ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಆಗ ನಂದಾತಾಯಿಗೆ ಮನಸ್ಸಿನಿಂದ ಮಾನಸಿಯು ಒಳ್ಳೆಯ ಹುಡುಗಿಯಾಗಿ ಕಂಡಿದ್ದಳು. ಅವಳ ಮಾತುಗಳು ಮಧುರವಾಗಿ ಕಂಡಿದ್ದವು. ಅಜ್ಜಿಯ ಬಗ್ಗೆಯೂ ಸಾಕಷ್ಟು ಪ್ರೀತಿಯಿದೆ ಎಂದೂ ಎನ್ನಿಸಿತ್ತು. ಆದರೆ ಈ ತಾಯಿ-ಮಗಳು ಇಲ್ಲೇಕೆ ಇವರನ್ನು ಕರೆದುಕೊಂಡು ಬಂದಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು. ಎಲ್ಲವೂ ಮೇಲುಮೇಲಿನ ಪ್ರೀತಿಯೆಂದೇ ಕಾಣುತ್ತದೆ ಈ ಹುಡುಗಿಯದು, ಇವಳ ತಾಯಿಯದು! ನಿಜ ಹೇಳಬೇಕೆಂದರೆ ನನಗೆ ಒಮ್ಮೊಮ್ಮೆ ಈ ವೃದ್ಧಾಶ್ರಮವನ್ನು ಮುಚ್ಚಿಬಿಡಬೇಕೆನ್ನುವ ಭಾವನೆಯೂ ಬರುತ್ತದೆ. ವೃದ್ಧಾಶ್ರಮವು ನಮ್ಮ ಸಮಾಜಕ್ಕೆ ಭೂಷಣವೂ ಅಲ್ಲ, ಅದು ಒಂದು ಗೌರವವೂ ಅಲ್ಲ. ಆದರೆ ಒಂದು ವೇಳೆ ವೃದ್ಧಾಶ್ರಮವು ಮುಚ್ಚಿಹೋದರೆ ಅಜ್ಜಿಯಂಥ ವೃದ್ಧರ ಗತಿ ಏನು? ಈ ಹೊಸ ಪೀಳಿಗೆಯ ಮೇಲೆ ಅವರಿಗೆ ಕೋಪವೂ ಬಂದಿತ್ತು. ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕುತ್ತಾರೆ. ಅವುಗಳ ಮೇಲೆ ಅತ್ಯಂತ ಹೆಚ್ಚಿನ ಪ್ರೀತಿಯನ್ನೂ ತೋರಿಸುತ್ತಾರೆ. ತಾವು ಯಾವ ಮೊದಲ ಮೆಟ್ಟಿಲಿನಿಂದ ಉನ್ನತಿಯನ್ನು ಹೊಂದಿರುತ್ತಾರೊ ಅದೇ ಮೆಟ್ಟಿಲನ್ನೇ ಮರೆತುಬಿಡುತ್ತಾರೆ! ಇದು ಎಂದಾದರೂ ಒಂದು ಬಾರಿ ಮುಕ್ತಾಯವಾಗಲೇಬೇಕು.
