New Book: ಅಚ್ಚಿಗೂ ಮೊದಲು; ಜ.ನಾ. ತೇಜಶ್ರೀ ಕೃತಿ ‘ವೋಲೆ ಸೋಯಿಂಕಾ’ ವೈಷ್ಣವಿ ಪ್ರಕಾಶನದಿಂದ ಸದ್ಯದಲ್ಲೇ ಓದಿಗೆ

Wole Soyinka : ನಿದ್ದೆ ಬಾರದ ರಾತ್ರಿಗಳಲ್ಲಿ ತಾಯಿಯ ಕೋಣೆಯಿಂದ ಆಕೆ ತಿಗಣೆಗಳನ್ನು ಸೂಜಿಯಲ್ಲಿ ಸುಡುವ ಶಬ್ದ, ಸತ್ತ ತಿಗಣೆಯ ವಾಕರಿಕೆ ತರಿಸುವ ವಾಸನೆ; ಮನೆಯ ಹತ್ತಿರದ ಮಾವಿನ ಮರದಡಿಯಲ್ಲಿ ಇರುತ್ತಿದ್ದ ಹುಚ್ಚಿಯೊಬ್ಬಳು ನಡುರಾತ್ರಿಯಲ್ಲಿ ಕೂಗುವ ಶಬ್ದ...

New Book: ಅಚ್ಚಿಗೂ ಮೊದಲು; ಜ.ನಾ. ತೇಜಶ್ರೀ ಕೃತಿ ‘ವೋಲೆ ಸೋಯಿಂಕಾ’ ವೈಷ್ಣವಿ ಪ್ರಕಾಶನದಿಂದ ಸದ್ಯದಲ್ಲೇ ಓದಿಗೆ
ವೋಲೆ ಸೋಯಿಂಕಾ ಮತ್ತು ಜ. ನಾ. ತೇಜಶ್ರೀ
Follow us
ಶ್ರೀದೇವಿ ಕಳಸದ
|

Updated on: Apr 07, 2022 | 4:48 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ  ವೋಲೆ ಸೋಯಿಂಕಾ ವಾಚಿಕೆ ಆಯ್ಕೆ ಮತ್ತು ಅನುವಾದ: ಜ. ನಾ. ತೇಜಶ್ರೀ ಪುಟ: 188 ಬೆಲೆ: ರೂ. 150 ಮುಖಪುಟ ವಿನ್ಯಾಸ : ಭವ್ಯಾ ನವೀನ ಪ್ರಕಾಶನ : ವೈಷ್ಣವಿ ಪ್ರಕಾಶನ, ಕೆ. ಗುಡದಿನ್ನಿ, ರಾಯಚೂರು

‘ಸಾವು ಮತ್ತು ರಾಜನ ಕುದುರೆ ಸವಾರ’ (ದ ಡೆತ್ ಅಂಡ್ ದ ಕಿಂಗ್ಸ್ ಹಾರ್ಸ್ಮನ್” ನಾಟಕವು ‘ವೋಲೆ ಸೋಯಿಂಕಾ’ ವಾಚಿಕೆಯ ಪ್ರಮುಖ ಭಾಗ. ಈ ನಾಟಕಕ್ಕೆ ಪ್ರವೇಶಿಕೆಯಾಗಿ ಬರೆದಿರುವ ಟಿಪ್ಪಣಿಗಳಲ್ಲಿ ಸೋಯಿಂಕಾ ಈ ನಾಟಕವನ್ನು ‘ಸಂಕ್ರಮಣದ ಅಗಾಧತೆಯಿಂದ ಆವಾಹಿಸಿಕೊಂಡ ಸಂಗೀತದ ಮೂಲಕ ಮಾತ್ರ ಪೂರ್ಣವಾಗಿ ಅರ್ಥೈಸಿಕೊಳ್ಳಬಹುದು’ ಎನ್ನುತ್ತಾನೆ. ಸೋಯಿಂಕಾ ತನ್ನ ಕೃತಿಗಳಲ್ಲಿ ಅದ್ಭುತವಾದ ಸಂಗೀತದ ಮಟ್ಟುಗಳನ್ನು ಬಳಸುವುದರ ಹಿನ್ನೆಲೆಯಲ್ಲಿ ಅವನ ಬಾಲ್ಯದ ಗಾಢ ಅನುಭವಗಳಿವೆ. ತನ್ನ ಬಾಲ್ಯಕಥನ ಕೃತಿ ‘ಅಕೆ’ಯ ಒಂದು ಇಡೀ ಅಧ್ಯಾಯದಲ್ಲಿ ಶಬ್ದಗಳ ಸೂಕ್ಷ್ಮತೆಯ ಬಗೆಗೆ ಅವನು ಬರೆದಿರುವ ಮಾತುಗಳ ಗಹನತೆಯು ಮೈನವಿರೇಳಿಸುವಂತಹದ್ದು. ಇಂತಹದ್ದೆ ಇನ್ನೊಂದು ಅಧ್ಯಾಯವು ವಾಸನೆಯ ಬಗ್ಗೆಯಿದೆ. ಶಬ್ದವನ್ನು ವಾಸನೆಯೂ, ವಾಸನೆಯನ್ನು ಶಬ್ದವೂ ‘ಆಕ್ರಮಣ’ ಮಾಡುವ ಬಗೆಯನ್ನು ಸೋಯಿಂಕಾ ಬಾಲ್ಯದಿಂದಲೂ ಬೆರಗಿನಿಂದ ಅನುಭವಿಸಿದ್ದಾನೆ. ನಿದ್ದೆ ಬಾರದ ರಾತ್ರಿಗಳಲ್ಲಿ ತಾಯಿಯ ಕೋಣೆಯಿಂದ ಆಕೆ ತಿಗಣೆಗಳನ್ನು ಸೂಜಿಯಲ್ಲಿ ಸುಡುವ ಶಬ್ದ, ಸತ್ತ ತಿಗಣೆಯ ವಾಕರಿಕೆ ತರಿಸುವ ವಾಸನೆ; ಮನೆಯ ಹತ್ತಿರದ ಮಾವಿನ ಮರದಡಿಯಲ್ಲಿ ಇರುತ್ತಿದ್ದ ಹುಚ್ಚಿಯೊಬ್ಬಳು ನಡುರಾತ್ರಿಯಲ್ಲಿ ಕೂಗುವ ಶಬ್ದ; ಚರ್ಚಿನಿಂದ ಕೇಳಿಬರುತ್ತಿದ್ದ ಗುಂಪುಹಾಡುಗಾರಿಕೆಗೆ ಪ್ರತಿಸ್ಪರ್ಧಿಗಳಂತೆ ಕಿರುಚುತ್ತಿದ್ದ ಹುಳಗಳು; ಬೆಳಗಿನ ಹೊತ್ತು ಬೀದಿಯಲ್ಲಿ ರಾಗವಾಗಿ ಕೂಗುತ್ತ ಸಾಗುವ ವ್ಯಾಪಾರಿಗಳು ಇತ್ಯಾದಿ ಅನುಭವಗಳ ಮೂಲಕ ಸೋಯಿಂಕಾ ವಸ್ತು ಮತ್ತು ವ್ಯಕ್ತಿಗಳ ನಡುವಿನ ಭೌತಿಕ ಸಂಬಂಧದ ‘ಹೊಸಭಾಷೆ’ ಕಲಿತದ್ದಾಗಿ ಹೇಳುತ್ತಾನೆ.

1975ರಲ್ಲಿ ಪ್ರಕಟಗೊಂಡ ‘Death and the King’s Horseman’ ನಾಟಕ ರಚನೆಯ ಹಿನ್ನೆಲೆಯಲ್ಲಿದ್ದ ಅನುಭವವನ್ನು ಸೋಯಿಂಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ: 1970ರ ದಶಕದ ಮಧ್ಯಭಾಗದಲ್ಲಿ ಅವನು ಕೇಂಬ್ರಿಡ್ಜ್​ನ ಚರ್ಚಿಲ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ. ಆ ಕಾಲೇಜಿನ ಮೆಟ್ಟಿಲುಗಳ ಕೆಳಭಾಗದ ಜಾಗದಲ್ಲಿ ವಿನ್‌ಸ್ಟನ್ ಚರ್ಚಿಲ್‌ರ ಪ್ರತಿಮೆಯಿಟ್ಟಿದ್ದರಂತೆ. ಪ್ರತಿದಿನ ಮೆಟ್ಟಿಲುಗಳನ್ನು ಇಳಿದು ಬರುವಾಗ ಸೋಯಿಂಕಾಗೆ ಬ್ರಿಟಿಷ್ ವಸಹಾತುಶಾಯಿಯ ‘ಬುಲ್‌ಡಾಗ್’ ಆಗಿದ್ದ ಚರ್ಚಿಲ್ಲನ ಪ್ರತಿಮೆಯನ್ನು ತಳ್ಳುವ ಮತ್ತು ಅದು ಬಿದ್ದು ಒಡೆಯುವುದನ್ನು ನೋಡುವ ಬಯಕೆ ತೀವ್ರವಾಗಿತ್ತಂತೆ. ಅವನು ಹಾಗೇನೂ ಮಾಡದಿದ್ದರೂ ತನ್ನೊಳಗಿದ್ದ ಈ ಪ್ರತಿಭಟನೆಯ ಭಾವನೆಯು ಅನೇಕ ನಾಟಕಗಳು, ಕಾದಂಬರಿಗಳು ಮತ್ತು ಕವನ ರಚನೆಗೆ ಪೂರಕ ‘ತಂತ್ರಕೌಶಲ’ವಾಗಿ ಕೆಲಸ ಮಾಡಿದೆ ಎನ್ನುತ್ತಾನೆ.

