New Book: ಶೆಲ್ಫಿಗೇರುವ ಮುನ್ನ; ಮಾಲತಿ ಭಟ್ ಪುಸ್ತಕ ‘ದೀಪದ ಮಲ್ಲಿಯರು’ ನಾಳೆ ಬಿಡುಗಡೆ

|

Updated on: Apr 09, 2022 | 12:21 PM

Business Woman : ಕಪ್ಪುಹೊಗೆಯುಣ್ಣುತ್ತ ಮನೆಗೆಲಸ ಮಾಡಿಕೊಂಡಿದ್ದ ರಾಜಕುಮಾರಿ ಸಿಂಡ್ರೆಲ್ಲಾ ಬೆಳಗಾಗುವುದರಲ್ಲಿ ರಾಣಿಯಾಗುವ ಕಥೆ ಎಲ್ಲರಿಗೂ ಗೊತ್ತು; ಕಾಲಿಗೆ ಚಪ್ಪಲಿ ಕೊಳ್ಳಲೂ ಹಣವಿಲ್ಲದ, ಅನಾಥಾಶ್ರಮದಲ್ಲಿ ಬೆಳೆದ ಯುವತಿಯೊಬ್ಬಳು ತನ್ನ ಪರಿಶ್ರಮದಿಂದ ಅಮೆರಿಕದಲ್ಲಿ ಯಶಸ್ವಿ ಉದ್ಯಮಿಯಾದ ಕಥೆ ಇಲ್ಲಿದೆ.

New Book: ಶೆಲ್ಫಿಗೇರುವ ಮುನ್ನ; ಮಾಲತಿ ಭಟ್ ಪುಸ್ತಕ ‘ದೀಪದ ಮಲ್ಲಿಯರು’ ನಾಳೆ ಬಿಡುಗಡೆ
ಪತ್ರಕರ್ತೆ ಮಾಲತಿ ಭಟ್
Follow us on

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com 

ಕೃತಿ: ದೀಪದ ಮಲ್ಲಿಯರು (ಬದುಕು ಬೆಳಗಿಸಿದ ಸಾಧಕಿಯರ ಕಥೆಗಳು)
ಲೇಖಕಿ : ಮಾಲತಿ ಭಟ್
ಪುಟ: 140 
ಬೆಲೆ: ರೂ. 130 
ಪ್ರಕಾಶಕನ: ಬೆನಕ ಬುಕ್ಸ್ ಬ್ಯಾಂಕ್, ಕೋಡೂರು

ಒಂದರ್ಥದಲ್ಲಿ ಈ ಪುಸ್ತಕದಲ್ಲಿ ಪ್ರಸ್ತಾಪಿಸಲಾದ ಎಲ್ಲ ಮಹಿಳೆಯರು ತಮ್ಮ ಬದುಕಿಗೆ ಮತ್ತು ತಮ್ಮ ಸುತ್ತಲಿನವರ ಬದುಕಿಗೆ ಬೆಳಕಾದವರೇ. ಆಸಿಡ್ ದಾಳಿಗೆ ತುತ್ತಾಗಿಯೂ ಜೀವನಪ್ರೀತಿ ಉಳಿಸಿಕೊಂಡ ಲಕ್ಷ್ಮೀ ಅಗರವಾಲ್, ಅಪಘಾತದಲ್ಲಿ ಕಾಲು ಕಳೆದುಕೊಂಡೂ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ, ಸೊಂಟದಿಂದ ಕೆಳಗಿನ ಭಾಗ ನಿಷ್ಕ್ರಿಯವಾದರೂ ಪ್ಯಾರಾ ಒಲಿಂಪಿಕ್‌ನಲ್ಲಿ ಚಿನ್ನ ಗೆದ್ದ ದೀಪಾ ಮಲಿಕ್, ಮುಂಬೈನ ಕೊಳೆಗೇರಿಯಲ್ಲಿ ಮನೆಗೆಲಸ ಮಾಡುತ್ತಿದ್ದು, ಈಗ ಕೋಟ್ಯಧಿಪತಿ ಉದ್ಯಮಿಯಾಗಿರುವ ಕಲ್ಪನಾ ಸರೋಜ್, ಮದ್ಯವ್ಯಸನಿ ಪತಿಯನ್ನು ಸರಿದಾರಿಗೆ ತಂದು, ವ್ಯಸನಮುಕ್ತಿಗಾಗಿ ಪುನರ್ವಸತಿ ಕೇಂದ್ರ ತೆರೆದಿರುವ ಯಶೋದಾ ಇವರೆಲ್ಲ ಕಷ್ಟಕಾರ್ಪಣ್ಯದ ನಡುವೆಯೂ ಕೇವಲ ಮನಸ್ಥೈರ್ಯದಿಂದ ವಿಧಿಯನ್ನು ಮಣಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ರಾಯಚೂರಿನಂತಹ ಬಿಸಿಲೂರಿನಲ್ಲಿ ಕಾಡಿನಂತಹ ತೋಟ ಮಾಡಿರುವ ಕವಿತಾ ಮಿಶ್ರಾ, ಬೆಂಗಳೂರಿನ ಸಾಂಸ್ಕೃತಿಕ ಲೋಕದಲ್ಲಿ ಮುಂಚೂಣಿಯಲ್ಲಿದ್ದು ಹತ್ತು, ಹಲವು ಸಂಸ್ಥೆಗಳನ್ನು ಕಟ್ಟಿರುವ ವಿಮಲಾ ರಂಗಾಚಾರ್, ಪುತ್ತೂರಿನಂತಹ ಪುಟ್ಟ ಪಟ್ಟಣದಲ್ಲಿ 60ರ ದಶಕದಲ್ಲೇ ಆಸ್ಪತ್ರೆ ತೆರೆದು ಬಡರೋಗಿಗಳಿಗಾಗಿ ಬದುಕು ಮುಡುಪಾಗಿಟ್ಟ ಡಾ. ಗೌರಿ ಪೈ ಬದುಕು ತಮಗೆ ನೀಡಿರುವ ಸವಲತ್ತುಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ಮಾಲತಿ ಭಟ್, ಪತ್ರಕರ್ತೆ

