AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Book: ಶೆಲ್ಫಿಗೇರುವ ಮುನ್ನ: ‘ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ, ದೊಡ್ಡಬಳ್ಳಾಪುರ’ ಡಿಎಂ ಘನಶ್ಯಾಮ ಕೃತಿ ಬಿಡುಗಡೆ

British : ‘ವಿದುರಾಶ್ವತ್ಥದಲ್ಲಿ ನಮ್ಮವರಿಗೆ ಗುಂಡು ಹಾಕಿದರಂತೆ, ಕೊಂದೇಬಿಟ್ಟರಂತೆ, ಈ ಕೆಂಪುಮೂತಿ ಕೋತಿಗಳು ಇನ್ನೂ ಏನೇನು ಮಾಡ್ತಾವೋ, ಪಟೇಲರು ಯಾವಾಗ ನಮ್ಮನ್ನೆಲ್ಲಾ ಕಾಪಾಡ್ತಾರೋ, ರಾಮರಾಜ್ಯ ಎಂದುಬರುತ್ತೋ’

New Book: ಶೆಲ್ಫಿಗೇರುವ ಮುನ್ನ: ‘ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ, ದೊಡ್ಡಬಳ್ಳಾಪುರ’ ಡಿಎಂ ಘನಶ್ಯಾಮ ಕೃತಿ ಬಿಡುಗಡೆ
ಪತ್ರಕರ್ತ ಡಿ. ಎಂ. ಘನಶ್ಯಾಮ
ಶ್ರೀದೇವಿ ಕಳಸದ
|

Updated on:Mar 12, 2022 | 12:59 PM

Share

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com 

*

ಇಂದು ಮಧ್ಯಾಹ್ನ 3.30ಕ್ಕೆ ದೊಡ್ಡಬಳ್ಳಾಪುರದ ಶ್ರೀವಾಣಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಸ್ತುತ ಕೃತಿ ಬಿಡುಗಡೆಯಾಗಲಿದೆ.

ಕೃತಿ: ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ, ದೊಡ್ಡಬಳ್ಳಾಪುರ ಲೇಖಕರು: ಡಿ.ಎಂ.ಘನಶ್ಯಾಮ ಪುಟ: 88 ಬೆಲೆ: ರೂ 30 ಮುಖಪುಟ ಚಿತ್ರ: ಮುರಳೀಧರ ವಿ.ರಾಥೋಡ್ ಪ್ರಕಾಶಕರು: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

*

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾಕ್ಷಿಯಾಗಿರುವ 75 ಸ್ಥಳಗಳನ್ನು ಗುರುತಿಸಿ, ಆ ಸ್ಥಳದಲ್ಲಿ ನಡೆದ ಘಟನೆಗಳು, ತ್ಯಾಗ ಬಲಿದಾನಗಳು, ಹೋರಾಟಗಳು ಇತ್ಯಾದಿ ವಿವರ ದಾಖಲಿಸುವ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಹದಲ್ಲಿ ಕರ್ನಾಟಕದ ಕೊಡುಗೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಬಸವರಾಜ ಎಸ್.ಬೊಮ್ಮಾಯಿ, ಮುಖ್ಯಮಂತ್ರಿ

ಈ ಪುಸ್ತಕದ ಮೂಲಕ ನಾನು ಕರ್ನಾಟಕ ಸ್ವಾತಂತ್ರ್ಯ ಚಳವಳಿಯಲ್ಲಿ ದೊಡ್ಡಬಳ್ಳಾಪುರ ವಹಿಸಿದ ಪಾತ್ರದ ಬಗ್ಗೆ ವಿವರಿಸಲು ಪ್ರಯತ್ನಿಸುತ್ತಿದ್ದೇನೆ. ದೊಡ್ಡಬಳ್ಳಾಪುರ ಸೀಮೆಯಲ್ಲಿ ಸ್ವಾತಂತ್ರ್ಯ ಹೋರಾಟ ಚುರುಕಾಗಲು ಮೈಸೂರು ಸಂಸ್ಥಾನವು 1937ರ ಸುಮಾರಿನಲ್ಲಿ ಎದುರಿಸಿದ ಬರಗಾಲ, ಶಿವಪುರ ಧ್ವಜ ಸತ್ಯಾಗ್ರಹ, ವಿದುರಾಶ್ವಾತ್ಥ ಹತ್ಯಾಕಾಂಡ ಮುಖ್ಯಪಾತ್ರ ವಹಿಸಿದವು. ತಮ್ಮದೆನ್ನುವ ಎಲ್ಲವನ್ನೂ ಕಳೆದುಕೊಂಡು, ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹಿರಿಯರನ್ನು ನೆನೆಯುವುದು, ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಈ ಪುಸ್ತಕವೂ ಅಂಥ ಗೌರವ ಸಲ್ಲಿಕೆಯ ಒಂದು ಪ್ರಯತ್ನ. ಡಿ. ಎಂ. ಘನಶ್ಯಾಮ, ಪತ್ರಕರ್ತ

(ಆಯ್ದ ಭಾಗ)

ಕತ್ತಲು ಎಂದರೆ ಕತ್ತಲು. ಕಣ್ಣು ಬಿಟ್ಟಿದ್ದರೂ-ಮುಚ್ಚಿದ್ದರೂ ವ್ಯತ್ಯಾಸವೇ ತಿಳಿಯಲಾರದಷ್ಟು ಕತ್ತಲು. ಚಪ್ಪಲಿಯಿಲ್ಲದ ಪಾದಕ್ಕೆ ಸ್ಪರ್ಶವಾಗುತ್ತಿದ್ದ ಮಣ್ಣಿನ ಸ್ವಭಾವದಲ್ಲಿಯೇ ದಾರಿಯನ್ನು ಅಂದಾಜು ಮಾಡುತ್ತಿದ್ದ ಹುಡುಗನದು ದಾಪುಗಾಲು. ಆಗಸದಲ್ಲಿ ಚುಕ್ಕಿ, ಚಂದ್ರಮರು ಆಗೀಗ ಇಣುಕಿ ದಾರಿಯ ಜಾಡು ತೋರುತ್ತಿದ್ದರಾದರೂ ಹತ್ತಿಯುಂಡೆಯಂತೆ ತೇಲುತ್ತಿದ್ದ ಮೋಡಗಳು ಆ ಕ್ಷೀಣ ಬೆಳಕೂ ಭೂಮಿಗೆ ಬೀಳದಂತೆ ಅಡ್ಡಬರುತ್ತಿದ್ದವು. ಮಗುಚಿದ್ದ ಕತ್ತಲಿನ ಗಾಂಭೀರ್ಯವನ್ನು ಮತ್ತಷ್ಟು ಹೆಚ್ಚಿಸುವಂಥ ನೀರವ ಮೌನ.

‘ದೇಶಕ್ಕೆ ಕವಿದಿರುವ ದಾಸ್ಯದ ಕತ್ತಲು ಬೇಗ ದೂರಾಗಬೇಕು. ಸ್ವಾತಂತ್ರ್ಯದ ಸೂರ್ಯೋದಯವಾಗಬೇಕು’ ಮಾರ್ಗಶಿರ ಮಾಸದ ಮೈಕೊರೆಯುವ ಚಳಿಯಲ್ಲಿಯೂ ಕೈಲಿ ‘ಪೌರವಾಣಿ’ಯ ಕಲ್ಲಚ್ಚು (ಸೈಕ್ಲೋಸ್ಟೈಲ್) ಪ್ರತಿಗಳನ್ನು ಹಿಡಿದಿದ್ದ ಹುಡುಗನ ಎದೆಯಲ್ಲಿ ಹೋರಾಟದ ಅಗ್ಗಿಷ್ಟಿಕೆ ಪ್ರಜ್ವಲಿಸುತ್ತಿತ್ತು.

ಈ ಹುಡುಗನ ಆಗಮನದ ಸಂಕೇತಕ್ಕಾಗಿಯೇ ಕಾದಿರುವವರು ಸಾಕಷ್ಟು ಜನರಿದ್ದರು. ಅವರು ಮನೆಗಳಲ್ಲಿ ದೀಪಗಳನ್ನು ಆರಿಸಿ ಮಲಗಿದಂತೆ ನಟಿಸುತ್ತಿದ್ದರೂ, ಅವರ ಮೈಮನಸುಗಳು ಎಚ್ಚರತಪ್ಪಿರಲಿಲ್ಲ. ‘ಗಾಂಧಿ ಮಹಾತ್ಮರ ಮಾರ್ಗದಲ್ಲಿ ನಡೆಯಬೇಕು, ಹೋರಾಡಬೇಕು, ಸ್ವಾತಂತ್ರ್ಯ ಸಿಗಬೇಕು, ಪ್ರಜಾ ಸರ್ಕಾರ ಸ್ಥಾಪನೆಯಾಗಬೇಕು’ ಇದೇ ಅವರ ಕನಸು, ಕನವರಿಕೆ, ಧ್ಯಾನ. ಮನೆಗಳಲ್ಲಿದ್ದ ಅವರೆಲ್ಲರೂ ಯಾವುದೋ ಒಂದು ಸಂಕೇತಕ್ಕೆ ಕಾಯುತ್ತಿರುವಂತಿತ್ತು.

ಮಾಗಿ ಮಂಜಿನಲ್ಲಿ ಮಿಂದ ಹುಲ್ಲಿನ ಮೇಲೆ ನಡೆಯುವ ಕ್ಷೀಣ ಸದ್ದೂ ಸಹ ಆಲಿಸುವಷ್ಟು ಸೂಕ್ಷವಾಗಿದ್ದವು ಅವರ ಕಿವಿಗಳು. ಆವರಿಸಿದ ನಿಶ್ಯಬ್ದದಲ್ಲಿ ದೂರದಲ್ಲೆಲ್ಲೋ ಕೇಳಿಸುತ್ತಿದ್ದ ಹೆಜ್ಜೆ ಸದ್ದು ಮನೆಗೆ ಹತ್ತಿರವಾದಂತೆ ಆ ಯಜಮಾನರು ಎದ್ದು ಕಿಟಕಿಯ ರೆಕ್ಕೆ ಸರಿಸಿದರು. ಮನೆಯೊಳಗೆ ಏನೋ ಬಿದ್ದಂತೆ ಆಯ್ತು. ಮನೆಗೆ ಹತ್ತಿರಕ್ಕೆ ಬಂದಿದ್ದ ಹೆಜ್ಜೆಯ ಸದ್ದು ಮತ್ತೆ ದೂರವಾಯ್ತು. ಯಜಮಾನರು ಕಿಟಕಿಯ ಬಾಗಿಲು ಮುಚ್ಚಿ, ಬುಡ್ಡಿದೀಪ ಹೊತ್ತಿಸಿದರು. ಮನೆಯನ್ನು ಆವರಿಸಿಕೊಂಡ ಬೆಳಕಿನಲ್ಲಿ ನೆಲದ ಮೇಲೆ ಬಿದ್ದಿದ್ದ ಸೈಕ್ಲೋಸ್ಟೈಲ್ ಮುದ್ರಣದ ಹಾಳೆಯೊಂದು ಕಾಣಿಸಿತು. ಹಾಳೆಯನ್ನು ಕಣ್ಣಿಗೆ ಒತ್ತಿಕೊಂಡು ನಿಧನಿಧಾನವಾಗಿ ಬೆಳಕಿಗೆ ಹಿಡಿದು ಕಣ್ಣಾಡಿಸಿದರು. ಓದು ಮುಂದುವರಿದಂತೆ ಕಣ್ಣು ಮಂಜಾಯಿತು. ಕಣ್ಣೊರೆಸಿಕೊಂಡು ಎದೆ ಮೇಲೆ ಕೈಯಿಟ್ಟರು. ‘ಇನ್ನೆಷ್ಟು ದಿನ ಸಹಿಸಬೇಕು ಇವರ ಅಂಧ ದರ್ಬಾರು’ ಎಂದುಕೊಂಡು ನಿಟ್ಟುಸಿರುಬಿಟ್ಟರು. ನಿಧಾನವಾಗಿ ನಿದ್ದೆಗೆ ಜಾರಿದರು. ಅದೆಂಥ ಕನಸು, ದೇಶಕ್ಕೆ ಸ್ವಾತಂತ್ರ್ಯ ಬಂದಂತೆ, ದೊಡ್ಡಬಳ್ಳಾಪುರದ ತಾಲ್ಲೂಕು ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಾಡಿದಂತೆ, ಗಾಂಧಿ ಮಹಾತ್ಮರು ದೇಶದ ಅಧ್ಯಕ್ಷರಾದಂತೆ, ಆಹಾ ಕನಸೇ, ಸವಿಗನಸೇ!