1976ರಲ್ಲಿ ಚಿಕಾಗೋನಲ್ಲಿ ಮತ್ತು 1978ರಲ್ಲಿ ನ್ಯೂಯಾರ್ಕ್​ನಲ್ಲಿ ಸ್ವತಃ ಸೋಯಿಂಕಾನೆ ಈ ನಾಟಕಗಳನ್ನು ನಿರ್ದೇಶಿಸಿದ. ಚಿಕಾಗೋನಲ್ಲಿ ನಾಟಕ ಸಿದ್ಧತೆಯ ಸಂದರ್ಭದಲ್ಲಿ ಎರಡು ವಾರಗಳ ಕಾಲ ಅಭ್ಯಾಸದಲ್ಲಿ ತೊಡಗಿದ್ದ ನಟಿಯೊಬ್ಬಳು, ಪಠ್ಯವನ್ನು ಗ್ರಹಿಸಲು ಆಗಲಿಲ್ಲವೆಂದು ಹೇಳಿ ಮಧ್ಯದಲ್ಲೆ ಬಿಟ್ಟುಹೋದ ಸಂದರ್ಭವನ್ನು ಸೋಯಿಂಕಾ ಒಂದು ಸಂದರ್ಶನದಲ್ಲಿ ನೆನಪಿಸಿಕೊಳ್ಳುತ್ತಾನೆ. ಉಳಿದ ಆಫ್ರಿಕಾ-ಅಮೆರಿಕಾ ಕಲಾವಿದರಿಗೂ ಕೂಡ ತಮ್ಮ ಪೂರ್ವಜರ ನಾಡಿನ ಬಗ್ಗೆ ಏನೂ ತಿಳಿದಿರಲಿಲ್ಲವೆಂದು ಅವನು ಬೇಸರದಿಂದ ಹೇಳುತ್ತಾನೆ. ಯಾಕೆಂದರೆ ಅವರ‍್ಯಾರಿಗೂ ಆಫ್ರಿಕಾದವರಂತೆ ನರ್ತಿಸಲು ಬರುತ್ತಿರಲಿಲ್ಲವಂತೆ. ಹೀಗೆಂದು ಅವನು ಆ ನಟ-ನಟಿಯರಿಗೆ ಹೇಳಿದಾಗ ಅವರು ಅದನ್ನು ತಮಗಾದ ದೊಡ್ಡ ಅವಮಾನ ಎಂದರಂತೆ. ಆ ಕಲಾವಿದರಿಗೆ ಯೊರೂಬಾ ನೈಜೀರಿಯನ್ನರ ಹಾಗೆ ದೇಹಚಲನೆ ಹೇಳಿಕೊಡುವ ಹೊತ್ತಿಗೆ ಸೋಯಿಂಕಾ ಮತ್ತು ಅವನ ನೃತ್ಯನಿರ್ದೇಶಕನಿಗೆ ‘ತಮ್ಮ ದೇಹವನ್ನು ಚಿಕ್ಕಚಿಕ್ಕ ಭಾಗಗಳಾಗಿ ಕತ್ತರಿಸಿಕೊಂಡು, ಮತ್ತೆ ಅದನ್ನು ಮೊದಲಿನಂತೆ ಜೋಡಿಸಿಕೊಂಡ’ ಅನುಭವವಾಯಿತಂತೆ.

