ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ: ಚಿಕ್ಕಬಳ್ಳಾಪುರದ ವಿದುರಾಶ್ವತ್ಥದಲ್ಲಿ ರಾಜ್ಯಪಾಲರಿಂದ ಕಾರ್ಯಕ್ರಮಕ್ಕೆ ಚಾಲನೆ
Vidurashwatha Temple, Gauribidanur | ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಯೋಗ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮಗಳು ಜರುಗಲಿವೆ. ತದನಂತರ 11 ಗಂಟೆಗೆ ವಿದುರಾಶ್ವತ್ಥಕ್ಕೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಸೇರಿದಂತೆ ಸಚಿವರ ದಂಡು ಆಗಮಿಸಲಿದೆ.
ಚಿಕ್ಕಬಳ್ಳಾಪುರ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಗುಜರಾತ್ನ ದಂಡಿಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ವರ್ಚುವಲ್ ಮೀಟಿಂಗ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕರ್ನಾಟಕದ ಜಲಿಯನ್ ವಾಲಾಬಾಗ್ ಖ್ಯಾತಿಯ ವಿದುರಾಶ್ವತ್ಥದಲ್ಲಿ ಸಹ ಕಾರ್ಯಕ್ರಮ ನಡೆಯುತ್ತಿದ್ದು, ರಾಜ್ಯಪಾಲರಾದ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಲು ಐತಿಹಾಸಿಕ ಮತ್ತು ಪೌರಾಣಿಕ ಸ್ಥಳವಾದ ವಿದುರಾಶ್ವತ್ಥಕ್ಕೆ ಆಗಮಿಸಿದ್ದಾರೆ.(Vidurashwatha Temple, Gauribidanur)
ಆಗಸ್ಟ್ 15, 2022ಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿವೆ. ಈ ಕಾರಣದಿಂದ ಇಂದಿನಿಂದ ಆಗಸ್ಟ್ 15, 2022 ರವರೆಗೆ ಅಂದರೆ 75 ವಾರಗಳ ಕಾಲ ಸ್ವಾತಂತ್ರ್ಯ ಸಂಗ್ರಾಮದ ಸವಿನೆನೆಪಿನ ತಾಣಗಳಲ್ಲಿ ಸ್ವಾತಂತ್ರೋತ್ಸವದ 75ನೇ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಪ್ರತಿ ವಾರ ಆಚರಿಸಲಿದ್ದಾರೆ. ಹೀಗಾಗಿ ಇಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಗುಜರಾತ್ನ ದಂಡಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಾರೆ.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಯೋಗ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮಗಳು ಜರುಗಿದ್ದು. ತದನಂತರ 11 ಗಂಟೆಗೆ ವಿದುರಾಶ್ವತ್ಥಕ್ಕೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಸೇರಿದಂತೆ ಸಚಿವರ ದಂಡು ಆಗಮಿಸಿದೆ. ಮೊದಲು ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರರಾಗಿ ಮಡಿದ ಸೇನಾನಿಗಳ ಸವಿನೆನಪಿನ ಸ್ಮಾರಕ ಸ್ತೂಪ ಸ್ತಂಭಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. ತದನಂತರ ಸ್ವಾತಂತ್ರ್ಯ ಸಂಗ್ರಾಮದ ಫೋಟೊ ಗ್ಯಾಲರಿ ವೀಕ್ಷಣೆ ಮಾಡಿದ್ದ್ದು, ಕೊನೆಗೆ ಮೆಮೋರಿಯಲ್ ಹಾಲ್ನಲ್ಲಿ ವೇದಿಕೆ ಕಾರ್ಯಕ್ರಮ ನಡೆದಿದೆ. ವರ್ಚುವಲ್ ಕಾರ್ಯಕ್ರಮದ ಮೂಲಕ ಪ್ರಧಾನ ಮಂತ್ರಿ ಮೋದಿ ದಂಡಿಯಲ್ಲಿ ಚಾಲನೆ ಕೊಡಲಿರುವ ಕಾರ್ಯಕ್ರಮವನ್ನು ಗಣ್ಯರು ವೀಕ್ಷಿಸಿದ್ದಾರೆ.
