Literature: ನೆರೆನಾಡ ನುಡಿಯೊಳಗಾಡಿ; ಮಾಲತಿ ಮುದಕವಿ ಅನುವಾದಿಸಿದ ವಿಜಯಾ ಬ್ರಾಹ್ಮಣಕರ ಕಥೆ ‘ಋಣಾನುಬಂಧ’
Vijaya Brahmankar’s Marathi Short Story : ನಂದಾತಾಯಿ ಬಂಧುಗಳೊಬ್ಬರ ಮನೆಯಲ್ಲಿದ್ದು ಶಿಕ್ಷಣ ಪೂರೈಸಿದ್ದರು. ಯಾರ ಹತ್ತಿರವಿದ್ದರೂ ಅವರಿಗೆ ಅನಾಥ ಭಾವ ಇದ್ದೇ ಇರುತ್ತಿತ್ತು. ನೌಕರಿ ಹಿಡಿದ ನಂತರ ಅವರಿಗೆ ಮದುವೆ ಬೇಡವೆನ್ನಿಸಿದ್ದಕ್ಕೆ ಕಾರಣವಿತ್ತು.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ವಿಜಯಾ ಬ್ರಾಹ್ಮಣಕರ ಮಹಾರಾಷ್ಟ್ರದ ನಾಗಪುರದವರು. ಸುಮಾರು ಇಪ್ಪತ್ತೊಂದು ಕಾದಂಬರಿಗಳನ್ನು, ಆರು ಕಥಾಸಂಕಲನಗಳನ್ನು ಪ್ರಕಟಿಸಿದ ಇವರು ಅನೇಕ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ. ಸಾಹಿತ್ಯ ಭೂಷಣ, ಸ್ಮಿತಾ ಪಾಟೀಲ್ ಪುರಸ್ಕಾರ, ವಿದರ್ಭ ಸಾಹಿತ್ಯಸಂಘ ಪುರಸ್ಕಾರ, ಪ್ರಿಯದರ್ಶಿನಿ ಪುರಸ್ಕಾರ, ರಸಿಕರಾಜ ಪುರಸ್ಕಾರ ಮುಂತಾದವು. ಇನ್ನೂ ಒಂದು ಕಥಾಸಂಕಲನ, ಮೂರು ಕಾದಂಬರಿಗಳು ಅಚ್ಚಿನಲ್ಲಿವೆ. ಋಣಾನುಬಂಧ ಪ್ರಸ್ತುತ ಕಥೆಯಲ್ಲಿ ವೃದ್ಧಾಶ್ರಮದ ಬ್ಯಾಕ್ಡ್ರಾಪ್ನೊಂದಿಗೆ ಕಥೆ ಆರಂಭವಾಗುತ್ತದೆ. ಅಜ್ಜಿ-ಮಗಳು-ಮೊಮ್ಮಗಳು ಹೀಗೆ ಮೂರು ಪೀಳಿಗೆಗಳ ಸುತ್ತ ಹೆಣೆದ ವಿಶಿಷ್ಟ ಕಥೆ ಇದು. ಇಂದಿನ ಯುವ ಪೀಳಿಗೆಯ ಬಗ್ಗೆ ಇರುವ ಕೆಲ ತಪ್ಪು ಗ್ರಹಿಕೆಗಳನ್ನು ದೂರ ಮಾಡುವಲ್ಲಿ ಈ ಕಥೆಯು ಸಫಲವಾಗಿದೆ. ಇದನ್ನು ಅನುವಾದಿಸಿದ ಮಾಲತಿ ಮುದಕವಿ ಧಾರವಾಡದವರು. ಮರಾಠಿಯ 6 ಕಾದಂಬರಿಗಳನ್ನೂ, ಒಂದು ಜೀವನಚರಿತ್ರೆಯನ್ನು ಅನುವಾದ ಮಾಡಿದ್ದಾರೆ. ಈ ಕಥೆಯು ಅವರ ‘ಮರಾಠಿಯ ಹತ್ತು ಕಥೆಗಳು’ ಎಂಬ ಅನುವಾದಿತ ಕಥಾಸಂಗ್ರಹದಲ್ಲಿ ಇದ್ದು ಇನ್ನೂ ಅಚ್ಚಿನಲ್ಲಿದೆ.
ಕಥೆ : ಋಣಾನುಬಂಧ | ಮರಾಠಿ : ವಿಜಯಾ ಬ್ರಾಹ್ಮಣಕರ | ಕನ್ನಡಕ್ಕೆ : ಮಾಲತಿ ಮುದಕವಿ
(ಭಾಗ 1)
ಬೆಳಿಗ್ಗೆ ಐದರ ಸುಮಾರಿಗೆ ಪಕ್ಷಿಗಳ ಚಿಲಿಪಿಲಿ ಪ್ರಾರಂಭವಾಗಿತ್ತು. ಶಹರದ ಗದ್ದಲದಿಂದ ಸಾಕಷ್ಟು ದೂರದಲ್ಲಿದ್ದ ಆ ವೃದ್ಧಾಶ್ರಮಕ್ಕೆ ಸಾವಕಾಶವಾಗಿ ಎಚ್ಚರವಾಗುತ್ತಿತ್ತು. ಆಕಳುಗಳ ಹಾಲು ಕರೆಯುವ ಚರಚರ ಶಬ್ದ, ಅದರೊಂದಿಗೇ ಹಾಲಿನ ದೊಡ್ಡ ಗುಂಡಿಯಲ್ಲಿ ಶೇಖರಗೊಳ್ಳುತ್ತಲಿದ್ದ ಆ ನೊರೆಹಾಲು… ಪೈಪನ್ನು ಹಚ್ಚಿ ಹೊರಗಿನ ಎಲ್ಲಾ ಹುಲ್ಲುಹಾಸಿಗೂ ನೀರು ಹಾಯಿಸುತ್ತಿರುವ ಶಬ್ದ, ಅಡುಗೆಮನೆಯಲ್ಲಿ ಪಾತ್ರೆಗಳ ಶಬ್ದ… ಇವೆಲ್ಲವೂ ಒಂದರ ಹಿಂದೊಂದು ಪ್ರಾರಂಭಗೊಳ್ಳುತ್ತಲಿದ್ದವು. ತಾಜಾ ಹಾಲಿನ ಚಹಾ ಗ್ಯಾಸಿನ ಮೇಲೆ ಕುದಿಯುತ್ತಲಿತ್ತು. ಶುಂಠಿಯನ್ನು ಜಜ್ಜಿ ಹಾಕಿದ್ದ ಆ ಚಹಾದ ಸುಗಂಧವು ಎಲ್ಲೆಡೆಗೂ ಪಸರಿಸಿತ್ತು.
“ಛೋಟೂ, ಬೆಲ್ ಮಾಡು. ಚಹಾ ರೆಡಿಯಾಗಿದೆ” ನಂದಾತಾಯಿ ಹೇಳಿದ್ದರು. ಜೊತೆಗೇ ಅಡುಗೆಮನೆಯತ್ತ ಇಣಕಿದ್ದ ಅವರು ಶೇವಂತಿಬಾಯಿಗೆ “ಚಹಾದ ಕಪ್ಪು ಒರೆಸಿ ತುಂಬಿಕೋಳಿಕ್ಕೆ ಇಡರಿ.” ಎಂದೂ ನೆನಪಿಸಿದ್ದರು.
ಛೋಟೂ ಬೆಲ್ ಮಾಡುತ್ತಿದ್ದಂತೆಯೇ ವೃದ್ಧರೆಲ್ಲರೂ ಅಡುಗೆಮನೆಯ ಟೇಬಲ್ಲಿನ ಮುಂದೆ ಬಂದು ಕೂಡ್ರತೊಡಗಿದ್ದರು. ಕೆಲವರು ಬೆಲ್ಲಿನ ದಾರಿಯನ್ನೇ ಕಾಯದೆ ಮೊದಲೇ ಬಂದು ಕುಳಿತಿದ್ದರು. ಅವರವರು ಕುಳಿತಿದ್ದ ಜಾಗಕ್ಕೇ ಒಂದು ಟ್ರೇಯಲ್ಲಿ ಬಿಸ್ಕಿಟ್ಟುಗಳು ಹಾಗೂ ಚಹಾ ತುಂಬಿದ್ದ ಕಪ್ಪುಗಳನ್ನು ಇರಿಸಿಕೊಂಡು ಬಂದು ಸರಬರಾಜು ಮಾಡಲಾಗಿತ್ತು. ಇದು ಶೇವಂತಿಬಾಯಿಯ ಕೆಲಸ. ಶೇವಂತಿಬಾಯಿಯು ಐವತ್ತರ ಮಹಿಳೆ. ಶ್ಯಾಮಲ ವರ್ಣದ, ಶಿಸ್ತಿನ ಹೆಣ್ಣುಮಗಳು. ಟೇಬಲ್ಲಿನ ಹತ್ತಿರ ನಿಂತ ನಂದಾತಾಯಿಯು ಎಲ್ಲರತ್ತ ಗಮನವಿಟ್ಟಿದ್ದರು.
