೆ ಬದಲಾಗಬೇಕು. ಮನುಷ್ಯನಾಗಿಯೇ ಇದ್ದುಬಿಡು”.

“ಅಯ್ಯಯ್ಯೋ ಬೇಡ ದೇವರೆ”

“ಎರಡೂ ಒಂದೇ ಅಂದರೆ ಮನುಷ್ಯನಾಗಿ ಇರಲು ಏಕೆ ಹೆದರುತ್ತಿರುವೆ?”

“ನಾಯಾಗಿ ಇರುವಾಗ ಹೀಗೆಲ್ಲಾ ಯೋಚಿಸಬಾರದು”

ದೇವರು ನಕ್ಕು ನಂತರ ಮಾತು ಮುಂದುವರಿಸಿದರು.

“ಸರಿ! ನಿನ್ನನ್ನು ನಾಯಾಗಿಸುತ್ತೇನೆ. ಮನುಷ್ಯನಾಗಿಲ್ಲವೆಂದು ನೀನು ಇನ್ನು ಚಿಂತಿಸುವುದಿಲ್ಲ ಅಲ್ಲವಾ?”

“ಇಲ್ಲ ದೇವರೆ”.

“ಹೀಗೆ ಒಂದು ದಿವಸ ನಿನ್ನನ್ನು ಮನುಷ್ಯನನ್ನಾಗಿ ಬದಲಾಯಿಸಿದ್ದರ ಬಗ್ಗೆ ನಿನಗೆ ಸಂತೋಷ. ಇಲ್ಲದಿದ್ದರೂ

‘‘ಪಶ್ಚಾತ್ತಾಪ ಇಲ್ಲ. ಅಲ್ಲವಾ?”

‘‘ಇಲ್ಲಾಂತ ಹೇಳಲು ಆಗುತ್ತಿಲ್ಲ ದೇವರೆ’

“ಯಾಕೆ?”

“ನಾನು ಈ ಒಂದು ದಿವಸ ಬದುಕಿನಲ್ಲಿ ತಿಳಿದುಕೊಂಡದ್ದು ಜೀವನಪೂರ್ತಿ ನನ್ನನ್ನು ಬಾಧಿಸುವ ಹಾಗೆ ಇದೆ ದೇವರೆ”

“ಎರಡೂ ಒಂದೇ ಅಂದ ಮೇಲೆ ಹೇಗೆ ಜೀವನಪೂರ್ತಿ ನಿನ್ನನ್ನು ಬಾಧಿಸುತ್ತದೆ.”

‘ಹಂಗಲ್ಲ ದೇವರೆ’

“ಬೇರೆ ಏನು?”

“ನಾನು ಇಷ್ಟು ದಿವಸವೂ ಮನುಷ್ಯರಿಗೆ ನಾಯಾಗಿ ಇದ್ದೀನಿ ಎಂದುಕೊಂಡಿದ್ದೆ.”

“ಈಗ?”

‘‘ಈಗ ನಾಯಿಗಳಿಗೆ ನಾಯಿಯಾಗಿದ್ದೀನಿ ಎಂಬುದನ್ನು ತಿಳಿದುಕೊಂಡೆ ದೇವರೆ!”

ಟೈಗರ್ ಸ್ವಾಮಿಯ ‘ಜ್ಞಾನ’. ದೇವರನ್ನು ತಾಗಿತು. ದೇವರು ದುಃಖ ತಡೆದುಕೊಳ್ಳಲಾಗದೆ ತಲೆ ತಗ್ಗಿಸಿದರು. ಕೈಯಲ್ಲಿ ಇರುವ ಆಯುಧಗಳೂ, ಕುತ್ತಿಗೆಯಲ್ಲಿನ ಆಭರಣಗಳೂ ಜಾರಿದವು. ಟೈಗರ್ ಸ್ವಾಮಿಗೆ ಆಶ್ಚರ್ಯವಾಯಿತು.

“ದೇವರೆ!’’

ದೇವರು ಸ್ವಲ್ಪ ತಲೆ ಎತ್ತಿ ಟೈಗರ್ ಸ್ವಾಮಿಯನ್ನು ನೋಡಿದ.

“ಏನಾಯಿತು ದೇವರೆ?’

“ಏನೂ ಇಲ್ಲ. ಇಷ್ಟು ದಿವಸ ನಾನೂ ಮನುಷ್ಯರಿಗೆ ದೇವರಾಗಿದ್ದೇನೆ ಎಂದುಕೊಂಡಿದ್ದೆ!”

ಪಟ್ ಅಂತ ತುಪ್ಪದ ದೀಪ ಆರಿತು. ಕಂದಸ್ವಾಮಿಯ ಹೆಂಡತಿ ಕಾಫಿ ಲೋಟ ಹಾಗೂ ಬಿಸ್ಕೆಟ್ಟಿನೊಡನೆ ಅಡುಗೆ ಕೋಣೆಯಿಂದ ಬರುತ್ತಿದ್ದಳು.

(ಮುಗಿಯಿತು)

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi