AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Book Release: ಅಚ್ಚಿಗೂ ಮೊದಲು; ‘ಮೌನದೊಳಗೊಂದು ಅಂತರ್ಧಾನ’ ನಾಗರೇಖಾ ಕಥಾಸಂಕಲನ ಏ.3ರಂದು ಬಿಡುಗಡೆ

Story Writing : ಕತೆಗಳು ನನ್ನೊಳಗೆ ಹೊರಗಿಂದ ಬಂದು ಜೀವ ತಳೆಯುವವೋ ಅಥವಾ ಈ ಮೊದಲೇ ಅವು ಗಟ್ಟಿ ಬೇರೂರಿ ನೀರು ಮತ್ತು ಮಣ್ಣಿಗಾಗಿ ಕಾಯುತ್ತಿದ್ದವೋ ಗೊತ್ತಿಲ್ಲ. ಕವಿತೆ ಬರೆಯುವಾಗ ನಡೆಸುವ ಸಣ್ಣಸಣ್ಣ ಮರುತಿದ್ದುವಿಕೆಯನ್ನು ಕತೆಯಲ್ಲಿ ಪಾತ್ರ ಮಾಡುವುದಿಲ್ಲ.

Book Release: ಅಚ್ಚಿಗೂ ಮೊದಲು; ‘ಮೌನದೊಳಗೊಂದು ಅಂತರ್ಧಾನ’ ನಾಗರೇಖಾ ಕಥಾಸಂಕಲನ ಏ.3ರಂದು ಬಿಡುಗಡೆ
ಲೇಖಕಿ ನಾಗರೇಖಾ ಗಾಂವಕರ
ಶ್ರೀದೇವಿ ಕಳಸದ
|

Updated on:Mar 29, 2022 | 12:23 PM

Share

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ : ಮೌನದೊಳಗೊಂದು ಅಂತರ್ಧಾನ (ಕಥಾ ಸಂಕಲನ) ಲೇಖಕಿ : ನಾಗರೇಖಾ ಗಾಂವಕರ ಪುಟ : 128 ಬೆಲೆ : ರೂ. 100 ಮುಖಪುಟ ವಿನ್ಯಾಸ : ಅಜಿತ ಕೌಂಡಿಣ್ಯ, ಶಿಡ್ಲಘಟ್ಟ ಪ್ರಕಾಶನ : ಎಸ್ ಎಲ್​ ಎನ್​ ಪಬ್ಲಿಕೇಷನ್ಸ್, ಬೆಂಗಳೂರು

ಕರ್ನಾಟಕ ಸಂಘ, ಅಂಕೋಲಾ ಇವರ ಆಶ್ರಯದಲ್ಲಿ ಈ ಕೃತಿ ಏಪ್ರಿಲ್ 3ರಂದು ಅಂಕೋಲೆಯ ಕನ್ನಡ ಭವನದಲ್ಲಿ ಬೆಳಗ್ಗೆ 10ಕ್ಕೆ ಬಿಡುಗಡೆಗೊಳ್ಳಲಿದೆ. 

