Literature: ನೆರೆನಾಡ ನುಡಿಯೊಳಗಾಡಿ; ಪ್ರೇಮಿಸುತ್ತ ಕನಸುಗಳಿಗೂ ಜಾಗವಿರದಂತೆ ಬಿಗಿದಪ್ಪಿ ನಿದ್ದೆಗೆ ಜಾರುತ್ತಿದ್ದರು
Haruki Murakami : ಸ್ವಲ್ಪ ಹೊತ್ತಾದ ಬಳಿದ ಯುವಕನಿಗೆ ಹೊಟ್ಟೆಯಲ್ಲಿ ಕಸಿವಿಸಿಯಾದಂತಾಗಿ ಹಾಸಿಗೆಯಲ್ಲಿ ಎದ್ದು ಕುಳಿತ. ಅವನ ಹೊಟ್ಟೆಯೊಳಗೆ ಗಟ್ಟಿಯಾದ ಮುದ್ದೆಯೊಂದು ಕುಳಿತಂತಾಗಿತ್ತು. ಭಡಕ್ಕನೆ ಎದ್ದವನೇ ಓಡಿದ.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಮುಂದಿನ ಮೂರುದಿನಗಳೂ ಅವರು ಅಲ್ಲಿಯೇ ಊಟ ಮಾಡಿದರು. ಪ್ರತಿ ದಿನ ಬೆಳಿಗ್ಗೆ ಬೀಚಿನಲ್ಲಿ ಈಜಾಡಿ, ಬಿಸಿಲಿಗೆ ಮೈಯೊಡ್ಡಿ, ಮರಳಿನ ಮೇಲೆ ಸ್ವಲ್ಪ ಹೊತ್ತು ಬಿದ್ದುಕೊಂಡಿದ್ದು ನಂತರ ನಗರದಲ್ಲಿ ತಿರುಗಾಡಿ ನೆನಪಿಗಾಗಿ ಸಾಮಾನುಗಳನ್ನು ಖರೀದಿಸುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಮತ್ತೆ ಅದೇ ಪುಟ್ಟ ರೆಸ್ಟೊರೆಂಟ್ಗೆ ಬಂದು ವಿವಿಧ ಬಗೆಯ ಏಡಿಗಳಿಂದ ತಯಾರಿಸಿದ ಊಟ ಸವಿಯುತ್ತಿದ್ದರು ನಂತರ ಹೋಟೆಲಿನ ಕೋಣೆಗೆ ಹಿಂತಿರುಗಿ ಎಂದಿನಂತೆ ಇಬ್ಬರೂ ಪ್ರೇಮಿಸುತ್ತ ಕನಸುಗಳಿಗೂ ಜಾಗವಿರದಂತೆ ಬಿಗಿಯಾಗಿ ಅಪ್ಪಿಕೊಂಡು ನಿದ್ದೆಗೆ ಜಾರುತ್ತಿದ್ದರು. ಅವರಿಗೆ ತಾವು ಕಳೆಯುತ್ತಿರುವ ಪ್ರತಿಯೊಂದು ಕ್ಷಣಗಳು ಸ್ವರ್ಗದಲ್ಲಿರುವಂತೆ ಭಾಸವಾಗಿತ್ತು. ಯುವತಿಗೆ ಇಪ್ಪತ್ತಾರಿದ್ದು ಹೆಣ್ಣುಮಕ್ಕಳ ಖಾಸಗಿ ಹೈಸ್ಕೂಲಿನಲ್ಲಿ ಇಂಗ್ಲೀಷ್ ಬೋಧಿಸುತ್ತಿದ್ದಳು. ಅವನಿಗೆ ಇಪ್ಪತ್ತೆಂಟಾಗಿದ್ದು, ದೊಡ್ಡದೊಂದು ಬ್ಯಾಂಕ್‌ನಲ್ಲಿ ಆಡಿಟರ್ ಆಗಿದ್ದ.