ವಿದುರಾಶ್ವತ್ಥದಲ್ಲಿ ರಾಜ್ಯಪಾಲರಾದ ವಾಜುಭಾಯಿ ವಾಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಭಾಷಣದ ಮಧ್ಯೆ ಭಾರತ್ ಮಾತಾಕಿ ಜೈ ಎಂದು ಘೋಷಣೆ ಮಾಡಿದ್ದಾರೆ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾದವರಿಂದಲೂ ಘೋಷಣೆ ಕೂಗಿಸಿದ್ದಾರೆ. ಇದು ರಾಷ್ಟ್ರಕ್ಕೆ ಅರ್ಪಿತವಾದ ದಿನ. ಸ್ವಾತಂತ್ರ್ಯಕ್ಕಾಗಿ ವಿದುರಾಶ್ವತ್ಥದಲ್ಲಿ ತ್ಯಾಗ ಬಲಿದಾನವಾಗಿದೆ. ಇದನ್ನು ನಾವೇಲ್ಲ ನೆನಪಿಸಿಕೊಳ್ಳಬೇಕಿದೆ. ನಮ್ಮ ಜೀವನ ದೀನ ದಲಿತ ಬಡವರ ಸೇವೆಗಾಗಿ ಅರ್ಪಿತವಾಗಬೇಕಿದೆ. ಸ್ತ್ರೀಯರಿಗೆ ಅಪಮಾನ ಮಾಡಬೇಡಿ, ಸ್ತ್ರೀಶಕ್ತಿ, ಮಾತೃಶಕ್ತಿಯೇ ನಮಗೆ ಬಲ. ಗಾಂಧೀಜಿ, ಛತ್ರಪತಿ ಶಿವಾಜಿಯವರಿಗೆ ಅವರ ತಾಯಂದಿರ ಆಶಿರ್ವಾದ ಇತ್ತು. ಮಹಾತ್ಮರೆಲ್ಲಾ ಮಹಿಳೆಯರು-ಪುರುಷ ಸಮಾನವಾಗಿ ಬೆಳೆಯಬೇಕು ಎಂದಿದ್ದಾರೆ ಎಂದು ರಾಜ್ಯಪಾಲರಾದ ವಾಜುಭಾಯಿ ವಾಲಾ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಯುವ ಶಕ್ತಿಯ ಬಗ್ಗೆ ಮಾತನಾಡಿದ ಅವರು ಇಂದಿನ ಯುವ ಸಮುದಾಯ ದೇಶಕ್ಕಾಗಿ ಏನಾದ್ರು ಮಾಡಬೇಕು ಎನ್ನುವ ಸಂಕಲ್ಪ ತೊಡಬೇಕಿದೆ. ಪ್ರಸ್ತುತ ದೇಶದಲ್ಲಿ ಉತ್ತಮ ತಂತ್ರಜ್ಞಾನ ಲಭ್ಯವಿದೆ. ದೇಶದಲ್ಲಿ ಸಾಕಾಷ್ಟು ಅವಕಾಶಗಳಿವೆ ಯುವ ಸಮುದಾಯ ಬಳಸಿಕೊಳ್ಳಬೇಕು. ಸರ್ಕಾರದಲ್ಲಿ ಇರುವವರು ಸಮರ್ಥವಾಗಿ ಕೆಲಸ ನಿರ್ವಹಿಸಬೇಕು. ಮೈನಸ್ 40 ಡಿಗ್ರಿ ಹಿಮದಲ್ಲೂ ನಮ್ಮ ಸೈನಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೈನಿಕರ ಶ್ರಮದಿಂದ ನಾವು ಎ.ಸಿ ರೂಮ್ಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವೇಲ್ಲಾ ಒಟ್ಟಾಗಿ ದೇಶಕ್ಕಾಗಿ ದುಡಿಯಬೇಕು. ಯಥಾ ರಾಜಾ ತಥಾ ಪ್ರಜಾ ಎಂಬಂತೆ ಅಲ್ಲ ಈಗ ಯಥಾ ಪ್ರಜಾ ತಥಾ ರಾಜಾ ಎಂಬಂತೆ ಆಗಬೇಕು. ಎಲ್ಲರೂ ಸೇರಿ ಭ್ರಷ್ಟಾಚಾರ ಹೋಗಲಾಡಿಸಬೇಕು. ಎಷ್ಟೆ ವಿದ್ಯೆ ಬುದ್ಧಿ ಬಲ ಶಕ್ತಿ ಇದ್ದರೂ ದೇಶಕ್ಕಾಗಿ ಸಮರ್ಪಣೆ ಆಗಬೇಕು ಎಂದು ರಾಜ್ಯಪಾಲರಾದ ವಾಜುಭಾಯಿ ವಾಲಾ ತಿಳಿಸಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ವಾತಂತ್ರ್ಯ ಸಂಗ್ರಾಮದ ನೆನಪು ಮಾಡಿಕೊಂಡಿದ್ದು, ಲಕ್ಷಾಂತರ ಜನರ ಪರಿಶ್ರಮದಿಂದ ನಮಗೆ ಸ್ವಾತಂತ್ರ್ಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಅರಿವು ಮೂಡಿಸುತ್ತೇವೆ ಎಂದು ಹೇಳಿದ್ದಾರೆ.