ಹೊಸ ಕಾಲದ ಲೇಖಕಿಯರ ಸಾಹಿತ್ಯ ರಚನೆಯಲ್ಲಿ ಆತ್ಮವಿಮರ್ಶೆ ಮತ್ತು ಆತ್ಮವಿಶ್ವಾಸ ಎರಡೂ ಗುಣಗಳನ್ನು ಕಾಣಬಹುದಾಗಿದೆ. ಸ್ತ್ರೀಯರಿಗೇ ವಿಶಿಷ್ಟವಾದ ಅನುಭವ ಮತ್ತು ಹೊಸ ಸಂವೇದನೆಯಿಂದ ಬರೆಯುತ್ತಿರುವ ಜಾಗ್ರತ ಲೇಖಕಿಯರು ‘ಮಹಿಳಾ ಸಾಹಿತ್ಯ’ ಎಂಬ ರಿಯಾಯಿತಿಯನ್ನೊ ಮೀಸಲಾತಿಯನ್ನೊ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷ ಕಟ್ಟಿಕೊಟ್ಟ ವ್ಯಕ್ತಿತ್ವವನ್ನು ಕಳಚಿಕೊಂಡು ತನ್ನ ಅಂತಃಸತ್ವವನ್ನು ರೂಪಿಸಿಕೊಂಡಿದ್ದಾರೆ ಮತ್ತು ಕಥನ ನಿರೂಪಣೆಯಲ್ಲಿ ಸ್ತ್ರೀಯರು ಮಾತ್ರ ಕಾಣಬಹುದಾದ ಹೊಸ ಜೀವನಸತ್ಯದ ದರ್ಶನವನ್ನು ಸಮರ್ಥವಾಗಿ ಶೋಧಿಸುವ ಯತ್ನದಲ್ಲಿದ್ದಾರೆ. ಭಿನ್ನ ಸಾಂಸ್ಕೃತಿಕ ಹಿನ್ನಲೆಯಿಂದ ಬಂದ ಅವರ ರಚನೆಗಳು ವೈವಿಧ್ಯತೆಯಿಂದ ಸಮೃದ್ಧವಾಗಿವೆ. ಈ ಪೈಕಿ ನಾಗರೇಖಾ ಗಾಂವಕರ ಗಮನ ಸೆಳೆಯುತ್ತಾರೆ. ಕಥಾಭಾಷೆಯನ್ನು ಒಲಿಸಿಕೊಂಡ ನಾಗರೇಖಾ ಅವರಿಗೆ ಅವರದೇ ಆದ ಅನನ್ಯ ಕಥನ ಪ್ರಪಂಚವಿದೆ. ಸೈದ್ಧಾಂತಿಕ ಓದನ್ನು ಭಾರಗೊಳಿಸದೆ, ಜನಪ್ರಿಯ ವಿವಾದಗಳ ಪ್ರಲೋಭನೆಯ ಅಪಾಯಕ್ಕೆ ಗುರಿಯಾಗದೆ ತನ್ನೊಳಗೆ ಕಥೆಯಾಗಲು ಹವಣಿಸುತ್ತಿರುವ ಮುಗ್ಧ ಪ್ರಪಂಚದ ಅನುಭವ ಪಾವಿತ್ರ್ಯವನ್ನು ಜತನದಿಂದ ಕಾಪಾಡಿಕೊಂಡು ಅವರು ಇನ್ನಷ್ಟು ಒಳ್ಳೆಯ ಕಥೆಗಳನ್ನು ಕನ್ನಡಕ್ಕೆ ನೀಡಬಲ್ಲರು ಎಂಬ ನಂಬಿಕೆಯನ್ನು ಈ ಸಂಕಲನ ಗಟ್ಟಿಗೊಳಿಸುತ್ತದೆ. ಶ್ರೀಧರ ಬಳಗಾರ, ಕಥೆಗಾರ

ಮೊದಮೊದಲು ಕವಿತೆಗಳನ್ನು ಮಾತ್ರ ಬರೆಯುತ್ತಿದ್ದೆ. ಆದರೆ ಕ್ರಮೇಣ ಕತೆಯ ಕಡೆ ನನಗರಿವಿಲ್ಲದೇ ನಡೆದ ನನ್ನ ನಡಿಗೆ ಇಂದು ಸಂಕಲನವೊಂದನ್ನು ತರುವಷ್ಟರ ಮಟ್ಟಿಗೆ ಬಂದಿದೆ. ಕತೆಗಳು ನನ್ನೊಳಗೆ ಹೊರಗಿಂದ ಬಂದು ಜೀವ ತಳೆಯುವವೋ ಅಥವಾ ಈ ಮೊದಲೇ ಅವು ಗಟ್ಟಿ ಬೇರೂರಿ ನೀರು ಮತ್ತು ಮಣ್ಣಿಗಾಗಿ ಕಾಯುತ್ತಿದ್ದವೋ ಗೊತ್ತಿಲ್ಲ. ಕವಿತೆ ಬರೆಯುವಾಗ ನಡೆಸುವ ಸಣ್ಣಸಣ್ಣ ಮರುತಿದ್ದುವಿಕೆಯನ್ನು ಕತೆಯಲ್ಲಿ ಪಾತ್ರ ಮಾಡುವುದಿಲ್ಲ. ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಮನಸ್ಸಿನ ಅಂತರ್ಗತ ಒಳಜಗತ್ತು ಮತ್ತು ಅದು ಹುದುಗಿಸಿಕೊಂಡಿರುವ ಅದುಮಿಕೊಂಡಿರುವ ಕೆಲವು ಬಾರಿ ಸ್ವತಃ ಅರ್ಥೈಸಲಾಗದ ವಿಚಾರಗಳು, ಭಾವಗಳು ಸಂವೇದನೆಗಳನ್ನು ಸೃಷ್ಟಿಸುತ್ತಲೇ, ಅಕ್ಷರಗಳಾಗಿ ಮೂಡಿ ವ್ಯಕ್ತವಾಗಿಯೂ, ಅವ್ಯಕ್ತವಾಗುಳಿಯುತ್ತವೆ. ಒಬ್ಬ ವ್ಯಕ್ತಿಯ ಒಂದಿಡೀ ವ್ಯಕ್ತಿತ್ವವೆಂದರೆ ತನ್ನ ಸ್ವಂತ ಅನುಭವ ಮತ್ತು ಪರರ ಅನುಭವಗಳಿಂದ ಪಡೆದ ಜ್ಞಾನ ಸಂತೋಷ, ಬಂಧಗಳಲ್ಲಿಯ ಗಾಢತೆ, ನೋವು, ದುಃಖಗಳು ಪಡೆದುಕೊಂಡ ಹೆಮ್ಮೆ ಕಳೆದುಕೊಳ್ಳುವ ಭಯ ಕಾಡುವ ಆಂತಃಪ್ರಜ್ಞೆ ಸಂಬಂಧಗಳಲ್ಲಿಯ ಗೋಜಲು, ಇವೆಲ್ಲವೂ ನನ್ನ ನಿತ್ಯ ಕಾಡುವ ಸಂಗತಿಗಳು. ಹಾಗಾಗಿ ನನಗೆ ಬದುಕನ್ನು ಬಿಟ್ಟು, ಬರೆಯಲಾಗಲೇ ಇಲ್ಲ. ಕಾಲ್ಪನಿಕತೆಯ ನೆಲೆಯನ್ನು ಸೃಷ್ಟಿಸಿಕೊಂಡಷ್ಟು ಕತೆಗಳು ಉದುರಿಬಿದ್ದವು. ನಾಗರೇಖಾ ಗಾಂವಕರ, ಕವಿ, ಅನುವಾದಕಿ, ಲೇಖಕಿ

