ನಟ ರಮೇಶ್ ಅರವಿಂದ್ (Ramesh Aravind) ಅವರ ಪ್ರತಿಭೆ ಬಹುಮುಖವಾದದ್ದು. ಸಿನಿಮಾ ಕಲಾವಿದನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ, ಮೋಟಿವೇಷನಲ್ ಸ್ಪೀಕರ್ ಆಗಿ ಅವರು ಗುರುತಿಸಿಕೊಂಡಿದ್ದಾರೆ. ನೂರಾರು ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದಾರೆ. ಹಲವು ಟಿವಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹೆಗ್ಗಳಿಕೆ ಅವರಿಗೆ ಇದೆ. ಅಷ್ಟೇ ಅಲ್ಲದೇ ಅವರೊಬ್ಬ ಅತ್ಯುತ್ತಮ ಲೇಖಕ ಕೂಡ ಹೌದು. ಅವರು ಬರೆದಿರುವ ‘ಪ್ರೀತಿಯಿಂದ ರಮೇಶ್.. ಯಶಸ್ಸಿನ ಸರಳ ಸೂತ್ರಗಳು’ ಕೃತಿಯನ್ನು ಇಂದು (ಸೆ.11) ಬಿಡುಗಡೆ ಮಾಡಲಾಗಿದೆ. ಹಿರಿಯ ನಟ ಅನಂತ್ ನಾಗ್ (Ananth Nag) ಅವರು ಈ ಪುಸ್ತಕದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಸಾವಣ್ಣ ಪ್ರಕಾಶನದ ಮೂಲಕ ಈ ಪುಸ್ತಕ ಪ್ರಕಟ ಆಗಿದೆ. ಬೆಂಗಳೂರಿನ ಬಿ. ಪಿ. ವಾಡಿಯಾ ಸಭಾಂಗಣದಲ್ಲಿ ಜರುಗಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗಿ ಆಗಿದ್ದರು.
‘ಬಾಲ್ಯದಲ್ಲಿ ನಮಗೆ 30-40 ಪುಟಗಳ ಸಣ್ಣ ಸಣ್ಣ ಕೈಪಿಡಿಗಳು ಸಿಗುತ್ತಿದ್ದವು. ಮನೆಗೆ ನೆಂಟರು ಬರುವಾಗ ಸ್ವಾಮಿ ವಿವೇಕಾನಂದ, ಪರಮಹಂಸರ ಕುರಿತ ಕೈಪಿಡಿಗಳನ್ನು ತರುತ್ತಿದ್ದರು. ಆ ಕೈಪಿಡಿಗಳಿಂದ ನಮಗೆ ಧಾರ್ಮಿಕ, ದೇವರ ಬಗ್ಗೆ ಮಾರ್ಗದರ್ಶನ ಸಿಗುತ್ತಿತ್ತು. ರಮೇಶ್ ಅರವಿಂದ್ ಬರೆದಿರುವ ಈ ಕೃತಿ ಕೂಡ ಹೆಚ್ಚು-ಕಡಿಮೆ ಅದೇ ಮಾದರಿಯಲ್ಲಿ ಇದೆ. ನೈತಿಕತೆಯ ಬಗ್ಗೆ ಉಪಯುಕ್ತ ತಿಳುವಳಿಕೆ ನೀಡುವ ಈ ಪುಸ್ತಕವನ್ನು ಬರೆಯುವ ಮೂಲಕ ರಮೇಶ್ ಅವರು ಈ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ’ ಎಂಬುದು ಅನಂತ್ ನಾಗ್ ಮಾತುಗಳು.
‘ರಮೇಶ್ ಅರವಿಂದ್ ಅವರದ್ದು ಸಕಾರಾತ್ಮಕ ದೃಷ್ಟಿಕೋನ. ಸದಾ ಅಧ್ಯಯನಶೀಲತೆ, ಹುಡುಕಾಟ, ಹೊಸತನದ ವ್ಯಕ್ತಿತ್ವವನ್ನು ಅವರು ಹೊಂದಿದ್ದಾರೆ. ಅವರಲ್ಲಿನ ಈ ಗುಣಗಳು ಈ ಕೃತಿಯಲ್ಲಿ ಬಿಂಬಿತವಾಗಿದೆ’ ಎಂದಿದ್ದಾರೆ ಲೇಖಕ, ಪತ್ರಕರ್ತ ಜೋಗಿ. ಜೀ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ರಾಘವೇಂದ್ರ ಹುಣಸೂರು, ಜಮೀಲ್ ಸಾವಣ್ಣ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ತಮ್ಮ ಬರವಣಿಗೆ ಬಗ್ಗೆ ರಮೇಶ್ ಅರವಿಂದ್ ಮಾತನಾಡಿದ್ದಾರೆ. ‘ಘಟನೆ, ಸನ್ನಿವೇಶಗಳನ್ನು ನೋಡಿದಾಗ ಅದನ್ನು ತನ್ನ ಹತ್ತಿರದವರ ಜೊತೆ ತಕ್ಷಣವೇ ಹೇಳಿಕೊಳ್ಳಬೇಕು ಎಂದು ಅನಿಸುವುದು ಮಾನವನ ಸಹಜ ಗುಣ. ಮಾತು ಕರಗತವಾಗಿರದಿದ್ದ ಕಾಲಘಟ್ಟದಲ್ಲಿಯೂ ಸಂಜ್ಞೆಗಳ ಮೂಲಕ ತನ್ನವರಿಗೆ ಮಾಹಿತಿಯನ್ನು ಮನುಷ್ಯ ತಿಳಿಸುತ್ತಿದ್ದ. ನಡೆದ ಘಟನೆಯಲ್ಲಿ ತನ್ನ ಪಾತ್ರವಿರದಿದ್ದರೂ ಹೇಳುವ ಸಂದರ್ಭದಲ್ಲಿ ತನ್ನನ್ನು ಸೇರಿಸಿಕೊಂಡು ವಿವರಿಸುತ್ತಿದ್ದ. ಇಂತಹ ಮಾನವ ಸಹಜ ಗುಣದ ಮುಂದುವರಿದ ಭಾಗವೇ ಬರವಣಿಗೆ. ನಾನು ನನ್ನ ಜೀವನದ ಅನುಭವಗಳನ್ನು ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿಯಲ್ಲಿ ಬರೆಯಲು ಯತ್ನಿಸಿದ್ದೇನೆ’ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:25 pm, Sun, 11 September 22