ವಿದುರಾಶ್ವತ್ಥದ ಇತಿಹಾಸ: ಏಪ್ರಿಲ್ 25, 1938 ಅಂದಿನ ಬ್ರಿಟೀಷ್ ಸರ್ಕಾರದ ನಿಷೇದಾಜ್ಞೆಯನ್ನು ಉಲ್ಲಂಘಿಸಿ, ಸ್ವತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೈಜೋಡಿಸಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಸಭೆ ಸೇರಿದ್ದರು. ಈ ಕಾರಣದಿಂದ ಸ್ವಾತಂತ್ರ್ಯ ಸಂಗ್ರಾಮ ಹತ್ತಿಕ್ಕಲು ಅಂದಿನ ಕೋಲಾರ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಇದರಿಂದ ಬ್ರೀಟಿಷ್ ಸೇನಾಧಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರರ ಮೇಲೆ 96 ಸುತ್ತು ಗುಂಡು ಹಾರಿಸಿದ್ದರು.
ಘಟನೆಯಲ್ಲಿ 32 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು. ಮೃತಪಟ್ಟವರಲ್ಲಿ ಕೇವಲ 10 ಶವಗಳು ಮಾತ್ರ ಪತ್ತೆಯಾಗಿದ್ದವು. ಮಹಾತ್ಮ ಗಾಂಧಿಯವರ ಆದೇಶದಂತೆ ಸರ್ದಾರ್ ವಲ್ಲಭಾಯಿ ಪಟೇಲ್ ಮತ್ತು ಆಚಾರ್ಯ ಕೃಪಲಾನಿ ಇಲ್ಲಿಗೆ ಭೇಟಿ ನೀಡಿ ಹುತಾತ್ಮರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದರು. ಈ ಹತ್ಯಾಕಾಂಡದಿಂದಾಗಿ ಈ ಸ್ಥಳಕ್ಕೆ ದಕ್ಷಿಣ ಭಾರತದ ಜಲಿಯನ್ ವಾಲಾ ಬಾಗ್ ಎಂದು ಹೆಸರಿಡಲಾಯಿತು. ಈಗ ಕಾಣುವ ಸ್ಮಾರಕ ಹಾಗೂ ವೀರಸೌಧವನ್ನು 1973 ರಲ್ಲಿ ಹಾಗೂ 2004ರಲ್ಲಿ ಸ್ತೂಪವನ್ನು ಹುತಾತ್ಮರ ಗೌರವಾರ್ಥವಾಗಿ ನಿರ್ಮಿಸಲಾಯಿತು.
ಇದನ್ನೂ ಓದಿ: 75ನೇ ಸ್ವಾತಂತ್ರ್ಯ ದಿನಾಚರಣೆಗೆ ಮೆರುಗು ತುಂಬಲಿದೆ ಮೋದಿ ನೇತೃತ್ವದ 259 ಸದಸ್ಯರ ಸಮಿತಿ
Published On - 11:53 am, Fri, 12 March 21