‘ದೀಪದ ಮಲ್ಲಿಯರು’ ಒಂದು ಅಪರೂಪದ ವೈಶಿಷ್ಟ್ಯಪೂರ್ಣ ಕೃತಿ. ಜೀವನದಲ್ಲಿ ಇನ್ನು ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಶೂನ್ಯ ಸ್ಥಿತಿಯಲ್ಲಿದ್ದ ಮಹಿಳೆಯರು ತಮ್ಮ ಇಚ್ಛಾಬಲದಿಂದ ಸವಾಲುಗಳನ್ನು ಗೆದ್ದು ಸಾಧನೆ ಮಾಡಿದ ಸಂಗತಿಗಳನ್ನು ಪತ್ರಕರ್ತೆ, ಲೇಖಕಿ ಮಾಲತಿ ಭಟ್ ನಿರೂಪಿಸುತ್ತಾ ಅವರ ವ್ಯಕ್ತಿಚಿತ್ರಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇಂದು ಜಗತ್ತಿನಲ್ಲಿ ಎಲ್ಲ ದೇಶಗಳಲ್ಲೂ ಬಹುತೇಕವಾಗಿ ಬದುಕು ಗಂಡಾಳ್ವಿಕೆಯದೇ ಆಗಿದೆ. ಭಾಷೆಗಳ ರಚನೆಗಳನ್ನೇ ನೋಡಿದರೂ ಹೆಚ್ಚು,ಕಡಿಮೆ ಜಗತ್ತಿನ ಎಲ್ಲ ಭಾಷೆಗಳೂ ಗಂಡು ಪ್ರಾಧಾನ್ಯತೆಯ ಸಂಬೋಧನೆಯ ಪ್ರಯೋಗರೂಪಗಳೇ ಆಗಿವೆ. ಮನುಷ್ಯಕುಲ, ಮಾವನಕುಲ ಇವೆಲ್ಲವೂ ಹೆಣ್ಣಿನ ಗೈರುಹಾಜರಿಯ ಪ್ರಯೋಗಗಳೇ. ಹೀಗಾಗಿ ಹೆಣ್ಣಿಗೆ ಬದುಕೆಂಬುದು ಹೆಚ್ಚು ಬೆಳಕಿಗೆ ತೆಗೆದುಕೊಂಡದ್ದಲ್ಲ. ಆದರೆ, ಜಗತ್ತಿನ ಯಾವುದೇ ಸಮುದಾಯದ ಸಂಸ್ಕೃತಿ, ನಾಗರಿಕತೆಯ ಬೆಳವಣಿಗೆಯ ಹಿಂದೆ ಹೆಣ್ಣಿನ ದುಡಿಮೆ, ಹೆಣ್ಣಿನ ಧೀಶಕ್ತಿ ಕಾರಣವಾಗುತ್ತದೆಂಬುದು ಜನಜನಿತ. ಕುಟುಂಬ ನಿರ್ವಹಣೆಯಿಂದ ಹಿಡಿದು ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವ ಎಲ್ಲ ಕ್ರಿಯೆಗಳಲ್ಲೂ ಹೆಣ್ಣಿನ ಪಾತ್ರ ಪ್ರಧಾನವಾಗಿರುತ್ತದೆ. ಆದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ರೀತಿ ಪುರುಷ ಪ್ರಾಧಾನ್ಯತೆ ಮೆರೆದಿದೆ. ಆದ್ದರಿಂದಲೇ ಈ ಅರಿವಿನ ಎಚ್ಚರದಲ್ಲಿ ‘ದೀಪ’ ಎನ್ನುವುದು ಔಚಿತ್ಯಪೂರ್ಣ.
ಡಾ. ವಸುಂಧರಾ ಭೂಪತಿ, ಲೇಖಕಿ

ತನಗೇ ತಾನೇ ಬೆಳಕಾದ ಜ್ಯೋತಿ

ತೆಲಂಗಾಣದ ವಾರಂಗಲ್ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಅನಿಲಾ ಜ್ಯೋತಿ ರೆಡ್ಡಿಯವರ ಬದುಕಿನ ಕಥೆ ಯಾವುದೋ ರೋಚಕ ಸಿನಿಮಾಗೂ ಕಡಿಮೆಯಿಲ್ಲ. ಒಂದು ಹೊತ್ತಿನ ಊಟಕ್ಕೂ ತತ್ವಾರವಾಗಿದ್ದ ಬಡಕುಟುಂಬದ ಎರಡನೇ ಮಗಳಾಗಿ ಜ್ಯೋತಿ ಹುಟ್ಟಿದ್ದರು. ಅವರ ಹಿಂದೆ ಮತ್ತೆರಡು ತಂಗಿಯರು. ಮಕ್ಕಳನ್ನು ಸಾಕಲಾರದೇ ಅವರಪ್ಪ ಜ್ಯೋತಿ ಮತ್ತು ಆಕೆಯ ಅಕ್ಕನನ್ನು ಅನಾಥಾಶ್ರಮದಲ್ಲಿ ಬಿಟ್ಟಿದ್ದರು. ಇವರ ತಾಯಿ ಸತ್ತುಹೋಗಿದ್ದಾರೆ ಎಂದು ಸುಳ್ಳು ಬೇರೆ ಹೇಳಿದ್ದರು.

ಅಮ್ಮನನ್ನು ಬಿಟ್ಟಿರಲಾರದ ಜ್ಯೋತಿ ಮತ್ತೆ ಮನೆಗೆ ಮರಳಿದ್ದರು. ಆದರೆ, ಹೊಟ್ಟೆಯ ಹಸಿವು ಎಲ್ಲಕ್ಕಿಂತ ದೊಡ್ಡದು. ಅನಿವಾರ್ಯದಿಂದ ಕ್ರಮೇಣ ಅನಾಥಾಶ್ರಮದ ಜೀವನಕ್ಕೆ ಹೊಂದಿಕೊಂಡರು. ಅನಾಥಶ್ರಮದಲ್ಲಿದ್ದು ಓದುವಾಗ ಅವರು ಅತಿಯಾಗಿ ಅಂಕ ಗಳಿಸುವ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಆದರೆ, ಆಶ್ರಮದಲ್ಲಿದ್ದ ಪುಟ್ಟ ಮಕ್ಕಳಿಗೆ ಶಾಲಾಭ್ಯಾಸದಲ್ಲಿ ನೆರವಾಗುತ್ತಿದ್ದರು. ಟೈಲರಿಂಗ್, ಕಸೂತಿ ಇತ್ಯಾದಿ ಕೈಕೆಲಸ ಕಲಿತಿದ್ದರು.

ಒಂಬತ್ತನೇ ತರಗತಿಯಲ್ಲಿ ಇರುವಾಗ ಶಿವರಾತ್ರಿಯ ದಿನ ಜ್ಯೋತಿ ಮತ್ತು ಆಕೆಯ ಗೆಳತಿಯರು ವಾರ್ಡನ್ ಕಣ್ಣುತಪ್ಪಿಸಿ ರೋಮಾಂಟಿಕ್ ಸಿನಿಮಾವೊಂದಕ್ಕೆ ಹೋಗಿದ್ದರಂತೆ. ಅಲ್ಲಿ ನಾಯಕ ನಾಯಕಿಯನ್ನು ಪ್ರೀತಿಸುವ ಪರಿ ನೋಡಿ, ನಾನು ಸಹ ಪ್ರೀತಿಸಿ ಮದುವೆಯಾಗುವೆ. ಅಂತಹದ್ದೇ ಸುಂದರ ಜೀವನ ಸಾಗಿಸುವೆ ಎಂದೆಲ್ಲ ಗೆಳತಿಯರ ಬಳಿ ಹೇಳಿಕೊಂಡಿದ್ದರAತೆ. ಇವರಿರುವ ಅನಾಥಾಶ್ರಮಕ್ಕೆ ಶ್ರೀಮಂತ ವ್ಯಕ್ತಿಯೊಬ್ಬರು ಆಗಾಗ ಕಾರಿನಲ್ಲಿ ಬರುತ್ತಿದ್ದರು. ಸೂಟು-ಬೂಟು ಧರಿಸಿ ಮಕ್ಕಳಿಗೆಲ್ಲ ಚಾಕಲೇಟ್, ಸಿಹಿತಿಂಡಿ, ಬಟ್ಟೆ ಹಂಚಿ ಹೋಗುತ್ತಿದ್ದರು. ಅವರನ್ನು ನೋಡಿದಾಗಲೂ ಜ್ಯೋತಿ ತಾನೂ ಹೀಗೆ ಕಾರಿನಲ್ಲಿ ಬರುವಂತಾಗಬೇಕು ಎಂದು ಹಗಲುಕನಸು ಕಾಣುತ್ತಿದ್ದರು.

ಆದರೆ, ಹತ್ತನೇ ಕ್ಲಾಸ್ ಮುಗಿಯುತ್ತಿದ್ದಂತೆ ಅವರಪ್ಪ ಜ್ಯೋತಿಯ ಭವಿಷ್ಯ ನಿರ್ಧರಿಸಿಬಿಟ್ಟಿದ್ದರು. 16ರ ಜ್ಯೋತಿಯನ್ನು ಆಕೆಗಿಂತ ಹತ್ತು ವರ್ಷ ದೊಡ್ಡವನಾದ ಹೈಸ್ಕೂಲ್ ಸಹ ಓದದ ಯುವಕನಿಗೆ ಮದುವೆ ಮಾಡಿಕೊಡಲಾಯಿತು. ತವರಿಗಿಂತ ಗಂಡನ ಮನೆ ಪರಿಸ್ಥಿತಿ ಬೇರೆಯಾಗಿರಲಿಲ್ಲ. ಇದ್ದಿದ್ದು ಅರ್ಧ ಎಕೆರೆ ಹೊಲ ಮಾತ್ರ. ತೊತ್ತಿನ ಚೀಲ ತುಂಬಿಸಬೇಕು ಎಂದರೆ ಕೆಲಸಕ್ಕೆ ಹೋಗಲೇಬೇಕು. ನಿತ್ಯವೂ ಮನೆಕೆಲಸ ಮುಗಿಸಿ ಕೂಲಿ ಕೆಲಸಕ್ಕೆ ಹೋಗಬೇಕಿತ್ತು. ವಾರಂಗಲ್ ಜಿಲ್ಲೆ ಬಿರುಬಿಸಲಿಗೆ ಹೆಸರುವಾಸಿ. ಹೊಲದಲ್ಲಿ ಕೆಲಸ ಮಾಡುತ್ತ ಜ್ಯೋತಿಯ ಮೈ ಕಪ್ಪಾಗಿ, ಒಣಗತೊಡಗಿತು. ಸಂಜೆ ಮನೆಗೆ ಬಂದು ಸೌದೆಒಲೆಯಲ್ಲಿ ಅಡುಗೆ ಮಾಡಬೇಕಿತ್ತು. ಮಿಕ್ಸರ್, ಗ್ಯಾಸ್, ಕುಕ್ಕರ್‌ನಂತಹ ಆಧುನಿಕ ಸೌಲಭ್ಯಗಳು ಆ ಮನೆಯ ಹತ್ತಿರವೂ ಸುಳಿದಿರಲಿಲ್ಲ. ಬೇರೆಯವರ ಬಳಿ ಮಾತನಾಡುವಂತಿರಲಿಲ್ಲ. ಅತ್ತೆ-ಗಂಡನ ಅನುಮತಿಯಿಲ್ಲದೇ ಎಲ್ಲಿಗೂ ಹೋಗುವಂತಿರಲಿಲ್ಲ. ಕನಸುಗಳೆಲ್ಲ ನೀರ್ಗುಳ್ಳೆಯಂತೆ ಒಡೆದುಹೋಗಿದ್ದವು.

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ: ‘ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ, ದೊಡ್ಡಬಳ್ಳಾಪುರ’ ಡಿಎಂ ಘನಶ್ಯಾಮ ಕೃತಿ ಬಿಡುಗಡೆ

ಮದುವೆಯಾದ ಮರುವರ್ಷವೇ 17 ವರ್ಷ ತುಂಬುವುದರೊಳಗಾಗಿ ಜ್ಯೋತಿ ಹೆಣ್ಣುಮಗುವಿನ ಅಮ್ಮನಾದರು. ಮಾರನೇ ವರ್ಷ ಮತ್ತೊಬ್ಬ ಮಗಳು ಹುಟ್ಟಿದಳು. ಆದರೆ, ಇಬ್ಬರು ಪುಟ್ಟ ಮಕ್ಕಳಿದ್ದಾರೆ ಎಂದು ಕೂಲಿ ಕೆಲಸಕ್ಕೆ ಚಕ್ಕರ್ ಹಾಕುವಂತಿರಿಲ್ಲ. ಮಕ್ಕಳಿಗೆ ಊಟ, ಔಷಧಿ ಕೊಡಿಸಬೇಕು ಅಂದರೆ ಕೂಲಿಗೆ ಹೋಗುವುದು ಅನಿವಾರ್ಯವಾಗಿತ್ತು. ೧೯೮೫ರಿಂದ ೯೦ರವರೆಗೆ ಜ್ಯೋತಿ ಕೃಷಿ ಕೂಲಿ ಕಾರ್ಮಿಕಳಾಗಿ ಹೊಲದಲ್ಲಿ ಕೆಲಸ ಮಾಡಿದರು. ಮಕ್ಕಳು ಹುಟ್ಟಿದ ಮೇಲೆ ಜ್ಯೋತಿಯಲ್ಲಿ ವಿಚಿತ್ರ ಛಲ ಹುಟ್ಟಿತು. ನನ್ನ ಸಂಕಷ್ಟದ ಬದುಕು ನನಗೇ ಸಾಕು. ನನ್ನ ಮಕ್ಕಳನ್ನು ಎಷ್ಟು ಕಷ್ಟವಾದರೂ ಓದಿಸುತ್ತೇನೆ. ನೆಮ್ಮದಿಯ ಬದುಕು ಅವರದ್ದಾಗಬೇಕು ಎನ್ನುವ ಸಂಕಲ್ಪ ಮಾಡಿದರು. ಹಗಲು- ರಾತ್ರಿ ಆ ಬಗ್ಗೆಯೇ ಯೋಚಿಸುತ್ತಿದ್ದರು.

ಮಕ್ಕಳಿಬ್ಬರನ್ನು ತೆಲುಗು ಮಾಧ್ಯಮ ಶಾಲೆಗೆ ಸೇರಿಸಿದರು. ಇಂಗ್ಲಿಷ್ ಮಾಧ್ಯಮಕ್ಕೆ ಕಳುಹಿಸುವಷ್ಟು ಹಣ ಅವರಲ್ಲಿರಲಿಲ್ಲ. ಎಷ್ಟೇ ಉದ್ದದ ಸುರಂಗವಾದರೂ ಅದರ ಕೊನೆಯಲ್ಲಿ ಬೆಳಕಿನ ಕಿರಣ ಗೋಚರಿಸುತ್ತದಂತೆ. ಅಂತಹ ಬೆಳಕು ಜ್ಯೋತಿಯ ಬದುಕಿನಲ್ಲೂ ಕಾಣಿಸಿಕೊಂಡಿತ್ತು. 1990ನೇ ಇಸ್ವಿಯದು. ಅವರ ಊರಿನ ವಯಸ್ಕರ ಶಿಕ್ಷಣ ಶಾಲೆಗೆ ಶಿಕ್ಷಕರ ಅಗತ್ಯವಿತ್ತು. ೧೦ನೇ ತರಗತಿ ಓದಿದ್ದ ಜ್ಯೋತಿ ಅಲ್ಲಿ ಶಿಕ್ಷಕಿಯಾಗಿ ಸೇರಿಕೊಂಡರು. ಪ್ರತಿತಿಂಗಳು ೧೫೦ ರೂಪಾಯಿ ಸಂಬಳ. ೫ ರೂಪಾಯಿ ಕೂಲಿ ಪಡೆಯುತ್ತಿದ್ದ ಜ್ಯೋತಿಗೆ ಅದು ಲಕ್ಷ ರೂಪಾಯಿಯಂತೆ ಕಂಡಿತ್ತು. ರಾತ್ರಿ ಹೊತ್ತು ನಡೆಯುವ ವಯಸ್ಕರ ಶಾಲೆಯಲ್ಲಿ ಶಿಕ್ಷಕಿಯಾದ ಮೇಲೆ ಅವರ ಜಗತ್ತು ವಿಸ್ತರಿಸತೊಡಗಿತು. ಅನೇಕ ಶಿಕ್ಷಕಿಯರು ಗೆಳತಿಯರಾದರು. ಅನಾಥಾಶ್ರಮದಲ್ಲಿ ಟೈಲರಿಂಗ್ ಕಲಿತಿದ್ದ ಜ್ಯೋತಿ ಹಗಲು ಹೊತ್ತಿನಲ್ಲಿ ಟೈಲರಿಂಗ್ ಹೇಳಿಕೊಡತೊಡಗಿದರು. ಸರ್ಕಾರವೇ ನಡೆಸುವ ವೃತ್ತಿಶಿಕ್ಷಣ (ವೊಕೇಷನಲ್) ತರಬೇತಿ ಪಡೆದರು. ತನ್ನ ಗೆಳತಿಯರಿಗಾಗಿ ಚಿಟ್‌ಫಂಡ್ ನಡೆಸತೊಡಗಿದರು. ಈ ನಡುವೆ ಕಾಕತೀಯ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿ ಪಡೆಯಲು ಯತ್ನಿಸಿದರು. ಆದರೆ, ತಾಂತ್ರಿಕ ಕಾರಣದಿಂದ ಅವರಿಗೆ ಪ್ರವೇಶ ನಿರಾಕರಿಸಲಾಯಿತು.

ಇದನ್ನೂ ಓದಿ : Travelogue: ಶೆಲ್ಫಿಗೇರುವ ಮುನ್ನ; ‘ಹಲವು ನಾಡು ಹೆಜ್ಜೆ ಹಾಡು’ ಜಯಶ್ರೀ ದೇಶಪಾಂಡೆ ಪ್ರವಾಸ ಕಥನ ಸದ್ಯದಲ್ಲೇ

1995ರ ಹೊತ್ತಿಗೆ ಜ್ಯೋತಿಯ ತಿಂಗಳ ಸಂಬಳ 6000 ರೂಪಾಯಿಗೆ ಏರಿತ್ತು. ಚಿಟ್ ಫಂಡ್‌ನಿಂದ ತಿಂಗಳು ತಿಂಗಳು 25,000 ಬರತೊಡಗಿತ್ತು. ಹೀಗೊಂದು ದಿನ ಜ್ಯೋತಿಯ ತಾಯಿಯ ಸಂಬಂಧದ ದೂರದ ಮಹಿಳೆಯೊಬ್ಬರು ಅಮೆರಿಕದಿಂದ ಹುಟ್ಟೂರಿಗೆ ಬಂದಿದ್ದರು. ಕಣ್ಣಿಗೆ ಕಪ್ಪು ಕನ್ನಡಕ, ಗಾಳಿಗೆ ಹಾರಾಡುತ್ತಿದ್ದ ಕೂದಲು, ಅವರ ವೇಷಭೂಷಣ, ಮಾತನಾಡುವ ಶೈಲಿ, ಕಾರು ಓಡಿಸುವ ಚಾಲಾಕಿತನ ಎಲ್ಲವನ್ನೂ ನೋಡಿ ಜ್ಯೋತಿ ದಂಗಾದರು. ನಾನೂ ಅಮೆರಿಕಕ್ಕೆ ಬರಬಹುದೇ ಎಂದು ಆಕೆಯನ್ನು ಕೇಳಿದರು. ನಿನ್ನಂತಹ ಧೈರ್ಯವಂತೆಗೆ ಅಲ್ಲಿ ಖಂಡಿತ ಅವಕಾಶವಿದೆ ಎಂದು ಆಕೆ ಉತ್ತರಿಸಿದರು. ಆ ಕ್ಷಣ ಜ್ಯೋತಿಯವರಲ್ಲಿ ಅಮೆರಿಕದ ಕನಸು ಮೊಳೆಯತೊಡಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ತನ್ನದೇ ಕಾರು ಓಡಿಸಬೇಕು ಎನ್ನುವ ಆಸೆ ಹೆಮ್ಮರವಾಗತೊಡಗಿತ್ತು. ತನ್ನದೇ ಊರಲ್ಲಿ ಇದೆಲ್ಲ ಸಾಧ್ಯವೇ ಇಲ್ಲ ಎನ್ನುವುದು ಅವರಿಗೆ ಗೊತ್ತಿತ್ತು.

