Literature: ನೆರೆನಾಡ ನುಡಿಯೊಳಗಾಡಿ; ಅವನಿಗೀಗ ಗಾಢ ನಿದ್ರೆಯ ಹೊರತು ಏನೂ ಬೇಕಿರಲಿಲ್ಲ
Haruki Murakami : ನೆನ್ನೆಯತನಕ ಅವಳೊಡನೆ ಇದ್ದಂತೆ ಇನ್ನು ಮುಂದೆಯೂ ಅವನಿಂದ ಹಾಗೆ ಇರಲಾಗುವುದಿಲ್ಲ ಎಂಬುದು ಅರಿವಾಗಿತ್ತು. ಅಷ್ಟೇ ಅಲ್ಲ, ಅವನಿಗೆ ತಾನು ಏಕಾಂಗಿಯಾಗಿ ಕೂಡ ಇಲ್ಲಿಗೆ ಬರುವುದು ಸಾಧ್ಯವಿಲ್ಲ ಅನ್ನಿಸಿತು.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಪ್ರಪಂಚ ಬದಲಾಗುತ್ತಿದೆ ಅನ್ನಿಸಿತು. ಅವನಿಗೆ ಭೂಮಿ ಹೊಸ ಪಥದಲ್ಲಿ ನಿಧಾನ ತಿರುಗುವು ಸದ್ದು ಕೇಳಿಸತೊಡಗಿತು. ಏನೋ ಬದಲಾಗಿತ್ತು, ಅವನಿಗೆ ಪ್ರಪಂಚ ಸಂಪೂರ್ಣ ಬದಲಾಗಿದೆ ಅನ್ನಿಸಿತು. ಅವನ ಅರಿವಿಗೆ ಸಿಗದಷ್ಟು ಎಲ್ಲವೂ ಬದಲಾಗಿತ್ತು. ಎಲ್ಲವನ್ನು ಮತ್ತೆ ಮೊದಲಿನಿಂದಲೇ ಪ್ರಾರಂಭಿಸಬೇಕಿತ್ತು. ಅವನು ಮರುದಿನವೇ ಟೋಕಿಯೋಕ್ಕೆ ವಾಪಸ್ಸು ಹೋಗಿ ಉಳಿದ ಜೀವನ ಸಾಗಿಸಬೇಕೆಂದುಕೊಂಡ. ಮೇಲ್ನೋಟಕ್ಕೆ ಯಾವುದೂ ಬದಲಾಗಿರಲಿಲ್ಲವಾದರೂ ಅವನಿಗೆ ಮತ್ತೆ ಅವಳೊಂದಿಗೆ ಅಲ್ಲಿಗೆ ಮತ್ತೆಂದಿಗೂ ಬರಲಾರೆ ಅನ್ನಿಸಿತು. ನೆನ್ನೆಯತನಕ ಅವಳೊಡನೆ ಇದ್ದಂತೆ ಇನ್ನು ಮುಂದೆಯೂ ಅವನಿಂದ ಹಾಗೆ ಇರಲಾಗುವುದಿಲ್ಲ ಎಂಬುದು ಅರಿವಾಗಿತ್ತು. ಅಷ್ಟೇ ಅಲ್ಲ, ಅವನಿಗೆ ತಾನು ಏಕಾಂಗಿಯಾಗಿ ಕೂಡ ಇಲ್ಲಿಗೆ ಬರುವುದು ಸಾಧ್ಯವಿಲ್ಲ ಅನ್ನಿಸಿತು. ಅವನಿಗೆ ಅವರಿಬ್ಬರನ್ನೂ ಎತ್ತಿ ಅಲ್ಲಿಂದ ನಿಶ್ಯಬ್ಧವಾಗಿ ಹೊರಗೆ ಒಗೆದಿದ್ದಾರೇನೋ ಅನ್ನಿಸಿತು ಮತ್ತು ಅದು ಅವಳಿಗೆ ತಿಳಿದಿರಲಾರದು ಕೂಡ.