ಕಥೆ : ಕ್ರ್ಯಾಬ್ಸ್ | ಮೂಲ : ಹರುಕಿ ಮುರಾಕಮಿ | ಕನ್ನಡಕ್ಕೆ : ರವಿಕುಮಾರ ಹಂಪಿ
*
(ಭಾಗ 3)
ಇಬ್ಬರಿಗೂ ಅದೇ ಸಮಯದಲ್ಲಿ ರಜೆ ಸಿಕ್ಕಿದ್ದೂ ಪವಾಡವೇ ಸರಿ. ಇಬ್ಬರೂ ಯಾರೂ ತೊಂದರೆ ಕೊಡದ ಇಂಥದ್ದೊಂದು ಸ್ಥಳಕ್ಕೆ ಹೋಗಲು ಬಯಸಿದ್ದರು. ಪರಸ್ಪರರಿಗೆ ಇಷ್ಟವಾಗದ ವಿಷಯಗಳನ್ನು ಚರ್ಚಿಸುವ ಗೊಡವೆಗೆ ಹೋಗದೆ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳದೆ ಸದಾಕಾಲ ಅಪ್ಪಿಕೊಂಡೇ ಕಳೆಯಲಿಚ್ಛಿಸಿದ್ದರು.
ಅವರಿಗೆ ಸಿಕ್ಕ ನಾಲ್ಕು ದಿನಗಳಲ್ಲಿ ಕೊನೆಯ ದಿನವೂ ಅವರು ಮತ್ತೆ ಏಡಿಯನ್ನೇ ತಿಂದರು. ಅವರು ಫೋರ್ಕ್ನಿಂದ ಏಡಿಯೆದೆಯ ಮಿದುಮಾಂಸವನ್ನು ಎಳೆದುಕೊಂಡು ತಿನ್ನುತ್ತ, ತಾವು ಇಲ್ಲಿಗೆ ಬಂದ್ದದ್ದು, ಆ ಸಿಂಗಾಪೂರ್‌ನ ಬೀರು, ಬೀಚಿನ ಈಜು, ರಾತ್ರಿಯ ಏಡಿಯೂಟದ ಬಗ್ಗೆ ಮಾತಾಡಿಕೊಂಡರು. ಮತ್ತೆ ಟೋಕಿಯೋದ ಅಸಹಜ ಬದುಕಿಗೆ ಮರಳುವುದು ಇಬ್ಬರಿಗೂ ಬೆಜಾರೆನ್ನಿಸಿತು. ಸಿಂಗಪೂರ್‌ನಲ್ಲಿ ಕಳೆದ ಕ್ಷಣಗಳನ್ನೇ ಮೆಲುಕು ಹಾಕುತ್ತಿದ್ದರೂ ಆಗಾಗ ಮೌನವಾಗುತ್ತಿದ್ದರು. ಆದರೂ ಆ ಮೌನದಲ್ಲಿ ನೆಮ್ಮದಿಯಿತ್ತು. ತಣ್ಣಗಿನ ಬಿರ‍್ರು, ಬಿಸಿಯಾದ ಏಡಿ ಅವರ ಮೌನಕ್ಕೆ ಬಣ್ಣ ತುಂಬಿತ್ತು.
ಎಂದಿನಂತೆ ಅಂದೂ ಊಟ ಮುಗಿದ ಮೇಲೆ ಅವರು ತಾವಿಳಿದುಕೊಂಡ ಹೋಟೆಲಿಗೆ ಹೋಗಿ ಅದಮ್ಯವಾಗಿ ಪ್ರೀತಿಸಿ, ಜೊತೆಯಾಗಿಯೇ ಸ್ನಾನ ಮುಗಿಸಿ ಗಾಢನಿದ್ದೆಗೆ ಜಾರಿದರು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ರಷ್ಯಾದ ಪ್ರಸಿದ್ಧ ಕಥೆಗಾರ ಆ್ಯಂಟನ್ ಚೆಕಾವ್ 128 ವರ್ಷಗಳ ಹಿಂದೆ ಬರೆದ ಕಥೆ
ಸ್ವಲ್ಪ ಹೊತ್ತಾದ ಬಳಿದ ಯುವಕನಿಗೆ ಹೊಟ್ಟೆಯಲ್ಲಿ ಕಸಿವಿಸಿಯಾದಂತಾಗಿ ಹಾಸಿಗೆಯಲ್ಲಿ ಎದ್ದು ಕುಳಿತ. ಅವನ ಹೊಟ್ಟೆಯೊಳಗೆ ಗಟ್ಟಿಯಾದ ಮುದ್ದೆಯೊಂದು ಕುಳಿತಂತಾಗಿತ್ತು. ಭಡಕ್ಕನೆ ಎದ್ದವನೇ ಬಾತ್‌ರೂಮಿನೆಡೆಗೆ ಓಡಿ ಹೋಗಿ, ಟಾಯ್ಲಟ್‌ನೊಳಗೆ ಭಳ್ಳನೆ ವಾಂತಿ ಮಾಡಿಕೊಂಡಾಗ ಉಂಡದ್ದೆಲ್ಲ ವಾಪಸ್ಸು ಬಂದಿತು. ಹೊಟ್ಟೆಯ ತುಂಬ ಬರೀ ಏಡಿಯ ಬಿಳಿಮಾಂಸ ತುಂಬಿಕೊಂಡಿತ್ತು. ಅವನಿಗೆ ಲೈಟ್ ಹಾಕಲೂ ಸಮಯ ಸಿಕ್ಕಿರಲಿಲ್ಲ. ಸಮುದ್ರದಲ್ಲಿ ತೇಲುತ್ತಿದ್ದ ಚಂದ್ರನ ಬೆಳಕು ರೂಮಿನೊಳಗೂ ತೂರಿಕೊಂಡು, ಅವನು ವಾಂತಿ ಮಾಡಿಕೊಂಡದ್ದೆಲ್ಲ ಟಾಯ್ಲಟ್‌ನಲ್ಲಿ ತೇಲುತ್ತಿದ್ದುದು ಅವನಿಗೆ ತೋರಿಸಿತು. ಕಣ್ಮುಚ್ಚಿಕೊಂಡು ದೀರ್ಘ ಉಸಿರೆಳೆದುಕೊಂಡು ಸ್ವಲ್ಪ ಹೊತ್ತು ಅಲ್ಲಿಯೇ ಕಳೆದ. ಅವನಿಗೆ ಏನೂ ಯೋಚಿಸಲಾಗದಷ್ಟು ತಲೆ ಖಾಲಿಯಾದಂತೆನಿಸಿತು. ಉಬ್ಬಳಿಕೆ ಬಂದಂತಾಗಿ ಮತ್ತೆ ವಾಂತಿ ಬರಬಹುದೆಂದು ಕಾಯತೊಡಗಿದ. ಸ್ವಲ್ಪ ಹೊತ್ತಿನಲ್ಲೇ ಮತ್ತೆ ವಾಂತಿ ಗುದ್ದಿಕೊಂಡು ಬಂದು ಅವನ ಹೊಟ್ಟೆಯಲ್ಲುಳಿದ ಅಲ್ಪ ಸ್ವಲ್ಪವನ್ನೆಲ್ಲ ಖಾಲಿ ಮಾಡಿತು.
ಅವನು ಕಣ್ಣುಬಿಟ್ಟು ನೋಡಿದಾಗ ಟಾಯ್ಲೆಟ್‌ನ ನೀರಿನಲ್ಲಿ ಬಿಳಿಮಾಂಸದ ಮುದ್ದೆಯೊಂದು ತೇಲುತ್ತಿತ್ತು. ತುಸು ಹೆಚ್ಚೇ ಅನ್ನಿಸುವಷ್ಟಿತ್ತು. ಅರೇ! ನಾನು ಅಷ್ಟು ಏಡಿ ತಿಂದೆನೆ? ಅಂದುಕೊಂಡ. ಪ್ರತಿದಿನವೂ ಇಷ್ಟೊಂದು ಏಡಿ ತಿಂದರೆ ಹೀಗೆ ಆಗದಿರುತ್ತದೆಯೆ ಅನ್ನಿಸಿತು. ಮೂರು ವರ್ಷಗಳಲ್ಲಿ ತಿನ್ನಬಹುದಾದಷ್ಟು ಏಡಿಗಳನ್ನು ನಾಲ್ಕು ದಿನಗಳಲ್ಲಿ ತಿಂದಿದ್ದೇನೆ ಅಂದುಕೊಂಡ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ನನಗಂತೂ ಏಡಿ ತುಂಬಾ ಇಷ್ಟ, ನಿನಗೆ?