ಇದನ್ನೂ ಓದಿ : Book Release: ಅಚ್ಚಿಗೂ ಮೊದಲು; ‘ಮೌನದೊಳಗೊಂದು ಅಂತರ್ಧಾನ’ ನಾಗರೇಖಾ ಕಥಾಸಂಕಲನ ಏ.3ರಂದು ಬಿಡುಗಡೆ

‘ಥಿಯೇಟರ್ ಇನ್ ಆಫ್ರಿಕನ್ ಟ್ರೆಡಿಶನಲ್ ಕರ್ಲ್ಸ್​: ಸರ್ವೈವಲ್ ಪ್ಯಾಟ್ರನ್ಸ್’ ಎನ್ನುವ ಪ್ರಬಂಧದಲ್ಲಿ ಶೋಯಿಂಕಾ ಹೊರಗಿನ ಆಕ್ರಮಣಶೀಲ ಶಕ್ತಿಗಳಿಂದ ವಿನಾಶ ಹೊಂದದೆ ಬದುಕುಳಿಯುವ ಸಂಸ್ಕೃತಿಯ ಪ್ರಯತ್ನದಲ್ಲಿ ನಾಟಕ ಅಥವಾ ರಂಗಭೂಮಿಯು ಅತಿ ಮುಖ್ಯ ಪಾತ್ರ ವಹಿಸುತ್ತದೆ ಎನ್ನುತ್ತಾನೆ. ರಂಗಭೂಮಿಯು ಅತ್ಯಂತ ಕ್ರಾಂತಿಕಾರಿ ಕಲಾಪ್ರಕಾರ ಎಂಬುದು ಅವನ ನಿಲುವು ಮತ್ತು ನಂಬಿಕೆ. ಕಾದಂಬರಿಗಳು, ಕವಿತೆಗಳು, ಹಲವಾರು ಪ್ರಬಂಧಗಳನ್ನು ಬರೆದಿದ್ದರೂ ಸೋಯಿಂಕಾ ತನ್ನನ್ನು ತಾನು ನಾಟಕಕಾರನೆಂದೇ ಗುರುತಿಸಿಕೊಳ್ಳುತ್ತಾನೆ. ರಂಗಭೂಮಿಗಿರುವ ‘ಸ್ವ-ಮಾರ್ಪಾಡಿ’ನ ಗುಣ, ‘ಚಲನಶೀಲ ಶಕ್ತಿ’, ‘ಮಾಂತ್ರಿಕತೆ’ಗಳು ಸೋಯಿಂಕಾನಿಗೆ ಇಷ್ಟ. ಈ ಗುಣಗಳೆಲ್ಲ ಒಟ್ಟಾರೆಯಾಗಿ ನಾಟಕ ಪ್ರಕಾರಕ್ಕೆ ಸಾಮಾಜಿಕತೆಯ ಗುಣವನ್ನು ತಂದುಕೊಡುತ್ತದೆಂಬುದು ಸೋಯಿಂಕಾನ ನಂಬಿಕೆ. ಜೊತೆಗೆ ಕಾಲದ ಅಗತ್ಯಕ್ಕೆ ಅನುಗುಣವಾಗಿ ಮಾರ್ಪಾಡಾಗುವ ನಾಟಕ ಮಾಧ್ಯಮದ ಗುಣವು ಅವನನ್ನು ನಾಟಕಕಾರನಾಗಿ ರೂಪಿಸಿದೆಯೆಂದು ಹೇಳುತ್ತಾನೆ.

1960ರ ದಶಕದಲ್ಲಿ ಸೋಯಿಂಕಾ ಕಟ್ಟಿದ ‘ದ 1960 ಮಾರ್ಕ್ಸ್​’ ಮತ್ತು ‘ಒರಿಸುನ್ ಥಿಯೇಟರ್ ಕಂಪನಿ’ಯ ನಂತರ 1980ರ ದಶಕದಲ್ಲಿ ಅವನು ‘ಗೆರಿಲ್ಲಾ ಯೂನಿಟ್’ ಎಂಬ ನಾಟಕ ತಂಡವನ್ನು ಕಟ್ಟಿ ಬೀದಿನಾಟಕಗಳನ್ನು ಮಾಡಿಸಿದ. ಈ ತಂಡದ ಉದ್ದೇಶವೆ ನೈಜೀರಿಯಾದ ಪ್ರಾದೇಶಿಕ ಸಮುದಾಯಗಳ ಜೊತೆ ಕೆಲಸ ಮಾಡುವುದರ ಮೂಲಕ ಅವರ ಸಮಸ್ಯೆಗಳನ್ನು ಅರಿಯುತ್ತ ಅವರ ಸಂಕಟಗಳನ್ನು ರಂಗಭೂಮಿಯ ಮೇಲೆ ಅಭಿವ್ಯಕ್ತಿಗೊಳಿಸುವುದು ಹಾಗೂ ಮನುಷ್ಯನ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು.

