ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರ ಪಟ್ಟಣದ ಬರಗಾಮ್ ಪ್ರದೇಶದಲ್ಲಿ ಭಾನುವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆದಿದೆ. ಇದರಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಶ್ಮೀರ ವಲಯ ಪೊಲೀಸರು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದು, “ಅವಂತಿಪುರ ಎನ್‌ಕೌಂಟರ್ ಅಪ್‌ಡೇಟ್: 01 ಭಯೋತ್ಪಾದಕನ ಹತ್ಯೆ, ಕಾರ್ಯಾಚರಣೆ ನಡೆಯುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ. ಬರಗಾಮ್ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿ ಲಭಿಸಿದ ನಂತರ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪಡೆಗಳು ಹುಡುಕಾಟ ನಡೆಸುತ್ತಿದ್ದಾಗ, ಭಯೋತ್ಪಾದಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿ ಹೇಳಿದರು. ಸದ್ಯ ಗುಂಡಿನ ಚಕಮಕಿ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಪೊಲೀಸರು ಹಂಚಿಕೊಂಡ ಟ್ವೀಟ್:
#AwantiporaEncounterUpdate: 01 unidentified #terrorist killed. #Operation going on. Further details shall follow. @JmuKmrPolice https://t.co/Uz8niDLv2d
— Kashmir Zone Police (@KashmirPolice) December 12, 2021
ಲಷ್ಕರ್-ಎ-ತೊಯ್ಬಾ (ಎಲ್‌ಇಟಿ), ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನ ಮೂವರು ಭಯೋತ್ಪಾದಕರನ್ನು ಬುಧವಾರ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿದ ಮೂರು ದಿನಗಳ ನಂತರ ಭಾನುವಾರ ಬೆಳಗಿನ ಕಾರ್ಯಾಚರಣೆ ನಡೆದಿದೆ. ಪೊಲೀಸರ ಪ್ರಕಾರ, ಈ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲಿನ ದಾಳಿ ಮತ್ತು ನಾಗರಿಕ ದೌರ್ಜನ್ಯ ಸೇರಿದಂತೆ ಹಲವಾರು ಭಯೋತ್ಪಾದಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಗುಂಪುಗಳ ಭಾಗವಾಗಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಾಗರಿಕರ ಮೇಲೆ ಹಲವಾರು ದಾಳಿಗಳನ್ನು ನಡೆದಿವೆ. ಅವುಗಳಲ್ಲಿ ಹೆಚ್ಚಿನವು ಭಾರತದ ಇತರ ರಾಜ್ಯಗಳಿಂದ ಬಂದವರ ಮೇಲೆ ನಡೆದಿವೆ. ಕೇಂದ್ರ ಸರ್ಕಾರ ಈ ಕುರಿತು ನವೆಂಬರ್ 30ರಂದು ಸಂಸತ್ತಿಗೆ ನೀಡಿರುವ ಮಾಹಿತಿಯಲ್ಲಿ, ಈ ವರ್ಷದ ನವೆಂಬರ್ 15ರವರೆಗೆ ಭಯೋತ್ಪಾದಕ ದಾಳಿಯಿಂದ 40 ನಾಗರಿಕರು ಸಾವನ್ನಪ್ಪಿದ್ದು, 72 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ನವೆಂಬರ್ 15 ರವರೆಗೆ ಭಯೋತ್ಪಾದಕರ ಮೇಲಿನ ಕಾದಾಟದಲ್ಲಿ ಭದ್ರತಾ ಪಡೆಗಳ 35 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 86 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಮೈಸೂರು: ನೀರು ಕುಡಿಯುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟ ಹುಲಿ; ಅಪರೂಪದ ದೃಶ್ಯ ನೋಡಿ
ಅಮೇರಿಕಾ: ಚಂಡಮಾರುತಕ್ಕೆ ನಲುಗಿದ ಐದು ರಾಜ್ಯಗಳು; 80ಕ್ಕೂ ಅಧಿಕ ಜನರ ದುರ್ಮರಣ