ಫೆಬ್ರುವರಿ ತಿಂಗಳು ಶುರುವಾಗಿತ್ತು. ಬೆಳಗಿನ ಸಮಯ. ಹೀಗಾಗಿ ಹೆಚ್ಚಿನ ವೃದ್ಧರು ತಲೆಗೆ ಸ್ಕಾರ್ಫೋ ಅಥವಾ ಮಫ್ಲರೋ ಸುತ್ತಿಕೊಂಡೇ ಬಂದಿದ್ದರು. ಕೆಲವರು ಸ್ವೆಟರನ್ನೂ ಧರಿಸಿದ್ದರು. ಮಧ್ಯಾಹ್ನದಲ್ಲಿ ಬಿಸಿಲು ಇರುತ್ತಿದ್ದರೂ ಬೆಳಿಗ್ಗೆ ವಾತಾವರಣದಲ್ಲಿ ತಂಪು ಇರುತ್ತಿತ್ತು. ಚಹಾ ಕುಡಿದಾದ ನಂತರ ಕೆಲವರು ರೂಮಿಗೆ ಹೋಗಿದ್ದರು. ಇನ್ನು ಕೆಲವರು ಎದುರಿಗಿದ್ದ ಅಂಗಳದಲ್ಲಿ ಕುಳಿತಿದ್ದರು. ಇನ್ನೂ ಕೆಲವರು ಅಲ್ಲಿಯೇ ಸುತ್ತಲಿನ ತೋಟದಲ್ಲಿ ತಿರುಗಾಡಲು ತೊಡಗಿದ್ದರು.
ನಂದಾತಾಯಿಯು ಈಗ ಎಲ್ಲೆಡೆಗೂ ಒಂದು ರೌಂಡು ಹಾಕಲು ಹೊರಟಿದ್ದರು. ಎಲ್ಲಾ ರೂಮುಗಳಲ್ಲೂ ಇಣಕುತ್ತ ನಡೆದಿದ್ದರು. ರೂಮುಗಳಲ್ಲಿಯೇ ಉಳಿದೊಕೊಂಡಿದ್ದ ಕೆಲವರ ಆರೋಗ್ಯದ ಬಗ್ಗೆಯೂ ವಿಚಾರಿಸಿದ್ದರು.
“ಛೋಟೂ, ಅಜ್ಜಿಯ ಚಹಾ ಇಲ್ಲೇ ತೊಗೊಂಬಾ.. ಬಿಸ್ಕೀಟೂ ತೊಗೊಂಬಾ. ಆನಂತರ ಟ್ಯಾಬ್ಲೆಟ್ಟು ಕೊಡು..” “ಆಗಲಿ ಮೇಡಂ..” “ಹಾಂ.. ಇವೊತ್ತು ಎಲ್ಲಾ ಕಾಟಿನ ಮ್ಯಾಲಿನ ಬೆಡ್‌ಶೀಟ್ಸ್ ಬದಲಿ ಮಾಡು..” “ಇವತ್ತೇ ಎಲ್ಲಾ ಮಾಡೋದುಬ್ಯಾಡಾ ಮೇಡಂ.. ಇವತ್ತ ಕೆಳಗಿನ ರೂಮುಗಳದು, ನಾಳೆಗೆ ಮೇಲಿನ ರೂಮುಗಳದು ಬದಲಾಯಿಸೋಣ..” “ಹಾಂಗೇ ಮಾಡು..” “ಏನು ಕಾಕಾ, ಕಾಲು ನೋವು ಹೆಂಗದ?” “ಹೂಂ.. ಈಗೊಂದಿಷ್ಟು ಗುಣಾ ಅಕ್ಕಾ.. ಆದರೂ ನೋವು ಇರೋದೇ..”
ತಿಂಡಿಗೆ ಏನು ಮಾಡಬೇಕು ಎನ್ನುವುದನ್ನು ಶೇವಂತಿಬಾಯಿಗೆ ಹೇಳಿ ನಂದಾತಾಯಿ ಎದುರಿಗೇ ಇದ್ದ ಆಫೀಸಿನತ್ತ ತಿರುಗಿದ್ದರು. ಸ್ವಲ್ಪ ಸಮಯ ಆಫೀಸಿನಲ್ಲಿ ಕುಳಿತಿದ್ದರು. ಅಂದಿನ ಪೇಪರನ್ನು ಓದಲು ಎತ್ತಿಕೊಂಡಿದ್ದರು. ನಂದಾತಾಯಿಯು ವೃದ್ಧಾಶ್ರಮದ ಎಲ್ಲಾ ವ್ಯವಸ್ಥೆಯನ್ನೂ ನೋಡಿಕೊಳ್ಳುತ್ತಿದ್ದರು. ಬೆಳ್ಳಗಿನ ಬಣ್ಣದ ಮಂಡಿಯವರೆಗಿನ ಕೂದಲಿನ, ಹೆಚ್ಚು ಕಡಿಮೆ ಅರವತ್ತರ ಸನಿಹದ ಮಹಿಳೆ. ಅವರು ಎಲ್ಲರಿಗೂ ಆತ್ಮೀಯರು. ಅವರ ತಂದೆ-ತಾಯಿಯರು ಅವರ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಿದ್ದರು. ಬಂಧುಗಳೊಬ್ಬರ ಮನೆಯಲ್ಲಿ ಇದ್ದುಕೊಂಡು ತಮ್ಮ ಶಿಕ್ಷಣವನ್ನು ಪೂರೈಸಿದ್ದರು. ಯಾರದೇ ಹತ್ತಿರ ಇದ್ದರೂ ಅದೊಂದು ರೀತಿಯ ಅನಾಥ ಭಾವನೆ ಇದ್ದೇ ಇತ್ತು. ಅನಾಥರಂತೆ ಜೀವನ ಸಾಗಿಸಿದ್ದ ನಂದಾತಾಯಿ ತಮ್ಮ ಶಿಕ್ಷಣವನ್ನು ಪೂರೈಸಿದ ನಂತರ ನೌಕರಿಯನ್ನು ಹಿಡಿದಿದ್ದರು.