ಸಮಯ ವ್ಯರ್ಥ ಮಾಡುವ ಜಾಯಮಾನವೇ ಅವರದ್ದಲ್ಲ. ತಕ್ಷಣ ಹೈದರಾಬಾದ್‌ನಲ್ಲಿ ಕಂಪ್ಯೂಟರ್ ತರಬೇತಿಗೆ ಸೇರಿದರು. ಅದಕ್ಕಾಗಿ ನಿತ್ಯ ಎರಡು ಗಂಟೆ ಪ್ರಯಾಣಿಸಬೇಕಿತ್ತು. ಆರಂಭಿಕ ತರಬೇತಿ ಪಡೆದ ನಂತರ ಜ್ಯೋತಿ ತಡಮಾಡಲಿಲ್ಲ. ಪಾಸ್‌ಪೋರ್ಟ್ ಮಾಡಿಸಿಕೊಂಡರು. ಅಮೆರಿಕ ವೀಸಾಕ್ಕಾಗಿ ಪ್ರಯತ್ನಿಸಿದರು. ಅಮೆರಿಕ ಪ್ರಯಾಣ ಖಚಿತವಾದ ನಂತರ ಇಬ್ಬರು ಹೆಣ್ಣು ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸಿದರು. ಹರಕು-ಮುರುಕು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ ಜ್ಯೋತಿ ಅಮೆರಿಕ ವಿಮಾನ ಹತ್ತಿಯೇಬಿಟ್ಟರು. ಆಗ ಜ್ಯೋತಿಯ ವಯಸ್ಸು 26 ಅಷ್ಟೇ. ನ್ಯೂಜೆರ್ಸಿಯ ಗುಜರಾತಿ ಕುಟುಂಬವೊಂದರಲ್ಲಿ ತಿಂಗಳು ೩೫೦ ಡಾಲರ್ ಪಾವತಿಸಿ ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡರು.

ಮೊದಲಿಗೆ ಸಣ್ಣ ಸಂಬಳದ ಸೇಲ್ಸ್ ಗರ್ಲ್ ಕೆಲಸಕ್ಕೆ ಸೇರಿಕೊಂಡರು. ಮೂರು ಮೈಲಿ ದೂರವಿದ್ದ ಕೆಲಸದ ಸ್ಥಳಕ್ಕೆ ನಡೆದುಕೊಂಡೇ ಹೋಗುತ್ತಿದ್ದರು. ಅಮೆರಿಕದ ಪರಿಸರಕ್ಕೆ ಅಲ್ಲಿನ ನೀತಿ-ರೀತಿಗೆ ಹೊಂದಿಕೊಂಡ ಮೇಲೆ ಹೆಚ್ಚಿನ ಸಂಬಳದ ಕೆಲಸ ಅರಸತೊಡಗಿದರು. ದಕ್ಷಿಣ ಕರೋಲಿನಾದ ಮೊಟೆಲ್ ಒಂದರಲ್ಲಿ ಪರಿಚಾರಿಕೆಯಾಗಿ, ಅರಿಜೋನಾದ ಫಿನಿಕ್ಸ್ನಲ್ಲಿ ಮಕ್ಕಳನ್ನು ನೋಡಿಕೊಳ್ಳುವ ದಾದಿಯಾಗಿ ಕೆಲಸ ಮಾಡಿದರು. ಪೆಟ್ರೋಲ್ ಬಂಕ್, ರೆಸ್ಟೋರೆಂಟ್ ಎಲ್ಲದರಲ್ಲೂ ಕೆಲಸ ಮಾಡಿದರು. ಎರಡು ವರ್ಷಗಳಾಗುವ ಹೊತ್ತಿಗೆ ಅರಿಜೋನಾದ ಸಾಫ್ಟವೇರ್ ನೇಮಕಾತಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದರು. ಹಲವು ಕನಸುಗಳನ್ನು ಹೊತ್ತು ಬರುತ್ತಿದ್ದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕೊಡಿಸುವ ಕೆಲಸ ಅದು.

ಅಷ್ಟರಲ್ಲಿ ಅಮೆರಿಕಕ್ಕೆ ಹೋಗಿ ಎರಡು ವರ್ಷಗಳಾಗಿದ್ದವು. ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತ್ತು. ವಾರಂಗಲ್‌ಗೆ ವಾಪಸಾಗಿ ಗಂಡ, ಮಕ್ಕಳನ್ನು ಅಮೆರಿಕಕ್ಕೆ ಕರೆದೊಯ್ಯಲು ನಿರ್ಧರಿಸಿದರು. ಊರಿನ ಶಿವ ದೇವಾಲಯಕ್ಕೆ ಹೋದಾಗ ಅಲ್ಲಿನ ಪೂಜಾರಿ ಇವರ ಮುಖ ನೋಡಿ ಸ್ವಂತ ಉದ್ಯೋಗ ಮಾಡಿದಲ್ಲಿ ಯಶಸ್ಸು ಕಾಣುತ್ತೀಯಾ ಅಂದರಂತೆ. ಈ ಮಾತು ಅವರ ಮನದಲ್ಲಿ ನಿಂತುಬಿಟ್ಟಿತು.