ಸೋಯಿಂಕಾ ಯಾವುದೇ ಸಂಗತಿಯನ್ನೂ ಅದರ ಬಹುಸ್ತರದ ಗುಣದೊಂದಿಗೆ ನೋಡುತ್ತಾನೆ ಮತ್ತು ಹಾಗೆ ನೋಡುವುದೇ ಅವನು ವ್ಯಕ್ತಿ, ಕುಟುಂಬ, ಸಮುದಾಯ ಮತ್ತು ವಿಶ್ವದ ‘ವ್ಯವಸ್ಥೆ’ಯನ್ನು ಕಾಪಾಡುವ ಕ್ರಮವೂ ಹೌದು. ಹಾಗೂ ಈ ಅಂಶವೇ ಅವನ ಕೃತಿಯ ಸಂಕೀರ್ಣತೆ ಮತ್ತು ತೀವ್ರತೆಯನ್ನು ನಿರ್ಧರಿಸುವ ಸಂಗತಿಯೂ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ‘ದ ಡೆತ್ ಅಂತ್ ದ ಕಿಂಗ್ಸ್ ಹಾರ್ಸ್ಮನ್’ ಕೃತಿಯ ಬಗೆಗೆ ಪ್ರಪಂಚದೆಲ್ಲೆಡೆ ವಿಶೇಷ ಆಸಕ್ತಿ ಮೂಡುತ್ತಿರುವ ಬಗ್ಗೆ ಸೋಯಿಂಕಾನನ್ನು ಕೇಳಿದಾಗ ಸಂದರ್ಶನದಲ್ಲಿ ಅವನು, ‘ಹೀಗೆ ನಲವತ್ತು ವರ್ಷಗಳ ನಂತರ ಕೃತಿಯೊಂದು ಮರುಹುಟ್ಟು ಪಡೆಯುತ್ತಿರುವ ಹಿಂದಿನ ಸಾಧ್ಯತೆಯ ಮುಖ್ಯ ಕಾರಣಗಳಲ್ಲಿ ಅರಬ್ ದೇಶಗಳಲ್ಲಿ ಹೆಚ್ಚುತ್ತಿರುವ ಸಿಡಿಗುಂಡುಗಳನ್ನು ಕಟ್ಟಿಕೊಂಡು ಆತ್ಮಹತ್ಯೆ (ಸೂಸೈಡ್ ಬಾಂಬಿಂಗ್) ಮಾಡಿಕೊಳ್ಳುತ್ತಿರುವ ಪ್ರಕರಣಗಳು ಒಂದು. ಈ ನಾಟಕದಲ್ಲಿನ ಸಾರಥಿಯ ಆತ್ಮಹತ್ಯೆಯಂತೆಯೆ ‘ಬಾಂಬು ಆತ್ಮಹತ್ಯಾಕಾರರು’ ಪಾಶ್ಚಾತ್ಯರಲ್ಲಿ ದಿಗ್ಭ್ರಮೆ ಹುಟ್ಟಿಸುತ್ತಿದ್ದಾರೆ. ಎರಡೂ ಸಂದರ್ಭಗಳು ಪೂರ್ಣವಾಗಿ ಬೇರೆಬೇರೆಯಾಗಿದ್ದರೂ ಅಂತಿಮ ಆತ್ಮಹತ್ಯಾ ಕ್ರಿಯೆಯಲ್ಲಿ ನಾವು ಕಾಣುವ ನಿಷ್ಠೆ ಮಾತ್ರ ಒಂದೇ ಆಗಿದೆ’ ಎಂದಿದ್ದಾನೆ. ಮುಂದುವರೆದು, ‘ಇಂತಹ ‘ಸಿಡಿಗುಂಡು ಆತ್ಮಹತ್ಯಾಕಾರ’ರ ಸಂತಾನ ಬೆಳೆಯುತ್ತಿರುವುದರ ಹಿಂದೆ ಏನೋ ಕಾರಣವಿರಬೇಕು, ಹಾಗಾಗಿ ಈ ನಾಟಕ ಈಗ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಆ ನಿರ್ಣಾಯಕ ಗಳಿಗೆಯ ಬಗೆಗೆ ಜನರನ್ನು ಪ್ರಶ್ನಿಸುವಂತೆ ಮಾಡುತ್ತಿದೆ’ ಎನ್ನುತ್ತಾನೆ ಸೋಯಿಂಕಾ. *

ಈ ಕೃತಿಯ ಖರೀದಿಗೆ ಸಂಪರ್ಕಿಸಿ : 9620170027

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ‘ಸೃಷ್ಟಿಯು ಸೃಷ್ಟಿಯನ್ನೇ ಮುಟ್ಟುವ ಆ ಗಳಿಗೆ ಏನಾಗಿತ್ತು’

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್