ಇದನ್ನೂ ಓದಿ : Travelogue: ಶೆಲ್ಫಿಗೇರುವ ಮುನ್ನ; ‘ಹಲವು ನಾಡು ಹೆಜ್ಜೆ ಹಾಡು’ ಜಯಶ್ರೀ ದೇಶಪಾಂಡೆ ಪ್ರವಾಸ ಕಥನ ಸದ್ಯದಲ್ಲೇ

ದೊಡ್ಡಬಳ್ಳಾಪುರಕ್ಕೆ ಪೂರ್ವದಲ್ಲಿರುವ ನಾಗರಕೆರೆ ಕಡೆಯೇ ಬಾನು ಮೊದಲು ಕೆಂಪೇರುವುದು. ನಿಧನಿಧಾನವಾಗಿ ಊರಿನಲ್ಲಿ ಚಟುವಟಿಕೆ ಆರಂಭ. ಮನೆಗಳ ಕಸಗುಡಿಸುವ, ನೀರು ಚುಮುಕಿಸುವ, ನೀರು ತರಲು ಹೊರಡುವ ಸದ್ದು. ಕೆಲವರಂತೂ ರಾತ್ರಿ ಮನೆಗಳಿಗೆ ಬಂದಿದ್ದ ಸೈಕ್ಲೋಸ್ಟೈಲ್ ಹಾಳೆಗಳ ಹೂರಣದ ಬಗ್ಗೆಯೂ ಕೆಲವರು ಪಿಸುಮಾತಿನ ಚರ್ಚೆ ಆರಂಭಿಸಿದ್ದರು. ಆ ಹೆಣ್ಣುಮಕ್ಕಳ ಗಂಡನೋ, ಮಗನೋ, ಅಳಿಯನೋ ಹಾಳೆ ಓದಿ ಗದ್ಗದಿತರಾಗಿ ಆಡಿದ್ದ ಮಾತುಗಳನ್ನೇ ಇವರು ಬೀದಿಗೆ ತಂದಿದ್ದರು. ‘ವಿದುರಾಶ್ವತ್ಥದಲ್ಲಿ ನಮ್ಮವರಿಗೆ ಗುಂಡು ಹಾಕಿದರಂತೆ, ಕೊಂದೇಬಿಟ್ಟರಂತೆ, ಈ ಕೆಂಪುಮೂತಿ ಕೋತಿಗಳು ಇನ್ನೂ ಏನೇನು ಮಾಡ್ತಾವೋ, ಪಟೇಲರು ಯಾವಾಗ ನಮ್ಮನ್ನೆಲ್ಲಾ ಕಾಪಾಡ್ತಾರೋ, ರಾಮರಾಜ್ಯ ಎಂದುಬರುತ್ತೋ’ ಎಂದೆಲ್ಲಾ ಆ ಹೆಂಗಸರು ಮಾತಾಡಿಕೊಳ್ತಿದ್ದರು.

