ವೈಶಾಲಿಯಾನ | Vaishaliyaana : ಎರಡು ಕೋಣೆಗಳ ನೀ ಮಾಡು ಮನದಾಲಯದಿ/ಹೊರಗೋಣೆಯಲಿ ನೀ ಲೋಕದಾಟಗಳನಾಡು/ವಿರಮಿಸು ನೀನೊಬ್ಬನೇ ಒಳಗೋಣೆಯಲಿ, ಧ್ಯಾನದಲಿ, ಮೌನದಲಿ/ವರಯೋಗಸೂತ್ರವಿದು ಮಂಕುತಿಮ್ಮ. ಡಿವಿಜಿಯವರ ಮಂಕುತಿಮ್ಮನ ಕಗ್ಗದಿಂದ ಆಯ್ದ ಈ ಅದ್ಭುತ ಸಾಲುಗಳನ್ನು ನನಗೆ ಜ್ಞಾಪಿಸಿದವರು ಪದ್ಮಭೂಷಣ ಪಂಡಿತ್ ಬಸವರಾಜಗುರು ಅವರ ಶಿಷ್ಯ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಮುದ್ದುಮೋಹನ್‌ರವರು. ಇತ್ತೀಚೆಗೆ ಭಾರತೀಯ ವಿದ್ಯಾಭವನದಲ್ಲಿ ಜರುಗಿದ ಮೂರು ದಿನಗಳ ಓಂಕಾರ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವದಲ್ಲಿ ಪಾಲ್ಗೊಂಡಿದ್ದ ಮುದ್ದುಮೋಹನ್, ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಕಿರುಭಾಷಣದಲ್ಲಿ ಮೇಲಿನ ಸಾಲುಗಳನ್ನು ಪ್ರಸ್ತಾಪಿಸಿದ್ದರು. ಈ ಅರ್ಥಪೂರ್ಣವಾದ ಸಾಲುಗಳು ನಮ್ಮ ಶಾಸ್ತ್ರೀಯ ಸಂಗೀತ ಕಲೆಯ ಉಪಾಸನೆಗೆ ಎಷ್ಟು ಸಮರ್ಪಕವಾಗಿ ಅನ್ವಯಿಸುತ್ತವೆಯಲ್ಲ ಎಂದು ವಿಸ್ಮಯದಿಂದ ತಲೆದೂಗುವ ಸರದಿ ನನ್ನದಾಗಿತ್ತು.
ಡಾ. ಕೆ.ಎಸ್. ವೈಶಾಲಿ (Dr. K.S. Vaishali)
‘ಮನೋಧರ್ಮ’ ಸಂಗೀತವೇ ಆದ ನಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಖ್ಯಾಲ್ ಸಂಗೀತ ನಿಜವಾಗಿಯೂ ನಮ್ಮ ಅಂತರಂಗದ ಪರಿಧಿಯನ್ನು ವಿಸ್ತರಿಸುವ, ನಮ್ಮೊಳಗಿನ ಅಂತರಿಕ್ಷಯಾನದಲ್ಲಿ ತೊಡಗುವ ಕ್ರಿಯೆಯೇ ಆಗಿದೆ. ರಾಗಗಳ ತಾಲೀಮು ನಡೆಸುವಾಗ ತನ್ನ ಮನದಾಲಯದ ಒಳಗೋಣೆಯಲ್ಲಿ ವಿರಮಿಸುತ್ತ, ತದೇಕಚಿತ್ತಳಾಗಿ ರಾಗವನ್ನು ಕುರಿತು ಧ್ಯಾನಿಸುವ ಕಲಾವಿದೆಗಂತೂ ಈ ಸಾಲುಗಳ ಅರಿವಾಗಿಯೇ ಇರುತ್ತದೆ. ಕೆಲವೊಮ್ಮೆ ಗಾಯನದಲ್ಲಿ ಆಳವಾಗಿ ತೊಡಗಿಕೊಂಡಾಗ ಅದೊಂದು ಗಹನವಾದ ಧ್ಯಾನಸ್ಥ ಸ್ಥಿತಿಯೇ ಆಗಿರುತ್ತದೆ ಎಂದು ನನಗನಿಸಿತು. ಮೂರು ದಿನಗಳ ಈ ಸುಂದರ ಸಂಗೀತೋತ್ಸವವನ್ನು ಆಯೋಜಿಸಿದ್ದವರು ಓಂಕಾರ್ ಮ್ಯೂಸಿಕ್ ಅಕಾಡೆಮಿಯ ಅಧ್ಯಕ್ಷರಾದ ಪಂಡಿತ್ ಇಮಾನ್ ದಾಸ್‌ರವರು.