‘ದೊಂಗ’ ಕಥೆಯ ಆಯ್ದ ಭಾಗ

“ಕೇಳ್ಸಕಂತೇ ಇಂವೇ ಏನೆ? ಗುತ್ತಾಗಿದೇ ನಿಂಗಿದು?” ರುಕ್ಕು ಹೆಂಡತಿ ಮತ್ತೊಮ್ಮೆ ಒತ್ತಿ ಹೇಳಿದಳು. ಅಷ್ಟೊತ್ತೂ ದಾರಿಯಲ್ಲಿ ರಸ್ತೆಯ ಉದ್ದಕ್ಕೂ ಓಡಿಓಡಿ ಹೋಗುವ ಬಿಸಿಲು, ಹಾಗೆ ಅದರ ಹಿಂದೆ ಹಿಂದೆ ನಡೆಯುವ ನೆರಳು ನೋಡುತ್ತಾ ಬರುತ್ತಿದ್ದ ವೆಂಕಮ್ಮನ ದಡಕ್ಕನೆ ಯಾರೋ ದೂಡಿದಂತಾಯ್ತು. “ಹಾಂ. ದೊಡ್ಡವ್ವಿ, ಕೇಳ್ಸಕಂತಿವೆ.. ಪಾಪ ದೊಂಗಣ್ಣ! ಮಾದೇವಕ್ಕ ಹಿಂಗೇ ಮಾಡುಕಿಲ್ಲಾಗಿತು. ನಾಮೇಲ್ಲಾ ಇಲ್ವೇ? ಇಂವ ನನ್ನ ಗಂಡಾ ಏನ ತಂದ ಹಾಕ್ತಿನೇ. ಆದ್ರೂ ನಾನೇ ಒಡೆದಿರ ಮನೀಗೇ ಹೋಗಿ ದುಡಿದೇ, ಕೆಲಸ ಮಾಡೇ ಸಾಂಕ್ತಿವೇ ಮಕ್ಕಳ್ನಾ! ಪಾಪ ಅನ್ಸತಿದು ಅಲ್ವೇನೇ? ದೊಂಗಣ್ಣಗೇ ಈಗೇ ಯಾರ ಬೇಯ್ಸಿ ಹಾಕ್ತಿರೇ? “ ಅಣ್ಣನೊಬ್ಬನ ಕುಟುಂಬ ಹಳ್ಳಹಿಡಿದಾಗ ಪರಿತಪಿಸುವ ತಂಗಿಯ ಕಳಕಳಿ ಧ್ವನಿಯಲ್ಲಿತ್ತು.

