ಅಸಾದುದ್ದೀನ್​ ಓವೈಸಿ ಸುರಕ್ಷತೆ, ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ 101 ಕುರಿಗಳನ್ನು ಬಲಿಕೊಟ್ಟ ಉದ್ಯಮಿ

ಈ ಬಾರಿ ಉತ್ತರಪ್ರದೇಶ ಚುನಾವಣೆಯಲ್ಲಿ ಅಸಾದುದ್ದೀನ್​ ಓವೈಸಿಯವರ  ಎಐಎಂಐಎಂ ಪಕ್ಷ ಒಟ್ಟು 100 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಹಾಗಾಗಿ ಓವೈಸಿ ಅಲ್ಲಿ ಹೆಚ್ಚಿನ ಪ್ರಚಾರ ಕೂಡ ನಡೆಸುತ್ತಿದ್ದಾರೆ. 

ಅಸಾದುದ್ದೀನ್​ ಓವೈಸಿ ಸುರಕ್ಷತೆ, ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ 101 ಕುರಿಗಳನ್ನು ಬಲಿಕೊಟ್ಟ ಉದ್ಯಮಿ
ಅಸಾದುದ್ದೀನ್ ಓವೈಸಿ
Updated By: Lakshmi Hegde

Updated on: Feb 06, 2022 | 3:49 PM

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನದಾಳಿಯಾಗಿದೆ. ಇದರ ಬೆನ್ನಲ್ಲೇ ಹೈದರಾಬಾದ್‌ನ  ಬಾಗ್-ಎ-ಜಹನಾರಾ ಎಂಬಲ್ಲಿ ಉದ್ಯಮಿಯೊಬ್ಬ ಅಸಾದುದ್ದೀನ್​ ಓವೈಸಿ ಸುರಕ್ಷತೆಗಾಗಿ ಪ್ರಾರ್ಥಿಸಿ 101 ಕುರಿಗಳನ್ನು ಬಲಿನೀಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಅಂದಹಾಗೆ, ಈ ಪೂಜೆ ಮತ್ತು ಬಲಿದಾನ ಕಾರ್ಯಕ್ರಮದಲ್ಲಿ ಎಐಎಂಐಎಂ ನಾಯಕ, ಶಾಸಕ ಅಹ್ಮದ್​ ಬಲಾಲಾ ಕೂಡ ಪಾಲ್ಗೊಂಡಿದ್ದರು ಎನ್ನಲಾಗಿದೆ. ಫೆ.3ರಂದು ಉತ್ತರ ಪ್ರದೇಶದ ಮೀರತ್​ನಲ್ಲಿ ಚುನಾವಣಾ ಪ್ರಚಾರ ನಡೆಸಿ, ವಾಪಸ್ ದೆಹಲಿಗೆ ಓವೈಸಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಛಜರ್ಸಿ ಟೋಲ್​ ಪ್ಲಾಜಾ ಬಳಿ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಎರಡು ಗುಂಡು ಕಾರಿಗೆ ತಗುಲಿ ತೂತು ಆಗಿದ್ದರೆ, ಇನ್ನೆರಡು ಗುಂಡು ಕಾರಿನ ಟೈಯರ್​ಗೆ ತಗುಲಿ ಕಾರು ಪಂಚರ್​ ಆಗಿತ್ತು. ಓವೈಸಿ ಬಳಿಕ ಇನ್ನೊಂದು ವಾಹನದಲ್ಲಿ ದೆಹಲಿಗೆ ತೆರಳಿದ್ದರು.

