Literature: ನೆರೆನಾಡ ನುಡಿಯೊಳಗಾಡಿ; ನನಗಂತೂ ಏಡಿ ತುಂಬಾ ಇಷ್ಟ, ನಿನಗೆ?

|

Updated on: Feb 25, 2022 | 4:02 PM

Food : ‘ಇಂಥ ಶಕ್ತಿಗಳು ಕೆಲವರಿಗೆ ಸಹಜವಾಗಿಯೇ ಒಲಿದಿರುತ್ತವೆ, ಊಟವು ಜನರು ತಿಳಿದಿರುವುದಕ್ಕಿಂತ ತುಂಬಾ ಪ್ರಮುಖವಾದ ವಿಷಯ. ನಿನಗೂ ಒಳ್ಳೆಯ ಊಟ ಉಣ್ಣುವ ಭಾಗ್ಯ ಬಂತು ನೋಡು.’

Literature: ನೆರೆನಾಡ ನುಡಿಯೊಳಗಾಡಿ; ನನಗಂತೂ ಏಡಿ ತುಂಬಾ ಇಷ್ಟ, ನಿನಗೆ?
ಹರುಕಿ ಮುರಕಾಮಿ ಮತ್ತು ರವಿಕುಮಾರ ಹಂಪಿ
Follow us on

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಒಳಗೆ ಕುಳಿತುಕೊಂಡ ಅವರಿಗೆ ಆ ರೆಸ್ಟೊರೆಂಟ್ ‘ಏಡಿಯ ತಿಂಡಿ’ಗಳಿಗೆ ಪ್ರಸಿದ್ಧ ಎಂದು ತಿಳಿಯಿತು. ಮೆನು ಕಾರ್ಡ್ ಇಂಗ್ಲೀಷ್ ಮತ್ತು ಚೀನಿ ಭಾಷೆಯಲ್ಲಿತ್ತು. ಅಲ್ಲಿನ ಎಲ್ಲ ಗಿರಾಕಿಗಳು ಸ್ಥಳೀಯರಾಗಿದ್ದು, ಬೆಲೆಗಳೂ ಕಡಿಮೆಯಾಗಿದ್ದವು. ಮೆನು ನೋಡಿದರೆ ಸಿಂಗಾಪೂರ್ ಹತ್ತಾರು ವಿಧದ ಏಡಿಯ ತಿನಿಸುಗಳನ್ನು ಪ್ರೋತ್ಸಾಹಿಸುತ್ತದೆ ಎಂದು ತಿಳಿಯುತ್ತಿತ್ತು. ಏನಿಲ್ಲವೆಂದರೂ ಹತ್ತಾರು ಜಾತಿಯ ಏಡಿಗಳನ್ನು ಬಳಸಿ ಮಾಡಿದ ಕನಿಷ್ಟ ನೂರು ಬಗೆಯ ತಿನಿಸುಗಳ ಹೆಸರುಗಳು ಅದರಲ್ಲಿದ್ದವು. ಆ ಯುವಜೋಡಿಗಳು ಸಿಂಗಾಪೂರ್ ಬಿಯರ್‌ಗೆ ಆರ್ಡರ್ ಮಾಡಿ, ಮೆನುವಿನಿಂದ ನಾಲ್ಕಾರು ಬಗೆಯ ಏಡಿಯ ತಿನಿಸುಗಳನ್ನು ಆಯ್ಕೆ ಮಾಡಿ ತರಲು ತಿಳಿಸಿದರು. ತಂದಿಟ್ಟ ಊಟ ತುಸು ಹೆಚ್ಚೇ ಅನ್ನಿಸುವಷ್ಟಿದ್ದು, ಅಡುಗೆಗೆ ಫ್ರೆಶ್ ಮತ್ತು ಉತ್ತಮ ಮಸಾಲೆ ಸಾಮಗ್ರಿ ಬಳಸಿದ್ದರೂ ರೇಟು ಕಡಿಮೆಯೇ ಇತ್ತು.

ಕಥೆ : ಕ್ರ್ಯಾಬ್ಸ್​ | ಮೂಲ : ಹರುಕಿ ಮುರಾಕಮಿ | ಕನ್ನಡಕ್ಕೆ : ರವಿಕುಮಾರ ಹಂಪಿ

*

(ಭಾಗ 2)

‘ಊಟ ನಿಜಕ್ಕೂ ಚೆನ್ನಾಗಿದೆ’ ಯುವಕ ಹೇಳಿದ.

‘ನೋಡಿದೆಯಾ, ನಾನು ನಿನಗೆ ಮೊದಲೇ ಹೇಳಿರಲಿಲ್ಲವೇ? ನನ್ನ ಆರನೇ ಇಂದ್ರಿಯ ಉತ್ತಮ ರೆಸ್ಟೊರೆಂಟ್​ಗಳ ಬಗ್ಗೆ ತಿಳಿಸುತ್ತದೆ ಎಂದು, ಈಗಲಾದರೂ ನನ್ನನ್ನು ನಂಬುತ್ತಿಯಾ?’

‘ಹ್ಞಾಂ, ಈಗಂತೂ ಒಪ್ಪದೆ ವಿಧಿಯಿಲ್ಲ’ ಯುವಕ ಒಪ್ಪಿಕೊಂಡ.