ಅಷ್ಟೊತ್ತಿಗೆ ದೊಂಗನೆ ಅವರಿಗೆ ಎದುರಾಗಿದ್ದ. ಇವರನ್ನು ಗುರುತಿಸಲೂ ಇಲ್ಲ. ತನ್ನದೇ ಗೊಣಗಾಟದಲ್ಲಿ ಮೈ ಪರಚಿಕೊಳ್ಳುತ್ತಾ ಹಿಂದೆ ಒಮ್ಮೆ ತಿರುಗಿ, ತನ್ನ ಬೆನ್ನು ನೋಡಲು ಪ್ರಯತ್ನಿಸುವವನಂತೆ ಮಾಡಿದ. ಆಗದೆ ಇದ್ದಾಗ ಸಮೀಪದ ಸಂಕದಕಟ್ಟೆಗೆ ಬೆನ್ನನ್ನು ಒಮ್ಮೆ ಜೋರಾಗಿ ತಿಕ್ಕಿದ. ಮೈಮೇಲಿದ್ದ ಎಂದೋ ಒಗೆದ ಪಂಚೆಯನ್ನು ಎರಡೂ ಕೈಯಲ್ಲಿ ಬೆನ್ನಿಗೆ ಹಿಂಬದಿಯಿಂದ ಹಿಡಿದು ಒರೆಸಿಕೊಂಡಂತೆ ಮಾಡಿದ. ಮತ್ತೆ ಮುಂದೆ ನಡೆದ. ಆತ ಮನೆ ಬಿಟ್ಟು ಹೀಗೆ ಎಲ್ಲೆಲ್ಲೋ ತಿರುಗುತ್ತಿದ್ದರೆ ಮೂವರು ಗಂಡು ಮಕ್ಕಳು ಆಗಾಗ ಹಿಡಿದು ಕರೆತಂದು ಗಡ್ಡ ತೆಗೆದು ಕೂದಲು ಕತ್ತರಿಸಿ, ಸ್ನಾನ ಮಾಡಿಸುತ್ತಿದ್ದರು. ಗಂಡು ಮಕ್ಕಳೆ ಕೈ ಸುಟ್ಟುಕೊಂಡು ಅಡಿಗೆ ಮಾಡಿ ಉಣ್ಣುತ್ತಿದ್ದರೆ, ಕೇರಿಯ ಹೆಣ್ಣು ಮಕ್ಕಳು ಹಳಹಳಿಸಿಕೊಂಡು ಹೊತ್ತಲ್ಲದ ಹೊತ್ತಿಗೂ ಆ ಮನೆಯ ಸುದ್ದಿ ಶುರುವಾದರೆ ಬಿಟ್ಟಬಾಯ್ ಬಿಟ್ಟು ಕೇಳುತ್ತಿದ್ದರು.

ಇದನ್ನೂ ಓದಿ : New Book: ಅಚ್ಚಿಗೂ ಮೊದಲು; ‘ಕೆಂಪು’ ಅರ್ಪಣ ಎಚ್ಎಸ್​ ಕಥಾ ಸಂಕಲನ ಸದ್ಯದಲ್ಲೇ ನಿಮ್ಮ ಓದಿಗೆ

ಮೊದಲೆಲ್ಲಾ ದೊಂಗ ಬಹಳ ಖುಷಿಖುಷಿಯಲ್ಲಿ ಇರುವ ಮನುಷ್ಯ. ಕೆಲಸವಿಲ್ಲದ ದಿನಗಳಲ್ಲಿ ಅಂಗಡಿಯ ಚಿಟ್ಟಿ (ಕಟ್ಟೆ) ಮ್ಯಾಲೆ ಕೂತು ಸಂಜೆಯಾಗುವುದನ್ನೇ ಕಾಯ್ತಿದ್ದ. ಅವನು ಕುಡಿದರೂ ಹೆಚ್ಚು ಕುಡಿಯುತ್ತಿರಲಿಲ್ಲ. ಒಂದೇ ಕೊಟ್ಟೆ  (ಪಾಕೀಟು) ಬಾಯಿಗೆ ಹಾಕಿಕೊಳ್ಳುವವ. ಅವನಿಗೆ ಬೇಕು… ಆದರೆ ತಲೆಗೇರುವತನಕ ಕುಡಿಯುತ್ತಿರಲಿಲ್ಲ. ಒಂದಿಷ್ಟು ನಶೆಯೇರಿ ಹುಚ್ಚುಹುಚ್ಚು ಮಾತನಾಡಲು ಆಗುವಷ್ಟು. ಬೆಳಿಗ್ಗೆಯಿಂದ ಸಂಜೆವರೆಗೂ ಬೊಂಡ (ಎಳನೀರು) ಕೀಳುವ ಕೆಲಸಕ್ಕೆ ಹೋಗ್ತಾ ಅಂವ. ತೆಂಗಿನಮರ ಹತ್ತಲು ಕಾಲಿಗೆ ಹೊಸ ನಮೂನೆಯ ಕಬ್ಬಿಣದ ಸಲಕರಣೆ ಸರಕಾರ ಕೊಟ್ಟರೂ ಅದು ಅವನಿಗೆ ಆಗಿ ಬಂದಿರಲಿಲ್ಲ. ತಾನೇ ಸ್ವತಃ ಹೆಣೆದ ತೆಂಗಿನ ನಾರಿನ ಕತ್ತದಬಳ್ಳಿಯೇ ಅವನಿಗೆ ಸರಿ. ಮರ ಹತ್ತಿಹತ್ತಿ ಅವನ ಕಾಲುಗಳು ದುಂಕ (ಡೊಂಕು) ಆಗಿದ್ದು, ದೊಂಗ ಎಂಬ ಹೆಸರಿಗೂ ಸರಿ ಆಯ್ತು ಅನ್ನುವವರಿಗೆಲ್ಲ ಅವನದು ಒಂದೇ ಉತ್ತರವಾಗಿತ್ತು, “ಹೌದ್ರಾ ನಮ್ಮಪ್ಪನ ಕಾಲೂ ಹಿಂಗೇ ಇತ್ತ ಕಣ್ರಾ. ಮರ ಹತ್ತಿ ಆದದ್ದಲ್ಲಾ ಅದು. ನಮ್ಮವ್ವಿ ಹೇಳ್ತಿತ್ತು” ಎನ್ನುತ್ತಿದ್ದ.