ಕಥೆ : ಋಣಾನುಬಂಧ | ಮರಾಠಿ : ವಿಜಯಾ ಬ್ರಾಹ್ಮಣಕರ | ಕನ್ನಡಕ್ಕೆ : ಮಾಲತಿ ಮುದಕವಿ
(ಭಾಗ 3)
ವೃದ್ಧರು ಸಾಮಾನ್ಯವಾಗಿ ತಮ್ಮನ್ನು ಭೆಟ್ಟಿಯಾಗಲು ಬರುವಂಥವರೆದುರು ಮಕ್ಕಳನ್ನು ದೂಷಿಸುತ್ತಾರೆ. ಇಂದಿನ ಮಕ್ಕಳು ತಂದೆ-ತಾಯಂದಿರನ್ನು ಪ್ರೀತಿಸುವುದಿಲ್ಲವೆಂದೂ ಹೇಳುತ್ತಾರೆ. ಆದರೆ ಮದುವೆಗಿಂತ ಮೊದಲು ಯಾವ ಮಕ್ಕಳೂ ತಮ್ಮ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವುದಿಲ್ಲ. ಎಂದಮೇಲೆ ವೃದ್ಧರನ್ನು ವೃದ್ಧಾಶ್ರಮಕ್ಕೆ ಸೇರಿಸುವುದಕ್ಕೆ ಯಾರು ಕಾರಣರು? ಆ ಮಕ್ಕಳ ಹೆಂಡಿರೇ? ಎಂದರೆ ಅವಳೂ ಮಹಿಳೆಯೇ! ಈಗ ಈ ಇಬ್ಬರೂ ಅಜ್ಜಿಯನ್ನು ಕರೆತಂದಿದ್ದಾರೆ! ಒಬ್ಬಳಿಗೆ ತಾಯಿ… ಇನ್ನೊಬ್ಬಳಿಗೆ ಅಜ್ಜಿ! ಇದರ ಅರ್ಥ ಈ ಇಬ್ಬರ ಮನದಲ್ಲೂ ಅಜ್ಜಿಯ ಬಗ್ಗೆ ಪ್ರೇಮ-ಆದರಗಳಿಲ್ಲವೇ? ಅಜ್ಜಿ ತಮಗೆ ಸಾಕಷ್ಟು ಮಾಡಿದ್ದಾರೆ ಎಂದೇನೋ ಎನ್ನುತ್ತಾಳೆ ಈ ಯುವತಿ. ಆದರೆ ಕೊನೆಯ ದಿನಗಳಲ್ಲಿ ಅವಳನ್ನು ಏಕೆ ದೂರ ಸರಿಸುತ್ತಿದ್ದಾರೆ? ಹಾಗೂ ಇನ್ನು ಎಷ್ಟು ದಿನ ಇರುವವಳಿದ್ದಾಳೆ ಈ ಅಜ್ಜಿ? ಸಂಬಂಧಿಕರ ಸೆಳೆತವು ವೃದ್ಧರ ಮನಸ್ಸಿನಲ್ಲಿ ಇರುವುದಿಲ್ಲವೇ? ಇದರ ಅರಿವೂ ಇಂದಿನ ಯುವಪೀಳಿಗೆಯಲ್ಲಿ ಯಾಕಿಲ್ಲ? ಮಕ್ಕಳಿಗೆ ಮಾತನಾಡಲು ಬರದಂಥ ಸಮಯದಲ್ಲಿ ಕೂಡ ಅವರಿಗೆ ಏನು ಬೇಕು ಎನ್ನುವುದು ತಾಯಂದಿರಿಗೆ ಅರಿವಾಗುತ್ತದೆ. ಆದರೆ ಮಾತನಾಡಲು ಅರಿತಿದ್ದರೂ ಮೂಕವಾಗಿ ವರ್ತಿಸುವ ಇಂಥವರ ಧೈರ್ಯದ ಬಗ್ಗೆ ಮಕ್ಕಳಿಗೆ ತಾಯಿಯ ವ್ಯಥೆ… ಮೊಮ್ಮಗಳಿಗೆ ಹೋಗಲಿ, ಮಗಳಿಗಾದರೂ ತಿಳಿಯಬಾರದೆ? ಈ ಮಗಳೋ, ಕೆಳಗೆ ಮುಖ ಮಾಡಿ ಕುಳಿತವಳು ಮೇಲೆ ಮುಖ ಕೂಡ ಮಾಡುತ್ತಲಿಲ್ಲ! ಈ ಮಾನಸಿಯೇ ಆಗಿನಿಂದ ಒಂದೇ ಸವನೆ ಮಾತಾಡುತ್ತಿದ್ದಾಳೆ. ಬಹುಶಃ ಈ ಯುವತಿಯ ಎದುರು ಮನಸ್ವಿನಿಯ ಆಟ ಏನೂ ನಡೆಯದೇನೋ..