ಸುಮಾರು ಏಳೆಂಟು ವರ್ಷಗಳ ಹಿಂದೆ ಕಲ್ಕತ್ತದಿಂದ ಬೆಂಗಳೂರಿಗೆ ಬಂದು ವೈಟ್ಫೀಲ್ಡ್ನಲ್ಲಿ ನೆಲೆಸಿ, ಐಟಿ/ಬಿಟಿ ಕಂಪನಿಗಳ ತಾಣದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಂಪನ್ನು ಬೀರುತ್ತ, ಅಪಾರ ಶ್ರದ್ಧೆ – ಆಸ್ಥೆಗಳಿಂದ ಅನೇಕ ಸಂಗೀತಾಸಕ್ತರಿಗೆ ಸಂಗೀತ ಪಾಠ ಹೇಳುತ್ತ, ಸುಮಾರು ಇನ್ನೂರು ಮಂದಿ ಶಿಷ್ಯರ ಪಡೆಯನ್ನೇ ಹೊಂದಿರುವ ಇಮಾನ್ ದಾಸ್‌ರವರು ಸಜ್ಜನಿಕೆಯೇ ಮೂರ್ತಿವೆತ್ತಂತಿರುವ, ವಿದ್ವತ್ತನ್ನೂ ಮೈಗೂಡಿಸಿಕೊಂಡ, ಪ್ರಬುದ್ಧ ಸಂಗೀತ ಕಲಾವಿದರು. ಪಾಟಿಯಾಲ ಘರಾನಾದ ಪ್ರವರ್ತಕರಾದ ಉಸ್ತಾದ್ ಬಡೇ ಗುಲಾಂ ಆಲೀ ಖಾನ್‌ರವರ ಶಿಷ್ಯರಾದ ಪಂಡಿತ್ ಕಲ್ಯಾಣ್ ಬಸು ಅವರ ಪ್ರಮುಖ ಶಿಷ್ಯರಾದ ಪಂಡಿತ್ ಇಮಾನ್ ದಾಸ್ ಜರ್ಮನಿ, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್, ದುಬೈ, ಬೆಲ್ಜಿಯಂ, ಇಟಲಿ, ಗ್ರೀಸ್, ಸ್ವಿಟ್ಜರ್‌ಲ್ಯಾಂಡ್, ಫ್ರಾನ್ಸ್ ಮೊದಲಾದ ದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿಯ ಫ್ಲಾಮೆಂಕೋ ನೃತ್ಯ ತಂಡ ‘ಕೊಂಜಾಲಿಯೊ’ ಗೆ ಸಂಗೀತ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ತಮ್ಮ ‘ಆನಂದ ಕರೊ’ ಮತ್ತು ‘ಜಬ ತಕ್ ರಹೇ ಸಾನ್ಸ್’ ಎಂಬ ಸಂಗೀತ ಪ್ರಯೋಗಗಳಿಂದ ದೇಣಿಗೆ ಸಂಗ್ರಹಿಸಿ , ಸಂತ್ರಸ್ತ ಮಕ್ಕಳಿಗೆ ನೀಡಿದ್ದಾರೆ.
ಇಮಾನ್ ದಾಸ್‌ರವರು ಚೆನ್ನೈನ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆಯರಾದ ವಯೊಲಿನ್ ವಾದಕಿಯರು ಹಾಗೂ ಸಹೋದರಿಯರಾದ ವಿದುಷಿ ಲಲಿತ ಮುತ್ತುಸ್ವಾಮಿ ಮತ್ತು ವಿದುಷಿ ನಂದಿನಿ ಮುತ್ತುಸ್ವಾಮಿಯವರೊಡಗೂಡಿ Re-imagining One Nation, One Music ಎಂಬ ಉತ್ತಮವಾದ ಪುಸ್ತಕವನ್ನು ಪದ್ಮಶ್ರೀ ಉತ್ಪಲ್ ಬ್ಯಾನರ್ಜಿಯವರ ‘ಉತ್ಪಲ್ ಸಂಪ ಕಲಾ ಕೇಂದ್ರ’ದ ವತಿಯಿಂದ ಹೊರತಂದಿದ್ದಾರೆ. ಸ್ವಾರಸ್ಯಕರವಾದ ನಿರೂಪಣೆಯಿಂದ ನಮ್ಮ ಗಮನ ಸೆಳೆಯುವ ಈ ಪುಸ್ತಕದಲ್ಲಿ ಶಾಸ್ತ್ರೀಯ ಸಂಗೀತದ ಕುರಿತಾದ ಅನೇಕ ಉಪಯುಕ್ತ ಮಾಹಿತಿಗಳಿವೆ. ಹಿಂದೂಸ್ತಾನಿ, ಕರ್ನಾಟಕಿ ಹಾಗೂ ಪಾಶ್ಚಿಮಾತ್ಯ ಸಂಗೀತಗಳನ್ನು ತುಲನಾತ್ಮಕವಾಗಿ ಅವಲೋಕಿಸಿ ಅವುಗಳ ಸಮಾನ ನೆಲೆಯನ್ನು ಗ್ರಹಿಸುವ ಶ್ಲಾಘನೀಯ ಪ್ರಯತ್ನವಿದೆ. ಪಾಶ್ಚಿಮಾತ್ಯ ಸಂಗೀತವನ್ನು ಅಭ್ಯಸಿಸಿರುವ ಈ ಲೇಖಕರು ಕೆಲವು ಪಾಶ್ಚಿಮಾತ್ಯ ಸಂಗೀತದ ಸ್ಕೇಲ್‌ಗಳು ಸೋಜಿಗವೆಂಬಂತೆ, ಭಾರತೀಯ ಶಾಸ್ತ್ರೀಯ ಸಂಗೀತದ ರಾಗಗಳ ಆರೋಹಣ- ಅವರೋಹಣಗಳನ್ನು ಹೋಲುತ್ತವೆ ಎಂಬ ನಿಟ್ಟನಲ್ಲಿ ಅಚ್ಚರಿಯೆನಿಸುವ ಕೆಲವು ಹೊಸ ಹೊಳಹುಗಳನ್ನು ನೀಡಿದ್ದಾರೆ.
ಉದಾಹರಣೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯ ರಾಗವಾದ ಮಾಯಾಮಾಳವಗೌಳ ಅಥವಾ ಹಿಂದೂಸ್ತಾನಿಯ ರಾಗ ಭೈರವ್‌ಗಳನ್ನು ಹೋಲುವ ಪಾಶ್ಚಿಮಾತ್ಯ ಸಂಗೀತದ ‘ಡಬಲ್ ಹಾರ್ಮೋನಿಕ್’ ಸ್ಕೇಲ್, ಯಮನ್ ಮತ್ತು ತತ್ಸಮಾನವಾದ ಕಲ್ಯಾಣಿ ರಾಗಗಳ ಲಕ್ಷಣಗಳನ್ನು ಹೊಂದಿರುವ ‘ಲಿಡಿಯನ್’ ಸ್ಕೇಲ್, ಕರ್ನಾಟಕಿಯ ಹರಿಕಾಂಭೋಜಿ, ಅದಕ್ಕೆ ಸಮಾನವಾದ ಹಿಂದೂಸ್ತಾನಿಯ ಖಮಾಜ್‌ಗಳನ್ನು ಹೋಲುವ ‘ಮಿಕ್ಸೋಲಿಡಿಯನ್’. ಹಿಂದೂಸ್ತಾನಿಯ ‘ಮಧುವಂತಿ’ ಅದಕ್ಕೆ ಸಮೀಪವಿರುವ ಕರ್ನಾಟಕಿಯ ರಾಗ ‘ಧರ್ಮಾವತಿ’ ಮತ್ತು ‘ಲಿಡಿಯನ್ ಡಿಮಿನಿಷ್ಡ್’ ಸ್ಕೇಲ್ ಮೊದಲಾದ ಅಧ್ಯಯನಗಳು Fusion ಪ್ರಯೋಗಗಳಲ್ಲಿ ಆಸಕ್ತಿಯಿರುವ ಕಲಾವಿದರಿಗೆ ಸಹಾಯಕಾರಿ. ಸಂಗೀತದಲ್ಲಿರುವ ವಿಶ್ವಾತ್ಮಕತೆಯನ್ನು, ಐಕಮತ್ಯವನ್ನು, ಅದರಲ್ಲಿ ಅಂತರ್ಗತವಾಗಿರುವ ‘ಬಹುತ್ವ’ವನ್ನೂ ನಿರ್ಲಕ್ಷಿಸದೇ, ಈ ಲೇಖಕರು ನಡೆಸುವ ಅನ್ವೇ಼ಷಣೆಗಳು ನಮ್ಮ ಮನಸೂರಗೊಳ್ಳುತ್ತವೆ. ಸಂಗೀತವೆನ್ನುವುದು ಸಾರ್ವತ್ರಿಕವಾಗಿರುವ ಕಲಾಮಾಧ್ಯಮ. ತಮಗೆ ಎಲ್ಲ ಸಂಗೀತ ಪ್ರಕಾರಗಳೂ ಒಂದೇ ಆಕಾಶದ ಅಡಿಯಲ್ಲಿಯೇ ಅರಳುತ್ತವೆಯೆಂಬುದರ ಬಗ್ಗೆ ಅಪಾರ ವಿಶ್ವಾಸವಿದೆಯೆನ್ನುವ ಲೇಖಕರು, ಭಾರತೀಯ ರಾಗ ಸಂಗೀತ ಪದ್ಧತಿಗಳಾದ ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಪ್ರದಾಯಗಳು, ಪ್ರಪಂಚದ ಯಾವ ಸಂಗೀತ ಪ್ರಕಾರದೊಂದಿಗೂ ಕೂಡ ಸಹಭಾಗಿಯಾಗಬಹುದೆಂಬ ಅಭಿಪ್ರಾಯವನ್ನು ಮಂಡಿಸುತ್ತಾರೆ.
ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಏಳು ಸ್ವರಗಳ ಸಮುಚ್ಚಯವಾದ ‘ಸಪ್ತಕ’ದ ಕಲ್ಪನೆಯಿದ್ದಂತೆ ಪಾಶ್ಚಿಮಾತ್ಯ ಸಂಗೀತದಲ್ಲಿ Major, Minor ಹಾಗೂ Augmented ಸ್ವರಗಳಿಂದ ಕೂಡಿದ 12 ಸ್ವರ ಸಮುಚ್ಚಯಗಳ ಪರಿಕಲ್ಪನೆಯಿದೆ. ಆದರೆ ನಮ್ಮ ಸಂಗೀತದಲ್ಲೂ ಶುದ್ಧ, ತೀವ್ರ ಹಾಗೂ ಕೋಮಲ ಸ್ವರಗಳಿರುವುದರಿಂದ , ಕರ್ನಾಟಕಿ ಶಾಸ್ತ್ರೀಯ ಸಂಗೀತದ 72 ಮೇಳಕರ್ತಗಳು ಹಾಗೂ ಹಿಂದೂಸ್ತಾನಿಯ ಹತ್ತು ಥಾಟ್‌ಗಳ ಚೌಕಟ್ಟಿನಲ್ಲಿ, ಪ್ರಪಂಚದ ಯಾವ ಸಂಗೀತ ಪ್ರಕಾರವನ್ನಾದರೂ ಗುರುತಿಸಿಕೊಳ್ಳಬಹುದೆಂದು ಲೇಖಕರು ವಾದಿಸುತ್ತಾರೆ. ಸಂಗೀತದ ಸಪ್ತಕದಲ್ಲಿರುವ ಒಂದೊಂದು ಸ್ವರಕ್ಕೂ ಒಬ್ಬೊಬ್ಬ ಅಧಿದೇವತೆಯನ್ನು ಹೆಸರಿಸುವ ಲೇಖಕರು ಷಡ್ಜಕ್ಕೆ ಗಣೇಶ, ರಿಷಭಕ್ಕೆ ಅಗ್ನಿ, ಗಾಂಧಾರಕ್ಕೆ ರುದ್ರ, ಮಧ್ಯಮಕ್ಕೆ ವಿಷ್ಣು, ಪಂಚಮಕ್ಕೆ ನಾರದ, ಧೈವತಕ್ಕೆ ಸದಾಶಿವ ಹಾಗೂ ನಿಷಾದ ಸ್ವರಗಳಿಗೆ ಸೂರ್ಯನನ್ನು ಹೆಸರಿಸುತ್ತಾರೆ. ಭಾರತೀಯ ಸಂಗೀತದ ಪ್ರತಿಯೊಂದು ಸ್ವರದ ಶ್ರುತಿಯನ್ನೂ ಒಂದು ಪ್ರಾಣಿ ಅಥವಾ ಹಕ್ಕಿಯ ಧ್ವನಿಯ ಮಾದರಿಯ ಮೇಲೆ ಮಾಡಲಾಗಿದೆ ಎನ್ನುವ ಲೇಖಕರು ಷಡ್ಜ-ನವಿಲು, ರಿಷಭ – ಸ್ಕೈಲಾರ್ಕ್, ಗಾಂಧಾರ –ಮೇಕೆ, ಮಧ್ಯಮ- ಪಾರಿವಾಳ, ಪಂಚಮ – ಕೋಗಿಲೆ, ಧೈವತ –ಕುದುರೆ , ನಿಷಾದ-ಆನೆ ಎನ್ನುವ ವರ್ಗೀಕರಣವನ್ನು ಪರಿಚಯಿಸುತ್ತಾರೆ.
ಕರ್ನಾಟಕಿ- ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜುಗಲಬಂದಿಯ ವ್ಯಾಖ್ಯಾನ ಕೂಡ ಸುಲಲಿತವಾಗಿ ಓದಿಸಿಕೊಳ್ಳುತ್ತದೆ. ಹಿಂದೂಸ್ತಾನಿ ಸಂಗೀತದಲ್ಲಿ ‘ಮೀಂಡ್’ನ ಬಳಕೆ, ಲಯಕಾರಿಯ ಬಳಿಕ ಸರ್‌ಗಮ್‌ಗಳ ಮೂಲಕ ‘ರಾಗ ವಿಸ್ತಾರ್’ ಅಥವಾ ‘ಬಢತ್’, ತಬಲಾ ಮತ್ತು ಮೃದಂಗ ಕಲಾವಿದರೊಂದಿಗೆ ನಡೆಸುವ ಸವಾಲ್-ಜವಾಬ್, ಕಾರ್ಯಕ್ರಮವನ್ನು ಅಂತಿಮ ಘಟ್ಟಕ್ಕೆ ಕೊಂಡೊಯ್ಯುವ ರೋಚಕವಾದ ‘ತಿಹಾಯ್’ಗಳ ಬಳಕೆ ಮೊದಲಾದ ಅಂಶಗಳನ್ನು Flash drive, bar code ನ ಮುಖಾಂತರ ಆಲಿಸಿ ಕಲಿಯುವ ಸೌಕರ್ಯವೂ ಲಭ್ಯವಿದ್ದು ಇದು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ. ಅನೇಕ ಸ್ವಾರಸ್ಯಕರ ಐತಿಹ್ಯಗಳು, ದೃಷ್ಟಾಂತಗಳು, ಕಥೆಗಳೂ ಕೂಡ ನಮ್ಮ ಮನಸೆಳೆಯುತ್ತವೆ. ವಿದುಷಿ ಲಲಿತ ಮತ್ತು ನಂದಿನಿಯವರು ತಮ್ಮ ಚಿಕ್ಕಪ್ಪ ಹಾಗೂ ಗುರುಗಳಾದ ವಯೊಲಿನ್ ವಿದ್ವಾನ್ ಶ್ರೀ ಎಲ್ . ವೈದ್ಯನಾಥನ್‌ರವರಿಗೆ ಆದ ಅನುಭವವನ್ನು ಮನೋಜ್ಞವಾಗಿ ದಾಖಲಿಸಿದ್ದಾರೆ.
ರಾಗ ಅಹೀರಿಯನ್ನು ಹಾಡಿದರೆ ಆ ದಿನ ಉಪವಾಸವಿರಬೇಕಾಗುತ್ತದೆ ಎಂಬ ನಂಬಿಕೆಯನ್ನು ಪರೀಕ್ಷಿಸಲು ವೈದ್ಯನಾಥನ್ ಹಾಗು ಅವರ ಸ್ನೇಹಿತ ಗಾಯಕ ತಂಜಾವೂರು ಶ್ರೀ ಎಸ್. ಕಲ್ಯಾಣರಾಮನ್ ಒಂದು ಕಛೇರಿಯಲ್ಲಿ ರಾಗ ಅಹೀರಿಯನ್ನು ವಿದ್ವತ್ಪೂರ್ಣವಾಗಿ ಮಂಡಿಸಿಯೇ ಬಿಟ್ಟರು. ಮನೆಯಲ್ಲಿ ಅಡುಗೆಯವನು ತಯಾರಿಸಿದ ಅಡುಗೆ ಸಿದ್ಧವಾಗಿತ್ತು. ಆದರೆ ಅಕಸ್ಮಾತ್ ಅಡುಗೆಯವನು ಮನೆಗೆ ಬೀಗ ಹಾಕಿ, ಬೀಗದ ಕೈಯನ್ನು ತೆಗೆದುಕೊಂಡು ಹೋಗಿದ್ದರಿಂದ, ಅವರಿಬ್ಬರೂ ಹಸಿದುಕೊಂಡು ರಾತ್ರಿಯಿಡೀ ಜಗುಲಿಯಲ್ಲೇ ಕಳೆದರಂತೆ! ರಾಗ ನಾಗವರಾಳಿ ಮತ್ತು ಪುನ್ನಗಕೋಟಿಗಳು ಸರ್ಪಗಳನ್ನು ಆಕರ್ಷಿಸುತ್ತವೆಯೆಂಬ ನಂಬಿಕೆ ಪ್ರಚಲಿತವಿದ್ದು, ಅದನ್ನು ಪರೀಕ್ಷಿಸುವ ಸಲುವಾಗಿ ಮೈಸೂರಿನ ರಾಜಕುಮಾರರೊಬ್ಬರು, ರಾಜದರ್ಬಾರಿನ ಸಂಗೀತಗಾರರೊಂದಿಗೆ, ಅನೇಕ ವಿಷಪೂರಿತ ಸರ್ಪಗಳ ತಾಣವಾಗಿದ್ದ ಸಮೀಪದ ಗುಡ್ಡಗಾಡಿನ ಪ್ರದೇಶವೊಂದಕ್ಕೆ ಹೋದರಂತೆ. ಸಂಗೀತಗಾರರು ತಮ್ಮ ವಾದ್ಯಗಳಲ್ಲಿ ಆ ರಾಗಗಳನ್ನು ಮಧುರವಾಗಿ ನುಡಿಸಲು ಪ್ರಾರಂಭಿಸಿದ ಸ್ವಲ್ಪ ಸಮಯದಲ್ಲಿಯೇ ಎಲ್ಲ ಕಡೆಗಳಿಂದಲೂ ಸರ್ಪಗಳು ಬಂದು, ಅವರೀರ್ವರ ಸುತ್ತ ವರ್ತುಲಾಕಾರದಲ್ಲಿ ಹೆಡೆಯಾಡಿಸುತ್ತ ನಿಂತ ದೃಶ್ಯವನ್ನು ನೋಡಿ ಎಲ್ಲರೂ ಕಂಗಾಲಾದರಂತೆ! ನುಡಿಸುವುದನ್ನು ನಿಲ್ಲಿಸಿದ ಕೂಡಲೆ, ಸರ್ಪಗಳು ತಮ್ಮ ಪಾಡಿಗೆ ತಾವು ಯಾವ ಉಪದ್ರವ ನೀಡದೆ ನಿರ್ಗಮಿಸಿದವಂತೆ!
ರಾಗ, ಪಲ್ಲವಿಗಳ ಗಾಯನದಲ್ಲಿ ಅಪಾರ ಪ್ರೌಢಿಮೆ, ಹಿರಿಮೆ ಸಾಧಿಸಿದ್ದ ಕಲಾವಿದರು ಹೇಗೆ ಆ ರಾಗಗಳೊಂದಿಗೇ ಗುರುತಿಸಲ್ಪಡುತ್ತಿದ್ದರು ಎಂದು ತೋಡಿ ಸೀತಾರಾಮಯ್ಯ, ಶಂಕರಾಭರಣಂ ನರಸಯ್ಯ , ಅಢಾಣ ಅಪ್ಪಯ್ಯ, ಪಲ್ಲವಿ ಗೋಪಾಲಯ್ಯ, ಪಲ್ಲವಿ ದೊರೈಸ್ವಾಮಿ ಅಯ್ಯರ್ – ಮೊದಲಾದವರ ನಿದರ್ಶನಗಳನ್ನು ನೀಡುತ್ತಾರೆ. ಸರಾಭೋಜಿ ಮಹಾರಾಜರ ಆಸ್ಥಾನದಲ್ಲಿದ್ದ ತೋಡಿ ಸೀತಾರಾಮಯ್ಯನವರು, ಒಮ್ಮೆ ಎಂಟೂ ದಿನಗಳೂ ಅಹರ್ನಿಶಿ ಈ ರಾಗವನ್ನು ಹಾಡಿ ಬಿರುದು ಸಂಪಾದನೆ ಮಾಡಿದ್ದರಂತೆ! ಬಡತನದಲ್ಲಿದ್ದ ಸೀತಾರಾಮಯ್ಯನವರು, ತೋಡಿ ರಾಗವನ್ನೇ ಒತ್ತೆಯಿಟ್ಟು ಸಾಲ ಪಡೆದರಂತೆ. ಆದರೆ ಹಣ ವಾಪಾಸಾಗುವವರೆಗೆ ತೋಡಿ ರಾಗವನ್ನು ಹಾಡಲಾಗದ ಅವರ ಅಸಹಾಯಕತೆ, ಸಂಕಟ, ಮಹಾರಾಜರಿಗೆ ಗೊತ್ತಾಗಿ ಅವರೇ ಸಾಲ ತೀರಿಸಿದ ಪ್ರಸಂಗ ಮನ ಕಲಕುವಂತಿದೆ.
ತಮ್ಮ ಗುರುಗಳ ಗುರುಗಳಾದ ಮೇರು ಗಾಯಕ, ಪಟಿಯಾಲ ಘರಾನೆಯ ಪ್ರವರ್ತಕರಾದ ಉಸ್ತಾದ ಬಡೇ ಗುಲಾಮ್ ಅಲೀಖಾನ್‌ರವರು ಪ್ರಾತಃಕಾಲದ ರಾಗ ಭೈರವದಲ್ಲಿ ಬರುವ ‘ಅತಿ ಕೋಮಲ ರಿಷಭ’ದ ಚಲನೆಯನ್ನು ಶಿವ ತನ್ನ ಮೂರನೆ ಕಣ್ಣು ತೆರೆದಂತೆ ಎಂದು ವಿವರಿಸುತ್ತಿದ್ದರೆಂದು ಇಮಾನ್ ದಾಸ್ ಹೇಳುತ್ತಾರೆ. ಇದೇ ರಾಗದಲ್ಲಿರುವ ‘ಅತಿ ಕೋಮಲ ಧೈವತ’ ಸರ‍್ಯೋದಯದ ಸಂಕೇತವೆಂಬ ನಂಬಿಕೆಯೂ ಇದೆ. ರಾಗ ಮಾರ್ವಾದ ಲಕ್ಷಣಗಳನ್ನು ವಿವರಿಸುವಾಗ ಉಸ್ತಾದ್ ಬಢೆ ಗುಲಾಮ್ ಆಲೀ ಖಾನ್ ಸಾಬ್ ‘ಧೈವತ್ ಜೈಸೆ ಮಾ ದುರ್ಗಾ ಕಿ ಧಾಲ್’ ಎನ್ನುತ್ತಿದ್ದರಂತೆ! ಮುಸ್ಲಿಮ್ ಗಾಯಕರು ‘ಹರಿ ಓಂ ತತ್ಸತ್’ , ‘ದೇವ್ ಮಹೇಶ್ವರ ಮಹಾದೇವ್’ ಎಂದು ಹಾಡಿದರೆ, ಹಿಂದೂ ಪಂಡಿತರು ‘ಅಲ್ಲಾ ಜಾನೆ ಮೌಲಾ ಜಾನೆ’, ‘ಅಲ್ಲಾ ಪರವರದಿಗಾರ್’ ಎಂದು ಪರವಶರಾಗಿ ಶತಮಾನಗಳಿಂದ ಹಾಡುತ್ತ ಬಂದಿರುವ ಸಂಪ್ರದಾಯ ನಮ್ಮದೆಂದು ಇಮಾನ್ ದಾಸ್ ಹೆಮ್ಮೆಯಿಂದ ಬರೆಯುತ್ತಾರೆ . ಹಿಂದೂಸ್ತಾನಿ ಪದ್ಧತಿಯಲ್ಲಿ ಪ್ರಚಲಿತವಿರುವ ಪ್ರಹರಗಳನ್ನು ಅನುಸರಿಸಿ ಹಾಡುವ ಸಂಪ್ರದಾಯದ ಬಗ್ಗೆಯೂ ಉಲ್ಲೇಖಿಸುತ್ತ, ಎಂಟು ಪ್ರಹರಗಳಲ್ಲಿ ಬರುವ ರಾಗಗಳ ಬಗ್ಗೆ ಒದಗಿಸಿರುವ ಸುದೀರ್ಘ ಪಟ್ಟಿ, ಸಂಗೀತ ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಮಾಹಿತಿಯಾಗಿದೆ.
ಪ್ರಾಸ್ತಾವಿಕ ನುಡಿಯಲ್ಲಿ ಪ್ರಕಾಶಕರಾದ ಉತ್ಪಲ್ ಬ್ಯಾನರ್ಜಿಯವರು ಹೇಳುವಂತೆ ಭಾರತದಲ್ಲಿ ಶತಮಾನಗಳಿಂದ ಬಹುಸಂಸ್ಕೃತಿಯ ತಳಹದಿಯೇ ನೆಲೆನಿಂತಿದೆ . ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರಗಳಲ್ಲಿ, ರಾಗಗಳ ಕಲ್ಪನೆ, ರಾಗ ವಿಸ್ತಾರ, ರಾಗದ ಆರೋಹಣ- ಅವರೋಹಣದ ಮುಖಾಂತರ ರಾಗದ ಪರಿಚಯ, ಔಢವ, ಷಾಢವ, ಸಂಪೂರ್ಣ ರಾಗಗಳ ವರ್ಗೀಕರಣ, ತಾಳಗಳ ಕಲ್ಪನೆ ಮೊದಲಾದ ಅಂಶಗಳಲ್ಲಿ ಬಹಳ ಸಾಮ್ಯತೆಗಳಿದ್ದು, ಒಂದೇ ರಾಷ್ಟ್ರ, ಒಂದೇ ಸಂಗೀತದ ಕಲ್ಪನೆ ಅವಾಸ್ತವಿಕವಾದದ್ದೇನಲ್ಲ ಎನ್ನುವ ಅಭಿಪ್ರಾಯವನ್ನು ಮೂರೂ ಲೇಖಕರೂ ಸಮರ್ಥವಾಗಿ, ಪರಿಣಾಮಕಾರಿಯಾಗಿ ಧ್ವನಿಸುತ್ತಾರೆ.
ಓಂಕಾರ್ ಸಂಗೀತೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಚೇತನರಿಗಾಗಿ ಡಾ. ಮಹಾಂತೇಶ್‌ರವರು ನಡೆಸುತ್ತಿರುವ ‘ಸಮರ್ಥನಂ’ ಸಂಸ್ಥೆಯ ಕಲಾವಿದರ ತಂಡ ‘ಸುನಾದ’ದವರು ಇಮಾನ್ ದಾಸ್‌ರವರ ‘ಆನಂದ ಕರೋ’ಮತ್ತು ‘ಪರಮ ಈಶ್ವರ್’ ಎಂಬ ಎರಡು ರಚನೆಗಳನ್ನು ಭೂಪಾಲಿ ಹಾಗೂ ಪರಮೇಶ್ವರಿ ರಾಗಗಳಲ್ಲಿ ಸುಶ್ರಾವ್ಯವಾಗಿ ಮಂಡಿಸಿದರು. ಗಾಯಕಿ ದಿವ್ಯ, ಗಾಯಕ ಬಾಲ ಹಾಗೂ ವಾದ್ಯವೃಂದದವರು ಕೂಡ ವಿಶೇಷ ಚೇತನರೇ ಆಗಿದ್ದು ಅವರೆಲ್ಲರಿಗೂ ತುಂಬಾ ಕಾಳಜಿಯಿಂದ ತರಬೇತಿ ನೀಡಿದ್ದ ಇಮಾನ್ ದಾಸ್‌ರವರ ಶಿಷ್ಯ ವಾತ್ಸಲ್ಯ ಕೂಡ ಹೃದಯ ಸ್ಪರ್ಶಿಯಾಗಿತ್ತು. ಸಂಗೀತೋತ್ಸವದ ಗೋಷ್ಠಿಯಲ್ಲಿ ಶುದ್ಧ ಪಟಿಯಾಲಾ ಘರಾನೆಯ ಗಾಯನ ಪ್ರಸ್ತುತಿಯನ್ನು ಪ್ರಶಂಸನೀಯವಾಗಿ ನಿರ್ವಹಿಸಿದ ಇಮಾನ್ ದಾಸ್‌ರವರು ತಮ್ಮ ಪುಸ್ತಕದ ಘೋಷ ವಾಕ್ಯ ‘One Nation, One Music’ ಅನ್ನು ಅನುಸರಿಸಿ, ಗಾಯಕಿ ಎಮ್.ಡಿ. ಪಲ್ಲವಿಯವರೊಂದಿಗೆ ‘ಆನಂದ ಗೀತೆ’ ಎಂಬ ವಿಶಿಷ್ಟ ಗಾಯನ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು. ರಾಗ ಖಮಾಜ್‌ನಲ್ಲಿ ಪಲ್ಲವಿಯವರು ಕವಿ ವೆಂಕಟೇಶಮೂರ್ತಿಯವರು ಸುಂದರವಾಗಿ ಅನುವಾದಿಸಿರುವ ಸೂರದಾಸರ ಮೂಲ ರಚನೆ ‘ಮೈಯ್ಯಾ ಮೋರಿ ಮೈ ನಹಿ ಮಾಖನ ಖಾಯೋ’ ನ ಕನ್ನಡದ ಆವತರಣಿಕೆ ‘ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಅನ್ನು ಪಲ್ಲವಿ ಹಾಡಿದರೆ, ಇಮಾನ್ ದಾಸ್‌ರವರು ಅದೇ ರಾಗದಲ್ಲಿ ‘ಜಾವೋ ಖದರ್ ನಹೀ ಬೊಲೊ’ ಎಂಬ ಠುಮ್ರಿಯನ್ನು ಭಾವಪೂರ್ಣವಾಗಿ ಮಂಡಿಸಿದರು. ಲಕ್ಷ್ಮೀ ನಾರಾಯಣ ಭಟ್ಟರ ಕವನ ‘ಎಲ್ಲಿ ಜಾರಿತೋ ಮನವೂ’ ಗೆ ಇಮಾನ್ ದಾಸ್‌ರವರ ಬಂಗಾಳಿ ಗೀತೆ ‘ಕೀ ಕೋಖೋಂ ಬೋಲೆ ಬನ್ಸಿ’ ಯಲ್ಲಿ ಮಾರ್ದನಿ ಮೊಳಗಿತು.
ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಗೋಷ್ಠಿಗಳು, ತಬಲಾ ಸೋಲೋ ವಾದನ, ಪುಸ್ತಕ ಬಿಡುಗಡೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ, ಲೇಖಕಿಯರೂ ಆದ ವಿದುಷಿ ಲಲಿತ ಮತ್ತು ವಿದುಷಿ ನಂದಿನಿಯವರ ಅಮೋಘ ವಯೊಲಿನ್ ವಾದನ, ಗಜಲ್ ಗೋಷ್ಠಿ, ಮುಕ್ತಾಯದ ಗೋಷ್ಠಿಯಲ್ಲಿ ಮೇರು ಗಾಯಕ ಪಂಡಿತ್ ಜಯತೀರ್ಥ್ ಮೇವುಂಡಿಯವರ ವಿದ್ಪತ್ಪೂರ್ಣ ಗಾಯನ – ಹೀಗೆ ವೈವಿಧ್ಯಮಯವಾದ ಸಂಗೀತೋತ್ಸವದ ಮೂಲಕ ನಮ್ಮ ಭಾರತೀಯ ಸಂಗೀತ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಹೃದಯ ವೈಶಾಲ್ಯತೆ, ಬಹುತ್ವದ ಗರ್ಭದಲ್ಲಿಯೂ ಅನುರಣಿಸುವ ಐಕಮತ್ಯದ ಶ್ರುತಿಯನ್ನು, ಅಂತಃಕರಣದಿಂದ ಗ್ರಹಿಸುವ ಪ್ರಯತ್ನ ಮಾಡುತ್ತ, ಅದರಲ್ಲಿಯೇ ತಾದಾತ್ಮ್ಯದಿಂದ ತೊಡಗಿಕೊಂಡಿರುವ ಪಂಡಿತ್ ಇಮಾನ್ ದಾಸ್‌ರವರಿಗೆ ಹಾರ್ದಿಕ ಅಭಿನಂದನೆಗಳು.
(ಇಲ್ಲಿಗೆ ಈ ಅಂಕಣ ಮುಕ್ತಾಯವಾಯಿತು)
ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಕ್ಲಿಕ್ ಮಾಡಿ
Published On - 2:38 pm, Sat, 17 September 22