Tax Refund: ಏಪ್ರಿಲ್​ನಿಂದ ಜನವರಿ 10ರ ತನಕ 1.59 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1.54 ಲಕ್ಷ ಕೋಟಿ ರೀಫಂಡ್

| Updated By: Srinivas Mata

Updated on: Jan 14, 2022 | 8:43 AM

2021ರ ಏಪ್ರಿಲ್​ನಿಂದ 2022ರ ಜನವರಿ ತನಕ 1.59 ಕೋಟಿ ತೆರಿಗೆದಾರರಿಗೆ 1.54 ಲಕ್ಷ ಕೋಟಿ ರೂಪಾಯಿ ಮರುಪಾವತಿ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.

Tax Refund: ಏಪ್ರಿಲ್​ನಿಂದ ಜನವರಿ 10ರ ತನಕ 1.59 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1.54 ಲಕ್ಷ ಕೋಟಿ ರೀಫಂಡ್
ಸಾಂದರ್ಭಿಕ ಚಿತ್ರ
Follow us on

ಕೇಂದ್ರೀಯ ನೇರ ತೆರಿಗೆ ಮಂಡಳಿಯು (CBDT) 2021ರ ಏಪ್ರಿಲ್ 1ರಿಂದ 2022ರ ಜನವರಿ 10ರ ವರೆಗೆ 1.59 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1,54,302 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಗುರುವಾರ ತಿಳಿಸಿದೆ. “1,56,57,444 ಪ್ರಕರಣಗಳಲ್ಲಿ 53,689 ಕೋಟಿ ರೂಪಾಯಿಗಳ ಆದಾಯ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ ಮತ್ತು 2,21,976 ಪ್ರಕರಣಗಳಲ್ಲಿ 1,00,612 ಕೋಟಿ ರೂಪಾಯಿಗಳ ಕಾರ್ಪೊರೇಟ್ ತೆರಿಗೆ ಮರುಪಾವತಿಗಳನ್ನು ನೀಡಲಾಗಿದೆ,” ಎಂದು ಇಲಾಖೆ ಟ್ವೀಟ್ ಮಾಡಿದೆ. “ಇದು AY2021-22ರ 1.20 ಕೋಟಿ ಮರುಪಾವತಿಯ, ರೂ. 23,406.28 ಕೋಟಿ ಒಳಗೊಂಡಿದೆ,” ಎಂದು ಅದು ಹೇಳಿದೆ. ಈ ಆರ್ಥಿಕ ವರ್ಷದಲ್ಲಿ ಇದುವರೆಗೆ 1.50 ಲಕ್ಷ ಕೋಟಿ ರೂಪಾಯಿಗಳ ಮರುಪಾವತಿಯನ್ನು ನೀಡಿದೆ ಎಂದು 2022ರ ಜನವರಿ 5ರಂದು ಇಲಾಖೆ ತಿಳಿಸಿದೆ. ಇದರಲ್ಲಿ 2021-22ರ ಅಸೆಸ್​ಮೆಂಟ್ ವರ್ಷದ 1.1 ಕೋಟಿ ಮರುಪಾವತಿ, 21,323.55 ಕೋಟಿ ರೂಪಾಯಿ ಒಳಗೊಂಡಿದೆ.

ಇದರಲ್ಲಿ 1.46 ಕೋಟಿ ಪ್ರಕರಣಗಳಲ್ಲಿ 51,194 ಕೋಟಿ ರೂಪಾಯಿಗಳ ಆದಾಯ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ ಮತ್ತು 2.19 ಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ 99,213 ಕೋಟಿ ರೂಪಾಯಿಗಳ ಕಾರ್ಪೊರೇಟ್ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ. ಐಟಿ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವಾದ ಡಿಸೆಂಬರ್ 31ರ ಹೊತ್ತಿಗೆ ಸುಮಾರು 5.8 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ ಮತ್ತು ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಕೊನೆಯ ದಿನವೇ 46 ಲಕ್ಷ ಸಲ್ಲಿಕೆಯಾಗಿದೆ ಎಂದು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ. ಜನವರಿ 12ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಗಳಿಕೆಯ ಕರೆಯಲ್ಲಿ ಪರೇಖ್ ಅವರು ಇನ್ಫೋಸಿಸ್ ಈಗ ಇಲಾಖೆಯೊಂದಿಗೆ ಮುಂದಿನ ಮಾಡ್ಯೂಲ್‌ಗಳ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸೇರಿಸಿದ್ದಾರೆ.

ಅಲ್ಲದೆ, ಒಂದು ನಿರ್ದಿಷ್ಟ ವಿಭಾಗಕ್ಕೆ ಸರ್ಕಾರವು ಮಾರ್ಚ್ 2022ಕ್ಕೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ವಿಸ್ತರಿಸಿದೆ. ವೈಯಕ್ತಿಕ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿಲ್ಲ. 2021-22ರ ಅಸೆಸ್​ಮೆಂಟ್​ ವರ್ಷಕ್ಕೆ ಸಂಬಂಧಿಸಿದಂತೆ ಲೆಕ್ಕಪರಿಶೋಧನಾ ಪ್ರಕರಣಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಮಾರ್ಚ್ 15, 2022ರವರೆಗೆ ವಿಸ್ತರಿಸಲಾಗಿದೆ. ಆದರೆ ತೆರಿಗೆ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸಲು ಕೊನೆಯ ದಿನವನ್ನು ಫೆಬ್ರವರಿ 15, 2022ಕ್ಕೆ ಮುಂದೂಡಲಾಗಿದೆ ಎಂದು ಜನವರಿ 11ರಂದು CBDT ಪ್ರಕಟಿಸಿದೆ.

ಹಲವಾರು ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಷನ್‌ಗಳು ಗಡುವನ್ನು ವಿಸ್ತರಿಸಲು ಸರ್ಕಾರವನ್ನು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವು ಬಂದಿದೆ. ಏಕೆಂದರೆ ಕೊವಿಡ್-19 ಪರಿಣಾಮ ಮತ್ತು ಇ-ಫೈಲಿಂಗ್ ಪೋರ್ಟಲ್‌ನಲ್ಲಿನ ದೋಷಗಳು ಸಲ್ಲಿಕೆಗಳ ವಿಳಂಬದ ಹಿಂದಿನ ಕಾರಣಗಳಾಗಿವೆ. ತೆರಿಗೆ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸುವ ಗಡುವನ್ನು ಈ ಹಿಂದೆ ಜನವರಿ 15, 2022 ಎಂದು ನಿಗದಿಪಡಿಸಲಾಗಿತ್ತು. ನಿರ್ದಿಷ್ಟ ದಿನಾಂಕದ ನಂತರ ಸಲ್ಲಿಸಲು, ವಹಿವಾಟಿನ ಶೇಕಡಾ 0.5 ರಷ್ಟು ಅಥವಾ ಗರಿಷ್ಠ 1.5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಬೇಕಾಗಿತ್ತು.

ಇದನ್ನೂ ಓದಿ:ಐಟಿಆರ್, ಆಧಾರ್, ತೆರಿಗೆ ಯೋಜನೆ ತನಕ 2022ನೇ ಇಸವಿಯಲ್ಲಿನ 5 ಗಡುವು ದಿನಾಂಕಗಳ ಬಗ್ಗೆ ತಿಳಿಯಿರಿ