“ಮಾವಶೀ..”
“ಹೂಂ.. ಹೇಳು..”
“ಫಾರ್ಮ್ ತುಂಬಬೇಕು ಅಲ್ಲಾ?”
“ಹೌದು..” ಎಂದು ಹೇಳುತ್ತ ನಂದಾತಾಯಿಯು ಟೇಬಲ್ಲಿನ ಡ್ರಾವರನ್ನು ಎಳೆದು ಒಂದು ಫಾರ್ಮನ್ನು ತೆಗೆದು, ಜೊತೆಗೆ ಪೆನ್ನು ತೆಗೆದುಕೊಂಡರು..
“ಹೂಂ.. ಹೇಳು.. ಅಜ್ಜಿಯ ಹೆಸರು..”
“ಮೀರಾ..”
“ವಯಸ್ಸು..”
“ತೊಂಬತ್ತು..”
ಹೀಗೆ ಸಾಕಷ್ಟು ಮಾಹಿತಿಗಳನ್ನು ನಂದಾತಾಯಿಯು ಕೇಳಿಕೊಂಡು ಫಾರ್ಮು ತುಂಬಿದ್ದರು.
“ನೀವೂ ನೌಕರಿ ಮಾಡತಿರೇನು?”
ಪೆನ್ನಿಗೆ ಟೋಪನ್ನನ್ನು ಸೇರಿಸುತ್ತ ಮನಸ್ವಿನಿಯ ಕಡೆಗೆ ನೋಡಿ ನಂದಾತಾಯಿಯು ಪ್ರಶ್ನಿಸಿದ್ದರು.
“ಹೌದು.. ಮಾಡ್ತಿದ್ದೆ..”
ಮನಸ್ವಿನಿಯೇ ನಸುನಕ್ಕು ಉತ್ತರಿಸಿದ್ದಳು.
“ಎಲ್ಲಿ?”
“ನಾನೂ ಟೀಚರಾಗಿದ್ದೆ..”
“ಎಲ್ಲಿ? ಪ್ರೈಮರೀನೋ”
“ಹೈಸ್ಕೂಲಿನಲ್ಲಿ.. ತಂದೆಯ ನೆನಪಿಲ್ಲ. ಆದರ ಅವ್ವನೇ ನನ್ನ ಸಣ್ಣಾಕಿದ್ದಾಗಿನಿಂದ ಬೆಳೆಸಿದಾಕಿ. ಕಲಿಸಿದಳೂ.. ನನ್ನ ಕಾಲ ಮ್ಯಾಲ ನನ್ನ ನಿಂದರೂವಂಗ ಮಾಡಿದ್ಳೂ..”
“ಅಜ್ಜಿ ಎಲ್ಲಿರತಾರ?”
“ನನ್ನ ಹತ್ತರನ ಇರತಾರ. ಸಾರೀ ನಂದಾತಾಯಿ.. ಅವ್ವಾ ನನ್ನ ಹತ್ತರ ಇರಂಗಿಲ್ಲಾ.. ನಾನೇ ಅವ್ವನ ಹತ್ರ ಇರತೇನಿ.. ಅವ್ವಂದು ಭಾಳ ದೊಡ್ಡ ಮನಿ ಇತ್ತು. ಅದನ್ನ ಮಾರಿ ನಾವು ಒಂದು ಫ್ಲ್ಯಾಟ್ ತೊಗೊಂಡೇವಿ..”
“ಈಗ ಅದೇ ಅವ್ವನ್ನ ವೃದ್ಧಾಶ್ರಮದಾಗ ಇಡಲಿಕ್ಕೆ ಹೊಂಟೀರಿ!”
