ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಮತ್ತೆ ನಿಧಾನಕ್ಕೆ ಟಾಯ್ಲೆಟ್‌ನಲ್ಲಿ ವಾಂತಿ ಮಾಡಿಕೊಂಡಿದ್ದ ಏಡಿ ಮಾಂಸದ ಮುದ್ದೆಯೆಡೆಗೆ ನೋಡಿದಾಗ, ಅದು ಮೆಲ್ಲಗೆ ಚಲಿಸುತ್ತಿರುವಂತೆ ಕಂಡಿತು. ಮೊದಮೊದಲಿಗೆ ತನಗೆ ಚಂದ್ರನ ಆ ಮಬ್ಬು ಬೆಳಕು ಭ್ರಮೆ ಮೂಡಿಸುತ್ತಿದೆ ಅನ್ನಿಸಿತು. ಚಂದ್ರನಿಗೆ ಅಡ್ಡವಾಗಿ ಮೋಡಗಳು ಬಂದಾಗ ರೂಮಿನಲ್ಲಿ ಮೊದಲಿಗಿಂತ ಹೆಚ್ಚು ಕತ್ತಲಾವರಿಸಿತು. ಅವನು ಕಣ್ಮುಚ್ಚಿ ದೀರ್ಘ ಉಸಿರೆಳೆದುಕೊಂಡು ನೋಡಿದ. ಮಾಂಸದಮುದ್ದೆ ಚಲಿಸುತ್ತಿರುವುದು ಅವನ ಭ್ರಮೆಯಾಗಿರಲಿಲ್ಲ. ಏಡಿಯ ಬಿಳಿ ಮಾಂಸದ ಆ ಮುದ್ದೆಯು ನಿಧಾನ ಚಲಿಸುತ್ತಿತ್ತು. ತಿರುವಿತಿರುವಿ ಮುದ್ದೆ ಮಾಡಿದಂತಿದ್ದ ಆ ಮಾಂಸದ ಮುದ್ದೆ ಮಿಸುಕಾಡಿದಂತೆ ಕಂಡಿತು. ನಿಧಾನ ಎದ್ದು ಬಾತ್‌ರೂಮ್ ಲೈಟ್‌ನ ಸ್ವಿಚ್ ಹಾಕಿ ಬೆಳಕಿನಲ್ಲಿ ನೋಡಿದಾಗ ಆ ಮಾಂಸದ ಮುದ್ದೆಯ ತುಂಬ ಹುಳುಗಳು ತುಂಬಿಕೊಂಡು ಮಿಸುಕಾಡುತ್ತಿದ್ದವು. ಮಿಲಿಯನ್‌ಗಟ್ಟಲೆ ಬಿಳಿ ಬಣ್ಣದ ಹುಳುಗಳು ಏಡಿ ಮಾಂಸದ ತುಂಬ ಮುಕುರಿದ್ದವು.
