Dr. Veena Shanteshwar: ‘ನಮ್ಮ ಮನೆಗಳಲ್ಲಿ ಅಗಸರ ಕತ್ತೆ ಇಲ್ಲ’ ಎದೆ ಮುಟ್ಟಿಕೊಂಡು ಹೇಳಿಬಿಡಿ ಒಮ್ಮೆ!
Middle Class Woman : ‘ವಿದ್ಯಾವಂತೆ, ಬುದ್ಧಿವಂತೆ, ಉದ್ಯೋಗಸ್ಥೆಯಾದರೂ ಮಧ್ಯಮ ವರ್ಗದ ಹೆಣ್ಣಿನ ವಿಷಯದಲ್ಲಿ ಬಿಡುಗಡೆ ಎನ್ನುವುದು ಸುಳ್ಳೇ ಎಂಬುದಕ್ಕೆ ದೊಡ್ಡ ಉಪಮೆಯಂತೆ ಈ ಕಥೆ.’
ಡಾ. ವೀಣಾ ಶಾಂತೇಶ್ವರ | Dr. Veena Shanteshwar : ಭಾರತದ ಪ್ರಸ್ತುತ ಸಂದರ್ಭದಲ್ಲಿ ವೀಣಾ ಇಂದು ಬಹುಮುಖ್ಯ ಲೇಖಕಿ. ಹೆಣ್ಣನ್ನು ಚಿತ್ರಿಸುವ ಭಾಷೆ, ಅವಳ ಒಳಮನಸ್ಸನ್ನು ನಿರ್ಭಿಡೆಯಿಂದ ಬಿಚ್ಚಿಡುವ ರೀತಿ, ಗಂಡಸನ್ನು ವರ್ಣಿಸುವ ಕ್ರಮ, ಲೈಂಗಿಕತೆಯ ವಿವರಗಳನ್ನು ನಿರೂಪಿಸುವ ಸೂಕ್ಷ್ಮತೆ… ಹೀಗೆ ಯಾವ ಸಂಗತಿಯೂ ಇರಬಹುದು ಅದಕ್ಕೆ ಬೇಕಾದ ಸನ್ನದ್ಧ ಸ್ಥಿತಿ ಇದೆಯಲ್ಲ ಅದು ವೀಣಾ ಅವರಲ್ಲಿದೆ. ಅದು ಅವರ ಸಾಧನೆ. ಈವತ್ತಿಗೂ ಹೆಣ್ಣು ಬರೆದರೆ ಬೋಲ್ಡ್, ಗಂಡು ಬರೆದರೆ ಪ್ರಾಮಾಣಿಕ ಎಂಬ ಧೋರಣೆಯೇ ಇದೆ. ಈ ಹಿನ್ನೆಲೆಯಲ್ಲಿ ಗಂಡಸಿನ ಅಹಂಕಾರ, ಗಂಡಸಿನ ಆತ್ಮವಂಚನೆ, ಗಂಡಸಿನ ಕ್ರೌರ್ಯ ಏನಿದೆಯಲ್ಲ ಇದನ್ನೆಲ್ಲ ವೀಣಾ ಅವರ ಹಾಗೆ ಪ್ರಶ್ನಿಸಿದವರು ಬಹಳ ಕಡಿಮೆ. ಅವರ ‘ಬಿಡುಗಡೆ’ ಕಥಾನಾಯಕಿಯನ್ನೇ ಗಮನಿಸಿ. ವಿದ್ಯಾವಂತೆ, ಬುದ್ಧಿವಂತೆ, ಉದ್ಯೋಗಸ್ಥೆ. ಈ ಮೂರು ವಿಷಯಗಳಿಂದಾಗಿ ಹೆಣ್ಣಿಗೆ ಬಿಡುಗಡೆ ಸಿಗಬಹುದು ಎಂದು ನಾವು ಅಂದುಕೊಳ್ಳಲು ಹೋದರೆ ಹುಸಿಬೀಳುತ್ತೇವೆ. ಮಧ್ಯಮ ವರ್ಗದ ಹೆಣ್ಣಿನ ವಿಷಯದಲ್ಲಿ ಆರ್ಥಿಕ ಸ್ವಾವಲಂಬಿತನವಿದ್ದರೂ ಬಿಡುಗಡೆ ಎನ್ನುವುದು ಸುಳ್ಳೇ ಎಂಬುದಕ್ಕೆ ದೊಡ್ಡ ಉಪಮೆಯಂತೆ ಈ ಕಥೆ ಅನಾವರಣಗೊಂಡಿದೆ. ಡಾ. ಎಂ. ಎಸ್. ಆಶಾದೇವಿ. ವಿಮರ್ಶಕಿ
*
(ಭಾಗ 5)