ಅನಾಥ ಜೀವನವು ಹೇಗಿರುತ್ತದೆ ಎಂಬುದು ಅವರಿಗೆ ಅರಿವಿತ್ತು. ಅದೇ ಸಮಯದಲ್ಲಿ ಈ ಸಮಾಜಸೇವೆಯ ಸುಸಂಧಿ ಅವರಿಗೆ ದೊರಕಿತ್ತು. ಆಗ ಅವರು ಆ ನೌಕರಿಯನ್ನು ಬಿಟ್ಟರು. ಈ ವೃದ್ಧಾಶ್ರಮವಂತೂ ಮೊದಲಿನಿಂದಲೇ ಅಸ್ತಿತ್ವದಲ್ಲಿ ಇತ್ತು. ಆದರೆ ಅದನ್ನು ನಡೆಸಿಕೊಂಡು ಹೋಗಲು, ಇಲ್ಲಿಯೇ ಇದ್ದು ಎಲ್ಲ ಕಡೆಗೂ ಗಮನ ಕೊಡಲು ಯಾರಾದರೂ ಬೇಕಾಗಿತ್ತು ಎನ್ನುವುದನ್ನು ನಂದಾತಾಯಿಗೆ ಯಾರೋ ಹೇಳಿದ್ದರು. ಅವರು ಆಗಲೇ ತಮ್ಮ ಹಳೆಯ ನೌಕರಿಯನ್ನು ಬಿಟ್ಟು ಇಲ್ಲಿಗೆ ಬಂದಿದ್ದರು. ಎಲ್ಲರಿಗೂ ಅಕ್ಕನಾಗಿದ್ದರು. ಎಲ್ಲಕ್ಕೂ ಮುಖ್ಯವಾದದ್ದೆಂದರೆ ಅನೇಕ ಸಂಬಂಧಗಳ ಅನುಬಂಧ ಅವರಿಗೆ ಇಲ್ಲಿ ದೊರೆತಿತ್ತು. ಅವರ ಹತ್ತಿರದ ಸಂಬಂಧಿಕರು ಅವರಿಗೆ ಬಹಳ ಹಿಂದೆ ಮದುವೆಗೆಂದು ಸಂಬಂಧಗಳನ್ನೂ ಹುಡುಕಿದ್ದರೂ ಇವರೇ ನಿರಾಕರಿಸಿದ್ದರು. ಅದಕ್ಕೆ ಕಾರಣವೆಂದರೆ ಅವರಿಗೆ ಇಂಥ ದೊಡ್ಡ ಸಂಸಾರವೇ ಹೆಚ್ಚು ಇಷ್ಟವಾಗಿತ್ತು. ಬಹಳಷ್ಟು ಅನಾಥ ವಯೋವೃದ್ಧರಿಗೆ ಆಶ್ರಯವನ್ನು ಕೊಡಬೇಕಾಗಿತ್ತು. ಇತರರಿಗಿಂತ ಬೇರೆಯಾಗಿ ಏನನ್ನೋ ಸಾಧಿಸಿ ತೋರಿಸಬೇಕಾಗಿತ್ತು. ವಿಭಿನ್ನ ರೀತಿಯಿಂದ ಜೀವಿಸಿ ತೋರಿಸಬೇಕಾಗಿತ್ತು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಸೆಲ್ವಕುಮಾರಿ ಅನುವಾದಿಸಿದ ತಮಿಳು ಕಥೆ ‘ದೇವರು ಮತ್ತು ಟೈಗರ್ ಸ್ವಾಮಿ’
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 9:40 am, Fri, 8 April 22