ಅದಕ್ಕೆ ಉತ್ತರವಾಗಿ ಮನಸ್ವಿನಿ ಸುಮ್ಮನೆ ನಕ್ಕಿದ್ದಳು. ಎಂಥಾ ನಗುವದು! ಕಣ್ಣಲ್ಲಿ ನೀರು.. ತುಟಿಗಳಲ್ಲಿ ಶುಷ್ಕ ನಗು! ತನ್ನ ಕರವಸ್ತ್ರವನ್ನು ತೆಗೆದು ಕಣ್ಣೀರನ್ನೂ ಒರೆಸಿಕೊಂಡಿದ್ದಳು. ಮಗುವನ್ನು ಎತ್ತಿಕೊಂಡಿದ್ದ ಮಾನಸಿ ತಾಯಿಯ ಹೆಗಲ ಮೇಲೆ ಕೈಯಿರಿಸಿದ್ದಳು. ಹಾಗೆಯೇ ಅಜ್ಜಿಯೂ ಹೇಳಿದ್ದರು.
ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ಮಾಲತಿ ಮುದಕವಿ ಅನುವಾದಿಸಿದ ವಿಜಯಾ ಬ್ರಾಹ್ಮಣಕರ ಕಥೆ ‘ಋಣಾನುಬಂಧ’
“ಮನೂ, ನೀ ಹಿಂಗ ಮ್ಯಾಲಿಂದ ಮ್ಯಾಲೆ ಅಳಕೋತ ಕೂಡಬ್ಯಾಡಾ. ನಿನ್ನ ಕಷ್ಟಾ ನನಗ ಗೊತ್ತದ. ನಾ ಇಲ್ಲಿ ಇರತೇನಿ, ನೀ ಕೂಸಿನ್ನ ಕರಕೊಂಡು ಮಾನಸಿ ಕಡೆ ಹೊಗು. ನನಗ ಗೊತ್ತದ ನಿನಗ ಅಲ್ಲೂ ಸಮಾಧಾನ ಆಗಂಗಿಲ್ಲಾಂತ. ಕೆಟ್ಟನಿಸಿಕೋಬ್ಯಾಡಾ..”
ಮನಸ್ವಿನಿಯು ಕೂಡಲೇ ವಯೋವೃದ್ಧ ಅವ್ವನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡಿದ್ದಳು. ಆ ಸ್ಪರ್ಶದಲ್ಲಿ ಪ್ರೀತಿ ಇತ್ತು. ವಿಶ್ವಾಸವಿತ್ತು.
“ನೀವು ಅಜ್ಜಿನ್ನ ಇಲ್ಲಿ ಇಡೋದಕ್ಕ ಕಾರಣೇನು?”
“ನಾನು ಕೂಸಿನ್ನ ನೋಡಿಕೊಳ್ಳಿಕ್ಕೆ ಬೆಂಗಳೂರಿಗೆ ಹೋಗಬೇಕಾಗೇದ ಮಾನಸೀ ಜೊಡೀಗೆ…”
“ನಮ್ಮ ಅಜ್ಜಿಗೆ ಬೆಂಗಳೂರಿನ ಪ್ರವಾಸಾ ತಡೆಯಂಗಿಲ್ಲಾಂತ..”
ಈ ಯುವತಿ ಭಾರೀ ಜಾಣೆ. ಪರಿಸ್ಥಿತಿಯನ್ನು ಪಟ್ಟನೆ ಹಿಡಿತದಲ್ಲಿ ತೆಗೆದುಕೊಂಡು ಬಿಡುವಂಥವಳು ಎಂದುಕೊಂಡಿದ್ದರು ನಂದಾತಾಯಿ ಮನಸ್ಸಿನಲ್ಲಿಯೇ.
“ನನಗ ಏನೋ ಅಂದ್ರೇನು ಮಾವಶೀ?”
“ನಾನ? ಇಲ್ಲವಾ..”