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಅನುವಾದಿತ ಕೃತಿ ಇಂದಿನಿಂದ ಲಭ್ಯ 

ಅಮೆರಿಕಕ್ಕೆ ವಾಪಸಾಗುವಾಗ ಮೆಕ್ಸಿಕೊ ಗಡಿಯಲ್ಲಿ ಅನುಮತಿಗಾಗಿ ಕಾಯಬೇಕಿತ್ತು. ತನ್ನಂತೆ ಅಮೆರಿಕಕ್ಕೆ ಬರುವ ಕನಸು ಕಾಣುವವರಿಗೆ ನೆರವಾಗುವ, ಮಾಹಿತಿ-ಮಾರ್ಗದರ್ಶನ ಒದಗಿಸುವ ಕಂಪನಿ ಸ್ಥಾಪಿಸುವುದು ಒಳಿತಲ್ಲವೇ ಎನ್ನುವ ಯೋಚನೆ ಆ ಸಮಯದಲ್ಲಿ ಅವರಿಗೆ ಥಟ್ಟನೆ ಹೊಳೆಯಿತು. ದಿನಗಳೆದಂತೆ ಆ ಯೋಚನೆ ಹರಳುಗಟ್ಟುತ್ತ ಹೋಯಿತು. ಧೈರ್ಯ ಮಾಡಿ ಅಮೆರಿಕ ವೀಸಾ ಮಾಹಿತಿ ಒದಗಿಸುವ ಸೇವೆ ಆರಂಭಿಸಿಯೇಬಿಟ್ಟರು. ಜ್ಯೋತಿ ಅವರ ಕನಸುಗಳಿಗೆಲ್ಲ ರೆಕ್ಕೆ ಮೂಡತೊಡಗಿತ್ತು. ದಿನೇ ದಿನೇ ಅವರ ಕಂಪನಿ ಗಟ್ಟಿಯಾಗುತ್ತ ಹೋಯಿತು. ಆನಂತರದಲ್ಲಿ ಅರಿಜೋನಾದ ಫಿನಿಕ್ಸ್ನಲ್ಲಿ ಸಾಫ್ಟ್ವೇರ್ ಕಂಪನಿಯನ್ನೂ ಆರಂಭಿಸಿದರು. ಈಗ ಅವರ ಕಂಪನಿ ೧೫ ದಶಲಕ್ಷ ಡಾಲರ್ (ಅಂದಾಜು 105 ಕೋಟಿ ರೂಪಾಯಿ) ವ್ಯವಹಾರ ಮಾಡುತ್ತಿದೆ.

5 ರೂಪಾಯಿ ಕೂಲಿ ಎಲ್ಲಿ..? 105 ಕೋಟಿ ಎಲ್ಲಿ..? ಕೂಲಿ ಮಾಡುವಾಗ ಬರಿಗಾಲಿನಲ್ಲಿ ನಡೆದು ಕಾಲೆಲ್ಲ ಒಡೆದುಹೋಗಿತ್ತು. ಈಗ ನನ್ನ ಬಳಿ ೨೦೦ ಜೊತೆ ಚಪ್ಪಲಿಗಳಿವೆ. ಆಗೆಲ್ಲ ವರ್ಷಕ್ಕೆ ಎರಡೇ ಸೀರೆ. ಶಿಕ್ಷಕಿಯಾಗಿದ್ದಾಗ ಹೊಸ ಸೀರೆ ಖರೀದಿಸಿದ್ದೆ. ಅದರ ಬೆಲೆ ೧೨೫ ರೂಪಾಯಿ. ನನಗಾಗ ಅದೇ ದೊಡ್ಡದೆನಿಸಿತ್ತು. 10 ಸಾವಿರ 20 ಸಾವಿರದ ಸೀರೆಗಳನ್ನೆಲ್ಲ ಈಗ ಕಣ್ಣುಮುಚ್ಚಿಕೊಂಡು ತೆಗೆದುಕೊಳ್ಳುತ್ತೇನೆ ಎಂದು ಜ್ಯೋತಿ ಹೇಳುತ್ತಾರೆ.

