ಸ್ವಭಾವ ಪ್ರಭಾವ : ನಾವದೆಷ್ಟೇ ಎದೆಸೆಟೆಸಿ ನಿಂತು ಆರ್ಭಟಿಸಿದರೂ ವಾಸ್ತವದಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಪರಸ್ಪರ ಅವಲಂಬಿತರು ಎನ್ನುವುದು ಕಟುಸತ್ಯ. ಅಭಿವೃದ್ಧಿ-ತಂತ್ರಜ್ಞಾನ ಈ ಅವಲಂಬನೆಯಿಂದ ಮುಕ್ತಗೊಳಿಸುತ್ತಿದೆ ಎಂದೆನ್ನಿಸಿದರೂ ಅದರ ಪರಿಣಾಮಗಳನ್ನು ನಾವು ಸುಲಭಕ್ಕೆ ಒಪ್ಪಿಕೊಳ್ಳಲಾರೆವು. ಏಕೆಂದರೆ ನಾಗರಿಕ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳುವ ಕನಸು ಗುರಿಗಳಿಗೆ ತಕ್ಕಂಥ ವೇಗ ನಮಗೆ ಮುಖ್ಯ. ಮೈಮನಸ್ಸನ್ನು ಬೆಸೆದಿರುವ ಬಹುಸಂಸ್ಕೃತಿಯ ಸ್ವೀಕಾರ, ಸಹಕಾರ ಮತ್ತದರ ನಿಧಾನಲಯದ ಅರಿವಿನ ಸೊಬಗು, ಅಂತಃಕರಣದ ತೇವ, ಪ್ರಜ್ಞೆಯ ಆಳ ನಮಗಿಂದು ಬೇಡ. ಹಾಗಾಗಿ ನಮ್ಮ ಬೇರುಗಳಿಗೆ ಕತ್ತರಿ ಬೀಳುವಾಗ ಜಾಣಕುರುಡರಾಗಿರುತ್ತೇವೆ. ಸ್ವಯಂಶೋಧನೆಗೆ ಒಳಪಡುವ ಏಕಾಂತ, ಅಧ್ಯಯನಶೀಲತೆ ನಮಗೆ ಭಯ ತರಿಸುತ್ತದೆ, ಒಂಟಿತನ ಒಡ್ಡುತ್ತದೆ. ಅದಕ್ಕೇ ಸದಾ ಗೌಜಿ, ಗದ್ದಲ, ವಿವಾದದೊಂದಿಗೆ ಗುಂಪು ಕಟ್ಟಿಕೊಳ್ಳುತ್ತ ಹುಸಿ ಶಕ್ತಿಶಾಲಿತನ ಮೆರೆಯುವುದೇ ನಮಗಿಷ್ಟ!; ಈ ಧರ್ಮದವರನ್ನು ಹೊರಗಿಡಿ, ಆ ಧರ್ಮದವರನ್ನು ಹೊರಗಿಡಿ ಎನ್ನುವ ಕೂಗುಮಾರಿಗಳೇ, ದಯವಿಟ್ಟು ನಿಮ್ಮ ಮೂಲಸ್ವಭಾವವೇನು, ಪ್ರಭಾವವೇನು ಎಂಬುದನ್ನು ಪರಾಮರ್ಶೆಗೆ ಒಳಪಡಿಸಿಕೊಳ್ಳಿ. ಪ್ರಭಾವ ಎನ್ನುವುದು ಎಂದಿಗೂ ಸ್ವನಾಶವೇ.
ಮೈಸೂರಿನಲ್ಲಿ ವಾಸಿಸುತ್ತಿರುವ ಲೇಖಕಿ, ಅನುವಾದಕಿ ಜಯಶ್ರೀ ಜಗನ್ನಾಥ ಅವರ ನೆನಪು ನಿಮ್ಮ ಓದಿಗೆ.
ನಮ್ಮ ತಾತ ಮಾಸ್ತಿ ವೆಂಕಟೇಶ ಐಯ್ಯಂಗಾರರ ಸಹಪಾಠಿಯಾಗಿದ್ದವರು. ಮಾಸ್ತಿಯವರ ಆತ್ಮಕಥನ ‘ಭಾವ’ದಲ್ಲಿ ಅವರನ್ನು ‘ಫಿಸಿಕ್ಸ್ ಭೀಮರಾವ್’ ಎಂದು ನೆನಪಿಸಿಕೊಂಡಿದ್ದಾರೆ. ತಂದೆಯಿಲ್ಲದೆ ವಿಧವೆ ಮಡಿಹೆಂಗಸು ತಾಯಿ ಮತ್ತು ‘ದ ಗ್ರೇಟ್ ಇನ್ಫ್ಲುಯೆನ್ಝಾ’ದಲ್ಲಿ ಒಬ್ಬ ಅಣ್ಣ ಮತ್ತಿತರ ಸಂಬಂಧಿರನ್ನೆಲ್ಲಾ ಕಳೆದುಕೊಂಡ ನಮ್ಮ ತಾತ, ಅವರ ವಿಧವೆ ತಾಯಿ, ವಿಧವೆ ಅತ್ತಿಗೆ ಮತ್ತು ಅಣ್ಣನ ಮಕ್ಕಳ ಸಂಸಾರವನ್ನು ತಮ್ಮ ಸ್ಕಾಲರ್ಶಿಪ್ ಹಣದಲ್ಲಿ ನಡೆಸುತ್ತಿದ್ದರು. ಕಿತ್ತು ತಿನ್ನುವ ಬಡತನ. ಓದಿನಲ್ಲಿ ಹಿಂದೆ ಬಿದ್ದುಬಿಟ್ಟರೆ ಮುಂದಿನ ತಿಂಗಳು ವಿದ್ಯಾರ್ಥಿವೇತನ ನಿಂತು ಹೋಗಬಹುದೆಂಬ ಆತಂಕ. ಸಂಸ್ಕೃತ ಮತ್ತು ಗಣಿತದಲ್ಲಿ ಮೇರುಪ್ರತಿಭೆ ಹೊಂದಿದ್ದ ಅವರಿಗೆ ಆಗಿನ ಮದರಾಸಿನಲ್ಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದರೂ ವಿದ್ಯಾರ್ಥಿವೇತನ ಸಿಗದೆ ಹೋಗಲಾಗುತ್ತಿರಲಿಲ್ಲ. ಆ ಕಾಲದಲ್ಲಿ ಎಲ್ಲಾರೂ ಬಿಎ ಪರೀಕ್ಷೆ ಪಾಸು ಮಾಡಿಕೊಂಡೇ ಎಂಜನಿಯರಿಂಗ್ ಕಾಲೇಜಿಗೆ ಸೇರಬೇಕಿತ್ತು.
ಆ ವರ್ಷ ವಿದ್ಯಾರ್ಥಿವೇತನವು ಬೊಂಬಾಯಿ ಪ್ರಾಂತ್ಯಕ್ಕೆ ಸಲ್ಲಲ್ಪಟ್ಟಿತ್ತು. ಮುಂದಿನ ವರ್ಷದವರೆಗೂ ನಮ್ಮ ತಾತನಿಗೆ ಸಿಗುವಂತಿರಲಿಲ್ಲ. ಹಾಗಾಗಿ ಅವರು ಎಂಜನಿಯರಿಂಗ್ ಆಸೆ ಬಿಟ್ಟು ಗುಮಾಸ್ತರಾಗಲು ತಯಾರಾಗಿದ್ದರು. ಆಗ ಅವರ ಬಿಎ ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಪ್ರೊಫೆಸರ್ ಟೇಟ್ ಎಂಬ ಕ್ರಿಶ್ಚಿಯನ್ ವ್ಯಕ್ತಿ. ಅವರು ತಾತನನ್ನು ಹುರಿದುಂಬಿಸಿ ಮದರಾಸಿಗೆ ಕಳಿಸಿದರು. ವಿದ್ಯಾರ್ಥಿವೇತನ ಸಿಗುವುದಕ್ಕೆ ಮೊದಲಿನ ಒಂದು ವರ್ಷದವರೆಗೆ ಪ್ರೊಫೆಸರ್ ಟೇಟ್ ತಮ್ಮ ಸ್ವಂತ ಹಣವನ್ನು ತಾತನಿಗೆ ಕಳಿಸುತ್ತಿದ್ದರು. ಆ ವರ್ಷ ಒಂದು ಹೊತ್ತಿನ ಊಟ ಮತ್ತೆ ರಾತ್ರಿ ಸ್ವಲ್ಪ ಮಂಡಕ್ಕಿ ತಿಂದು, ಉಳಿದ ಹಣವನ್ನು ತಾಯಿಗೆ ಕಳುಹಿಸುತ್ತಿದ್ದರು.
ಇದನ್ನೂ ಓದಿ : ಏಸೊಂದು ಮುದವಿತ್ತು : ಅನಿಶ್ಚಿತ ಅಲೆಗಳನ್ನು ಎದುರಿಸಲು ಕುಟುಂಬದಲ್ಲಿಯೂ ಪ್ರಜಾಪ್ರಭುತ್ವ ಸಮನ್ವಯಗೊಳ್ಳಬೇಕಿದೆ
ಇದೆಲ್ಲಾ ನಡೆದದ್ದು ಬಹುಶಃ ಹತ್ತೊಂಭತ್ತನೂರಾ ಹದಿನೈದರ ಸುಮಾರಿಗೆ ಇರಬೇಕು. ಮುಂದೆ ನಮ್ಮ ತಾತ ಎಂಜಿನಿಯರ್ ಆಗಿ ಸರ್ ಎಮ್. ವಿಶ್ವೇಶ್ವರಯ್ಯನವರ ಕನ್ನಂಬಾಡಿ ಕಟ್ಟೆ, ಲಿಂಗನಮಕ್ಕಿ ಮತ್ತು ಶಿವನಸಮುದ್ರದಲ್ಲೆಲ್ಲಾ ಕೆಲಸ ಮಾಡಿ ನಿವೃತ್ತರಾದರು. ತಮ್ಮ ಅಮ್ಮ ಮತ್ತು ಮನೆಯವರಿಗೆಲ್ಲಾ ಅರ್ಥಿಕ ತೊಂದರೆಗಳನ್ನು ತಪ್ಪಿಸಿ ಸಂಪದ್ಭರಿತ ಬದುಕನ್ನು ನೀಡಿದರು.
ಮುಂದೆ ಅರವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ನಾನು ಒಂದನೇ ಕ್ಲಾಸಿನಲ್ಲಿರುವಾಗ ಒಂದು ದಿನ ಮನೆಗೆ ಬರುತ್ತಿದ್ದ ದಿನಪತ್ರಿಕೆಯ ಮೂಲೆಯಲ್ಲಿ ಒಂದು ಸುದ್ದಿ ಅಚ್ಚಾಗಿತ್ತು. ಇಂಗ್ಲೆಂಡಿನ ಯಾವುದೋ ಮೂಲೆಯಲ್ಲಿ ಒಂದು ಹಳ್ಳಿಯಲ್ಲಿ ಅದೇ ಪ್ರೊಫೆಸರ್ ಟೇಟ್ ನಿಧನದ ಸುದ್ದಿ. ನಮ್ಮ ತಾತ ಅದನ್ನು ಓದಿದವರೇ, ಎದ್ದು ಹಿಂದಿನ ಅಂಗಳಕ್ಕೆ ಹೋಗಿ ಕೊಡದಲ್ಲಿ ನೀರನ್ನೆತ್ತಿ ತಲೆಯ ಮೇಲೆ ಸುರಿದುಕೊಂಡು ಮಂತ್ರಗಳನ್ನು ಹೇಳುತ್ತಾ, ಪ್ರೊಫೆಸರ್ ಟೇಟ್, ತನಗೆ ಜ್ಞಾನದಾನ ಮಾಡಿದ ಪಿತೃಸಮಾನರು ಎಂದು ಹೇಳುತ್ತ ತರ್ಪಣ ನೀಡಿದರು.
ಇಂತಹ ಜೀವನ ಮೌಲ್ಯಗಳನ್ನು ಮಕ್ಕಳಿಗೆ ತಿಳಿ ಹೇಳುವುದರ ಬದಲಿಗೆ ‘ಅವರು ಬೇರೆ ಜಾತಿ, ಧರ್ಮ, ಅವರು ಹುಟ್ಟಿನಿಂದ, ಅವರು ತಿನ್ನುವ ಊಟದಿಂದ ನಮಗಿಂತ ಬೇರೆ’ ಎಂದು ಹೇಳುವ ದ್ವೇಷದ ಬೀಜಗಳಿಗೆ ಇಚೀಚೆಗೆ ನಾವ್ಯಾಕೆ ನೀರೆರೆಯುತ್ತಿದ್ದೇವೆ?
ಪ್ರತಿಕ್ರಿಯೆಗಾಗಿ : tv9kannadadigital@gmail.com
ಇದನ್ನೂ ಓದಿ : ಸ್ವಭಾವ ಪ್ರಭಾವ: ‘ಸಪ್ರೇಮ ಸಂಬಂಧಗಳು ಮತ್ತು ಕಾವಿಗೆ ಕುಳಿತ ಕೇಡು’ ಮಹಾದೇವ ಹಡಪದ ಬರಹ
Published On - 9:56 am, Fri, 25 March 22