ಈ ಕಥೆಯಲ್ಲಿ, ಗಂಡ ತನ್ನನ್ನ ಅರ್ಥ ಮಾಡಿಕೊಳ್ಳುತ್ತಾನೆ. ತನ್ನ ಆಯ್ಕೆ ಮತ್ತು ಅವಕಾಶವನ್ನು ಗೌರವಿಸುತ್ತಾನೆ ಎಂದು ನಾಯಕಿ ತಿಳಿದುಕೊಳ್ಳುತ್ತಾಳೆ. ಆದರೆ ಬದುಕಿನುದ್ದಕ್ಕೂ ಆಕೆಗೆ ಗೊತ್ತಾಗುವುದು ಏನೆಂದರೆ, ನನ್ನ ಉದ್ಯೋಗ, ಸಂಬಳ, ವಿದ್ಯಾಭ್ಯಾಸದಿಂದಾಗಿ ಎಲ್ಲದರಲ್ಲಿಯೂ ತಾನು ದುಡಿಯೋ ಕತ್ತೆ ಆಗಿದ್ದೆನೇ ಹೊರತು ಬೇರೆ ಏನೂ ಅಲ್ಲ. ನನಗೆ ಬೇಕಾಗಿದ್ದದ್ದು ನನ್ನನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ. ಆದರೆ ನನ್ನ ಗಂಡನಿಗೆ ಬೇಕಾಗಿದ್ದದ್ದು ಹೊರಗೂ ಒಳಗೂ ದುಡಿಯುವ ಒಬ್ಬ ಆಳು. ಈ ವಿಷಯ ಅವಳಿಗೆ ಕ್ರಮೇಣ ಗೊತ್ತಾಗುತ್ತಾ ಹೋಗುತ್ತದೆ. ಅನಾರೋಗ್ಯದಲ್ಲಿಯೂ ಆಕೆ ಮನೆಗೆಲಸ ಮಾಡುತ್ತಲೇ ಇರಬೇಕು. ಆಫೀಸಿನಲ್ಲಿ ಬೇರೆ ಗಂಡಸರೊಂದಿಗೆ ಮಾತನಾಡಬಾರದು. ಸಂಬಳವನ್ನೆಲ್ಲ ಅವನಿಗೆ ಕೊಡಬೇಕು. ತನ್ನ ಖರ್ಚಿಗೂ ಆಕೆ ಅವನೆದುರು ಕೈಯೊಡ್ಡಿ ನಿಲ್ಲಬೇಕು. ಆದರೆ, ಅವನ ಸ್ವಾತಂತ್ರ್ಯಕ್ಕೆ ಮಾತ್ರ ಯಾವ ಧಕ್ಕೆಯೂ ಬರಬಾರದು! ಈ ಕಥೆಯಲ್ಲಿ ನಾಯಕಿ ನಿಜಕ್ಕೂ ಅಗಸರ ಕತ್ತೆಯೇ ಆಗಿಬಿಟ್ಟಿರುತ್ತಾಳೆ.
ಹೀಗಿದ್ದರೂ ಆಕೆ ವಿಚ್ಛೇದನ ತೆಗೆದುಕೊಳ್ಳುವುದಿಲ್ಲ. ಇನ್ನೇನುಳಿದಿರುತ್ತದೆ? ಮಕ್ಕಳಿಗಾಗಿ ಹೊಂದಾಣಿಕೆ. ಆದರೆ ಒಂದು ದಿನ ತನ್ನನ್ನು ಹೊರಗೂ ಒಳಗೂ ಹಣ್ಣಣ್ಣು ಮಾಡಿದ ಗಂಡ ಒಂದು ಸತ್ತುಹೋಗುತ್ತಾನೆ. ಶಾಕ್ಗೆ ಒಳಗಾಗಬಾರದೆಂದು ತನ್ನ ಮಕ್ಕಳು ಮಂಪರಿನ ಇಂಜೆಕ್ಷನ್ ಕೊಡಿಸುತ್ತಾರೆ. ಆಗ ಬೀಳುವ ಕನಸಿದೆಯಲ್ಲಾ… ಆ ಕನಸಿನಲ್ಲಿ ಗಂಡ ತಾನೇ ಹೋಗಿ ಉಪ್ಪಿಟ್ಟು ಮಾಡಲು ರವೆ ಹುಡುಕುವುದು, ರಾಣೀಸಾಹೇಬರೇ ಈವತ್ತಾದರೂ ಬಿಸಿಬಿಸಿ ಉಪ್ಪಿಟ್ಟು ತಿನ್ನಿರಿ ಎಂದು ಅವಳಿದ್ದಲ್ಲಿಗೇ ತಂದುಕೊಡುವುದು, ಬೆಳದಿಂಗಳ ರಾತ್ರಿಯಲ್ಲಿ ಕುರ್ಚಿ ಹಾಕಿ ಕರೆಯುವುದು, ಕಾಟನ್ ಸೀರೆ ನಿನಗಿಷ್ಟ ಅಲ್ಲವೇ? ತಗೋ ಎನ್ನುವುದು, ದಿನಾ ಏನು ಅಡುಗೆ ಮಾಡುತ್ತೀ? ಹೋಟೆಲ್ಗೆ ಹೋಗೋಣ ಎನ್ನುವುದು.
ಭಾಗ 1 : Dr. Veena Shanteshwar : ತಾನು ಲೋಕವಿರೋಧಿ ಆಗುತ್ತೇನೆ ಎಂದು ಗೊತ್ತಿದ್ದೂ ವೀಣಾ ಇಂಥ ಪ್ರಯೋಗ ನಡೆಸಿದರು
ಮಂಪರಿನಿಂದ ಹೊರಬರುತ್ತಿದ್ದಂತೆ ಎದ್ದು ಅಡುಗೆಮನೆಗೆ ಹೋಗಿ ಹಾಲಿಗೆ ಸಕ್ಕರೆ ಹಾಕಿಕೊಂಡು ಗಟಗಟ ಕುಡಿದು ನಂತರ ಗಂಡನ ಶವದ ಪಕ್ಕ ಬಂದು ಕೂರುವುದಿದೆಯಲ್ಲ… ಅಬ್ಬಾ ಎಂಥ ಪ್ರತಿರೋಧವದು! ಈ ಕಥೆ ಪ್ರಕಟವಾದಾಗ ಕರ್ನಾಟಕದ ಅದೆಷ್ಟೋ ಹೆಣ್ಣುಮಕ್ಕಳು ಪತ್ರ ಬರೆದು, ಫೋನ್ ಮಾಡಿ, ನಮ್ಮ ಮನೆಯ ಕಥೆ ನಿಮಗೆ ಹೇಗೆ ಗೊತ್ತಾಯಿತು ಎಂದು ವೀಣಾ ಅವರನ್ನು ಕೇಳಿದ್ದಿದೆ. ಇಂಥ ಸಾಮಾನ್ಯರ ಒಳನಾಡಿಗಳನ್ನು ಸ್ಪರ್ಶಿಸುವ ವಿಶಿಷ್ಟ ಸಂವೇದನೆ ಅವರದು. ಇದೆಲ್ಲ ಗಮನಿಸಿದಾಗ, ಈಗಾಗಲೇ ಕೆಲ ಪ್ರಶಸ್ತಿಗಳು ಬಂದಿದ್ದರೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರನ್ನು ನಿಲ್ಲಿಸಬೇಕಾಗಿತ್ತಲ್ಲವಾ?
ಹೈಸ್ಕೂಲು ದಿನಗಳಿಂದಲೇ ಇವರ ಕಥೆಯ ಬೆನ್ನಿಗೆ ಬಿದ್ದ ನನಗೆ, ಯಾವತ್ತೂ ವೀಣಾ ಸ್ತ್ರೀಚೈತನ್ಯದ ಭಾಷ್ಯ. ಮುಂದಿನ ಜನ್ಮದಿನ ಬರುವುದರೊಳಗೆ ಅವರು ಒಂದು ಕಾದಂಬರಿಯೋ, ಒಂದಿಷ್ಟು ಕಥೆಗಳನ್ನೋ ಬರೆಯಲೇಬೇಕೆಂದು ಆಶಿಸುತ್ತೇನೆ. ಧಾರವಾಡಕ್ಕೆ ಹೋದಾಗೆಲ್ಲ, ತವರಿಗೆ ಬಂದ ಮಗಳಿಗೆ ಹೇಳುವಂತೆ, ‘ನೀ ಕೂಡ, ನಾ ಮಾಡ್ತೀನಂತ’ ಎಂದು ಅಡುಗೆಮನೆಗೆ ಓಡುವ ಅಮ್ಮನಂತೆಯೇ ಅವರು ಸದಾ.
ವೀಣಾ ಮೇಡಮ್, ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ.
(ಮುಗಿಯಿತು)
ಪ್ರತಿಕ್ರಿಯೆಗಾಗಿ : tv9kannadadigital@gmail.com
*
ವೀಣಾ ಶಾಂತೇಶ್ವರ ಕುರಿತು ಎಲ್ಲ ಬರಹಗಳನ್ನು ಮತ್ತು ಸಂದರ್ಶನವನ್ನು ಇಲ್ಲಿ ಓದಿ : https://tv9kannada.com/tag/dr-veena-shanteshwar
Published On - 5:07 pm, Thu, 24 February 22