Poornachandra Tejaswi Death Anniversary : ಓಡುತ್ತಿದ್ದ ದಾನಮ್ಮ ಹಿಂದಕ್ಕೆ ತಿರುಗಿ ನೋಡಿದವಳೇ “ಅಯ್ಯೋ ಮುದುಕಮ್ಮ ದಿಮ್ಮಿ ಅಡಿ ಸಿಕ್ಕು ಅಪ್ಪಚ್ಚಿ ಆಗ್ತದೆ’’ ಎಂದು ಚೀರಿದಳು. ಕರಿಯನ ತಾಯಿ ದಿಮ್ಮಿ ಬರುವ ದಾರಿಯಲ್ಲೇ ಬಿಸಿಲು ಕಾಯಿಸುತ್ತಾ ಕುಳಿತ್ತಿದ್ದಳು. ಅವಳಿಗೆ ಕಣ್ಣು ಕಾಣುತ್ತಿರಲಿಲ್ಲ. ಕರಿಯನೇ ಕರೆತಂದು ಬಿಸಿಲು ಕಾಯಿಸಲು ಕೂರಿಸಿ ಕೆಲಸಕ್ಕೆ ಹೋಗಿದ್ದ. ಅವಳಿಗೆ ಉರುಳಿ ಬರುವ ದಿಮ್ಮಿ ಕಾಣಿಸುವುದಾದರೂ ಹೇಗೆ? ದಾನಮ್ಮ ಮತ್ತೆ ಹಿಂದಿರುಗಿ ದಿಮ್ಮಿ ಕಡೆ ಓಡಿದಳು. ದಾನಮ್ಮ ಮುದುಕಿ ಬಳಿಸಾರುವುದರೊಳಗೆ ದಿಮ್ಮಿ ಕೈ ಮೀರಿಹೋದಷ್ಟು ಹತ್ತಿರ ಬಂದಿತ್ತು. ದಾನಮ್ಮ ಇದ್ಯಾವುದನ್ನೂ ಗಮನಿಸಲೇ ಇಲ್ಲ. “ಆ ಮುದುಕಿ ಮೈ ಮುಟ್ಟಿದರೆ ನನ್ನ ತಾಳಿ ಆಣೆ, ನಿನ್ನ ಮುಸುಡಿಗೆ ಒರಲೆ ಹಿಡಿಯಾ. ನರಬಲಿ ತಗೊಳ್ಳೋಕೆ ಬರ್ತೀಯಾ’’ ಎಂದು ದಿಮ್ಮಿಯನ್ನು ಒಂದು ವ್ಯಕ್ತಿ ಎನ್ನುವಂತೆ ಬಯ್ಯುತ್ತಾ, ಮುದುಕಿ ಕಂಕುಳಿಗೆ ಕೈಹಾಕಿದಳು. “ದಿಮ್ಮಿ ಉರುಳಿ ಬರಿದೆ ಯಾರೂ ಅಡ್ಡ ನಿಲ್ಲಬ್ಯಾಡ್ರಿ” ಎಂದು ಕೂಗುತ್ತ ಹಿಂದಿನಿಂದ ಓಡಿ ಬರುತ್ತಿದ್ದ ಕಾಳೇಗೌಡ ದಾನಮ್ಮ ಮತ್ತು ಮುದುಕಿ ಅದರ ದಾರಿಯಲ್ಲೇ ಇರುವುದನ್ನು ನೋಡಿ ಹೆದರಿಹೋದ.
ತೇಜಸ್ವಿಯವರ ಕಿರಿಗೂರಿನ ಗಯ್ಯಾಳಿಗಳು ಪುಸ್ತಕದಿಂದ ತಮಗಿಷ್ಟವಾದ ಆಯ್ದ ಭಾಗ ಕಳಿಸಿದವರು ಗಾಯಕ, ಸಂಗೀತ ನಿರ್ದೇಶಕ ಬಿ.ಜೆ. ಭರತ್.
ದಾನಮ್ಮ ಮುದುಕಿಯನ್ನು ಎಳೆದುಕೊಳ್ಳುತ್ತಿರಬೇಕಾದರೆ ದಿಮ್ಮಿ ಮುದುಕಿಯನ್ನು ಸವರಿಕೊಂಡೇ ಮುಂದೆಹೋಯ್ತು. ಕಾಳೇಗೌಡ ಅವರ ಬಳಿಗೆ ಬರುವಷ್ಟರಲ್ಲಿ ದಿಮ್ಮಿ ಮುಂದೆಹೋಗಿತ್ತು. ದಿಮ್ಮಿ ಅವರನ್ನು ದಾಟಿಕೊಂಡು ಹರಿಜನರ ಕೇರಿ ಪಕ್ಕದ ಕುರುಚಲು ಕಾಡೊಳಗೆ ಚಟಪಟ ಸದ್ದು ಮಾಡುತ್ತಾ ನುಗ್ಗಿತು. ನಾಯಿಗಳು ಬೊಗಳುತ್ತಾ ಅದನ್ನು ಬೆನ್ನಟ್ಟಿಕೊಂಡು ಕಾಡೊಳಗೆ ಓಡಿದವು.