‘ಇಂಥ ಶಕ್ತಿಗಳು ಕೆಲವರಿಗೆ ಸಹಜವಾಗಿಯೇ ಒಲಿದಿರುತ್ತವೆ, ಊಟವು ಜನರು ತಿಳಿದಿರುವುದಕ್ಕಿಂತ ತುಂಬಾ ಪ್ರಮುಖವಾದ ವಿಷಯ. ನಿನಗೂ ಒಳ್ಳೆಯ ಊಟ ಉಣ್ಣುವ ಭಾಗ್ಯ ಬಂತು ನೋಡು. ಹೊರಗಡೆ ಯೋಚಿಸುತ್ತ ನಿಂತಾಗ, ನಿನ್ನ ಆಯ್ಕೆಯ ಮೇಲೆ ನಿನ್ನ ಅದೃಷ್ಟ ಬದಲಾಗಬಹುದಾದ ಸಾಧ್ಯತೆ ಇತ್ತು, ಇದು ಒಳ್ಳೆಯ ರೆಸ್ಟೊರೆಂಟ್​ ಇದ್ದಿರಬಹುದು ಅಥವಾ ಕೆಟ್ಟದ್ದು. ಈಗ ಹೇಳು ನೀನು ಇಲ್ಲಿಯೇ ಇರಲು ಇಚ್ಛಿಸುತ್ತೀಯಾ ಅಥವಾ ಮತ್ತೆಲ್ಲಾದರೂ ಹೋಗಲು’

‘ತುಂಬಾ ಚೆನ್ನಾಗಿದೆ, ಅಂತೆಯೇ ನಿನ್ನ ಮಾತು ಕೇಳಿದರೆ, ಬದುಕೂ ತುಸು ಭಯಾನಕ ಅನಿಸುತ್ತಿದೆ.’

‘ನೀನು ಸರಿಯಾಗಿ ಹೇಳಿದಿ ನೋಡು, ಬದುಕು ನಾವು ಕಲ್ಪನೆ ಮಾಡಿಕೊಳ್ಳುವುದಕ್ಕಿಂತಲೂ ಭಯಾನಕವಾಗಿದೆ’ ಅನ್ನುತ್ತ ತನ್ನ ತುಂಟ ಬೆರಳನ್ನು ತೋರಿಸುತ್ತ ತಮಾಷೆ ಮಾಡಿದಳು.

ಯುವಕ ತಲೆ ಅಲ್ಲಾಡಿಸುತ್ತ ‘ಮತ್ತೆ, ಇಲ್ಲದಿದ್ದರೆ ನಾವು ಹೇಗೆ ಈ ರೆಸ್ಟೊರೆಂಟ್​ನ ಒಳಗೆ ಬರುತ್ತಿದ್ದೆವು? ಅಲ್ಲ?’

‘ನೀನು ಹೇಳಿದ್ದು ಸರಿ’

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ’ಮಾರ್ಫಾ, ಓ ಮಾರ್ಫಾ ಯಾರ ಜೊತೆ ನೀ ಚುಂಬನ ಚೆಲ್ಲಾಟ ನಡೆಸಿದ್ದೀ?’

‘ಅದೆಲ್ಲ ಇರಲಿ, ನಿನಗೆ ಏಡಿ ಇಷ್ಟವಾಗುತ್ತ?’ ಯುವಕ ತುಸು ಅನ್ಯಮನಸ್ಕನಾಗಿ ಕೇಳಿದ

‘ಮ್, ನನಗಂತೂ ತುಂಬಾ ಇಷ್ಟ, ಐ ಲವ್ ಕ್ರ್ಯಾಬ್ ಟೂ ಮಚ್, ನಿನ್ನ ಬಗ್ಗೆ ಹೇಳು?’

‘ನನಗೂ ತುಂಬ ಇಷ್ಟ, ಪ್ರತಿದಿನ ಏಡಿ ತಿಂದರೂ ಬೇಜಾರಾಗುವುದಿಲ್ಲ’

‘ಹಾಗಾದರೆ ನಮ್ಮಿಬ್ಬರ ನಡುವೆ ಮತ್ತೊಂದು ಸಮಾನ ಅಂಶ ಇರುವುದು ತಿಳಿದಂತಾಯಿತು’ ಯುವತಿ ನಗುತ್ತ ಹೇಳಿದಳು.

ಯುವಕನೂ ಮನಸಾರೆ ನಕ್ಕ. ಇಬ್ಬರೂ ಬಿಯರ್ ಗ್ಲಾಸ್‌ಗಳನ್ನು ಖಾಲಿ ಮಾಡಿದರು.

‘ನಾವು ನಾಳೆಯೂ ಇಲ್ಲಿಗೇ ಬರೋಣ’ ಯುವತಿ ಹೇಳಿದಳು. ‘ಪ್ರಪಂಚದಲ್ಲಿ ಇಂಥ ಸ್ಥಳಗಳು ಸಿಕ್ಕುವುದು ತುಂಬಾ ಕಡಿಮೆ, ನೋಡಲ್ಲಿ, ಎಷ್ಟೊಂದು ರುಚಿಕರ ತಿಂಡಿಗಳು, ಅದೂ ಇಷ್ಟು ಕಡಿಮೆ ದರದಲ್ಲಿ’

*

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಪ್ರತಿಕ್ರಿಯೆಗಾಗಿ : tv9kannadadigital@gmail.com

*

ಭಾಗ 1  : Literature : ನೆರೆನಾಡ ನುಡಿಯೊಳಗಾಡಿ: ಹರುಕಿ ಮುರಾಕಮಿ ಬರೆದ ಕಥೆ 

Published On - 2:19 pm, Fri, 25 February 22