ಈ ಘಟನೆಯ ಬೆನ್ನಲ್ಲೇ ಓವೈಸಿಗೆ Z ಶ್ರೇಣಿಯ ಭದ್ರತೆ ನೀಡುವುದಾಗಿ ಕೇಂದ್ರ ರಕ್ಷಣಾ ಇಲಾಖೆ ಹೇಳಿತ್ತಾದರೂ ಅಸಾದುದ್ದೀನ್ ಓವೈಸಿ ಅದನ್ನು ನಿರಾಕರಿಸಿದ್ದರು. ನನಗೆ ಝಡ್​ ಕೆಟೆಗರಿ ಭದ್ರತೆ ಬೇಡ, ನನ್ನನ್ನು ಎ ವರ್ಗದ  ಪ್ರಜೆಯನ್ನಾಗಿ ಮಾಡಿ ಸಾಕು ಎಂದಿದ್ದರು. ಇನ್ನು ಅಸಾದುದ್ದೀನ್​ ಓವೈಸಿ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಪಟ್ಟಂತೆ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಅದರಲ್ಲಿ ಮುಖ್ಯ ಆರೋಪಿಯ ಹೆಸರು ಸಚಿನ್​ ಪಂಡಿತ್​ ಎಂದಾಗಿದ್ದು, ಈತನೇ ಗುಂಡು ಹಾರಿಸಿದವನು ಎಂದು ಹಾಪುರ ಎಎಸ್​ಪಿ ತಿಳಿಸಿದ್ದಾರೆ. ಆತನಿಂದ 9ಎಂಎಂ ಪಿಸ್ತೂಲ್​ ವಶಪಡಿಸಿಕೊಂಡಿದ್ದಾಗಿಯೂ ಮಾಹಿತಿ ನೀಡಿದ್ದಾರೆ. ಹಾಗೆ ಬಂಧಿಸಲ್ಪಟ್ಟ ಇನ್ನೊಬ್ಬ ಆರೋಪಿ ಹೆಸರು ಶುಭಮ್ ಎಂದಾಗಿದೆ. ಈ ಸಚಿನ್​ ಪಂಡಿತ್​ ಮೊದಮೊದಲು ತನಿಖೆಗೆ ಸಹಕರಿಸಲಿಲ್ಲ. ಯಾವುದೇ ಪ್ರಶ್ನೆಗೂ ಉತ್ತರ ನೀಡಲಿಲ್ಲ. ಆದರೆ ಆತ ಗುಂಡು ಹೊಡೆದಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ನಂತರ ಸತ್ಯ ಬಾಯ್ಬಿಟ್ಟಿದ್ದಾನೆ. ಓವೈಸಿ ಸದಾ ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ನಾವು ಅವರನ್ನ ಕೊಲ್ಲಲು ಪ್ರಯತ್ನಿಸಿದ್ದು ಇದೇ ಮೊದಲಲ್ಲ. ಹಿಂದೆಯೂ ಕೂಡ ಮೂರು ಬಾರಿ ಪ್ರಯತ್ನಿಸಿದ್ದೇವೆ ಎಂದು ಒಪ್ಪಿಕೊಂಡಿದ್ದಾನೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಾರಿ ಉತ್ತರಪ್ರದೇಶ ಚುನಾವಣೆಯಲ್ಲಿ ಅಸಾದುದ್ದೀನ್​ ಓವೈಸಿಯವರ  ಎಐಎಂಐಎಂ ಪಕ್ಷ ಒಟ್ಟು 100 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಹಾಗಾಗಿ ಓವೈಸಿ ಅಲ್ಲಿ ಹೆಚ್ಚಿನ ಪ್ರಚಾರ ಕೂಡ ನಡೆಸುತ್ತಿದ್ದಾರೆ.  ನಿನ್ನೆ ಉತ್ತರ ಪ್ರದೇಶದ ಛಪ್ರೌಲಿಯಲ್ಲಿ ರ್ಯಾಲಿ ನಡೆಸಿದ ಓವೈಸಿ, ಗಾಂಧಿಯನ್ನು ಕೊಂದವರೇ ನನ್ನ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಅಲ್ಲಾ ಯಾರನ್ನಾದರೂ ಬದುಕಿಸಬೇಕು ಎಂದು ನಿರ್ಧರಿಸಿದರೆ, ಅವರನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ. ನನ್ನನ್ನೂ ಸಹ ಅಲ್ಲಾ ಕಾಪಾಡಿದ್ದಾನೆ ಎಂದು ಹೇಳಿದ್ದಾರೆ. ಅಸಾದುದ್ದೀನ್ ಓವೈಸಿ ನಿನ್ನೆ ಛಪ್ರೌಲಿ, ಗಢಮುಕ್ತೇಶ್ವರ ಮತ್ತು ಲೋನಿಯಲ್ಲಿ ರ್ಯಾಲಿ ನಡೆಸಬೇಕಿತ್ತು. ಆದರೆ ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೆ ಅನುಮತಿ ಸಿಗದ ಕಾರಣ, ಛಪ್ರೌಲಿಯೊಂದರಲ್ಲೇ ರ್ಯಾಲಿ ನಡೆಸಿ ವಾಪಸ್​ ಆಗಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಅಂಡರ್ 19 ವಿಶ್ವಕಪ್ ಗೆದ್ದು ಬಿಗಿದ ಭಾರತ; ಇಲ್ಲಿವೆ ಫೋಟೋಗಳು

Published On - 3:47 pm, Sun, 6 February 22