ದಿಮ್ಮಿ ಮುಂದೆ ಹೋದನಂತರ ಆಘಾತದಿಂದ ಎಚ್ಚೆತ್ತವಳಂತೆ ದಾನಮ್ಮ ಚೇತರಿಸಿಕೊಂಡಳು. ಕರಿಯನ ತಾಯಿಗೆ ಏನು ನಡೆಯಿತೆಂದೂ ಗೊತ್ತಿಲ್ಲದೆ ಪಿಳಿಪಿಳಿ ಕುರುಡುಗಣ್ಣುಗಳನ್ನು ಮಿಟುಕಿಸುತ್ತಾ ಮುಗ್ಧವಾಗಿ ಅತ್ತಿತ್ತ ನೋಡುತ್ತಿದ್ದಳು. ಭಾವೋದ್ವೇಗಕ್ಕೆ ಎದೆ ಹೊಡೆದುಕೊಳ್ಳುತ್ತಿದ್ದ ದಾನಮ್ಮನ ಕಣ್ಣುಗಳಲ್ಲಿ ತಾನಿನ್ನೂ ಬದುಕಿರುವುದಕ್ಕಾಗಿ ಕೃತಜ್ಞತೆಯಿಂದ ನೀರು ಬಂತು.
ಕಾಳೇಗೌಡ ಸೋನ್ಸ್ ಇಬ್ಬರೂ ಮಂಜಾದ ಅವಳ ಕಣ್ಣಿಗೆ ಬಿದ್ದರು. ಮತ್ತೆ ಅವರ ಮೇಲೆ ಸಿಟ್ಟು ಏರಿತು. ಕರೆಸಿಕೊಂಡು ಸೆರಗು ಸೊಂಟಕ್ಕೆ ಸುತ್ತಿಕೊಳ್ಳುತ್ತಾ ಹಲ್ಲಂಡೆ ಮುಂಡೇಮಕ್ಳನ್ನ ಕರಕೊಂಡು ಬಂದು ಊರುಹಾಳಮಾಡಕ್ಕೆ ಮೂರು ದಿನದಿಂದ ಹುನ್ನಾರ ಮಾಡ್ತಿದ್ದೀರಾ? ಥೂ ನಿಮ್ಮ ಜಲ್ಮಕ್ಕೆ ಬೆಂಕಿ ಹಾಕಾ ಎಂದು ಅಬ್ಬರಿಸಿ ಕೂಗಿದಳು. ಕಾಳೇಗೌಡ ಸೋನ್ಸ್ ಇಬ್ಬರೂ ಅವಳ ಅಬ್ಬರಕ್ಕೆ ಹೆದರಿ ದಿಮ್ಮಿಯ ಮುಂದಿನ ಗತಿ ಏನಾಯ್ತೆಂದು ಸಹ ನೋಡದೆ ಬೆನ್ನು ತಿರುಗಿಸಿ ಬಂದ ದಿಕ್ಕಿನ ಕಡೆಗೆ ಓಡಿಹೋದರು.
ಇದನ್ನೂ ಓದಿ : Rajeshwari Tejaswi : ರಾಜೇಶ್ವರಿ ಮೇಡಮ್, ಬಂಗಾರವನ್ನು ಪತ್ತೆ ಹಚ್ಚುವುದು ಹೇಗೆಂದು ತೇಜಸ್ವಿಯವರಿಗೆ ಯಾಕೆ ಹೇಳಿಕೊಡಲಿಲ್ಲ?
ರುದ್ರಿ ಕಾಳಿ ಸಿದ್ದ ಎಲ್ಲ ಗದ್ದೆ ಕಡೆಯಿಂದ ಓಡಿ ಬಂದಾಗ ದಾನಮ್ಮ ಕಾಳೇಗೌಡ ಓಡಿಹೋದ ದಿಕ್ಕಿನ ಕಡೆಗೆ ಸಿಟ್ಟಿನಿಂದ ನೋಡುತ್ತಾ ನಿಂತಿದ್ದಳು. ಈರಿ ಬಾಯಿಂದ ನಡೆದುದನ್ನೆಲ್ಲಾ ಕೇಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಅವರು ದಾನಮ್ಮನ ಕಣ್ಣಾಗೆ ನೀರಾಡ್ತಿದ್ದಿದ್ದು ನೋಡಿ ಯಾರೋ ಪೈಸಲ್ ಆದ್ರು ಅಂತಾನೆ ಮಾಡಿದ್ವಿ” ಎಂದರು. ಈರಿ ಕರಿಯನ ತಾಯಿ ಕುಳಿತಿದ್ದ ಜಾಗ, ದಿಮ್ಮಿ ಬಂದ ದಾರಿ, ಅದು ಪುಡಿಮಾಡಿದ ಯುಪಟೋರಿಯಂ ಜಿಗ್ಗು ಇತ್ಯಾದಿಗಳನ್ನೆಲ್ಲಾ ತೋರಿಸಿದಳು. ಯುಪಟೋರಿಯಂ ಚಾಪೆ ಹಾಸಿದಂತೆ ನೆಲಕ್ಕೆ ಮಲಗಿತ್ತು, ಅದರೊಳಗೆ ಗುಳ್ಳೆನರಿಗಳು ಸೇರಿಕೊಂಡು ಕೇರಿಯ ಕೋಳಿಗಳನ್ನೆಲ್ಲಾ ಕದಿಯುತ್ತಿದ್ದುದರಿಂದ ಅದು ಸಪಾಯ ಆಗಿದ್ದು ಒಳ್ಳೆಯದೇ ಆಯ್ತೆಂದು ಅವರಿಗೆ ಸಮಾಧಾನ ಆಯ್ತು. ಎಲ್ಲಾ ಕೂಡಿ ಆ ಮಹಾಕಾಯದ ದಿಮ್ಮಿ ಎತ್ತ ಹೋಯ್ತಂದು ಹುಡುಕಾಡಿದರು. ಧೂಮಕೇತುವಿನಂತೆ ಬಂದ ದಿಮ್ಮಿ ಯಾರ ಕಣ್ಣಿಗೂ ಕಾಣಲಿಲ್ಲ. ಅದು ಪುಡಿಪುಡಿಮಾಡಿ ಹೋದ ಗಿಡ ಮರ ಹುತ್ತಗಳಿಲ್ಲದಿದ್ದರೆ ಈರಿಗೂ ದಾನಮ್ಮನಿಗೂ ಭ್ರಾಂತಿ ಹಿಡಿದಿದೆ ಎಂದೇ ಎಲ್ಲ ತಿಳಿಯುತ್ತಿದ್ದರು.
ಕಾಡಿನ ಯಾವ ಸಂದುಗೊಂದು ಮೂಲೆಗಳಲ್ಲಿ ಹುಡುಕಿದರೂ ಅವರಿಗೆ ಅದರ ಅವಶೇಷ ಸಹ ಕಾಣಲಿಲ್ಲ. ಕಾಡೊಳಗೆ ನುಗ್ಗಿದ ದಿಮ್ಮಿ ಮಂಗಮಾಯವಾಗಿತ್ತು. ಕೊಂಚ ದೂರದ ಅನಂತರ ಈಚಲು ಬಯಲು ಇದ್ದುದರಿಂದ ದಿಮ್ಮಿ ಉರುಳಿದಾಗ ಬಾಗಿದ ಈಚಲು ಗರಿಗಳೆಲ್ಲ ಅನಂತರ ನೆಟ್ಟಗಾಗಿ ಅದು ಹೋದ ದಿಕ್ಕು ತಿಳಿಯುತ್ತಿರಲಿಲ್ಲ. ದೆವ್ವ ಭೂತಗಳಲ್ಲಿ ದೇವರಷ್ಟೇ ಶ್ರದ್ಧೆ ನಂಬುಗೆ ಇದ್ದ ಹಳ್ಳಿಯವರು ದಿಮ್ಮಿ ಅಂತರ್ಧಾನವಾದುದಕ್ಕೆ ಸಮರ್ಪಕ ವಿವರಣೆ ಕಂಡುಕೊಳ್ಳಲು ಹೆಚ್ಚಿನ ಪ್ರಯತ್ನ ಮಾಡಲಿಲ್ಲ. ಸೋನ್ಸ್ ಅದನ್ನು ಕುಯ್ದ ಕೂಡಲೇ ಅದು ಉರುಳಿಕೊಂಡು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಕಾಡೊಳಗೆ ಯಾರೂ ಇಲ್ಲದ ಜಾಗಕ್ಕೆ ಹೋಗಿ ಮಾಯವಾಗಿ ಹೋಯ್ತು ಎಂದು ಹೇಳಿಕೊಂಡು ಹಿಂದಿರುಗಿದರು.
ಇದನ್ನೂ ಓದಿ : Poornachandra Tejaswi Death Anniversary: ನಮ್ಮ ತೇಜಸ್ವಿ; ತೇಜಸ್ವಿಯವರ ಹಸಿವೆ ಮರೆಸಿದ ಆ ಸಂಗೀತ