ಮಗ್ಗದ ಸದ್ದು ಶುರುವಾಗುವ ಮೊದಲು ತೂರಿಬಂದ ಈ ಮಾತುಗಳನ್ನು ಅರೆನಿದ್ರೆಯಲ್ಲಿ ಕೇಳಿಸಿಕೊಂಡ ಸತ್ಯಾಗ್ರಹಿಗಳು ಧಿಗ್ಗನೆದ್ದರು. ಅವರ ಚಟುವಟಿಕೆಗಳಿಗೆ ಸಮಯವೇ ದೊಡ್ಡಶತ್ರು-ದೊಡ್ಡಮಿತ್ರ. ಫಟಾಫಟ್ ನಿತ್ಯಕರ್ಮಗಳನ್ನು ಮುಗಿಸಿ ಗಾಂಧಿಮೈದಾನಕ್ಕೆ ಓಡಿದರು. ಸೂರ್ಯನ ಬೆಳಕು ಊರನ್ನು ಇನ್ನೂ ಸಂಪೂರ್ಣ ಬೆಳಗಿರಲಿಲ್ಲ. ಆದರೆ ಎದೆಯಲ್ಲಿ ಸದಾ ಉರಿಯುವ ಸ್ವಾತಂತ್ರ್ಯದ ಜ್ಯೋತಿಯನ್ನೇ ಹೊತ್ತಿಸಿಕೊಂಡಿದ್ದವರಿಗೆ ಅದೆರೆಡೆಗೆ ಲಕ್ಷ್ಯವೇ? ಅವರ ಕನಸು, ಕನವರಿಕೆ, ಘೋಷಣೆ, ಮಾತುಕತೆ ಎಲ್ಲವೂ ಸ್ವರಾಜ್ಯವೇ.

(ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : https://sahithyaacademy.karnataka.gov.in/ )

ಡಿ. ಎಂ. ಘನಶ್ಯಾಮ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಮೂಲ ಊರು. ವೃತ್ತಿಯಿಂದ ಪತ್ರಕರ್ತ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ಜಾಲತಾಣದ ಉದ್ಯೋಗಿ. ರಾಜಕಾರಣ, ಆರ್ಥಿಕ ವಿದ್ಯಮಾನ, ಜಿಯೊಪಾಲಿಟಿಕ್ಸ್, ಸಾಹಿತ್ಯ, ಸಂಸ್ಕೃತಿ, ಮಾಧ್ಯಮ ಜಗತ್ತು, ಫೋಟೊಗ್ರಫಿ, ಸಿನಿಮಾ ಆಸಕ್ತಿ ಕ್ಷೇತ್ರಗಳು. ‘ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ, ದೊಡ್ಡಬಳ್ಳಾಪುರ’ ಇದು ಮೊದಲ ಪ್ರಕಟಿತ ಕೃತಿ. ಪತ್ರಕರ್ತರ ಸಂಘವು 2019ರಲ್ಲಿ ಹಾಸ್ಯಲೇಖನಕ್ಕೆ ನೀಡಲಾಗುವ ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯ ಸ್ಮಾರಕ ಪ್ರಶಸ್ತಿಯನ್ನು ಇವರಿಗೆ ನೀಡಿದೆ.

ಇದನ್ನ ಓದಿ : New Book: ಶೆಲ್ಫಿಗೇರುವ ಮುನ್ನ; ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಅನುವಾದಿತ ಕೃತಿ ಇಂದಿನಿಂದ ಲಭ್ಯ

Published On - 12:32 pm, Sat, 12 March 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