ಜ್ಯೋತಿ ಈಗ ಅಮೆರಿಕದಲ್ಲಿ ಮರ್ಸಿಡಿಸ್ ಬೆಂಜ್ ಓಡಿಸುತ್ತಾರೆ. ಕಪ್ಪು ಕನ್ನಡಕ ಹಾಕಿಕೊಂಡು, ಕೂದಲು ಗಾಳಿಗೆ ಹಾರುಬಿಡುತ್ತಾ…ಆ ಕನಸೆಲ್ಲ ಈಗ ನನಸಾಗಿದೆ. ಅವರ ಹೆಣ್ಣುಮಕ್ಕಳಿಬ್ಬರು ಈಗ ಸಾಫ್ಟ್ವೇರ್ ಎಂಜಿನಿಯರ್‌ಗಳು. ಮದುವೆಯೂ ಆಗಿ ಅಮೆರಿಕದಲ್ಲೇ ನೆಲೆಸಿದ್ದಾರೆ. ತೆಲಂಗಾಣದ ಅನಾಥಾಶ್ರಮದಲ್ಲಿ ಬೆಳೆದು ದೊಡ್ಡವರಾದ ಜ್ಯೋತಿ ರೆಡ್ಡಿ ಅಮೆರಿಕದಲ್ಲಿ ಉದ್ಯಮ ಸ್ಥಾಪಿಸಿ ಭಾರತದ ಅಸಂಖ್ಯಾತ ಬಡ ಹೆಣ್ಣುಮಕ್ಕಳು, ಯುವಕರಿಗೆ ಆದರ್ಶವಾಗಿದ್ದಾರೆ. ಹಿಂದೊಮ್ಮೆ ಅವರಿಗೆ ಎಂ.ಎ. ಮಾಡಲು ಅವಕಾಶ ನಿರಾಕರಿಸಿದ್ದ ಕಾಕತೀಯ ವಿಶ್ವವಿದ್ಯಾಲಯದ ಪಠ್ಯದಲ್ಲಿ ಅವರ ಜೀವನಗಾಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಎಂದರೆ ಜ್ಯೋತಿ ಅವರಿಗೆ ಅಚ್ಚುಮೆಚ್ಚು. 11 ವರ್ಷದಿಂದ 16 ವರ್ಷದವರೆಗೆ ನಿಮ್ಮ ವ್ಯಕ್ತಿತ್ವ ಹರಳುಗಟ್ಟುತ್ತದೆ ಎಂದು ಕಲಾಂ ಹೇಳಿದ್ದಾರೆ. ಆದರೆ. ಆಗ ನಾನಿದ್ದದ್ದು ಅನಾಥಾಶ್ರಮದಲ್ಲಿ. ಯಾವಾಗ ಬೇಕಾದರೂ ನಿಮ್ಮ ಹಣೆಬರಹ ಬದಲಿಸಿಕೊಳ್ಳಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ ಎನ್ನುತ್ತಾರೆ ಜ್ಯೋತಿ. ತನ್ನಿಬ್ಬರು ಹೆಣ್ಣುಮಕ್ಕಳ ಬದುಕು ತನ್ನಂತಾಗಬಾರದು ಎನ್ನುವ ಛಲವೇ ಈ ಹೋರಾಟಕ್ಕೆ, ಏಳಿಗೆಗೆ ಪ್ರೇರಣೆಯಾಯಿತು ಎನ್ನುತ್ತಾರೆ ಅವರು.

ಸಹಾಯ ಹಸ್ತ: ತಾವು ಎತ್ತರಕ್ಕೆ ಏರಿದ್ದರೂ ತಮ್ಮ ಮೂಲವನ್ನು ಜ್ಯೋತಿ ಮರೆತಿಲ್ಲ. ಪ್ರತಿವರ್ಷ ಆಗಸ್ಟ್ 29ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ವಾರಂಗಲ್‌ಗೆ ಬರುತ್ತಾರೆ. ಬೇರೆ,ಬೇರೆ ಅನಾಥಾಶ್ರಮಗಳಿಗೆ ನೆರವು ನೀಡುತ್ತಾರೆ. ಅಲ್ಲಿನ ಮಕ್ಕಳ ಜೊತೆ ಕೂತು ಮಾತನಾಡುತ್ತಾರೆ. 220 ಮಂದಿ ಬುದ್ದಿಮಾಂದ್ಯ ಮಕ್ಕಳಿರುವ ಶಾಲೆಯೊಂದನ್ನು ನಡೆಸುತ್ತಾರೆ.

ಹೆಚ್ಚು ಅಪಾಯಕ್ಕೆ ತುತ್ತಾಗುವುದು ಅನಾಥ ಹೆಣ್ಣುಮಕ್ಕಳು. 10ನೇ ತರಗತಿ ಪಾಸಾದ ಅನಾಥ ಗಂಡುಮಕ್ಕಳ ಪಟ್ಟಿ ಸರ್ಕಾರದ ಬಳಿ ಇದೆ. ಆದರೆ, ಹೆಣ್ಣುಮಕ್ಕಳ ಲೆಕ್ಕವೇ ಇಲ್ಲ. ಈ ಹೆಣ್ಣುಮಕ್ಕಳನ್ನು ಕ್ರಮೇಣ ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ ಎಂದೂ ಕಳವಳ ವ್ಯಕ್ತಪಡಿಸುತ್ತಾರೆ. ಈ ನಿಟ್ಟಿನಲ್ಲಿ ಕಠಿಣ ನೀತಿಯ ಅಗತ್ಯವಿದೆ ಎನ್ನುವುದು ಅವರ ಪ್ರತಿಪಾದನೆ.

ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : ಬೆನಕ ಬುಕ್ಸ್ ಬ್ಯಾಂಕ್ 

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ಸುಧಾ ಶರ್ಮಾ ಪುಸ್ತಕ ‘ನಮ್ಮೊಳಗೆ ನಾವು’ ನಾಳೆಯಿಂದ ನಿಮ್ಮ ಓದಿಗೆ

Published On - 12:20 pm, Sat, 9 April 22