“ಈ ತಾಯಿ ಮಗಳು ಬೆಂಗಳೂರಿಗೆ ಹೋಗ್ತಾರ, ಕೂಸಿನ್ನ ಕರಕೊಂಡು. ಕೂಸಿನ ಬಾಲಲೀಲಾ ನೋಡಿಕೋತ ಮನಸ್ವಿನಿ ಖುಶ್ಯಾಗ ಇರತಾಳ. ಇಲ್ಲೆ ಅಜ್ಜಿ ಮಗಳ ದಾರೀ ನೋಡಿಕೋತ ವೃದ್ಧಾಶ್ರಮದಾಗ ಇರವ್ರು. ಏನು ದಿನಾ ಬಂದಾವ! ಒಟ್ಟಿನ್ಯಾಗ ಮುದುಕರು ಮನಿಯೊಳಗ ಬ್ಯಾಡೇ ಬ್ಯಾಡಂತಾರ.. ಈ ಯುವ ಪೀಳಿಗಿಗೆ ವಯಸ್ಸಾದವ್ರು ಅಡ್ಡಿ ಅನಸ್ತಾರ. ಈ ಮಂದೀ ಏನ ಕಡೀತನಕಾ ಯುವಕರಾಗೇ ಇರತಾರನ್ನೂವಂಗ ಮಾಡತಾರ! ಬಹುತೇಕ ವೃದ್ಧಾಪ್ಯ ಇವರಿಗೆ ಬರಂಗೇ ಇಲ್ಲಂತನ ತಿಳದಿರತಾರ..!” ನಂದಾತಾಯಿ ಮತ್ತೆ ಮನಸ್ಸಿನಲ್ಲಿಯೇ ಎಂದುಕೊಂಡಿದ್ದರು,
“ಮಾವಶೀ, ಅಜ್ಜೀ ರೂಮು ತೋರಸತೀರೇನು?”
“ನಡೀರಿ.. ಅಜ್ಜಿನ್ನ ಕೆಳಗಿನ ಹಾಲ್‌ದಾಗನ ಇಡೋಣ. ಒಬ್ಬರಿಗೊಬ್ಬರು ಜೋಡಾಗತಾರ. ಅಲ್ಲೆ ಆರು ಕಾಟ್ ಅವ. ಒಂದು ಕಾಟ್ ಖಾಲೀನ ಅದ..”
ಮನಸ್ವಿನಿ ಎದ್ದಿದ್ದಳು. ಅಜ್ಜಿಯೂ ಎದ್ದರು. ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ಮಾನಸಿಯೂ ಎದ್ದಳು. ಆಫೀಸಿನಲ್ಲಿಂದ ಎಲ್ಲರೂ ಹೊರಬಿದ್ದಿದ್ದರು. ವರಾಂಡಾದಿಂದ ನಂದಾತಾಯಿಯ ಹಿಂದೆಯೇ ಹೊರಟಿದ್ದರು. ಅಲ್ಲಿ ಎದುರಿನ ಗೋಡೆಯ ಮೇಲೆ ಬರೆದಿತ್ತು,
“ನಾವೆಲ್ಲರೂ ಪ್ರಯಾಣಿಕರು. ದೇವರು ಒಬ್ಬ ಟ್ರಾವೆಲ್ ಏಜೆಂಟ್ ಇದ್ದಂತೆ. ಅವನು ನಮ್ಮೆಲ್ಲರ ಪ್ರಯಾಣದ ದಾರಿಗಳು, ರಿಜರ್ವೇಶನ್ನುಗಳು ಮತ್ತು ನಾವು ತಲುಪಬೇಕಾದಂಥ ಊರುಗಳನ್ನು ಆಗಲೇ ನಿಶ್ಚಯಿಸಿಬಿಟ್ಟಿರುತ್ತಾನೆ. ಆದ್ದರಿಂದ ಅವನನ್ನು ನಂಬಿರಿ. ಹಾಗೂ ಪ್ರಯಾಣದ ಆನಂದವನ್ನು ಸವಿಯಿರಿ.. ಈ ಪ್ರಯಾಣಕ್ಕೇ ಜೀವನ ಎನ್ನುತ್ತಾರೆ.”