ಕಥೆ : ಕ್ರ್ಯಾಬ್ಸ್ | ಮೂಲ : ಹರುಕಿ ಮುರಾಕಮಿ | ಕನ್ನಡಕ್ಕೆ : ರವಿಕುಮಾರ ಹಂಪಿ
*
(ಭಾಗ 5)
ಬೆಳಗಾಗುವತನಕ ಯುವಕ ಆ ಹಳೆಯ ಕುರ್ಚಿಯ ಮೇಲೆ ನಿಧಾನವಾಗಿ ಉಸಿರಾಡುತ್ತ ಕುಳಿತಿದ್ದನು. ಆಗಾಗ ಬಿರುಗಾಳಿ ಬೀಸುತ್ತಿತ್ತಲ್ಲದೆ ಶಿಕ್ಷೆಯೆಂಬಂತೆ ಮಳೆಯ ಹನಿಗಳು ಕಿಟಕಿಯ ಮೇಲೆ ರಪರಪನೆ ಬಡಿಯುತ್ತಿದ್ದವು. ಮಳೆಮೋಡಗಳು ಮರೆಯಾದಾಗ ಚಂದ್ರ ಕಾಣಿಸುತ್ತಿದ್ದ. ಇಷ್ಟೆಲ್ಲ ಆದರೂ ಅವನ ಹುಡುಗಿ ಎಚ್ಚರವಿರದೆ ಮಲಗಿದ್ದಳು. ಅವಳ ಭುಜ ಅಲ್ಲಾಡಿತಾದರೂ ಅವಳು ಎಚ್ಚರಗೊಳ್ಳಲಿಲ್ಲ. ಅವನಿಗೂ ಗಾಢವಾಗಿ ಮಲಗಿ ನಿದ್ರಿಸಲು ಇಚ್ಚೆಯಾಯಿತು. ಬೆಳಿಗ್ಗೆ ಎದ್ದಾಗ ಎಲ್ಲ ಸಮಸ್ಯೆಗಳು ಮುಗಿದು, ದಿನ ಎಂದಿನಂತೆ ಶುರುವಾಗಬೇಕು ಅನ್ನಿಸಿತು. ಅವನಿಗೀಗ ಗಾಢ ನಿದ್ರೆಯ ಹೊರತು ಏನೂ ಬೇಕಿರಲಿಲ್ಲ. ಅವನು ಬಯಸಿದಷ್ಟೂ, ನಿದ್ದೆ ಅವನಿಂದ ದೂರ ದೂರವೇ ಸರಿಯುತ್ತಿತ್ತು.
ಯುವಕನಿಗೆ ತನ್ನ ಮೊದಲ ರಾತ್ರಿಯ ದಿನ ತಾವು ಆ ಪುಟ್ಟ ಓಣಿಯಲ್ಲಿನ ರೆಸ್ಟೊರೆಂಟ್ ಒಳಗೆ ನುಸುಳಿದ್ದು, ಆ ಚೈನೀಜ್ ಮುದುಕರು ಮಾತಿರದೆ ಮೌನವಾಗಿ ಕುರುಕಲು ತಿನ್ನುತ್ತ ಕುಳಿತದ್ದು, ಅವರ ಪಕ್ಕದಲ್ಲಿ ಅರ್ಧ ಕಣ್ಣು ಬಿಟ್ಟುಕೊಂಡು ಮಲಗಿದ್ದ ಆ ಕಪ್ಪುನಾಯಿ, ಟೇಬಲ್‌ಗಳಿಗೆ ನೆರಳು ಮಾಡಿದ್ದ ಆ ಬಣ್ಣ ಮಾಸಿದ ಛತ್ರಿಗಳು ನೆನಪಾದವು. ಅವಳು ಹೇಗೆ ತನ್ನನ್ನು ಮೊಣಕೈಯಿಂದ ತಿವಿದಿದ್ದಳು? ಅವನಿಗೆ ಎಲ್ಲವೂ ವರ್ಷಗಳ ಹಿಂದಿನ ಘಟನೆಗಳಂತೆ ಕಾಣಿಸಿದವು. ಆದರೆ ಅದೆಲ್ಲ ನಡೆದದ್ದು ಕೇವಲ ಮೂರುದಿನಗಳಲ್ಲೇ ಆದರೂ ಯಾವುದೋ ವಿಚಿತ್ರ ಶಕ್ತಿ ಅಲ್ಲಿನ ಮುದುಕರುಗಳಂತೆ ಅವನನ್ನೂ ಅನಿಷ್ಟ ಮುದುಕನ್ನಾಗಿಸಿತ್ತು. ಎಲ್ಲವೂ ಕಡಲ ತೀರದ ಸಿಂಗಪೂರ್‌ನ ಆ ಸುಂದರ ಪಟ್ಟಣದಲ್ಲಿ ನಡೆದುಹೋಗಿತ್ತು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ’ದಯವಿಟ್ಟು ಈ ಸಂಗತಿಯನ್ನು ಜಗಜ್ಜಾಹೀರು ಮಾಡಬೇಡಿ, ನೀವೊಬ್ಬ ಶಿಕ್ಷಕ’
ಯುವಕ ತನ್ನೆರಡು ಕೈಗಳನ್ನು ಎಳೆದುಕೊಂಡು ದಿಟ್ಟಿಸಿದ ಅವನಿಗೆ ಕೈಗಳ ಹಿಂದಿರುವುದು ಕಾಣಿಸಿತು. ತನ್ನ ಅಂಗೈ ನೋಡಿಕೊಂಡ. ಅವನಿಂದ ಯಾವುದನ್ನೂ ಮುಚ್ಚಿಡಲಾಗಲಿಲ್ಲ. ಅವನ ಕೈಗಳು ಸಣ್ಣಗೆ ನಡುಗುತ್ತಿದ್ದವು.
‘ಮ್, ನನಗೆ ಏಡಿಗಳೆಂದರೆ ಇಷ್ಟ, ನಿನಗೆ ಇಷ್ಟಾನಾ?’ ಎಂದು ಅವಳು ಕೇಳಿದಂತಾಯಿತು.
ಈಗವನು ‘ತನಗೆ ಗೊತ್ತಿಲ್ಲ’ ಅಂದುಕೊಂಡ.
ಅವನಿಗೆ ತನ್ನ ಹೃದಯವನ್ನು ವಿವರಿಸಲಾಗದ ಆಳವಾದ ಸೂಕ್ಷ್ಮ ರಹಸ್ಯವೊಂದು ಮುತ್ತಿಕೊಂಡಿದೆ ಅನ್ನಿಸಿತು. ಅವನ ಬದುಕು ಎತ್ತ ಸಾಗುತ್ತಿದೆಯೆಂದಾಗಲಿ, ಮುಂದೆ ಏನು ಕಾದಿದೆ ಎಂಬುದರ ಬಗೆಗಾಗಲಿ ಸಣ್ಣ ಸುಳಿವೂ ಅವನಿಗೆ ಸಿಕ್ಕಲಿಲ್ಲ. ಪೂರ್ವದಲ್ಲಿ ಸೂರ್ಯ ಉದಯಿಸುತ್ತಿದ್ದಂತೆ ಅವನು ‘ಒಂದಂತೂ ಸತ್ಯ, ನಾನು ಎಲ್ಲಿಗೇ ಹೋಗಲಿ, ಮೊತ್ತೊಮ್ಮೆ ಎಂದಿಗೂ ಏಡಿ ತಿನ್ನುವುದಿಲ್ಲ’ ಅಂದುಕೊಂಡ.
(ಮುಗಿಯಿತು)
ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಈ ಕಥೆಯ ಎಲ್ಲಾ ಭಾಗಗಳನ್ನುಇಲ್ಲಿ ಓದಿ : https://tv9kannada.com/tag/haruki-murakami
Published On - 5:16 pm, Fri, 25 February 22