ಕಥೆ : ಕ್ರ್ಯಾಬ್ಸ್ | ಮೂಲ : ಹರುಕಿ ಮುರಾಕಮಿ | ಕನ್ನಡಕ್ಕೆ : ರವಿಕುಮಾರ ಹಂಪಿ
*
(ಭಾಗ 4)
ಅದನ್ನು ನೋಡಿದೊಡನೆ ಅವನಿಗೆ ಮತ್ತೆ ವಾಂತಿಯಾಯಿತು. ಹೊಟ್ಟೆಯೊಳಗಿನದೆಲ್ಲ ಮೊದಲೇ ಖಾಲಿಯಾಗಿದ್ದರಿಂದ ಹೊಟ್ಟೆ ಬೆನ್ನಿಗೆ ಅಂಟಿಕೊಂಡಿತು ನಂತರ ಕಹಿ ಹಳದಿರಸ ಹೊರಗೆ ಬಂದು ಅದು ಅವನ ಶಕ್ತಿ ಕುಂದಿಸಿತು. ತಕ್ಷಣ ಮೌತ್‌ವಾಶ್ ಬಾಯಿಗೆ ಸುರುವಿಕೊಂಡು ಬಾಯಿ ಮುಕ್ಕಳಿಸಿದ. ಸಿಂಕು ತೊಳೆದವನೇ ಹಲ್ಲುಜ್ಜಿ, ತನ್ನ ಬಾಯಿಯನ್ನೂ ಮುಖವನ್ನೂ ಎರಡೆರಡು ಬಾರಿ ತೊಳೆದುಕೊಂಡು ಟವೇಲಿನಿಂದ ಉಜ್ಜಿಕೊಂಡ. ನಿತ್ರಾಣದಿಂದ ಸಿಂಕ್ ಹಿಡಿದುಕೊಂಡು ತನ್ನ ಬಿಂಬ ನೋಡಿದಾಗ ತನಗೇ ನಂಬಲಾಗಲಿಲ್ಲ. ಅವನ ಮುಖ ನೆರಿಗೆಗಳಿಂದ ತುಂಬಿದ್ದು ತುಂಬಾ ಆಯಾಸಗೊಂಡ ಮುದುಕನಂತೆ ಕಾಣತೊಡಗಿದ.
ಬಾತ್‌ರೂಮಿನಿಂದ ಹೊರಗೆ ಬಂದು ಬಾಗಿಲಿಗೊರಗಿ ನಿಂತು ಬೆಡ್‌ರೂಮಿನೆಡೆಗೆ ನೋಡಿದ. ಅವನ ಹುಡುಗಿ ಗಾಢವಾಗಿ ನಿದ್ರಿಸುತ್ತಿದ್ದಳು. ದಿಂಬಿಗೆ ಮುಖ ಒತ್ತಿಕೊಂಡು ನಿರಂಬಳವಾಗಿ ಗೊರಕೆ ಹೊಡೆಯುತ್ತಿದ್ದಳು. ಅವಳ ಗಲ್ಲ ಮತ್ತು ಬೆನ್ನಿನ ಮೇಲೆ ಅವಳ ಮುಂಗುರುಳು ಹರಡಿದ್ದು, ಗದ್ದದ ಮೇಲಿರುವ ಆ ಎರಡು ಕಪ್ಪು ಚುಕ್ಕೆಗಳು ಅವಳಿ ಜವಳಿಯಂತೆ ಕಾಣುತ್ತಿದ್ದವು. ಈಜುಡಿಗೆಯು ಅವಳ ಬೆನ್ನಿನ ಮೇಲೆ ಮೂಡಿಸಿದ್ದ ಬಿಳಿಯ ಪಟ್ಟೆ ಸ್ಪಷ್ಟವಾಗಿ ಕಾಣುತ್ತಿತ್ತು. ಸಮುದ್ರದ ಅಲೆಗಳ ಏಕತಾನತೆ ಮೂಡಿಸುವ ಸದ್ದಿನೊಂದಿಗೆ ಚಂದ್ರನ ಬೆಳ್ಳನೆಯ ಬೆಳಕು ಕಿಟಕಿಯ ಪರದೆಯಲ್ಲಿ ಸೋಸಿ ಒಳಗೆ ಬರುತ್ತಿತ್ತು. ಅವಳ ಹಿಂದಿರುವ ಅಲಾರಾಮ್ ಗಡಿಯಾರದಲ್ಲಿನ ಹಸಿರು ಅಂಕಿಗಳು ಮಿನುಗುತ್ತಿದ್ದವು. ಎಲ್ಲವೂ ಹಾಗೇ ಇತ್ತು. ನಿನ್ನೆ ಸಂಜೆ ಇಬ್ಬರೂ ಹಂಚಿಕೊಂಡು ತಿಂದ ಏಡಿಯ ಮಾಂಸ ಅವಳ ಹೊಟ್ಟೆಯೊಳಗಿತ್ತು ಆದರೆ ಅವಳಿಗೆ ಮಾತ್ರ ಯಾವುದರ ಪರಿವೆ ಇರಲಿಲ್ಲ.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಇಷ್ಟು ವರ್ಷ ಯಾರಿಗೂ ಹೇಳದ ಸಂಗತಿಗಳನ್ನು ನಿಮ್ಮ ಹತ್ರ ಮಾತ್ರ ಹೇಳುತ್ತೇನೆ ಅಪ್ಪಾ
ಕಿಟಕಿಯ ಪಕ್ಕದ ಹಳೆಯ ಕುರ್ಚಿಯಲ್ಲಿ ಕುಳಿತು ಕಣ್ಮುಚ್ಚಿ ನಿಧಾನವಾಗಿ ಉಸಿರಾಡತೊಡಗಿದ. ಸಾಧ್ಯವಿದ್ದಷ್ಟು ಹೆಚ್ಚು ಹೆಚ್ಚು ತಾಜಾ ಗಾಳಿಯನ್ನು ಎದೆಗೂಡಿನೊಳಕ್ಕೆಳೆದುಕೊಂಡು ಒಳಗಿನ ಕೆಟ್ಟವಾಸನೆಯನ್ನು ಹೊರದಬ್ಬಿದ. ತನ್ನೊಳಗಿನ ಕಣಕಣಗಳನ್ನು ತಾಜಾ ಗಾಳಿಗೆ ತೆರೆದಿಡಬೇಕೆನಿಸಿತು. ಆ ನೀರವ ರಾತ್ರಿಯಲ್ಲಿ ರೂಮಿನಲ್ಲಿರುವ ಅಲಾರಾಂನ ಟಿಕ್ ಟಿಕ್ ಸದ್ದಿನಂತೆ ಅವನ ಗುಂಡಿಗೆಯೂ ಸದ್ದು ಮಾಡುತ್ತ ಹೊಡೆದುಕೊಳ್ಳುತ್ತಿತ್ತು.
ತನ್ನ ಹುಡುಗಿಯೆಡೆಗೆ ದಿಟ್ಟಿಸಿದಾಗ ಅವಳ ಹೊಟ್ಟೆಯೊಳಗಿನ ಏಡಿ ಮಾಂಸದ ಸುತ್ತ ಹುಳುಗಳು ಮುತ್ತಿಕೊಂಡಂತೆ ಕಲ್ಪಿಸಿಕೊಂಡ. ಅವಳನ್ನು ಎಚ್ಚರಗೊಳಿಸಿ, ಅವಳಿಗೆ ಎಲ್ಲ ಹೇಳಬೇಕಿತ್ತಾ? ಎಚ್ಚರಗೊಳಿಸಿದರೆ ಹುಳುಗಳು ಏನಾದರೂ ಮಾಡಿದರೆ? ಏನು ಮಾಡಬೇಕೆಂದು ತಿಳಿಯದೆ, ಸುಮ್ಮನೆ ಕುಳಿತು ಮತ್ತು ಅವಳನ್ನು ಎಚ್ಚರಗೊಳಿಸಲಿಲ್ಲ. ಅವಳನ್ನು ಎಚ್ಚರಗೊಳಿಸಿದರೆ ಪರಿಸ್ಥಿತಿ ಹದಗೆಡುವ ಸಂಭವವಿತ್ತು. ಅಷ್ಟಕ್ಕೂ ಅವಳಿಗೆ ಇವನಿಗಾದುದರ ಅರಿವು ಇರಲಿಲ್ಲವಾದ್ದರಿಂದ ಸುಮ್ಮನೆ ತೊಂದರೆ ಕೊಡುವುದು ಬೇಡ ಅನ್ನಿಸಿತು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ಪ್ರೇಮಿಸುತ್ತ ಕನಸುಗಳಿಗೂ ಜಾಗವಿರದಂತೆ ಬಿಗಿದಪ್ಪಿ ನಿದ್ದೆಗೆ ಜಾರುತ್ತಿದ್ದರು