ಮಾನಸಿಯು ಅದನ್ನು ಓದಿದ್ದಳು. ಅವಳ ಮನಸ್ಸಿನಲ್ಲಿ “ಅಜ್ಜಿಯದೂ ಇದೇ ಕೊನೆಯ ಡೆಸ್ಟಿನೇಶನ್ನೇ? ಅವ್ವನ ಡೆಸ್ಟಿನೇಶನ್ನು ಅಂತೂ ಎದುರಿಗೇ ಅದ. ನಮ್ಮ ದೃಷ್ಟಿಪಥದಲ್ಲಿಯೇ! ಮತ್ತೆ ಅಜ್ಜಿ ಹಾಗೂ ಅವ್ವನದು ಭೆಟ್ಟಿಯಾದರೂ ಆಗುವುದೋ ಇಲ್ಲವೋ” ಎಂದು ಚಿಂತಿಸುತ್ತಲಿದ್ದಳು.
“ರ‍್ರಿ.. ಇದೇ ಅಜ್ಜಿಯ ರೂಮು. ಇದು ಅವರ ಕಾಟ್..”
ನಂದಾತಾಯಿ ಹೇಳಿದ್ದರು.
ಅಜ್ಜಿಯು ರೂಮನ್ನು ನೋಡುತ್ತಲಿದ್ದರು. ಪಕ್ಕದ ಕಾಟಿನ ಮೇಲಿನ ಒಬ್ಬ ಅಜ್ಜಿಯು ಜಪಮಾಲೆಯನ್ನು ಹಿಡಿದು ಜಪ ಮಾಡುತ್ತಲಿದ್ದರು. ಆ ಕಡೆ ಇನ್ನೊಬ್ಬರು ಏನೋ ಗ್ರಂಥವನ್ನು ಓದುತ್ತಲಿದ್ದರು. ಇನ್ನೊಬ್ಬರ ಕೈಯಲ್ಲಿ ಕಾದಂಬರಿ ಇತ್ತು. ಇನ್ನೊಬ್ಬರು ಹೊರಗೆ ಹೋಗಿದ್ದರು.
“ನಾ ಕೂತ್ಕೊಳ್ಳಲೇ ಈ ಕಾಟಿನ ಮ್ಯಾಲ?”
“ಕೂತ್ಕೋಳ್ರಿ ಅಜ್ಜೀ. ಈ ಕಾಟ್, ಈ ವೃದ್ಧಾಶ್ರಮಾ ನಿಮ್ಮದೇ. ಇಲ್ಲಿಯ ಜನರು ನಿಮ್ಮ ಬಂಧುಗಳು. ನಮ್ಮ ಜನರು ದೂರ ಆದಾಗ ಇಂಥಾ ಸಂಬಂಧಗಳು ಹತ್ತರ ಇದ್ದೇ ಇರತಾವ ನಮ್ಮ ಸುಖಾ ದುಃಖಾ ವಿಚಾರಿಸಿಕೊಳ್ಲಿಕ್ಕೆ. ಈ ವೃದ್ಧಾಶ್ರಮಾ ನಿಮ್ಮದೇ ಮನೀ ಅಂತ ತಿಳಕೋಳ್ರಿ..”
ಮನಸ್ವಿನಿ ಹಾಗೂ ಮಾನಸಿಯತ್ತ ಚೂಪು ನೋಟ ಬೀರುತ್ತ ನಂದಾತಾಯಿ ಹೇಳಿದ್ದರು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ಒಣಗಿದೆಲೆಗಳ ಮೇಲೆ ಸಾವಕಾಶ ಅಡಿಯಿರಿಸಿ, ಎಂದೋ ಒಮ್ಮೆ ನೆರಳು ಕೊಟ್ಟಿದ್ದವಿವು
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi