1919 ಏಪ್ರಿಲ್ 13, ಅಂದು ಬೈಸಾಕಿ. ಅಂದರೆ ಪಂಜಾಬ್ ಜನರ ಸುಗ್ಗಿಯ ಹಬ್ಬ. ಹಬ್ಬದ ಆಚರಣೆಗಾಗಿ ಜನರು ಜಲಿಯನ್‌ವಾಲಾ ಬಾಗ್ನಲ್ಲಿ ಬಂದು ಸೇರಿದ್ದರು. ಶಾಸನಬದ್ಧವಾಗಿ ಅಂದು ಅಮೃತಸರದಲ್ಲಿ ಐದಕ್ಕಿಂತ ಹೆಚ್ಚು ಜನ ಸೇರುವಂತಿರಲಿಲ್ಲ ಎಂದು ಬ್ರಿಟಿಷ್ ಸರ್ಕಾರ ಆಜ್ಞೆ ಹೊರಡಿಸಿತ್ತು. ಈ ವಿಷಯ ಅಲ್ಲಿ ಸೇರಿರುವ ಜನರಿಗೂ ತಿಳಿದಿರಲಿಲ್ಲ. ಇದೇ ಹೊತ್ತಲ್ಲಿ ಶಸ್ತ್ರ ಸಜ್ಜಿತವಾದ ಸೇನಾ ತುಕಡಿಯೊಂದಿಗೆ ಬಂದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡಯರ್ ಪ್ರವೇಶ ಬಾಗಿಲನ್ನು ಮುಚ್ಚಿ ಯಾವುದೇ ಎಚ್ಚರಿಕೆಯನ್ನೂ ಕೊಡದೆ ಉದ್ಯಾನದೊಳಗೆ ಪ್ರವೇಶಿಸಿ Fire ಎಂದು ಗುಂಡಿನ ದಾಳಿ ನಡೆಸಲು ಆದೇಶ ನೀಡಿ ಬಿಟ್ಟರು. ಸುಮಾರು 15 ನಿಮಿಷ ಕಾಲ ಸತತವಾಗಿ ಬ್ರಿಟಿಷ್ ಸೇನೆ ಅಲ್ಲಿ ಗುಂಡಿನ ಮಳೆಗೆರೆಯಿತು. ಬೈಸಾಕಿ ಆಚರಣೆಗೆ ಬಂದಿದ್ದ ಮಕ್ಕಳು, ಹೆಂಗಸರು, ಪುರುಷರು ಜೀವಭಯದಿಂದ ದಿಕ್ಕಾಪಾಲಾಗಿ ಓಡಿದರು, ಕೆಲವರು ಗೋಡೆ ಹತ್ತಿ ಹಾರಲು ಪ್ರಯತ್ನಿಸಿದರು. ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಕೆಲವರು ಅಲ್ಲಿದ್ದ ಬಾವಿಗೆ ಹಾರಿದ್ದರು. ಬಾವಿಯೊಂದರಿಂದಲೇ ಸುಮಾರು 120 ಶವಗಳನ್ನು ಹೊರತೆಗೆಯಲಾಗಿತ್ತು ಅಂತಿವೆ ಕೆಲವು ದಾಖಲೆಗಳು. ಸರ್ಕಾರಿ ದಾಖಲೆಗಳ ಪ್ರಕಾರ ಜನರಲ್ ಡಯರ್ ನಡೆಸಿದ ಈ ಮಾರಣಹೋಮದಲ್ಲಿ ಸತ್ತವರ ಸಂಖ್ಯೆ 350. ಆದರೆ ಅನಧಿಕೃತ ಅಂಕಿ ಅಂಶಗಳ ಪ್ರಕಾರ ಸಾವಿರಕ್ಕಿಂತಲೂ ಹೆಚ್ಚು ಮಂದಿ ಇಲ್ಲಿ ಬಲಿಯಾಗಿದ್ದರು. ಕರ್ಫ್ಯೂ ವಿಧಿಸಿದ ಕಾರಣ, ಗಾಯಗೊಂಡ ಹಲವರನ್ನು ಹತ್ಯಾಕಾಂಡದ ಸ್ಥಳದಿಂದ ಇತರೆಡೆಗೆ ಸ್ಥಳಾಂತರಿಸಲಾಗಲಿಲ್ಲ. ಜಲಿಯನ್‌ವಾಲಾ ಬಾಗ್ನಲ್ಲಿ ಸತ್ತವರ ಸಂಖ್ಯೆ ಏಷ್ಟು ಎಂಬುದರ ಬಗ್ಗೆ ಈವರೆಗೂ ನಿಖರವಾದ ಲೆಕ್ಕ ಸಿಕ್ಕಿಲ್ಲ.
ರೌಲತ್ ಕಾಯ್ದೆ ವಿರುದ್ಧ ಸಿಡಿದೆದ್ದಿತ್ತು ಪಂಜಾಬ್
1919ರಲ್ಲಿ ‘ರೌಲತ್ ಕಾಯ್ದೆ’ ಎನ್ನುವ ನೂತನ ಕಾಯ್ದೆಯೊಂದನ್ನು ಬ್ರಿಟಿಷ್ ಸರ್ಕಾರ ಜಾರಿಗೆ ತಂದಿತು. ಬ್ರಿಟಿಷ್ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಅಥವಾ ಸಿಡಿದೇಳಲು ಸಹಕಾರ ಮಾಡುವವರಿಗೆ ಯಾವ ವಾರಂಟ್ ಹಾಗೂ ನ್ಯಾಯಾಲಯದ ಅಪ್ಪಣೆ ಪಡೆಯದೆ ನೇರವಾಗಿ ಜೈಲಿಗೆ ದೂಡುವುದೇ ಈ ಕಾಯ್ದೆಯ ತಿರುಳು. ರೌಲತ್ ಕಾಯಿದೆ ನಿಷೇಧಕ್ಕೆ ಒತ್ತಾಯಿಸಿ ಏಪ್ರಿಲ್ 6, 1919ರಂದು ಪಂಜಾಬಿನ ಪ್ರಮುಖ ಪಟ್ಟಣಗಳಲ್ಲಿ ಪ್ರತಿಭಟನೆಗಳು ಜರುಗಿದವು. ಬ್ರಿಟಿಷರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಹೋರಾಟದಲ್ಲಿ ಐವರು ಬ್ರಿಟಿಷ್ ಅಧಿಕಾರಿಗಳು ಸಾವನಪ್ಪಿದ್ದರು. ಅದಕ್ಕೆ ಪ್ರತಿಯಾಗಿ ಬ್ರಿಟಿಷ್ ಪಡೆ ಗುಂಡು ಹಾರಿಸಿ 30 ಮಂದಿಯ ಹತ್ಯೆ ಮಾಡಿತ್ತು. ಪಂಜಾಬ್ನ ಉದ್ವಿಗ್ನ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಬ್ರಿಟಿಷ್ ಸರ್ಕಾರ ಬ್ರಿಗೇಡಿಯರ್ ಜನರಲ್ ಡಯರ್‌ನ್ನು ಪಂಜಾಬ್ ಪ್ರಾಂತ್ಯಕ್ಕೆ ಕಳುಹಿಸಿತು. ಜನರು ಡಯರ್ ವಿರುದ್ಧ ಸಿಡಿದೆದ್ದಿದ್ದರು. ಜನರಲ್ಲಿ ಭೀತಿ ಹುಟ್ಟಿಸಲು ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿಷೇಧ ಹೇರಲಾಯಿತು. ಆದರೆ ಜಲಿಯನ್‌ವಾಲಾ ಬಾಗ್ನಲ್ಲಿ ಸೇರಿದ್ದ ಜನರಿಗೆ ಈ ನಿಷೇಧಾಜ್ಞೆ ಬಗ್ಗೆ ತಿಳಿದಿರಲಿಲ್ಲ. ಅಲ್ಲಿಗೆ ಬಂದ ಡಯರ್ ಏಕಾಏಕಿ ಜನರ ಮೇಲೆ ಗೋಲಿಬಾರ್ ನಡೆಸಿ ರಕ್ತದೋಕುಳಿ ಹರಿಸಿದ್ದು ಭಾರತದ ಇತಿಹಾಸದಲ್ಲಿ ಮರೆಯಲಾಗದ ಕರಾಳ ನೆನಪು.
ಬ್ರಿಟನ್‌ನಲ್ಲಿ ಕೆಲವರು ಡೈಯರ್ನ ಕೃತ್ಯವನ್ನು ಶ್ಲಾಘಿಸಿದರು, ಕೆಲವರು ಟೀಕಿಸಿದರು. ಈ ಮಾರಣಹೋಮದ ನಂತರ ಡೈಯರ್ಗೆ ವಿಧಿಸಲಾದ ಶಿಕ್ಷೆ ಎಂದರೆ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಲಾಯಿತು, ಬಡ್ತಿ ನಿರಾಕರಿಸಲಾಯಿತು. ಅವರನ್ನು ಭಾರತದಲ್ಲಿ ಮತ್ತಷ್ಟು ನಿಯೋಜಿಸದಂತೆ ನಿರ್ಬಂಧಿಸಲಾಯಿತು.
ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕುರಿತು ತನಿಖೆ ನಡೆಸಲು ಹಂಟರ್ ಆಯೋಗ ಅನ್ನು ಸ್ಥಾಪಿಸುವಂತೆ ಅಂದಿನ ಭಾರತದ ರಾಜ್ಯಾಂಗ ಕಾರ್ಯದರ್ಶಿಯಾಗಿದ್ದ ಎಡ್ವಿನ್ ಮೊಂಟಾಗೊ ನಿರ್ಧರಿಸಿದರು. ಈ ಆಯೋಗದೆದುರು ಮೈಕಲ್ ಓ ಡ್ವಾಯರ್ನ್ನು ಕರೆತರಲಾಯಿತು. ವಿಚಾರಣೆಯ ವೇಳೆ, ಜಲಿಯನ್‌ವಾಲಾ ಬಾಗ್ ನಲ್ಲಿ ನಡೆಯಲಿರುವ ಕೃತ್ಯದ ಬಗ್ಗೆ ತನಗೆ ತಿಳಿದಿದ್ದರೂ ಅದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲವೆಂದು ಡ್ವಾಯರ್ ಒಪ್ಪಿಕೊಂಡರು. ಏತನ್ಮಧ್ಯೆ, ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಪ್ರತಿಕಾರದ ಕುದಿ ಪಂಬಾಬಿಗರ ಮನಸ್ಸಿನಲ್ಲಿ ಇತ್ತು. 1940 ಮಾರ್ಚ್ 13ರಂದು ಸಿಖ್ಖರ ಕ್ರಾಂತಿಕಾರ, ಸ್ವಾತಂತ್ರ್ಯ ಹೋರಾಟಗಾರ ಉದಮ್ ಸಿಂಗ್, ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಮೈಕಲ್ ಓ ಡ್ವಾಯರ್ನ್ನು ಲಂಡನ್ನ ಕ್ಯಾಕ್ಸ್ಟನ್ ಹಾಲ್ನಲ್ಲಿ ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ 1940 ಜುಲೈ ತಿಂಗಳಲ್ಲಿ ಉದಮ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು.
ಭಾರತೀಯ ಇತಿಹಾಸದ ಮೇಲೆ ನಾಚಿಕೆಗೇಡಿನ ಗಾಯ ಎಂದಿದ್ದರು ಥೆರೆಸಾ ಮೇ
ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಕ್ಷಮೆಯಾಚಿಸಬೇಕೆಂಬ ಬೇಡಿಕೆಯ ನಡುವೆಯೇ ಮಾಜಿ ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಈ ಘಟನೆಯ ಬಗ್ಗೆ 2019ರಲ್ಲಿ ವಿಷಾದ ವ್ಯಕ್ತಪಡಿಸಿದ್ದರು. ಅವರು ಈ ಘಟನೆಯನ್ನು ಬ್ರಿಟಿಷ್ ಭಾರತೀಯ ಇತಿಹಾಸದ ಮೇಲೆ ನಾಚಿಕೆಗೇಡಿನ ಗಾಯ ಎಂದು ಕರೆದರು ಆದರೆ ಕ್ಷಮೆಯಾಚಿಸಲಿಲ್ಲ.
2019ರಲ್ಲಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ 100ನೇ ವರ್ಷದ ಹೊತ್ತಲ್ಲಿ ಭಾರತದ ಬ್ರಿಟಿಷ್ ಹೈಕಮಿಷನರ್ ಡೊಮಿನಿಕ್ ಅಸ್ಕ್ವಿತ್ ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದರು. 100 ವರ್ಷಗಳ ಹಿಂದೆ ಜಲಿಯನ್ ವಾಲ್ ಬಾಗ್ ಘಟನೆಯು ಇಂದು ಬ್ರಿಟಿಷ್-ಭಾರತೀಯ ಇತಿಹಾಸದಲ್ಲಿ ನಾಚಿಕೆಗೇಡಿನ ಕೃತ್ಯವನ್ನು ಪ್ರತಿಬಿಂಬಿಸುತ್ತವೆ. ಅಲ್ಲಿ ಸಂಭವಿಸಿದ ಘಟನೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. 21 ನೇ ಶತಮಾನದ ಅಭಿವೃದ್ಧಿ ಹೊಂದುತ್ತಿರುವ ಸಹಭಾಗಿತ್ವವನ್ನು ಅಭಿವೃದ್ಧಿಪಡಿಸಲು ಬ್ರಿಟನ್ ಮತ್ತು ಭಾರತವು ಬದ್ಧವಾಗಿದೆ ಎಂದು ನಾನು ಇಂದು ಸಂತಸಗೊಂಡಿದ್ದೇನೆ ”ಎಂದು ಸ್ಮಾರಕದಲ್ಲಿ ಸಂದರ್ಶಕರ ಪುಸ್ತಕದಲ್ಲಿಅಸ್ಕ್ವಿತ್ ಬರೆದಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ: ಚಿಕ್ಕಬಳ್ಳಾಪುರದ ವಿದುರಾಶ್ವತ್ಥದಲ್ಲಿ ರಾಜ್ಯಪಾಲರಿಂದ ಕಾರ್ಯಕ್ರಮಕ್ಕೆ ಚಾಲನೆ
Published On - 2:13 pm, Tue, 13 April 21