ತೀರಾ ಸಾವಧಾನಿಯೂ ಅಲ್ಲದ, ಹಾಗೆಂದು ಬಹಳ ಚಾಲಾಕಿಯೂ ಅಲ್ಲದ ಅವನಿಗೆ ಸಾಲಾಗಿ ಗಂಡು ಮೂರು ಹುಟ್ಟಿದಾಗ ಹೆಣ್ಣು ಮಗಳಿಗಾಗಿ ಆಸೆಪಟ್ಟಿದ್ದ. ಅವನ ಹೆಂಡತಿ ಮಾದೇವಿ. ಆಕೆ ಕೇರಿಗೆಲ್ಲ ಸ್ವಲ್ಪ ಜಾಸ್ತಿ ಎನ್ನುವಷ್ಟು ಸುಂದರಿ. ಒಂದಿಷ್ಟು ಗ್ಲಾಮರಾಗಿ ಕಂಡಾಗಲೆಲ್ಲಾ ಹತ್ತಿರ ಹೋದರೆ ಹಾವು ಮೆಟ್ಟಿದಂತೆ ದೂರ ಹೋಗುತ್ತಿದ್ದಳು ಇತ್ತಿತ್ತಲಾಗಿ. ಅದು ಅವನಿಗೆ ಬಿಸಿತುಪ್ಪ ಆಗಿತ್ತು. ಒಂದಿಷ್ಟು ಹೆಚ್ಚೇ ಕುಡಿದು ಇವಳಿಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದ. ಆದರೆ ಕುಡಿದಾಗಲೂ ಅವನಿಗೆ ಧೈರ್ಯವಿರಲಿಲ್ಲ. ಯಾಕೆಂದರೆ ಆಕೆ ನಾಲ್ಕನೇ ಕ್ಲಾಸು ಕಲಿತವಳು. ಓದುಬರಹ ಬಲ್ಲಿದಳು. ಅವಳವ್ವ ಮದುವೆ ಮಾಡಿಕೊಡುವಾಗಲೇ ಮಾದೇವಿಯ ಧೈರ್ಯ, ಬುದ್ಧಿವಂತಿಕೆ ಎಲ್ಲವನ್ನೂ ದುಪ್ಪಟ್ಟು ವರ್ಣಿಸಿದ್ದ ಕಾರಣವೋ, ಆತನ ಮನದಲ್ಲಿ ಮಾದೇವಿ ಬಗ್ಗೆ ಒಂದು ರೀತಿಯ ಭಯ ಮನೆ ಮಾಡಿಕೊಂಡಿತ್ತು.

(ಪೂರ್ಣ ಓದಿಗೆ ಮತ್ತು ಪುಸ್ತಕದ ಖರೀದಿಗಾಗಿ ಸಂಪರ್ಕಿಸಿ : 9845986473)

ಇದನ್ನೂ ಓದಿ : Book Release: ಅಚ್ಚಿಗೂ ಮೊದಲು; ಶ್ರದ್ಧಾಳು, ತನ್ಮಯಿ, ಹಟಮಾರಿ, ಪ್ರತಿಭಾವಂತ, ನಿಸ್ವಾರ್ಥಿ ಚನ್ನಕೇಶವ 

Published On - 12:11 pm, Tue, 29 March 22

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